ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಚ್ಛ ಭಾರತ ಅಭಿಯಾ(ಮಾ)ನ


ಎಚ್ ಜಿ ಮಳಗಿ

ಮೊನ್ನೆ ನಾವೆಲ್ಲಾ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳ ಕರೆಗೆ ಓಗೊಟ್ಟು ‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಹೃತ್ಪೂರ್ವಕವಾಗಿ ಪಾಲ್ಗೊಂಡಿದ್ದು ಸಂತಸದ ವಿಚಾರ. ಶಾಲೆ ಕಾಲೇಜು ಸರಕಾರಿ ಕಛೇರಿಗಳು, ಕಾರ್ಪೊರೇಟ್ ಜಗತ್ತಿನ ಸಂಪದ್ಭರಿತ ದಿಗ್ಗಜಗಳು, ಬಾಲಿವುಡ್ ಜಗತ್ತಿನ ತಾರೆಗಳು ಎಲ್ಲರೂ ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿ ನಮ್ಮ ಇಚ್ಛಾ ಶಕ್ತಿಯನ್ನು ಜಾಹೀರುಗೊಳಿಸಿದರು. ನಮ್ಮ ಅವಳೀ ನಗರದಲ್ಲೂ ಈ ಅಭಿಯಾನ ಅತ್ಯಂತ ಯಶಸ್ವಿಯಾಯಿತು. ನಾನು ವಾಸವಾಗಿರುವ ಕೆಲಗೇರಿ ರಸ್ತೆಯಲ್ಲಿ ಹತ್ತಾರು ಕಡೆ ರಾಶಿರಾಶಿಯಾಗಿ ಬಿದ್ದಿದ್ದ ಕಸವೂ ಮಾಯವಾಗಿದ್ದು ಸಂತಸ ತಂದಿತು. ಇಂದು ಎಲ್ಲ ಪೇಪರುಗಳಲ್ಲಿಯೂ ಇದೇ ಸುದ್ದಿ. ಹುಬ್ಬಳ್ಳಿಯೊಂದರಲ್ಲಿಯೇ ಎರಡು ತಾಸಿನಲ್ಲಿ 40 ಟನ್ ಕಸ ಸಂಗ್ರಹವಾಯಿತೆಂದರೆ ಕಸದ ಪ್ರಮಾಣವನ್ನು ಊಹಿಸಬಹುದು. ಆದರೆ ಹೀಗೆ ಸಂಗ್ರಹಿಸಿದ ಕಸವನ್ನು ಎಲ್ಲಿ ಹಾಕುವುದು? ಪಾಪ ಇಷ್ಟು ದಿನ ಎಲ್ಲ ಕಡೆಯೂ ಹರಡಿಕೊಂಡು ಆರಾಮವಾಗಿರುವ ಇದನ್ನು ಗುಡ್ಡೆ ಹಾಕಿದರೆ ಅದು ಹಿಮಾಲಯವನ್ನು ಮೀರಿಸಬಹುದೇನೋ!
ಕಸ ತಾನಾಗಿಯೇ ಎಲ್ಲೆಂದರಲ್ಲಿ ಬೀಳುವುದಿಲ್ಲ. ಅದರ ಜನಕರು ನಾವೇ. ಅದನ್ನೊಂದು ಸಮಸ್ಯೆಯನ್ನಾಗಿಸಿದ್ದೂ ನಾವೇ. ಸ್ವಲ್ಪ ಶಿಸ್ತನ್ನು ರೂಢಿಸಿಕೊಂಡರೆ ಇದೊಂದು ಸಮಸ್ಯೆಯೇ ಅಲ್ಲ. ಆದರೆ ಅತ್ಯಂತ ಅಸಹ್ಯ ತರಿಸುವುದೆಂದರೆ ರಂಗುರಂಗಿನ, ಕಾಮನಬಿಲ್ಲಿನ ವರ್ಣಗಳನ್ನೂ ಮೀರಿಸುವ ಎಲೆಯಡಿಕೆಯ ಉಗುಳು. ಎಲ್ಲೆಂದರಲ್ಲಿ, ಎಲ್ಲರೆದುರಲ್ಲಿ, ಅರಿವಿನ ಪರಮಾವಧಿ ಕೊರತೆಯಲ್ಲಿ ಈ ಪಿಚಕಾರಿ ನಡೆದೇ ಇರುತ್ತದೆ. ಇನ್ನು ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಪ್ಲೇಟು ಗ್ಲಾಸುಗಳು ಈ ಕಸದ ಅಲಂಕಾರವನ್ನು ಹೆಚ್ಚಿಸುತ್ತವೆ. ಈ ಕಸದ ಸಾಮ್ರಾಜ್ಯದ ಪ್ರಜೆಗಳೆಂದರೆ ಹಂದಿಗಳೂ ಬೀದಿ ನಾಯಿಗಳೂ ಬಿಡಾಡಿ ದನಗಳೂ, ಅವುಗಳ ಮಧ್ಯೆ ಈ ಕಸಕ್ಕಾಗಿ ಹೋರಾಡುವ ಪ್ಲಾಸ್ಟಿಕ್ ಆಯುವ ಬಡ ಜನರು. ಇನ್ನು ಬಯಲು ಶೌಚಾಲಯಗಳು. ಬಹುಶಃ ಭಾರತದ ರೈಲು ಹಳಿಗಳು ಜಗತ್ತಿನ ಅತಿ ದೊಡ್ಡ ಬಯಲು ಶೌಚಾಲಯಗಳೆಂದರೆ ಅತಿಶಯೋಕ್ತಿ ಆಗದು. ಅದರ ಹೊಲಸು ಅದು ತಂದೆಸೆಯುವ ಸಾಂಕ್ರಾಮಿಕ ರೋಗಗಳು. ಅದರಿಂದಾಗುವ ಆಥರ್ಿಕ ನಷ್ಟ ಅಗಣಿತ. ಪಶ್ಚಿಮ ದೇಶಗಳು ಅಷ್ಟು ಸ್ವಚ್ಛವಾಗಿರಲು ಆ ಜನರಲ್ಲಿರುವ ನಾಗರಿಕ ಪ್ರಜ್ಞೆ ಹಾಗೂ ಮುನಸೀಪಾಲ್ಟಿಗಳ ಸಮಯ ಪ್ರಜ್ಞೆ. ಇನ್ನೊಂದು ಮಹತ್ವದ ಅಂಶವೆಂದರೆ ಜನಸಂಖ್ಯೆ, ಜನರ ಶೈಕ್ಷಣಿಕ ಮಟ್ಟ ಮತ್ತು ನಹಿ ಚಲ್ತಾ ಹೈ ಎನ್ನುವ ಮೈಂಡ್ಸೆಟ್.
ಜನಸಂಖ್ಯೆಗೂ, ಜನರ ಆದಾಯ, ಸಾಕ್ಷರತೆಗೂ ಸ್ವಚ್ಛತೆಗೂ ನೇರಾನೇರ ಸಂಬಂಧವಿದೆ. ಜಗತ್ತಿನ ಕೆಲವು ಮುಂದುವರಿದ ದೇಶಗಳೊಡನೆ ನಮ್ಮ ಜನಸಂಖ್ಯೆ, ವಿಸ್ತೀರ್ಣ ಹಾಗೂ ಆದಾಯವನ್ನು ಮತ್ತು ಅವು ಸ್ವಚ್ಛವಾಗಿರುವ ಕಾರಣಗಳ ಕುರಿತು ಒಂದು ಹೋಲಿಕೆಯನ್ನು ನೋಡೋಣ. ವಿಶ್ವದಲ್ಲಿಯೇ ದೊಡ್ಡ ದೇಶ ರಶಿಯಾದ (66ಲಕ್ಷ ಚ. ಮೈ ನಮ್ಮ ದೇಶಕ್ಕಿಂತ 6 ಪಟ್ಟು ದೊಡ್ಡದು) ಜನಸಂಖ್ಯೆ ಕೇವಲ 17-18 ಕೋಟಿ. ತಲಾ ಆದಾಯ 11-12 ಲಕ್ಷ ರೂಪಾಯಿ. ಎರಡನೇಯ ದೊಡ್ಡ ದೇಶ ಕೆನಡಾ (35ಲಕ್ಷ ಚ.ಮೈ) ಜನಸಂಖ್ಯೆ ಕೇವಲ 3.50 ಕೋಟಿ. ವಾರ್ಷಿಕ ತಲಾ ಆದಾಯ 25 ಲಕ್ಷ ರೂಪಾಯಿ. ಅಮೇರಿಕಾ(38 ಲಕ್ಷ ಚ.ಮೈ) ನಮಗಿಂತ ಮೂರುಪಟ್ಟು ದೊಡ್ಡ ದೇಶ. ಅದರ ಜನಸಂಖ್ಯೆ ಕೇವಲ 35 ಕೋಟಿ. ತಲಾ ಆದಾಯ ವಾಷರ್ಿಕ 60 ಲಕ್ಷ ರೂಪಾಯಿ. ಚೀನಾದೇಶದ(37 ಲಕ್ಷ ಚ. ಮೈ). ಜನಸಂಖ್ಯೆ ಜಗತ್ತಿನಲ್ಲಿಯೇ ಅತೀ ಹೆಚ್ಚು ಸುಮಾರು 135-140 ಕೋಟಿ. ವಾಷರ್ಿಕ ತಲಾ ಆದಾಯ ಸುಮಾರು 6 ಲಕ್ಷ ರೂಪಾಯಿಗಳು. ಆಸ್ಟ್ರೇಲಿಯಾ ಒಂದು ಖಂಡವೇ ಆದರೂ ಅದರ ಜನಸಂಖ್ಯೆ ಕೇವಲ ಎರಡೂವರೆ ಕೋಟಿ. ತಲಾ ಆದಾಯ 25 ಲಕ್ಷ ರೂಪಾಯಿಗಳು. ಹೆಚ್ಚಿನ ಪಶ್ಚಿಮ ದೇಶಗಳ ಜನರ ಸಾಕ್ಷರತೆ ಶೇಕಡಾ ನೂರು.

ನಮ್ಮ ದೇಶದ ವಿಸ್ತೀರ್ಣ ಹಾಗೂ ಜನಸಂಖ್ಯೆ ತಲಾ ಆದಾಯ ಸಾಕ್ಷರತಾ ಮಟ್ಟವನ್ನು ಈ ದೇಶಗಳಿಗೆ ಹೋಲಿಸಿದರೆ, ರಶಿಯಾದಲ್ಲಿ 560ಕೋಟಿ, ಅಮೇರಿಕಾದಲ್ಲಿ 315 ಕೋಟಿ, ಕೆನಡಾದಲ್ಲಿ 330ಕೋಟಿ ಆಸ್ಟ್ರೇಲಿಯಾದಲ್ಲಿ 250 ಕೋಟಿ, ಚೀನಾದಲ್ಲಿ 315 ಕೋಟಿ, ಬ್ರಾಜಿಲ್ನಲ್ಲಿ 280 ಕೋಟಿ ಜನಸಂಖ್ಯೆ ಇರಬೇಕಿತ್ತು. ನಮ್ಮ ದೇಶವು ವಿಸ್ತೀರ್ಣದಲ್ಲಿ(12.69 ಲಕ್ಷ ಚ.ಮೈ) 7ನೆಯ ಸ್ಥಾನವೂ, ಜನಸಂಖ್ಯೆಯಲ್ಲಿ(127ಕೋಟಿ) 2ನೆಯ ಸ್ಥಾನದಲ್ಲಿದ್ದರೆ ತಲಾ ಆದಾಯದಲ್ಲಿ 133ನೆಯ ಸ್ಥಾನವನ್ನು(2.40ಲಕ್ಷ) ಹೊಂದಿದೆ. ನಾವು ಪ್ರತಿ ಚ.ಮೈಗೆ 850 ಜನರು ಇದ್ದೇವೆ. ರಶಿಯಾ ದೇಶದಲ್ಲಿ ಪ್ರತಿ ಚ.ಮೈಗೆ 22 ಜನರಿದ್ದಾರೆ. ರಶಿಯಾಗೆ ಹೋಲಿಸಿದರೆ ನಾವು ಕೇವಲ 2.80 ಕೋಟಿ, ಕೆನಡಾಗೆ ಹೋಲಿಸಿದರೆ ಕೇವಲ 1.15 ಕೋಟಿ ಇರಬೇಕಿತ್ತು. ಅಮೇರಿಕದಲ್ಲಿ ಪ್ರತಿ ಚ.ಮೈಗೆ ಕೇವಲ 80 ಜನರು ವಾಸಿಸುತ್ತಿದ್ದಾರೆ. ನಮ್ಮ ದೇಶದ ಜನಸಂಖ್ಯೆಯನ್ನು ಅಮೇರಿಕಕ್ಕೆ ಹೋಲಿಸಿದರೆ ನಾವು ಕೇವಲ 10-12 ಕೋಟಿ ಇರಬೇಕಿತ್ತು. ಅಂದರೆ ನಾವು ಅವರಿಗಿಂತ ನಾಕು ಪಟ್ಟು ಹೆಚ್ಚು ಜನರಿದ್ದೇವೆ. ಆದರೆ ಪ್ರತಿ ಚ.ಮೈಗೆ ಅವರಿಗಿಂತ ಹತ್ತು ಪಟ್ಟು ಹೆಚ್ಚಿಗೆ ಇದ್ದೇವೆ. ಈ ಅಗಾಧ ಅಂತರವನ್ನು ಹೆಚ್ಚು ಅರ್ಥ ಮಾಡಿಕೊಳ್ಳಬೇಕೆಂದರೆ, ಅವರು ಒಂದು ದೊಡ್ಡ ರೂಮಿನಲ್ಲಿ ಒಬ್ಬರೇ ಇದ್ದರೆ ನಾವು, ನಾಕೈದು ಜನ ಚಿಕ್ಕ ರೂಮಿಲ್ಲಿ ಇದ್ದೇವೆ. ಅವರು ಒಂದು ಪ್ಲಾಸ್ಟಿಕ್ ಬ್ಯಾಗ್ ಅಥವಾ ಲೋಟವನ್ನು ಎಸೆದರೆ ನಾವು 10-11 ಚೀಲ ಅಥವಾ ಲೋಟವನ್ನು ಎಸೆಯುತ್ತೇವೆ. ಅಂದರೆ ಅವರಿಗಿಂತ ಹತ್ತುಪಟ್ಟು ಹೆಚ್ಚು ಕಸವನ್ನು ಉತ್ಪಾದಿಸುತ್ತೇವೆ ಎಂದರ್ಥ. ಅಲ್ಲಿ ಕಸ ಇಲ್ಲವೆಂದರ್ಥವಲ್ಲ. ಆದರೆ ಅದರ ವಿಲೇವಾರಿಯನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡುತ್ತಾರೆ. ವೇಸ್ಟ್ ಮ್ಯಾನೇಜಮೆಂಟ್ ಅಲ್ಲಿ ಒಂದು ಉದ್ಯಮ. ಅವರು ಎಲ್ಲವನ್ನೂ ವ್ಯಾಪಾರವನ್ನಾಗಿ ಮಾಡಿಕೊಳ್ಳುತ್ತಾರೆ.
ಜನಸಂಖ್ಯೆ ಕಡಿಮೆ ಇದ್ದು ದೇಶ ದೊಡ್ಡದಾಗಿದ್ದ ಮಾತ್ರಕೆ ಸ್ವಚ್ಛ ಇರಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ ಸಿಂಗಾಪುರ ಕೇವಲ 267 ಚ. ಮೈ ವಿಸ್ತೀರ್ಣವಿದೆ. ಅಲ್ಲಿ ಪ್ರತಿ ಚ.ಮೈಗೆ 16500 ಜನರಿದ್ದಾರೆ(45 ಲಕ್ಷ ಜನರು) ಆದರೂ ಜಗತ್ತಿನಲ್ಲಿಯೇ ಅತ್ಯಂತ ಸ್ವಚ್ಛ ದೇಶಗಳಲ್ಲಿ ಅದೂ ಒಂದು. ಜಪಾನ್ನ ವಿಸ್ತೀರ್ಣ ನಮಗಿಂತ ಹತ್ತು ಪಟ್ಟು ಕಡಿಮೆ. ಆದರೆ ಪ್ರತಿ ಚ.ಮೈಗೆ ಜನಸಂಖ್ಯೆ ನಮ್ಮಷ್ಟೇ ಇದೆ. ದುಬೈ 32 ಸಾವಿರ ಚ.ಮೈ ವಿಸ್ತೀರ್ಣದ ದೇಶ. ಅದರ ಜನಸಂಖ್ಯೆ ಕೇವಲ 25 ಲಕ್ಷ. 80 ಜನ ಪ್ರತಿ ಚ.ಮೈಗೆ ಇದ್ದಾರೆ. ಜನರ ಆದಾಯ 18 ಲಕ್ಷ ರೂಪಾಯಿ. ಆದರೂ ಇವೆಲ್ಲಾ ಇತರ ಮುಂದುವರಿದ ಪಾಶ್ಚಾತ್ಯ ದೇಶಗಳಿಗೆ ಸೆಡ್ಡು ಹೊಡೆಯುವಂತೆ, ಅತ್ಯಂತ ಸ್ವಚ್ಛ ದೇಶಗಳಲ್ಲೊಂದಾಗಿವೆ. ಕಾರಣ ಸ್ಪಷ್ಟ ಜನರ ಮೈಂಡ್ಸೆಟ್. ದೇಶ ನನ್ನದು ನಾನು ಈ ದೇಶದವನು ಎಂಬ ಉತ್ಕಟ ದೇಶಾಭಿಮಾನ ಅವರಲ್ಲಿಯೂ ನಮ್ಮಂತೆಯೇ ಇದೆ. ಆದರೆ ಅಷ್ಟು ಮಾತ್ರದಿಂದ ದೇಶ ಸ್ವಚ್ಛವಾಗುತ್ತದೆಯೇ. ಅವರಲ್ಲಿಯ ನಾಗರಿಕ ಪ್ರಜ್ಞೆಯೂ ಅಪಾರ. ಎಲ್ಲೆಂದರಲ್ಲಿ ಕಸ ಚೆಲ್ಲುವುದಿರಲಿ ಉಗುಳುವುದೂ ಇಲ್ಲ. ನಮ್ಮಲ್ಲಿ ಈ ಉಗುಳನ್ನು ತಡೆಯಲು ಆಯಕಟ್ಟಿನ ಜಾಗಗಳಲ್ಲಿರುವ ದೇವರಿಂದಲೂ ತಡೆಯಲಾಗಿಲ್ಲ. ದೇವರ ಮೇಲೆಯೇ ಉಗುಳಾಭಿಷೇಕವನ್ನು ಶ್ರದ್ಧೆಯಿಂದ ಮಾಡುತ್ತಾರೆ ಕೆಲವರು. ಇನ್ನು ಕೆಲವರಿಗೆ ನಮ್ಮ ದೇವರುಗಳೆಂದರೆ ಅಲಜರ್ಿ. ನಮ್ಮ ಮೇಲಿನ ವಿಷವನ್ನು ದೇವರ ಫೋಟೊಗಳ ಮೇಲೆ ಉಗುಳು ಕಾರುವುದರ ಮೂಲಕವೂ ತೀರಿಸಿಕೊಳ್ಳುವುದನ್ನು ನಾನು ಖುದ್ದಾಗಿ ನೋಡಿದ್ದೇನೆ.
ಆ ದೇಶಗಳಲ್ಲಿನ ನಾಗರಿಕರು ಕಸವನ್ನು ಅಚ್ಚುಕಟ್ಟಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ಬೇರೆಬೇರೆಯಾಗಿ ಸಂಗ್ರಹಿಸಿ, ಕಸವಿಲೇವಾರಿಯವರು ಬಂದಾಗ ಅಷ್ಟೇ ಶ್ರದ್ಧೆಯಿಂದ ಅವರಿಗೆ ಕೊಡುತ್ತಾರೆ. ನಮ್ಮಂತೆ ಅಕ್ಕಪಕ್ಕದ ಖಾಲೀ ಸೈಟುಗಳಲ್ಲಿ ಹಾಕುವುದಿಲ್ಲ. ಇನ್ನು ನಮ್ಮಲ್ಲಿ ಹಂದಿ ಮಾಲೀಕರಂತೂ ಈ ಖಾಲಿ ಸೈಟುಗಳ ಅಕ್ರಮ ಒಡೆಯರೆಂಬಂತೆ ಗಭರ್ೀಣಿ ಹಂದಿಗಳನ್ನು ರಾತ್ರೋರಾತ್ರಿ ತಂದು ಇಲ್ಲಿ ಬಿಟ್ಟು ಹೋಗುತ್ತಾರೆ. ಗಂಡು ಹಂದಿಗಳ ಸಂತಾನ ಹರಣ ಚಿಕಿತ್ಸೆಯನ್ನು ಹಾಡು ಹಗಲೇ ಎಲ್ಲರೆದುರೇ ಒಂದು ಬ್ಲೇಡಿನಿಂದ ಅತ್ಯಂತ ಕ್ರೂರವಾಗಿ ಮಾಡುತ್ತಾರೆ. ಪ್ರತಿರೋಧ ತೋರಿದರೆ ಯಥಾಪ್ರಕಾರ ಗೂಂಡಾಗಿರಿ! ಅಲ್ಲಿ ಸ್ಥಳೀಯ ಸಂಸ್ಥೆಗಳ ಕಸವಿಲೇವಾರಿ ಸಿಬ್ಬಂದಿ ನಿಯಮಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಸವನ್ನು ಸಂಗ್ರಹಿಸಿ ಸಂಸ್ಕರಣಾ ಕೇಂದ್ರಗಳಿಗೆ ಕೊಂಡೊಯ್ಯುತ್ತಾರೆ. ನಮ್ಮಂತೆ ತುಕ್ಕು ಹಿಡಿದ, ಮುರಿದು ಹೋದ ಕಸದ ಡಬ್ಬಿಗಳಾಗಲೀ ಮತ್ತೊಂದಾಗಲೀ ಇರುವುದಿಲ್ಲ. ನಮ್ಮಲ್ಲಿಯಂತೆ ವಾರಕ್ಕೊಮ್ಮೆ ಬಂದು ಇಲ್ಲಿಯ ಕಸವನ್ನು ಅಲ್ಲಿಯೂ, ಅಲ್ಲಿಯ ಕಸವನ್ನು ಇಲ್ಲಿಯೂ ಹಾಕುವುದಿಲ್ಲ. ನಮ್ಮಲ್ಲಿ ಹಳೆಯ ಕಟ್ಟಡಗಳ ಡೆಬ್ರಿಯನ್ನು ಊರಹೊರಗೆ ಇರುವ ಬಡಾವಣೆಯ ರಸ್ತೆ ಬದಿಗಳಲ್ಲಿ ರಾಜಾರೋಷವಾಗಿ ಹಾಕಿಹೋಗುತ್ತಾರೆ. ಇವೆಲ್ಲವೂ ಕಸದ ಮೂಲಗಳು. ಅಲ್ಲಿ ಹಂದಿ, ಬೀದಿ ನಾಯಿಗಳನ್ನಂತೂ ಕೇಳಲೇಬೇಡಿ. ಬಿಡಾಡಿ ದನಗಳಿದ್ದರೆ ಅವುಗಳನ್ನು ಕೊಂಡವಾಡಕ್ಕೆ ಸಾಗಿಸಿ, ಅವುಗಳ ಮಾಲೀಕರಿಗೆ ಭಾರೀ ದಂಡ ಹಾಕುತ್ತಾರೆ. ಹಿಂದೊಮ್ಮೆ ಬಿಹಾರದ ಮುಖ್ಯಮಂತ್ರಿಗಳೊಬ್ಬರು ಅವರ ರಾಜ್ಯದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಗಳಂತೆ ಮಾಡುವುದಾಗಿ ಹೇಳಿದ್ದರು. ಆದರೆ ಇಷ್ಟು ವರ್ಷಗಳ ನಂತರವೂ ಅಲ್ಲಿಯ ರಸ್ತೆಗಳ ಅವ್ಯವಸ್ಥೆಯನ್ನು ನೋಡಿದರೆ ಹೇಮಾಮಾಲಿನಿಯ ಕೆನ್ನೆಗಳಲ್ಲಿ ಅದು ಹೇಗೆ ಅಷ್ಟು ದೊಡ್ಡ ದೊಡ್ಡ ಗುಳಿಗಳಿವೆ ಅಂತ ಆಶ್ಚರ್ಯವಾಗದೇ ಇರದು. ನಮ್ಮಲ್ಲೊಬ್ಬರು ಬೆಂಗಳೂರನ್ನು ಸಿಂಗಾಪೂರ ಮಾಡುತ್ತೇನೆಂದಿದ್ದರು. ಆದರೆ ಬೆಂಗಳೂರಿನ ಕಸದ ಸಮಸ್ಯೆ ಟೈಮ್ಸ್ ಪತ್ರಿಕೆಯಲ್ಲಿ ಬರುವಷ್ಟು ಪ್ರಸಿದ್ಧಿ ಪಡೆಯಿತು. ಸಧ್ಯ ಸಿಂಗಾಪುರವು ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿಲ್ಲ. ನಮ್ಮ ಪುಣ್ಯ! ನೋಡಲಿಲ್ಲವೇ ಮೊನ್ನೆ ಬೆಂಗಳೂರಿನಲ್ಲಿ ಒಂದು ತಾಸು ಸುರಿದ ಭಾರೀ ಮಳೆಗೆ ಇಡೀ ಬೆಂಗಳೂರೇ ಕೊಚ್ಚಿ ಹೋದಂತೆ ಮಳೆ ನೀರು ಕೊಚ್ಚೆಯೊಡನೆ ಬೆರೆತು ಫಜೀತಿಯಾಗಿತ್ತು. ಅಸಮರ್ಪಕ ಟೌನ್ ಪ್ಲ್ಯಾನಿಂಗ್, ಅಕ್ರಮ ಕಟ್ಟಡಗಳು, ಹೊಣೆಗೇಡಿ ನೌಕರ ಸಮೂಹ, ನಿರ್ಲಕ್ಷ ಪ್ರಜೆಗಳು ಎಲ್ಲವೂ ಸೇರಿ ಇಂತಹ ಅನಾಹುತಗಳಾಗುತ್ತವೆ. ಜನಸಂಖ್ಯೆಯ ವೃದ್ಧಿಯನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡ ಕೆಲವರು ಕಸದಂತಹ ಸಮಸ್ಯೆ ಹೆಚ್ಚಾಗಲು ಕಾರಣವೆಂದರೆ ಅನೇಕರಿಗೆ ಸಿಟ್ಟು ಬರಬಹುದು.
ಕೆಲವು ವರ್ಷಗಳ ಹಿಂದೆ ಖ್ಯಾತ ಹಾಲಿವುಡ್ ನಟ ಜಾಕೀ ಚಾನ್ ಹಂಪಿಗೆ ತಮ್ಮ ಚಿತ್ರದ ಶೂಟಿಂಗ್ಗಾಗಿ ಬಂದಿದ್ದರು (ಚಿತ್ರ: ಮಿಥ್). ಅಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗುಟ್ಕಾ ಚೀಟಿಗಳು ಬಾಟಲ್ಗಳ ಕಸವನ್ನು ಕಂಡು ಬೇಜಾರುಪಟ್ಟುಕೊಂಡ ಅವರು ಸ್ವತಃ ಕಸವನ್ನು ಗುಡಿಸಿದ ವರದಿಗಳು ಪೇಪರುಗಳಲ್ಲಿ ಬಂದಿತ್ತು. ನಮ್ಮ ಕಸದ ಸಮಸ್ಯೆಯನ್ನು ಪ್ರಧಾನಮಂತ್ರಿಗಳೆ ಇತ್ತೀಚಿನ ಅಮೇರಿಕಾ ಪ್ರವಾಸದಲ್ಲಿ ಅಲ್ಲಿನ ಇಂಡಿಯನ್-ಅಮೇರಿಕನ್ ಜನರ ಗಮನಕ್ಕೆ ತಂದರು. ದೇಶಾದ್ಯಂತ ಸ್ವಚ್ಛತೆಗಾಗಿ ಅಭಿಯಾನವನ್ನೇ ಶುರು ಮಾಡಿದರು. ಎಲ್ಲ ಸಮಸ್ಯೆಗೂ ಪರಿಹಾರವಿದೆ. ಎಲ್ಲರೂ ಒಂದಾಗಿ ಈ ಮಾರಿಯ ಹುಟ್ಟಡಗಿಸಬಹುದು. ಮಕ್ಕಳಿಗೆ ಈ ಕುರಿತು ಹಿರಿಯರು ತಿಳಿಹೇಳಬೇಕು. ಚಾಕೊಲೇಟ್, ಚಿಪ್ಸ್ ತಿಂದು ಅವುಗಳ ರ್ಯಾಪರನ್ನು ಕಸದ ತೊಟ್ಟಿಗೆ ಹಾಕಿದರೆ ಮಾತ್ರ ಕೊಡಿಸುತ್ತೇನೆಂದು ಹೇಳಬೇಕು. ಶಾಲೆಗಳು ಇದಕ್ಕೆ ಸೂಕ್ತ ವೇದಿಕೆ. ಯಾಕೆಂದರೆ ಮಕ್ಕಳಿಗೆ ಟೀಚರುಗಳ ಮಾತು ವೇದವಾಕ್ಯ. ಪೇಟೆಗೆ, ಪ್ರವಾಸಕ್ಕೆ ಹೋಗುವಾಗ ಎಲ್ಲರೂ ಜೊತೆಯಲ್ಲೊಂದು ಚೀಲವನ್ನು ತಪ್ಪದೇ ಇಟ್ಟುಕೊಳ್ಳಬೇಕು. ಅದರಲ್ಲಿ ಪೇಪರು, ಬಾಟಲ್ಲು ರ್ಯಾಪರುಗಳನ್ನು ತುಂಬಿಕೊಂಡು ಕಸದ ತೊಟ್ಟಿಗಳು ಕಂಡಾಗ ತಪ್ಪದೇ ಅದರಲ್ಲಿ ಹಾಕಬೇಕು. ರೈಲಿನ ಬೋಗೀಗಳಲ್ಲಿ ತಪ್ಪದೇ ಕಸದ ಡಬ್ಬಿಗಳನ್ನು ಇಡಬೇಕು. ಪೇಟೆ, ತರಕಾರಿ ಅಂಗಡಿಗಳ ಮಾಲೀಕರು ‘ವೇಸ್ಟನ್ನು’ ತಪ್ಪದೇ ಕಸದ ಡಬ್ಬಿಗೇ ಹಾಹುವ ಶರತ್ತಿನ ಮೇಲೆ ಅವರಿಗೆ ಲೈಸೆನ್ಸ್ ನೀಡಬೆೇಕು. ಆಹಾರದ ಪೊಟ್ಟಣಗಳು ನಮ್ಮದಾದಗಿರುವಂತೆಯೇ ಅದರ ರ್ಯಾಪರ್ ಕೂಡಾ ನಮ್ಮದೆಂದುಕೊಂಡು ಅದರ ವಿಲೇವಾರಿ ಕಡೆಗೆ ಗಮನ ಹರಿಸಿದಲ್ಲಿ ಕಸವೊಂದು ಸಮಸ್ಯೆಯೇ ಅಲ್ಲ! ‘ನಹೀ ಚಲ್ತಾ ಹೈ’ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಲೇ ಬೇಕು. ಅದು ಇಂದಿನ ಜರೂರತ್ತು. ಸ್ವಚ್ಛ ಭಾರತವು ಕೇವಲ ಒಂದು ದಿನದ ‘ಅಭಿಯಾನ’ವಾಗಬಾರದು. ಅದು ನಮ್ಮೆಲ್ಲರ ನಿರಂತರ ‘ಅಭಿಮಾನ’ವಾಗಬೇಕು. ಇಲ್ಲದಿದ್ದರೆ ತುಚ್ಛ ಭಾರತವಾಗಿ ಜಗತ್ತಿನ ಕಣ್ಣಲ್ಲಿ ನಾವೂ ಕಸವಾಗಬೇಕಾದೀತು!
 
 
 

‍ಲೇಖಕರು G

13 October, 2014

1 Comment

  1. Prabhakar M. Nimbargi

    ಸ್ವಚ್ಛ ಭಾರತವು ಕೇವಲ ಒಂದು ದಿನದ ‘ಅಭಿಯಾನ’ವಾಗಬಾರದು. ಅದು ನಮ್ಮೆಲ್ಲರ ನಿರಂತರ ‘ಅಭಿಮಾನ’ವಾಗಬೇಕು. True, this is our duty. We must do our duty in every way as we insist for our civic rights. Then only we can evolve into a civilized society.Sir, you have provided a good analysis of all the data, regarding origin of the solid wastes. Thanks.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading