ರಾಘವೇಂದ್ರ ಜೋಶಿ
“ಕನ್ನಡದ ಬಗ್ಗೆ ಮಡಿ ಬೇಡ, ಮುನ್ನುಗ್ಗುವ ಧೈರ್ಯವಿರಲಿ..” – ಡಾ.ಹಂಪನಾ
ಕನ್ನಡ ಸಾರಸ್ವತ ಲೋಕದಲ್ಲಿ ‘ಹಂಪನಾ’ ಎಂದೇ ಚಿರಪರಿಚಿತರಾಗಿರುವ ಡಾ. ಹಂ.ಪ.ನಾಗರಾಜಯ್ಯ ಅವರು ಖ್ಯಾತ ಭಾಷಾ ತಜ್ಞ ಮತ್ತು ಗ್ರಂಥ ಸಂಪಾದಕರು. ಕಸಾಪದ ಗೌರವ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕನ್ನಡದ ಕೆಲಸ ಮಾಡಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಳಗನ್ನಡ ಸಾಹಿತ್ಯ, ಭಾಷಾವಿಜ್ಞಾನ, ಸಂಶೋಧನೆ, ಜಾನಪದ, ಅನುವಾದ, ಶಿಶುಸಾಹಿತ್ಯ, ವಿಮರ್ಶೆ, ಸಾಹಿತ್ಯಚರಿತ್ರೆ ಮೊದಲಾದ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿಗಳ ರಚನೆ.
• ಇಂದಿನ ಜಾಗತೀಕರಣದ ವಾತಾವರಣದಲ್ಲಿ ಪ್ರಪಂಚವೇ ಒಂದು ದೊಡ್ಡ ಹಳ್ಳಿಯಾಗಿ ಮಾರ್ಪಟ್ಟಿದೆ. ವಿದೇಶೀ ಸಂಸ್ಕೃತಿ, ನಡೆನುಡಿ ಜೀವನಶೈಲಿಗಳು ಜನಜೀವನದ ಮೇಲೆ ಗಾಢ ಪರಿಣಾಮ ಬೀರಿದೆ. ಇಂಥ ವಾತಾವರಣದಲ್ಲಿ ಸ್ಥಳೀಯ ಸಂಸ್ಕೃತಿ, ಭಾಷೆ ಸಾಹಿತ್ಯಗಳ ಉಳಿವು-ಬೆಳೆವಿನ ಬಗ್ಗೆ ನಿಮ್ಮ ಚಿಂತನೆ ಏನು? ಹೊಸ ತಲೆಮಾರಿಗೆ ಕನ್ನಡ ಸಂಸ್ಕೃತಿಯ ಬಗೆಗೆ ಹೆಚ್ಚು ಅಭಿಮಾನ ಮೂಡುವಂತಾಗಲು ತಮ್ಮ ಸಲಹೆ?
– ನೋಡಿ, ಕನ್ನಡ ಭಾಷೆಯ ನಿರಂತರ ಚರಿತ್ರೆಯಲ್ಲಿ ಕಾಲಕಾಲಕ್ಕೆ ಅನೇಕ ಆಘಾತ ಮತ್ತು ಪ್ರತ್ಯಾಘಾತಗಳು ಉಂಟಾಗಿವೆ. ಸವಾಲುಗಳು ಏಳುತ್ತಿರುವಕ್ಕೆ ಇದು ಮೊದಲನೆಯದೂ ಅಲ್ಲ ಮತ್ತು ಕೊನೆಯದೂ ಅಲ್ಲ. ತೀರ ಆಳಕ್ಕೆ ಹೋಗಿ ಗಮನಿಸಿದಾಗ ನಮಗೆ ಗೊತ್ತಾಗುವದೇನೆಂದರೆ, ಕನ್ನಡವೆಂಬುದು ವ್ಯವಹಾರಿಕ ಭಾಷೆಯಿಂದ ಸಾಹಿತ್ಯ ಭಾಷೆಯಾಗುವಲ್ಲಿನ ಪಯಣದಲ್ಲಿ ಎರಡು ಮಹಾನ್ ಭಾಷೆಗಳಾದ ಸಂಸ್ಕೃತ ಮತ್ತು ಪ್ರಾಕೃತಗಳಿಂದ ಅನೇಕ ಕೊಡುಗೆಗಳನ್ನು ಪಡೆದಿದೆ. ಹಾಗಂತ ಕನ್ನಡವೆಂಬುದು ಈ ಎರಡು ಭಾಷೆಗಳ ಪ್ರಭಾವಳಿಯಲ್ಲಿ ಕೊಚ್ಚಿ ಹೋಗಲಿಲ್ಲ. ಬದಲಾಗಿ ಅದನ್ನೆಲ್ಲ ಜೀರ್ಣಿಸಿಕೊಂಡಿತು. ಎಲ್ಲಕ್ಕಿಂತ ಮುಖ್ಯವಾಗಿ, ಕನ್ನಡವನ್ನು ಆ ವ್ಯವಹಾರಿಕ ಸ್ಥಿತಿಯಿಂದ ಸಾಹಿತ್ಯಿಕ ಸ್ಥಿತಿಯಲ್ಲಿಗೆ ಕೊಂಡೊಯ್ಯುವಾಗ ಅಥವಾ ಅದನ್ನು ಸಜ್ಜುಗೊಳಿಸುತ್ತಿರುವಾಗ, ಎಲ್ಲ ಭಾಷೆಗಳಿಂದ ಎಷ್ಟು ಸಾಧ್ಯವೋ ಅಷ್ಟು ಅರಿವನ್ನು ತೆಗೆದುಕೊಳ್ಳಬೇಕು ಮತ್ತು ಕನ್ನಡವನ್ನು ವಿಸ್ತರಿಸಬೇಕೆಂಬ ಕಲ್ಪನೆ ಅಂದಿನ ಲೇಖಕ ಮತ್ತು ಪಂಡಿತರ ಮನಸ್ಸಿನಲ್ಲಿತ್ತು.
ಹೀಗಾಗಿ ಕನ್ನಡದ ಸಾಹಿತ್ಯಿಕ ಸಂಪತ್ತನ್ನು ಹೆಚ್ಚಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಜೈನ ಕವಿಗಳು/ಸಾಹಿತಿಗಳು (ಉದಾ: ಪಂಪ, ರನ್ನ) ಇದೇ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಅತ್ಯುತ್ತಮವಾದದ್ದನ್ನೆಲ್ಲ ಬಸಿದು ಕನ್ನಡಕ್ಕೆ ಉಣಬಡಿಸಿದರು. ಈ ಹಂತದಲ್ಲಿ, ಆವತ್ತು ಕನ್ನಡಕ್ಕೆ ಬಂದಂಥ ತುಂಬಲೂರಾಚಾರ್ಯರು, ಶ್ರೀಧರಾಚಾರ್ಯರು ಮುಂತಾದವರು ಸಂಸ್ಕೃತದಲ್ಲಿದ್ದ ಆಧ್ಯಾತ್ಮಿಕದ ಸೂಕ್ಷ್ಮ ಸಂಗತಿಗಳನ್ನೆಲ್ಲ ಕನ್ನಡದಲ್ಲಿ ಸುಲಭವಾಗಿ ವ್ಯಾಖ್ಯಾನಿಸುವ ಮಟ್ಟಿಗೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸುತ್ತಾರೆ. ಅನಂತರ ಇಲ್ಲಿ ಕಾವ್ಯದ ಪ್ರವೇಶವಾಗುತ್ತದೆ. ನಿಮಗೆ ಅಚ್ಚರಿಯಾಗಬಹುದು, ಕನ್ನಡದ ಸಾಹಿತ್ಯಿಕ ಪರಂಪರೆಯಲ್ಲಿ ಇಲ್ಲಿಗೆ ಮೊದಲು ಬಂದಿದ್ದು ರಾಮಾಯಣ-ಮಹಾಭಾರತವಲ್ಲ. ಮೊದಲಿಗೆ ಇಲ್ಲಿ ಹೆಜ್ಜೆ ಇಟ್ಟಿದ್ದು ಜೈನ ಆಗಮನ ಗ್ರಂಥಗಳ ಟೀಕೆಗಳು! ಇವತ್ತಿಗೂ ಕನ್ನಡದ ಮೊಟ್ಟ ಮೊದಲ ಸಾಹಿತ್ಯಿಕ ಕೃತಿ ಎಂದು ಬಣ್ಣಿಸುವ ‘ವಡ್ಡಾರಾಧನೆ’ ಮತ್ತು ‘ಕವಿರಾಜಮಾರ್ಗ’ಗಳು ಒಟ್ಟಾರೆಯಾಗಿ ಸ್ವತಂತ್ರ ಕೃತಿಗಳಲ್ಲ. ಸ್ವತಂತ್ರ ಕಾವ್ಯವೂ ಅಲ್ಲ. ಅವೆಲ್ಲ ಸಂಸ್ಕೃತದ ಎರಡು ಲಾಕ್ಷಣಿಕ (ಕಾವ್ಯಮೀಮಾಂಸೆ) ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾದಂಥವುಗಳು.
ಇನ್ನು ಸ್ವಲ್ಪ ಮುಂದಕ್ಕೆ ಹೋದಂತೆಲ್ಲ, ಮೊಘಲರ ಕಾಲದಲ್ಲಿ ಅರಬ್ಬೀ ಮತ್ತು ಪಾರಸೀ ಭಾಷೆಗಳ ಪ್ರಭಾವವನ್ನೂ ಕನ್ನಡ ತನ್ನೊಳಗೆ ಜೀರ್ಣಿಸಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ- ಫ್ರೆಂಚರ, ಡಚ್ಚರ ಪ್ರಭಾವವನ್ನೂ ಕೂಡ. ಆದರೆ ಸದ್ಯಕ್ಕೆ ಬಂದಿರುವದು ಇಂಗ್ಲೀಷರ ಗಂಡಾಂತರ. ಇದು ಎಲ್ಲ ಹಳೆಯ ಸವಾಲುಗಳಿಗಿಂತ ಭಿನ್ನವಾಗಿರುವಂಥದ್ದು ಮತ್ತು ಸಂಕೀರ್ಣವಾಗಿರುವಂಥದ್ದು. ಹಾಗೆ ನೋಡಿದರೆ, ಈ ಸವಾಲನ್ನು ಕೇವಲ ಕನ್ನಡವೊಂದೇ ಎದುರಿಸುತ್ತಿಲ್ಲ, ಭಾರತೀಯ ಎಲ್ಲ ಭಾಷೆಗಳೂ ಈ ಸಂಕಷ್ಟಕ್ಕೆ ಈಡಾಗುತ್ತಲಿವೆ. ಪ್ರಸ್ತುತ ಸನ್ನಿವೇಶದಲ್ಲಿ ಕೈಗೆ ನಿಲುಕುವ ತಂತ್ರಜ್ಞಾನವನ್ನು ನಾವು ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕಿದೆ. ಯಾಕೆಂದರೆ ಯಾವುದೇ ಭಾಷೆಗೂ ಪ್ರತ್ಯೇಕ ಅಸ್ತಿತ್ವ ಎಂಬುದು ಯಾವತ್ತಿಗೂ ಇರುವದಿಲ್ಲ. ಅದು ಯಾವಾಗಲೂ ಜನರ ಬಾಯಲ್ಲಿ ಜೀವಿಸುತ್ತಿರುತ್ತದೆ ಮತ್ತು ಅಲ್ಲಿಯೇ ಬದುಕುತ್ತಿರುತ್ತದೆ. ಕನ್ನಡ ಭಾಷೆಯೂ ಇದಕ್ಕೆ ಹೊರತಾಗಿಲ್ಲ. ಎಲ್ಲಿಯವರೆಗೂ ನಾವು ಕನ್ನಡವನ್ನು ಬಳಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಕನ್ನಡ ಉಸಿರಾಡುತ್ತಿರುತ್ತದೆ.
• ಹೊಸ ಮಾಧ್ಯಮಗಳನ್ನು (ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಇತ್ಯಾದಿ) ಕನ್ನಡಸ್ನೇಹಿಯನ್ನಾಗಿ ಮಾಡುವ ಅಗತ್ಯವಿದೆಯೇ? ಇದನ್ನು ಹೇಗೆ ಸಾಧಿಸಬಹುದು?
– ಹೌದು, ಇವತ್ತಿನ ದಿನಮಾನಗಳಲ್ಲಿ ಜನಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವದು ಅಂತರ್ಜಾಲ ಮತ್ತು ಟೀವಿ ಮಾಧ್ಯಮಗಳು. ಟೀವಿಯಲ್ಲಿ ಬರುವ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಲ್ಲಿ ಬಳಸಲ್ಪಡುವ ಭಾಷೆ ಜನರ ಮೇಲೆ ನೇರ ಪರಿಣಾಮಗಳನ್ನು ಮಾಡುವಂಥದ್ದು. ಅಲ್ಲಿ ನಾವು ಹೆಚ್ಚು ಜಾಗರೂಕರಾಗಬೇಕಿದೆ.
ಇನ್ನೊಂದು ವಿಷಯ: ಇವತ್ತು ಪರಿಸ್ಥಿತಿ ಬದಲಾಗುತ್ತಲಿದೆ. ಈ ಹಿಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಾವೆಲ್ಲ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೋ ಅಥವಾ ರಾಜಧಾನಿಗೋ ಹೋಗುತ್ತಿದ್ದೆವು. ಅದೇನೂ ಕನ್ನಡ ಭಾಷೆಯ ಮೇಲೆ ಅಂಥ ದೊಡ್ಡ ಪರಿಣಾಮ ಬೀರುವಂಥ ಬೆಳವಣಿಗೆಯಾಗಿರಲಿಲ್ಲ. ಆದರೆ ಇವತ್ತು ರಾಜ್ಯ-ದೇಶ ಬಿಟ್ಟು ಹೋಗುತ್ತಿದ್ದೇವೆ. ಅಲ್ಲಿಯೇ ನೆಲೆಸುತ್ತಿದ್ದೇವೆ ಕೂಡ. ಅಲ್ಲಿಂದ ಇಲ್ಲಿಗೆ ಬರುವ ಅವರವರ ಮುಂದಿನ ಪೀಳಿಗೆಗೆ ಕನ್ನಡ ಬಾರದಿದ್ದರೂ ಕೂಡ ಜೀವನ ಸಾಗಿಸಬಹುದು ಎಂಬ ಸಂದೇಶ ಕೊಡುವಂಥ ವಾತಾವರಣ ಸೃಷ್ಟಿಯಾಗುತ್ತಲಿದೆ. ಕನ್ನಡವೆಂಬುದು ಒಂಥರಾ ಅನುಪಯುಕ್ತ ಭಾಷೆಯಂತೆ ಅವರಿಗೆ ಕಲ್ಪನೆ ಮೂಡತೊಡಗಿದೆ. ಇದು ಕನ್ನಡಕ್ಕೆ ಗಂಡಾಂತರ ತರಬಹುದಾದ ವಾತಾವರಣ ಎನ್ನುವದರಲ್ಲಿ ಎರಡು ಮಾತಿಲ್ಲ. ಇದೆಲ್ಲದರ ಮಧ್ಯೆಯೇ, ಕನ್ನಡವನ್ನು ತಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆನ್ನುವ ಕನ್ನಡಪರ ಮನಸ್ಸುಗಳಿಗೇನೂ ಕೊರತೆಯಿಲ್ಲ. ಇಂಥ ಮನಸ್ಸುಗಳೇ ಇವತ್ತಿನ ಸನ್ನಿವೇಶದ ಆಶಾಕಿರಣಗಳಾಗಿವೆ..
• ಇವತ್ತು ಇಂಗ್ಲಿಷ್ ತಿಳಿಯದಿದ್ದರೆ ಔದ್ಯೋಗಿಕ ಪ್ರಗತಿ ಸಾಧ್ಯವೇ ಇಲ್ಲವೆನ್ನುವಂತಾಗಿದೆ. ಇದರಿಂದಾಗಿ ಇಂಗ್ಲಿಶ್ ಮಾಧ್ಯಮ ಶಾಲೆಗಳ ಹಾವಳಿ ಮಿತಿಮೀರಿದೆ. ಪೋಷಕರು ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೇ ಕಳಿಸುತ್ತಾರೆ. ಮನೆಯಲ್ಲೂ ಇಂಗ್ಲಿಷಿನಲ್ಲೇ ಮಾತಾಡುವ ಮೂಲಕ ಮಗುವು ಆದಷ್ಟು ಬೇಗ ಇಂಗ್ಲಿಷಿನಲ್ಲಿ ಪರಿಣತನನ್ನಾಗಿ ಮಾಡಲು ಹಾತೊರೆಯುವುದು ಕಾಣುತ್ತದೆ. ಇದರಿಂದ ಮಕ್ಕಳು ಕೇವಲ ಕಡ್ಡಾಯ ಪತ್ರಿಕೆಯನ್ನಾಗಿ ಕನ್ನಡವನ್ನು ಕಲಿತು ಮರೆಯುವ ಸ್ಥಿತಿ ಮುಟ್ಟಿದ್ದಾರೆ. ಇನ್ನು ಮನೋರಂಜನೆಯ ಮಾಧ್ಯಮಗಳಲ್ಲಿ ಹಿಂದಿ ಮುಂಚೂಣಿಯಲ್ಲಿದೆ. ಹೀಗಾಗಿ ಇಂಗ್ಲಿಷು ಅಥವಾ ಹಿಂದಿಯಲ್ಲಿ ಯೋಚಿಸಿ ಕನ್ನಡದಲ್ಲಿ ಮಾತಾಡುವ ಒಂದು ಹೊಸ ತಲೆಮಾರೇ ಸೃಷ್ಟಿಯಾಗಿದೆ. ಕನ್ನಡದಿಂದ ಯಾವ ಪ್ರಯೋಜನವೂ ಇಲ್ಲ, ಅದಿಲ್ಲದಿದ್ದರೂ ಬದುಕಬಹುದೆಂಬ ಮನಸ್ಥಿತಿ ಸೃಷ್ಟಿಯಾಗಿದೆ; ಕನ್ನಡಕ್ಕೆ ಇಂದು ಅನ್ನ ಹುಟ್ಟಿಸುವ ಶಕ್ತಿಯಿಲ್ಲವೆಂಬ ಭಾವನೆ ಸಾರ್ವತ್ರಿಕವಾಗಿದೆ. ಕನ್ನಡವು ಅನ್ನ ನೀಡುವ ಭಾಷೆಯಾಗಬೇಕೆಂಬುದು ನಮ್ಮೆಲ್ಲರ ಆಶಯ ಕೂಡ. ಕೇವಲ ಗತವೈಭವ, ಸಾಂಸ್ಕೃತಿಕ-ಸಾಹಿತ್ಯಕ ಸಿರಿಗಷ್ಟೇ ಸೀಮಿತಗೊಳಿಸದೇ ಕನ್ನಡವನ್ನು ಆರ್ಥಿಕ/ಔದ್ಯೋಗಿಕವಾಗಿ ಕೂಡ ಒಂದು ಜನಭಾಷೆಯಾಗಿ, ಪರಿಣಾಮಕಾರಿ ಭಾಷೆಯಾಗಿ ಹೇಗೆ ಬೆಳೆಸಬಹುದು?
– ನಿಜ, ಇದೆಲ್ಲ ಸ್ವಲ್ಪ ಗಂಭೀರವಾಗಿ ಯೋಚನೆ ಮಾಡುವಂಥ ವಿಚಾರ. ಇಂಗ್ಲೀಷೇ ಎಲ್ಲದಕ್ಕೂ ರಾಮಬಾಣ ಎಂಬ ಒತ್ತಡವನ್ನೂ, ಪರಿಸ್ಥಿತಿಯನ್ನೂ ಉಂಟು ಮಾಡುತ್ತಿರುವವರು ಯಾರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇಲ್ಲಿ ‘ಭಾಷಾ ರಾಜಕಾರಣ’ ಎಂಬುದು ಒಂದಿದೆ: ಇದರಲ್ಲಿ ಇಂಥವರು ಅಂಥವರು ಎಂಬುದಿಲ್ಲ, ಬಹುತೇಕ ಎಲ್ಲರೂ ಈ ಭಾಷಾ ಪಾಲಿಟಿಕ್ಸ್ ನ ಅಂಗವಾಗಿದ್ದಾರೆ. ವೇದಿಕೆಗಳಲ್ಲಿ ಕನ್ನಡದ ಬಗ್ಗೆ ತುಂಬು ಕಂಠದಿಂದ ಮಾತನಾಡುವವರ ಮನೆಗಳಲ್ಲೇ ಕನ್ನಡವೆಂಬುದು ಅನಾಥವಾಗುತ್ತಿದೆ.
ಇದು, ಒಂದು ಮುಖ.
ಎರಡನೇಯದಾಗಿ, ನಮ್ಮ ವಿದ್ಯಾಸಂಸ್ಥೆಗಳು. ಈ ಹಿಂದೆ ಇದ್ದಂಥ ವಿದ್ಯಾರ್ಜನೆ ಮತ್ತು ಜ್ಞಾನಾರ್ಜನೆಯ ಮೂಲಸ್ವರೂಪ ಇವತ್ತು ಬದಲಾಗಿದೆ. ಭಾಷೆಯೆಂಬುದು ಜ್ಞಾನಾರ್ಜನೆಗೆ ಒಂದು ವಾಹಕವೆಂಬುದನ್ನು ಈ ವಿದ್ಯಾಸಂಸ್ಥೆಗಳು ಹಣದ ದಾಹದಲ್ಲಿ ಮರೆತುಬಿಟ್ಟಿವೆ. ಇನ್ನು ಮೂರನೇಯದಾಗಿ, ತಮ್ಮ ಬರವಣಿಗೆಯಿಂದಲೇ ಕನ್ನಡವನ್ನು ಉಳಿಸುತ್ತೇನೆಂದು ಮತ್ತು ಅದರ ಮೂಲಕ ಕನ್ನಡದಲ್ಲಿ ಕ್ರಾಂತಿ ತರುತ್ತೇನೆ ಎಂಬ ಭ್ರಮೆಯಲ್ಲಿರುವ ಸಾಹಿತಿಗಳು ಈ ಭ್ರಾಂತಿಯಿಂದ ಮೊದಲು ಹೊರಬರಬೇಕಿದೆ. ಜನರ ಜೊತೆ ಬೇರೆಯಬೇಕಿದೆ. ಅವರಲ್ಲಿ ಒಂದಾಗಿ ಬದುಕಬೇಕಿದೆ. ಯಾಕೆಂದರೆ, ಕನ್ನಡವನ್ನು ನಿಜವಾಗಿಯೂ ಉಳಿಸಿ ಬೆಳೆಸುತ್ತಿರುವದು ಇದೇ ಜನಸಾಮಾನ್ಯರು. ಇಂಥ ಜನರಿಗೆ “ನೀವು ಮಾಡುತ್ತಿರುವ ಕನ್ನಡದ ಕೆಲಸ ಸರಿಯಾಗಿದೆ..” ಅನ್ನುವ ಉತ್ತೇಜನದ ಮಾತುಗಳು ಈ ಸಾಹಿತಿಗಳಿಂದ ಬರಬೇಕಿದೆ.
ದುರದೃಷ್ಟಕರ ಎಂದರೆ, ಇಂಥ ಭಾಷಾ ಪಾಲಿಟಿಕ್ಸ್ ಹುನ್ನಾರಗಳ ನಡುವೆ ನಮ್ಮನ್ನು ಕಾಪಾಡಬೇಕಿದ್ದುದು ನಮ್ಮ ನ್ಯಾಯಾಲಯಗಳು. ಆದರೆ ಪೊರೆಯುವ ಸನ್ನಿವೇಶ ಬಂದಾಗ ನಮ್ಮ ದೇಶದ ವರಿಷ್ಠ ನ್ಯಾಯಾಲಯ ನಮಗೆ ಅನ್ಯಾಯ ಮಾಡಿತು. ಮಾತೃಭಾಷೆಯ ಬಗ್ಗೆ ತನ್ನ ಆದ್ಯತೆಯನ್ನು ಎತ್ತಿ ಹಿಡಿಯದೇ, ಆಪತ್ಕಾಲೀನ ಪರಿಸ್ಥಿತಿಯನ್ನು ನಿವಾರಿಸುವದಕ್ಕಾಗಿ ತಾನು ಕೈಚೆಲ್ಲಿ ಬಿಟ್ಟಿತು. ನ್ಯಾಯಾಲಯದ ಈ ಕೈ ಚೆಲ್ಲುವಿಕೆ ಅನೇಕ ದೀರ್ಘಕಾಲಿಕ ದುಷ್ಪರಿಣಾಮಗಳನ್ನು ಬೀರಬಲ್ಲದು.
ಇರಲಿ, ಇದೆಲ್ಲದರ ನಡುವೆಯೂ ನಾವು ಇಂಗ್ಲೀಷಿನ ಅಗತ್ಯತೆಯನ್ನು ಮನಗಾಣಬೇಕಿದೆ. ಇದರಲ್ಲಿ ಮಡಿ ಮಾಡುವಂಥದ್ದೇನೂ ಇಲ್ಲ. ಸರಕಾರ ತನ್ನ ಇಚ್ಚಾಶಕ್ತಿಯನ್ನು ಇಲ್ಲಿ ತೋರಬೇಕಿದೆ. ಇವತ್ತು ಪಾಲಕರು ಸಾಲಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಉಚಿತವಾಗಿ ಸೈಕಲ್ಲು ವಿತರಿಸದ, ಬಿಸಿಯೂಟ ನೀಡದ, ಸಮವಸ್ತ್ರ ನೀಡದ ಖಾಸಗಿ ಶಾಲೆಗಳಿಗೇ ಯಾಕೆ ಸೇರಿಸುತ್ತಾರೆಂದು ಸರ್ಕಾರ ತನ್ನಷ್ಟಕ್ಕೆ ತಾನೇ ಪ್ರಶ್ನಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳೂ ಕೂಡಾ ಅತ್ಯುತ್ತಮ ಕನ್ನಡದ ಜೊತೆಗೆ ಅತ್ಯುತ್ತಮ ಇಂಗ್ಲೀಷನ್ನೂ ಕಲಿಸಬಲ್ಲವು ಅಂತ ರುಜುವಾತು ಮಾಡಿದಲ್ಲಿ ಈ ಭಾಷಾ ರಾಜಕಾರಣ ತನ್ನಿಂದ ತಾನೇ ಮುಗಿದು ಹೋಗುತ್ತದೆ.
ಕೊನೆಯದಾಗಿ ಒಂದು ಮಾತನ್ನು ಹೇಳುತ್ತೇನೆ: ಇಂಗ್ಲೀಷನ್ನು ಶತ್ರು ಅನ್ನುವ ಥರ ನಾವು ಭಾವಿಸಬೇಕಿಲ್ಲ. ಅದನ್ನು ಮಿತ್ರನನ್ನಾಗಿಸಿಕೊಳ್ಳಬೇಕು. ಪಳಗಿಸಿಕೊಳ್ಳಬೇಕು. ಕನ್ನಡ ಉಳಿಸುವದೆಂದರೆ, ಕನ್ನಡ ಮಾಧ್ಯಮದವರಿಗೆ ಔದ್ಯೋಗಿಕವಾಗಿ ಶೇಕಡಾವಾರು ಮೀಸಲಾಗಿ ಕೊಡಬೇಕು ಅಂತ ಗೆಜೆಟಿಯರ್ ನಲ್ಲಿ ಪ್ರಕಟಿಸುವದಲ್ಲ; ಭಾಷಣ ಕೊಡುವದಲ್ಲ. ಇದೆಲ್ಲ ಆಂತರಿಕವಾಗಿ ಸದ್ದಿಲ್ಲದೇ ನಡೆಯುವಂಥದ್ದು. ಇಬ್ಬರು ಅಭ್ಯರ್ಥಿಗಳು ಸಮಾನ ಪ್ರತಿಭಾವಂತರಾಗಿದ್ದಾಗ, ಕನ್ನಡದಲ್ಲಿ ಕಲಿತವನಿಗೆ ಸರ್ಕಾರಿ ರಂಗದಲ್ಲಿ ಮೊದಲ ಅವಕಾಶ ಕೊಡುತ್ತ ಬರಬೇಕು. ಎಲ್ಲ ಖಾಸಗಿ ಕಾರ್ಖಾನೆ, ಕಂಪೆನಿ, ಸಂಸ್ಥೆಗಳ ಅಧಿಕಾರಿಗಳನ್ನು ಕಾನೂನಿನ ಮೂಲಕ ಬೆದರಿಸದೇ ವಿಶ್ವಾಸದಿಂದ ಗೆಲ್ಲಬೇಕು. ಅವರನ್ನು ಸ್ನೇಹದಿಂದ ಮನವೊಲಿಸಬೇಕು. ಇದೆಲ್ಲ ಸದ್ದಿಲ್ಲದೇ ಒಂದು ಚಳುವಳಿ ರೂಪದಲ್ಲಿ ನಡೆದಾಗಲೇ ಕನ್ನಡದಲ್ಲಿ ಕಲಿತ ಮನುಷ್ಯ ತನ್ನ ಭಾಷೆ ಔದ್ಯೋಗಿಕವಾಗಿಯೂ ಸಮರ್ಥವಾಗಿದೆ ಅನ್ನುವ ಹುಮ್ಮಸ್ಸಿನಲ್ಲಿ ಕನ್ನಡವನ್ನು ಅಪ್ಪಿಕೊಳ್ಳುತ್ತಾನೆ.
• ಬೇರೆ ಜ್ಞಾನಗಳನ್ನು (ಉದಾಹರಣೆಗೆ ವೈಜ್ಞಾನಿಕ ಮತ್ತು ತಾಂತ್ರಿಕ) ಕನ್ನಡ ಭಾಷೆಗೆ ಹೇಗೆ ತಂದುಕೊಳ್ಳಬಹುದು?
ವಸ್ತು/ಪರಿಕಲ್ಪನೆಯು ಹೊರಗಿನಿಂದ ಬರುವುದರಿಂದ ಅದನ್ನು ಸೂಚಿಸುವ ಪದವೂ ಹೊರಗಿನಿಂದಲೇ ಬಂದು ಕನ್ನಡದಲ್ಲಿ ಅದೇ ರೂಪದಲ್ಲಿ ನೆಲೆನಿಂತರೆ ಒಳ್ಳೆಯದೇ? (ಉದಾ: ಫೇಸ್ಬುಕ್, ಇಂಟರ್ನೆಟ್, ವೆಹಿಕಲ್, ಏರೋಪ್ಲೇನ್ ಹೀಗೆ)
ಅಥವ, ಆ ಪದ ಇಲ್ಲಿ ಬಂದು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬದಲಾಗುವುದು ಒಳ್ಳೆಯದೇ? (ಉದಾ: ಫೇಸ್ಬುಕ್ಕು, ಇಂಟರ್ನೆಟ್ಟು, ಬಸ್ಸು, ವೆಹಿಕಲ್ಲು, ಏರೋಪ್ಲೇನು ಹೀಗೆ)
ಅಥವ, ಅದಕ್ಕೆ ಕನ್ನಡದ್ದೇ ಪದಗಳನ್ನು ರೂಪಿಸಿಕೊಳ್ಳುವುದು ಒಳ್ಳೆಯದೇ? ಕನ್ನಡದ್ದೇ ಪದಗಳನ್ನು ರೂಪಿಸಿಕೊಳ್ಳುವುದಿದ್ದರೆ ಸಂಸ್ಕೃತಮೂಲದ್ದಾಗಿದ್ದು ಈಗಾಗಲೇ ಕನ್ನಡದಲ್ಲೂ ಬಳಕೆಯಲ್ಲಿರುವ ಪದಗಳನ್ನುಪಯೋಗಿಸಿ ಕಟ್ಟಿಕೊಳ್ಳುವುದೊಳ್ಳೆಯದೇ (ಉದಾ: ಮುಖಪುಸ್ತಿಕೆ, ಅಂತರ್ಜಾಲ, ವಾಹನ, ವಿಮಾನ ಹೀಗೆ)
ಅಥವ, ಅಪ್ಪಟ ಕನ್ನಡದ ಮೂಲಪದಗಳಿಂದ ಪದ ಕಟ್ಟಿಕೊಳ್ಳುವುದೊಳ್ಳೆಯದೇ (ಮೋರೆವೊತ್ತಿಗೆ, ಮಿಂಬಲೆ, ಗಾಡಿ, ಬಾನೋಡ ಹೀಗೆ)
– ನಾನು ಆಗಲೇ ಹೇಳಿದಂತೆ, ಭಾಷಾ ವಿಚಾರದಲ್ಲಿ ನಮ್ಮಲ್ಲಿ ಮಡಿವಂತಿಕೆ ಇರಕೂಡದು. ಹಠವೂ ಕೂಡ. ಕನ್ನಡಕ್ಕೆ ಕನ್ನಡದ್ದೇ ಪದ ಇರಬೇಕು ಅನ್ನುವ ಹಠ ಅರ್ಥವಿಲ್ಲದ್ದು. ಯಾಕೆಂದರೆ ಭಾಷೆ ಎನ್ನುವದು ಯಾವಾಗಲೂ ಇಬ್ಬರ ನಡುವಿನ ಸರಳ ಸಂವಹನ ಆಗಿರಬೇಕೇ ಹೊರತು ಅದು ಗೊಂದಲವನ್ನುಂಟು ಮಾಡುವಂತಿರಬಾರದು. ಎಲ್ಲಕ್ಕಿಂತ ಮಿಗಿಲಾಗಿ, ಕನ್ನಡದ ಸಾಹಿತ್ಯವನ್ನೇ ತೆಗೆದುಕೊಳ್ಳುವದಾದರೆ, ಇಲ್ಲಿನ ಸಾಹಿತ್ಯವನ್ನು ಓದುವವರಿಗೆ ಅಥವಾ ಕೇಳುಗರಿಗೆ ಅದು ಅರ್ಥವಾಗುವಂತಿರಬೇಕು. ತಾಗುವಂತಿರಬೇಕು. ಅದಾಗದೇ ಹೋದರೆ ಅಂಥದೊಂದು ಸಾಹಿತ್ಯದಿಂದ ಏನು ಸಾಧಿಸಿದಂತಾಯಿತು? ಇಲ್ಲಿ ಫೇಸ್ ಬುಕ್ ಅನ್ನುವದನ್ನು ಫೇಸ್ ಬುಕ್ ಅಂತ ಕರೆಯುವದರಲ್ಲೇ ಒಂದು ಅರ್ಥವಿದೆ. ಯಾಕೆಂದರೆ ಪ್ರತಿಯೊಂದು ಪದಕ್ಕೂ ತನ್ನದೇ ಆದಂಥ ಒಂದು ಅರ್ಥವಲಯ ಇರುತ್ತದೆ. ಫೇಸ್ ಬುಕ್ ಅನ್ನುವದನ್ನು ಮೋರೆವೊತ್ತಿಗೆ ಅಥವಾ ಮುಖಪುಸ್ತಿಕೆ ಅಂತ ಕರೆಯುವದರಿಂದ ಫೇಸ್ ಬುಕ್ ಅನ್ನುವ ಪದದೊಳಗಿನ ಲಯವನ್ನು ನಾವು signify ಮಾಡಲಾರೆವು. ಅಷ್ಟಕ್ಕೂ ಮೀರಿ ಬಸ್ಸು, ಟ್ರಕ್ಕು ಅನ್ನುವಂತೆ ಫೇಸ್ ಬುಕ್ಕು ಎಂದರೂ ಕನ್ನಡಕ್ಕೇನೂ ಕುತ್ತು ಬಾರದು.
• ತರ್ಜುಮೆ ಮಾಡುವಾಗ ಸರಳವಾದ ಕನ್ನಡ ಪದಗಳಿದ್ದಾಗ್ಯೂ ಸಂಸ್ಕೃತದ ಪದಗಳನ್ನೇ ಬಳಸುವ ಅಥವ ಸರಳವಾದ ಸಮಸಂಸ್ಕೃತದ ಪದಗಳಿದ್ದರೂ ಮರೆತುಹೋದ ’ಅಪ್ಪಟ’ ಕನ್ನಡದ ಪದಗಳನ್ನೇ ಹುಡುಕಿ ಬಳಸುವ ಬಗ್ಗೆ ತಮ್ಮ ಅಭಿಪ್ರಾಯವೇನು? (ಉದಾ: ಮೋಚಿ ಅಂಗಡಿ/ಚಮ್ಮಾರನ ಅಂಗಡಿಯ ಬದಲು ಚರ್ಮಕಾರಕುಟೀರ (Cobler’s hut); ಶಾಲೆ ವಿಶ್ವವಿದ್ಯಾಲಗಳ ಬದಲು ಕಲಿಕೆವೀಡು, ಹೆಗ್ಗಲಿಕೆವೀಡು (school/university); ಇತ್ಯಾದಿ)
ಹಾಗೆಯೇ ಕನ್ನಡಕ್ಕೆ ಬೇಕು ಕನ್ನಡದ್ದೇ ಪದ ಎಂಬ ವಾದವೊಂದಿದೆ; ಹಾಗೆಯೇ ನುಡಿಯಲ್ಲಿ ಸಹಜವಾಗಿ ಬರುವ ಪ್ರಯೋಗಗಳನ್ನು ಹಾಗೆಯೇ ಸ್ವೀಕರಿಸಬೇಕು, ಹಟ ಹಿಡಿದು ಕನ್ನಡ ಪದ ಕಟ್ಟುವುದು ಸಲ್ಲ ಎಂಬ ಎರಡು ವಾದಗಳಿವೆ. ಈ ವಾದಗಳ ಪರಿಮಿತಿಗಳೇನು? ಒಟ್ಟಾರೆಯಾಗಿ, ಅನ್ಯಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ನಾವು ಅನುಸರಿಸುವ ನಿಲುವು ಎಂಥದಿರಬೇಕು?
– ತರ್ಜುಮೆ ಅಥವಾ ಅನುವಾದ ಅನ್ನುವದು ತುಂಬಾ ಎಚ್ಚರಿಕೆಯಿಂದ ಮಾಡುವಂಥದ್ದು. ಇದು ನಾನಾ ಹಂತಗಳಲ್ಲಿ ನಾನಾ ರೂಪ ಧರಿಸುವಂಥದ್ದು. ಅನ್ಯಭಾಷೆಯೊಂದನ್ನು ತರ್ಜುಮೆ ಮಾಡುವಾಗ ಅಲ್ಲಿನ ವಿಚಾರ ಮತ್ತು ವಸ್ತುಗಳಿಗೆ ಸಮಾನಾಂತರವಾಗಿ ನಮ್ಮಲ್ಲಿರುವ ವಿಚಾರ ಮತ್ತು ವಸ್ತುಗಳ ಬೆಂಬಲ ಪಡೆಯುತ್ತ ಹೋಗಬೇಕಾಗುತ್ತದೆ. ಇದನ್ನು ಉದಾಹರಣೆ ಮೂಲಕ ಕೊಡುವದಾದರೆ, Socks ಅನ್ನುವದು ನಮ್ಮಲ್ಲಿಗೆ ಬರುವದಕ್ಕೂ ಮೊದಲೇ ನಮ್ಮಲ್ಲಿ ಗೋಣಿ ಚೀಲವಿತ್ತು. ಕೈಚೀಲವಿತ್ತು. ಇನ್ನೂ ಅನೇಕ ರೀತಿಯ ಚೀಲಗಳಿದ್ದವು. ಹೀಗಿರುವಾಗ, ಸಾಕ್ಸ್ ಅನ್ನುವ ವಸ್ತು ನಮ್ಮಲ್ಲಿಗೆ ಬಂದಾಗ ನಮ್ಮಲ್ಲಿ ಅದಾಗಲೇ ಬಳಕೆಯಲ್ಲಿದ್ದ ‘ಕಾಲು’ ಮತ್ತು ‘ಚೀಲ’ವನ್ನು ಬಳಸಿಕೊಂಡು ಸಾಕ್ಸ್ ಗೆ ‘ಕಾಲ್ಚೀಲ’ವೆಂದು ತರ್ಜುಮೆ ಮಾಡಿಕೊಂಡೆವು. ಅದೇ ರೀತಿ ಥರ್ಮಾಮೀಟರ್ ಎಂಬುದನ್ನು ಯಾವ ರೀತಿ ಅನುವಾದ ಮಾಡುವದು ಅಂತ ಭಾಷಾ ತಜ್ಞರೆಲ್ಲ ನಿಘಂಟುಗಳನ್ನೆಲ್ಲ ತಡಕಾಡುತ್ತಿರುವಾಗ, ಯಾವುದೋ ಹಳ್ಳಿಯ ಮುದುಕನೊಬ್ಬ ಅದಕ್ಕೆ ‘ಜ್ವರದ ಕಡ್ಡಿ’ ಅಂತ ಸಹಜವಾಗಿ ಕರೆದುಬಿಟ್ಟಿದ್ದ! ಜ್ವರದಕಡ್ಡಿ ಎಂಬ ಈ ನೆಲದ ಅತ್ಯುತ್ತಮ ಅನುವಾದಕ್ಕಿಂತ ಬೇರೆ ಪದ ಇನ್ಯಾವುದಿದ್ದಿರಬಹುದು ಅಂತ ಇವತ್ತಿಗೂ ನನಗೆ ಗೊತ್ತಿಲ್ಲ. Nail cutter ಗೆ ‘ಉಗುರುಳಿ’, ಚಾಕ್ ಪೀಸ್ ಗೆ ‘ಸೀಮೆಸುಣ್ಣ’, ಕೆರೋಸೀನ್ ಗೆ ‘ಸೀಮೆಯೆಣ್ಣೆ’ ಅನ್ನುವ ಸಮಾನಾಂತರ ಪದಗಳೆಲ್ಲ ಕೂಡ ಇದೇ ಧಾಟಿಯಲ್ಲಿ ಹುಟ್ಟಿರುವಂಥವು.
ಇದೆಲ್ಲದರ ನಡುವೆಯೂ ಒಂದು ಎಚ್ಚರಿಕೆಯ ಸಂಗತಿಯೊಂದಿದೆ. ಕನ್ನಡದಲ್ಲಿ ಹೊಸ ಪದಗಳನ್ನು ಟಂಕಿಸುವಾಗ ನಾವು ಪಾಂಡಿತ್ಯದ ಮೊರೆ ಹೋಗಬೇಕಿಲ್ಲ. ಯಾಕೆಂದರೆ ಇಂಥ ಪದಗಳನ್ನು ಬಳಸಿ, ಉಳಿಸಿ, ಬೆಳೆಸುವಂಥವರು ಸಾಮಾನ್ಯ ಜನರೇ ಹೊರತು ಪಂಡಿತರಲ್ಲ. ಹೀಗಾಗಿ ನಾವು ಆದಷ್ಟೂ ನೆಲದ ಭಾಷೆಯ ಪದಗಳ ಮೊರೆ ಹೋಗುವದು ಉತ್ತಮ. ಹಾಗಂತ ಎಲ್ಲದಕ್ಕೂ ನಾವು ಕನ್ನಡದ್ದೇ ಪದ ಇರಬೇಕು ಅಂತ ಚಿತ್ರವಿಚಿತ್ರ ಪದಗಳನ್ನು ಟಂಕಿಸುವಂತಿಲ್ಲ. ಯಾಕೆಂದರೆ ಅನೇಕ ಅನ್ಯಭಾಷೆಯ ಪದಗಳು ನಮ್ಮಲ್ಲಿ ಹಾಸುಹೊಕ್ಕಾಗಿವೆ. ರೈಲು ಅನ್ನುವದು ಅಪ್ಪಟ ಕನ್ನಡ ಪದವಾಗಿ ತನ್ನದೇ ಆದ ಅರ್ಥವಲಯವನ್ನು ಕಂಡುಕೊಂಡಿದೆ. ಉದಾಹರಣೆಗೆ, “ಈ ರೈಲು ಎಷ್ಟು ಗಂಟೆಗೆ ಬರುತ್ತದೆ?” ಎನ್ನುವ ವಾಕ್ಯಕ್ಕೂ, “ಅವನು ತುಂಬಾ ರೈಲು ಬಿಡ್ತಾನೆ ಕಣ್ರೀ..” ಅನ್ನುವ ವಾಕ್ಯಕ್ಕೂ ಇರುವ ಲಯ ಮತ್ತು ಅರ್ಥ ಗಮನಿಸಿ. ಇದನ್ನೇ ನಾನು ಅರ್ಥವಲಯ ಅಂತ ಕರೆಯುವದು. ರೈಲು ಎಂಬುದು ಹೀಗೆ ನಾನಾರ್ಥ ಕಂಡುಕೊಂಡಿರುವಾಗ ಅದಕ್ಕೆ ಇನ್ನೇನೋ ಕಷ್ಟಪಟ್ಟು ‘ಧೂಮ ಶಕಟ ಯಂತ್ರ’ ಅಂತೆಲ್ಲ ನಾಮಕರಣ ಮಾಡಿ ಜನರಿಗೆ ಯಾಕೆ ಕಷ್ಟ ಕೊಡಬೇಕು?
ಇದೇ ರೀತಿ ಬಸ್ಸು, ಲಾರಿ, ಸೈಕಲ್ಲುಗಳೆಲ್ಲ ಕನ್ನಡದ ಜನತೆಗೆ ಸಹಜವಾಗಿ ಅರ್ಥವಾಗುವದರ ಜೊತೆಗೆ ಕನ್ನಡದ್ದೇ ಪದಸಂಪತ್ತನ್ನು ಹೆಚ್ಚಿಸಿರುವಾಗ ನಾವು ಹಠ ಹಿಡಿದು ಮಡಿ ಮಾಡುವದರಲ್ಲಿ ಅರ್ಥವಿಲ್ಲ. ಇವತ್ತು ಆಂಗ್ಲದಲ್ಲಿ ಲಕ್ಷಾಂತರ ಪದಗಳು ಲಭ್ಯವಿವೆ. ಇವುಗಳಲ್ಲಿ ಶೇಕಡಾ ಅರವತ್ತರಷ್ಟು ಪದಗಳು ಸಂಸ್ಕೃತದಿಂದ, ಲ್ಯಾಟಿನ್ ನಿಂದ, ಗ್ರೀಕ್ ನಿಂದ ಎರವಲು ಪಡೆದಿರುವಂಥವು. ಹೀಗೆ ಮಾಡಿಮಾಡಿಯೇ ಇಂಗ್ಲೀಶ್ ಎಂಬುದು ತನ್ನ ಪದಸಂಪತ್ತನ್ನು ವಿಶಾಲ ಮಾಡಿಕೊಂಡಿದೆ. ಇಷ್ಟಕ್ಕೂ ನಾವು ಅಷ್ಟು ದೂರ ಹೋಗಬೇಕಿಲ್ಲ, ನಮ್ಮದೇ ನಿಘಂಟನ್ನು ತೆರೆದು ನೋಡಿದರೆ ನಮ್ಮಲ್ಲಿ ಶೇಕಡಾ ಐವತ್ತರಷ್ಟು ಪದಗಳನ್ನು ಸಂಸ್ಕೃತ, ಪ್ರಾಕೃತ, ಅರಬ್ಬೀ, ಪಾರಸೀ, ಪೋರ್ಚುಗೀಸರಿಂದ ಎರವಲು ಪಡೆದಿದ್ದೇವೆ ಅನ್ನುವದು ಕಂಡುಬರುತ್ತದೆ. ಇಂಥ ಪರಿಸ್ಥಿತಿಯಲ್ಲಿ, ಕನ್ನಡದ್ದೇ ಪದ ಬೇಕು ಅಂತ ಹೊರಟರೆ ಈ ಶೇಕಡಾ ಐವತ್ತು ಪದಗಳನ್ನು ನಾವು ಕೈಬಿಡಬೇಕಾಗುತ್ತದೆ. ಇದೆಲ್ಲ ನಮಗೆ ಬೇಕಾ? ನಾವು ಧೈರ್ಯದಿಂದ ಎಲ್ಲವನ್ನೂ ಸ್ವೀಕರಿಸಿ ಎದುರಿಸುವದನ್ನು ಕಲಿಯಬೇಕಿದೆ. ಅದಿಲ್ಲವಾದರೆ ಹಾಸ್ಪಿಟಲ್ ಅನ್ನುವದನ್ನು ಸಹಜವಾಗಿ ಆಸ್ಪತ್ರೆ ಎಂದು ತದ್ಭವ ಮಾಡಿಕೊಂಡಂತೆ ಮುನ್ನುಗ್ಗಬೇಕು. ಇಲ್ಲದಿದ್ದರೆ ಹಠ ಮಾಡಿಕೊಂಡು ‘ರುಗ್ಣಾಲಯ’ವೆಂದೋ ಅಥವಾ ‘ರೋಗಿಗಳನ್ನು ಸೇರಿಸುವ ನಿಲಯ’ವೆಂದೋ ಕರೆದು ಗೊಂದಲಕ್ಕೀಡಾಗಬೇಕು..
• ನುಡಿದಂತೆ ಬರೆಯುವುದು ಅಥವ ಬರೆದಂತೆಯೇ ನುಡಿಯುವುದು ಒಳ್ಳೆಯದೇ? ಅಥವ ಎರಡು ಭಾಷಾರೂಪಗಳ ವ್ಯತ್ಯಾಸವನ್ನು ಕಾಯ್ದುಕೊಳ್ಳುವ ಅಗತ್ಯವಿದೆಯೇ?
ಭಾಷೆಯೊಂದರ ಉಲಿ ಮತ್ತು ಲಿಪಿಗಳ ನಡುವಣ ಸಂಬಂಧದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ. ಕನ್ನಡ ವರ್ಣಮಾಲೆಯಲ್ಲಿರುವ ಅನಗತ್ಯ ಅಕ್ಷರಗಳು ಕನ್ನಡ ಕಲಿಯುವ ಮಕ್ಕಳಿಗೆ ಹೊರೆಯನ್ನೂ ಅನಗತ್ಯ ಗೊಂದಲವನ್ನೂ ಉಂಟುಮಾಡಿದೆ; ಕನ್ನಡ ಭಾಷೆಗೆ ಮಹಾಪ್ರಾಣ ಋ, ಶ, ಷ ಮುಂತಾದ ಅಕ್ಷರಗಳು ಬೇಕಿಲ್ಲವೆಂಬ ವಾದವಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಬೇಕಿಲ್ಲವೆಂದರೆ ಏಕೆ ಬೇಡ? ಬೇಕೆಂದರೆ ಏಕೆ ಬೇಕು?
– ಮೊಟ್ಟಮೊದಲಿಗೆ ನಾವಿಲ್ಲಿ ಒಂದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನುಡಿ ಮತ್ತು ಲಿಪಿಗಳ ಸಂಬಂಧ ತಂದೆ-ಮಕ್ಕಳದ್ದಲ್ಲ. ಈ ಬಾಂಧವ್ಯ ಆಕಸ್ಮಿಕವಾಗಿ ಉಂಟಾದದ್ದು. ಮೇಲಾಗಿ, ಇದನ್ನೆಲ್ಲ ನಾವು ಕಲ್ಪಿಸಿದ್ದು. ನಾಗರಿಕತೆಯಲ್ಲಿ ಮೊದಲು ನುಡಿ ಬರುತ್ತದೆ, ಆಮೇಲೆ ಲಿಪಿ. ಕನ್ನಡಕ್ಕೆ ಸಂಬಂಧ ಪಟ್ಟಂತೆ ಹೇಳುವದಾದರೆ, ಇಂಥದೊಂದು ಕನ್ನಡದ ಲಿಪಿ ಹುಟ್ಟುವಾಗಿನ ಸಂದರ್ಭ ಮತ್ತು ಇವತ್ತಿನ ಕನ್ನಡದ ಲಿಪಿಯಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆಗಳಾಗಿವೆ. ಹತ್ತನೇ ಶತಮಾನದಲ್ಲಿನ ಕನ್ನಡದ ಶಾಸನವನ್ನು ಇವತ್ತು ಜನಸಾಮಾನ್ಯರಿಗೆ ಓದಲು ಕೊಟ್ಟರೆ ಆತ ತಡವರಿಸುತ್ತಾನೆ. ಇದು ಬದಲಾಗುವ ಭಾಷೆಯ, ಬದಲಾಗುವ ಲಿಪಿಯ ಸ್ಪಷ್ಟ ಉದಾಹರಣೆ. ಹಾಗಾಗಿ ಲಿಪಿಯಲ್ಲಿ ಬದಲಾವಣೆ ಖಚಿತ. ಆದರೆ ಎಂಥ ಸಂದರ್ಭದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ನಿರ್ಧರಿಸುವದು ಕಾಲ. ಒಂದರ್ಥದಲ್ಲಿ ಜನ ಅಂತಲೇ ಹೇಳಬಹುದು.
ಇನ್ನು ವರ್ಣಮಾಲೆಯಲ್ಲಿನ ಮಹಾಪ್ರಾಣ, ಋ, ಶ ಮತ್ತು ಷ ಅಕ್ಷರಗಳ ಬಗ್ಗೆ ಹೇಳುವದಾದರೆ, ಇಲ್ಲಿ ಯಾವಾಗಲೂ ನುಡಿಯ ನಂತರವೇ ವ್ಯಾಕರಣ ಬರುತ್ತದೆ. ಮತ್ತು ನುಡಿ ಎನ್ನುವದು ತನ್ನೊಳಗಿನ ಪದ ಸಂಪತ್ತಿನ ಮೇಲೆ ಅವಲಂಬಿತವಾಗಿರುತ್ತದೆ. ಇನ್ನೊಂದಡೆ, ವ್ಯಾಕರಣದ ಮೂಲ ದ್ರವ್ಯವಾದ ಲಿಪಿ ಕೂಡ ತನ್ನ ಪದಸಂಪತ್ತನ್ನು ಗಮನಿಸುತ್ತಿರುತ್ತದೆ. ಇವೆಲ್ಲ ಪದ ಸಂಪತ್ತನ್ನು ತಾನು ಎಲ್ಲಿಂದ ಎರವಲು ತೆಗೆದುಕೊಂಡಿದ್ದೇನೆ ಅಂತ ಕೂಡ ಗಮನಿಸುತ್ತಿರುತ್ತದೆ. ಕನ್ನಡದ ಲಿಪಿ ಜನಿಸುವ ಸಂದರ್ಭದಲ್ಲಿ ನಮ್ಮಲ್ಲಿನ ಬಹಳಷ್ಟು ಪದಸಂಪತ್ತು ಬಂದಿದ್ದು ಸಂಸ್ಕೃತ ಮತ್ತು (ಪಾಣಿ, ಅರ್ಧಮಾಗದಿ, ಕೌರಸೇನೆ, ಪೈಶಾಚಿ ಎಂಬ ಮೊದಲಾದ ಭಾಷೆಗಳ ಸಮದಾಯವಾದ) ಪ್ರಾಕೃತ ಭಾಷೆಗಳಿಂದ. ಇವೆರಡೂ ಭಾಷೆಗಳನ್ನು ಉಲಿಯಬೇಕೆಂದರೆ ಮಹಾಪ್ರಾಣದ ಅಗತ್ಯವಿತ್ತು. ಹೀಗಾಗಿ ಕನ್ನಡದ ಲಿಪಿಯಲ್ಲಿ ಮಹಾಪ್ರಾಣದ ಅಗತ್ಯತೆ ಕಂಡು ಬಂತು. ಹಾಗೆಯೇ, ಋ, ಶ ಮತ್ತು ಷ ಅಕ್ಷರಗಳ ಅವಶ್ಯಕತೆಯೂ ಇದೇ ವಿಷಯಕ್ಕೆ ಸಂಬಂಧಿಸಿದ್ದು. ಎಲ್ಲಿಯವರೆಗೆ ಜನರ ಮೇಲೆ ಈ ಸಂಸ್ಕೃತ/ಪ್ರಾಕೃತ ಭಾಷೆಗಳ ಪ್ರಭಾವ ಇರುತ್ತದೆಯೋ ಅಲ್ಲಿಯವರೆಗೂ ಈ ಮಹಾಪ್ರಾಣ ಇರಲೇಬೇಕಾಗುತ್ತದೆ.
ಇಷ್ಟಕ್ಕೂ ನಾನು ಈ ಮೊದಲೇ ಹೇಳಿದಂತೆ, ಈಗಾಗಲೇ ರೂಢಿಯಲ್ಲಿರುವ ಈ ವರ್ಣಮಾಲೆಗಳನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲಾಗುವದಿಲ್ಲ. ಯಾಕೆಂದರೆ ಇದೆಲ್ಲ ನಿರ್ಧಾರಿತವಾಗುವದು ಜನಸಾಮಾನ್ಯರ ಬಳಕೆಯ ಆಧಾರದ ಮೇಲಿದೆಯೇ ಹೊರತು ಪಂಡಿತರ ಅಥವಾ ಭಾಷಾ ಜ್ಞಾನಿಗಳ ಕೈಯಲ್ಲಿಲ್ಲ.
• ಪದಾರ್ಥಚಿಂತಾಮಣಿ- ಕನ್ನಡ ನುಡಿಯಬಗೆಗೆ ಕಳಕಳಿಯುಳ್ಳ, ಸಾಧ್ಯವಾದಷ್ಟೂ ಸಾಧ್ಯವಿದ್ದೆಡೆಯಲ್ಲೆಲ್ಲಾ ಕನ್ನಡದ ಬಳಕೆಯನ್ನು ಜಾರಿಗೆ ತರುವ ಆಶಯವುಳ್ಳ ವೇದಿಕೆ. ಕನ್ನಡದ ಪದಸಂಪತ್ತನ್ನೂ, ಭಾಷಾಗೌರವವನ್ನೂ ಹೆಚ್ಚು ಹೆಚ್ಚು ಜನಕ್ಕೆ ಪರಿಚಯಿಸುವ, ದಿನನಿತ್ಯದ ಬಳಕೆಯಲ್ಲಿ ಸಾಮಾನ್ಯವಾಗಿ ನುಸುಳುವ ದೋಷಗಳನ್ನು ಚರ್ಚಿಸುವ ಮೂಲಕ ನುಡಿಯ ಕಟ್ಟನ್ನು ಕಾಯ್ದುಕೊಳ್ಳುವ ಪ್ರಯತ್ನ ನಮ್ಮದು. ಜೊತೆಗೆ ವಿಜ್ಞಾನ ತಂತ್ರಜ್ಞಾನ ವಾಣಿಜ್ಯ, ಕಾನೂನು ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪರಿಕಲ್ಪನೆಗಳನ್ನು ಕನ್ನಡೀಕರಿಸಿಕೊಳ್ಳುವ, ಹೊಸ ಕನ್ನಡ ಪದಗಳನ್ನು ಕಟ್ಟುವ ಪ್ರಯತ್ನವೂ ನಮ್ಮದು. ಜೊತೆಗೆ ಈ ಕಟ್ಟಣೆಯು ಭಾಷೆಯ ಹರಿವಿಗೆ ಅಸಹಜವೆಂದು ತೋರದಂತೆ ಕಾಯ್ದುಕೊಳ್ಳುವ ಕಳಕಳಿ ನಮಗಿದೆ. ಈ ಉದ್ದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸಲು ತಮ್ಮ ಸಲಹೆ?
– ತುಂಬ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಇದಕ್ಕಾಗಿ ನಿಮ್ಮ ಗುಂಪನ್ನು ಅಭಿನಂದಿಸುತ್ತೇನೆ. ಹಾಗೊಂದು ವೇಳೆ, ಕನ್ನಡದ ಕೆಲಸದ ಬಗ್ಗೆ ಅಂತರ್ಜಾಲದಲ್ಲಿ ಅಥವಾ ಸಾಮಾಜಿಕ ತಾಣದಲ್ಲಿ ಏನಾದರೂ ಹೇಳುವದಿದ್ದರೆ ನಿಮ್ಮ ಗುಂಪಿನಲ್ಲೇ ಹಂಚಿಕೊಳ್ಳುವೆ. ನಿಮಗೆ ಒಳ್ಳೆಯದಾಗಲಿ.
ಸಂದರ್ಶನ ಮತ್ತು ಬರಹ ರೂಪ: ರಾಘವೇಂದ್ರ ಜೋಶಿ
ಸೌಜನ್ಯ : ‘ಪದ ಸಂಸ್ಮರಣ’ ಮತ್ತು ‘ಪದಾರ್ಥ ಚಿಂತಾಮಣಿ’







ವಿಷಯ ತುಂಬಾ ಉಪಯುಕ್ತವಾದದು. ಕನ್ನಡದ ಬೆಳವಣಿಗೆಗೆ ಒಂದು ಚಿಕ್ಕ ಸಲಹೆ.
ಈಗ ಎಲ್ಲರ ಆಶೆ ತಮ್ಮ ಮಕ್ಕಳು ಇಂಜಿನಿಯರ್ ಅಥವ ಡಾಕ್ಟರ್ ಆಗಬೇಕು ಅಂತ. ಇದು ಸಹಜ. ಕನ್ಡಡ ಮಾಧ್ಯಮದಲ್ಲಿ ಓದಿದರೆ ಮುಂದೆ ತೊಂದರೆ.ಯಾಕೆಂದರೆ ನಮ್ಮ ತಾಂತ್ರಿಕ ವಿದ್ಯೆ ಇಂಗ್ಲಿಷ್ ನಲ್ಲದೆ.ಸರಳೀಕರಣದ ಮೊದಲ ಹೆಜ್ಜೆಯಾಗಿ ತಾಂತ್ರಿಕ ಶಿಕ್ಷಣದಲ್ಲಿ ಇರುವ ಪದಗಳನ್ನೇ ಒಪ್ಪಿಕೊಂಡು, ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಉತ್ತರ ಬರೆಯಲು,ಬರೆದು ಪಾಸಾದರೆ, ಅವರು ಕನ್ಡಡದಲ್ಲಿ ಕಲಿಯುತ್ತಾರೆ.ಇದನ್ನು ನಾವೆಲ್ಲರು ಸರಕಾರದ ಮೇಲೆ ಒತ್ತಡ ತಂದರೆ ಸಾದ್ಯ