ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಲ್ಪ ತಾಳು ಕೆಲಸವಿದೆ ಎಂದೆ..

ಸಾಸಿವೆ ತಂದವಳು

ದಾದಾಪೀರ್ ಪಿ ಜೆಯ್ಮನ್

ಬಹಳ ದಿನದಿಂದ ಓದಬೇಕು ಎಂದುಕೊಂಡಿದ್ದ ‘ಸಾಸಿವೆ ತಂದವಳು’ ಪುಸ್ತಕವನ್ನು ಓದಿ ಮುಗಿಸಿದೆ.

ಮುಖಪುಟದಲ್ಲೇ ಬರೆದಿರುವಂತೆ ಇದು ಕ್ಯಾನ್ಸರ್ ಜತೆಗೊಂದು ಸ್ಫೂರ್ತಿದಾಯಕ ಹೋರಾಟ.

‘ಸಾವು ಒಳಗೆ ಬರಲೇ ಎಂದಾಗ
ಸ್ವಲ್ಪ ತಾಳು ಕೆಲಸವಿದೆ ಎಂದೆ’ – ಅನುಪಮಾ ನಿರಂಜನರ ಸಾಲಿನೊಂದಿಗೆ ಆರಂಭವಾಗುವ ಭಾರತಿ ಬಿ ವಿ ಯವರ ಈ ಜೀವನ ಕಥನ ; ಮುಂದೊಂದು ದಿನ ‘ಈ ಜುಜುಬಿ ಕ್ಯಾನ್ಸರ್ ನಿಂದ ಜನ ಸಾಯ್ತಿದ್ರಾ…?!’ ಅಂತ ಜಗತ್ತು ಆಶ್ಚರ್ಯ ಪಡುವಂತಾಗಲಿ ಅನ್ನುವ ಪ್ರಾರ್ಥನೆ ನನ್ನದು …. ಆಮೆನ್! ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ. ಇದರ ಮಧ್ಯೆಯಿರುವುದನ್ನು ನೀವು ಓದಿಯೇ ಅನುಭವಿಸಬೇಕು.

ತುಂಬಾ ವರ್ಷಗಳ ಹಿಂದೆ ರಾಂಡಿ ಪಾಶ್ ಬರೆದ ‘ದಿ ಲಾಸ್ಟ ಲೆಕ್ಚರ್ ‘ ಪುಸ್ತಕ ಓದಿದ್ದೆ. ಅದರಲ್ಲಿ ಪಾಶ್ ಎಂಬ ಕಂಪ್ಯೂಟರ್ ವಿಜ್ಞಾನಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಗೆ ತುತ್ತಾಗುತ್ತಾನೆ. ಸಾವು ಬೇತಾಳನ ಹಾಗೆ ಅವನ ಬೆನ್ನು ಹತ್ತಿ ಕೂತಿರುತ್ತದೆ. ತಾನು ಸಾಯುವ ಮುನ್ನ ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ಒಂದು ದಾರಿ ಮಾಡಬೇಕು ಅಂತ ಯೋಚಿಸುತ್ತಾನೆ. ಬದುಕನ್ನು ಮತ್ತೆ ಇನ್ನಿಲ್ಲದಂತೆ ಬದುಕುತ್ತಾನೆ.

ಕೊನೆಗೆ “Really achieving your childhood dreams” ಎನ್ನುವ ವಿಷಯದ ಮೇಲೆ ಕಾರ್ನಿಗ್ ವಿಶ್ವವಿದ್ಯಾನಿಲಯದಲ್ಲಿ ತಾನು ಪ್ರೀತಿಸುವ ಮತ್ತು ತನ್ನನ್ನು ಪ್ರೀತಿಸುವವರಿಗಾಗಿ ತನ್ನ ಯಾತನಾಮಯ ದಿನಗಳಲ್ಲೂ ಅವನು ಕೊಟ್ಟ ಉಪನ್ಯಾಸ ಇತಿಹಾಸ ಸೇರುತ್ತದೆ. ಆ ಪುಸ್ತಕ ತುಂಬಾ ದಿನಗಳವರೆಗೂ ನನ್ನನ್ನ ಕಾಡಿದ ಪುಸ್ತಕ. ಎಷ್ಟು ಜನರ ಹುಟ್ಟಿದ ಹಬ್ಬಕ್ಕೆ ಆ ಪುಸ್ತಕ ಉಡುಗೊರೆಯಾಗಿ ಕೊಟ್ಟಿದ್ದೀನೋ ನನಗೇ ನೆನಪಿಲ್ಲ.

ಭಾರತಿ ಬಿ ವಿ ಯವರ ಇಲ್ಲಿನ ಈ ಪುಸ್ತಕ ಮತ್ತೊಂದೇ ರೀತಿಯಲ್ಲಿ ನಮ್ಮನ್ನು ಆವರಿಸುತ್ತದೆ.

ಅವರೇ ಬರೆದಿರುವಂತೆ ‘ಪ್ರತೀ ಕಾರ್ಮೋಡದ ಸುತ್ತಲೂ ಒಂದು ಬೆಳ್ಳಿಗೆರೆ ಹುಡುಕುವಂತಹ ಆಶಾವಾದಿ ನಾನು’, ಅದು ನಿಜಕ್ಕೂ ಸತ್ಯ. ಅತ್ಯಂತ ನೋವಿನ ಘಳಿಗೆಗಳಲ್ಲಿ ತಮ್ಮನ್ನು ತಾವು ಹುರಿದುಂಬಿಸಿಕೊಳ್ಳುವ ಬಗೆ, ತಮ್ಮ ಹಾಸ್ಯ ಪ್ರಜ್ಞೆಯಿಂದಾಗಿ ಹಗುರಾಗುವ ಬಗೆ, ಜೀವನದ ಬಗ್ಗೆ ಅದಮ್ಯ ಪ್ರೀತಿ ಇರುವ ವ್ಯಕ್ತಿಗೆ ಮಾತ್ರ ಅದು ಸಾಧ್ಯವಾಗುತ್ತೇನೋ ಎನಿಸುತ್ತದೆ. ಈ ಪುಸ್ತಕದ ಓದು ನಮ್ಮನ್ನ ದುಃಖದ ಕಡಲಲ್ಲಿ ಮುಳುಗಿಸಿಬಿಡುವುದಿಲ್ಲ , ಬದಲಾಗಿ ಅದು ನಮ್ಮಲ್ಲಿ ಬದುಕುವ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಕ್ಯಾನ್ಸರ್ ಎಂದು ಗೊತ್ತಾದಾಗ ಆದ ತಳಮಳ, ವೈದ್ಯರು ಅವರನ್ನು ನೋಡಿದ ಬಗೆ, ಕುಟುಂಬ ಮತ್ತು ಗೆಳತಿಯರು ಸಹಾಯಕ್ಕೆ ನಿಂತದ್ದು, ಟ್ರೀಟ್ಮೆಂಟ್ ಅವಧಿಯ ಹತಾಶೆಯ ಕ್ಷಣಗಳು, ಕಾಡುವ ನೂರು ಪ್ರಶ್ನೆಗಳು, ಆ ಮಧ್ಯೆ ಆಗುವ ಬದುಕಿನ ಪುಟ್ಟ ದಿಟ್ಟ ಸಾಕ್ಷಾತ್ಕಾರಗಳು, ನೋಯಿಸಲಿಕ್ಕೆಂದೇ ನಿಂತ ಜನರು, ಅವರ ಬದುಕಿನ ದೃಷ್ಟಿಕೋನವನ್ನೇ ಬದಲಿಸಿದ ಕ್ಯಾನ್ಸರ್, ಅವರಲ್ಲಿ ಸದಾ ಶಕ್ತಿ ತುಂಬುತ್ತಿರುವ ಅವರ ಬರಹ, ಪ್ರವಾಸ, ನಾಟಕ, ಸಿನಿಮಾ ಇತ್ಯಾದಿ ಹೀಗೆ ಇವೆಲ್ಲವನ್ನೂ ಭಾರತಿಯವರು ಅತ್ಯಂತ ಲವಲವಿಕೆಯಿಂದ ಮತ್ತು ತಮ್ಮ ಸಿಗ್ನೇಚರ್ ಹಾಸ್ಯ ಪ್ರಜ್ಞೆಯ ಮೂಲಕವೇ ಹೇಳುತ್ತಾ ಹೋಗಿದ್ದಾರೆ.

ಒಮ್ಮೆ ರೇಡಿಯೇಶನ್ ರೂಮಿನಲ್ಲಿ ಬದುಕೇ ಭಾರವಾಗಿರುವಂತೆ ಗೊಣಗುತ್ತಿದ್ದ ಒಬ್ಬ ನರ್ಸ್ ಮಾತು ಕೇಳಿ ಭಾರತಿ ತಮ್ಮ ಮನಸ್ಸಿನಲ್ಲೇ ಅಂದುಕೊಳ್ಳುತ್ತಾರೆ ‘ ಅದೆಲ್ಲ ಏನಾರ ಇರ್ಲಿ ಮಾರಾಯ್ತಿ… ನೀನು ಬದುಕಿರ್ತೀಯ. ಅದೊಂದು ಗ್ಯಾರಂಟಿ ಇದ್ದರೆ ಮತ್ತೆಲ್ಲ ನೋವುಗಳನ್ನು ಹೇಗೋ ಸಹಿಸಿ ಬಿಡಬಹುದು ಗೊತ್ತಾ? ಊಹು, ಬದುಕಿನ, ಉಸಿರಿನ ಬೆಲೆ ನಿನಗೆ ನಿಜಕ್ಕೂ ಗೊತ್ತಿಲ್ಲ’ ಅಂತ.

ಪುಸ್ತಕದ ಬಗ್ಗೆ ಮುನ್ನುಡಿಯಲ್ಲಿ ಲೇಖಕಿ ನೇಮಿಚಂದ್ರ , ಶ್ರೀ ಜೋಗಿ ಮತ್ತು ಬೆನ್ನುಡಿಯಲ್ಲಿ ಶ್ರೀ ಅನಂತಮೂರ್ತಿಯವರು ವಿವರವಾಗಿ ಬರೆದಿದ್ದಾರೆ. ಈ ಪುಸ್ತಕ ಮುಗಿಸುವ ಹೊತ್ತಿಗೆ ಓದಿದ ನಮ್ಮೆಲ್ಲರ ಖಾತೆಯಲ್ಲೂ ಅಕ್ಷಯವಾದ ಜೀವನೋತ್ಸಾಹ ವರ್ಗಾವಣೆಯಾಗಿಬಿಟ್ಟಿರುತ್ತದೆ. ಅದೇ ಈ ಪುಸ್ತಕದ ಶಕ್ತಿ ಕೂಡ. ಪುಸ್ತಕ ಬರೆದು ಉಪಕಾರ ಕಟ್ಟಿಕೊಂಡ ಲೇಖಕಿ Bharathi Bv ಯವರಿಗೆ ಕೃತಜ್ಞತೆಗಳು.

ಸೊ…. ಹೋಗಿ…… ಓದಿರಿ.

 

‍ಲೇಖಕರು avadhi

1 June, 2017

4 Comments

  1. Bharathi B V

    ಥ್ಯಾಂಕ್ಸ್ ದಾದಾಪೀರ್
    ಥ್ಯಾಂಕ್ ಯೂ ಅವಧಿ 🙂

  2. Asha

    Nicely written

  3. vinod scribble

    ಒಂದು‌ ಉತ್ತಮವಾದ ಪುಸ್ತಕದ ಬಗ್ಗೆ ಒಂದು ಉತ್ತಮವಾದ ಲೇಖನ

    • Bharathi B V

      ಥ್ಯಾಂಕ್ಸ್ ವಿನೋದ್ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading