ಶಾಂತಾ ನಾಗರಾಜ್
ಹಳದಿ ದಾರ ಕುತ್ತಿಗೆಯಲ್ಲಿ, ಹಸಿರುಬಳೆ ಮುಂಗೈತುಂಬಾ, ಹಸ್ತಗಳಲ್ಲಿ ಮಾಸಿದ್ದರೂ ತನ್ನ ಇರುವಿಕೆಯನ್ನು ಉಳಿಸಿಕೊಂಡಿದ್ದ ಮೆಹಂದಿಯ ಚಿತ್ತಾರ! ಇತ್ತೀಚೆಗೆ ಮದುವೆಯಾದ ಈ ಹುಡುಗಿ ನನ್ನ ಮುಂದೆ, ಕಣ್ಣು ತುಂಬಾ ನೀರು ತುಂಬಿ ಕುಳಿತಿದ್ದಳು. ” ಮೇಡಂ ನನಗೆ ಅರ್ಥವಾಗುತ್ತಿಲ್ಲ, ನಾನೇ ಸರಿಯಿಲ್ಲವೋ ಅಥವಾ ನನ್ನ ಗಂಡನ ಮನೆಯವರೇ ಸರಿಯಿಲ್ಲವೋ ಅಂತ”. ಯಾಕಮ್ಮ ನಿಮಗೆ ಹಾಗೆನಿಸುತ್ತಿದೆ?” ನನ್ನ ಈ ಪ್ರಶ್ನೆಯೊಂದೇ ಸಾಕಾಯಿತು ಅವಳ ಒತ್ತಿಟ್ಟ ದುಗುಡ ಹೊರಬರುವುದಕ್ಕೆ.
ಚಿಕ್ಕಮಗಳೂರಿನ ಹತ್ತಿರದ ಹಳ್ಳಿಯ ಜಮೀನುದಾರರ ಮಗಳು ಆಕೆ. ಬೆಂಗಳೂರಿನ ಇಂಜಿನಿಯರ್ ಜೊತೆ ೧೫ದಿನಗಳ ಹಿಂದೆ ಮದುವೆಯಾಗಿದೆ. ಹುಡುಗ ಇವಳನ್ನು ನೋಡಲು ಬಂದಾಗ ಆತ ಕೇಳಿದ್ದು ಒಂದೇ ಮಾತು. ” ನನ್ನಪ್ಪ ಬೇಗ ತೀರಿಕೊಂಡಿದ್ದರಿಂದ ನನ್ನಮ್ಮ ತುಂಬಾ ಕಷ್ಟದಿಂದ ನನ್ನನ್ನು ಈ ಸ್ಥಿತಿಗೆ ತಂದಿದ್ದಾರೆ. ನಾವು ಜೀವನ ಪರ್ಯಂತ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ” ಅಷ್ಟೇ ತಾನೆ ಅನ್ನಿಸಿತು. ’ಆಗಲಿ’ ಎಂದು ಮಾತುಕೊಟ್ಟಳು. ” ಮೇಡಂ ಈಗ ಅದೇ ನನ್ನ ಕುತ್ತಿಗೆ ಬಂದು ಕೂತಿದೆ. ನಾವು ಉಸಿರಾಡುವುದನ್ನೊಂದು ಬಿಟ್ಟು ಎಲ್ಲಕ್ಕೂ ಅಮ್ಮನ ಅನುಮತಿ ಕೇಳಬೇಕು. ಊಟ ತಿಂಡಿ ಉಡುಗೆ ನಿದ್ದೆಯ ಸಮಯ ಎಲ್ಲವನ್ನೂ ಅವರೇ ನಿರ್ಧರಿಸಬೇಕು. ನೀವು ನಂಬುತ್ತೀರೋ ಇಲ್ಲವೋ ” ಹನಿಮೂನಿಗೆ ಕುಲು ಮನಾಲಿಗೆ ಹೋಗೋಣ ಏರ್ ಟಿಕೆಟ್ ತಂದಿದ್ದೇನೆ” ಎಂದು ಮೂರು ಟಿಕೆಟ್ ನನ್ನ ಕೈಲಿಟ್ಟರು! ” ಇದೇನು ಮೂರು?” ಎಂದೆ. ” ನನ್ನಮ್ಮನೂ ಬರುತ್ತಾರೆ” ಎಂದರು!! ಪುಣ್ಯಕ್ಕೆ ಹೊಟೆಲ್‍ನಲ್ಲಿ ನಮ್ಮ ರೂಮಿನ ಎದುರು ರೂಮನ್ನು ಅಮ್ಮನಿಗಾಗಿ ಬುಕ್ ಮಾಡಿದ್ದರು. ಆದರೆ ಹೊರಗೆ ಸುತ್ತಾಡಿದ್ದು ನಾವು ಮೂರು ಜನ ಒಟ್ಟಿಗೇನೇ! ಇದೆಂಥಾ ಹನಿಮೂನ್ ನೀವೇ ಹೇಳಿ ಮೇಡಂ? ಇವರಮ್ಮನೇನೋ ಎಲ್ಲಕ್ಕೂ ನನ್ನನ್ಯಾಕೆ ಕೇಳುತ್ತೀ? ನಿನಗೀಗ ಮದುವೆಯಾಗಿದೆ. ನಿಮಗೆ ಹೇಗೆ ಬೇಕೋ ಹಾಗೆ ಮಾಡಿ ಎನ್ನುತ್ತಾರೆ. ಆದರೆ ಇವರೇ ಅಮ್ಮ ಅಮ್ಮ ಅಂತ ಅವರ ಹಿಂದೆ ಸುತ್ತುತ್ತಾರೆ. ಇವರಿಗೆ ಏನೆನ್ನಬೇಕು ಮೇಡಂ?”

ಈತ ಮಾತೃವಾಕ್ಯ ಪರಿಪಾಲಕನಾದಂತೆ ಮತ್ತೊಬ್ಬ ಪಿತೃವಾಕ್ಯ ಪರಿಪಾಲಕನ ಕಥೆ ಕೇಳಿ. ಇದು ಇನ್ನೂ ವಿಚಿತ್ರ! ಈ ಮಹನೀಯನೂ ಇಂಜಿನಿಯರ್! ಆದರೆ ಬೆಂಗಳೂರಿನಲ್ಲಿರುವ ಇವನ ದಿನಚರಿಯನ್ನು ನಿರ್ಧರಿಸುವವರು ಬೆಂಗಳೂರಿನ ಪಕ್ಕದ ಊರಿನಲ್ಲಿರುವ ಇವನ ಅಪ್ಪ! ಆ ಮಹಾನುಭಾವನೋ ಪಂಚಾಂಗದ ದಾಸ!! ಕೇವಲ ಆರು ತಿಂಗಳ ಕೆಳಗೆ ಮದುವೆಯಾದ ಅವನ ಹೆಂಡತಿ ಗೊಣಗುತ್ತಾಳೆ ” ಮೇಡಂ ಇಂಥಾ ಹುಚ್ಚಿಗೆ ನೀವೇನೆನ್ನುತ್ತೀರೋ ಗೊತ್ತಿಲ್ಲ. ಪ್ರತಿ ಶನಿವಾರ ಭಾನುವಾರ ನಾವು ಊರಿಗೆ ಹೋಗಲೇ ಬೇಕು. ಅಲ್ಲಿ ಇವರ ಅಪ್ಪ ಇವರಿಗೆ ದಿನಚರಿಯನ್ನು ಬರೆದುಕೊಡುತ್ತಾರೆ. ಅವರು ಸದಾ ತಮ್ಮ ಹತ್ತಿರ ಪಂಚಾಂಗ ಇಟ್ಟುಕೊಂಡಿರುತ್ತಾರೆ. ದಿನ ವಾರ ನಕ್ಷತ್ರ ಎಲ್ಲದರ ಎಣಿಕೆ ಮಾಡಿ ಈ ಹೊತ್ತಿಗೆ ಊಟ, ಈ ಹೊತ್ತಿಗೆ ತಿಂಡಿ, ಇತ್ಯಾದಿ ಇತ್ಯಾದಿ. ಮೇಡಂ ನೀವು ನಗಬೇಡಿ, ನಮ್ಮಿಬ್ಬರ ಹಾಸಿಗೆ ಸುಖದ ಸಮಯವನ್ನೂ ಅವರೇ ನಿಗದಿ ಮಾಡಿರುತ್ತಾರೆ! ’ ಮಧ್ಯ ರಾತ್ರಿ ಮೂರೂವರೆಗೆ ಇಂಥಾ ನಕ್ಷತ್ರ ಹುಟ್ಟುತ್ತದೆ, ಆಗ ನಿಮ್ಮ ಸಮಯ ’ ಎಂದರೆ ಅಲಾರಮ್ ಇಟ್ಟುಕೊಂಡು ಇವರು ನನ್ನನ್ನು ಎಬ್ಬಿಸುತ್ತಾರೆ! ಇಂಥವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?”
ಹೀಗೆ ತಮ್ಮ ’ ಬದುಕ’ನ್ನು ತಾವು ಬದುಕಲಾರದೇ ಅಪ್ಪ, ಅಮ್ಮ, ಗುರೂಜಿ, ಸ್ವಾಮಿಗಳು, ಜ್ಯೋತಿಷಿಗಳು ಎಂದು ಯಾರಯಾರದೋ ಮಾತಿನಂತೆ ಬದುಕುವವರನ್ನು, ಮತ್ತು ಅಗತ್ಯಕ್ಕಿಂತಾ ಹೆಚ್ಚಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗಿರುವವರನ್ನು ’ ಪ್ಯಾರಸೈಟ್ ಅಥವಾ ಡಿಪೆಂಡೆಂಟ್ ಪರ್ಸನಾಲಿಟಿ ಡಿಸಾರ್ಡರ್ ’ ಇರುವ ದುರ್ಬಲ ಮನಸ್ಸಿನವರು ಎನ್ನಬೇಕಾಗುತ್ತದೆ. ಅಂದರೆ ಸ್ವಂತಿಕೆ ಇಲ್ಲದವರು ಅಥವಾ ಪರಾವಲಂಬಿಗಳು. ವ್ಯಕ್ತಿತ್ವ ಸರಿಯಾಗಿ ವಿಕಾಸವಾಗದವರ ನಡವಳಿಕೆಯಿದು. ಇವರು ಓದಿನಲ್ಲಿ ಕೆಲಸದಲ್ಲಿ ಜಾಣರಿರಬಹುದು. ಆದರೆ ದಿನನಿತ್ಯದ ವ್ಯವಹಾರಗಳಲ್ಲಿ ಸಣ್ಣಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರುತ್ತಾರೆ! ಆಫ಼ೀಸಿನಲ್ಲೂ ತಮ್ಮ ಮೇಲಧಿಕಾರಿಗಳು ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆಯೇ ವಿನಃ ತಾವೇ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದರೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಮಗು ತಾಯಿಯ ಹೊಟ್ಟೆಯಲ್ಲಿರುವಾಗ ಸಂಪೂರ್ಣವಾಗಿ ಅಮ್ಮನ ಮೇಲೆ ಅವಲಂಬಿತವಾಗಿರುತ್ತದೆ. ಹುಟ್ಟಿದಾಗ ಶಾರೀರಿಕವಾಗಿ ಅಮ್ಮನಿಂದ ಬೇರ್ಪಡೆಯಾದರೂ ಒಂದು ವರ್ಷದವರೆಗೆ ಅವಲಂಬಿತವಾಗಿಯೇ ಬದುಕುತ್ತದೆ. ನಡಿಗೆ ಪ್ರಾರಂಭವಾದಂದಿನಿಂದ ಸ್ವಾವಲಂಬಿತನದ ಮೊದಲ ಮೆಟ್ಟಿಲು ಹತ್ತುತ್ತದೆ. ೨೧ವರ್ಷದ ಹೊತ್ತಿಗೆ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಾಸಗೊಂಡಿರುತ್ತದೆ. ಆ ನಂತರವೂ ವ್ಯಕ್ತಿ ತನ್ನ ಬದುಕನ್ನು ತಾನು ನಡೆಸಲಿಲ್ಲವೆಂದರೆ ಅದನ್ನು ವ್ಯಕ್ತಿತ್ವ ದೋಷವೆಂದೇ ಪರಿಗಣಿಸಬೇಕಾಗುತ್ತದೆ. ಈ ದೋಷದಲ್ಲೂ ಹಲವು ಹಂತಗಳಿವೆ. ಅಲ್ಪಸ್ವಲ್ಪ ದೋಷವಿರುವವರು ಏನಾದರೂ ಗಂಭೀರವಾದ ನಿಲುವು ತಾಳಬೇಕಾಗಿ ಬಂದರೆ ಜ್ಯೋತಿಷ್ಯದ ಮೊರೆಹೋಗುವುದು, ದೇವಸ್ಥಾನದಲ್ಲಿ ಪ್ರಶ್ನೆ ಕೇಳುವುದು, ತಮ್ಮದೇ ಮನೆಯಲ್ಲಿ ದೇವರ ಮುಂದೆ ಚೀಟಿಹಾಕಿ ಮಕ್ಕಳಿಂದ ಎತ್ತಿಸುವುದು ಇತ್ಯಾದಿ ಸಣ್ಣಪುಟ್ಟ ಪ್ರಯತ್ನಗಳನ್ನು ಮಾಡಿ ಅದರಂತೆ ನಡೆದುಕೊಳ್ಳುತ್ತಾರೆ. ಅಂದರೆ ಹೀಗೆ ಮಾಡಿದಾಗ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಮಾನಸಿಕವಾಗಿ ಸಾಧ್ಯವಾಗುತ್ತದೆ. ಇದು ಒಂದು ರೀತಿ ಸಹಿಸಬಹುದಾದ ದೌರ್ಬಲ್ಯ. ಕೆಲವರು ತಮ್ಮ ಮನೆದೇವರ ಊರಿಗೆ ಹೋಗಿ ಬರುವುದು, ಹರಕೆ ಕಟ್ಟಿಕೊಳ್ಳುವುದು, ಅಥವಾ ತಮ್ಮ ಮನೆಯಲ್ಲೇ ಹೋಮ ಇತ್ಯಾದಿಗಳನ್ನು ಮಾಡಿಸುವುದು ಮಾಡುತ್ತಾರೆ. ಇದು ಒಂದಿಷ್ಟು ಖರ್ಚಿನ ಬಾಬತ್ತಾದರೂ ಇದೂ ಸಹ ಸಹಿಸಲು ಸಾಧ್ಯವಾಗುವ ಪರಾವಲಂಬಿತನ!
ಆದರೆ ಮೇಲಿನೆರಡು ಉದಾಹರಣೆಗಳಿವೆಯಲ್ಲ? ಅಂಥಾ ನಡವಳಿಕೆ ಸಹಿಸಲಸಾಧ್ಯವಾದುದು. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಮುಖ್ಯವಾಗಿ ಗಂಡಿಗೆ ಈ ದೋಷವಿದ್ದರೆ ಅವನ ಹೆಂಡತಿಗೆ, ಹೆಣ್ಣಿಗೆ ಇಂಥಾ ದೋಷವಿದ್ದರೆ ಅವಳ ಗಂಡನಿಗೆ ಜೀವನ ನರಕವಾಗುತ್ತದೆ. ನಮ್ಮ ಸೆಂಟರಿಗೆ ಬರುವ ಗೃಹಸ್ಥನೊಬ್ಬನ ಹೆಂಡತಿ ಮಾತೆತ್ತಿದರೆ ತನ್ನ ತೌರಿಗೆ ಓಡಿಬಿಡುತ್ತಾಳೆ. ಮಕ್ಕಳ ಶಾಲೆಯನ್ನೂ ತಪ್ಪಿಸಿ ತಿಂಗಳುಗಟ್ಟಲೇ ತೌರಿನಲ್ಲಿ ಉಳಿದು ಬಿಡುತ್ತಾಳೆ. ’ತಾನು ತನ್ನಮ್ಮನ ನೆರಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ! ಇಂಥಾ ಸಮಸ್ಯೆ ಇರುವವರಿಗೆ ಔಷಧಿ, ಥೆರಪಿ ಮತ್ತು ಕೌನ್ಸಿಲಿಂಗ್ ಎಲ್ಲವೂ ಬೇಕಾಗುತ್ತದೆ. ಬಸವಣ್ಣನವರು ಹೇಳುವ ಹಾಗೆ ” ಕೊಟ್ಟ ಕುದುರೆಯ ಏರಲರಿಯದವರು ” ಇವರು! ಇಂಥಾ ಕೇಸುಗಳಲ್ಲಿ ದೊಡ್ದ ಸಮಸ್ಯೆ ಎದುರಾಗುವುದು ’ ಇವರಿಗೆ ಇಂಥಾ ಸಮಸ್ಯೆ ಇದೆ’ ಎನ್ನುವ ಅರಿವು ಮೂಡಿಸುವುದರಲ್ಲಿ! ’ ನಾನು ಶ್ರೀ ರಾಮಚಂದ್ರನಂತೆ! ತಂದೆ ಹಾಕಿದ ಗೆರೆಯನ್ನು ದಾಟುವುದಿಲ್ಲ ’ ಎಂದು ಬೀಗುವವರನ್ನು ಕಟ್ಟಿಕೊಂಡವರ ಪಾಡೇನು ಹೇಳಿ?
ಇದೊಂದೇ ಅಲ್ಲ ಯಾವುದೇ ಡಿಸಾರ್ಡರ್ ಇರುವ ವ್ಯಕ್ತಿ ತನ್ನ ದೌರ್ಬಲ್ಯವನ್ನು ತಾನೇ ಅರಿತುಕೊಳ್ಳುವತನಕ ಯಾವುದನ್ನೂ ಸರಿಪಡಿಸಲಾಗುವುದಿಲ್ಲ. ಹೇಗೆ ದೇಹಕ್ಕೆ ಖಾಯಿಲೆ ಬಂದರೆ ಗುರುತಿಸಿಕೊಂಡು ವೈದ್ಯರ ಹತ್ತಿರ ಹೋಗುತ್ತೇವೆಯೋ ಹಾಗೆಯೇ ಮನಸ್ಸಿನ ದೌರ್ಬಲ್ಯಗಳನ್ನೂ ಮೊದಲು ಅರಿಯುವ ಅಗತ್ಯವಿದೆ. ನಾನು ಎಲ್ಲರಂತೆ ಸಹಜವಾಗಿದ್ದೇನೆಯೇ? ನನ್ನ ಆಲೋಚನೆಗಳು ಸಕಾರಾತ್ಮಕವಾಗಿವೆಯೇ? ನನ್ನ ನಡವಳಿಕೆಗಳಿಂದ ನನ್ನ ಹೆಂಡತಿಗೆ/ ಗಂಡನಿಗೆ, ಮಕ್ಕಳಿಗೆ, ತಂದೆತಾಯಿಯರಿಗೆ, ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ಕಿರಿಕಿರಿಯೆನಿಸುತ್ತಿದೆಯೇ? ಇಂಥಾ ಪ್ರಶ್ನೆಗಳನ್ನು ನಮಗೆ ನಾವೇ ಆಗಿಂದಾಗ್ಯೆ ಹಾಕಿಕೊಳ್ಳಬೇಕಾಗುತ್ತದೆ. ನಮ್ಮ ಯಾವುದೋ ನಡವಳಿಕೆ ಆಮೇಲೆ ನಮಗೆ ಸರಿಯಿಲ್ಲವೆನಿಸಿದರೆ ಮತ್ತೆ ಅದು ಪುನರಾವರ್ತನೆಯಾಗದಂತೆ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಹಾಗೆ ಪ್ರಯತ್ನ ಪೂರ್ವಕವಾಗಿ ತಪ್ಪು ಆಗದಂತೆ ಜಾಗ್ರತೆ ವಹಿಸಿದರೆ ನಮ್ಮ ಬಗ್ಗೆಯೇ ನಮಗೆ ಹೆಮ್ಮೆಯುಂಟಾಗುತ್ತದೆ. ’ ಸಧ್ಯ ನಾನು ಯಾರನ್ನೂ ನೋಯಿಸಲಿಲ್ಲ ’ ಎನಿಸಿದಾಗ ನೆಮ್ಮದಿಯುಂಟಾಗುತ್ತದೆ. ಇದು ಮುಂದಿನ ನಮ್ಮ ನಡವಳಿಕೆಗೆ ನಾಂದಿಯಾಗುತ್ತದೆ. ಇದನ್ನು ’ಸೆಲ್ಫ್ ಕೌನ್ಸಿಲಿಂಗ್’ ಎನ್ನುತ್ತಾರೆ. ಸಾಧಾರಣವಾಗಿ ನಾವೆಲ್ಲರೂ ಇಂಥಾ ಅಭ್ಯಾಸಗಳನ್ನು ಇಟ್ಟುಕೊಂಡೇ ಇರುತ್ತೇವೆ. ತಪ್ಪಿದರೆ ನಮ್ಮ ಆತ್ಮಸಾಕ್ಷಿ ನಮ್ಮನ್ನು ಎಚ್ಚರಿಸಬೇಕು. ಇದನ್ನು ’ ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿತ್ವ ’ ಎನ್ನುತ್ತಾರೆ. ಇಂಥಾ ವ್ಯಕ್ತಿತ್ವವನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಮಗೂ ಹಿತ, ನಮ್ಮ ಕುಟುಂಬಕ್ಕೂ ಹಿತ, ಸಮಾಜಕ್ಕೂ ಹಿತ!!






ಪರಿಪೂರ್ಣವಾದ ಮನುಷ್ಯರು ತಾನೇ ಎಲ್ಲಿ ಸಿಕ್ಕುತ್ತಾರೆ ? ಯಾವುದಾದರೊಂದು ಐಬು ಪ್ರತಿಯೊಬ್ಬನಲ್ಲೂ ಕಂಡೇ ಕಾಣಬಹುದು. ಅಂದ ಮೇಲೆ, ಕೈಲಾದರೆ ತಿದ್ದಬೇಕು ಅಥವಾ ಅದೂ ಒಂದು ಬದುಕೆಂದು ಅನುಸರಿಸಿಕೊಂಡು ಹೋಗಬೇಕಾದದ್ದು ಅವಳ ಅಥವಾ ಅವನ ಬುದ್ಧಿವಂತಿಕೆಗೆ ಬಿಟ್ಟ ವಿಷಯ. ಪ್ರತಿಯೊಂದನ್ನೂ ದೊಡ್ಡದು ಮಾಡುತ್ತಾ ಹೋದರೆ – ಈಗ ಕೋರ್ಟ್ ಗಳಲ್ಲಿರುವ ಅನೇಕ ವಿಚ್ಚೇಧನ ಪ್ರಕರಣಗಳೆಲ್ಲಾ ಇಂತಹ ಕಾರಣಗಳಿಂದಲೇ ಅಲ್ಲವೇ ? ಎಲ್ಲಾ ಮುಗಿದ ಮೇಲೆ ‘ ಅಯ್ಯೋ ! ಆವತ್ತು ಹೇಗೋ ಹೊಂದಾಣಿಕೆಯಿಂದ ಬದುಕಿದ್ದಿದ್ದರೆ ಎಷ್ಟು ಚೆನ್ನಾಗಿತ್ತು ‘ ಎಂದು ಮರುಗುವವರು ಎಷ್ಟೊಂದು ಜನರಿಲ್ಲ! ದುಡುಕಿದ ಮೇಲಲ್ಲವೇ ಅಚಾತುರ್ಯದ ಅರಿವಾಗುವುದು?
ಲೇಖನ ಚೆನ್ನಾಗಿದೆ. ಅಭಿನಂದನೆಗಳು.
Good article/report. Kindly continue writing.
Thank you.
ಶಾಂತಾ ನಾಗರಾಜ್ ಮೇಡಂ, ನಮಸ್ತೆ. ಮನಸ್ಸಿನ ದೌರ್ಬಲ್ಯಗಳು, ಅವುಗಳನ್ನು ಗೆಲ್ಲುವ ಸಲಹೆಗಳನ್ನು ನೀಡುತ್ತ ಬರಹ ಬಹಳಷ್ಟು ಸಮಾಜದ ಕಣ್ಣುಗಳು ತೆರೆಯುವಂತಿವೆ. ಇಂತಹ ಲೇಖನಗಳ, ವಿಚಾರಗಳು, ಚಿಂತನ ಮಂಥನಗಳು ಇಂದಿನ ಸಮಾಜಕ್ಕೆ ಹಿಂದೆಂದಿಗಿಂತ ಈಗ ತುಸು ಹೆಚ್ಚು ಬೇಕು. ಒಂದೊಳ್ಳೆಯ ವಿಚಾರ, ಸಮಾಜ ತನ್ನನ್ನು ತಾನು ತಿದ್ದಿಕೊಳ್ಳುವ ನುಡಿಗಟ್ಟಿನಂಥದು.. ವಂದನೆಗಳು