ಹದಿನೈದೇ ನಿಮಿಷಗಳು…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಎಂ.ಎಲ್.ಎ. ಶಾಲೆಯಲ್ಲಿ ನಾವು ಪ್ರತಿ ವಾರ ಕಾಯುತ್ತಿದ್ದುದು ಶುಕ್ರವಾರಕ್ಕೆ. ಅದೂ ಮಧ್ಯಾಹ್ನದ ಎರಡನೇ ಮತ್ತು ಮೂರನೇ ಪೀರಿಯಡ್‌ಗೆ. ಮಧ್ಯಾಹ್ನ ಊಟದ ಅವಧಿ ನಂತರ ಮೊದಲನೇ ಪೀರಿಯಡ್‌ ಮುಗಿಯುವ ಬೆಲ್‌ ಹೊಡೆಯುವುದಕ್ಕೂ ಮೊದಲೇ ಎಲ್ಲರೂ ಪುಸ್ತಕದ ಮತ್ತು ಊಟದ ಚೀಲ ಸಿದ್ಧ ಮಾಡಿಕೊಂಡು ತರಗತಿಯಿಂದ ಓಡಲು ತಯಾರು. ಆದರೆ ಟೀಚರ್‌ಗಳು ಬಿಡಬೇಕಲ್ಲ!

ಮೊದಲು ಐದನೇ ಕ್ಲಾಸಿನ ಮಕ್ಕಳು, ಅವರಾದ ಮೇಲೆ ಆರನೇ ಕ್ಲಾಸಿನ ಮಕ್ಕಳು. ಆಮೇಲೆ ಏಳನೇ ಕ್ಲಾಸಿನ ಮಕ್ಕಳು ಹೊರಬರಬೇಕಿತ್ತು. ಎಂ.ಎಲ್.ಎ. ಸಂಸ್ಥೆಯ  ಬೆಳ್ಳಿಹಬ್ಬದ ಸಭಾಂಗಣದ (ಸಿಲ್ವರ್‌ ಜ್ಯೂಬಿಲಿ) ಎರಡೂ ಕಡೆಯ ಮೆಟ್ಟಿಲುಗಳನ್ನು ಉತ್ಸಾಹ ಕುತೂಹಲದಿಂದ ಏರಿ ಓಡುತ್ತಿದ್ದೆವು. ಆದರೆ ನೂಕುನುಗ್ಗಲಾಗಬಾರು. ಶಾಲೆಯ ಎಲ್ಲ ಮಕ್ಕಳು ಆರಾಮವಾಗಿ ನೆಲದ ಮೇಲೆ ಕೂರುವಷ್ಟು ಸ್ಥಳಾವಕಾಶವಿರುವ ಸಭಾಂಗಣ. ಅದುವರೆಗೂ ತರಗತಿಯಲ್ಲಿ ಗಮನವಿಟ್ಟು ಪಾಠ ಕೇಳಿ ಎಂದು ತಾಕೀತು ಮಾಡುತ್ತಿದ್ದ ಶಿಕ್ಷಕಿಯರೆಲ್ಲಾ ಸ್ನೇಹಿತರಂತಾಗುತ್ತಿದ್ದರು. ನಮ್ಮ ಗುಸು ಗುಸು ಜಾಸ್ತಿಯಾದರೆ ಮಾತ್ರ, ‘ಓಯ್‌…ʼ ಅಂತಲೋ ‘ಶ್ಶೂ…ʼ ಎಂದೋ ಸುಮ್ಮನಾಗಿಸುವ ಯತ್ನವಷ್ಟೆ. ಮುಂದಿನೊಂದು ಗಂಟೆ ನಮ್ಮ ಕಲ್ಪನೆಗಳಿಗೆ ಬಣ್ಣ ಹಚ್ಚುವ ಅವಕಾಶ.

ಒಂದು ವಾರ ಫಿಲ್ಮ್‌ಶೋ. ಇನ್ನೊಂದು ವಾರ ಮ್ಯಾಜಿಕ್‌ ಶೋ. ಮತ್ತೊಂದು ವಾರ ಸಂಗೀತ, ವಿಜ್ಞಾನ, ಕಲೆ ಮತ್ತೊಂದರ ಪ್ರಾತ್ಯಕ್ಷಿಕೆ. ಅಷ್ಟೇ ಅಲ್ಲ ಪ್ರತಿ ತರಗತಿಯವರಿಗೂ ವರ್ಷದಲ್ಲಿ ಒಂದೊಂದು ವಾರ ತಾವೇ ತಯಾರಾಗಿ ನಲವತ್ತು ನಿಮಿಷಗಳ ಕಾಲ ಕಾರ್ಯಕ್ರಮ ನಡೆಸಿಕೊಡಲು ಅವಕಾಶ!

ಅಬ್ಬಾ! ಅದಂತೂ ಬೇರೆಲ್ಲೂ ಕಲ್ಪಿಸಿಕೊಳ್ಳಲೂ ಆಗದಂತಹದ್ದು. ನಾವೇ ಹಾಡುಗಳು, ನಾಟಕ, ನೃತ್ಯ, ಸ್ತಬ್ಧಚಿತ್ರ, ಅಣಕು ಜಾಹೀರಾತು, ಮೊದಲಾದವುಗಳನ್ನು ಆರಿಸಿಕೊಂಡು, ನಾವು ನಾವೇ ಪರಸ್ಪರರಿಗೆ ತರಬೇತಿ ಕೊಟ್ಟುಕೊಂಡು, ತರಗತಿಯ ಬಹುಪಾಲು ಎಲ್ಲರನ್ನೂ ಒಳಗೊಂಡು ತಯಾರಾಗಿ ಕೊಟ್ಟಿರುವ ಸಮಯದಲ್ಲಿ ಪ್ರದರ್ಶಿಸಬೇಕು. ಎಲ್ಲರನ್ನೂ ರಂಜಿಸಬೇಕು. ಇದು ಇಷ್ಟೇ ಆಗಿದ್ದರೆ ಅಂತಹದ್ದೇನೂ ದೊಡ್ಡಸ್ತಿಕೆ ಇರುತ್ತಿರಲಿಲ್ಲ.

ನಮ್ಮ ಆಯ್ಕೆ ತಯ್ಯಾರಿಯಲ್ಲಿ ನಮ್ಮ ಟೀಚರ್‌ಗಳು ತಲೆ ಹಾಕುತ್ತಿರಲಿಲ್ಲ! ಅರ್ಥಾತ್‌ ಇದನ್ನೇ ಮಾಡಿ, ಹೀಗೇ ಮಾಡಿ, ಅದು ಬೇಡ ಇದು ಬೇಡ ಅಂತ ಮಧ್ಯದಲ್ಲಿ ಬರುತ್ತಿರಲಿಲ್ಲ. ನಾವೇ ಹೋಗಿ ನಮ್ಮ ಕ್ಲಾಸ್‌ ಟೀಚರ್‌ಗೆ ನಮ್ಮ ಕಾರ್ಯಕ್ರಮದಲ್ಲಿ ಇಂತಿಂತಹದ್ದು ಮಾಡ್ತಿದ್ದೀವಿ ಎಂದು ಹೇಳಿದರೆ ಮುಗಿಯಿತು. ಅದಕ್ಕೆ ಬೇಕಾದ ಪರಿಕರಗಳು, ನಮ್ಮ ಉಡುಪು ಇತ್ಯಾದಿಗಳೂ ನಾವುಗಳೇ ಹೊಂದಿಸಿಕೊಳ್ಳಬೇಕಿತ್ತು, ಕೇಳಿದರೆ ಟೀಚರ್‌ಗಳು ತಮ್ಮಲ್ಲಿದ್ದುದನ್ನು ಕೊಡುತ್ತಿದ್ದರು. ಕೆಲವು ಚಿಕ್ಕಪುಟ್ಟ ಖರ್ಚುಗಳು ಇರುತ್ತಿತ್ತು. ಅದನ್ನು ನಾವುಗಳೇ ಅಮ್ಮ ಅಪ್ಪಂದಿರನ್ನು ಪುಸಲಾಯಿಸಿ ಪಡೆದುಕೊಳ್ಳುತ್ತಿದ್ದುದು, ಹಾಗೆಯೇ ಕೆಲವು ದಿನ ಮಾವಿನಕಾಯಿ, ಚುರುಮುರಿ ಬಿಟ್ಟರೆ ಸಾಕಾಗುತ್ತಿತ್ತು. 

* * *

ಬೆಂಗಳೂರಿನ ಮಲ್ಲೇಶ್ವರಂ ಲೇಡೀಸ್‌ ಅಸೋಸಿಯೇಷನ್‌ (ಎಂ.ಎಲ್.ಎ) ಸಂಸ್ಥೆಗೆ ದೀರ್ಘವಾದ ಇತಿಹಾಸವಿದೆ. ೧೯೨೭ರಲ್ಲಿ ಕೃಷ್ಣರಾಜ ಒಡೆಯರ್‌ ಬಹಾದೂರ್‌ ಅವರು ಪೀಠಸ್ಥರಾಗಿ ೨೫ ವರ್ಷ ಪೂರೈಸಿದ ಅಂಗವಾಗಿ ಮಹಿಳೆಯರಿಗೆ ಜೊತೆ ಸೇರಲು, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಈ ಸಂಸ್ಥೆ ಆರಂಭವಾಯಿತಂತೆ. ೧೯೩೦ರಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತಂತೆ. ೧೯೩೪ರಲ್ಲಿ ಈ ಸಂಸ್ಥೆಗೆ ಮಹಾತ್ಮಾ ಗಾಂಧೀಜಿಯವರು ಭೇಟಿಕೊಟ್ಟು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತಾಸೆಯಾಗಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದರಂತೆ.

ಈ ಬಗ್ಗೆ ಆಗೀಗ ಕೆಲವು ಟೀಚರ್‌ಗಳು ಹೇಳಿದ್ದರೂ ಅಷ್ಟೊಂದು ಗಮನ ಕೊಟ್ಟಿರಲಿಲ್ಲ. ಸಿಲ್ವರ್‌ ಜ್ಯೂಬಿಲಿ ಕಟ್ಟಡದ ಕೆಳ ಮಹಡಿಯ ಪ್ರಾರ್ಥನಾ ಸಭಾಂಗಣದಲ್ಲಿ ಗಾಂಧೀಜಿಯವರ ಒಂದು ವಿಗ್ರಹವಿತ್ತು. ಅದರೆದುರು ‘ಹಳೆಯ ವಿದ್ಯಾರ್ಥಿಗಳ ನಿಧಿ’ ಎಂಬ ಒಂದು ಗೊಲಕವಿತ್ತು. ನಿಜವಾಗಿಯೂ ಹೇಳಬೇಕೆಂದರೆ ನಾನು ಅಲ್ಲಿ ಓದುತ್ತಿದ್ದಾಗ (೧೯೭೪-೭೭) ನಮ್ಮ ಶಾಲೆಗೆ ಇಂತಹದೊಂದು ಹಿನ್ನೆಲೆಯಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಲೇ ಇಲ್ಲವಲ್ಲ ಎಂದು ಈಗ ನಾಚಿಕೆಯೆನಿಸುತ್ತದೆ. ಆದರೆ ನಮ್ಮ ಶಾಲೆಗೆ ನಾವಿದ್ದ ಕಾಲದಲ್ಲಿ ಭಾರತಿ ಮತ್ತು ವಿಷ್ಣುವರ್ಧನ್‌ ಬಂದಿದ್ದು ಮಾತ್ರ ಅಚ್ಚಳಿಯದೆ ಮನಸ್ಸಿನಲ್ಲಿ ಕೂತಿದೆ!

ಏಳನೇ ತರಗತಿಯಲ್ಲಿದ್ದಾಗ ಅದೊಂದು ದಿನ ಯಾವುದೋ ಕಾರಣಕ್ಕೆ ನಾನು ಶಾಲೆಯ ಅವಧಿಯ ಮಧ್ಯದಲ್ಲೇ ಹತ್ತಿರದಲ್ಲೇ ಇದ್ದ ನಮ್ಮ ಮನೆಗೆ ಹೋಗಿಬರಬೇಕಿತ್ತು. ನಮ್ಮ ತರಗತಿಗಳಿದ್ದ ಕಟ್ಟಡದಿಂದ ಹೊರಬಂದು ಗೇಟ್‌ ಕಡೆ ಹೋಗುತ್ತಿದ್ದೆ. ಇಡೀ ಆವರಣದಲ್ಲಿ ಯಾರೂ ಇಲ್ಲ. ಆಗಲೇ ವಿಷ್ಣವರ್ಧನ್‌ ಮತ್ತು ಭಾರತಿ ಗೇಟ್‌ ಪ್ರವೇಶಿಸಿ ಒಳಬಂದರು. ನನಗೆ ಆಶ್ಚರ್ಯ. ಅಷ್ಟು ಹೊತ್ತಿಗೆ ಮಹಡಿಯ ಮೇಲಿದ್ದ ಹೈಸ್ಕೂಲ್‌ ತರಗತಿಗಳಿಂದ ಹುಡುಗಿಯರು ದೊಡ್ಡ ಗದ್ದಲ ಆರಂಭಿಸಿ ಎಲ್ಲರೂ ಕಿಟಕಿಗೆ ಅಂಟಿಕೊಂಡಿದ್ದರು. ಕೆಳಗಿನ ಕೋಣೆಗಳಲ್ಲೂ ಕೋಲಾಹಲ ಆರಂಭವಾಯಿತು.  ನನಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಅವರೇ ನನ್ನ ನೋಡಿ ಮುಗುಳ್ನಕ್ಕು ಮುಂದೆ ಹೋದರು. ನಾನು ಮನೆಗೆ ಹೋದೆ.

ಮನೆಯಿಂದ ಬಂದವನಿಗೆ ತರಗತಿಯವರೆಲ್ಲಾ ದೊಡ್ಡ ಸುದ್ದಿಯೆಂಬಂತೆ ವಿಷ್ಣವರ್ಧನ್‌ ಮತ್ತು ಭಾರತಿ ಬಂದಿರುವುದನ್ನು ಹೇಳಿದರು. ಓಹೋ! ದೊಡ್ಡ ಗುಲ್ಲು. ನಾನು ಅವರನ್ನು ನೋಡಿದೆ… ಹತ್ತಿರದಿಂದ.. ಎಂದರೆ ಯಾರಿಗೂ ನಂಬಿಕೆ ಬರುತ್ತಿಲ್ಲ. ಭಾರತಿ ಎಂ.ಎಲ್.ಎ.ಯ ಹಳೆಯ ವಿದ್ಯಾರ್ಥಿನಿಯೆಂದೂ, ಆ ವರ್ಷ ಸಂಸ್ಥೆ ಏರ್ಪಡಿಸಲಿರುವ ಚಿನ್ನದ ಹಬ್ಬದ ಪ್ರಯಕ್ತ (ಗೋಲ್ಡನ್‌ ಜ್ಯೂಬಿಲಿ) ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಂಭ್ರಮವೋ ಸಂಭ್ರಮ!   

ಚಿನ್ನದ ಹಬ್ಬದ ಪ್ರಯಕ್ತ ಇಡೀ ಶಾಲೆಯ ಮಕ್ಕಳಿಂದ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು, ಸುಮಾರು ಐದು ದಿನ ಒಂದಲ್ಲಾ ಒಂದು ಕಾರ್ಯಕ್ರಮಗಳು. ಗಣ್ಯರ ಆಗಮನ ಇತ್ಯಾದಿ. ವಸ್ತುಪ್ರದರ್ಶನಕ್ಕಾಗಿ ಸರಳವಾಗಿ ಉಗಿ ಯಂತ್ರವನ್ನು ಅರ್ಥ ಮಾಡಿಕೊಳ್ಳಲು ಮಾದರಿಯೊಂದನ್ನು ನನ್ನ ಅಪ್ಪನೊಡನೆ ಸೇರಿ ಮಾಡಿ ಇಟ್ಟಿದ್ದೆ.

ಆ ಶಾಲೆಗೆ ನಾನು ೫ನೇ ತರಗತಿಗೆ ಸೇರಿದ್ದು. ಅಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲೇ ಓದಿದ ಮಕ್ಕಳೇ ನಾನು ಸೇರಿದ ತರಗತಿಯಲ್ಲಿ ಹೆಚ್ಚು ಇದ್ದದ್ದು. ಹೊಸತರಲ್ಲಿ ಬಹಳ ಅಳುಕಿತ್ತು. ನನಗೆ ಎಲ್ಲ ಹುಡುಗ ಹುಡುಗಿಯರು ಹೊಸಬರು! ನನಗೆಲ್ಲವೂ ಹೊಸತು. ಕುಳಿತುಕೊಳ್ಳುವ ಆಸನಗಳು, ಪದ್ಧತಿ (ಒಂದು ಹುಡುಗ ಒಂದು ಹುಡುಗಿ ಮತ್ತು ಒಂದು ಹುಡುಗ… ಒಂದು ಡೆಸ್ಕ್‌ಗೆ ಐವರು ವಿದ್ಯಾರ್ಥಿಗಳು), ಪಾಠ ಮಾಡುವ ವಿಧಾನ, ಬೆಲ್‌ ಹೊಡೆದು ಪೀರಿಯಡ್‌ಗಳು ಮತ್ತು ಟೈಂ ಟೇಬಲ್‌ನಲ್ಲಿ ಇದ್ದ ಹಾಗೆ ನಡೆಯುವ ತರಗತಿಗಳು, ಇತ್ಯಾದಿ. ಅಂತಹದರಲ್ಲಿ ಹೆಚ್ಚೇನೂ ತಕರಾರಿಲ್ಲದೆ ಅವರ ಸ್ನೇಹ ವಲಯದಲ್ಲಿ ಸಹಪಾಠಿಗಳು ನನ್ನನ್ನ ಸೇರಿಸಿಕೊಂಡೇಬಿಟ್ಟರು. ಜೊತೆಗೆ ಶಾಲೆಗೆ ಸೇರಿದ ಹೊಸತರಲ್ಲಿ ನನ್ನ ಎಡಗೈ ತೋಳು ಮುರಿದು ಪ್ಲಾಸ್ಟರ್‌ ಹಾಕಿತ್ತು. ಆ ಅನುಕಂಪವೂ ಇತ್ತೇನೋ!

ಎಲ್ಲ ಶಾಲೆಗಳಲ್ಲೂ ಶಿಕ್ಷಕ ವರ್ಗದವರು ಇರುತ್ತಾರೆ. ಪಾಠ ಮಾಡುತ್ತಾರೆ. ಹಾಡಿಸುತ್ತಾರೆ, ನಾಟಕ ಮಾಡಿಸುತ್ತಾರೆ, ಆಡಿಸುತ್ತಾರೆ, ಪರೀಕ್ಷೆ ಮಾಡುತ್ತಾರೆ ಎಲ್ಲವೂ ಇದ್ದದ್ದೇ. ಆದರೆ ಈಗ ಹಿಂದೆ ತಿರುಗಿ ನೋಡಿದಾಗ ಶಿಕ್ಷಕ ಶಿಕ್ಷಕಿಯರ ಬಹುಪಾತ್ರಗಳ ನಿರ್ವಹಣೆ ಅಚ್ಚರಿ ತರುತ್ತದೆ. ನಮ್ಮ ಪ್ರೀತಿಯ ವೇದಾವತಿ ಟೀಚರ್‌ ಅಥವಾ ಸರೋಜಮ್ಮನವರು ತರಗತಿಗೆ ಬಂದಾಗ ಒಮ್ಮೊಮ್ಮೆ ಎಲ್ಲ ವಿದ್ಯಾರ್ಥಿಗಳಿಗೆ ಯಾಕೋ ಏನೋ ಗಣಿತವೋ, ವಿಜ್ಞಾನವೋ, ಸಮಾಜವೋ ಪಾಠ ಕೇಳಲು ಮನಸ್ಸೇ ಬರುತ್ತಿರಲಿಲ್ಲ (ನಿಜವಾಗಿಯೂ ಅದು ಹೇಗೆ ಸಮೂಹ ಸನ್ನಿಯಾಗುತ್ತಿತ್ತೊ ಗೊತ್ತಿಲ್ಲ.

ಒಮ್ಮೊಮ್ಮೆ ನಾವೇ ಪಾಠ ಕೇಳಲು ಬೇಜಾರು ಎಂದು ಒಮ್ಮತದ ನಿರ್ಧಾರಕ್ಕೆ ಬರುತ್ತಿದ್ದೆವು). ಮತ್ತೆ ಏನು ಮಾಡೋದು ಎಂದು ಟೀಚರ್‌ ಕೇಳುತ್ತಿದ್ದಂತೆಯೇ ಎಲ್ಲರದೂ ಒಂದೇ ಬೇಡಿಕೆ ‘ಕತೆʼ. ಆ ನಮ್ಮ ಟೀಚರ್‌ಗಳು ತಕ್ಷಣವೇ ಕತೆ ಹೇಳುವವರಾಗಿಬಿಡುತ್ತಿದ್ದರು. ಇಲ್ಲವೇ ಹಾಡು ಹೇಳಿಕೊಡುವುದು. ರಸಪ್ರಶ್ನೆಗಳನ್ನು ಧಿಡೀರ್‌ ಎಂದು ಕೇಳುವುದು, ಒಂದೇ ಎರಡೇ. ಇವನ್ನೆಲ್ಲಾ ಅವರು ಮೊದಲೇ ಯೋಜಿಸಿರುತಿದ್ದರೋ, ಅಲ್ಲಿ ಆ ಕ್ಷಣ ಸೃಷ್ಟಿಸುತ್ತಿದ್ದರೋ ಗೊತ್ತೇ ಆಗುತ್ತಿರಲಿಲ್ಲ.

ನನಗೆ ಈಗಲೂ ನೆನಪಿರುವುದು ಸರೋಜಮ್ಮ ಟೀಚರ್‌ ಅದೆಷ್ಟು ಭಾವಪೂರ್ಣ ತುಂಬಿ ನಾಟಕೀಯವಾಗಿ ಹೇಳಿದ ಸೊಹ್ರಾಬ್‌ ರುಸ್ತುಂ ಕತೆ. ಜೊತೆಗೆ ಇದೇ ಟೀಚರ್‌ಗಳು ಶಾಲೆಯ ಕಾರ್ಯಕ್ರಮಗಳಿಗಾಗಿ ನಮಗೆ ಸಮೂಹ ನೃತ್ಯ, ಗಾಯನ, ನಾಟಕಗಳನ್ನು ಹೇಳಿಕೊಡುತ್ತಿದ್ದುದು. ಅಷ್ಟೇ ಅಲ್ಲ ಆಕಾಶವಾಣಿಯ ಮಕ್ಕಳ ಕಾರ್ಯಕ್ರಮಕ್ಕಾಗಿ ತಾವೆ ನಾಟಕ ಬರೆದು ನಮಗೆ ಹೇಳಿಕೊಟ್ಟು ಒಯ್ಯುತ್ತಿದ್ದುದು. ಆ ಶಿಕ್ಷಕಿಯರೆಲ್ಲಾ ಖಂಡಿತಾ ಬಹುಕಲಾ ಪ್ರೌಢಿಮೆಯುಳ್ಳವರೇ ಆಗಿರಬೇಕು.

ಶಾಲೆಗಳಲ್ಲಿ  ಬೆಳಗಿನ ಹೊತ್ತು ಎಲ್ಲ ವಿದ್ಯಾರ್ಥಿಗಳು ತರಗತಿಗಳ ಪ್ರಕಾರ ಸಾಲಿನಲ್ಲಿ ನಿಲ್ಲುವುದು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇಲ್ಲಿಯೂ ಹಾಗೆಯೇ. ಶಾಲೆಯ ವಿಶಾಲವಾದ ಮೈದಾನದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಹೈಸ್ಕೂಲ್‌ ಮಕ್ಕಳ ವರೆಗೆ ಎಲ್ಲರೂ ಒಟ್ಟಿಗೆ ಸುಮಾರು ಅರ್ಧ ಘಂಟೆ ಪ್ರಾರ್ಥನೆಗೆ ನಿಲ್ಲುತ್ತಿದ್ದುದು.

ವಂದೇ ಮಾತರಂನಿಂದ ಆರಂಭವಾಗಿ, ಶಾಲೆಯ ಗೀತೆ, ಆ ದಿನ ಹಾಡು, ವಾರದ ಗೀತೆ, ಜೊತೆಗೆ ಸದ್ಯದಲ್ಲೇ ಬರಲಿರುವ ಯಾವುದಾದರೂ ದಿನಾಚರಣೆಗೆ (ಆಗಸ್ಟ್‌ ೧೬ ಅಥವಾ ಜನವರಿ ೨೬, ಗಣೇಶನ ಹಬ್ಬ, ನವರಾತ್ರಿ ಅಥವಾ ಹೀಗೇ ಇನ್ನೇನಾದರೂ) ಇನ್ನೊಂದು ಹಾಡಿನ ಸಾಮೂಹಿಕ ತಾಲೀಮು, ಅದಾದ ಮೇಲೆ ಪತ್ರಿಕಾ ವಾಚನ, ಅದಾದ ಮೇಲೆ ಹೆಡ್‌ ಮೇಡಂ ಏನಾದರೂ ಹೇಳುವುದಿದ್ದರೆ ಅದಕ್ಕೊಂದಷ್ಟು ಕಾಲ, ಯಾರಾದರೂ ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡಿದವರಿದ್ದರೆ, ಬಹುಮಾನಗಳನ್ನು ಗಳಿಸಿದ್ದವರಿದ್ದರೆ ಅವರ ಗುಣಗಾನ, ಕೆಲವೊಮ್ಮೆ ಯಾವುದಾದರೂ ನೃತ್ಯ ಪ್ರದರ್ಶನ, ಅದಾದ ಮೇಲೆ ಶಾಂತಿ ಮಂತ್ರ ನಂತರ ರಾಷ್ಟ್ರಗೀತೆ.

ಇಷ್ಟಾಗುವ ವೇಳೆಗೆ ಪ್ರತಿ ದಿನ ಒಂದಷ್ಟು ಮಕ್ಕಳು ತಲೆ ತಿರುಗಿಯೋ ನಿಶ್ಯಕ್ತಿಯಿಂದಲೋ ಬೀಳುವುದು ಸಾಮಾನ್ಯವಾಗಿತ್ತು. ಅದೇನೂ ಅಂತ ದೊಡ್ಡ ವಿಚಾರವಾಗಿರಲಿಲ್ಲ. ಬಿದ್ದರು. ಅವರನ್ನು ಕರೆದುಕೊಂಡು ಹೋಗಲು ವಿದ್ಯಾರ್ಥಿ ಸ್ವಯಂಸೇವಕರು ಇರುತ್ತಿದ್ದರು. ಬಿದ್ದವರಿಗೆ ನೀರು ಚುಮುಕಿಸಿ, ನೀರು ಕುಡಿಸಿದರೆ ಅವರು ಮತ್ತೆ ಏಳುತ್ತಿದ್ದರು. ಎಲ್ಲೋ ಕೆಲವರಿಗೆ ತಕ್ಷಣವೇ ವೈದ್ಯಕೀಯ ನೆರವನ್ನೂ ನೀಡಬೇಕಾಗುತ್ತಿತ್ತು.

ನಾನೂ ಆರನೇ ತರಗತಿಯಲ್ಲಿ ಒಂದು ದಿವಸ ಪ್ರಾರ್ಥನೆ ಸಮಯದಲ್ಲಿ ಬಿದ್ದು ಆ ರಾಜತಿಥ್ಯ ಸ್ವೀಕರಿಸಿದ್ದೆ. ಆಗಲೇ ಅದೇ ಶಾಲೆಯ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿದ್ದ ನನ್ನ ಎರಡನೇ ಅಕ್ಕ, ನಾಗಲತಾ ಗಾಬರಿಯಿಂದ ಬಂದು ಶಿಕ್ಷಕ ವರ್ಗದ ಸಲಹೆ ಮೇರೆಗೆ ಮನೆಗೆ ಒಯ್ದಿದ್ದಳು.  ಅಷ್ಟು ದೀರ್ಘವಾಗಿದ್ದರೂ ಆ ಶಾಲೆಯಲ್ಲಿ ಪ್ರಾರ್ಥನೆಯ ಸಮಯ ಅದೆಷ್ಟು ವರ್ಣಮಯವಾಗಿತ್ತು, ಸೃಜನಶೀಲವಾಗಿತ್ತು ಎಂದು ನೆನಪಿಸಿಕೊಳ್ಳುತ್ತಿದ್ದೇನೆ.

ಪ್ರಾಯಶಃ ಇಂತಹದೊಂದು ಕಲ್ಪನಾವಿಲಾಸದ ಸೋಂಕು ನಮಗೆಲ್ಲಾ ಆ ಶಿಕ್ಷಕಿಯರೇ ಅಂಟಿಸಿಬಿಟ್ಟಿದ್ದರು. ತರಗತಿಗಳ ಬಿಡುವಿನ ವೇಳೆಯಲ್ಲಿ ವಿಶಾಲವಾಗಿದ್ದ ಶಾಲೆಯ ಆವರಣದಲ್ಲಿ ಒಂದಷ್ಟು ಮಕ್ಕಳು ಜೂಟಾಟ, ಕ್ರಿಕೆಟ್‌, ಕಬ್ಬಡ್ಡಿ, ಕೊಕ್ಕೋ, ಚೂರ್‌ಚೆಂಡು, ವಾಲಿಬಾಲ್‌ ಆಡುತ್ತಿದ್ದರೆ, ಏಳೆಂಟು ಗಂಪುಗಳಾದರೂ ನೃತ್ಯಾಭ್ಯಾಸದಲ್ಲೋ, ನಾಟಕದ ತಾಲೀಮಿನಲ್ಲೋ, ಹಾಡು ಕಲಿಯುವುದರಲ್ಲೋ ನಿರತರಾಗಿರುತ್ತಿದ್ದುದು ಕಂಡು ಬರುತ್ತಿತ್ತು. ಅವುಗಳಿಗೇನೂ ಯಾವ ಶಿಕ್ಷಕಿಯೂ ನಿಂತು ಉಸ್ತುವಾರಿ ಮಾಡುತ್ತಿರಲಿಲ್ಲ. ಅವೆಲ್ಲವೂ ತಮ್ಮ ತರಗತಿಗಳಿಂದ ತಮ್ಮ ವಾರದ ಪ್ರದರ್ಶನಕ್ಕೆ ತಯ್ಯಾರಿ.

ಕಾರ್ಯಕ್ರಮದ ನಿರೂಪಕರು, ಪ್ರಾರ್ಥನಾ ಗೀತೆ, ಸ್ವಾಗತಿಸುವವರ ಭಾಷಣ, ಆಮೇಲೆ ನೃತ್ಯ (ಆಗೆಲ್ಲಾ ನಾವೇ ಬಾಯಲ್ಲಿ ಹಾಡುತ್ತಿದ್ದುದು, ಟೇಪ್‌ ರೆಕಾರ್ಡರ್‌ ಕೂಡಾ ಇರಲಿಲ್ಲ!), ಸಮೂಹ ಗಾಯನ, ಸ್ತಬ್ಧಚಿತ್ರ ಪ್ರದರ್ಶನ, ವಯಕ್ತಿಕ ಗಾಯನ, ಕಿರು ನಾಟಕ ಮತ್ತು ಕೊನೆಯಲ್ಲಿ ವಂದನಾರ್ಪಣೆ. ಇಷ್ಟು ನಡೆಸಿಕೊಡಲು ಸುಮಾರು ೪೦ ನಿಮಿಷಗಳು. ನಂತರ ಯಾರಾದರೂ ಶಿಕ್ಷಕಿಯರು ಕಾರ್ಯಕ್ರಮದಲ್ಲಿದ್ದ ಉತ್ತಮವಾದ, ಹೊಸತಾದ ವಿಚಾರಗಳನ್ನು ಕುರಿತು ಪ್ರಶಂಶಿಸಿ ಏನನ್ನು ತಿದ್ದಿಕೊಳ್ಳಬಹುದು ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಕಾರ್ಯಕ್ರಮ ನಡೆದ ನಂತರ ಆಯಾ ತರಗತಿಯವರೆಲ್ಲಾ ಸೇರಿ ಚಿಕ್ಕ ಪಾರ್ಟಿ ಮಾಡಿಕೊಳ್ಳುತ್ತಿದ್ದೆವು. ಅದೇ ಖುಷಿ.  

ಇಂತಹದೊಂದು ಕಾರ್ಯಕ್ರಮ ನಡೆಸಲು ತಯ್ಯಾರಿಯನ್ನು ಒಂದೊಂದು ತರಗತಿಯವರೂ ನಡೆಸುತ್ತಿದ್ದಾಗ ಅಲ್ಲಿನ ಗುಂಪುಗಳಲ್ಲಿ ಯಾವುದೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದವು – ನನಗಾಗಲ್ಲ, ನಿನಗಾಗಲ್ಲ, ಅದು ಸರಿಯಿಲ್ಲ, ಹೀಗೆ ಮಾಡಬೇಕು, ನಾನು ಬರಲ್ಲ, ಅದನ್ನ ಕೊಡಲ್ಲ ಇತ್ಯಾದಿ. ಕೆಲವೊಮ್ಮೆ ಕ್ಲಾಸ್‌ ಟೀಚರ್‌ ತನಕವೂ ಹೋಗಿರುವುದೂ ಇತ್ತು! ಇವುಗಳ ಮಧ್ಯಯೂ ಒಂದಷ್ಟು ಸಾದರ್ಭಿಕ ನಾಯಕರು ಎಲ್ಲವನ್ನೂ ಹೊಂದಿಸಿಕೊಂಡು ಹೋಗಲು ಪರದಾಡುತ್ತಿದ್ದರು, ಪ್ರಯತ್ನಿಸುತ್ತಿದ್ದರು. ಯಶಸ್ವಿಯೂ ಆಗುತ್ತಿದ್ದರು. ಈಗ ನಾವು ಗ್ರೂಪ್‌ ಡೈನಾಮಿಕ್ಸ್‌ ಎಂದು ಹೆಸರಿಸುವ ಎಲ್ಲವೂ ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಈ ಸಾಂಸ್ಕೃತಿಕ ಚಟುವಟಿಕೆಯ ಸಂಘಟನೆಯಲ್ಲಿ ನಡೆಯುತ್ತಿತ್ತು. ಪ್ರಾಯಶಃ ಮಕ್ಕಳ ಭಾಗವಹಿಸುವಿಕೆಯ ಹಕ್ಕು ಎಂದು ಆಗ ತಿಳಿದಿತ್ತೋ ಇಲ್ಲವೋ, ಆದರೆ ಇಂತಹದೊಂದು ಅವಕಾಶವನ್ನು ಕೊಡಲು ಕಲ್ಪಿಸಿಕೊಂಡಿದ್ದ ಶಿಕ್ಷಕ ವರ್ಗದ ಚಿಂತನೆ ಬಹಳ ಮುಂದಿತ್ತು.  

ವರ್ಷ ಪೂರ್ತಿ ನಡೆಯುತ್ತಿದ್ದ ಈ ಕಾರ್ಯಕ್ರಮಗಳು ಕೊನೆಯಾಗುತ್ತಿದ್ದುದು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಆಯೋಜಿಸಲಾಗುತ್ತಿದ್ದ ʼ೧೫ ನಿಮಿಷಗಳ ಕಾರ್ಯಕ್ರಮʼದಲ್ಲಿ. ಅದು ಅಂತರ ತರಗತಿ ಸ್ಪರ್ಧೆ. ಪ್ರತಿ ತರಗತಿಯವರಿಗೆ ಕೇವಲ ೧೫ ನಿಮಿಷ. ಇದರಲ್ಲಿ ಪ್ರಾರ್ಥನೆ, ಸಮೂಹ ಗಾಯನ, ನೃತ್ಯ, ಸ್ತಬ್ಧ ಚಿತ್ರ, ನಾಟಕ ಎಲ್ಲವನ್ನೂ ಅಳವಡಿಸಿ ಸಮರ್ಪಕವಾಗಿ ನಿರೂಪಣೆ ಮಾಡಿ ನಡೆಸಿಕೊಡಬೇಕು. ಅದೊಂದು ರೀತಿಯ ಸವಾಲು. ತೀರ್ಪುಗಾರರು ಶಾಲೆಯ ಹೊರಗಿನವರಾಗಿರುತ್ತಿದ್ದರು. ನಮಗೆ ಎಷ್ಟೋ ಬಾರಿ ವರ್ಷಾಂತ್ಯದ ವೇಳೆಗೆ ತರಗತಿಗಳ ಪಾಠಕ್ಕಿಂತಲೂ ಹೆಚ್ಚಾಗಿ ೧೫ ನಿಮಿಷದ ಕಾರ್ಯಕ್ರಮವನ್ನು ಹೇಗೆ ಚೆಂದ ಮಾಡಿ ಒಂದಷ್ಟು ಬಹುಮಾನಗಳನ್ನು ಹೊಡೆದು ನಮ್ಮ ಕ್ಲಾಸ್‌ ಟೀಚರ್‌ ಕೈಗೆ ಕಪ್‌ ಕೊಡಿಸಬೇಕು ಎನ್ನುವುದೇ ಯೋಚನೆಯಾಗಿರುತ್ತಿತ್ತು!  

ನನ್ನ ಆಗಿನ ತರಗತಿಯ ಬಾಲಮಿತ್ರರಾದ ನಾಗೇಂದ್ರ, ಅರುಣ, ಉಮಾ, ಗುಣಶೀಲ, ಲಕ್ಷ್ಮೀಶ, ಮೋಹನಕೃಷ್ಣ, ಮುರಳೀಧರ, ಸುಧಾ, ಸಂಧ್ಯಾ, ಶಿವರಾಂ, ಸುಮಾ, ಮೀರಾ, ಬದರಿ, ರಾಮ್‌, ಅಶೋಕ ಇತ್ಯಾದಿಗಳು ತಾವು ಎಲ್ಲಿಯೋ ಕಲಿತು ಬಂದು ನಮಗೆ ಹಾಡು ಹೇಳಿಕೊಡುತ್ತಿದ್ದುದು, ನಾವೆಲ್ಲಾ ಸೇರಿ ಆಯ್ಕೆ ಮಾಡಿದ ನಾಟಕಕ್ಕೆ ಪಾತ್ರಧಾರಿಗಳನ್ನು ಸೂಚಿಸಿ ನಿರ್ದೇಶಿಸುತಿದ್ದುದು, ಸಮೂಹ ನೃತ್ಯಕ್ಕೆ ಹೆಜ್ಜೆ ಹಾಕಲು, ಕೋಲಾಟ ಸಿದ್ಧಪಡಿಸಲು ಮುಂದಾಗುತ್ತಿದ್ದುದು ನೆನಪಾದಾಗಲೆಲ್ಲಾ ‘ಮಕ್ಕಳ ಹಕ್ಕು’ಗಳ ಕಲ್ಪನೆಯಿಲ್ಲದೆಯೂ ನಾವು ತಾರತಮ್ಯವಿಲ್ಲದ ವಾತಾವರಣದಲ್ಲಿ ಬೆಳೆದೆವು ಅಲ್ಲವೆ ಎಂದು ಅಚ್ಚರಿಯಾಗುತ್ತದೆ. ಇದೇ ನಮ್ಮಲ್ಲಿ ಅನೇಕರು ಬರಹ, ಸಂಗೀತ, ನಾಟ್ಯ, ನಾಟಕದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಕಾರಣವೂ ಆಯಿತು. 

ಜೊತೆಗೆ ನಾನು ಈ ಲೇಖನದಲ್ಲಿ ಮತ್ತೆ ಮತ್ತೆ ಬಳಸಿದ ಪದ ‘ಅವಕಾಶ’ಗಳನ್ನು ನಮಗೆ ಆಗ ಮಾಡಿಸಿದ ಶಾಲೆ ಮತ್ತು ಶಿಕ್ಷಕ ವರ್ಗ ಬಹಳ ಮುಖ್ಯವಾಗಿ ಫಿಲ್ಮ್‌ ಶೋ ಮಾಡುತ್ತಿದ್ದ, ನಮ್ಮ ಎತ್ತರಕ್ಕೆ ಮೈಕ್‌ ಹೊಂದಿಸುತ್ತಿದ್ದ, ವೇದಿಕೆಯ ಹಿಂಭಾಗದಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹೊಂದಿಸಿ ಕೊಡುತ್ತಿದ್ದ ರಾಜು ಅವರಿಗೂ ನಾವು ಆಭಾರಿಗಳು ಎಂದೆನಿಸುತ್ತದೆ. 

(ತಮ್ಮ ಸಂಗ್ರಹದಿಂದ ಹಳೆಯ ನೆನಪುಗಳ ಫೋಟೋಗಳನ್ನು ಹಂಚಿಕೊಂಡ ಬಾಲಮಿತ್ರರಿಗೆ ವಂದನೆಗಳು)

‍ಲೇಖಕರು ವಾಸುದೇವ ಶರ್ಮ

May 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅನಿತ ಪರ್ವತೀಕರ.

    ಶ್ರೀ ವಾಸುದೇವ ಶರ್ಮ ಸರ್ ತಮ್ಮ ಇಂದಿನ ಸಾಧನೆಯ ಹಿನ್ನೆಲೆಯಲ್ಲಿ ಎಂತಹ ಸುಂದರ ಬಾಲ್ಯದ ಶಾಲಾ ದಿನಗಳ
    ಸಂಭ್ರಮದ ಸಶಕ್ತ ನೆಲಗಟ್ಟಿದೆ. ನಮ್ಮ ಎಲ್ಲಾ ಮಕ್ಕಳಿಗೆ ಇಂತಹ ವ್ಯಕ್ತಿತ್ವ ನಿರ್ಮಾಣ ಸಿಕ್ಕಲ್ಲಿ ಅದ್ಭುತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: