ಮಂಜುನಾಥ ಅಮರಗೋಳ
‘ನನ್ಮಗಾ ನಾನು ಕೆಲ್ಸಾ ಮಾಡೋವಾಗ ಒಂಚೂರು ಹೆಲ್ಪ ಮಾಡೊಲ್ಲಾ ರೀ..’ ಅಂತಾ ನಮ್ಮವ್ವ ಮನೆಗೆ ಬಂದವರಿಗೆಲ್ಲಾ ಪಿಪಿ ಊದುತ್ತಾನೇ ಇದ್ಲು. ಇದು ನಂಗೆ ಓಣಿಯ ಹೆಣ್ಮಕ್ಳೆಲ್ಲಾ ನೋಡೋ ರೀತಿಯಿಂದಲೇ ಗೊತ್ತಾಗ್ತಿತ್ತು. ಆಗ ಒಂದು ರೀತಿಯಲ್ಲಿ ನಾನು ಹೆಣ್ಮಕ್ಕಳ ಮಾತಿಗೆ ಸಿಕ್ಕ ಹಾಸ್ಯದ ವಸ್ತುವಾಗಿದ್ದೆ. ಅದಕ್ಕಾಗಿ ನಾನೂ ಕನಿಷ್ಟ ಪಕ್ಷ ಒಂದು ದಿನವಾದ್ರೂ ಅವ್ವನಿಗೆ ಒಳ್ಳೆಯ ಮಗನಾಗಬೇಕೆಂದು ಪಣ ತೊಟ್ಟೆ. ಸ್ಟೋವ್ ಮೇಲೆ ಟೀ ಮಾಡ್ದೆ, ಮಿಕ್ಚರ್ ಗ್ರೈಂಡರನಲ್ಲಿ ಚಟ್ನಿ ಮಾಡಿ ಅಂತೂ ಅವ್ವನ ಮುಖದಲ್ಲಿ ನಗುವಿನ ಬುಗ್ಗೆ ಉಕ್ಕಿಸಿದೆ. ಲೈಫ್ ಫುಲ್ ಬೋರ್ ಅನ್ನಿಸ್ತಿದೆ, ಇವತ್ತು ಸಂಡೇ ಒಂದೊಳ್ಳೆಯ ಸಿನೆಮಾ ನೋಡಿ ಬೇಜಾರು ಕಳೆದರಾಯಿತೆಂದು ಸ್ನಾನಾ ಮಾಡಿ ಫ್ರೆಶ್ ಆಗಿ ಹೊರಬಂದಾಗ ಅವ್ವನ ಕಣ್ಣಲ್ಲಿ ಗಂಗಾಮಾತೆ (ಕಣ್ಣೀರು) ಸದ್ದಿಲ್ಲದೇ ಹರಿಯುತ್ತಿದ್ದಳು. ಮಗನ ಮೇಲಿನ ಮಮತೆಯಿಂದ ಉಕ್ಕಿದ ಕಣ್ಣೀರೆಂದು ನಾ ತಿಳಿದಿದ್ದೆ. ಆದ್ರೆ ಅದು ‘ಪುಟ್ಟಗೌರಿ ಮದುವೆ’ ಸೀರಿಯಲ್ (ಧಾರಾವಾಹಿ) ನ ಗೌರಿ ಸ್ಥಿತಿಯನ್ನು ಕಂಡು ಹೊರಬಂದ ಕಣ್ಣೀರೆಂದು ತಿಳಿದು ಸ್ವಲ್ಪ ಬೇಜಾರಾಯ್ತು.
ಮನೆಯೊಳಗಿನ ಟಿ.ವಿ ಸ್ಕ್ರೀನ್ ಮೇಲೆ ದಿನವೂ ಧಾರಾವಾಹಿ ಹೀರೋಗಳ, ಹೀರೋಯಿನ್ ಗಳ ದರ್ಬಾರ್ ನೋಡಿ ನೋಡಿ ಸುಸ್ತಾಗುವ ಜೊತೆಗೆ ಮೈಂಡ್ ಡೈವರ್ಟ ಆಗ್ತಿದೆಯಲ್ಲಾ ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಜೇಬಿನಲ್ಲಿದ್ದ ಫೋನು ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಹಲೋ! ಎಂದೊಡನೆ ‘ನನ್ಮಗ್ನೆ ಭೂಮಿ ಮೇಲೆ ಇದಿಯೋ; ಇಲ್ಲಾ ಫೋಟೋಕಟನಲ್ಲಿ ಇದಿಯೋ?’ ಅಂತಾ ಗೆಳೆಯ ಕೃಷ್ಣನ ಧ್ವನಿ ಬಂತು. ಇದೋ..ಬಂದೆ ಎಂದು ಎರಡೇ ಹೆಜ್ಜೆಯನ್ನಿಡುವಷ್ಟರಲ್ಲಿ ಅವರ ಮನೆಯಲ್ಲಿ ನಾನಿದ್ದೆ. ಗೆಳೆಯನಂತೂ ಕಾಲೇಜ್ ಮುಗಿಯೋ ಟೈಂ ನಲ್ಲಿ ಒಂದು ಹುಡುಗಿಗೆ ಕಾಳು ಹಾಕ್ತಿದ್ದ. ತನ್ನ ಲವ್ ಡೆವಲಪಮೆಂಟಗಾಗಿ ಏನೆಲ್ಲ ಕಸರತ್ತು ಮಾಡ್ತಿದ್ದ ಅಂದ್ರೆ..
ಪತ್ರ ಬರೆಯಲಾ…? ಇಲ್ಲ ಚಿತ್ರ ಬಿಡಿಸಲಾ…? ಅಂತಾ ಅನಾವಶ್ಯಕವಾಗಿ ಸ್ಪೆಲ್ಲಿಂಗಮಿಸ್ಟೇಕ್ ಮಾಡಿ ನೂರಾರು ಪತ್ರ ವೇಸ್ಟ್ ಮಾಡಿದ್ದ. ಮನಸೊಳಗಿನ ಅವಳ ರೂಪವನ್ನು ಮನೆ ಗೋಡೆ ಮೇಲೆ ಬಿಡಿಸಲು ಹೋಗಿ ಇಡೀ ಗೋಡೇನೇ..ಹಾಳು ಮಾಡಿದ್ದ. ಗೋಡೆಯನ್ನು ಮತ್ತೆ ಮೊದಲಿನಂತೆ ಮಾಡಲು ಫಡಿ (4 ಶೇರು) ಸುಣ್ಣ ಖರ್ಚಾಯಿತೆಂದು ಅವರವ್ವ ಗೊಣಗುತ್ತಲೇ ಇದ್ಲು. ಅವ್ನು ಎಷ್ಟೇ ತಿಪ್ಪರಲಾಗ ಹೊಡೆದರೂ ಲವ್ ಡೆವಲಪ್ ಆಗ್ದೆ ಬರೀ ಖರ್ಚು ಮಾತ್ರ ಡೆವಲಪ್ ಆಗ್ತಾ ಇತ್ತು. ಹೇಗೋ ಅವರಪ್ಪ-ಅವ್ವ ಮಗನನ್ನು ಸಮಜಾಯಿಸಿ ಮದುವೆಗೆ ಒಪ್ಪಿಸಿದ್ರು.

ಮದ್ವೆ ಅಂದ್ರೆ ಒಂಟಿಕಾಲ ಮೇಲೆ ನಿಂತಿದ್ದ ಹೈದ ನನ್ನನ್ನು ಬಲೂನ್ ಥರಾ ಉಬ್ಬಿಸಿ ‘ನಮ್ ಹುಡ್ಗೀ ಹೇಗಿದ್ದಾಳೋ..?’ ಎಂದ. ‘ನೈಟ್ ಕನ್ಸಲ್ಲಿ ಮಾರ್ನಿಂಗ್ ,ಮನ್ಸಲ್ಲಿ ಕಾಡುವಂತಹ ಸುಂದರ ಚೆಲುವೆ ನಿನ್ನಾಕೆ..’ ಎಂದು ಅವನನ್ನು ಮತ್ತಷ್ಟು ಹುರಿದುಂಬಿಸಿದೆ. ಮದುವೆ ಅಂದ್ರೆ ಸುಮ್ನೇನಾ? ಅಲ್ಲಿ ಬಂಧು ಬಳಗ, ಹಿರಿಯರು ಕಿರಿಯರು, ಗೋಜು ಗದ್ದಲಗಳು ಸರ್ವೇ ಸಾಮಾನ್ಯ. ಹಾಗೆಯೇ ಇಲ್ಲಿಯೂ ಕೂಡ. ಪ್ರತಿಯೊಬ್ಬರೂ ಅವರವರ ಕೆಲಸದಲ್ಲಿ ಫುಲ್ ಬ್ಯೂಜಿ. ನಾನೂ..ಅಷ್ಟೇ. ಯಾಕಂದ್ರೆ ಹುಡುಗನ ತಂದೆ-ತಾಯಿ ನನಗೂ ಕೆಲವೊಂದು ಜವಾಬ್ದಾರಿ ಕೆಲಸಗಳ ಹೊಣೆ ಹೊರಿಸಿದ್ದರು. ಹೀಗಾಗಿ ನಾಲ್ಕೈದು ದಿನ ಕಣ್ಣಿಗೆ ನಿದ್ರೆ ಎಂಬುದು ಮರಿಚಿಕೆಯಾಗಿತ್ತು.
ಅಂತೂ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮನೆಯವರಿಂದ ಶಹಬ್ಬಾಷ್ ..ಎನಿಸಿಕೊಂಡಿದ್ದೆ. ಮಾರನೇ ದಿನವೇ ಮದುವೆ. ಇನ್ನೂ ನನಗೆ ಬಿಡುವೇ ಸಿಗುವುದಿಲ್ಲ; ಸಂಬಂಧಿಕರೆಲ್ಲರೆದುರು ಮದುವೆ ಗಂಡಿನಂತೆ ನಾನೂ ಹ್ಯಾಂಡ್ಸಮ್ಮಾಗಿ ಕಾಣ್ಬೇಕೆಂದು ಕಟಿಂಗ ಮಾಡಿಸಲು ಕಟಿಂಗಶಾಪ್ ಗೆ ಹೋದೆ. ಮದುವೆಗೆ ಬರುವ ಹುಡ್ಗೀರ ಕಣ್ಣು ಕುಕ್ಕುವಂತೆ ಫಸ್ಟಕ್ಲಾಸ್ಸಾಗಿ ‘ಸ್ಪೈಕ್ ಕಟಿಂಗ’ ಮಾಡು ಅಂತಾ ಹೇಳ್ದೆ. ನಾಲ್ಕೈದು ದಿನ ಕಣ್ಣಿಗೆ ನಿದ್ರೆಯಿಲ್ಲದ್ದಕ್ಕಾಗಿ ನಿದ್ರಾದೇವತೆಗೆ ಶರಣಾದೆ. ಸೊಂಪಾಗಿ ಬೆಳೆದಿದ್ದ ನನ್ನ ಕೇಶರಾಶಿಯ (ಕೂದಲು) ಮೇಲೆ ಕ್ಷೌರಿಕನಿಗೆ ಅದೆಷ್ಟು ಕೋಪವಿತ್ತೋ? ನನಗಂತೂ ಗೊತ್ತಿಲ್ಲ. ಯಾವುದೋ ಗುಂಗಿನಲ್ಲಿ ನನ್ನ ಕೂದಲಿಗೆ ಮಷೀನ್ ಹಚ್ಚಿದ್ದ. ಆದ್ರೆ ನಿದ್ರೆಯಿಂದ ಹೊರಬಂದಾಗ ಗೊತ್ತಾಗಿದ್ದೊಂದೆ ಸ್ನೇಹಿತರೆ, ಅದುವೇ ಗಾಂಧೀ ಕಟಿಂಗ…ಹೀಗಾಗಿ ಮದುವೆಯಲ್ಲಿ ಸ್ಪೈಕ್ ಕಟಿಂಗ್ ಬದ್ಲು ಗಾಂಧೀ ಕಟಿಂಗನಿಂದ ಮಿಂಚಿದೆ.






Really super article Manju