ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ವಲ್ಪ ಅವಳ ಕಥೆ, ಸ್ವಲ್ಪ ನನ್ನ ಕಥೆ’ – ಹೇಮಲತಾ

ಹೇಮಲತಾ

ಎಷ್ಟೋ ದಿನಗಳ ಬಳಿಕ ಕರೆಮಾಡಿದ್ದ ಗೆಳತಿಯ ಧ್ವನಿಯಲ್ಲಿದ್ದ ಉಲ್ಲಾಸ ಸಂಭ್ರಮಗಳೇ ಮುಂದಿನ ಮಾತಿನ ಗುಟ್ಟು ಬಿಟ್ಟುಕೊಡುತ್ತಿದ್ದವು.ಒಂದು ತಮಾಷೆಯ ವಿಷಯ ಹೇಳುತ್ತೇನೆ ಎಂದಳಾದರು ತಮಾಷೆಗೂ ಮಿಗಿಲಾಗಿ ಮತ್ತೇನೋ ಇದೆ ಎನ್ನುವ ಸುಳಿವು ಅದಾಗಲೇ ಸಿಕ್ಕಿತ್ತು .”ಅದೇ ಅವನೊಬ್ಬನಿದ್ದನ್ನಲ್ಲ ಕ್ಲಾಸ್ ನಲ್ಲಿ, ಅವನು ಇತ್ತೇಚೆಗೆ ಮಾತಿಗೆ ಎಳೆಯುತ್ತಾನೆ .ನಿನ್ನ ಮೇಲೆ ಆಗೆಲ್ಲ ನನಗೆ ಕ್ರಶ್ ಇತ್ತು ಎನ್ನುತ್ತಾನೆ ” ಅಂದಳು.
ಓ ಅವನು ! ಅಷ್ಟು ವರ್ಷದಲ್ಲಿ ಎಲ್ಲೂ ಸದ್ದುಮಾಡದೆ , ನೇಪಥ್ಯಕ್ಕೆ ಸರಿದವನಂತೆ ತನ್ನ ಪಾಡಿಗೆ ತಾನಿದ್ದು ಬಿಡುತ್ತಿದ್ದ ಸಾಮಾನ್ಯ ಹುಡುಗ .Interesting ! ಈಗಲೂ ಇದೆ ಎನ್ನುವಂತಿತ್ತು ಕಣೆ ಅವನ ಮಾತು , ಯಾರಾದರು boyfriend ಇದ್ದಾರ ಅಂತ ಕೇಳಿದ ಅಂತಂದುಕೊಂಡು ಮತ್ತೆ ನಕ್ಕಳು .
ಈ ಮೊದಲಾಗಿದ್ದರೆ ನಾನು ಸಹ ಅವಳ ಜೊತೆಸೇರಿ, ಅವಳನ್ನು ಮತ್ತಷ್ಟು ರೇಗಿಸಿ , ಕೆಂಪೇರಿಸಿ ನಕ್ಕು ಮಾತು ಮುಗಿಸಿರುತ್ತಿದ್ದೆನೇನೋ .. ಸ್ವಲ್ಪ ಸೀರಿಯಸ್ ಆಗಿಯೇ ಕೇಳಿದೆ -“ನೋಡು ಮತ್ತೆ ಯೋಚಿಸು, ಯಾಕಾಗಬಾರದು?”
“ಹೋಗೆ, ಹೆಚ್ಚುಕಡಿಮೆ 8 ವರ್ಷಬೇಕಿತ್ತಾ ಹೇಳೋಕೆ , ಸುಮ್ನೆ ಟೈಂಪಾಸ್ ಗೆ flirt ಮಾಡುತ್ತಿರಬೇಕು ” ಎಂದು ಅಪನಂಬಿಕೆಯಲ್ಲಿ ಮೂಗು ಮುರಿದಳು . ಯಾರಿಗೆ ಗೊತ್ತು ಬಣ್ಣಬಣ್ಣದ ಲೋಕದ, ಬಿನ್ನಾಣದ ಬೆಡಗಿನ ಚಿಟ್ಟೆಗಳು ಒಂದೆರಡು ಹಾರಿಹೋದ ಮೇಲೆ,ಮೊದಲ ಬೆಂಚ್ ನಲ್ಲಿ ತಲೆತಗ್ಗಿಸಿ ಕೂರುತಿದ್ದ ಮಂಗಳ ಗೌರಿ getupನ ಬ್ಲಾಕ್ ಅಂಡ್ ವೈಟ್ ಹುಡುಗಿಯರು ನೆನಪಾಗಿರಬೇಕು ಎನ್ನುವ ನನ್ನ ಮಾತಿಗೆ ಇಬ್ಬರು ಜೊತೆನಕ್ಕೆವು .
ಬುದ್ಧಿ ಭೂಮಿ ಆಳು ಅಂದರೆ ಅದೃಷ್ಟ ಕತ್ತೆಕಾಯಿ ಅಂದಿತು ಎನ್ನುವಂತ ಹಿನ್ನಲೆ ಅವಳದ್ದು . ಕೃಷಿಕ ಅಪ್ಪ ತೀರಿಹೋದ ಬಳಿಕ ಕುಟುಂಬದ ಹಿರಿಯ ಮಗಳಾಗಿ, ಮುಗ್ದ ಅಮ್ಮನನ್ನು ಹಳ್ಳಿಯಿಂದ ಹೊರಡಿಸಿ, ಬ್ಯಾಂಕ್ ಸಾಲದಲ್ಲಿ ತಾನು ಓದಿ , ಇಬ್ಬರು ತಂಗಿಯರನ್ನು ದಡಮುಟ್ಟಿಸುತ್ತ ಬೆಂಗಳೂರಲ್ಲಿ ನೆಲೆನಿಲ್ಲೋದು ಎಂದರೆ ಒಬ್ಬ ಸಾಮಾನ್ಯ ಹುಡುಗಿಗೆ ಅಂತ ಸಾಮಾನ್ಯ ವಿಷಯವಲ್ಲ . ಮತ್ತೆಲ್ಲಾ ಕಡೆಯ ಲೋಕರೂಡಿಯಂತೆ ತಂದೆ ಇಲ್ಲದ ಹುಡುಗಿಯ ಮೇಲೆ ನೆಂಟರ ಅಸಡ್ಡೆ ,ದುಡ್ಡಿಗಾಗಿ ಪಿತೂರಿ , ಅವಳಿಗೆ ತಕ್ಕ ವರ ಹುಡುಕಲಾಗದ ಕುಟುಂಬದ ಅಶಕ್ತಿ.ಆದರು ದಿಟ್ಟೆ ಅವಳು ಎಂಗೇಜ್ಮೆಂಟ್ ವರೆಗೂ ನಡೆದು, ನಂತರ ದುಡಿಮೆಯನ್ನ ಯಾರಿಗೆ ಕೊಡುತ್ತೀಯ ಅಂತೆಲ್ಲ ಶುರುವಾದ ವಾದವಿವಾದದ ಕೆಟ್ಟಚಾಳಿಗೆ ದೃಡವಾಗಿ ಸೆಡ್ಡು ಹೊಡೆದು ಸಂಬಂಧ ತುಂಡರಿಸಿದ್ದಳು
ಎಲ್ಲದರ ಹಿನ್ನಲೆಯಲ್ಲಿ ವಿವರಿಸಿ ಹೇಳುವ ಪ್ರಯತ್ನಪಟ್ಟೆ. ಇಪ್ಪತೈದರ ಅಂಚು ಕಡಿಮೆ ಏನಲ್ಲ ,ಅರ್ಧ ಆಯುಷ್ಯವೇ ಸತ್ತು ಬಿದ್ದಿದೆ .ಬೆಳೆಯುವ ಪ್ರಕ್ರಿಯೆಯಲ್ಲಿ ಬಿದ್ದಿದ್ದೇವೆ , ಎದ್ದಿದ್ದೇವೆ , ತರಚು ಗಾಯಗಳು ಕೆಲವೊಂದು ಮಾಗಿವೆ , ಮತ್ತೆ ಕೆಲವು ನಮ್ಮನ್ನೇ ಮಾಗಿಸಿವೆ .ಜವಾಬ್ದಾರಿಗಳು ಸವೆಸಿವೆ , ಹೊರೆಗಳು ನೋಯಿಸಿವೆ .ಹಾದಿಗುಂಟ ಒಂಟಿ ನಡೆದು ದಣಿವಾಗಿದೆ ,ಜೊತೆಗೊಂದು ಹೆಗಲು ಬೇಕಿದೆ.
ಸಂಗಾತಿಯ ಸರಿಹೊಂದುವಿಕೆಯನ್ನು ಹೇಗೆ ಅಳಿಯುತ್ತೀಯ? ದುಡ್ಡು ಬೈಕು ಕಾರು ಆಸ್ತಿ ಒಡವೆ ಬಂಗಾರ ಅಷ್ಟರಲ್ಲೇ ಬದುಕು ಪರಿಪೂರ್ಣ ಅನ್ನುವ ಲೆಕ್ಕಾಚಾರ ಸರಳವಾಗಿಲ್ಲ ನಮ್ಮ ಪಾಲಿಗೆ. ಎರಡೆಳೆ ಸರ ನಾಲ್ಕು ಜರತಾರಿ ಸೀರೆಗಳಲ್ಲಿ ಬದುಕು ಮುಗಿಸಿಬಿಡುವ ಮುಗ್ದತೆಯೂ ಇರಾದೆಯೂ ನಮ್ಮಲಿಲ್ಲ .ಬೇಕಿತ್ತೋ ಬೇಡವೋ ಪ್ರಪಂಚ ನೋಡಿಯಾಗಿದೆ .ಮಸಾಲೆ ದೋಸೆ ,ಪಿಜ್ಜಾ ಗಳಿಗಾಗಿ ಅವನನ್ನೇ ಕಾದುಕೂರುವ ಅನಿವಾರ್ಯತೆಯೂ ಈಗಿಲ್ಲ .ಅವನ ಬ್ಯಾಂಕ್ ಬ್ಯಾಲೆನ್ಸ್ ತಲೆಮಾರಿನ ಆಸ್ತಿ ಯಾವುದು ಬಾಳಿಗೆ ಪ್ರಯೋಜನಕ್ಕೆ ಬರುವುದಿಲ್ಲ .ಅವನ ಒಳ್ಳೆತನ , ನಿನ್ನನ್ನು ಪರಿಭಾವಿಸುವ ವಿಧಾನ, ನಡೆಸಿಕೊಳ್ಳುವ,ಮತ್ತು ನಡೆದುಕೊಳ್ಳುವ ರೀತಿಯಷ್ಟೇ ನಿನ್ನವುಗಳು .
ನಿನ್ನ ನಾಡಿಮಿಡಿತ ಅರಿಯುವಷ್ಟು ವ್ಯವಧಾನ,ಆಸಕ್ತಿ ಅವನಿಗಿದೆಯ ?ಜೀವಸೆಲೆ ಬತ್ತದಂತ ಆರ್ದತೆಯಲ್ಲಿ ನಿನ್ನೊಳಗೆ ಹರಿಯಬಲ್ಲನ ? ಚೈತನ್ಯ ತುಂಬುತ್ತ ಇರಗೊಡ ಬಲ್ಲನ ?ಕಾಡಿಗೋಗಿ ಸೌದೆ ತರುವ ಗಟ್ಟಿತನ ನಮಗಿಲ್ಲ ,ಓದು ಉದ್ಯೋಗ ನಮ್ಮನ್ನು AC ರೂಮಿನ ನಾಜೂಕು ಹುಡುಗಿಯರನ್ನಾಗಿ ಮಾರ್ಪಡಿಸಿವೆ .ಬೇಕಾದರೆ ಸಂಸ್ಕೃತಿ ಸಂಪ್ರದಾಯಗಳ ಹೆಸರಲ್ಲಿ ಬೇಡುವ ಎಲ್ಲಾ ಸೇವೆಗಳನ್ನು ಪ್ರೀತಿಯ ನೆಪದಲ್ಲಿ ಪೂರೈಸಿಬಿಡೋಣ , ಆದರೆ ನಾವಾಗಿಯೂ ಬೆಳೆಯುವ ಉಳಿಯುವ ಬಯಕೆಗೆ ಸಹಕಾರ ನೀಡುವ ಕರುಣೆ,ದೊಡ್ದಮನಸು ಅವನಿಗಿದೆಯ? ನಾಲ್ಕು ಒಳ್ಳೆ ಮಾತನ್ನಾಡುವ ಜವಾಬ್ದಾರಿ , ಗೌರವಕ್ಕೆ ದಕ್ಕೆಯಾಗದಂತ ಆರೋಗ್ಯಕರ ಜಗಳ -ಅಷ್ಟೆಲ್ಲ ಸ್ವಂತಿಕೆ ಇದೆಯಾ ? ಆಯ್ಕೆ ನಮ್ಮದಾಗಿದ್ದರೆ ಜವಾಬ್ದಾರಿಯು ನಮ್ಮದೇ ಆಗಿರುತ್ತದೆ. ಪೂರ್ತಿ ಹಕ್ಕು ಕೂಡ. ವ್ಯವಸ್ತೆ ಕೆಟ್ಟದಿದೆ ಒಳ ಹೊಕ್ಕಷ್ಟು ಸುಲಭವಲ್ಲ ಹೊರಗೆ ಬರುವುದು. ದಾಂಪತ್ಯದ ಪರಿಕಲ್ಪನೆ ಬದಲಾಗಿದೆ ..ಅದರ ಸರಿಯಾದ ಅರಿವು ಅವನಿಗಿದೆಯ ? ಇಬ್ಬರು ಒಬ್ಬರಿಗೊಬ್ಬರು ಪೂರಕ ಮತ್ತು ಪ್ರೇರಕವಾಗಿ ಅವರಾಗೆ ಉಳಿಯುವುದು,ಒಟ್ಟಾಗಿಯೂ ಬೇರೆಬೇರೆಯಾಗಿಯೂ ಬೆಳೆಯುವುದು, ಬೆಳೆಯಬಿಡುವುದು ಅನಿವಾರ್ಯತೆ ಇದೆ.
ನಾ ಹೇಳಿದ್ದೆಲ್ಲವೂ ಅವಳಿಗೇನೆನಿಸಿತೋ ಏನೋ ಒಂದು ನಿಟ್ಟುಸಿರು ಕಡೆಗೆ. ಆಯ್ಕೆಯ ಸಂದಿಗ್ಧವಿದು.ಬಹುತೇಕರದ್ದು. ಒಳ್ಳೆತನದ ಕಿರೀಟ,ರಿಸ್ಕ್ ನ ಭಯ,ಜಾತಿ,ಮರ್ಯಾದೆ,ಸಾಮಾಜಿಕ ಕಟ್ಟುಪಾಡು ,ಅಪ್ಪ ಅಮ್ಮನ ಒಪ್ಪಿಗೆ ಎಲ್ಲವು ಕಂದಕಗಳಾಗಿ ನಿಂತುಬಿಡುತ್ತವೆ.ನೀನೆ ಕೂತು ಓದು,ಪರೀಕ್ಷೆ ಬರಿ , ಹಾಡು ಹಾಡು,ಕೆಲಸ ಹುಡುಕಿಕೊ ಅಂತೆಲ್ಲ ಮುಂದಕ್ಕೆ ದೂಡಿ ಎಲ್ಲ ಕಡೆ ಒಂಟಿಯಾಗಿ ನಿಲ್ಲಿಸುವ ಮನೆಯವರು ಇದೊಂದು ವಿಷಯಕ್ಕೆ ಮಾತ್ರ ನಾವೇ ಆಯ್ಕೆ ಮಾಡುತ್ತೇವೆ ಅಂತ mindset ತಯಾರು ಮಾಡಿಬಿಟ್ಟಿರುತ್ತಾರೆ. ಇನ್ನಿಲ್ಲದ ರಗಳೆ ಯಾಕೆ ಎನ್ನುವಂತೆ ಆಯ್ಕೆಯ ಸ್ವಾತಂತ್ರ್ಯವೂ ಬೇಡ ನೋವುಬೇಡ ಅನ್ನುವಷ್ಟು ನಮ್ಮ ಬಗ್ಗೆ ನಾವೇ ನಿರ್ಲಿಪ್ತರಾಗಿಬಿಡುತ್ತೇವೆ. ಅದೇ ಸರಿಯೆನಿಸತೊಡಗುತ್ತದೆ
ಒಂದಷ್ಟು ದಿನಗಳ ಬಳಿಕ ಮತ್ತೆ ಸಂಪರ್ಕಿಸಿದವಳ ಮಾತಲ್ಲಿ ಸಣ್ಣದೊಂದು ನೋವು ದುಗುಡ ..ಧ್ವನಿಯಲ್ಲಿ ಅಳುವಿನ ಪಸೆ.ಅವನು ಮಾತಾಡುತ್ತಿಲ್ಲ .ಮೌನವಾಗಿದ್ದಾನೆ ಅವಳ ಅಳಲು . ಏನಾಯ್ತು ? ತುಂಬಾ ಒಳ್ಳೆಯ ಹುಡುಗ . ಮಾತು ಸಾಂಗತ್ಯ ಚಂದವಿತ್ತು.ಹಳೆಯ ದಿನಗಳನ್ನು ನೆನಪಿಸಿಕೊಟ್ಟ,ಮರೆತು ಹೋಗಿದ್ದ ಮನಸಲ್ಲೂ ಲವಲವಿಕೆ , ಹದಿಹರೆಯಕ್ಕೆ ಮತ್ತೆ ಹೊರಳಿದಂತ ಹೊಸ ಅನುಭವ.ಚಿಮ್ಮಿದ ಆತ್ಮಾನಂದ . ಮತ್ತೇನಾಯಿತು ?
ಯಾಕೆ ಹೀಗೆ ಹುಡುಗರು ?ಅವಳ ಪ್ರಶ್ನೆ ! ಒಪ್ಪಿಕೊಳ್ಳುವ ಮೊದಲೇ ಚಿನ್ನು ಮುನ್ನು ಅನ್ನೋದೆಲ್ಲ ತಪ್ಪಲ್ವಾ ? ಸಂಕೋಚದ ಗಡಿ ಮೀರಿದ ! ತನ್ನ ಗಾಂಭೀರ್ಯದ ಅಸ್ತಿತ್ವವನ್ನೇ ಪ್ರಶ್ನಿಸಿದಂತೆ ಅಹಂಮಿಗೆ ಪೆಟ್ಟಾದಂತೆ ಅವಳ ಸಂಕಟ. ಅವನು ದುಡುಕಿದ್ದ ಇವಳು ವಿಪರೀತ ಖಾರವಾಗಿ ಸಿಡುಕ್ಕಿದ್ದಳು.ಅವಮಾನವಾಗಿದ್ದು ಅವಳಿಗೋ ಇವನಿಗೋ ಗೊತ್ತಿಲ್ಲ ಅಂತು ಮಾತು ನಿಂತ್ತಿತ್ತು.ತಪ್ಪಿಸಿ ಓಡಾಡತೊಡಗಿದ. ಬೇಡ ಅಂದಿದ್ದು ಅಸಹಜ ಸಲಿಗೆಯನ್ನ, ಸ್ನೇಹವನ್ನಲ್ಲ ಇವಳ ಕಳವಳ .ಇನ್ನಿಲ್ಲದಂತೆ ಅವನನ್ನು ಮಿಸ್ ಮಾಡುತ್ತಿದ್ದಾಳೆ . ಟೆಕ್ನಾಲಜಿ ಕೈಗೆಟುಕಿದಂತೆ ಮನಸಿನಲ್ಲಿ ಮೂಡಿದ್ದು, ಹೃದಯ-ಮಿದುಳಿಗೆ ಹಾದು ಸೆನ್ಸಾರ್ ಆಗದೆ, ಬೆರಳುಗಳ ತುದಿಮೊಲಕ ಈ ಕಡೆಗಿನ ವಾಲ್ ತಲುಪಿ ಹೋಗಿರುತ್ತದೆ .ಬೇಕಾದನ್ನೆಲ್ಲ ಅಭಿವ್ಯಕ್ತಿಸೋದು ಕಷ್ಟವೇನಲ್ಲ ಈಗ .ಆದರೆ ಸಂಪ್ರದಾಯಸ್ತ ಮನಸ್ತಿತಿ ಇನ್ನು upgrade ಆಗಿಲ್ಲ ಕೆಲವರಿಗೆ ..ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೇರಿ ಅಸ್ತಿತ್ವ ಹೊಂದಿದಂತೆ ,ಸಾಮಾಜಿಕ ಮನ್ನಣೆಗಳಿಸಿದಂತೆ ಅವಳ ಸಣ್ಣ ನಿರಾಕರಣೆಯು ಸೋಲಿಸಿರಬಹುದು, ಘಾಸಿಯಾಗಿಸಿರಬಹುದು ಅವನನ್ನ.

ಮತ್ತು ಅದೊಂದು ಮಾಯಾವಿ ಕಲೆಯೇ ಇರಬೇಕು .ಎಷ್ಟು ಪ್ರೋತ್ಸಾಹಿಸಬೇಕು, ಎಲ್ಲಿಗೆ ನಿಲ್ಲಿಸಬೇಕು,ಹೇಗೆ ನಿಭಾಯಿಸಬೇಕು ಎಲ್ಲರಿಗು ಒಲೆವ ಕಲೆಯಲ್ಲ ಅದು .ಸರಿಯಾಗಿ ತಲುಪೋದು, ಅರ್ಥವಾಗೋದು ಹೇಗೆ ತಿಳಿಯೋದೇ ಇಲ್ಲ.
ಹುಡುಗಿಯರೇ ಹಾಗೇನೂ ,ಅಪ್ಪನಾಗಿ ,ಅಣ್ಣ ತಮ್ಮನಾಗಿ, ಗೆಳೆಯನಾಗಿ ಬರುವ ಗಂಡಸನ್ನು ಸುಲಭವಾಗಿ ಸಮರ್ಥವಾಗಿ ನಿಭಾಯಿಸಿಕೊಳ್ಳುತ್ತೇವೆ,ಕಡೆಗೆ ಯಾವುದೊ ದೇಶದ ಬಾಬ್ ,ರಾಬ್ ಡೇವಿಡ್ಗಳನ್ನೂ,ಬಳೆಶಾಪಿನ ಸೇಟು ,ಚಿನ್ನದಂಗಡಿಯ ಶೆಟ್ಟಿ,ಬಟ್ಟೆಯಂಗಡಿಯ ಮುಸ್ಲಿಂ ,ಪಕ್ಕದ ಮನೆಯ ಬ್ರಾಹ್ಮಣ ಎಲ್ಲರನ್ನು ಮಾತಾಡಿಸಿ ಒಪ್ಪಿಸಿ ಗೆಲ್ಲುತ್ತೇವೆ.ಆದರೆ ಪ್ರೀತಿಯ ಹೆಸರೆತ್ತುವ ಹುಡುಗನ ಹತ್ತಿರ ಮಾತ್ರ ವಿಚಿತ್ರ ಭಯ,ತಳಮಳಗಳನ್ನು ಅನುಭವಿಸಿ ಬಿಡುತ್ತೇವೆ ..ಇಬ್ಬರದ್ದು ಭಿನ್ನ ಭಾಷೆ-ಬೇರೆ ಲೋಕ.
ಪುರುಷ ಪ್ರಧಾನತೆಯನ್ನು ಎಲ್ಲೆಡೆ ಮೀರುವ ತಹತಹಿಕೆ ಇರುವ ಹುಡುಗಿಯರೂ ಇದೊಂದು ವಿಷಯಕ್ಕೆ ಮಾತ್ರ ಸಾರಾಸಗಟಾಗಿ ಪುರುಷ ಪ್ರಧಾನತೆಯನ್ನು ಒಪ್ಪಿಕೊಂಡುಬಿಟ್ಟುರುತ್ತಾರೆ. ಅವನೇ ಹೇಳಲಿ ,ಜೋರಾಗಿ ಹೇಳಲಿ ,ಸ್ಪಷ್ಟವಾಗಿ ಹೇಳಲಿ ,ಇಷ್ಟವಾಗುವ ಹಾಗೆ ಹೇಳಲಿ ಎಂದು ಕಾದು ಕುಳಿತ್ತಿರುತ್ತಾರೆ .ಹುಡುಗಿಯರ ಭಾಷೆಯಲ್ಲಿ ಇಲ್ಲ,ಆಗಲ್ಲ ಅಂದರೆ ಇಷ್ಟು ಬೇಗ ಆಗಲ್ಲ,ಇನ್ನು ಆಗಿಲ್ಲ , ಧೈರ್ಯ ಇಲ್ಲ,ಸಮಯ ಸಾಕಾಗಿಲ್ಲ ಅಂತ ಏನೇನೋ ಅರ್ಥ ಇರುತ್ತವಂತೆ.ಆದರೆ ಹುಡುಗರ ಭಾಷೆಯಲ್ಲಿ ಇಲ್ಲವೆಂದರೆ ಇಲ್ಲ ಎಂದಷ್ಟೇ ಅರ್ಥವಾಗಿ ಬಿಡುತ್ತದಂತೆ .
ಆದರೆ ಹಿಂದೆ ಬೀಳೋರೆಲ್ಲ ಇಷ್ಟ ಆಗಲ್ಲ ,ಇಷ್ಟ ಆದವರು ಹಿಂದೆ ಬೀಳಲ್ಲ ಎನ್ನುವಂತೆ ಅವನು ಕೂಡ “ನೀವು ಸಿಗದೇ ಇದ್ದರು ಪರವಾಗಿಲ್ಲ ಕಣ್ರೀ, ಕಡೆವರೆಗೂ decent ಅನಿಸಿಕೊಂಡು ಬಿಟ್ರೆ ಸಾಕು ” ಅಂದು ಬಿಡುತ್ತಾನೆ .ಅದೇ ಕಾರಣಕ್ಕೆ ಮತ್ತಷ್ಟು ಇಷ್ಟವಾಗಿ ಹೋಗುತ್ತಾನ ,ಯೋಗರಾಜ್ ಭಟ್ಟರನ್ನೇ ಕೇಳಬೇಕು . ಹದಿಹರೆಯವಾದರೆ ನೀನಿಲ್ಲ ಅಂದರೆ ನೂರು ಜನ ಎನ್ನುವ ಪೊಗರು,ಆತ್ಮವಿಶ್ವಾಸ .ಆದರೆ ಸ್ವಂತವಾಗಿ ಬದುಕಲು ಕಲಿತ ಈ ನಡುವಯಸಲ್ಲಿ ? ಈ ಭಯಗಳಿವೆಯಲ್ಲ, ಅವು ಒಂದೊಂದು ತರಹದಲ್ಲ. ಕೆಟ್ಟವರಾಗುವ ಭಯ ಒಂದಾದರೆ ,ಏನೊ ಆಗಿಲ್ಲದೇ ದಿವ್ಯ ರಸ್ಕಾರಕ್ಕೊಳಗಾಗುವ,ಉದಾಸೀನತೆಗೆ ಸರಿವ ಭಯ.ಆ ದೃಷ್ಟಿಯಲ್ಲಿ ನಿಮ್ಮನ್ನು ನೋಡೇಇಲ್ಲ ಎಂದುಬಿಟ್ಟರೆ ,ಮೆಚ್ಚಿಗೆ ಇದೆ ಆದರೆ ಅದು ಖಂಡಿತ ಪ್ರೀತಿಯಲ್ಲ ಅಂತ ತಳ್ಳಿಹಾಕಿದರೆ ,ಭಾವನೆಗೂ ಭಾವುಕತೆಗು ವ್ಯತ್ಯಾಸ ತಿಳಿಸಿದರೆ ,ಇಷ್ಟ ಆದರೆ ಮದುವೆಗಲ್ಲ ಅಂದುಬಿಟ್ಟರೆ- ಅವಮಾನಿತರಾಗುವ ಭಯ.ಜಗತ್ತು ಗೆದ್ದರು ಪ್ರೀತಿ ಗೆಲ್ಲದ ಸೋಲಿನ ಭಯ .
ಇನ್ನು ವ್ಯಕ್ತಿಗತ ಭಯಗಳು ಬೊಜ್ಜು ಆವರಿಸಿದ್ದು , ಚೂರು ಕಪ್ಪು,ಕುಳ್ಳು,ದಪ್ಪ,ಬ್ಯಾಂಕ್ ಬ್ಯಾಲೆನ್ಸ್ ನಿಲ್ ಅನಿಸಿದ್ದು .ವಿವೇಕ ತಿಳಿದ ಮನಸಿನ ಲೆಕ್ಕಾಚಾರದ ಲೌಕಿಕ ಮಾನದಂಡಗಳಲ್ಲಿ ಸರಿ ಹೊಂದಿಸಲಾಗದೆ ಸೋಲುವುದು . ಎಲ್ಲರಿಗು ಅಂತದ್ದೊಂದು ದಿನದ ಬಯಕೆ ಕಾಡೆಕಾಡಿರುತ್ತದಂತೆ.ಯಾವುದೇ ಹಿಂಜರಿಕೆ ಇಲ್ಲದೆ ಇಷ್ಟಪಟ್ಟವರಿಗೆ ಇಷ್ಟವಾಯಿತು ಅಂತ ಹೇಳೋಕೆ ಸಾಧ್ಯ ಮತ್ತು ಸ್ವಾತಂತ್ರ್ಯವಿರುವ ದಿನ ಮತ್ತು ಇಷ್ಟವಿಲ್ಲದ್ದಿದ್ದರು ನೋವಾಗದ ರೀತಿಯಲ್ಲಿ ತಿಳಿಸಬೇಕಾದ ರೂಲ್ಸ್ ಇರುವ ದಿನ.ಒಪ್ಪಿಗೆಯಾದರೆ ಇಂದಿನ ನೆನಪು ನಾಳೆಗಿರಬೇಕು,ಇಲ್ಲವಾದರೆ ಎಲ್ಲಾ ಮರೆತುಹೋಗಬೇಕು .
ಒಮ್ಮೆ ಹಾಗೆ ಆಗಿತ್ತು . ಫ್ರೀಕ್ವೆನ್ಸಿ ಮ್ಯಾಚ್ ಮಾಡಿದ ಮೊದಲ ಹುಡುಗ ಎನ್ನುವ ಹೆಗ್ಗಳಿಕೆಗೆ ಇತ್ತೀಚಿನವರೆಗೂ ವಾರಸುದಾರನಾಗಿದ್ದ ಮೊದಲ ಹುಡುಗನ ಜೊತೆಗೆ ಮಾತು ಹಿತವಾಗಿತ್ತು .ಸ್ನೇಹಕ್ಕೆ ಭಯವಿರಲಿಲ್ಲ .ಪಾಪ ಅವನೇನು ಎಲ್ಲೂ ನಿಯಮ ತಪ್ಪಿರಲಿಲ್ಲ,ಗಾಡಿಯನ್ನು ದಾಟುವ ಧೈರ್ಯವನ್ನು ತೋರಿರಲಿಲ್ಲ .ಆದರೆ ಅಪ್ಪ ಭಿತ್ತಿದ್ದ ವಿಚಿತ್ರ ಮಡಿವಂತಿಕೆಯ ಭಯದಲ್ಲಿ ಕೇವಲ ಅವನ ಸಂಭ್ರಮಕ್ಕೆ ಅಳುಕಿದದ್ದ ನಾನು ,ಅವನು ಬಾಯಿಬಿಟ್ಟು ಹೇಳಿಬಿಟ್ಟರೆ ವ್ರತ ಎಲ್ಲಿ ಕೆಟ್ಟುಹೋಗುತ್ತದೋ ಎನ್ನುವಂತ ಗಾಬರಿಯಲ್ಲಿ ಹೌಹಾರಿ ಏನೇನೋ ಒದರಿ ಅವನ ಸಡಗರಕ್ಕೆ ನೀರೆರೆಚಿದ್ದೆ .ಭಯವಿದ್ದಿದ್ದು ಅವನ ಮೇಲ ,ನನ್ನ ಮೇಲ ,ಅಪ್ಪನ ಮೇಲ ..ಗೊತ್ತೇ ಆಗಲಿಲ್ಲ ..ಯಾವ ಮಡಿವಂತಿಕೆಯೂ ಮುಂದಕ್ಕೆ ಪ್ರಯೋಜನಕ್ಕೆ ಬರಲಿಲ್ಲ .ಕಳೆದುಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾತ್ರ ಕಾಲದಲ್ಲೇ ಉಳಿದೋಯಿತು .
ಅವನು ಮತ್ತೆ ಸಿಕ್ಕಾಗ ನಗುವಲ್ಲೇ ಜ್ಞಾಪಿಸಿದ .ಕಾಲ ಮೀರಿಯಾಗಿತ್ತಾದ್ದರಿಂದ ,ನಮ್ಮದೇ ಕತೆಯನ್ನು ಹೊರಗೆ ನಿಂತು ನೋಡಿ ನಗುತ್ತಿದ್ದೆವು .ತಪ್ಪು ನನ್ನದೇ ಆದರೆ ಆ ಕ್ಷಣ ಅವನ ಮೇಲಿನ ತಪತಪನೆ .ಮತ್ಯಾಕೆ ಹೇಳಿರಲಿಲ್ಲ ಕೇಳಿದೆ . ಗೌರವ !! ಭಾವನೆಗಳಿಗೆ ದಕ್ಕೆ ತರಲಾರದ ಅವಸರ ಮಾಡಲಾಗದ ಮರ್ಯಾದೆ,ಗೌರವ ..ಅಂದೇ ನಿಶ್ಚಯಿಸಿದೇ ಕೇವಲ ಸ್ನೇಹಿತನಾಗಿ ಉಳಿಯಬೇಕು ಇಲ್ಲ ತೊಲಗಿಹೋಗಬೇಕು..ಮೊದಲನೆಯದಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲಾ ಅನಿಸಿದಾಗ ಎರಡನೆಯದನ್ನು ಆಯ್ಕೆ ಮಾಡಿಕೊಂಡೆ ಅಂದ .ಏನೆಲ್ಲಾ ಆದರ್ಶ ಪರಿಕಲ್ಪನೆಗಳು …ಒತ್ತರಿಸಿ ನಗು ಬಂತು .ಬೆಳೆಯುವ ಸಹಜ ಕ್ರಿಯೆಗೆ ಎಂತೆಂತ ಆಡಂಬರದ ಪದಗಳ ಮೆರವಣಿಗೆ.ಆದರು ಇತರಹದ ಪ್ರಾಮಾಣಿಕತೆಗೆ ನಮ್ಮ ನಾವು ಮೆಚ್ಚಲೇಬೇಕು .
ಆಗ ಹೊಸದಾಗಿ ಬಂದಿದ್ದ ‘ಓ ಹೃದಯ ಕೇಳಿದೆಯ,ಪ್ರೀತಿ ನಿನ್ನ ಪಾಲಲ್ಲ..’ ಅನ್ನೋ ಹಾಡನ್ನು ಹಗಲು ರಾತ್ರಿ ಕೇಳಿಕೊಂಡು ನೋವು ನೀಗಿಕೊಂಡೆ ಅಂತ ನಕ್ಕುಬಿಟ್ಟ . ಆಗೆಲ್ಲಾ ನಾನೆಂತ ಬೆಪ್ಪಾಗಿದ್ದೆ ಅಂತ ನಾನು ನಕ್ಕುಬಿಟ್ಟೆ ..
ಇಷ್ಟವಾಗುವಂತದ್ದು ಅಲ್ಲಿಇಲ್ಲಿ ಕಂಡಾಗ ಮೆಚ್ಚುತ್ತೇವೆ ಆದರೆ ಪರಿಪೂರ್ಣತೆಗೆ ಒಯ್ಯಲು ಹೋಗುವುದಿಲ್ಲ .ನಿಜ ಕೆಲವೊಮ್ಮೆ ಇಬ್ಬರಿಗೂ ಒಂದೇ ಭಾಷೆ ಬರುತ್ತದೆ ಅನಿಸುತ್ತದೆ ,ಅದ್ಬುತವಾದ ಜೊತೆಗಾರಿಕೆ ಸಾಧ್ಯವಿದೆ ,ಹೊಂದಾಣಿಕೆ ನಡಿಗೆಗಳು ಎಷ್ಟು ಸುಲಭ ಮತ್ತು ಸಂತೋಷದಾಯಕ ಅನಿಸುತ್ತದೆ.ಆದರು ಅವ್ಯಕ್ತ ಭಯ ತಾಕಲಾಟಗಳು ಆಟ ಕೆಡಿಸುತ್ತವೆ .ಅದ್ಭುತ ಘಟಿಸಲು ದೈರ್ಯವೇ ಮಾಡುವುದಿಲ್ಲ .ಈಗೆಲ್ಲ ಫಾಸ್ಟ್ ಫಾರ್ವರ್ಡ್ ಯುಗ.ಟೆಕ್ನಾಲಜಿ gadgetsಗಳು ಕೈಯಳತೆ ದೂರದಲ್ಲಿ ಮನಸುಗಳ ದಾರಿ ಕೂಡಿಸಿವೆ.ಆದರೆ ಆಯ್ಕೆಯ ಶಿಫಾರಸ್ಸು ಮತ್ತು ಧೈರ್ಯ ನೀಡಬಹುದೇ ? ಮಾತಿನ ಮುಂದೊಂದು ದೊಡ್ಡ ಮೌನ..
ಗೆಳತಿಯ ಕತೆಯಲ್ಲಿ ಇಲ್ಲೇನಾಗಿದೆಯೋ ಗೊತ್ತಿಲ್ಲ…ಅವನ ಮೌನದ ಹಿಂದಿನ ಮಾತು ಗೊತ್ತಿಲ್ಲ .ಕಡೆ ಪಕ್ಷ ಅವಳಿಗೆ ಸ್ವಲ್ಪ ಹಗುರವೆನಿಸಬೇಕಿತ್ತು . ಹೋಗಲಿ ಬಿಡು ,ಸಣ್ಣ ಸೂಜಿ ಮೊನೆಯಂತ ನೋವು .ತುಂಡು ತುಂಡಾಗಿ ಕತ್ತರಿಸಿ ಬಿದ್ದಿಲ್ಲವಲ್ಲ .ಕೆಲವು ಬೆಳಕುಗಳನ್ನು ನಕ್ಷತ್ರಗಳಾಗಲೇ ಬಿಟ್ಟುಬಿಡಬೇಕು.ಮನೆ ಹಣತೆ ಅಂತ ತಂದಿಟ್ಟುಕೊಂಡರೆ ಇನ್ಯಾವಾಗಲೋ ಧಗಧಗಿಸಿ ಉರಿದು ಚಿಟಪಟಗುಟ್ಟಿದಾಗ ದುಪ್ಪಟ್ಟು ನೋವು ಅಂದೇ .ರಾತ್ರಿ ಅಲ್ವಾ ಭಾವುಕತೆ ಅಧಿಕ…ನಾಳೆ ಎದ್ದು ಕನ್ನಡಿಯಲ್ಲಿ ನೋಡು, ಅಷ್ಟಕ್ಕೇ ಅಷ್ಟೊಂದು ತಲೆಕೆಡಿಸಿಕೊಂಡೆನ ಅಂತ ನೀನೆ ಬೈದುಕೊಳ್ಳುತ್ತೀಯ ಅಂದೇ .ಅಳು ನಿಲ್ತಾ ಕೇಳಿದೆ…ಗೆಲುವಾದಳು ಹುಡುಗಿ. ಮರು ಕ್ಷಣ ಜ್ಞಾನೋದಯವಾದವಳಂತೆ,ನಿನ್ನ ಸಮಸ್ಯೆಗಿಂತ ದೊಡ್ಡದೇನಲ್ಲ , ಎಲ್ಲಿಗೆ ಬಂತು ಎಂದಳು . ಬರುವವಾರ ಮತ್ತೆ ಕಾಫಿ ,ಟೀ, ಬಿಸ್ಕೆಟ್ ಪ್ರೋಗ್ರಾಮು ಅಂದೇ.ಅಳಲಾರದ,ನಗಲಾರದ ಸ್ಮೈಲಿಯೊಂದು ಇಬ್ಬರ ಮೊಬೈಲ್ ಪರದೆ ಮೇಲು ಸದ್ದಿಲ್ಲದೇ ರವಾನೆಯಾಗಿತ್ತು .
 

‍ಲೇಖಕರು G

16 July, 2014

5 Comments

  1. nagraj.harapanahalli

    ಕತೆ ತುಂಬಾ ಚೆನ್ನಾಗಿದೆ. ಸಹಜ ಮತ್ತು ಓದಿಸಿಕೊಳ್ಳುವ ಶಕ್ತಿ ಇರುವ ನಿರೂಪಣೆ. ಇಷ್ಟವಾಯಿತು.

  2. Kiran

    Natural, mature use of language.
    Good reading.

  3. hema

    Thanks kiran and nagraj… 🙂 your encouragement matters a lot for a novice writer like me 🙂

  4. Sushma Moodbidri

    ಕಾಡಿತು.. ಕಾಡಿತು.. ಕಾಡಿತು…
    ಅಷ್ಟೇ…
    ಮನಸ್ಸಿನೊಳಗೆ ಗಟ್ಟಿ ಕೂತಿತು…

    • Anonymous

      Thank u sushma 🙂 m overwhelmed

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading