ಸಿ ಎನ್ ರಾಮಚಂದ್ರನ್
ಸ್ಮಾರ್ಟ್ ಸಿಟಿ ಅಥವಾ ನವನಾಜೂಕಿನ ನಗರಗಳ ಪರಿಕಲ್ಪನೆ ಕಳೆದೆರಡು ದಶಕಗಳಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿ, ಅಪಾರ ಚರ್ಚೆಗೆ ಒಳಪಟ್ಟಿದೆ. ಅಮೆರಿಕಾದಲ್ಲಿರುವ ನೂರು ಜನ ತಜ್ಞರನ್ನೊಳಗೊಂಡ ‘ಸ್ಮಾರ್ಟ್ ಸಿಟೀಸ್ ಕೌನ್ಸಿಲ್’ ಸದ್ಯ, ಸುಮಾರು 140 ದೇಶಗಳಿಗೆ ಮಾರ್ಗದರ್ಶನ ಹಾಗೂ ತಾಂತ್ರಿಕ ಸಹಾಯವನ್ನು ಒದಗಿಸುತ್ತಿದೆ. ಕಳೆದ ನವೆಂಬರ್ನಲ್ಲಿ ಲೋಕಸಭೆಯ ಕಛೇರಿ ಈ ಯೋಜನೆಯನ್ನು ಕುರಿತ ವಿವರಗಳನ್ನು ‘ರೆಫರೆನ್ಸ್ ನೋಟ್’ ಎಂಬ ಹೆಸರಿನಲ್ಲಿ ಬಿಡುಗಡೆಮಾಡಿತು. (ಈಗ ಅಂತರ್ಜಾಲದಲ್ಲಿ ಅದು ಲಭ್ಯ.) ಆ ರೆಫರೆನ್ಸ್ ನೋಟ್ನ ಕೆಲವು ಮುಖ್ಯಾಂಶಗಳು ಹೀಗಿವೆ.
ಅ) ಯೋಜನೆಯ ತಾತ್ವಿಕ ಹಿನ್ನೆಲೆ: ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಅಗಾಧವಾಗಿದೆ; ಹೊಸ ನಗರಗಳನ್ನು ನಾವು ನಿರ್ಮಿಸದಿದ್ದರೆ ಅಷ್ಟೂ ಜನರಿಗೆ ವಸತಿ ಹಾಗೂ ಉದ್ಯೋಗಾವಕಾಶಗಳನ್ನು ಕೊಡುವುದು ಅಸಾಧ್ಯ. ನಗರವಾಸಿಗಳಿಂದ ಇಂದು ರಾಷ್ಟ್ರದ ಒಟ್ಟು ಉತ್ಪನ್ನದ (GDP) 60% ಭಾಗವು ಬರುತ್ತಿದೆ; ಮುಂದಿನ 15 ವರ್ಷಗಳಲ್ಲಿ ಇದು 70% ಆಗಬಹುದು. ಎಂದರೆ, ‘ನಗರಗಳು ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವ ಸಾಧನಗಳು.’ ಆದುದರಿಂದ, ‘ನಗರ ನಿವಾಸಿಗಳ ಆರ್ಥಿಕ ಚಟುವಟಿಕೆಗಳಿಗೆ ಅವಕಾಶವನ್ನು ಮತ್ತು ಉತ್ತಮ ಗುಣಮಟ್ಟದ ಬದುಕನ್ನು ನೀಡಬೇಕಾದುದು ನಮ್ಮ ಕರ್ತವ್ಯ; ಇವುಗಳಿಗಾಗಿ ನವ ನಗರಗಳ ನಿರ್ಮಾಣವಾಗಬೇಕು.’ ಈ ನವ ನಗರಗಳು ಈಗಿರುವ ಮಧ್ಯಮ ದರ್ಜೆಯ ನಗರಗಳ ಸುಧಾರಿತ ರೂಪವಾಗಬಹುದು, ಅಥವಾ ಈಗಿರುವ ಮಹಾ ನಗರಗಳ ಉಪನಗರಗಳಂತೆ (ಸ್ಯಾಟಲೈಟ್ ಟೌನ್ಸ್) ಅಸ್ತಿತ್ವಕ್ಕೆ ಬರಬಹುದು.
ಆ) ನವ ನಗರಗಳ ಲಕ್ಷಣಗಳು: ಒಟ್ಟು ಆರು ಲಕ್ಷಣಗಳು: ನವ ಆರ್ಥಿಕತೆ, ನವನಾಜೂಕಿನ ಜನ, ನವ ಆಡಳಿತ, ನವ ಸಂಚಾರ ವ್ಯವಸ್ಥೆ, ನವ ಪರಿಸರ ಮತ್ತು ನವನಾಜೂಕಿನ ಬದುಕು (smart economy, smart people, smart governance, smart mobility, smart environment, smart living). ನವ ಆರ್ಥಿಕತೆ ಎಂದರೆ, ಕೇಂದ್ರ-ರಾಜ್ಯ-ಖಾಸಗೀ ಮೂಲಗಳಿಂದ ಬರುವ ಧನ; ನವ ಆಡಳಿತವೆಂದರೆ, ಆಡಳಿತದ ಎಲ್ಲಾ ಕಾರ್ಯಗಳೂ ಮಾಹಿತಿ-ತಂತ್ರಜ್ಞಾನದ (ಆನ್ಲೈನ್) ಮೂಲಕ ಮತ್ತು ಪಾರದರ್ಶಕವಾಗಿ ನಡೆಯುತ್ತವೆ (ಸರಕಾರಗಳ ಎಲ್ಲಾ ಬಗೆಯ ವೆಚ್ಚದ ವಿವರಗಳೂ ಅಂತರ್ಜಾಲದಲ್ಲಿ ದೊರಕುತ್ತವೆ ಮತ್ತು ಪ್ರಜೆಗಳ ಕುಂದು-ಕೊರತೆಗಳ ನಿವಾರಣೆಯೂ ಅಂತರ್ಜಾಲದ ಮೂಲಕವೇ ನಡೆಯುತ್ತದೆ); ನವ ಪರಿಸರವೆಂದರೆ, ನೈರ್ಮಲ್ಯ (ಕಸ ವಿಲೇವಾರಿಗಾಗಿ ಆಧುನಿಕ ಮಾರ್ಗಗಳ ಉಪಯೋಗ), ಉತ್ತಮ ರಸ್ತೆಗಳು, ಸುಂದರ ಕಟ್ಟಡಗಳು, ಎಲ್ಲೆಡೆಯೂ ಸಿಗುವ ಚಿಕಿತ್ಸಾ ಪರಿಕರಗಳು, ಲಾಭದಾಯಕ ಉದ್ಯೋಗಗಳು, ಇತ್ಯಾದಿ; ಇವೆಲ್ಲವುಗಳಿಂದ ಒಟ್ಟಾರೆ ಬದುಕು ಸುಧಾರಿಸುತ್ತದೆ, ಸುಧಾರಿಸಲೇಬೇಕು.
ಈ ಲಕ್ಷಣಗಳನ್ನು ಆಧರಿಸಿ, ಈ ನವ ನಗರಗಳ ನಕಾಶೆಯನ್ನು ಹೀಗೆ ತಯಾರಿಸಬಹುದು: ತಮಗೆ ತಾವೇ ವಾತಾವರಣವನ್ನು ನಿಯಂತ್ರಿಸುವ ಹಾಗೂ ಕಂಪ್ಯೂಟರ್ ಮೂಲಕ ಮಾತ್ರ ಪ್ರವೇಶಿಸಬಹುದಾದ ಕಟ್ಟಡಗಳು, ಸ್ವಚ್ಛ ರಸ್ತೆಗಳು, ನೀರು ಮತ್ತು ಬೆಳಕು ಸದಾ ದೊರಕುವಂತೆ ನೋಡಿಕೊಳ್ಳುವ ಕಂಪ್ಯೂಟರ್ ಜಾಲ, ಕಂಪ್ಯೂಟರ್ ಚಾಲಿತ ನವೀನ ಉದ್ಯಮಗಳು ಹಾಗೂ ವಾಹನಗಳು, ಎಲ್ಲೆಲ್ಲೂ ರಾರಾಜಿಸುವ ವಾಣಿಜ್ಯ ಸಂಕೀರ್ಣಗಳು, ಅಂತರ್ಜಾಲದ ಮೂಲಕ ನಡೆಯುವ ಆಡಳಿತ, ಇಡೀ ನಗರದಲ್ಲಿ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂದು 24 ಘಂಟೆಗಳ ಕಾಲವೂ ಹದ್ದಿನ ಕಣ್ಣಿಟ್ಟಿರುವ (Surveillance) ಎಲೆಕ್ಟ್ರಾನಿಕ್ ಸೆನ್ಸಾರ್ಸ್, ಇವೆಲ್ಲವನ್ನೂ ನಿಯಂತ್ರಿಸುವ ನಗರದ ಹೊರವಲಯದಲ್ಲಿರುವ ಬೃಹತ್ ಕಂಪ್ಯೂಟರ್ ಜಾಲ –ಇವೆಲ್ಲವುಗಳಿಂದ ಪರಿಪೂರ್ಣವಾಗಿ ಶೋಭಿಸುವುದೇ ನವನಗರ. ಈ ನವನಗರದಲ್ಲಿ ವಾಸಿಸುವವರು ಕೇವಲ ‘smart people’ ; ಆದುದರಿಂದ ಇಲ್ಲಿ ಭಿಕ್ಷುಕರಿಲ್ಲ, ಕುರುಡ-ಕುಂಟರಿಲ್ಲ, ಪೆದ್ದರಿಲ್ಲ, ಮುದುಕರಿಲ್ಲ; ತಳ್ಳು ಗಾಡಿಯ-ಫುಟ್ಟ್ಪಾತಿನ ಕಿರು ವ್ಯಾಪಾರಿಗಳಿಲ್ಲ, ಅತ್ಯಂತ ಕಡಿಮೆ ಬೆಲೆಯ ಕಿರು ಹೋಟೆಲ್ಗಳಿಲ್ಲ, ಝೋಪಡಪಟ್ಟಿಗಳಿಲ್ಲ.

ನೋಟ್ನಲ್ಲಿ ಶಾಲಾ-ಕಾಲೇಜು-ವಿವಿಗಳ ಪ್ರಸ್ತಾಪವಿಲ್ಲದಿದ್ದರೂ, ಇತರ ವಿವರಗಳ ಹಿನ್ನೆಲೆಯಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದರೆ: ಅತ್ಯಂತ ಆಧುನಿಕ ಹಾಗೂ ಉಪಯುಕ್ತ ಜ್ಞಾನವನ್ನು ನೀಡುವ, ಎಲ್ಲಾ ಬಗೆಯ ಮೂಲ ಸೌಕರ್ಯಗಳನ್ನುಳ್ಳ, ಜಾಗತಿಕ ಹಿನ್ನೆಲೆಯಲ್ಲಿ ಸದಾ ಇಂಗ್ಲೀಷ್ ಭಾಷೆಯನ್ನು ಉಪಯೋಗಿಸುವ, ಚತುರ ಹಾಗೂ ಶ್ರೀಮಂತ ವಿದ್ಯಾರ್ಥಿಗಳನ್ನುಳ್ಳ, ಖಾಸಗೀ ವಾಣಿಜ್ಯ ಶಿಕ್ಷಣ ಸಂಸ್ಥೆಗಳು (Business Schools), ಎಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳು, ಇತ್ಯಾದಿ ನವ ನಗರಗಳಲ್ಲಿ ಅಸ್ತಿತ್ವಕ್ಕೆ ಬರುತ್ತವೆ.
ಇ) ಸಂಪನ್ಮೂಲ: ನವ ನಗರಗಳ ನಿರ್ಮಾಣ ಹಾಗೂ ಆಡಳಿತಕ್ಕಾಗಿ ಅವಶ್ಯಕವಾಗುವ ಧನವನ್ನು ಕೇಂದ್ರ, ರಾಜ್ಯ, ಮತ್ತು ಖಾಸಗೀ ಸಂಸ್ಥೆಗಳ ಸಹಯೋಗದಿಂದ ಒಟ್ಟುಗೂಡಿಸಲಾಗುತ್ತದೆ, ಸದ್ಯ, ಆಯ್ಕೆ ಮಾಡಿದ 100 ನಗರಗಳಲ್ಲಿ ಪ್ರತಿಯೊಂದು ನಗರಕ್ಕೂ ವಾರ್ಷಿಕ 100 ಕೋಟಿಯನ್ನು ಐದು ವರ್ಷಗಳ ತನಕ ಕೇಂದ್ರ ಸರಕಾರ ಕೊಡುತ್ತದೆ; ಅದಕ್ಕೆ ಸಮಾನ ಮೊತ್ತವನ್ನು ರಾಜ್ಯ ಸರಕಾರ ಕೊಡಬೇಕು ಅಥವಾ ತಮ್ಮ ಯೋಜನೆಗಳನ್ನು ಗುತ್ತಿಗೆಗೆ ಕೊಟ್ಟು ಕೇಂದ್ರ-ರಾಜ್ಯ ಸರಕಾರಗಳು ಆ ಮೊತ್ತವನ್ನು ಖಾಸಗೀ ಸಂಸ್ಥೆಗಳಿಂದ ಪಡೆಯಬೇಕು.
ಒಂದು ದೇಶದಲ್ಲಿ ಇಂತಹ 100 ನವ ನಗರಗಳು ಅಸ್ತಿತ್ವಕ್ಕೆ ಬಂದರೆ, ಪರಿಣಮಿಸುವ ಲಾಭಗಳು ಅನೇಕಾನೇಕ ಎಂಬುದು ಸ್ವಯಂ ಸಿದ್ಧ: ಮಾಹಿತಿ ತಂತ್ರಜ್ಞಾನ ಉದ್ಯಮದ ಅಗಾಧ ಬೆಳವಣಿಗೆ, ಮಾಹಿತಿ ತಂತ್ರಜ್ಞಾನ ತಜ್ಞರು ಹಾಗೂ ಗೃಹನಿರ್ಮಾಣ ಕ್ಷೇತ್ರದ ವಾಸ್ತುಶಿಲ್ಪಿಗಳು ಮತ್ತು ಇತರ ನಿಪುಣರು ಇವರೆಲ್ಲರಿಗೂ ದೊರಕುವ ಅಪಾರ ಉದ್ಯೋಗಾವಕಾಶಗಳು, ಈ ನವ ನಗರಗಳ ಉತ್ಪಾದನೆ ಹಾಗೂ ರಫ್ತು ಇವುಗಳಿಂದ ದೇಶಕ್ಕೆ ದೊರಕುವ ಅಪರಿಮಿತ ಧನಲಾಭ, ಇವೆಲ್ಲವುಗಳಿಂದ ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ಮೂಡುವ ನವ ಸಂಚಲನ, ಇತ್ಯಾದಿ.
ಹಾಗೆಯೇ, ದುರದೃಷ್ಟವಶಾತ್, ಕೆಲವು ಪ್ರಶ್ನೆಗಳೂ ಉದ್ಭವವಾಗುತ್ತವೆ:
ಅ) ಭೂಮಿ: ಈಗಿರುವ ಮಧ್ಯಮ ದರ್ಜೆಯ ನಗರಗಳ ನವೀಕರಣಕ್ಕಾಗಲೀ ಅಥವಾ ಉಪನಗರಗಳನ್ನು ನಿರ್ಮಿಸುವುದಕ್ಕಾಗಲೀ ಅಗಾಧ ಪ್ರಮಾಣದ ಭೂಮಿ ಬೇಕಾಗುತ್ತದೆ. ಈ ಭೂಮಿ ಸದ್ಯ ಕೃಷಿಕರ ಒಡೆತನದಲ್ಲಿರುವುದರಿಂದ ಅದನ್ನು ಹೇಗಾದರೂ ಪಡೆಯಬೇಕಾಗುತ್ತದೆ -ಒಂದಕ್ಕೆ ಹತ್ತರಷ್ಟು ಹಣ ಕೊಟ್ಟಾದರೂ. ಹಾಗೆ, ಇಂದು ನೂರು ನವ ನಗರಗಳಿಗೆ ಅವಶ್ಯಕವಾಗುವ ಲಕ್ಷಾಂತರ ಎಕರೆಗಳನ್ನು ಕಳೆದುಕೊಳ್ಳುವ ಕೃಷಿಕರು ಮುಂದೇನು ಮಾಡಬೇಕು? ಹಾಗೆಯೇ, ಈ ರೀತಿ ಔದ್ಯೋಗಿಕ ಪ್ರಗತಿಗಾಗಿ ಕೃಷಿ ಭೂಮಿಯನ್ನು ಪರಿವರ್ತಿಸುತ್ತಾ ಹೋದರೆ, ಇನ್ನೊಂದೆರಡು ದಶಕಗಳಲ್ಲಿಯೇ ಅವಶ್ಯಕವಾದಷ್ಟು ಕೃಷಿಯೋಗ್ಯ ಭೂಮಿಯೇ ಇಲ್ಲದಂತಾಗಿ, ಇತರ ದೇಶಗಳ ಮುಂದೆ ಆಹಾರಕ್ಕಾಗಿ ಕೈಯೊಡ್ಡಬೇಕಾಗುತ್ತದೆ.
ಆ) ಸಂಪನ್ಮೂಲ: ಈ ಯೋಜನೆಯ ಪ್ರಕಾರ, ಕೇಂದ್ರದಷ್ಟೇ ರಾಜ್ಯಸರಕಾರಗಳೂ ನವ ನಗರಗಳ ನಿರ್ಮಾಣಕ್ಕಾಗಿ ಅಗಾಧ ಹಣವನ್ನು ವ್ಯಯಿಸಬೇಕಾಗುತ್ತದೆ. ಈಗಲೇ ಹಣದ ಕೊರತೆಯನ್ನು ಅನುಭವಿಸುತ್ತಿರುವ ಹೆಚ್ಚಿನ ರಾಜ್ಯಗಳು ಎರಡು-ಮೂರು ವರ್ಷಗಳ ನಂತರ ತಮ್ಮ ಪಾಲಿನ ಹಣವನ್ನು ಕೊಡಲಾಗದೇ ಹೋದರೆ ಏನಾಗುತ್ತದೆ? ಅಥವಾ, ಹಣವಿದ್ದೂ ಇತರ ನಗರಗಳನ್ನೂ ಒಂದು ಸರಕಾರ ಗಮನಿಸಬೇಕಾಗುವುದರಿಂದ, ಒಂದು ನವ ನಗರಕ್ಕೇ ಅಷ್ಟೊಂದು ಹಣ ಕೊಡುವುದಕ್ಕಾಗದೇ ಹೋಗಬಹುದು. ಆಗ? ಆ ಯೋಜನೆಗಳು ಅರ್ಧದಲ್ಲಿಯೇ ನಿಂತು ಹೋಗುತ್ತವೆಯೆ?
ಇ) ಖಾಸಗೀಕರಣ: ರೆಫರನ್ಸ್ ನೋಟ್ ಒಪ್ಪಿಕೊಳ್ಳುವಂತೆ, ನವನಗರಗಳ ನಿರ್ಮಾಣಕ್ಕೆ, ಬಹು ಮಟ್ಟಿಗೆ, ಖಾಸಗೀ ಮೂಲಗಳನ್ನೇ ಅವಲಂಬಿಸಬೇಕಾಗುತ್ತದೆ (‘. . . a large part of the financing for Smart Cities will have to come from the Private sector’). ಅಧಿಕ ಹಣಹೂಡಿಕೆ ಮಾಡುವ ಖಾಸಗೀ ಸಂಸ್ಥೆಗಳು ಸರಕಾರಗಳ ಕೆಲವು ನೀತಿಗಳನ್ನು ಒಪ್ಪದೇ ಬದಲಾಯಿಸಲು ಒತ್ತಾಯಿಸಿದರೆ, ಆಗ ಸರಕಾರಗಳು ಅವುಗಳ ಮುಂದೆ ತಲೆಬಾಗಲೇ ಬೇಕಾಗುತ್ತದೆ. ಆಗ, ಕಾಲಕಾಲಕ್ಕೆ ಭಿನ್ನ ಸರಕಾರಗಳು ಜಾರಿಗೆ ತಂದಿರುವ (ಜಾತ್ಯಾಧಾರಿತ ಮೀಸಲಾತಿ, ಉಚಿತ ಪ್ರಾಥಮಿಕ ಶಿಕ್ಷಣ, ಕಡು ಬಡವರಿಗೆ ಕೊಡುವ ಉಚಿತ ಆಹಾರ, ಇತ್ಯಾದಿ) ಸಮಾಜೋದ್ಧಾರ ಯೋಜನೆಗಳು ಏನಾಗುತ್ತವೆ?
ಈ) ಯಾವ ಯೋಜನೆಗಳಾದರೂ ಫಲಪ್ರದವಾಗಬೇಕಾದರೆ, ಅವುಗಳು ‘ಕೆಳಗಿನಿಂದ ಮೇಲೆ’ ಬರಬೇಕು. ಎಂದರೆ, ಭಾರತದ ಲಕ್ಷಾಂತರ ಹಳ್ಳಿಗಳನ್ನು ಗಮನದಲ್ಲಿಟ್ಟುಕೊಂಡು, ನಗರಪ್ರಜ್ಞೆಯಿಂದ ಹೊರಬಂದು ಗ್ರಾಮಪ್ರಜ್ಞೆಯ ಯೋಜನೆಗಳಾಗಬೇಕು. ಎಂದರೆ, ಮೊದಲಿಗೆ, ಈಗ ಯೋಜಿಸಿರುವ ನವನವೀನ ನಗರಗಳ ಬದಲು, ಭಾರತದ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಕೆರೆಗಳ ಪುನಃಶ್ಚೇತನ ಹಾಗೂ ಸರಕಾರೀ ಪ್ರಾಥಮಿಕ ಶಾಲೆಗಳ ನವೀಕರಣ ಇವುಗಳಿಗಾಗಿ ಒಂದು ಪಂಚವಾರ್ಷಿಕ ಯೋಜನೆಯನ್ನು ಮಾಡಿ, ಈ ಅಗಾಧ ಸಂಪತ್ತನ್ನು ಅದಕ್ಕಾಗಿ ಉಪಯೋಗಿಸಬಹುದು. ಎರಡನೆಯ ಹಂತದ ಯೋಜನೆಯಲ್ಲಿ, ಇಂದು ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಎಲ್ಲಾ ಕೃಷಿ ಉತ್ಪನ್ನಗಳಿಗೂ ಯೋಗ್ಯ ದರವನ್ನು ನಿಗದಿಪಡಿಸಬಹುದು. ಹೀಗೆಯೇ ಮುಂದುವರೆದು, ಮತ್ತೊಂದು ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲಾ ಕಾಲೇಜು-ವಿವಿಗಳಲ್ಲಿ ಅಗತ್ಯವಿರುವ ಉಪನ್ಯಾಸಕರ ನೇಮಕ, ಗ್ರಂಥಾಲಯವನ್ನೂ ಒಳಗೊಂಡ ಮೂಲಭೂತ ಸೌಕರ್ಯಗಳ ನಿರ್ಮಾಣ, ಇವುಗಳನ್ನು ಮಾಡಿದರೆ, ಹಳ್ಳಿಗಳಲ್ಲೇ ಕೆಲವು ನವ ನಗರಗಳಾಗುತ್ತವೆ.
ನಿಜವಾದ ಅರ್ಥದಲ್ಲಿ, ‘ನವನಾಜೂಕಿನ ನಗರ’ಗಳೆಂದರೆ, ಬಡವ-ಬಲ್ಲಿದರು, ತರುಣ-ವೃದ್ಧರು, ಶಿಕ್ಷಿತ-ಅಶಿಕ್ಷಿತ, ಸ್ತ್ರೀ-ಪುರುಷ — ಇವರೆಲ್ಲರಿಗೂ ಸಮಾನ ಸ್ಥಾನ-ಅವಕಾಶಗಳನ್ನು ನೀಡುವ ನಗರಗಳು. ಅಂತಾರಾಷ್ಟ್ರೀಯ ವಿಜ್ಞಾನಿ ಕರ್ವಾಲೋನ ಜ್ಞಾನ ಹಾಗೂ ಅಶಿಕ್ಷಿತ ಮಂದಣ್ಣನ ಅಂತರ್ಭೋಧ (ಛಿಜಟಿಣಜಿಛಿ ಚಿಟಿಜ ಟಿಣಣಣತಜ ಞಟಿಠತಿಟಜಜರಜ), ಮತ್ತು ಆಧುನಿಕ ಉಚ್ಚ ಶಿಕ್ಷಣವನ್ನು ಪಡೆದಿರುವ ಅನಂತು ಮತ್ತು ಅನುಭಾವಿ ಅನುಭವ ಸಾಧ್ಯವಿರುವ ಹಡೆ ವೆಂಕಟ ಇವರುಗಳಿಗೆ ಸಮಾನ ಸ್ಥಾನಮಾನಗಳಿರುವ ವ್ಯವಸ್ಥೆಯಿಂದ ಮಾತ್ರ ‘ನವನಾಜೂಕಿನ ನಗರಗಳು’ ನಿರ್ಮಾಣವಾಗಬಲ್ಲವು. ಇಲ್ಲದಿದ್ದರೆ, ಈ ನವ ನಗರಗಳು ರಾಕ್ಷಸಾಕೃತಿಯ ರೋಬಾಟ್ಗಳಾಗುತ್ತವೆ, ಅಷ್ಟೇ.
ಸೌಜನ್ಯ : ಕನ್ನಡ ಪ್ರಭ






ಅತ್ಯಂತ ವಿಚರಪೂರ್ಣ ಮಾಹಿತಿಯ ಲೇಖನ. ಪರಿಹಾರವೇನೇ ಇರಲಿ ಆ ನಿಟ್ಟಿನಲ್ಲಿ ಯೋಚಿಸಲಾದರೂ ನಮ್ಮನ್ನು ಪ್ರೇರೇಪಿಸುವ ಇಂತಹ ಸಾಧ್ಯತೆಗಳು ಇಂದಿನ ತುರ್ತು ಅಗತ್ಯ.
ಧನ್ಯವಾದಗಳು
-ಅನಿಲ