ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಬರೆದ ಯುಗಾದಿ ಲಹರಿ

ಹಾಡೆಲೆ ಕೋಗಿಲೆ ಕುಹೂ..ಕುಹೂ..

– ಸ್ಮಿತಾ ಅಮೃತರಾಜ್

ಯುಗಾದಿ ಬರುವ ಮುಂಚೆಯೇ ತಾನು ಹಳೆಯ ವ್ಯಥೆಗಳನ್ನೆಲ್ಲಾ ಕಳಚಿಕ್ಕೊಂಡು,ಎಲ್ಲ ಮರೆತು ಲವಲವಿಕೆಯಿಂದ ಸಿಂಗರಿಸಿಕ್ಕೊಂಡು ನಿಲ್ಲಬೇಕೆನ್ನುವ ಹಪಾಹಪಿಕೆಯಲ್ಲಿ ಈ ಸಲ ಹಿಂದೆಂದಿಗಿಂತಲೂ ತುಸು ಹೆಚ್ಚೇ ಸಿಂಗರಿಸಿಕ್ಕೊಂಡು,ತೆಳುಗಾಳಿಗೆ ವಯ್ಯಾರದಿಂದ ಗಲಗಲನೆ ಎಲೆಯಾಡಿಸಿಕ್ಕೊಂಡು ಸಂಭ್ರಮ ಪಡುತ್ತಿರುವ ಹಿತ್ತಲ ಮಾಮರ ನೋಡುವಾಗಲೆಲ್ಲಾ ಯುಗಾದಿ ಇನ್ನೇನು ನಾಳೆಯೇ ಬಂದು ಬಿಡ್ತು ಅನ್ನುವಷ್ಟರ ಮಟ್ಟಿಗೆ ಅಚ್ಚರಿ ಹುಟ್ಟಿಸುತ್ತದೆ.ಮಾವಿನ ಮರದ ಚಿಗುರು ಹೂವು ನೋಡುತ್ತಾ ಯುಗಾದಿ ದಿನವನ್ನು ಬೆರಳೆಣಿಕೆ ಹಾಕುತ್ತಾ ಇರುವಾಗ ಪಕ್ಕನೆ ತನ್ನಿಂತಾನೆ ಕಹಿ ಬೇವಿನ ಗಿಡವೂ ನೆನಪಿನಲೆಯೊಳಗೆ ನುಗ್ಗಿ ಬರುತ್ತದೆ.ಏನೇ ಆಗಲಿ ಕಾಲ ಜಿದ್ದಿಗೆ ಬಿದ್ದಂತೆ ಶರವೇಗದಲ್ಲಿ ಓಡುತ್ತಿದ್ದರೂ ಯುಗಾದಿ ದಿನ ಮಾತ್ರ ಬೇವು-ಬೆಲ್ಲ ತಿನ್ನುವ ಸಂಪ್ರದಾಯವನ್ನು ಮಾತ್ರ ಮುರಿಯದೆ ಶಾಸ್ತ್ರಕ್ಕೆಂಬಂತಾದರೂ ಬಳಸುವ ಪರಿಪಾಠ ಮಾತ್ರ ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಹೆಜ್ಜೆ ತಪ್ಪದಂತೆ ಎಚ್ಚರಿಕೆಯಿಂದ ನಡೆದುಕ್ಕೊಂಡು ಬರುತ್ತಿದೆ.ಆದರೆ ಕಹಿ ಎಂದರೆ ಎಲ್ಲರೂ ಮಾರು ದೂರ.ತಮಾಷೆಯೆಂದರೆ ಪ್ರತೀ ಬಾರಿ ಯುಗಾದಿ ಹತ್ತಿರ ಬಂತು ಅನ್ನುವಾಗಲೇ ಬೇವಿನ ನೆನಪಾಗಿ ಅದರ ಪ್ರಾಮುಖ್ಯತೆ ಅರಿವಾಗೋದು.ಬೇವಿನ ಗೈರು ಹಾಜರಿಯಲ್ಲಿ ಆ ದಿನದ ಹಬ್ಬಕ್ಕೆ ಅರ್ಥವೇ ಇಲ್ಲದಂತಾಗಿ ಬಿಡುತ್ತದೆ.
ಆ ದಿನವಂತೂ ಬೇವಿನೆಲೆಗಳಿಗೆ ಅದೆಷ್ಟು ಬೇಡಿಕೆ ಅಂದರೆ ಒಮ್ಮೊಮ್ಮೆ ಒಂದು ಗೆರೆ ಬೇವಾದ್ರು ಸಿಗೋದು ಕಷ್ಟ ಎನ್ನಿಸುವಷ್ಟರಮಟ್ಟಿಗೆ.ಬೇವು-ಬೆಲ್ಲ ಎರಡೂ ಸಮತೂಗಿಸಿಕ್ಕೊಂಡು ಯುಗಾದಿ ತೇರನ್ನು ಎಳೆಯುವ ಪರಿಗೆ ಮನಸ್ಸು ಅವಕ್ಕಾಗಿ ತಲೆದೂಗಿಬಿಡುತ್ತದೆ.ಹಾಗಾಗಿ ಆ ದಿನ ಬೇವು ಬೇಡೋದು,ಕೇಳಿ ಇಲ್ಲವೆನ್ನಿಸ್ಸಿಕ್ಕೊಂಡು ಮನಸ್ಸು ಮತ್ತೆ ಕಹಿಯಾಗೋದು ಇದ್ಯಾವ ರಗಳೆಯೇ ಬೇಡವೆಂದು ಹಿತ್ತಲಲ್ಲಿ,ತೋಟದ ಮೂಲೆಯಲ್ಲಿ ಊರಿಟ್ಟ ಕಹಿಬೇವು ತನ್ನಷ್ಟಕ್ಕೆ ತಾನೇ ಸೊಂಪಾಗಿ ಬೆಳೆದು ನಳ ನಳಿಸಿಕ್ಕೊಂಡಿರುತ್ತಿದೆ.ಯಾರ ಕೈಯಿಂದಲೂ ಮುಟ್ಟಿಸಿಕೊಳ್ಳದೇ,ನೇವರಿಸಿಕೊಳ್ಳದೇ ,ಚಿವುಟಿಸಿಕೊಳ್ಳದೇ ಅಸ್ಪೃಶ್ಯವಾಗಿದ್ದರೂ ತನ್ನ ಪಾಡಿಗೆ ತಾನು ಯಾರ ಹಂಗಿಗೂ ಬೀಳದೆ ಲಕಲಕಿಸಿಕ್ಕೊಂಡಿರುತ್ತದೆ.ಯಾವಾಗ ಯುಗಾದಿ ಹತ್ತಿರ ಬಂತೋ ಕೊಂಬೆಗಳೆಲ್ಲಾ ಒಣಗಿಕ್ಕೊಂಡು, ಎಲೆಗಳೆಲ್ಲಾ ಉದುರಿಕ್ಕೊಂಡು,ತುದಿಯಲ್ಲಿ ಮಾತ್ರ ಒಂದಷ್ಟು ಹಸಿರು ಗೆರೆ ಗುರುತಿಗೆಂಬಂತೆ ಬಿಟ್ಟುಕ್ಕೊಂಡು,ಈ ಸಲ ಇರುವ ಚೂರು ಪಾರು ಹಸಿರೆಲೆಯನ್ನು ನೀವು ಕಿತ್ತಿರೋ..ನಾನು ಇಷ್ಟೂ ಉಳಿಯಲಾರೆ ಅಂತ ಧಮಕಿ ಹೊಡೆಯುವಂತೆ ತೋರುತ್ತಿದೆ.ಇಷ್ಟು ದಿನವೂ ನಗಣ್ಯವಾಗಿದ್ದ ಬೇವು ಈಗ ಒಮ್ಮಿಂದೊಮ್ಮೆ ಅತಿ ಗಣ್ಯವೆನ್ನಿಸಿ ಬಿಡುತ್ತದೆ.ಯಾವುದೂ ಇಲ್ಲಿ ನಗಣ್ಯವೂ ಅಲ್ಲ,ನಿಷ್ಕೃಷ್ಟವೂ ಅಲ್ಲ.ಒಂದೊಮ್ಮೆ ಅದು ಅತಿ ಅಮೂಲ್ಯವೆನ್ನಿಸಲೂ ಬಹುದು ಅಂತ ಮನಸ್ಸು ಆಗಲೇ ವೇದಾಂತದ ಪಾಠ ತಕರ್ಿಸಲು ಶುರುಮಾಡಿ ಬಿಡುತ್ತೆ.ಯಾವುದೋ ವೇದನೆಯ ಗುಂಗಿನಲ್ಲಿ ಮುದುರಿಕೊಂಡಿದ್ದ ಮನಸ್ಸಿನ ಹಾಳೆಗಳೆಲ್ಲಾ ಈಗ ನೀಟಾಗಿ ಬಿಡಿಸಿಕ್ಕೊಂಡು ಹಾಯೆನ್ನಿಸುತ್ತದೆ.ಗುಡ್ಡೆ ಹಾಕಿಕ್ಕೊಂಡ ಯಾವುದೋ ಕಾರಣಗಳೆಲ್ಲಾ ವಿನಾಕಾರಣ ತಾಳೆ ಹಾಕಿಕ್ಕೊಂಡು ಮನಸ್ಸು ಹಗುರವಾಗಿ ಬಿಡುತ್ತದೆ.

ಯುಗಾದಿ ದಿನ ಬೆಳ್ಳಂಬೆಳಗ್ಗೆಯೇ ಎದ್ದು ಸ್ನಾನ ಮಾಡಿ, ದೇವರ ಗುಡಿಯ ಮುಂದೆ ಹಚ್ಚಿಟ್ಟ ಹಣತೆಯ ಎದುರು ಇರಿಸಿದ ಬೇವು-ಬೆಲ್ಲ ತಿಂದರೆ ಖಾಯಿಲೆ,ಕಸಾಲೆ,ದು:ಖ,ದುಗುಡಗಳೆಲ್ಲಾ ಹೇಳದೇ ಕೇಳದೇ ಪರಾರಿಯಾಗಿ ಬಿಡುತ್ತೆ ಅಂತ ಹಿರಿಯರೆಲ್ಲಾ ನಮಗೆ ಬೋಧಿಸಿ ಭೋಧಿಸಿ ತಲೆ ತುಂಬಿಸಿದ್ದ ಕಾರಣ,ನಮ್ಮ ಎಳೆಯ ಬುದ್ದಿಯೂ ಕೂಡ ಅದುವೇ ಸತ್ಯ ಅಂತ ಶೋಧಿಸಿ,ಅತೀವ ನಂಬಿಕೆಯಲ್ಲಿ ಅಷ್ಟೂ ಬೇವಿಗೆ ನಾವುಗಳು ಸ್ಪಧರ್ೆಗಿಳಿದವರಂತೆ ಇಷ್ಟೇ ಬೆಲ್ಲ ಹರವಿಕ್ಕೊಂಡು, ಕಹಿ ಕಹಿಯಾಗಿ ಉಗಿಯುವಂತಾದರೂ ಚೂರೂ ತೋರಿಸಿಕೊಳ್ಳದೆ,ಒಮ್ಮೆಗೇ ಏನೋ ಸಾಧಿಸಿದವರಂತೆ ಗುಳುಂ ಅಂತ ಸ್ವಾಹ ಮಾಡಿ ವಿಜಯದ ನಗೆ ಬೀರುತ್ತಿದ್ದೆವು.ಈ ಸಲದ ಪರೀಕ್ಷೆ,ಓದು, ಮಾಕ್ಸರ್್,ಪೆಟ್ಟು ಎಲ್ಲವನ್ನೂ ಯುಗಾದಿ ಮಡಿಲಿಗೇ ಒಪ್ಪಿಸಿ,ಅಪಾರ ನಂಬಿಕೆಯಲ್ಲಿ ನಿರುಮ್ಮುಳರಾಗಿಬಿಡುತ್ತಿದ್ದೆವು.
ಈ ಬೇವು-ಬೆಲ್ಲ ತಿನ್ನುವುದಕ್ಕೂ ಮೊದಲು ಯುಗಾದಿ ಬಂತೆಂಬುದಕ್ಕೆ ಪೀಠಿಕೆ ,ನನ್ನಜ್ಜಿ ಮಾಡುತ್ತಿದ್ದ ಕೆಲಸಗಳಿಂದಲೇ ಗೊತ್ತು ಹಿಡಿಯಬಹುದಾಗಿತ್ತು.ಆಕೆ ಹಬ್ಬಕ್ಕೆ ಮೊದಲೇ ಮನೆಯನ್ನು ಒಪ್ಪ ಓರಣವಾಗಿಸಲು ಇನ್ನಿಲ್ಲದಂತೆ ಹೆಣಗಾಡುತ್ತಿದ್ದಳು.ಸೀಮೆಂಟ್ ಕಾಣದ ಸೆಗಣಿ ಸಾರಿಸಿದ ಮಣ್ಣಿನ ನೆಲವನ್ನು, ಅಡುಗೆ ಮನೆಯ ಪರಿಕರವಾದ ರೊಟ್ಟಿ ಹಿಟ್ಟಿನ ಸಟ್ಟುಗವನ್ನೇ ಸಲಕರಣೆಯಾಗಿ ಬಳಸಿಕ್ಕೊಂಡು,ಒಂದೊಂದೇ ಕೋಣೆಯನ್ನು ಕೆರೆಸಿ ತೆಗೆದು ಮತ್ತೆ ನಯವಾಗಿ ಮಣ್ಣು ಮೆತ್ತಿ ಕಲ್ಲಿನಿಂದ ಉಜ್ಜಿ ಅರೆದು,ನುಣ್ಣಗೆ ಹೊಳಪೇರಿಸಿ,ಸೆಗಣಿ ಸಾರಿಸಿ ,ಬಗ್ಗಿಸಿದ ಬೆನ್ನನ್ನು ಒಮ್ಮೆ ನೇರಗೊಳಿಸಿದಳೆಂದರೆ ಮಹತ್ತರವಾದ ಅರ್ಧ ಕೆಲಸ ಮುಗಿಯಿತೆಂಬ ಸಂತೃಪ್ತಿಯ ಭಾವ ಆಕೆಯ ಮೊಗದಲ್ಲಿ ಗೋಚರಿಸುತ್ತಿತ್ತು.ಅಡುಗೆ,ಮನೆಕೆಲಸ,ಮಕ್ಕಳು,ಮೊಮ್ಮಕ್ಕಳ ಚಾಕರಿಯ ಜೊತೆಗೆ ಅಷ್ಟು ಶ್ರದ್ಧೆಯಿಂದ,ಅಚ್ಚುಕಟ್ಟುತನದಿಂದ ಒಂದು ತಪಸ್ಸಿನಂತೆ ಕೆಲಸ ಮಾಡಲು ಎಲ್ಲಿಂದ ತಾಳ್ಮೆ ಅವಾಹಿಸಿಕೊಳ್ಳುತ್ತಿದ್ದಳೋ ಗೊತ್ತಿಲ್ಲ.ಬಹುಷ: ಯುಗಾದಿಯೇ ಇವೆಲ್ಲವನ್ನು ಆಕೆಗೆ ಬಳುವಳಿಯಾಗಿ ಕೊಟ್ಟಿರಬೇಕೆಂದು ಈಗ ಅನ್ನಿಸುತ್ತದೆ.ಅಂತೂ ಪ್ರತೀ ವರುಷವೂ ತಪ್ಪದೇ ಹಾಜರಿ ಹಾಕುವ ಯುಗಾದಿಗೆ ನವೀಕರಣಗೊಳ್ಳುತ್ತಿದ್ದ ಅಜ್ಜಿ ಮನೆಯಲ್ಲಿ ಸಾರಣೆ ಕೆಲಸಕ್ಕೆ ನನ್ನಜ್ಜಿಯೇ ಗಾರೆ ಮೇಸ್ತ್ರ್ರಿ.ಉಳಿದಂತೆ ಟಚ್ ವುಡ್ಗಳ ಕಾಲ ಅದಲ್ಲ.
ಹಾಗಾಗಿ ಮರದ ಸಾಮಾನುಗಳಾದ ಮಂಚ,ಬೆಂಚು,ಮಣೆ,ಕುಚರ್ಿ ಹೀಗೆ ವಗೈರ ವಗೈರ…ಗಳನ್ನು ಕಪ್ಪನೆ ಮಿರ ಮಿರನೆ ಮಿಂಚಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ.ಆದರಿಂದ ಮನೆಯೊಳಗಿನ ಪಿಠೋಪಕರಣಗಳನ್ನೆಲ್ಲಾ ಹೊರಗೆ ಅಂಗಳಕ್ಕೆಳೆದು ಇಟ್ಟು ಬಿಡುತ್ತಿದ್ದಳು.ಒಂದು ಕಟ್ಟು ಬಾಜಿಗನ ಮರದ ಸೊಪ್ಪನ್ನ ತಂದು ಜೊತೆಗೆ ಒಂದು ಬಕೇಟು ನೀರು ಕೊಟ್ತು ಮಕ್ಕಳೆಲ್ಲರನ್ನೂ ಆ ಕೆಲಸಕ್ಕೆ ಹಚ್ಚಿ ಬಿಡುತ್ತಿದ್ದಳು. ನಾವುಗಳೆಲ್ಲಾ ಸೇರಿಕ್ಕೊಂಡು ಒಬ್ಬರನ್ನೊಬ್ಬರು ಮೀರಿಸಬೇಕೆನ್ನುವ ತರಾತುರಿಯಲ್ಲಿ,ಬಾಜಿಗದ ಸೊಪ್ಪಿನಿಂದ ಮರದ ಸಾಮಾನುಗಳನ್ನೆಲ್ಲಾ ಉಜ್ಜಿ ತಿಕ್ಕಿ ತೊಳೆಯುವಾಗ ,ಒಂದು ವರ್ಷವಿಡೀ ಶೇಖರಣೆಗೊಂಡಿದ್ದ ಕೊಳೆಯೆಲ್ಲಾ ಸೊಪ್ಪಿನ ದೆಸೆಯಿಂದ ವಿಲೇವಾರಿಯಾಗಿ ಮರಮುಟ್ಟುಗಳೆಲ್ಲಾ ಶುಭ್ರವಾಗಿ ಹೊಳಪೇರುವಾಗ ಆಕೆ ಆ ಕೊರತೆಯನ್ನು ನೀಗಿಕೊಳ್ಳುತ್ತಿದ್ದಳು.ಮಾರನೆ ದಿನ ನಸುಕಿಗೇ ಸ್ನಾನ ಮಾಡಿ ಹೊಸ ಉಡುಪು ಧರಿಸಿ,ಬೇವು-ಬೆಲ್ಲ ಸೇವಿಸುವುದಷ್ಟೇ ನಾಳೆಗೆಂಬಂತೆ ಬಾಕಿ ಉಳಿದಿರುವ ಗಹನವಾದ ಸಂಗತಿ.ಮತ್ತೆ ಆವೊತ್ತು ಸವಿಯುವ ಪಾಯಸಕ್ಕೆ ಹೆಚ್ಚು ರುಚಿ.
ಕ್ಯಾಲೆಂಡರ್ ಪುಟ ತಿರುವುತ್ತಿದ್ದಂತೇ ಕೆಂಪು ಬಣ್ಣದಲ್ಲಿ ಯುಗಾದಿಗೆ ರಜೆ ಮೀಸಲಿಟ್ಟದ್ದು ನೋಡುತ್ತಿದ್ದಂತೆಯೇ ಇನ್ನೇನು ಹಬ್ಬಕ್ಕೆ ಕೆಲವೇ ಕೆಲವು ದಿನ ಉಳಿದಿದೆಯೆಂದು ಅರಿವಾದೊಡನೆಯೇ ಅಜ್ಜಿ, ಬೇವು,ಬಾಜಿಗನ ಸೊಪ್ಪು ಎಲ್ಲವೂ ಏಕಕಾಲದಲ್ಲಿ ಒತ್ತರಿಸಿ ಬಂದು ನೆನಪಾಗಿ ನೇವರಿಸಿ ಒಂದಷ್ಟು ತಯಾರಿ ನಡೆಸಿ ಮಕ್ಕಳಿಗೂ ಹಬ್ಬದ ಸಂಭ್ರಮ ಉಣಬಡಿಸೋಣವೆಂದರೆ..ಈ ಹಾಳು ಶುಚಿತ್ವದಿಂದಾಗಿ ಆಗೆಂದರಾಗ ಪೊರಕೆ,ಬ್ರಶ್,ವಾಕ್ಯೂಮ್ ಕ್ಲೀನರ್ಗಳು ಗೋಡೆ,ನೆಲ,ಕಿಟಕಿಯ ಮೂಲೆ ಮೂಲೆಯೂ ಬಿಡದೆ ಕಣ್ಣು ಹಾಯಿಸುತ್ತಲೇ ಕಾವಲುಕಾಯುತ್ತಿರುವಾಗ,ಜೇಡಗಳಿಗೆ ಬಲೆ ಪೂತರ್ಿಗೊಳಿಸಲು ಪುರುಸೊತ್ತೇ ಸಿಗುತ್ತಿಲ್ಲವೆಂದು ಮೂಲೆಯಲ್ಲಿ ಕಣ್ಣು ನೆಟ್ಟು ಕೆಕ್ಕರಿಸಿ ನೋಡುತ್ತಾ ಶಪಿಸುತ್ತಿದೆ.ಬೆಳ್ಳಗೆ ಕನ್ನಡಿಯಂತೆ ಹೊಳೆಯುವ ಖಾಯಂ ಮಾರ್ಬಲ್,ಟೈಲ್ಸ್ಗಳ ಮುಂದೆ ಸಟ್ಟುಗಕ್ಕೆ ಎಲ್ಲಿಯ ಕೆಲಸ?. ವಾನರ್ೀಶ್,ಟಚ್ ವುಡ್ ಗಳ ಲೇಪಿಸಿ ಹೊಳಪು ಕಳೆದುಕೊಳ್ಳದ ಪಿಠೋಪಕರಣಗಳ ನಡುವೆ ಬಾಜಿಗನ ಸೊಪ್ಪನ್ನು ಎಲ್ಲಿ ಉಪಯೋಗಿಸಬೇಕೆಂದು ಗೊತ್ತಾಗದೆ ಗೊಂದಲವಾಗುತ್ತಿದೆ.
ಆದರೂ ಅವೆಲ್ಲದರ ನಡುವೆ ಅಂದು ಐದನೆಯೋ , ಆರನೆಯೋ ತರಗತಿಯಲ್ಲಿ ಕಲಿತ ವರಕವಿ ಬೇಂದ್ರೆಯವರ ಕವಿತೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ.. ಇಂದಿಗೂ ಮರೆತೆನೆಂದರೂ ಮರೆಯಲಾಗುತ್ತಿಲ್ಲ.ಒಂದೇ ಒಂದು ಜನ್ಮದಲ್ಲಿ..ಒಂದೇ ಬಾಲ್ಯ ಒಂದೆ ಹರೆಯ..ನಮಗದಷ್ಟೆ ಏತಕೆ? ಕನ್ನಡ ಟೀಚರ್ ಅರ್ಥ ಬಿಡಿಸಿ ಹೇಳುತ್ತಿದ್ದಾಗ ಸಾಹಿತ್ಯಕ್ಕಿರುವ ಶಕ್ತಿಯನ್ನೂ, ಕವಿತೆಗಿರುವ ಅರ್ಥವ್ಯಾಪಿಯನ್ನೂ ಯುಗಾದಿ ಜೊತೆಗೆ ಸಮೀಕರಿಸುತ್ತಾ ಹೊಸತೊಂದು ಲೋಕ ಮೆಲ್ಲನೆ ನಮ್ಮೊಳಗೆ ಎಳೆ ಎಳೆಯಾಗಿ ತೆರೆಯುತ್ತಾ ಹೋದದ್ದು ಆಗಲೇ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಿ ಬರುತ್ತಿದೆ..ಅಂತ ಗುನುಗುನಿಸುವ ಮನಸ್ಸಾಗುವಾಗ ಈ ಹೊತ್ತಲ್ಲಿ ಮತ್ತೆ ಸದ್ದಿಲ್ಲದೆ ಯುಗಾದಿ ಹೊಸಿಲಾಚೆ ಬಂದು ನಿಂತಿದೆ.
ಹಿತ್ತಲ ಮಾಮರ ಗಿಲಕಿಯಾಡುವ ಸದ್ದಿಗೆ ಒಂಟಿ ಕೋಗಿಲೆಯೊಂದು ದಿನ ನಿತ್ಯ ತಪ್ಪದೆ ಬಂದು ಕುಳಿತು ಹೋಗುತ್ತಿದೆ.ಸಂಪ್ರದಾಯವನ್ನು ಬಿಡದೇ ಆಚರಿಸಿಕ್ಕೊಂಡು ಬರುವ ತಹತಹಿಕೆ ಅದಕೂ ಇದ್ದಂತಿದೆ.ದಿನವೂ ಬಂದು ಕೊಂಚ ಹೊತ್ತು ಧ್ಯಾನಿಸಿ ರೆಂಬೆ ಕೊಂಬೆಗಳ ಮೇಲೆಲ್ಲಾ ಕುಣಿದು ಕುಪ್ಪಳಿಸಿ ಹಾರಿ ಹೋಗುವುದ ನೋಡುತ್ತಲೇ ಇರುವೆ.ಕುತೂಹಲದಿಂದ ಕಿವಿಯಾನಿಸಿದರೂ ಒಂದು ದಿನವೂ ಕುಹೂ..ಕುಹೂ ಅಂತ ರಾಗವೆಳೆದು ದನಿ ಹೊರಡಿಸಿದ್ದು ಕೇಳಿಸಲೇ ಇಲ್ಲ.ಇದೇ ಹೊತ್ತಲ್ಲಿ ಕನ್ನಡ ಪಠ್ಯದ ನಡುವೆ ಮುಖ ಹುದುಗಿಸಿಕ್ಕೊಂಡು ನನ್ನ ಮಗ ಹಸಿರಿನ ಮರದಲಿ ತಳಿರಿನ ಮರೆಯಲಿ ಹಾಡೆಲೆ ಕೋಗಿಲೆ ಕುಹೂ..ಕುಹೂ ಅಂತ ಕಂಠ ಪಾಠ ಮಾಡುತ್ತಿದ್ದಾನೆ.ನಾನೂ ಮಾಮರದ ಕಡೆಗೇ ನೋಡುತ್ತಾ ಹಾಡೆಲೆ ಕೋಗಿಲೆ ಕುಹೂ..ಕುಹೂ ಅಂತ ಭಿನ್ನವಿಸಿಕೊಳ್ಳುವಾಗಲೆಲ್ಲಾ ಅದು ಮುನಿಸಿನಿಂದ ಹಾರಿ ಹೋಗುತ್ತಿದೆ.

‍ಲೇಖಕರು G

15 April, 2015

3 Comments

  1. VASANHTH KUMAR

    ಚೆನ್ನಾಗಿ ಬರೆದಿದ್ದೀರಿ…ಅಭಿನಂದನೆಗಳು

  2. sangeetha raviraj

    ತುಂಬಾ ಚೆನ್ನಾಗಿದೆ ಸ್ಮಿತಕ್ಕ

  3. Bandesab Megeri

    ಅಕ್ಕ, ನಿಮ್ಮ ಬರಹ ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading