
ಸಂದೀಪ್ ಈಶಾನ್ಯ
ಕಳೆದ ವರ್ಷಾಂತ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದರಲ್ಲಿತ್ತು. ಸರಣಿಗೂ ಮೊದಲೇ ಆಸಿಸ್ ಆಟಗಾರರು ಭಾರತವನ್ನು ಮಣಿಸಲು ಎಲ್ಲಾ ಕ್ರೀಡಾ ವಿರೋಧಿ ಮಾರ್ಗಗಳನ್ನು ಅನುಸರಿಸಲು ತಯಾರಿ ನಡೆಸಿದ್ದರು. ಆದರೆ ಭಾರತ ಮಾತ್ರ ಆಸಿಸ್ ವಿರುದ್ಧದ ಸರಣಿಗೆ ಕಠಿಣ ಅಭ್ಯಾಸದೊಂದಿಗೆ ಸಜ್ಜಾಗುತ್ತಿತ್ತು.
ಕಳೆದ ಹಲವು ವರ್ಷಗಳಿಂದ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಟೆಸ್ಟ್ ಸರಣಿಯನ್ನೂ ಗೆಲ್ಲಲಾಗಿರಲಿಲ್ಲ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಭಾರತ ವಿರುದ್ಧದ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಸ್ಮಿತ್ ತಾನು ಭಾರತದ ನಾಯಕ ವಿರಾಟ್ ಕೊಹ್ಲಿಗೂ ಪ್ರಬಲ ಎನ್ನುವಂತೆ ಬಿಂಬಿಸಿಕೊಂಡಿದ್ದರು. ಸರಣಿಗೂ ಮೊದಲೇ ಭಾರತೀಯ ಆಟಗಾರರ ಭಾವನೆಗಳನ್ನು ಕೆಣಕುವಂತೆ ಮಾತನಾಡಲು ಆರಂಭಿಸುವ ಮೂಲಕ ಸರಣಿ ತೀವ್ರತೆಯನ್ನು ಹೆಚ್ಚುವಂತೆ ಮಾಡುತ್ತಿದ್ದರು.
ನಾವು ಅದಾಗಲೇ ಸರಣಿಯನ್ನು ಗೆದ್ದಿದ್ದೇವೆ, ಭಾರತದಲ್ಲಿ ನಡೆಯುವುದು ಕೇವಲ ಔಪಚಾರಿಕ ಪ್ರದರ್ಶನ ಎಂದು ಸ್ಟೀವ್ ಸ್ಮಿತ್ ಹೇಳಿದರೆ, ಆಸಿಸ್ ನ ಮತ್ತೊಬ್ಬ ಆಟಗಾರ ಡೇವಿಡ್ ವಾರ್ನರ್ ಇದು ಭಾರತ ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲ ಬದಲಿಗೆ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಕ್ರಿಕೆಟ್ ಸರಣಿ ಎನ್ನುವ ಮೂಲಕ ಆಟದ ಮಹತ್ವವನ್ನು ಬದಿಗಿಟ್ಟು ಮೈದಾನವನ್ನ ಇಬ್ಬರು ಕ್ಲಾಸಿಕ್ ಕ್ರಿಕೆಟರ್ ಗಳಿಗೆ ಕಾದಾಡುವ ಅಖಾಡವನ್ನಾಗಿ ಅನುವು ಮಾಡಿಕೊಟ್ಟಿದ್ದರು. ಆವತ್ತಿನ ವಾರ್ನರ್ ಮಾತಿನ ತೀವ್ರತೆ ಕ್ರಿಕೆಟ್ ಅಭಿಮಾನಿಗಳಲ್ಲೂ ಕಾವು ಹೆಚ್ಚಿಸಿದ್ದು ಸುಳ್ಳಲ್ಲ..
ಟೆಸ್ಟ್ ಸರಣಿ ಆರಂಭವಾಯಿತು. ಮೊದಲ ಪಂದ್ಯದಲ್ಲೇ ಭಾರತ ಹೀನಾಯ ಸೋಲು ಕಾಣುವಂತಾಯ್ತು. ಮೊದಲೇ ಬೀಗುತ್ತಿದ್ದ ಸ್ಟೀವ್ ಸ್ಮಿತ್ ಕೊಹ್ಲಿ ಎದುರು ತೋಳು ಮಡಚಿಟ್ಟರೆ, ವಾರ್ನರ್ ಮೈದಾನದಲ್ಲಿನ ಸಣ್ಣಪುಟ್ಟ ಸಂದರ್ಭವನ್ನು ಬಹುದೊಡ್ಡ ಘಳಿಗೆಯಂತೆ ಸಂಭ್ರಮಿಸುತ್ತಿದ್ದರು. ಮೊದಲ ಪಂದ್ಯದಲ್ಲಿ ಸೋಲು ಕಂಡ ಭಾರತ ಎರಡನೇ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ ಹಂತ ತಲುಪಿತ್ತು. ಆಸ್ಟ್ರೇಲಿಯಾ ಮಾತ್ರ ಇನ್ನೂ ಮೊದಲ ಟೆಸ್ಟ್ ಗೆಲುವಿನ ಭರವಸೆಯಲ್ಲೇ ಹುಂಬರಂತೆ ಮತ್ತದೇ ಮಾತಿನ ಮೂಲಕ ಚುಚ್ಚಲು ಅಣಿಯಾಗುತ್ತಿದ್ದರೆ, ಸದ್ದಿಲ್ಲದೆ ಕೇವಲ ಆಟವನ್ನಷ್ಟೇ ಪರಿಗಣಿಸಿದ ಭಾರತ ಮೂರನೇ ಟೆಸ್ಟ್ ನಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತು.
ಈಗ ಕಡೆಯ ಪಂದ್ಯ. ಧರ್ಮಶಾಲಾದಲ್ಲಿನ ಕಡೆಯ ಟೆಸ್ಟ್ ಪಂದ್ಯ ಉಭಯ ರಾಷ್ಟ್ರಗಳಿಗೂ ಮಹತ್ವದ್ದು. ಹೀಗಾಗಲೇ ಸರಣಿಯಲ್ಲಿ ಸಮಬಲ ಸಾಧಿಸಿರುವ ಎರಡೂ ರಾಷ್ಟ್ರಗಳಿಗೂ ಕಡೆಯ ಪಂದ್ಯದ ಗೆಲುವು ಮುಖ್ಯವಾಗಿತ್ತು. ಸರಣಿಯನ್ನು ಕೇವಲ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸ್ಮಿತ್ ಪಂದ್ಯದ ಹಿಂದಿನ ದಿನ ಟಿಬೆಟ್ ಧರ್ಮಗುರು ದಲೈ ಲಾಮಾರನ್ನ ಭೇಟಿಯಾಗಿದ್ದರು. ಏಕ್ರಾಗತೆಗೆಂದು ಪ್ರವಚನ ಕೇಳಿದ್ದರು. ಸ್ಮಿತ್ ಗೆ ಸರಣಿಯ ನಡುವೆ ಕ್ರಿಕೆಟ್ ಅಭಿಮಾನಿಗಳು ನೆನಪಿದ್ದಂತೇನೂ ಕಂಡಿರಲಿಲ್ಲ. ಕೇವಲ ಪ್ರತಿಷ್ಠೆಗಾಗಷ್ಟೇ ಬಡಿದಾಡಿದರು.ಆದರೂ ಕಡೆಯ ಪಂದ್ಯದಲ್ಲಿ ಭಾರತ ಕಡೆಯ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತ್ತು.
ಸರಣಿಯನ್ನು ಕೇವಲ ಆಟವಾಗಿ ಸ್ವೀಕರಿಸಿದ ಭಾರತ ಗೆಲುವು ಕಂಡಿತ್ತು. ಆಟವನ್ನು ಪ್ರತಿಷ್ಠೆಯೆಂದು ಚೀರಾಡಿದ ಆಸಿಸ್ ಮಣ್ಣು ಮುಕ್ಕಿತ್ತು.
ಈ ಚಿತ್ರಣವನ್ನು ನೆನೆದಾಗ ಇದೀಗ ಹೊರಬಿದ್ದಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡಿನ ಉಪಚುನಾವಣೆಯ ಫಲಿತಾಂಶ, ಚುನಾವಣಾ ಉದ್ದೇಶ ಹಾಗೂ ಜನತಂತ್ರ ವ್ಯವಸ್ಥೆಯನ್ನೇ ಕಡೆಗಣಿಸಿದ ರಾಜಕೀಯ ಪಕ್ಷವೊಂದರ ನಡೆ ನೆನಪಾಗುತ್ತಿದೆ. ಭಾರತ ಹಾಗೂ ಆಸಿಸ್ ವಿರುದ್ಧದ ಪ್ರತಿಷ್ಠೆಯ ಟೆಸ್ಟ್ ಸರಣಿಯಂತೆ ನಂಜನಗೂಡು ಹಾಗೂ ಗುಂಡ್ಲುಪೇಟೆಯ ಉಪಚುನಾವಣೆ ಭಾಸವಾದರೆ, ಆಸಿಸ್ ನಾಯಕ ಸ್ಟೀವ್ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನರಿಗೂ ಸಾಮ್ಯತೆ ಇದೆ ಎನಿಸುತ್ತಿದೆ.
ಸಚಿವ ಸಂಪುಟದಿಂದ ಕೈ ಬಿಟ್ಟಿದ್ದು ಈ ಹಿಂದಿನ ಎಲ್ಲಾ ರಾಜಕೀಯ ಸೋಲುಗಳಿಗಿಂತ ಬಹುದೊಡ್ಡ ಪೆಟ್ಟು ಎಂದು ತಿಳಿದ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕ , ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ಅವರ ನಡೆಯನ್ನು ಗೌರವಿಸೋಣ. ಆದರೆ ಈಗಾಗಲೇ ಕಳೆದ ನಲವತ್ತೈದು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಬೃಹತ್ ವೃಕ್ಷವಾಗಿರುವ ಶ್ರೀನಿವಾಸ ಪ್ರಸಾದ್ ತಾನಿನ್ನು ಹಣ್ಣು ಬಿಡುವುದಿಲ್ಲ ಎಂದ ಮಾತ್ರಕ್ಕೆ ಬುಡವನ್ನೇ ಕಡಿದುಕೊಳ್ಳಬಹುದೇ ? ಈವರೆಗೆ ಎಲ್ಲಾ ಬಗೆಯ ಪೌಷ್ಠಿಕಾಂಶವನ್ನು ಹೀರಿಕೊಂಡು ಬೃಹತ್ ವೃಕ್ಷವಾಗಿರುವ ಅವರು ಇನ್ನುಮುಂದೆ
ಹಸಿದವರಿಗೆ ಹಣ್ಣು ನೀಡದೆ ಇದ್ದರೂ ದಣಿದವರಿಗೆ ನೆರಳು ನೀಡುವ ಕಾಯಕವನ್ನಾದರೂ ಮುಂದುವರೆಸಬಹುದಿತ್ತಲ್ಲಾ ? ತಾವು ರಾಜಕೀಯವಾಗಿ ಯಾರೊಬ್ಬರ ಸಿದ್ಧಾಂತಗಳನ್ನು ಆವರೆಗೆ ಕಟುವಾಗಿ ವಿರೋಧಿಸಿದ್ದರೋ ಅವರ ನೆರಳಿನ ಆಸರೆಗಾಗಿ ಕಡೇ ಕ್ಷಣದಲ್ಲಿ ತಮ್ಮ ನಿಲುವನ್ನು ಜಾರಿಸಿದ್ದರ ಕುರಿತು ನಾವು ಅನುಮಾನ ವ್ಯಕ್ತಪಡಿಸೋಣ.
ಮುಖ್ಯಮಂತ್ರಿಯಾಗುವುದಷ್ಟೇ ರಾಜಕೀಯ ಗುರಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರಿಗೆ ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಬಲ ವೈರಿಯೇ ಸರಿ. ಇತ್ತ ಶ್ರೀನಿವಾಸ ಪ್ರಸಾದರ ಅಸಮಾಧಾನವನ್ನೇ ಬಂಡವಾಳವಾಗಿಟ್ಟುಕೊಂಡ ಬಿಜೆಪಿಯ “ಎ” ಟೀಮ್, ಶ್ರೀನಿವಾಸ ಪ್ರಸಾದರ ಮನವೊಲಿಸಲು ಹೆಣಗಾಡಿತ್ತು. ಒಂದಿಷ್ಟು ದಿನಗಳಲ್ಲೇ ಅದು ಘಟಿಸಿಯೂ ಇತ್ತು. ಯಡಿಯೂರಪ್ಪ ತಮ್ಮ ಜನಬೆಂಬಲವನ್ನು ಪರೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಉಪಚುನಾವಣೆಯ ಹೆಸರಿನಲ್ಲಿ ಕಾದಾಡಲು ಅದಾಗಲೇ ಸಜ್ಜಾಗಿದ್ದರು. ಚುನಾವಣೆಯ ಮೊದಲ ಹಂತವಾಗಿ ಶ್ರೀನಿವಾಸ್ ಪ್ರಸಾದ್ ಈ ಹಿಂದೆ ತಾವೇ ಮುಕ್ತ ಕಂಠದಿಂದ ಬೆಂಬಲಿಸಿದ ವ್ಯಕ್ತಿಗಳನ್ನು ವಾಚಾಮಗೋಚರ ಜರಿಯಲು ಆರಂಭಿಸಿದರೆ ಎರಡನೇ ಹಾಗೂ ಕಡೆ ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯ ಬಾಗಿಲು ಬಡಿದು ಉಪಚುನಾವಣೆಗೆ ಸ್ಪರ್ಧೆಸಿದ್ದರು.
ಈ ಉಪಚುನಾವಣೆಗೆ ಯಾವುದೇ ಸ್ಪಷ್ಟ ಹಾಗೂ ನಿಖರ ರಾಜಕೀಯದ ಆಯಾಮಗಳೇ ಇರಲಿಲ್ಲ. ಸಿಂ ಎಂ ತವರು ಜಿಲ್ಲೆಯಲ್ಲಿ ತೊಡೆ ತಟ್ಟುವುದಷ್ಟೇ ಯಡಿಯೂರಪ್ಪನವರಿಗೆ ಮುಖ್ಯವಾಗಿತ್ತು. ಕ್ರಿಕೆಟ್ ಸರಣಿಯನ್ನ ಆಟವಾಗಷ್ಟೇ ಸ್ವೀಕರಿಸದೇ ಪ್ರತಿಷ್ಠೆಯಾಗಿ ಸ್ವೀಕರಿಸಿದ ಆಸಿಸ್ ನಾಯಕ ಸ್ಟೀವ್ ಸ್ಮಿತ್ ರಂತೆ ಬಿಜೆಪಿ ನಾಯಕ ಯಡಿಯೂರಪ್ಪ ಚುನಾವಣೆಯನ್ನು ಕೇವಲ ಪ್ರತಿಷ್ಠೆಯಾಗಷ್ಟೇ ಸ್ವೀಕರಿಸಿದರು. ಇದು ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲ ಬದಲಿಗೆ ಕೊಹ್ಲಿ ಹಾಗೂ ಸ್ಮಿತ್ ನಡುವಿನ ಸರಣಿ ಎಂದು ಬಿಂಬಿಸಿದ್ದ.
ಡೇವಿಡ್ ವಾರ್ನರ್ ನಂತೆ ಬಿಜೆಪಿಯ ಚರ್ಚಾಪಟುವಿನ ಗುಣದ ಸಂಸದರೊಬ್ಬರು ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಚುನಾವಣೆಯಲ್ಲ ಬದಲಿಗೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವಿನ ಚುನಾವಣೆ ಎಂದು ಘಂಟಾಘೋಷವಾಗಿ ಸಾರಿದ್ದರು. ಈ ಪ್ರತಿಷ್ಠೆಗಳು ಆಟವನ್ನಷ್ಟೇ ನೀರಿಕ್ಷಿಸಿ ಮೈದಾನಕ್ಕೆ ಬರುವ ಪ್ರೇಕ್ಷಕರನ್ನು ಸ್ಟೀವ್ ಸ್ಮಿತ್ ಕಡೆಗಣಿಸಿದಂತೆ, ಉತ್ತಮ ಆಡಳಿತ ಬಯಸುವ ಮತದಾರನನ್ನು ಚುನಾವಣೆಯ ಹೆಸರಿನಲ್ಲಿ ಯಡಿಯೂರಪ್ಪನವರು ಕಡೆಗಣಿಸಿದಂತಾಗುತ್ತಲ್ಲವೇ? ಹಾಗಾದರೇ ಇವರಿಬ್ಬರ ಪರಸ್ಪರ ತಿಕ್ಕಾಟಕ್ಕೊಳಗಾಗುವ ನಾವು ಯಾರು? ಇವರ ದೃಷ್ಟಿಯಿಂದ ನಾವು ಕೇವಲ ಗ್ಯಾಲರಿಯಲ್ಲಿ ಸದ್ದಿಲ್ಲದೇ ಕೂರುವ ಪ್ರೇಕ್ಷಕರು ಹಾಗೂ ಗುರುತಿನ ಚೀಟಿಯಿಡಿದು ಬಿಸಿಲಿನಲ್ಲೂ ಮತದಾನ ಮಾಡುವ ಕ್ಷುಲ್ಲಕ ಜೀವಿಗಳಷ್ಟಯೇ? ಅದರ ಹೊರತು ನಮಗೆ ಅಸ್ತಿತ್ವವಿಲ್ಲವೇ?
ಮೊದಲ ಟೆಸ್ಟ್ ಗೆಲುವಿನ ಆಧಾರದ ಭರವಸೆಯಲ್ಲಿ ಮುಂದಿನ ಪಂದ್ಯಗಳಿಗೆ ಅಣಿಯಾದ ಆಸ್ಟ್ರೇಲಿಯಾದಂತೆ ಬಿಜೆಪಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವನ್ನಷ್ಟೇ ಪರಿಗಣಿಸಿ ಇಲ್ಲಿಯೂ ಗೆಲ್ಲಬಹುದು ಎಂದು ಬೀಗುತ್ತಿತ್ತು. ಆದರೆ ಕ್ರಿಕೆಟ್ ಪಟ್ಟುಗಳನ್ನು ಅರಗಿಸಿಕೊಂಡ ಸ್ಮಿತ್ ಗೆ ನೆನಪಿರಬೇಕಿತ್ತು ಪ್ರತಿ ಮೈದಾನದ ಗುಣಮಟ್ಟಗಳು ಬೇರೆ ಬೇರೆ ಹಾಗೂ ವಿಭಿನ್ನ. ಅದೇ ರೀತಿ ದೀರ್ಘಕಾಲದ ರಾಜಕೀಯ ಪಾಠಗಳನ್ನು ಕರಗತ ಮಾಡಿಕೊಂಡಿರುವ ಯಡಿಯೂರಪ್ಪನವರಿಗೆ ಕರ್ನಾಟಕ ಹಾಗೂ ಉತ್ತರ ಪ್ರದೇಶದ ಜನರ ಆಲೋಚನೆ ಕ್ರಮದ ವ್ಯತ್ಯಾಸಗಳನ್ನು ಗುರುತಿಸಲು ತಿಳಿದಿರಬೇಕಿತ್ತು. ಕೇವಲ ಊಹೆಯ ಮೇಲೆ ಮತದಾರರ ಒಳಗನ್ನು ಪರಿಗಣಿಸಲಾಗುದಿಲ್ಲ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯ ಶಕ್ತಿಯೆಂದು ಅವರ ಅರಿವಿಗೆ ಏಕೆ ಬರಲಿಲ್ಲ?
ಸರಣಿಯನ್ನು ಆಟವಾಗಷ್ಟೇ ಸ್ವೀಕರಿಸಿದ ಕೊಹ್ಲಿ ನಾಯಕತ್ವದ ಭಾರತಕ್ಕೆ ಸರಣಿ ಒಲಿದುಬಂದಂತೆ , ಉಪಚುನಾವಣೆಯನ್ನು ಕೇವಲ ಚುನಾವಣೆಯೆಂದು ಸ್ವೀಕರಿಸಿದ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಗೆ ಗೆಲುವಾಗಿದೆ. ಕಡೆಯ ಟೆಸ್ಟ್ ಪಂದ್ಯಕ್ಕೂ ಮೊದಲು ಧರ್ಮಶಾಲಾದಲ್ಲಿ ಟಿಬೆಟ್ ಧರ್ಮಗುರು ದಲೈ ಲಾಮಾರನ್ನ ಭೇಟಿ ಮಾಡುವ ಮೂಲಕ ಮನಸು ಹಗುರ ಮಾಡಕೊಂಡ ಸ್ಮಿತ್ ಸೋಲು ಕಂಡಂತೆ ವಿವಿಧ ಮಠಾಧೀಶರ ಹಿತವಚನವನ್ನು ಕೇಳಿಬಂದ ಯಡಿಯೂರಪ್ಪನವರಿಗೂ ಸೋಲಾಗಿದೆ.
ಈಗ ಶ್ರೀನಿವಾಸ ಪ್ರಸಾದರು ಒಮ್ಮೆ ಹಿಂದಿರುಗಿ ನೋಡಲಿ. ಕಳೆದ ಚುನಾವಣೆಗಳ ಸೋಲುಗಳಿಗೂ ಹಾಗೂ ಈ ಉಪಚುನಾವಣೆಯ ಸೋಲಿನ ನಡುವಿರುವ ನೈತಿಕ ವ್ಯತ್ಯಾಸಗಳನ್ನು ಅವಲೋಕಿಸಿಕೊಳ್ಳಲಿ. ಕ್ರಿಕೆಟ್ ಇರುವುದು ಪ್ರೇಕ್ಷಕರಿಗೆ ಎನ್ನುವುದನ್ನು ಸ್ಮಿತ್ ತಿಳಿದುಕೊಳ್ಳುವಂತೆ ಯಡಿಯೂರಪ್ಪ ಹಾಗೂ ಶ್ರೀನಿವಾಸ ಪ್ರಸಾದರು ಚುನಾವಣೆಗಳಿರುವುದು ಜನತೆಯ ಹಿತಕ್ಕೆ ತಮ್ಮ ಪ್ರತಿಷ್ಠೆಗಲ್ಲ ಎನ್ನುವುದನ್ನು ಇನ್ನಾದರೂ ಕಂಡುಕೊಳ್ಳಲಿ.
ಬಾರ್ಡರ್ ಗವಾಸ್ಕರ್ ಸರಣಿ ಸೋಲಿನ ಬಳಿಕ ಆಸಿಸ್ ಮಾಧ್ಯಮಗಳು ವಿರಾಟ್ ಕೊಹ್ಲಿಯನ್ನು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಹೋಲಿಸಿ ಸಾಕೆನ್ನುವಷ್ಟು ಜರಿದಿದ್ದವು. ಉಭಯ ರಾಷ್ಟಗಳ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದರು. ಟೀಮ್ ಇಂಡಿಯಾ ನಾಯಕ ಕೊಹ್ಲಿ, ನನಗೆ ಆಸ್ಟ್ರೇಲಿಯಾ ಕ್ರಿಕೆಟಿಗರು ಇನ್ನು ಸ್ನೇಹಿತರಲ್ಲ ಎಂದಿದ್ದರು. ವ್ಯಂಗ್ಯವೆಂದರೆ ಇದೀಗ ಐಪಿಎಲ್ ಗಾಗಿ ಉಭಯ ರಾಷ್ಟ್ರದ ಆಟಗಾರರು ಒಂದೇ ಡ್ರೆಸ್ಸಿಂಗ್ ರೂಮ್ ನಲ್ಲಿ ಕಿಲಕಿಲನೇ ನಗುತ್ತಿದ್ದಾರೆ. ಅಂದು ಕೊಹ್ಲಿಯನ್ನು ಟೀಕಿಸಿದ ಆಸಿಸ್ ಮಾಧ್ಯಮಗಳು ಇಂದು ಕೊಹ್ಲಿಯ ಸಾಮರ್ಥ್ಯದ ಬಗ್ಗೆ ಕಾಲಂ ಬರೆಯುತ್ತಿವೆ. ಅಗತ್ಯಕ್ಕೆ ತಕ್ಕಂತೆ ಬದಲಾಗುವ ಮಾಧ್ಯಮ ಹಾಗೂ ರಾಜಕೀಯದ ಬಗ್ಗೆ ಎಚ್ಚರದಿಂದರೋಣ.
ಭಾರತ ಹಾಗೂ ಆಸಿಸ್ ಆಟಗಾರರು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ವಾರ್ಷಿಕ ಸಂಭಾವನೆ ಹೆಚ್ಚಿಸಿಕೊಂಡಂತೆ, ಐಪಿಎಲ್ ನಲ್ಲೂ ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ. ಆದರೆ ಕಳೆದ ಟೆಸ್ಟ್ ಸರಣಿಯ ವೇಳೆ ಮುನಿಸಿಕೊಂಡಿದ್ದ ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರಿಯರು ಇನ್ನೂ ಅದೇ ಸ್ಥಿತಿಯಲ್ಲಿದ್ದಾರೆ. ಇದೇ ರೀತಿ ಭವಿಷ್ಯದಲ್ಲಿ ಈಗ ಬಡಿದಾಡುತ್ತಿರುವ ರಾಜಕೀಯ ನಾಯಕರು ಒಂದೇ ತಟ್ಟೆಯಲ್ಲಿ ತಿನ್ನುವಷ್ಟು ಹತ್ತಿರವಾಗಬಹುದು.
ಟೆಸ್ಟ್ ಸರಣಿಯಲ್ಲಿ ಆಸಿಸ್ ವಿರುದ್ಧ ಕಿಡಿಕಾರಿದ ಕ್ರಿಕೆಟ್ ಪ್ರಿಯರು ಐಪಿಎಲ್ ನಲ್ಲಿ ಕಳೆದುಹೋದಂತೆ, ಸ್ವಪ್ರತಿಷ್ಠೆಗೆ ಚುನಾವಣೆ ತಂದಿಟ್ಟ ರಾಜಕಾರಣಿಗಳನ್ನು ಮತದಾರರು ಮರೆತು ಕಳೆದು ಹೋಗದೆ ಇರಲಿ.
ಕಾಂಗ್ರೆಸ್ ಹಾಗೂ ಬಿಜೆಪಿಯ ಸೋಲು ಗೆಲುವಿನ ಬಗ್ಗೆ ಹೆಚ್ಚು ಯೋಚಿಸದೆ, ಶೇಕಡವಾರು ಅನಕ್ಷರಸ್ಥರೇ ಇರುವ ನಂಜಗೂಡು ಹಾಗೂ ಗುಂಡ್ಲಪೇಟೆಯಲ್ಲಿನ ಒಂದು ಸಣ್ಣ ಉಪಚುನಾವಣೆಗೆ ಸಾವಿರದಷ್ಟು ನೋಟಾ ಓಟು ಚಾಲಾಯಿಸಿದ ಮತದಾರರ ನಿಲುವನ್ನು ಸೂಕ್ಷ್ಮವಾಗಿ ಹಿಂಬಾಲಿಸೋಣ. ಅವರ ನಡೆಯಲ್ಲೇ ಕರ್ನಾಟಕದ ರಾಜಕೀಯ ಭವಿಷ್ಯ ಅಡಗಿದೆ ಎನ್ನುವುದನ್ನು ಕ್ರಮೇಣವಾಗಿಯಾದರೂ ಕಂಡುಕೊಳ್ಳೋಣ…






0 Comments