ರಾಜಾರಾಂ ತಲ್ಲೂರು
PRIMARK ಇಂಗ್ಲಂಡಿನ ಹೈಫ್ಯಾಷನ್ ಅಂಗಡಿಗಳ ಸರಣಿ. ಅಸೋಸಿಯೇಟೆಡ್ ಬ್ರಿಟಿಷ್ ಫುಡ್ಸ್ ಮಾಲಕತ್ವಕ್ಕೆ ಸೇರಿದ ಈ ಕಂಪನಿಯ ಕುರಿತು 2008ಜೂನ್ 23ರಂದು ಬಿಬಿಸಿ ಪ್ರಕಟಿಸಿದ ಪನೋರಮಾ ಸರಣಿಯ ಕಾರ್ಯಕ್ರಮ ಎರಡು ಕಾರಣಗಳಿಗಾಗಿ ಬಹುದೊಡ್ಡ ಗದ್ದಲ ಎಬ್ಬಿಸಿತು.
1. ತಮಿಳುನಾಡಿನ ತಿರುಪ್ಪುರ ಬಳಿ ಇರುವ ತಮಿಳು ನಿರಾಶ್ರಿತರ ಕಾಲನಿಗಳಲ್ಲಿ ಎಳೆಯ ಮಕ್ಕಳನ್ನು ಹಗಲು-ರಾತ್ರಿಯೆನ್ನದೆ ದುಡಿಸಿ ಸಿದ್ಧಪಡಿಸಿದಮಣಿಮಯ, ಎಂಬ್ರಾಯಿಡರಿಮಯ ಸಿದ್ಧಉಡುಪುಗಳನ್ನು PRIMARK ತನ್ನ ಇಂಗ್ಲಂಡಿನ ಹೈಫ್ಯಾಷನ್ ಮಳಿಗೆಗಳಲ್ಲಿ ಪುರುಸೊತ್ತಿಲ್ಲದಂತೆ ಮಾರಿ ದುಡ್ಡುಬಾಚಿಕೊಂಡಿದೆ
ಎಂಬ ಸಂಗತಿ ಲೋಕಮುಖಕ್ಕೆ ತಿಳಿದು, ಕಂಪನಿ ಭಾರತದಲ್ಲಿನ ತನ್ನ 3 ಉಪಗುತ್ತಿಗೆಗಳನ್ನು ರದ್ದುಪಡಿಸಿತು. ಈ ಇಡಿಯ ಪ್ರಕರಣ ಈಗ“ವ್ಯವಹಾರದಲ್ಲಿ ನೈತಿಕತೆ”ಯ ಬಗ್ಗೆ ಅಧ್ಯಯನ ಮಾಡುವವರಿಗೆ ಪಠ್ಯ ಆಗಿದೆ. (PRIMARK ಎಚ್ಚೆತ್ತ ಮೇಲೆ ಏನೇನಾಗಿದೆ ಎಂಬುದು ಇಲ್ಲಿದೆhttps://www.primark.com/en/ our-ethics )
2. ಈ ವರದಿಯನ್ನು ಸಿದ್ಧಪಡಿಸಿದ ಬಿಬಿಸಿ ಸಂಸ್ಥೆಯ ವರದಿಗಾರ ಡಾನ್ ಮೆಕ್ ಡುಗಾಲ್ ಬೆಂಗಳೂರಿನಲ್ಲೆ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿಚಿತ್ರೀಕರಣ ನಡೆಸಿ ಈ PRIMARK ಹಗರಣದ ತಪ್ಪು ಚಿತ್ರಣ ನೀಡಿದ್ದಾರೆ, ನೈತಿಕತೆ ಸಾರುವ ನಾವೇ ಅನೈತಿಕವಾಗಿ ವರ್ತಿಸಿದಂತಾಗಿದೆ ಎಂದು BBCಟ್ರಸ್ಟ್ ಕ್ಷಮೆ ಕೇಳಲು ತೀರ್ಮಾನಿಸಿತು. ಇದು ಪತ್ರಿಕೋದ್ಯಮದಲ್ಲಿ ನೈತಿಕತೆಯ ಬಗ್ಗೆ ಅಧ್ಯಯನ ಮಾಡುವವರಿಗೆ ಈವತ್ತು ಪಠ್ಯ ಆಗಿದೆ. (BBC ಎಚ್ಚೆತ್ತ ಮೇಲೆ ಏನೇನಾಯಿತು ಎಂಬುದು ಇಲ್ಲಿದೆ)
ಬಾಲ ಕಾರ್ಮಿಕ ಕಾಯಿದೆಗೆ “ತಿದ್ದುಪಡಿ!”
ಭಾರತದ ಬಾಲಕಾರ್ಮಿಕ ಕಾಯಿದೆ (ಪ್ರತಿಬಂಧ ಮತ್ತು ನಿಯಂತ್ರಣ) 1986ಕ್ಕೆ 2012ರಲ್ಲಿ ತಿದ್ದುಪಡಿ ತಂದು, 14 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿಗೆಯಾವುದೇ ರೀತಿಯ ಕೆಲಸ ಮಾಡಲು ಅವಕಾಶ ಇಲ್ಲ ಹಾಗೂ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಮಾಡಲು ಅವಕಾಶ ಇಲ್ಲ ಎಂದು ತೀರ್ಮಾನಿಸಲಾಗಿತ್ತು.
ಆದರೆ, ಈ ವರ್ಷ ಜುಲೈ26 ರಂದು ಲೋಕಸಭೆಯಲ್ಲಿ, ಜುಲೈ 19ರಂದು ರಾಜ್ಯಸಭೆಯಲ್ಲಿ ಈ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯ ಪ್ರಕಾರನಿರಪಾಯಕಾರಿಯಾದ ಕುಟುಂಬ ವ್ಯವಹಾರಗಳಲ್ಲಿ, ಮನೆಯಲ್ಲೇ ಮಾಡುವ ಕೆಲಸಗಳಲ್ಲಿ ಶಾಲೆಯ ಅವಧಿ ಹೊರತುಪಡಿಸಿ ಮನೆಯವರಿಗೆ ಸಹಾಯಮಾಡಲು ಹಾಗೂ ಶಾಲೆಗೆ ರಜೆಯ ವೇಳೆ ತರಬೇತಿಗಳಲ್ಲಿ ಪಾಲ್ಗೊಳ್ಳಲು ಬಾಲಕಾರ್ಮಿಕರಿಗೆ ಈ ತಿದ್ದುಪಡಿ ಅವಕಾಶ ಕೊಡುತ್ತದೆ.
ಅಂದರೆ, ಮೇಲೆ ವಿವರಿಸಿದ PRIMARK ನ ಉಡುಪುಗಳ ಹೊಲಿಗೆಯಂತಹ ಚಟುವಟಿಕೆಗಳು, ಗದ್ದೆ ಕೆಲಸ ಇತ್ಯಾದಿಗಳು ಇನ್ನು ಕೌಟುಂಬಿಕ ಕೆಲಸದಮುಸುಕಿನಡಿ ನ್ಯಾಯಬದ್ಧ!
ಬಾಡಿ ಶಾಪಿಂಗ್ ಎಂಬ ಜೀತ
ಐಟಿ ಕಂಪನಿಗಳು Y2K ಹೆಸರಲ್ಲಿ ಆರಂಭಿಸಿದ “ಶೇರುಗಾರಿಕೆ” ವ್ಯವಸ್ಥೆಗೆ ಔಟ್ ಸೋರ್ಸಿಂಗ್, ಆಫ್ ಶೋರಿಂಗ್, ಬಾಡಿ ಶಾಪಿಂಗ್ ಮೊದಲಾದಹೆಸರುಗಳೆಲ್ಲ ಬಂದು, ಜೊತೆಗೆ ಕಿಸೆಯಲ್ಲಿ ನಾಲ್ಕು ಕಾಸೂ ಬರುತ್ತಿರುವುದರಿಂದ ಎಲ್ಲರಿಗೂ ಎಲ್ಲವೂ ಸರಿಯಾಗಿದೆ ಎಂದು ಖಚಿತವಾಗಿ ಈಗ ಹತ್ತುಹದಿನೈದು ವರ್ಷಗಳೇ ಕಳೆದಿವೆ.
ಈ ನಡುವೆ, ಕಾರ್ಮಿಕ ಕಾನೂನುಗಳ ರಗಳೆ ಬೇಡವೆಂದು ಭಾರತದೊಳಗೇ ಹೆಚ್ಚಿನ ಎಲ್ಲ ಕಂಪನಿಗಳೂ ಬಾಡಿಗೆ ನೌಕರರನ್ನು ಪಡೆಯುವ ಇಂತಹವ್ಯವಸ್ಥೆಗೆ ಮಾರುಹೋಗಿ, ಮ್ಯಾನ್ ಪವರ್ ಕನ್ಸಲ್ಟಂಟ್ ಕಂಪನಿಗಳು, ಎಚ್ ಆರ್ ಕನ್ಸಲ್ಟಂಟ್ ಕಂಪನಿಗಳು ಊರೂರಲ್ಲೂ ತಲೆಯೆತ್ತಿವೆ.
ನಿಮ್ಮ ಅಪಾರ್ಟ್ ಮೆಂಟಿನ ಕಾವಲುಗಾರ, ನಿಮ್ಮ ಮನೆ ಕೆಲಸಕ್ಕೆ ಬರುವ ಮಹಿಳೆ, ನಿಮ್ಮ ಹೋಮ್ ನರ್ಸ್ ಇವರನ್ನೆಲ್ಲ ಒಮ್ಮೆ ಮಾತಾಡಿಸಿ – ಎಷ್ಟುಸಂಬಳ ಕೈಗೆ ಸಿಗುತ್ತಿದೆ ಎಂದು ಕೇಳಿ. ಹೆಚ್ಚೆಂದರೆ 4-6 ಸಾವಿರದ ಅಂದಾಜಿನ ಲೆಕ್ಕ ಹೇಳುತ್ತಾರೆ. ಆದರೆ ನೀವು ಅವರನ್ನು ಕಳಿಸಿಕೊಟ್ಟವರಿಗೆ 8-14ಸಾವಿರದ
ಅಂದಾಜಿನಲ್ಲಿ ಸಂಬಳ ಪಾವತಿ ಮಾಡಿರುತ್ತೀರಿ. (ಯಾಕೆಂದರೆ ಸರ್ಕಾರದ ಕನಿಷ್ಟ ವೇತನ 7500ರೂ. ಆಸುಪಾಸಿನಲ್ಲಿದೆ). ನಿಮಗೆ ನಿಮ್ಮಕೆಲಸಕ್ಕೆ ಜನ ಕಳುಹಿಸಿಕೊಟ್ಟ ಕಂಪನಿ, ಕುಳಿತಲ್ಲೇ ಆ ಮನೆಗೆಲಸದ ಮಹಿಳೆಯ, ಕಾವಲುಗಾರನ, ಅಂಗಡಿ ಸೇಲ್ಸ್ ಗರ್ಲ್ ನ ಬೆವರಿನ ಹಣದ ದೊಡ್ಡಭಾಗವನ್ನು ಬಾಚಿಕೊಂಡಿರುತ್ತದೆ.
ದಿನದ ಕೆಲಸದ ಅವಧಿ, ರಜೆ, ಕಾರ್ಮಿಕ ಸವಲತ್ತುಗಳು… ಇತ್ಯಾದಿ ಯಾವುದೂ ಇಲ್ಲದ, ಬೇಡವೆಂದ ದಿನ ಖಾಲಿ ಕೈಯಲ್ಲಿ ಮನೆ ಸೇರಬೇಕಾದದಯನೀಯ ಪರಿಸ್ಥಿತಿಯಲ್ಲಿ ಈ ಜನ ಬದುಕುತ್ತಿದ್ದಾರೆ. ಅವರಿಗೆ ಧ್ವನಿ ಇಲ್ಲ. ಐಟಿ ಹುಡುಗರದೂ ಇದೇ ಕಥೆ; ಆದರೆ ಹೊಟ್ಟೆಗಾಗುವಷ್ಟು ದುಡ್ಡು ಸಿಕ್ಕುತ್ತಿದೆ.ಹಾಗಾಗಿ ಅವರೂ ಸ್ವರ ತೆಗೆಯುತ್ತಿಲ್ಲ. ಈಗೀಗ ಸರ್ಕಾರಿ ಕಚೇರಿಗಳಲ್ಲೂ ಇಂತಹ ಎಳೆಯರೇ ಸಿಗುವುದು!
ಕಾರ್ಮಿಕ ಸಂಘಟನೆಗಳು ರಾಜಕೀಯ ಮಾಡಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಹೊಟ್ಟೆಯುರಿಯ ಯುಗದಿಂದ, ದುಡಿದು ಹಿಂಡಿ ಹಿಪ್ಪೆಯಾದರೂಹೇಳುವವರು-ಕೇಳುವವರು ಇಲ್ಲ ಎಂಬ ಈವತ್ತಿಗೆ ಬಂದು ತಲುಪಿದ್ದೇವೆ.
ಪ್ರಾಮಾಣಿಕವಾಗಿ ದುಡಿಯುವ, ದುಡಿಯಲು ಆರೋಗ್ಯಕರ ವಾತಾವರಣವನ್ನೂ- ದುಡಿಮೆಯ ಅವಧಿಯನ್ನೂ ಒದಗಿಸುವ, ದುಡಿದದ್ದಕ್ಕೆ ತಕ್ಕ ಪ್ರತಿಫಲಪಡೆಯಲು ಮಧ್ಯವರ್ತಿಗಳು ಅಗತ್ಯವಿರದ ವ್ಯವಸ್ಥೆಯೊಂದು ಸಾಧ್ಯವೇ ಇಲ್ಲದಂತಹ ಪರತಂತ್ರದ ಸನ್ನಿವೇಶ ಇದು.
ಸ್ವಾತಂತ್ರ್ಯ ವರ್ಷನ್ 2.0 ನಮಗೆ ಸಿಗುವುದೆಂದು?
ಅಂದಹಾಗೆ, ಇದು ಮಧ್ಯಮ ವರ್ಗದ 40%ನವರ ಕತೆ. ಇನ್ನುಳಿದವರಲ್ಲಿ 10% ಸರ್ವತಂತ್ರ ಸ್ವತಂತ್ರ ಮಾಲಕ ವರ್ಗದವರಾದರೆ, ಉಳಿದ 50% ಜನಪಟ್ಟಿಯಲ್ಲೇ ಇಲ್ಲದವರು!!




0 Comments