ಸ್ಮಿತಾ ಅಮೃತರಾಜ್‍ಗೆ ಶುಭವಾಗಲಿ…

ವಸುಂಧರಾ.ಕೆ.ಎಂ

ಪ್ರೀತಿಯ ಸ್ಮಿತಾ…

ಸ್ಮಿತಾ ಅಮೃತರಾಜ್ ಎಂಬ ಆ ನಿಮ್ಮ ಹೆಸರೇ ಆಕರ್ಷಕವಾಗಿತ್ತು. ಜೊತೆಗೆ ನಿಮ್ಮ ಸರಳ ಚೆಲುವಿನ ಚಿತ್ರವೂ… ಸ್ಮಿತಾ ನನಗೂ ಈ ಹೆಸರನ್ನು ಇಡಬೇಕೆಂದು ನನ್ನ ಹಿರಿಯರು ಇಷ್ಟಪಟ್ಟಿದ್ದರಂತೆ. ಆದರೆ ಕಾರಣಾಂತರಗಳಿಂದ ನನಗೆ ವಸುಂಧರಾ ಎಂದು ನಾಮಕರಣವಾಗಿದೆ. ಇರಲಿ, ನಾನು ಪ್ರಸ್ತಾಪಿಸಬೇಕು ಎಂದಿರುವ ವಿಚಾರ ಇದಲ್ಲ.

ಸ್ಮಿತಾ, ನಗರ ಜೀವನದಿಂದ ಬಹಳ ದೂರದಲ್ಲಿ ಹಸು, ಹಸಿರು, ಮನೆ- ವಾರ್ತೆಗಳೊಂದಿಗೆ ಬದುಕುತ್ತಿರುವ ನಿಮ್ಮ ಬದುಕನ್ನು ನಾನು ಕನಸುತ್ತಿರುತ್ತೇನೆ… ನನಗೆ ಸ್ಪಷ್ಟವಾಗಿ ಗೊತ್ತು ಕೃಷಿಕ ಮಹಿಳೆಯಾಗಿರುವುದು, ಮನೆಯ ಪ್ರತೀ ಕೆಲಸವನ್ನೂ ನಾವೇ ಮಾಡಿಕೊಂಡು, ಎಲ್ಲವನ್ನೂ ಸಂಬಾಳಿಸುತ್ತಾ, ಸಂತೈಸುತ್ತಾ ಬದುಕುವುದು ಅಷ್ಟು ಸುಲಭವಲ್ಲವೆಂದು. ನನ್ನಂತಹವಳಿಗೆ ಅದೆಲ್ಲಾ ಚೆಂದ ಕಾಣಿಸುವುದು ಸಿನೆಮಾ ಪರದೆಗಳ ಮೇಲೆ. ನನ್ನದೇ ಕಲ್ಪನೆಯ ಕಾವ್ಯ-ಕಥಾಲೋಕದೊಳಗೆ.

ನಿಜ ಸ್ಮಿತಾ, ಈ ರಾಜಧಾನಿಯ ಒತ್ತಡದ ಬದುಕಿನಿಂದ ಬಿಡುವು ಪಡೆದು ಜಡಗೊಂಡ ಮನಸ್ಸನ್ನು ಮತ್ತೆ ಹುರುಪುಗಟ್ಟಿಸಲು ಆಗೀಗ ಹೊರಹೋಗಲು ನಾವು ಆಯ್ದುಕೊಳ್ಳುವುದು ಹಸಿರು ಪರಿಸರವನ್ನೇ. ನೀವಿರುವುದೇ ಅಂತಹ ದಟ್ಟ ಹಸಿರಿನ ನಡುವೆ.. ‘ವನದೇವತೆಯಂತೆ’..!

ಸ್ಮಿತಾ, ನಾನು ಗಮನಿಸಿದಂತೆ, ನಿಮ್ಮ ದೈನಂದಿನ ಅಪಾರ ಕೆಲಸಕಾರ್ಯಗಳ ನಡುವೆಯೂ ಬಿಡುವಿನಲ್ಲಿ ಕನ್ನಡದ ಹಲವು ಬರಹಗಾರರನ್ನು ಓದಿಕೊಳ್ಳುತ್ತಿರುವಿರಿ. ಅಷ್ಟಕ್ಕೇ ಸುಮ್ಮನಾಗದೆ, ಆ ಕುರಿತು ನೀವು ಬರೆಯುತ್ತೀರಿ..! ನಿಮ್ಮ ಬರಹಗಳ ಮೂಲಕವೇ ಹೊಸಬರೊಡನೆ ಮಾತನಾಡುತ್ತೀರಿ, ಹೊಸ ಬರಹಗಾರರ ಕೃತಿ ಪರಿಚಯ ಮಾಡಿಕೊಡುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತೀರಿ.

ಸ್ಮಿತಾ.., ನನಗೆ ನೀವು ಪರಿಚಯವಾದದ್ದೂ ಹೀಗೆಯೇ.. ನನ್ನ ಮೊದಲ ಕಾವ್ಯ ಸಂಕಲನ ಮರೆತು ಬಿಟ್ಟದ್ದು ಅನ್ನು ಮೊದಲ ಬಾರಿಗೆ ಆನ್ ಲೈನ್ ಪತ್ರಿಕೆಯಲ್ಲಿ ಪರಿಚಯಿಸಿದ್ರಿ ನನಗೆ ಇದು ಪರಮಾಶ್ಚರ್ಯದ ಜೊತೆಗೆ ಅಪಾರ ಸಂತಸ ತಂದಿತ್ತು.

ಸ್ಮಿತಾ, ಶ್ರೀಮತಿ ಇಂದಿರಾ ಸುಂದರ್ ಅವರು ಜನಪ್ರಿಯ ಸುಂದರ ಪ್ರಕಾಶನದ ಮೂಲಕ ತಂದ ಕನ್ನಡ ಕವಿಕಾವ್ಯಮಾಲೆಯ ೩೮ರ ಸರಣಿಯಲ್ಲಿ ಶ್ರೀಮತಿ ಚ.ಸರ್ವಮಂಗಳ, ಶ್ರೀ ಚೀಮನಹಳ್ಳಿ ರಮೇಶಬಾಬು ಅವರೊಡನೆ ನೀವಿದ್ದೀರಿ..! ಅದರ ಸಂಪಾದಕರು ಶ್ರೀ ಬಿ.ಆರ್.ಎಲ್ ಅವರು..!  ಆ ಕಾರ್ಯಕ್ರಮ ಬೆಂಗಳೂರಿನಲ್ಲಾದದ್ದು ನನ್ನ ಅದೃಷ್ಟ. ಏಕೆಂದರೆ ನಿಮ್ಮನ್ನು ಮುಖತಃ ನೋಡುವಂತಾಯ್ತು.

ಆ ಕಾರ್ಯಕ್ರಮಕ್ಕೆ ಈ ನಾಡಿನ ಖ್ಯಾತಕವಿಗಳಾದ ಬಿ.ಆರ್.ಲಕ್ಷ್ಮಣ ರಾವ್ ಅವರ ಅಧ್ಯಕ್ಷತೆಯಲ್ಲಿ ಒಂದು ಕವಿಗೋಷ್ಠಿ ಆಯೋಜನೆಯಾಗಿತ್ತು. ಸರ್ ಅವರ ಪ್ರೇಮಪೂರ್ಣ ಆಗ್ರಹ- ಆಹ್ವಾನಗಳೊಂದಿಗೆ ನಾನೂ ಭಾಗವಹಿಸಿದ್ದೆ. ಅಲ್ಲಿಯೇ ನಿಮ್ಮ ಪರಿಚಯವಾದದ್ದು. ನೋಡಿದ ತಕ್ಷಣ ಗಮನ ಸೆಳೆಯುವ ಮುಗ್ಧ ಸರಳ ಭಾವಪೂರ್ಣ ವ್ಯಕ್ತಿತ್ವ ನಿಮ್ಮದು.

ಆಗ ನನ್ನ ಪುಸ್ತಕವನ್ನು ನಿಮಗೆ ಕೊಡಬೇಕೆನಿಸಿತು ಕೊಟ್ಟೆ. ನಾವಿಬ್ಬರೂ ಆ ಕಾರ್ಯಕ್ರಮದಲ್ಲಿ ಸರಿಯಾಗಿ ಒಂದೆರಡು ಮಾತನಾಡಿದೆವೋ ಇಲ್ಲವೋ ನೆನಪಿಲ್ಲ. ಬರಿಯ ಪರಿಚಯ ಮಾಡಿಕೊಂಡಿರಬಹುದಷ್ಟೆ. ಆಮೇಲೆ ಆನಂದ್ ಋಗ್ವೇದಿಯವರು ಕಟ್ಚಿರುವ ಪಾರಿಜಾತ ಎಂಬ ಕಾವ್ಯ ಪರಿವಾರದ ವಾಟ್ಸಾಪ್ ಗುಂಪಿನ ಮೂಲಕ ನನಗೆ ನಿಮ್ಮ ಮತ್ತೂ ಹಲವರ ಪರಿಚಯವಾಯ್ತು..

ಸ್ಮಿತಾ, ನೀವೀಗ ನಾಡಿನ ಸರಕಾರದ ಗೌರವಕ್ಕೆ ಪಾತ್ರರಾಗಿದ್ದೀರಿ…! ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿದ್ದೀರಿ. ಎಲೆಮರೆಕಾಯಿಯಂತಿರುವ ನಿಮ್ಮನ್ನು ಯಾವುದೇ ಸ್ವಹಿತಾಸಕ್ತಿಗಳಿಲ್ಲದೆ, ರಾಜಕೀಯ, ಮತ-ಧರ್ಮಗಳ ಹಂಗು, ಒಳಸಂಚುಗಳಿಲ್ಲದೇ ಗುರುತಿಸಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ (ಈ ಹೊತ್ತಿನಲ್ಲಿ ಮತ್ತೊಬ್ಬ ಪ್ರತಿಭಾವಂತೆ ಶ್ರೀಮತಿ ಪೂರ್ಣಿಮಾ ಸುರೇಶರನ್ನೂ ನೆನೆದುಕೊಳ್ಳುವೆ).

ಪ್ರೀತಿಯ ಸ್ಮಿತಾ, ನಿಮ್ಮ ದೈನಂದಿನ ಉಳಿದ ಎಲ್ಲ ಕೆಲಸ ಕಾರ್ಯಗಳೊಡನೆ, ನಿಮ್ಮ ಕುಟುಂಬದ ಸದಸ್ಯರ ಸಹಕಾರದೊಡನೆ, ಮನೆಯವರ ವಿಶ್ವಾಸಪೂರ್ಣ ಬೆಂಬಲದೊಡನೆ ನೀವು ಮತ್ತಷ್ಟು ಹೊಸದನ್ನು ಸಾಧಿಸಿರಿ. ನಿಮ್ಮ ಪ್ರತಿಭೆ, ಅಸ್ತಿತ್ವ ನಿರಂತರವಾಗಿ ಪ್ರಕಟಗೊಳ್ಳಲಿ.

ನಿಮಗೆ ಕನ್ನಡದ ಸಾಹಿತ್ಯದ ರಾಯಭಾರಿಯಂತಿರುವ ಅನನ್ಯ ವೇದಿಕೆಯಾಗಿರುವ ‘ಅವಧಿ’ಯ ಮೂಲಕ ಶುಭಕೋರುವುದು ನನ್ನ ಆಶಯ. ಸ್ಮಿತಾ, ಮತ್ತೊಮ್ಮೆ ಶುಭಾಶಯಗಳು…

‍ಲೇಖಕರು avadhi

October 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shobha Hirekai

    ಅವ್ವನಂಥ ಗೆಳತಿ ಸ್ಮಿತಾ ಅಮೃತರಾಜ್ ರವರ ಕುರಿತು ಓದಿ ಮನ ಮುದಗೊಂಡಿತು. ನನಗಂತೂ ಅವರೇ.. ಒಂದು ಕವಿತೆ. ಮೇಡಂ ತುಂಬಾ ಚೆನ್ನಾಗಿ ಬರೆದಿರುವಿರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: