ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಪೂರ್ತಿದಾಯಕ ಕಥನ ‘ಲೈಟ್‌ಹೌಸ್’

ಗೋಪಾಲ ಪೂಜಾರಿಯವರ ಆತ್ಮಕಥನ ‘ಲೈಟ್ ಹೌಸ್’

ಹರೀಶ್ ಹೆಜ್ಮಾಡಿ ಅವರ ನಿರೂಪಣೆಯ ಈ ಕೃತಿಯನ್ನು ‘ಅಭಿಜಿತ್ ಪ್ರಕಾಶನ’ ಪ್ರಕಟಿಸಿದೆ.

ಪ್ರೊ ಜಿ ಎನ್ ಉಪಾಧ್ಯ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ.

‘ಲೈಟ್‌ಹೌಸ್’ ಇದು ಹರೀಶ ಹೆಜ್ಮಾಡಿ ಅವರ ಹೊಸ ಕೃತಿ. ಮುಂಬೈನ ಪ್ರಸಿದ್ಧ ಹಿರಿಯ ನ್ಯಾಯವಾದಿ ಗೋಪಾಲ ಪೂಜಾರಿ ಅವರ ಸಾಹಸಪ್ರಥೆ ಇಲ್ಲಿ ಆಪ್ತನೆಲೆಯಲ್ಲಿ ದಾಖಲಾಗಿದೆ. ಇದೊಂದು ಪ್ರತಿಮಾತ್ಮಕ ಕೃತಿ. ಕಾಪು ದೀಪಸ್ತಂಭ ಗೋಪಾಲ ಪೂಜಾರಿ ಅವರ ಬದುಕಿಗೆ ಹೇಗೆ ದಾರಿದೀಪವಾಯಿತು, ಅದರಿಂದ ಪ್ರೇರಣೆಗೊಂಡ ಅವರು ಮುಂಬೈಗೆ ಬಂದು ಈ ಮಹಾನಗರದಲ್ಲಿ ತಮ್ಮದೇ ಆದ ಘನ ವ್ಯಕ್ತಿತ್ವವನ್ನು ರೂಪಿಸಿಕೊಂಡು ತಾವೇ ಬಂದು ದೀಪ ಸ್ತಂಭವಾಗಿ ಬೆಳಗಿ ಇತರರೂ ಬೆಳಗುವಂತೆ ಮಾಡಿದ ಸ್ಪೂರ್ತಿದಾಯಕ ಕಥನವೂ ಇದಾಗಿದೆ. ಸಾಮಾನ್ಯರು ಪರಂಪರೆಯನ್ನು ಪಾಲಿಸುತ್ತಾರೆ, ಆದರೆ ಅಸಾಮಾನ್ಯರು ಪರಂಪರೆಯನ್ನು ಸೃಷ್ಟಿಸುತ್ತಾರೆ ಎಂಬ ಮಾತಿದೆ. ನ್ಯಾಯವಾದಿಯಾಗಿಯೂ, ಸತ್ಯಮಾರ್ಗವನ್ನು ಬಿಡದೆ ಕಾನೂನು, ನ್ಯಾಯಾಂಗ ಕ್ಷೇತ್ರದಲ್ಲಿ ಅಪೂರ್ವ ಸಾಧಕನಾಗಿ ಗೋಪಾಲ ಪೂಜಾರಿಯವರು ಇತಿಹಾಸವನ್ನು ನಿರ್ಮಾಣ ಮಾಡಿದ ಬಗೆಯನ್ನು ಈ ಕೃತಿಯಲ್ಲಿ ಸರಳವಾಗಿ ಸುಂದರವಾಗಿ ಯಾವುದೇ ವೈಭವೀಕರಣವಿಲ್ಲದೇ ಚಿತ್ರಿಸಲಾಗಿದೆ.

ಗೋಪಾಲ ಪೂಜಾರಿಯವರು ಮುಂಬೈಯ ಹಿರಿಯ ಕನ್ನಡ ಚೇತನ. ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ ಗಮನಾರ್ಹವಾದುದು. ಅವರ ಸಲಹೆ  ಸಹಕಾರ ಮಾರ್ಗದರ್ಶನದಿಂದ  ಶ್ರೇಯಸ್ಸನ್ನು  ಪಡೆದುಕೊಂಡವರು ಅಸಂಖ್ಯಾತ ಜನ.ಈಗ ಅವರಿಗೆ 85ರ ಪ್ರಾಯ.ಸಣ್ಣ ವಯಸ್ಸಿನಲ್ಲಿಯೇ ಮುಂಬೈಗೆ ಬಂದು ವಿವಿಧ ಪರೀಷಹ ಗಳನ್ನು ಎದುರಿಸಿ ಕಾನೂನು ಕ್ಷೇತ್ರದಲ್ಲಿ ವಿಶೇಷವಾದ ಪರಿಣತಿಯನ್ನು ಸಾಧಿಸಿ ಸಮುದಾಯದ ಹಿತಕ್ಕೆ ಸುತ್ತಲಿನ ಬದುಕಿಗೆ ಶ್ರಮಿಸಿದ ಅದಮ್ಯ ಅನನ್ಯ ಛಲಗಾರ, ತ್ಯಾಗಮೂರ್ತಿ, ಆದರ್ಶಪುರುಷ, ಸುಸಂಸ್ಕೃತ, ಸ್ನೇಹ ಜೀವಿ, ಇಂದು ಮರೆಯಾಗುತ್ತಿರುವ   ಮೌಲ್ಯಗಳನ್ನು ಬದುಕಿದ  ಸತ್ಯದ ಹಾದಿಯಲ್ಲಿ ಕ್ರಮಿಸಿ  ಸೈ ಎನಿಸಿಕೊಂಡ ಧೀಮಂತ ಚೇತನ  ಗೋಪಾಲ ಪೂಜಾರಿ ಎಂಬುದನ್ನು ಲೇಖಕ ಹೆಜ್ಮಾಡಿ ಅವರು ಈ ಕೃತಿಯಲ್ಲಿ ಸೊಗಸಾಗಿ ಕಂಡರಿಸಿದ್ದಾರೆ. 

ಗಾಂಧೀಜಿ ಅವರಂತೆ ಗೋಪಾಲ ಪೂಜಾರಿ ಅವರಿಗೆ ಪ್ರಾರ್ಥನೆಯಲ್ಲಿ ವಿಶೇಷವಾದ ನಂಬಿಕೆ.  ಅವರು ಆಧ್ಯಾತ್ಮ ಜೀವಿಯೂ ಹೌದು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಅವರು ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಮಾತು ಕೃತಿಗಳ ನಡುವೆ ವಿರೋಧಾಭಾಸಗಳಿಲ್ಲದ  ಅಪರೂಪದ ವ್ಯಕ್ತಿತ್ವ ಅವರದು. ಯಶಸ್ವಿ ವ್ಯಕ್ತಿಯೋರ್ವನ ಬಳಿ ಎರಡು ಪ್ರಮುಖ ಅಸ್ತ್ರಗಳಿರುತ್ತವೆ. ಒಂದು ನಗು, ಮತ್ತೊಂದು ಮೌನ. ನಗು ಸಮಸ್ಯೆಗಳನ್ನು ಪರಿಹರಿಸುತ್ತದೆ, ಮೌನ ಸಮಸ್ಯೆಗಳನ್ನು ತಪ್ಪಿಸುತ್ತದೆ. ನಮ್ಮ ಬದುಕಿಗೊಂದು ಘನತೆ ಇದೆ ಅದನ್ನು ಯಾವ ಕಾರಣಕ್ಕಾದರೂ ಕಳೆದುಕೊಳ್ಳಬಾರದು ಎಂದು ನಂಬಿ ನೆಚ್ಚಿ ಈ ಮುಂಬೈ ಮಹಾನಗರದಲ್ಲಿ ಮಿಂಚಿದವರು ಗೋಪಾಲ ಪೂಜಾರಿ.

18 ಕಿರು ಅಧ್ಯಾಯಗಳಲ್ಲಿ ಗೋಪಾಲರ ಬದುಕಿನ ಯಾನವನ್ನು ಆಪ್ತ ನೆಲೆಯಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಗೋಪಾಲರು ಬರೆದ ದಿನಚರಿಯನ್ನು ಟಿಪ್ಪಣಿಗಳನ್ನು  ಆಧರಿಸಿ ಲೇಖಕ ಹರೀಶ ಹೆಜ್ಮಾಡಿ  ಅವರು ಅವರ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಲವಲವಿಕೆಯಿಂದ ತೆರೆದಿಟ್ಟಿದ್ದಾರೆ.

1940ರಲ್ಲಿ  ಹೆಜಮಾಡಿಯಲ್ಲಿ ಜನಿಸಿ ಇನ್ನಂಜೆಯಲ್ಲಿ ಓದಿ, ವಿದ್ಯಾರ್ಥಿ ದೆಸೆಯಲ್ಲಿಯೇ ಸಹಪಾಠಿಗಳಿಗೆ  ಗುರುವಾಗಿ ಪ್ರತಿಭೆಯನ್ನು ಮೆರೆದವರು ಗೋಪಾಲ ಪೂಜಾರಿ ಅವರು. ಮೆಟ್ರಿಕ್ ಬಳಿಕ ಮುಂಬೈಗೆ ಬಂದು ಉನ್ನತ ಶಿಕ್ಷಣ ಪಡೆದು ವಿವಿಧ ಉದ್ಯೋಗಗಳನ್ನು ಮಾಡಿ, ನ್ಯಾಯಾಧೀಶರಾಗುವ ವಿಪುಲ ಅವಕಾಶವಿದ್ದರೂ ನ್ಯಾಯವಾದಿಯಾಗಿಯೇ ವೃತ್ತಿ ಜೀವನವನ್ನು ಮುಂದುವರಿಸಿಕೊಂಡು ಬಂದದ್ದು, ಸಂವಿಧಾನ ತಜ್ಞರಾಗಿ, ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಬಿಲ್ಲವರ ಅಸೋಸಿಯೇಷನ್,  ಭಾರತ್ ಬ್ಯಾಂಕ್  ಮೊದಲಾದ ಸಂಘ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ಲೋಕಕಲ್ಯಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಪರಿ, ಗೋಪಾಲ ಪೂಜಾರಿಯವರ ವ್ಯಕ್ತಿಮತ್ತೆ, ಅವರ ಯಶೋಗಾಥೆ  ಈ ಕೃತಿಯಲ್ಲಿ ಚೆನ್ನಾಗಿ ಅನಾವರಣಗೊಂಡಿದೆ.

ಗಾಂಧೀಜಿಯವವರು ನನ್ನ ಜೀವನವೇ ಒಂದು ತೆರೆದ ಪುಸ್ತಕ ಎಂದು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಸಾಂಪ್ರತ ಕೃತಿಯೂ ಹಾಗೆಯೇ ಇದೆ. ಪ್ರತಿಯೊಬ್ಬರ ಬಾಳಿನ ಕಥೆಯೂ ಒಂದು ಅತ್ಯುತ್ತಮ ಚರಿತ್ರೆಯಾಗಬಲ್ಲದು. ಅದನ್ನು ಅನಾವರಣಗೊಳಿಸುವ ಸೂಕ್ಷ್ಮ ಕುಸುರಿ ಕೆಲಸವನ್ನ ಲೇಖಕ ಮಾಡಬೇಕಾಗುತ್ತದೆ. ಇದನ್ನು ಹರೀಶ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಗೋಪಾಲ ಪೂಜಾರಿಯವರ ತುಂಬು ಜೀವನ, ಮಾನವೀಯ ಧೋರಣೆ, ಕರ್ತವ್ಯ ನಿಷ್ಠೆ, ಧನಾತ್ಮಕ ಚಿಂತನೆ, ನಿಷ್ಕಾಮ ಮನೋಭಾವ, ಸರಳ ಜೀವನ ಉಚ್ಚ ವಿಚಾರ, ದೀನ ದಲಿತರ ಬಗೆಗೆ ಅವರಿಗಿರುವ ಸಹಾನುಭೂತಿ ಎಲ್ಲವೂ ಅವರನ್ನು ಗಣ್ಯ ವ್ಯಕ್ತಿಯನ್ನಾಗಿ ಮಾಡಿರುವುದು ಈ ಕೃತಿಯ ಓದಿನಿಂದ ತಿಳಿದು ಬರುತ್ತದೆ.  ಒಂದು ಸುಂದರ ಬದುಕು ದಿಢೀರನೆ ಪ್ರತ್ಯಕ್ಷವಾಗುವುದಿಲ್ಲ. ಅದನ್ನು ಪ್ರೀತಿ, ಸಹನೆ, ತ್ಯಾಗ, ನಗುಮುಖ, ತಾಳ್ಮೆ, ಕ್ಷಮಾಪಣೆ ಮತ್ತು ಅನುಗ್ರಹದ ಆಧಾರಗಳಿಂದ ಕಟ್ಟಬೇಕಾಗುತ್ತದೆ ಎಂಬ ಪೂಜಾರಿ ಅವರ ಮಾತು ಮನನೀಯವಾಗಿದೆ.

ಮುಂಬೈನ ಕ್ರಿಯಾಶೀಲ ತುಳು-ಕನ್ನಡಿಗರಲ್ಲಿ ಲೇಖಕ ಹರೀಶ ಹೆಜ್ಮಾಡಿ ಅವರೂ ಒಬ್ಬರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುಕಾಲ ದುಡಿದ ಅವರು ಪ್ರವೃತ್ತಿಯಲ್ಲಿ ಒಳ್ಳೆಯ ಚಿಂತಕರು, ಲೇಖಕರು ಹಾಗೂ ಸಾಂಸ್ಕೃತಿಕ ಪರಿಚಾರಕರು. ನೇರ ನಡೆ ನುಡಿಗೆ ಹೆಸರಾಗಿರುವ ಹರೀಶ್ ಅವರು ಮುಂಬೈನ ಬಿಲ್ಲವರ ಅಸೋಸಿಯೇಶನ್‌ ಅಭ್ಯುದಯದಲ್ಲೂ ಹೆಗಲುಗೊಟ್ಟವರು. ಬಿಲ್ಲವರ ಅಸೋಸಿಯೇಶನ್ ಮುಖವಾಣಿ ಅಕ್ಷಯ ಮಾಸಿಕದ ಸಂಪಾದಕರಾಗಿ ಸಹ ಅವರು ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಸೂಕ್ಷ್ಮ ಸಂವೇದನೆಯ ತುಡಿತಗಳನ್ನು ಒಳಗೊಂಡಿರುವ ಅನೇಕ ಲೇಖನ, ಕವಿತೆಗಳನ್ನು ಅವರು ತುಳು, ಕನ್ನಡ ಭಾಷೆಗಳಲ್ಲಿ ಬರೆದಿದ್ದಾರೆ. ವ್ಯಕ್ತಿ ಚಿತ್ರಗಳನ್ನು, ನುಡಿ ಚಿತ್ರಗಳನ್ನು ಬರೆಯುವುದರಲ್ಲಿ ಹೆಜ್ಜಾಡಿ ಅವರು ಎತ್ತಿದ ಕೈ. ಸಾಲು ಸಾಲು ಹಣತೆ ಅವರ ಪ್ರಕಟಿತ ಪ್ರಸಿದ್ಧ ಕೃತಿ. ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅನೇಕ ಸಾಧಕರ ಜೀವನಸ್ಪಂದನವನ್ನು ದಾಖಲಿಸಿ, ವಿಶ್ಲೇಷಿಸಿದ ಹಿರಿಮೆ ಹರೀಶ್ ಅವರದು. ವೈಚಾರಿಕತೆ, ಜನಪರ ನಿಲುವು, ಮಾನವ್ಯ ಧೋರಣೆ ಅವರ ಬರವಣಿಗೆಯ ವಿಶಿಷ್ಟತೆ. ಭಾವ ತೀವ್ರತೆಯ ಹೊತ್ತಿನಲ್ಲಿ ಹರಿಗಡೆಯದ ಸಮಚಿತ್ತದ ಬರವಣಿಗೆ ಹೆಜ್ಮಾಡಿ ಅವರದು. ಈ ಭಿನ್ನ ಪರಿಯ ಕೃತಿಗಾಗಿ ಅವರಿಗೆ ಅಭಿನಂದನೆಗಳು.

‍ಲೇಖಕರು Admin

28 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading