ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ತ್ರೀವಾದ ಒಡೆದಿಡಲಿಕ್ಕಲ್ಲ…’ – ವಿನಯಾ ಒಕ್ಕುಂದ ಬರೀತಾರೆ

ಸ್ತ್ರೀವಾದ ಒಡೆದಿಡಲಿಕ್ಕಲ್ಲ- ಹೊಸ ಬೆಸುಗೆಗೆ

ವಿನಯಾ ಒಕ್ಕುಂದ


ಕನ್ನಡದಲ್ಲಿ ಮಹಿಳಾ ಕವಿಗಳು ಮುಖ್ಯನೆಲೆಗೆ ಬಂದಿದ್ದಾರೆ ಮತ್ತು ಅವರು ತಮಗಾಗಿ ಬರೆಯುತ್ತಿದ್ದಾರೆ ಎನ್ನುವ ಮೂಲಕ ಪ್ರತಿಭಾ ನಂದಕುಮಾರ್ ಸದ್ಯದ ಕನ್ನಡ ಬರಹಲೋಕಕ್ಕೆ ಅಗತ್ಯವಾಗಿದ್ದ ವಾಗ್ವಾದವನ್ನು ಆರಂಭಿಸಿದ್ದಾರೆ. ಇದು ಕನ್ನಡ ಸಾಹಿತ್ಯ ಪರಂಪರೆ ಹೊಸ ಪಲ್ಲಟಕ್ಕೆ ಒಳಗಾದ ಕಾಲ. ಮಹಿಳೆಯರು ಅಭಿವ್ಯಕ್ತಿಯ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವು ಸರಿಯಾದದ್ದು. ಆದರೆ ಮಹಿಳಾ ಬರಹಗಳ ಕುರಿತ ಅಭಿಪ್ರಾಯವು ಪುರುಷ ಬರಹಗಳಿಗೆ ಪ್ರತಿಯಾಗಿಯೇ ರೂಪುಗೊಳ್ಳಬೇಕಿಲ್ಲ. ಮಹಿಳಾ ಅಭಿವ್ಯಕ್ತಿಯು ಕನ್ನಡ ಸಾಹಿತ್ಯವನ್ನು ಪಲ್ಲಟಗೊಳಿಸಿದ ಪ್ರಕ್ರಿಯೆ ಆರಂಭವಾದದ್ದು ಎಂಭತ್ತರ ದಶಕದಲ್ಲಿಯೆ. ಇದಕ್ಕೆ ದಲಿತ-ಬಂಡಾಯ ಸಾಹಿತ್ಯದ ಮನೋಧರ್ಮ ಒಂದು ಪ್ರೇರಕವಾದರೆ, ಎಪ್ಪತ್ತರ ದಶಕದಲ್ಲಾಗಲೇ ಕನ್ನಡವನ್ನು ಪ್ರವೇಶಿಸಿದ ಸ್ತ್ರೀವಾದಿ ಚಿಂತನೆ ಮತ್ತೊಂದು ಪ್ರೇರಕವಾಗಿತ್ತು. ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ ಎನ್ನುವ ‘ಜನಗಣತಿ’ ಆಧಾರದಲ್ಲಿ ಮಾತ್ರ ಈ ಅಭಿಪ್ರಾಯ ಮಂಡಿತವಾಗುವುದಿಲ್ಲ. ಅವರು ಏನನ್ನು ಬರೆಯುತ್ತಿದ್ದಾರೆ ಮತ್ತು ಹೇಗೆ ಬರೆಯುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಿಯೂ ಯಾವ ಮುಜುಗರವಿಲ್ಲದೆ, ಮುಲಾಜಿಗೆ ಒಳಗಾಗದೆ ಈ ಮಾತನ್ನು ಹೇಳಬಹುದು.
ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಪ್ರಧಾನ, ಉಪ ಎಂಬ ಧೋರಣೆ ಬಿಟ್ಟುಹೋಗಿಲ್ಲ. ಹಾಗಾಗಿಯೇ ಸಾಹಿತ್ಯದ ಠ ಛಿಚಿಟಟಜಜ ವಿಮರ್ಶಕರು ಹೊರಡಿಸುವ ಫಮರ್ಾನುಗಳಿಗೂ ಸೃಜನಶೀಲತೆಯು ಒಡನುಡಿವ ಜೀವನಾನುಭವಕ್ಕೂ ಸಂಘರ್ಷ ನಡೆದಿರುತ್ತದೆ. ಮಹಿಳಾ ಸಾಹಿತ್ಯದ ಸಂದರ್ಭದಲ್ಲಂತೂ ಈ ದೂರ ಇನ್ನೂ ಹೆಚ್ಚು. ತಿರುಮಲಾಂಬಾ ಅವರ ಕಾಲದಿಂದಲೂ ಇದು ಚಾಲ್ತಿಯಲ್ಲಿದೆ. ಸಾಹಿತ್ಯ ಚರಿತ್ರೆಯಲ್ಲಿ ಲೇಖಕಿಯರ ಚರಿತ್ರೆ ಯಾಕೆ ಇಲ್ಲವಾಗಿದೆ ಎಂಬುದೇ ಒಂದು ಚರಿತ್ರೆ. ಪಿತೃಪ್ರಧಾನ ದೃಷ್ಟಿಕೋನವು ಕೊಡಗಿನ ಗೌರಮ್ಮ ಮತ್ತು ತ್ರಿವೇಣಿ ಎಂಬ ಎರಡು ಗುರುತುಗಳನ್ನು ಮಾತ್ರ ಯಾಕಿಡುತ್ತದೆ? ಶ್ಯಾಮಲಾದೇವಿ ಬೆಳಗಾಂವಕರ, ಎಚ್.ವಿ. ಸಾವಿತ್ರಮ್ಮ ಇವರೆಲ್ಲ ಯಾಕೆ ಅಲಕ್ಷಿತರಾಗುತ್ತಾರೆ? ಈ ಆಯ್ದು ಕಟ್ಟುವ ತಂತ್ರ ಪಿತೃವ್ಯವಸ್ಥೆಯ ಚಿಂತನೆಯಲ್ಲಿ ಪ್ರಸಿದ್ಧವಾದುದೇ. ಪ್ರಶ್ನೆ ಎಂದರೆ ಇಂತಹ ಚಿಂತನಾ ವಿಧಾನವು ಪೂರಾ ಸ್ಥಗಿತವಾಗಿದೆಯೇ ಎನ್ನುವುದು. ಈ ಅನಾದಿ ಸಂಕಟ ಪ್ರತಿಭಾ ಅವರ ವಾದವನ್ನು ಪ್ರಭಾವಿಸಿದೆ.
ತೊಂಭತ್ತರ ದಶಕದಿಂದೀಚೆ ಕನ್ನಡ ಸಾಹಿತ್ಯದ ಧ್ಯೇಯ ಧೋರಣೆಗಳಲ್ಲಿ ಉಂಟಾದ ಬದಲಾವಣೆಯನ್ನು ಪ್ರತಿಭಾ ಅವರು ಗಮನಿಸಿದಂತಿಲ್ಲ. ವಿಮರ್ಶಕರನ್ನು ಪುರುಷ ಚಿಂತನೆಯ ವಕ್ತಾರರು ಎಂದು ಪ್ರತಿಪಕ್ಷದಲ್ಲಿಡಲಾದೀತೆ? ವಿಮರ್ಶಕರಲ್ಲಿ ಮಹಿಳೆಯರಿದ್ದಾರೆ ಎನ್ನುವುದರ ಕಡೆ ಗಮನ ಸೆಳೆವ ಶಶಿಕಲಾ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಹಿರಿಯ ವಿಮರ್ಶಕರಾದ ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಜಿ.ಎಸ್. ಅಮೂರ ಅವರನ್ನು ಮೊದಲು ಮಾಡಿಕೊಂಡು ವರ್ತಮಾನದ ವಿಮರ್ಶೆ ಕೂಡ ಮಹಿಳಾ ಬರಹವನ್ನು ಸಹೃದಯಿಯಾಗಿ ಸ್ವೀಕರಿಸಿದೆ. ಮಹಿಳಾ ಕೃತಿಗಳು ಬರೆಯಿಸಿಕೊಂಡ ಮುನ್ನುಡಿಗಳು ಮತ್ತು ಅಲ್ಲಿ ಮುನ್ನೆಲೆಗೆ ತರಲಾದ ಮುಖ್ಯ ಚಚರ್ೆಗಳನ್ನು ಗಮನಿಸಬಹುದು. ಎಚ್.ಎಸ್. ರಾಘವೇಂದ್ರರಾವ್, ಕೆ.ವಿ. ನಾರಾಯಣ, ನರಹಳ್ಳಿ ಬಾಲಸುಬ್ರಹ್ಮಣ್ಯ, ಓ.ಎಲ್. ನಾಗಭೂಷಣಸ್ವಾಮಿ, ರಹಮತ್ ತರೀಕೆರೆ ಇಂತಹ ಕೆಲವರನ್ನಾದರೂ ನೆನೆಯಲೇಬೇಕು.
ಒಂದು ಉದಾಹರಣೆಯನ್ನು ಗಮನಿಸುವುದಾದರೆ ಎಚ್.ಎಸ್. ಆರ್. ಅವರ ‘ಕಣ್ಣ ಹನಿಗಳೆ ಕಾಣಿಕೆ’ ಎಂಬ ಕೃತಿ. ಇದು ಮಹಿಳಾ ಬರಹಗಳಿಗೆ ಬರೆದ ಮುನ್ನುಡಿ-ಟಿಪ್ಪಣಿಗಳ ಸಂಕಲನ. 1975 ರಿಂದ 2012 ರ ವರೆಗಿನ ಅಭಿಪ್ರಾಯಗಳು ಇಲ್ಲಿವೆ. ಗಂಡಸರು ಸತ್ತು ಸ್ವರ್ಗ ಸೇರಿದರೆ ಅಪ್ಸರೆಯರಿದ್ದಂತೆ ಹೆಂಗಸರಿಗೆ ಅಪ್ಸರರು ಇದ್ದಾರೆ ಎಂಬ ಪ್ರಸ್ತಾಪವಿಲ್ಲ ಎನ್ನುವ ಸಾಮಾಜಿಕ ಸಂರಚನೆಯ ಶೋಧದಿಂದ ಹಿಡಿದು; ಲೇಖಕಿಯರು ಬರೆಯಬಹುದಾದ ಕುಸುಮಬಾಲೆ ಇನ್ನೂ ಬಂದಿಲ್ಲವೋ ಅಥವಾ ಅದು ಬಂದಿದ್ದರೂ ನಾವು ಗಂಡಸರು ಅದನ್ನು ಗುರುತಿಸಿಲ್ಲವೋ ಅಥವಾ ನೋಡಿಯೂ ಪಕ್ಕಕ್ಕೆ ತಳ್ಳಿದ್ದೇವೆಯೋ ಎನ್ನುವ ಸೂಕ್ಷ್ಮ ಒಳನೋಟಗಳು ಮತ್ತು ಹುಡುಕಾಟಗಳು ಇಲ್ಲಿವೆ. ಮಹಿಳಾ ಅಭಿವ್ಯಕ್ತಿಯ ಕಥನವನ್ನು ರೂಪಿಸುವ ಕ್ರಮ ಈ ಕೃತಿಯಲ್ಲಿದೆ. ಕಳೆದ ಮೂರು ವರ್ಷಗಳ ಹಿಂದೆ ಪದವಿ ವಿದ್ಯಾಥರ್ಿಗಳಿಗಿಗಾಗಿ ಪಠ್ಯ ಸಂಪಾದನೆ ಮಾಡುವ ಸಂದರ್ಭದಲ್ಲಿ ಎಚ್.ಎಸ್. ಆರ್. ಅವರೊಂದಿಗೆ ಚಚರ್ಿಸಿದ್ದೆ. ತೊಂಭತ್ತರ ನಂತರದ ಕನ್ನಡ ಸಾಹಿತ್ಯವನ್ನು ಮಹಿಳಾ ಸಾಹಿತ್ಯದ ಕಾಲ ಎಂದು ಗುರುತಿಸಬೇಕು ಎಂದಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀವಾದಿ ಚಿಂತನೆಯು ಕನ್ನಡ ಸಂವೇದನಾಶೀಲತೆಯನ್ನು ತೀವೃವಾಗಿ ಪ್ರಭಾವಿಸಿದೆ. ಮಹಿಳಾಪರ ನಿಲುವುಗಳು ಆಲೋಚನೆಯ ಭಾಗವಾಗಿ ಬೆರೆತಿವೆ. ಅನಾದಿಯಿಂದಲೂ ಸಾಹಿತ್ಯದಲ್ಲಿ ಹೆಣ್ಣು ಇದ್ದೇ ಇದ್ದಳು. ಅವಳು ಪಿತೃವ್ಯವಸ್ಥೆಯ ಪ್ರೇರಕಳೂ ಪೋಷಕಳೂ ಆಗಿ ಪುರುಷ ಚಿಂತನೆಯ ಕೆತ್ತೋಣದಲ್ಲಿ ಮೂಡಿದ್ದಳು. ಆದರೆ ಈಗ ಹೆಣ್ಣು ವ್ಯಕ್ತಿಯಾಗಿ, ತಪ್ಪು ಸರಿಗಳ ಒಳಿತು-ಕೆಡಕುಗಳ ಪಾಲುದಾರಳಾಗಿ ಒಟ್ಟೂ ಬದುಕಿನ ರಚನೆಯೊಳಗಿನ ಅನಿವಾರ್ಯತೆಯಾಗಿ ಅಗತ್ಯವೂ ಆಗಿ ಪ್ರತಿಪಾದಿತಳಾಗುತ್ತಿದ್ದಾಳೆ. ಅವಳ ಮನಸ್ಸನ್ನು, ಜಗತ್ತನ್ನು ಮಹಿಳಾ ಬರವಣಿಗೆಗಳು ಮಾತ್ರ ಅನಾವರಣಗೊಳಿಸಿಲ್ಲ. ಅದು ಒಟ್ಟೂ ಸಾಹಿತ್ಯದ ಸಂವೇದನೆಯೇ ಅಗಿ ಹರಹಿಕೊಂಡಿದೆ. ತೇಜಸ್ವಿಯವರ ಗಯ್ಯಾಳಿಗಳನ್ನು, ಪಾಕಶಾಸ್ತ್ರವನ್ನು ಹೀಗಲ್ಲದೆ ಹೇಗೆ ಓದುವುದು? ಜಯಂತ ಕಾಯ್ಕಿಣಿಯವರ ‘ಸರ್ಕಸ್ಸಿನಲ್ಲೊಂದು ಹೆರಿಗೆ’, ‘ಮೋಗ್ರಿಯ ಸತ್ಸಂಗ’ದಂತಹ ಕಥೆಗಳನ್ನು ಸ್ತ್ರೀವಾದಿ ಕಥೆಗಳು ಎನ್ನದಿರಬಹುದೆ?
ಹೀಗೆಂದಾಕ್ಷಣ ಕನ್ನಡ ಸಂವೇದನಾಶೀಲತೆ ಮಹಿಳೆಯ ಕಣ್ಣಿಂದಲೂ ಜಗತ್ತನ್ನು ನೋಡುವ ಪಲ್ಲಟ ಪ್ರಕ್ರಿಯೆಗೆ ಒಳಗಾಗಿ ಬಿಟ್ಟಿದೆ ಎನ್ನಲಾಗದು. ಕವಲು ಎಂಬ ಕೃತಿ ಬಂದ ಕಾಲವೂ ಇದೇ ಅಲ್ಲವೆ? ಮಹಿಳಾ ಸಾಹಿತ್ಯ ಕೇಂದ್ರಿತ ವಿಚಾರ ಸಂಕಿರಣಗಳ ಕೆಲ ಅನುಭವಗಳು ಹೀಗಿವೆ. (1) ವಿಚಾರ ಸಂಕಿರಣದ ಅಧ್ಯಕ್ಷತೆಯನ್ನೋ, ಸಮಾರೋಪವನ್ನೋ ವಹಿಸಿಕೊಂಡಿರುತ್ತಿದ್ದ ಹಿರಿಯ ನವ್ಯ ವಿಮರ್ಶಕರೊಬ್ಬರು, ಅದುವರೆಗಿನ ಗಂಭೀರ ಚರ್ಚೆಗೆ ನಗೆಯ ತೇಪೆ ಹಚ್ಚಿಬಿಡುತ್ತಾರೆ. ಸ್ತ್ರೀವಾದಿ ಚಿಂತನೆಯನ್ನು ಸಮಕಾಲೀನ ಎಂಬ ಸ್ನೇಹದಿಂದೇನೋ ಹಗೂರ ಲೇವಡಿ ಮಾಡುತ್ತಾರೆ. (2) ಇನ್ನೊಬ್ಬರು ಕಥೆಗಾರರು ಮತ್ತು ವಿಮರ್ಶಕರು. ಮಹಿಳಾ ಕಾವ್ಯದ ಬಗ್ಗೆ ಮಾತಾಡಿದವರೊಬ್ಬರು ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ಚರ್ಚೆ ಮಾಡಿದ್ದರು. ಇವರು ಕವಿತೆಯ ಸಾಲುಗಳ ಮೂಲಕ ಕವಿತೆಯನ್ನು ತಿಳಿಯಬಹುದೆ? ಎಂದು ಆಕ್ಷೇಪಿಸಿದರು. ಅಲ್ಲಿ ಸೇರಿದ್ದ ಮಹಿಳೆಯರು ಪಂಪನಿಗಾದರೆ ಕುವೆಂಪುವಿಗಾದರೆ ಉಲ್ಲೇಖಿಸಬಹುದು. ಅವರದೇ ಪರಿಭಾಷೆ, ಪರಿಕ್ರಮ, ನಮ್ಮ ಕೈಗೆ ಬಂದೊಡನೆ ವಿತಂಡವಾದ ಆರಂಭ ಎಂದಿದ್ದರು. (3) ಯುವ ಮಿತ್ರರೊಬ್ಬರು ವಿಚಾರ ಸಂಕಿರಣದಲ್ಲಿ ಮಹಿಳಾ ಸಾಹಿತ್ಯದ ಬಗ್ಗೆ ಮಾತನಾಡಲು ಬಂದು ಪುಸ್ತಕಗಳು ಸಿಗದಿರುವುದರ ಬಗ್ಗೆ ಹೇಳಿಕೊಂಡು ಮಾತು ಮುಗಿಸಿದರು. ಬೇರೆ ವಿಷಯವಾದರೆ ಹೀಗೆ ತೇಲಿಸಿ ಮಾತನಾಡುತ್ತಾರೆಯೇ? ಎಂದು ನೋಯುವಂತಾಗಿತ್ತು. ಇಂತಹ ಸಂಗತಿಗಳು ಸತತವಾಗಿ ನಡೆಯುತ್ತವೆ ಮತ್ತು ಮಹಿಳಾ ಸಾಹಿತ್ಯದ ಬಗೆಗಿನ ತಾತ್ಸಾರ ಧೋರಣೆಯನ್ನು ಸಾರುತ್ತವೆ.
ಹಾಗಾಗಿ ಮಹಿಳಾ ಬರಹವನ್ನು ಓದುವ ಬದಲೀ ದೃಷ್ಟಿಕೋನದ ಅಗತ್ಯ ಕಾಣುತ್ತದೆ. ಆಧುನಿಕ ಕಾಲದಲ್ಲೂ ಮಹಿಳಾ ಬರಹ ಪುರುಷ ಹಿತಾಸಕ್ತಿಯ ಕೇಂದ್ರದಲ್ಲೇ ಸುತ್ತಿದೆ. ಸಂಯಮ, ತಾಳ್ಮೆ, ಬಿಡುಗಡೆ, ಪ್ರತಿರೋಧ ಈ ಎಲ್ಲ ಪರಿಭಾಷೆಗಳೂ ಪುರುಷ ನೆಲೆಯಿಂದಲೇ ಅರ್ಥೈಸಲ್ಪಡುತ್ತವೆ. ಮಹಿಳೆ ಬದುಕಿನ ಕಟ್ಟೋಣದಲ್ಲಿ ಈ ಎಲ್ಲವುಗಳನ್ನು ಅರ್ಥೈಸಿಕೊಳ್ಳುವ ಬಗೆ ಬೇರೆಯಾಗಿರುತ್ತವೆ. ಗೃಹಕೃತ್ಯ ಪುರುಷ ಚಿಂತನೆಗೆ ಒಂದು ಕೆಲಸ, ಹೆಣ್ತನದ ಕರ್ತವ್ಯ ಮತ್ತು ಕೌಟುಂಬಿಕ ವಾತ್ಸಲ್ಯ. ಹೆಣ್ಣಿಗೆ ಅದು ಕೌಶಲ ಮತ್ತು ಅಸ್ತಿತ್ವದ ಗುರುತು. ಪಿತೃವ್ಯವಸ್ಥೆಯ ರಾಜಕಾರಣ ಹಾಗೂ ಆ ರಾಜಕೀಯ ಸಂಹಿತೆಯನ್ನು ವಿವರಿಸುವ ಗುರುಮನೆ. ಬಂಧನವೂ ಬಿಡುಗಡೆಯೂ. ಈ ಅಂತರಾಳವನ್ನು ಮೊಗೆದುಕೊಡಲು ಕನ್ನಡ ಪ್ರಜ್ಞೆ ಸಾಕಷ್ಟು ಒಳನೋಟವನ್ನು ಹರಿಸಬೇಕಿದೆ. ಅದಿಲ್ಲದಿದ್ದಾಗ ಮಹಿಳಾ ಬರಹದಲ್ಲಿ ಅಡಿಗೆಯ ಲೋಕವೋ ಖಾಸಗಿ ದರ್ಬಾರೋ ಕಾಣಿಸುತ್ತದೆ ಎಂದು ತಿಳಿಯಲಾಗುತ್ತದೆ. ರಾಜಕೀಯ ಪ್ರಜ್ಞೆಯ ಕುರಿತ ಪಿತೃವ್ಯವಸ್ಥೆಯ ಪರಿಭಾಷೆ ಇಲ್ಲಿ ಅನ್ವಯವಾಗುವುದಿಲ್ಲ. ಹಾಗಾಗಿ ಮಹಿಳಾ ಕಾವ್ಯಮೀಮಾಂಸೆಯು ರೂಪುಗೊಳ್ಳಬೇಕಾದ ಅಗತ್ಯವನ್ನು ಪ್ರತಿಭಾ ಅವರ ವಾದವು ಮುಂಚೂಣಿಗೆ ತರುತ್ತಿದೆ.
ಇದಕ್ಕೆ ಬಂದ ಪ್ರತಿಕ್ರಿಯೆಗಳು ಬರಹದ ಕುರಿತ ಪ್ರಾಥಮಿಕ ತೊಡಕನ್ನು ಬಿಡಿಸಲು ಒತ್ತಾಯಿಸುತ್ತವೆ. ಹೌದು, ಲೇಖಕರು ಹೆಣ್ಣಾಗಲಿ, ಗಂಡಾಗಲಿ ಅವರ ಸಂವೇದನಾ ಸಾಧ್ಯತೆಯೇ ಬರಹವನ್ನು ರೂಪಿಸುವುದು. ಆದರೆ ಸಂವೇದನೆ ರೂಪಣಗೊಳ್ಳುವುದೇ ಜೀವವು ಬದುಕುವ ಬೆಳೆಯುವ ಪರಿಸರದ ಪ್ರಭಾವದಲ್ಲಿ. ಬದುಕನ್ನು ಎಚ್ಚರದಿಂದ ಗಮನಿಸುವುದಕ್ಕಿಂತ ಮುಂಚೆಯೇ ಹೆಣ್ಣು-ಗಂಡು ಎಂಬ ಬೇಧ ನಿರ್ಮಾಣಗೊಂಡಿರುತ್ತದೆ. ಬೆಳೆಯುತ್ತ ಹೆಣ್ಣಾಗಿಯೋ ಗಂಡಾಗಿಯೋ ಮಾತ್ರವಲ್ಲ, ಹೆಣ್ಣಲ್ಲದೆಯೂ, ಗಂಡಲ್ಲದೆಯೂ ಬೆಳೆಯುತ್ತೇವೆ. ಅವಕಾಶಗಳು ಆಸ್ಪದಗಳು ಈ ಗಡಿರೇಖೆಯೊಳಗೇ ದಕ್ಕುತ್ತವೆ ಅಥವಾ ತಪ್ಪುತ್ತವೆ. ಲಿಂಗವ್ಯವಸ್ಥೆಯು ಜೀವದ ಸಂವೇದನೆಯನ್ನು ನಿಯಂತ್ರಿಸುವ ಮತ್ತು ನಿರೂಪಿಸುವ ವ್ಯವಸ್ಥೆಯೂ ಹೌದು. ಬರಹಗಾರನ ಸಂವೇದನಾ ತಾಕತ್ತು ನೆಲದ ಹಂಗು ಹರಿದು ಅಲಾಯದವಾಗಿ ಸಂಭವಿಸುವಂಥದ್ದಲ್ಲ.
ಶಶಿದೇಶಪಾಂಡೆಯವರು ಸ್ತ್ರೀವಾದಿ ಓದಿನ ಪೂರ್ವಕಲ್ಪಿತ ನೆಲೆಯ ಬಗ್ಗೆ ತಕರಾರೆತ್ತುತ್ತಾರೆ. ಬರಹವೇ ಒಂದು ಅಖಂಡ ಆಯಾಮ ಅದನ್ನು ಅದಾಗಿ ಮಾತ್ರ ನೋಡಬೇಕೆನ್ನುವುದು ಸೃಜನಶೀಲತೆಯ ಶಕ್ತಿ ನಿಜ. ಆದರೆ ಯಾವುದನ್ನು ಅನುಭವದ ಅನನ್ಯತೆ ಎನ್ನುತ್ತೇವೋ ಅದು ಲಿಂಗತಾರತಮ್ಯದಂತೆ ಹಲವು ತಾರತಮ್ಯಗಳ ಸಂತುಲಿತವೇ ಆಗಿರುತ್ತದೆ. ಬರಹಗಾರರೂ ವ್ಯಕ್ತಿಗಳೇ. ವ್ಯಕ್ತಿಗಳ ವ್ಯಕ್ತಿತ್ವ ಸಮುದಾಯದೊಂದಿಗಿನ ಹೊಕ್ಕುಬಳಕೆಯಲ್ಲಿಯೆ ರೂಪುಗೊಂಡಿರುತ್ತದೆ. ಆದ್ದರಿಂದ ವ್ಯಕ್ತಿಗಳು ಸಮೂಹದ ಭಾಗವೇ. ಬರಹವೂ ಸಮೂಹದ ಭಾಗವೇ.
ಶಶಿ ದೇಶಪಾಂಡೆಯವರು ಬಂಡಾಯದ ಕಲ್ಪಿತವನ್ನು ಒಡೆಯುವ ಕ್ರಮ ತೀವೃವಾದದ್ದು. ಮಹಿಳೆಯಾಗಿ ಮತ್ತು ಲೇಖಕಿಯಾಗಿ ನಾನು ಬದಲಾಗುತ್ತೇನೆ ಎಂದು ಹೇಳುವಾಗ ಬರಹದ ಒಳಬಂಡಾಯವನ್ನವರು ಸೂಚಿಸುತ್ತಾರೆ. ಇದನ್ನೆಲ್ಲ ಸ್ತ್ರೀವಾದಿ ಚಿಂತನೆಯೂ ಹೇಳುತ್ತದೆ. ಮಹಿಳಾ ಬರಹಗಾರರೆಲ್ಲರೂ ಸ್ತ್ರೀವಾದಿಗಳಲ್ಲ. ಹಾಗೆ ಸ್ತ್ರೀವಾದಿ ಚಿಂತನೆಯನ್ನು ಹೊಂದಿದವರು ಮಹಿಳೆಯರು ಮಾತ್ರವೇ ಆಗಬೇಕಾಗಿಲ್ಲ. ಸ್ತ್ರೀವಾದ ಎನ್ನುವುದು ಚಿಂತನಾ ವಿಧಾನವೇ ವಿನಃ ಜೈವಿಕತೆಯಲ್ಲ, ಜೈವಿಕತೆ ಅದನ್ನು ವಿವರಿಸಿಕೊಳ್ಳುವ ಕ್ರಮ ಅಷ್ಟೇ.
ಸ್ತ್ರೀವಾದವೆನ್ನುವುದು ರೂಕ್ಷವಾದ ಸಿದ್ಧಾಂತ ಎಂದು ಹೊರಟರೆ ಆ ಚಿಂತನೆಯ ಪ್ರವೇಶ ಮತ್ತು ಸ್ಥಿತ್ಯಂತರಗಳನ್ನು ನಿರಾಕರಿಸಿದಂತಾಗುತ್ತದೆ. ಅದು ಭಾರತೀಯ ಸಮಾಜ ವ್ಯವಸ್ಥೆಯೊಳಗೆ ಸಾಕಷ್ಟು ಮಿದ್ದು ಹದವಾಗಿದೆ. ಕೃತಿಯೊಂದರ ಓದಿಗೆ ಹಲವು ಹಾದಿಗಳು ಯಾವತ್ತಿನಿಂದಲೂ ಇವೆ. ಸ್ತ್ರೀವಾದದ ಪ್ರವೇಶ ಮತ್ತೊಂದು ಸೀಳುಹಾದಿಯನ್ನು ಹಾಕಿಕೊಂಡಿದೆ. ಹಾಗೆಂದಾಕ್ಷಣ ಅದು ಉಳಿದವುಗಳನ್ನು ನಿರಾಕರಿಸುತ್ತದೆ ಎಂದಲ್ಲ. ಲಕ್ಷ್ಮೀಶ ಕವಿಯ ‘ಸೀತಾಪರಿತ್ಯಾಗ’ ಭಾಗದಲ್ಲಿ ಸೀತೆ ಲಕ್ಷ್ಮಣನಿಗೆ ನೆರವುಂಟು ತನಗೀಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು ಎಂಬ ಮಾತು ಸ್ತ್ರೀವಾದಿ ತಾತ್ವಿಕತೆ ಇಲ್ಲದಿದ್ದಾಗ ರಾಮನ ಬಗೆಗಿನ ಪ್ರೇಮವಾಗಿ ಕಾಣುತ್ತದೆ. ಸ್ತ್ರೀವಾದಿ ನೋಟಕ್ಕೆ ರಘುರಾಮನನ್ನು ನಿವಾಳಿಸಿ ಒಗೆವ ತೀಕ್ಷ್ಣ ವ್ಯಂಗ್ಯವಾಗಿ ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಕಾವ್ಯದ ಉಳಿದ ಸಾಧ್ಯತೆಗಳೇಕೆ ಮಸಕಾಗುತ್ತವೆ? ಮಲೆಗಳಲ್ಲಿ ಮದುಮಗಳು ಕೃತಿಯನ್ನು ದೇಯಿ, ತಿಮ್ಮಿ, ಪೀಂಚಲು ಮೂಲಕ ಪ್ರವೇಶಿಸಿದಾಗ ಅಗಮ್ಯವಾಗಿದ್ದ ಮತ್ತೊಂದು ಹಾದಿ ತೆರೆಯುತ್ತದೆಯೆ ವಿನಃ ಒಟ್ಟೂ ಕೃತಿಯ ಓದನ್ನು ಮೊಟಕುಗೊಳಿಸುತ್ತದೆಯೇ? ಇದೊಂದು ಓದುವಿಕೆಯೇ ಅಲ್ಲ ಎನ್ನಲಾದೀತೆ? ಸ್ತ್ರೀವಾದಿ ಓದು ಒಂದು ಪೂರ್ವಗ್ರಹ ಓದು. ಆದರದು ಕೃತಿಯ ಒಟ್ಟೂ ಕೇಂದ್ರವನ್ನು ಪ್ರವೇಶಿಸಲು ಇರುವ ದಾರಿ. ಇದು ಮಹಿಳಾ ಸಾಹಿತ್ಯವನ್ನು ಓದುವ ಕ್ರಮ ಮಾತ್ರವಲ್ಲ, ಒಟ್ಟೂ ಸಾಹಿತ್ಯವನ್ನೂ ಕಲೆಯನ್ನೂ ಬದುಕನ್ನೂ ಓದುವ ಕ್ರಮ.
ಬದುಕು ಬದಲಾಗಿದೆ ಎಂದು ಶ್ರೇಣೀಕೃತ ವ್ಯವಸ್ಥೆಯ ಮೇಲ್ತುದಿಯಲ್ಲಿದ್ದವರಿಗೆ ಯಾವತ್ತೂ ತೋರುತ್ತದೆ. ಕೆಳ ಅಂಚಿನ ಜಗತ್ತು, ಬದುಕು ಬದಲಾಗುತ್ತದೆ- ಬದಲಾಗಬೇಕಿದೆ- ಬದಲಾಗುತ್ತಿದೆ ಎಂಬ ಹುಡುಕಾಟದಲ್ಲಿರುತ್ತದೆ. ಇದು ಸ್ತೀವಾದಿ ಸಂಕಥನ. ಬರಹಗಾರ್ತಿ ಪರಂಪರೆಗೆ ಆತುಕೊಂಡಿರುವುದಿಲ್ಲ. ಆದರೆ ಅಂತಹ ವಾಸ್ತವವನ್ನು ಅಲಕ್ಷಿಸುವುದೂ ಇಲ್ಲ. ಸ್ತ್ರೀವಾದಿ ತಾತ್ವಿಕತೆಯ ಬದಲೀ ಓದು ಮಹಿಳಾ ಬರಹಕ್ಕೆ ಮಾತ್ರವಲ್ಲ. ಒಟ್ಟಾರೆ ಕಣ್ಣೋಟಕ್ಕೆ ಅಗತ್ಯವಾಗಿದೆ. ಒಡೆದಿಡಲಿಕ್ಕಲ್ಲ- ಹೊಸ ಬೆಸುಗೆ ಹಾಕಲಿಕ್ಕೆ.

‍ಲೇಖಕರು G

24 July, 2013

2 Comments

  1. yash

    lekhana ishtavayitu adarallu…
    ಬದುಕು ಬದಲಾಗಿದೆ ಎಂದು ಶ್ರೇಣೀಕೃತ ವ್ಯವಸ್ಥೆಯ ಮೇಲ್ತುದಿಯಲ್ಲಿದ್ದವರಿಗೆ ಯಾವತ್ತೂ ತೋರುತ್ತದೆ. ಕೆಳ ಅಂಚಿನ ಜಗತ್ತು, ಬದುಕು ಬದಲಾಗುತ್ತದೆ- ಬದಲಾಗಬೇಕಿದೆ- ಬದಲಾಗುತ್ತಿದೆ ಎಂಬ ಹುಡುಕಾಟದಲ್ಲಿರುತ್ತದೆ.

  2. ಜಿ.ಎನ್ ನಾಗರಾಜ್

    ವಿನಯಾರವರೇ ಬಹಳ ದಿನಗಳ ನಂತರ ನಿಮ್ಮ ಸಂಪರ್ಕ. ನಿಮ್ಮ ಪ್ರೌಢ ಪ್ರಬಂಧವನ್ನು ಉಪಯೋಗಿಸಿದ ಪುಸ್ತಕ ಇನ್ನೂ ಬರಲೇ ಇಲ್ಲ.ಇರಲಿ ಈ ಪ್ರಬಂಧ ಚೆನ್ನಾಗಿದೆ.ಆದರೆ ಮಹಿಳಾ ಯುವ ಜನಾಂಗದ ನಡುವೆ ಸಾಹಿತ್ಯದ ಅಭಿರುಚಿಯನ್ನು ಉಂಟು ಮಾಡುವ ಪ್ರಯತ್ನಗಳು ಅಗತ್ಯ ಎಂದೆನಿಸುತ್ತದೆ.ಯುವತಿಯರ ಸಾಹಿತ್ಯ ಸಂಘಗಳು,ಬರವಣಿಗೆಯ ಶಿಬಿರಗಳು ಹೀಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading