ಸ್ಮಾರಕ ಆಗದ ಅ.ನ.ಕೃ ಮನೆಯ ದುರಂತ ಕತೆ…

ಆರ್ ಜಿ ಹಳ್ಳಿ ನಾಗರಾಜ್

ಕಾದಂಬರಿ ಸಾರ್ವಭೌಮ ಅ.ನ.ಕೃ ಅವರ ಹುಟ್ಟುಹಬ್ಬ ಇವತ್ತು. ಅವರು ವಾಸವಿದ್ದ ವಿಶ್ವೇಶ್ವರಪುರಂ ಮನೆ, ಬಾಟಾ ಚಪ್ಪಲಿ ಸಂಗ್ರಹದ ಮನೆ ಆಗಿತ್ತು! (೨೦೦೫). VRL ಸಂಸ್ಥೆಯ “ಉಷಾಕಿರಣ” ದೈನಿಕದಲ್ಲಿ ವರದಿಗಾರನಾಗಿದ್ದಾಗ ಈ ಬಗ್ಗೆ ತನಿಖಾ ವರದಿ ಮಾಡಿದೆ. ಎರಡೇ ದಿನದಲ್ಲಿ ಬೋರ್ಡ್ ನಾಪತ್ತೆ ಆಗಿ, ಪೇಪರ್ ಏಜನ್ಸಿ ಬೋರ್ಡ್ ಬಂತು! ಅದು ರಾಮಶೆಟ್ಟಿ ಎಂಬುವರು ಕೊಂಡ ಮನೆ. ಮುಂದೆ ದೊಡ್ಡ ಪ್ರಹಸನವೇ ನಡೆದು ಹೋಯಿತು.

ಅನಕೃ ಮನೆಯನ್ನು ಸರ್ಕಾರ ವಶಕ್ಕೆ ಪಡೆದು ಸ್ಮಾರಕ ಮಾಡಲು ಮುಂದಾಗಿ ಬಜೆಟ್‌ನಲ್ಲಿ 2 ಕೋಟಿ ಇಟ್ಟಿತು. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಯಡಿಯೂರಪ್ಪ ಇದಕ್ಕೆ ಕಾರಣಕರ್ತರಾಗಿದ್ದರು. ಇದಕ್ಕೆ ಪುರಾವೆಯಾಗಿ ಆಗಿನ ಆಯ – ವ್ಯಯ ಪುಸ್ತಕ ಪರಿಶೀಲಿಸಬಹುದು.

ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೆ ನಿರ್ಧಾರ ತೆಗೆದುಕೊಂಡಿದ್ದರ ಹಿಂದೆ ಸ್ವಾರಸ್ಯ ಘಟನೆ ಇದೆ. ಹೊಸದಾಗಿ ಮುಖ್ಯಮಂತ್ರಿ ಆಗಿದ್ದ ಅವರು ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಹಿತಿ, ಕಲಾವಿದರು, ಇತರ ಕ್ಷೇತ್ರದ ಗಣ್ಯರನ್ನು ಚರ್ಚೆಗೆ ಆಹ್ವಾನಿಸಿದ್ದರು. ನಾನು “ಉಷಾಕಿರಣ”ದ ವರದಿ ಬಗ್ಗೆ ಅಲ್ಲಿ ಜೊತೆಯಾದ ನಟ, ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಗಮನಕ್ಕೆ ತಂದೆ. “ಹೌದುರಿ ನಾನು ಆ ವರದಿ ಓದಿದ್ದೇನೆ” ಅಂದರು. ಅವರು ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ “ಕಾದಂಬರಿ ಸಾರ್ವಭೌಮರ ಮನೆ ಚಪ್ಪಲಿ ಸಂಗ್ರಹದ ಮನೆ ಆಗಿದೆ. ಇದು ಕನ್ನಡಿಗರಿಗೆ ಅವಮಾನ. ಇದನ್ನು ಸರ್ಕಾರ ವಶಪಡಿಸಿಕೊಂಡು ಅದನ್ನು “ಅನಕೃ ಸ್ಮಾರಕ” ಮಾಡಬೇಕು” ಎಂದು ಸಲಹೆ ರೂಪದ ಪ್ರಶ್ನೆಯ ಬಾಣ ಎಸೆದೇಬಿಟ್ಟರು. ತತ್ ಕ್ಷಣ ಸಭೆಯಲ್ಲಿ ಸಂಚಲನ ಉಂಟಾಯಿತು. ಆಗ ಅಲ್ಲೇ ಇದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಕಾರ್ಯದರ್ಶಿ ಐ.ಎಂ. ವಿಠ್ಠಲಮೂರ್ತಿ ಅವರಿಗೆ ಪರಿಶೀಲಿಸಿ ವರದಿಕೊಡಲು ಆದೇಶಿಸಿದರು.

(ಈ ನಡುವೆ ಆದ ಪರಿಣಾಮ : ಮಹಾನಗರ ಪಾಲಿಕೆ ಕಮೀಷನರ್ ಜಯರಾಜ್ ಅವರು ಖುದ್ದು ಒಂದುಕಾಲದಲ್ಲಿ ಅನಕೃ ಹಾಗೂ ಅವರ ಸಹೋದರ ರಾಮರಾವ್ ವಾಸವಿದ್ದ ಮನೆಯ inspection ಮಾಡಿ, ಆ ಮನೆ ಬಳಿ ಪೊಲೀಸ್ ಕಾವಲು ಹಾಕಿದರು. ಆಗ ನಿರಂಜನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಮೀಷನರ್ ಆಗಿದ್ದು, ಅವರೂ ಆ ಜಾಗ ತಪಾಸಣೆ ಮಾಡಲು ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು.)

ಆದರೆ, ಕೆಲ ತಿಂಗಳ ನಂತರ ನಿರಂಜನ ಜಿಲ್ಲಾಧಿಕಾರಿಯಾಗಿ ಕೊಡಗಿಗೆ ಹೋದರು. ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ಸಾಹಿತ್ಯ ಬಲ್ಲ ನಿರ್ದೇಶಕರೊಬ್ಬರು ಬಂದರು. ಅವರು ದರ್ಪದ, ದುರಹಂಕಾರದ ಆಡಳಿತ ನಡೆಸಿದರು. ಅನಕೃ ಮನೆ ವಶಪಡಿಸಿಕೊಳ್ಳಬೇಕಾದ ಫೈಲ್ ಮಟಾಶ್ ಮಾಡಿದರು! ಮುಂದೆ ಅವರು ಮತ್ತೊಂದು ಆಯಕಟ್ಟಿನ ಹುದ್ದೆಗೆ ಹೋದರು. ನಂತರ ಮಗದೊಂದು ಹುದ್ದೆಯಲ್ಲಿ ೫ ವರ್ಷ ೬ ತಿಂಗಳು ಭಂಡತನದಿಂದ ರಾರಾಜಿಸಿದರು! ಅವರ ದೃಷ್ಟಿಯಲ್ಲಿ ಅನಕೃ ಅಂಥ ನೂರಾರು ಸಾಹಿತಿಗಳು ರಾಜ್ಯಾದ್ಯಂತ ಇದ್ದಾರೆ! ಇಡ್ರಿ ಆಕಡೆ ಫೈಲು ಅಂದದ್ದು ಸರ್ಕಾರದ ಕನಸಿಗೆ ಕೊಳ್ಳಿ ಇಟ್ಟಂತಾಯಿತು.

ಎಷ್ಟೋ ಕನ್ನಡ ಹೋರಾಟಗಾರರಿಗೆ ಈ ವಿಚಾರ ವಿಸ್ತಾರವಾಗಿ ಹೇಳಿದೆ. ಭಾಷಣ ಮಾಡಿದೆ. ಯಾರೂ ಆ ಬಗ್ಗೆ ಗಂಭೀರವಾಗಿ ಯೋಚಿಸಲಿಲ್ಲ. ಅನಕೃ ಮನೆ ಕೊಂಡಿದ್ದ ರಾಮಶೆಟ್ಟಿ ಹೆದರಿ ತಮಿಳು ಮೂಲದ ವೇಲು ಎಂಬುವರಿಗೆ ಮಾರಿದರು.

ಕಾದಂಬರಿ ಸಾರ್ವಭೌಮ ಅನಕೃ ಇದ್ದ ಮನೆಯ ಜಾಗದಲ್ಲಿ ಈಗ ಅಪಾರ್ಟ್ಮೆಂಟ್ ಎದ್ದಿದೆ.

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: