ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಎಂ ಜಿ ಗಾಯತ್ರಿ ಶೇಷಗಿರಿ ಅವರ ‘ಜೋಪಾನ ಸಖೀ ಜೋಪಾನ’

‘ಶಾಯರಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಕೆ ಆರ್ ಉಮಾದೇವಿ ಉರಾಳ ಅವರ ಅನಿಸಿಕೆ ಇಲ್ಲಿದೆ.

ಕೆ ಆರ್ ಉಮಾದೇವಿ ಉರಾಳ

“ಜೋಪಾನ ಸಖೀ, ಜೋಪಾನ” ಸ್ತನ ಕ್ಯಾನ್ಸರ್ ಮಾಹಿತಿ ಕಥನ ಪತ್ರಕರ್ತೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿಯವರ ಕ್ಯಾನ್ಸರ್ ಬಗೆಗಿನ ಲೇಖನಗಳು ಹಾಗೂ ಸಂದರ್ಶನಗಳನ್ನು ಸಂಗ್ರಹಿಸಿ ಸಂಪಾದಿಸಿ ನಿರೂಪಿಸಿರುವ ೧೨೮ ಪುಟಗಳ ಇದೇ ಕ್ಯಾನ್ಸರ್ ಜಾಗೃತಿ ಮಾಸ ಅಕ್ಟೋಬರ್ ನಲ್ಲಿ ಲೋಕಾರ್ಪಣೆಗೊಂಡ ಶಾಯರಿ ಪ್ರಕಾಶನದ ಕೃತಿ. ಸ್ತನ ಕ್ಯಾನ್ಸರ್ ಬಾಧಿತರಾಗಿ ಶಸ್ತ್ರಚಿಕಿತ್ಸೆ ಕಿಮೋ ರೇಡಿಯೇಷನ್ ಎಂದು ಎಲ್ಲಾ ಹಂತಗಳ ಅಗ್ನಿದಿವ್ಯಗಳನ್ನೂ ದಾಟಿ ಬಂದು ಅಂತಿಮವಾಗಿ ಮನಃಸ್ಥೈರ್ಯವನ್ನು ಪುಟಕ್ಕಿಟ್ಟ ಚಿನ್ನದಂತೆ ಪ್ರಜ್ವಲಿಸಿಕೊಂಡ ಕ್ಯಾನ್ಸರ್ ಗೆದ್ದು ಬಂದವರ ಕಥನಗಳನ್ನು ಲೇಖಕಿ ಇಲ್ಲಿ ನಿರೂಪಿಸಿದ್ದಾರೆ. ಎಲ್ಲವೂ ಅನುಭವಜನ್ಯ ಸತ್ಯ ಘಟನೆಗಳು. ಸತ್ಯಕ್ಕೆ ಸಮರ್ಥನೆ ಬೇಕಿಲ್ಲವಾದುದರಿಂದ ಅವು ನೇರವಾಗಿ ಓದುಗರ ಮನತಟ್ಟುತ್ತವೆ.

ಕ್ಯಾನ್ಸರ್ ಬಾಧಿತರು ಲೇಖಕಿಯ ಎದುರು ತಮ್ಮ ಅಂತರಂಗ ತೆರೆದಿಟ್ಚು ಆಮೂಲಾಗ್ರ ತಾವು ಅನುಭವಿಸಿದ್ದ ಅಸಹನೀಯ ವೇದನೆಗಳನ್ನು, ನಂತರದಲ್ಲಿ ತಾವು ಗಟ್ಟಿಗೊಳಿಸಿಕೊಂಡ, ಅನಿವಾರ್ಯವೂ ಆಗಿದ್ದ ಅಂತಃಸತ್ವಗಳನ್ನು ಮನಬಿಚ್ಚಿ ಹೇಳಿದ್ದಾರೆ. ಸಂತ್ರಸ್ತರ ದುಃಖಕ್ಕೆ ಮನತೆತ್ತು ಸಹೃದಯತೆಯಿಂದ ಕಿವಿಯಾದ ಲೇಖಕಿಯ ಅಂತಃಕರಣವನ್ನೂ ಇದು ಸೂಚಿಸುತ್ತದೆ. ಲೇಖಕಿಯ ಈ ಆರ್ದ್ರ ಅಂತಃಕರಣಕ್ಕೂ ಒಂದು ಕಾರಣವಿದೆ. ಸ್ವತಃ ತಮ್ಮ ಅಕ್ಕ ಇದೇ ಕ್ಯಾನ್ಸರ್ ನಿಂದ ಜೀವತೆತ್ತ ಶೋಕದ ಬೇಗುದಿಯಲ್ಲಿ ಬೆಂದವರು ಗಾಯತ್ರಿ. ಆ ನೋವು ಅವರಿಗೆ ನೊಂದವರ ಕುರಿತ ಸಹಜಾನುಕಂಪೆಗೆ ಕಾರಣವಾಗಿದೆ. ಈ ಪುಸ್ತಕವನ್ನೂ ಅಕ್ಕನಿಗೇ ಅರ್ಪಿಸಿದ್ದಾರೆ. ಅಂತಿಮವಾಗಿ ಕಡು ಕಷ್ಟಗಳ ಸರಣಿ, ದುಃಖ ಎಂಬುದು ಮನವನ್ನು ಮಥಿಸುವ ಕಡೆಗೋಲು; ಬದುಕಿನೆಡೆಗಿನ ಆತ್ಮಸ್ಥೈರ್ಯವೇ  ಆ ಮಥನದಿಂದ ಮೂಡಿಬಂದ ನವನೀತ ಎಂಬ ತತ್ವ ಇಲ್ಲಿ ಹೇಳದೆಯೂ ಹೊರಹೊಮ್ಮಿದೆ. ಸ್ತನದ ಕ್ಯಾನ್ಸರ್ ಕುರಿತು ಮಹಿಳೆಯರು ಜಾಗೃತಿ ಮೂಡಿಸಿಕೊಳ್ಳಲಿ ಎಂಬ ಗಾಯತ್ರಿಯವರ ಉದ್ದೇಶ ಈ ಪುಸ್ತಕದ ಓದಿನಿಂದ ಈಡೇರುತ್ತದೆ ಎಂಬ ಭರವಸೆ ಮೂಡುತ್ತದೆ. “ನೋವು ನುಂಗಿ ನೀ ನಕ್ಕಾಗ” ಎಂಬ ಕ್ಯಾನ್ಸರ್ ಬಾಧಿತರ ಅಂತರಂಗದ ಪುಟಗಳು ಹಾಗೂ “ಅಂತರಂಗದಿಂದ ಅರಿವಿನೆಡೆಗೆ” ಎಂಬ ವೈದ್ಯರ ಮಾರ್ಗದರ್ಶನದ ಲೇಖನಗಳು ಎಂದು ಎರಡು ಭಾಗಗಳಾಗಿ ಪುಸ್ತಕದ ವಿಂಗಡಣೆ ಇದೆ. ಜಿ.ಎಸ್.ರಾಜೇಂದ್ರ ಅಸುರನಾಡುರವರ ಮುನ್ನುಡಿ ಹಾಗೂ ಡಾ.ಬಿ.ಗಣಪತಿ ಉತ್ತುಂಗರವರ ಬೆನ್ನುಡಿ ಇದೆ.

ಮೊದಲ ಪ್ರಕರಣದ ಕ್ಯಾನ್ಸರ್ ಬಾಧಿತೆ ಇನ್ನೂ ಮೂವತ್ತೈದರೊಳಗಿನ ಯುವತಿ. ಡಾಕ್ಟರರಿಂದ ಇನ್ನು ಐದು ವರ್ಷ ಬದುಕಬಹುದಾದ ಆಶ್ವಾಸನೆ ಪಡೆಯುತ್ತಾರೆ. “ಐದು ವರ್ಷ ಇದೆ ತಾನೇ, ಅದನ್ನು ಎಷ್ಟು ಬೇಕಾದರೂ ಮುಂದುವರಿಸಿಕೊಂಡು ಹೋಗುವ ಆತ್ಮಶಕ್ತಿ ನನಗಿದೆ” ಎಂದು ಸ್ವಯಂ ಆಶ್ವಾಸನೆ ಕೊಟ್ಟುಕೊಳ್ಳುವ ಆ ಯುವತಿಯ ಜೀವನ್ಮುಖೀ ಮನೋಭಾವಕ್ಕೆ ಪ್ರೇರೇಪಣೆ ಗಂಡ ಮತ್ತು ಇಬ್ಬರು ಮಕ್ಕಳೆಡೆಗಿನ ತನ್ನ ಕರ್ತವ್ಯಪರತೆ. ಈ ಸ್ವಯಂ ಸಂಕಲ್ಪದೊಡನೆಯೇ ‘ತನ್ನಿಂದಲೇ ಜಗಕ್ಕೆ ಬೆಳಕು ಹರಿಯುತ್ತದೆಂಬುದು ಭ್ರಮೆ. ತಾವಿಲ್ಲದೆಯೂ ಎಲ್ಲರೂ ಚೆನ್ನಾಗಿರುತ್ತಾರೆಂಬ ಪಾಠವನ್ನು  ದೇವರು ಈ ಕಾಯಿಲೆಯಿಂದ ಕಲಿಸಿದ’ ಎಂಬ ಪ್ರಬುದ್ಧತೆ ಮೆರೆಯುತ್ತಾರೆ. ಇಂತಹ ನೈಜ ಅರಿವು ಮೂಡಿಸುವ  ಕಡುಕಷ್ಟ ಎನ್ನುವುದು ನಿಜಕ್ಕೂ ಬದುಕಿನಲ್ಲಿ ರಸಗಟ್ಟಿಯೇ ಸರಿ ಎನಿಸದಿರದು.

ಪ್ರಸಿದ್ಧ ವೈದ್ಯರ ಪತ್ನಿಗೇ ಸ್ತನ ಕ್ಯಾನ್ಸರ್ ಬರುತ್ತದೆ. ಪ್ರತಿ ಕಿಮೋ ಸಂದರ್ಭದಲ್ಲಿ ಐದಾರು ದಿನಗಳು ಸಹನಾತೀತ ವೇದನೆ. ತನ್ನನ್ನು ನೋಡಲು ಯುಎಸ್ ನಿಂದ ಅಣ್ಣ ಅತ್ತಿಗೆ ಬರುತ್ತಿದ್ದಾರೆಂದಾಗ ಕಿಮೋ ಆದ ಮಾರನೇ ದಿನವೇ ತಾನೇ ನಿಂತು ಮನೆ ಸ್ವಚ್ಛ ಮಾಡಿಸಿ ಎಲ್ಲಾ ವ್ಯವಸ್ಥೆ ಮಾಡಿ, ಬಡಿಸಿ ಉಣಿಸಿ ಅವರೊಂದಿಗೆ ತಿರುಗಾಡಿಕೊಂಡು ಬಂದು ಚೆನ್ನಾಗಿರಲು ಸಾಧ್ಯವಾದ ಅನುಭವ ಕಲಿಸಿದ ಪಾಠ ಎಂದರೆ “ಈ ಸಮಯದಲ್ಲಿ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡಿದ್ದರೆ, ನೋವು ಬೇಸರದ ಗಳಿಗೆಯಿಂದ ಆಚೆ ಬರಲು ಸ್ವಲ್ಪಮಟ್ಟಿಗೆ ಸಾಧ್ಯವಾಗುತ್ತದೆ”. ೪೩ ವರ್ಷದ ಮತ್ತೊಬ್ಬ ಮಹಿಳೆ ಮುಟ್ಟಿನ ಸಮಯದಲ್ಲೇ ಕಿಮೋಗೊಳಗಾಗುತ್ತಾಳೆ. ತನಗೆ ಋತುಸ್ರಾವದ ಸಮಯ ಎಂಬುದನ್ನು ತಿಳಿಸಬೇಕೆಂಬ ಅರಿವು ಆಕೆಗಿಲ್ಲ, ಆ ಮಾಹಿತಿ ಡಾಕ್ಟರ್ ನೀಡಿರುವುದಿಲ್ಲ. ಪರಿಣಾಮ ಮೈಯ್ಯ ರಕ್ತ ಪೂರಾ ಬಸಿದು ಹೋದಂತಹ ಪರಿಸ್ಥಿತಿ ಉಂಟಾಗುತ್ತದೆ. ಮಾಹಿತಿಗಳನ್ನು ವೈದ್ಯರು ನೀಡಲೇಬೇಕಾದ, ರೋಗಿಯೂ ಅರಿತಿರಬೇಕಾದ ಅಗತ್ಯವನ್ನು ಇದು ಸೂಚಿಸುತ್ತದೆ. ಪತಿ ಮರಣಿಸಿ  ವರ್ಷವೂ ಆಗಿಲ್ಲದ ಮಧ್ಯ ವಯಸ್ಕ ಮಹಿಳೆ ಹುರುಳಿ ಕಾಳಿನಷ್ಟು ಸಣ್ಣಗೆ ಕಂಡು ಬಂದ ಗಂಟಿನಿಂದಾಗಿ ಚಿಕಿತ್ಸೆಗೊಳಗಾಗಿ ಸ್ತನವನ್ನೇ ತೆಗೆಸಿಕೊಳ್ಳಬೇಕಾಗುತ್ತದೆ. ಅದು ಕೊರೋನಾ ಸಂದರ್ಭ ಬೇರೆ. ಗಂಡ ಮರಣಿಸಿದ್ದರಿಂದ ಆತನ ಬ್ಯುಸಿನೆಸ್ ಹೊಣೆಹೊತ್ತು, ಆತನ ಚಿಕಿತ್ಸೆಗಾಗಿ ಮಾಡಿದ್ದ ಸಾಲ ತೀರಿಸುವುದು, ಮಕ್ಕಳ ವಿದ್ಯಾಭ್ಯಾಸದ ಖರ್ಚು ಎಂದು ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಿತ್ತು. ಗಂಡನ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಾಣಿಕೆ ಮಾಡುವಾಗ ಕಾರಿನಲ್ಲಿ ಮಗನೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರಿಗೆ ಅಪಘಾತವಾಗಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಮುಂದೆ ಮಗನ ಗೆಳೆಯ ಚಲಾಯಿಸುತ್ತಿದ್ದ ಕಾರಿಗೆ ಅಪಘಾತವಾಗಿ ಮಗನ ದೇಹದಿಂದ ರಕ್ತದ ಹೊಳೆ ಹರಿದಿತ್ತು. ಯಾರಿಗೂ ಕೇಡು ಬಯಸದ ತನಗೇಕೆ ಹೀಗೆ ಕಷ್ಟಗಳ ಸರಣಿ ಎನ್ನುತ್ತಾರಾದರೂ, ಕುಟುಂಬ, ಬಂಧುಗಳು, ಸ್ನೇಹಿತರ ಒತ್ತಾಸೆ ಲಭಿಸಿದ್ದ ಈಕೆ ಬಂದದ್ದು ಬರಲಿ ಎದುರಿಸುವ ಧೈರ್ಯ ಆತ್ಮವಿಶ್ವಾಸ ಸಂಕಲ್ಪವಿದ್ದರೆ ಸಾಕು ಎನ್ನುವ ಸ್ಥೈರ್ಯ ತೋರುತ್ತಾರೆ.

ಕ್ಯಾನ್ಸರ್ ಪೀಡಿತರಿಗೆ ಅಡ್ಡೇಟಿನ ಮೇಲೆ ಗುಡ್ಡೇಟು ಎಂಬಂತೆ ಎದುರೆದುರೇ ಮುಖಕ್ಕೆ ಹೊಡೆದಂತೆ ಒಂದು ಬ್ರೆಸ್ಟ್ ಇಲ್ಲದೆ ಗಂಡನಿಗೆ ಅಸಮಾಧಾನವಾಗದೇ; ದೇಹವೆಲ್ಲಾ ಕೊಯಿಸಿಕೊಂಡಿರುವ ನಿಮಗೇಕೆ ಅಲಂಕಾರ; ನಿನ್ನ ಗಂಡ ಬೇರೆ ಮದುವೆ ಆದ್ರೆ ನಿನ್ನ ಗತಿ ಏನು; ಕ್ಯಾನ್ಸರಿಂದ ಅವರು ಸತ್ತರು ಇವರು ಸತ್ತರು ನೀನೂ ಬೇಗ ಆಸ್ತಿ ಬರೆದಿಟ್ಟುಬಿಡು ಎನ್ನುವಂತಹ ಮಾತುಗಳನ್ನಾಡುವ ದಪ್ಪ ಚರ್ಮದವರ ಕುರಿತು ಕ್ಯಾನ್ಸರಿನಂತಹ ದುಃಸ್ಥಿತಿಯನ್ನೇ ಎದುರಿಸಿದವರು ಹೇಳುತ್ತಾರೆ, “ನನಗೀಗ ಯಾರ ಮೇಲೂ ಯಾವ ಭಾವನೆಯೂ ಇಲ್ಲ. ಹಠ ಸಿಟ್ಟು ಹಾಗಿರಲಿ, ಅಸಮಾಧಾನ ಕೂಡ ಆಗುವುದಿಲ್ಲ” ಎಂಬಂತಹ ನಿರ್ಲಿಪ್ತಿ ತೋರುವಾಗ ಬದುಕಿನ ಕಡುಕಷ್ಟ ಎಂಬುದು ಎಂತಹ ನಿಷ್ಠುರಿ ಗುರು ಎನಿಸುತ್ತದೆ. ಇಂತಹ ಮಾತುಗಳನ್ನು ಕೇಳಿ ಮನೋರೋಗಿಯಾದಾಕೆಯ ಉದಾಹರಣೆಯೂ ಇಲ್ಲಿದೆ.

ಪುಸ್ತಕದಲ್ಲಿ ಲೇಖಕಿ ವೈಜ್ಞಾನಿಕವಾಗಿ ಕಾಯಿಲೆ ವಿವರಿಸುವ ಉದ್ದೇಶದಿಂದ ಆ ಕುರಿತ ಓದು, ಆಸ್ಪತ್ರೆ ಡಾಕ್ಟರುಗಳ ಭೇಟಿ ಎಂದು ಶ್ರಮವಹಿಸಿದ್ದಾರೆ.  “ಅಂಧಕಾರದಿಂದ ಅರಿವಿನೆಡೆಗೆ” ಎರಡನೇ ವಿಭಾಗದಲ್ಲಿ ಡಾ.ವೀಣಾಭಟ್, ಡಾ.ಅಪರ್ಣಾ ಶ್ರೀವತ್ಸ ಮುಂತಾದ ಹಲವರು ಪರಿಣತ ವೈದ್ಯರ ಲೇಖನಗಳಿವೆ. ಸ್ತನ ಕ್ಯಾನ್ಸರ್ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಲಿ ಹಾಗೂ ಅದಕ್ಕೆ ಒಳಗಾದಲ್ಲಿ ಅದನ್ನೆದುರಿಸುವ ಧೈರ್ಯ ಮೂಡಲಿ ಎಂಬ ಲೇಖಕಿಯ ಆಶಯದ ಆಶಾಕಿರಣದಂತಿರುವ ಈ ಪುಸ್ತಕ ಓದುಗರ ಮನಸೆಳೆಯಲಿ.

‍ಲೇಖಕರು Admin

26 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading