ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಕ್ಕಿಯಂತೆ ನೀನು..

-ಚಿಂತಾಮಣಿ ಕೊಡ್ಲೆಕೆರೆ

೧ . ಹಕ್ಕಿಶಾಲೆ 

ಹಕ್ಕಿಯಂತೆ ನೀನು 

ಕಟ್ಟಲಾರೆ ಗೂಡು 
ಹಾಡಲಾರೆ ಹಾಡು 
ಹಾರಲಾರೆ ನೋಡು!

ಜಾಣನೆಂದುಕೊಳುವಿಯಲ್ಲ 
ಏನು ನಿನ್ನ ಪಾಡು!

ಹಕ್ಕಿಯ ಬಳಿ ಪಾಠ ಕಲಿ, ಹೋಗು 
ಮರದ ಕೆಳಗೆ ಕುಳಿತು ಪಾಠ ಕೇಳು 

ಗಿಡ ಬೆಳೆಸು, ಕಾಡು ಉಳಿಸು ಹಕ್ಕಿಗೆ 
ಹಾಡೆ ಮದ್ದು – ನಿನ್ನ ಉರಿವ ಸೊಕ್ಕಿಗೆ!

ಹಕ್ಕಿ ಹಾರುತಿರಲಿ ನಿನ್ನ ಬನದಲಿ 
ಗೂಡು ಕಟ್ಟಬಹುದು ನಿನ್ನ ಮನದಲಿ 

ಹಕ್ಕಿ ನೀಡಬಹುದು ಒಂದು ಗರಿಯನು 
ತೋರಬಹುದು ದೂರದೊಂದು ತೊರೆಯನು 

ಹಾಡು ಹುಟ್ಟಬಹುದು ತೊರೆಯ ಪಕ್ಕವೇ 
ಹಾಡು ಸಿಕ್ಕಮೇಲೆ ಮತ್ತೆ ದುಃಖವೇ?

ನೋಡು, ನಿನ್ನ ಹಾಡು ಹಾರಿ ನಲಿಯಿತು 
ಹಕ್ಕಿಶಾಲೆಯಲ್ಲಿ ಪಾಠ ಮುಗಿಯಿತು!

೨ . ಒದ್ದೆ ಹಕ್ಕಿಯ ಹಾಡು

    ಒದ್ದೆ ಹಕ್ಕಿ ರೆಕ್ಕೆ ಕೊಡವಿ 
    ಕುಪ್ಪಳಿಸಿದೆ  ಅಲ್ಲೆ 
    ಕತ್ತಾಡಿಸಿ ಹೇಳುತಿದೆ 
    ಈಗ ಹಾಡಲೊಲ್ಲೆ 

    ಮತ್ತೆ ಮಳೆ ಸುರಿಯಬಹುದು 
    ನೋಡಬೇಕು ನಾನು 
    ಮಳೆ ನೀರಲಿ ನೆನೆಯಬೇಕು 
    ಆಡಬೇಕು ನಾನು 

    ಮಳೆ ನೀರಲಿ ಮುಳುಗಿ ಎದ್ದು 
    ಮತ್ತೆ ಮರದ ಮರೆ 
    ಮೈ ಕೊಡವುತ ನನ್ನೊಳಗೇ 
    ಇರಬಯಸುವೆ  ಖರೆ 

    ಬೆಳಗಾಗಲಿ ಮತ್ತೆ ಹೊಸದು 
    ಹಾಡು ತರುವೆ ನಾನು 
    ಒಂದು ರಾತ್ರಿ ನನಗೆ ಕೊಡಿ 
    ಕಾಯಲಾರಿರೇನು?

    ‍ಲೇಖಕರು Admin

    28 September, 2025

    0 Comments

    Pin It on Pinterest

    Share This

    Discover more from ಅವಧಿ । AVADHI

    Subscribe now to keep reading and get access to the full archive.

    Continue reading