ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋ, ಬೌದ್ಧಿಕ ಸಹಚಾರಿಣಿಯೆಂಬ ಆ `ಡ್ರೀಂ ಗರ್ಲ್' ಸಿಗುವ ಲಕ್ಷಣ ಕಂಡುಬರುತ್ತಿಲ್ಲ..

ಆರ್ ಕೆ ಪ್ರಸಾದ್ ಶೆಣೈ ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು.. ಎಂದು ಕನವರಿಸಿದ್ದರು.

ಇದಕ್ಕೆ ದೂರದ ಅಂಗೋಲಾದಿಂದ ಇನ್ನೊಬ್ಬ ಪ್ರಸಾದ್ ಅನು ಪಲ್ಲವಿ ಹಾಡಿದ್ದಾರೆ

Prasad

ಅಂಗೋಲಾದಿಂದ ಕೆ ಪ್ರಸಾದ್ 

ಪ್ರಸಾದ್ ಶೆಣೈಯವರು ಬರೆದ `ಸಾಹಿತ್ಯ – ಬರವಣಿಗೆ – ತರುಣಿಯರ ಪತಿಕ್ರಿಯೆ’ಗಳ ಕಾಂಬೋ ತೆಳುವಾದ ಹಾಸ್ಯದ ಲೇಪದೊಂದಿಗೆಯೇ ಮುದ್ದಾಗಿ ಮೂಡಿಬಂದು ಓದುವುದಕ್ಕೆ ಹಿತವೆನಿಸಿತು.
ಈ ಲೇಖನ ಓದುವಿಕೆ, ಬರವಣಿಗೆ, ತರುಣಿಯರು ಮತ್ತು ಪ್ರತಿಕ್ರಿಯೆಗಳ ಆಸುಪಾಸು ಹರಿದಾಡಿದ ಪರಿಣಾಮ ನನ್ನನ್ನೂ ಒಂದು ಒಂದು ಕ್ಷಣ ನಾಸ್ಟಾಲ್ಜಿಯಾದಲ್ಲಿ ತೇಲಾಡುವಂತೆ ಮಾಡಿದ್ದು ಸತ್ಯ. ನಾನು ಇಲ್ಲಿ ಉಣಬಡಿಸುತ್ತಿರುವುದು ಈ ವಿಷಯದ ಬಗೆಗಿನ ಕೆಲ ನೆನಪುಗಳು ಮತ್ತು ಸಂಕ್ಷಿಪ್ತ ಅನಿಸಿಕೆಗಳಷ್ಟೇ.
bird song2011 ರ ದಿನಗಳು. ಬಹುಶಃ ನಾನು ಇಂಜಿನಿಯರಿಂಗ್ ವಿಭಾಗದಲ್ಲಿ ಓದಿದ ಪರಿಣಾಮವೋ ಏನೋ, ನಾನು ಕಲಿತ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಪ್ರೇಮ ಅನ್ನುವುದು ಅಷ್ಟಾಗಿ ನನಗೆ ಕಂಡುಬರಲಿಲ್ಲ. ಅಥವಾ ನಮ್ಮ ನಾಲ್ಕು ವರ್ಷಗಳ ಆ ಟೈಮ್-ಲೈನಿನಲ್ಲಿ ಅದು ಅಷ್ಟಾಗಿ ಇರಲಿಲ್ಲ.
ಬಗಲಿನಲ್ಲಿ ಅರಬ್ಬೀ ಸಮುದ್ರವನ್ನು ಇಟ್ಟುಕೊಂಡು ಗತ್ತಿನಿಂದ ಬೀಗುತ್ತಿರುವ ಪ್ರತಿಷ್ಠಿತ ಸುರತ್ಕಲ್ ಎನ್.ಐ.ಟಿ ಯಲ್ಲಿ ದೇಶದ ಇತರ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಸ್ವಾಭಾವಿಕವಾಗಿಯೇ ಕುವೆಂಪು, ತೇಜಸ್ವಿಯವರ ಚರ್ಚೆಗಳಿಗೂ ಅಲ್ಲಿ ಅವಕಾಶವಿರಲಿಲ್ಲ. ಆದರೆ ಬರ್ನಾಡ್  ಶಾ, ಆರ್ಥರ್ ಮಿಲ್ಲರ್, ಶೇಕ್ಸ್ ಪಿಯರ್ ರಂಥಾ ಮಹಾರಥಿಗಳ ಸದ್ದೂ ಇರಲಿಲ್ಲ ಅನ್ನುವುದು ವಿಪರ್ಯಾಸ.
ಒಮ್ಮೆ ಕಾಲೇಜಿನ ಲೈಬ್ರರಿಯಲ್ಲಿ ಅಚಾನಕ್ಕಾಗಿ ಸಿಕ್ಕಿದ ವಾಜಪೇಯಿಯವರ ಜೀವನ ಚರಿತ್ರೆ `ಅಜಾತಶತ್ರು’  ಪುಸ್ತಕವನ್ನು ಕೈಗೆತ್ತಿಕೊಂಡು ಇಶ್ಯೂ ಮಾಡಿಸಿಕೊಳ್ಳಲು ಕೌಂಟರ್ ಕಡೆಗೆ ನಡೆದರೆ, ರೆಜಿಸ್ಟರಿನಲ್ಲಿ ಎಂಟ್ರಿ ಮಾಡುತ್ತಿದ್ದ ಆ ಆಫೀಸರ್ ಸ್ವಾಭಾವಿಕವಾಗಿಯೇ ಹುಬ್ಬೇರಿಸಿದ್ದ. ಅಂಥದ್ದೊಂದು ಪುಸ್ತಕ ಲೈಬ್ರರಿಯಲ್ಲಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲವೋ ಏನೋ.
ಚಿಕ್ಕ ಮೂಲೆಯೊಂದನ್ನು ಸಾಹಿತ್ಯದ ವಿಭಾಗಕ್ಕೆಂದು ಮೀಸಲಿಟ್ಟಿದ್ದ ಆ ದೈತ್ಯ ಲೈಬ್ರರಿಯಲ್ಲಿ, ಸಾಹಿತ್ಯದ ಪುಸ್ತಕಗಳು ಧೂಳು ತಿನ್ನುತ್ತಿದ್ದವು. ಕಾಲೇಜಿನಲ್ಲಿ ನಾ ಕಂಡ ಬೆರಳೆಣಿಕೆಯ ಓದುಗ ವಿದ್ಯಾರ್ಥಿಗಳು ಹ್ಯಾರಿ-ಪಾಟರ್ ಸರಣಿ ಅಥವಾ ವ್ಯಾಂಪೈರ್ ಪುಸ್ತಕಗಳಲ್ಲೇ ಮುಳುಗಿಹೋಗಿದ್ದನ್ನು ನೆನೆಸಿಕೊಂಡರೆ ವಿಚಿತ್ರವೆನಿಸುತ್ತದೆ.
ಉಳಿದವರು ತಲೆಯ ಮೇಲೆ ತೂಗಾಡುತ್ತಿದ್ದ `ಪ್ಲೇಸ್-ಮೆಂಟ್’ ಎಂಬ ಕತ್ತಿಯ ಭಯದಿಂದಾಗಿ ತಂತ್ರಜ್ಞಾನ ಸಂಬಂಧಿ ವಾರಪತ್ರಿಕೆಗಳಿಗೆ, ಮಾಸಿಕಗಳಿಗೆ ಅಪರೂಪಕ್ಕೊಮ್ಮೆ ಕಣ್ಣು ಹಾಯಿಸುತ್ತಿದ್ದರೇ ಹೊರತು ಓದುವ ಸುಖಕ್ಕಂತೂ ಅಲ್ಲ.
ಇನ್ನು ಬರವಣಿಗೆ, ತರುಣಿಯರು ಮತ್ತು ಪ್ರತಿಕ್ರಿಯೆಗಳ ವಿಷಯಕ್ಕೆ ಬಂದರೆ ಶೆಣೈಯವರಂತೆ ನನಗೂ ಮಿಶ್ರಪ್ರತಿಕ್ರಿಯೆಗಳೇ ಒಲಿದಿದ್ದು. ಬಹುಷಃ ಎಲ್ಲಾ ತರುಣ ಬರಹಗಾರರ ಕಥೆಯೇ ಇದು. ಪ್ರಾಯಶಃ ಸ್ವಾಭಾವಿಕವೂ ಕೂಡ. ಸಾಹಿತ್ಯಪ್ರೇಮಿ ತರುಣಿಯರ ಪ್ರತಿಕ್ರಿಯೆಯ ವಿಷಯ ಹಾಗಿರಲಿ, ಪ್ರಕಟಿತ ಬರಹಕ್ಕೆ `ಪ್ರತಿಕ್ರಿಯೆ’ ಅನ್ನುವುದೇ ಗಗನಕುಸುಮವಾದಂತೆ ಕೆಲವೊಮ್ಮೆ ಕಂಡುಬರುವುದೂ ಉಂಟು.
girl with bird2ಹಾಗೆಂದು ತರುಣಿಯರು ಓದುತ್ತಲೇ ಇಲ್ಲ ಎಂಬ ಷರಾ ಕೊಟ್ಟು ಕೈತೊಳೆದುಕೊಂಡರೆ ಮೂರ್ಖತನವಾದೀತು. ಕನ್ನಡದಲ್ಲೇ ಎಂಥಾ ಅದ್ಭುತ ಯುವಬರಹಗಾರ್ತಿಯರಿದ್ದಾರೆ. ಯಾವುದೋ ಒಂದು ಸಮಾರಂಭದಲ್ಲೋ, ಚಿತ್ರೋತ್ಸವದಲ್ಲೋ ಅಚಾನಕ್ಕಾಗಿ ಸಿಕ್ಕು `ನಿನ್ನ ಆ ಬರಹ ತುಂಬಾ ಚೆನ್ನಾಗಿತ್ತು ಮಾರಾಯ’ ಎಂದು ಹೇಳಿ ಹುರಿದುಂಬಿಸಿದ ಕನ್ಯಾಮಣಿಗಳಿದ್ದಾರೆ.
ಮಿನಿ ಸರಣಿಬರಹವೊಂದು ಅಂತರ್ಜಾಲ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದಾಗ `ಮುಂದಿನ ಭಾಗಕ್ಕಾಗಿ ಕಾಯೋ ತಾಳ್ಮೆಯಿಲ್ಲ ಮ್ಯಾನ್, ಪೂರ್ಣ ಬರಹವನ್ನು ಇ-ಮೇಲ್ ಮಾಡಿ ಕಳಿಸಿಕೊಡು, ಒಮ್ಮೆಲೇ ಓದಿಕೊಳ್ಳುತ್ತೇನೆ’ ಎಂದು ಕೇಳಿ ಹುಬ್ಬೇರಿಸಿದ ತರುಣಿಯರೂ ಇದ್ದಾರೆ. ಪ್ರಕಟಿತ ಬರಹವೊಂದರ ಬಗ್ಗೆ ತಮ್ಮ ಅನಿಸಿಕೆಯನ್ನು ಮತ್ತೊಬ್ಬರ ಮುಖಾಂತರ ತಲುಪಿಸಿದ ಗುಪ್ತಗಾಮಿನಿಯರೂ ಇದ್ದಾರೆ.
ಅನ್-ಕನ್ವೆನ್ಷನಲ್ ಆದ ಪ್ರಕಟಿತ ಕಥೆಯೊಂದನ್ನು ಓದಿ `ಏನೋ ವಿಚಿತ್ರವಾಗಿದೆ, ಅರ್ಥವಾಗಲಿಲ್ಲ’ ಎಂದು ಮುಗ್ಧ ನಗೆ ಚೆಲ್ಲಿದವರಿದ್ದಾರೆ. ಸೋಮಾರಿತನದಿಂದ ಮೈಮುರಿಯುತ್ತಿದ್ದಾಗ `ಏನು ಬರೆಯುತ್ತಲೇ ಇಲ್ಲ ಇತ್ತೀಚೆಗೆ?’ ಎಂದು ಕೇಳಿ ಎಚ್ಚರಿಸಿದ ಅಲರ್ಟ್- ಕ್ವೀನ್ ಗಳಿದ್ದಾರೆ. ನಾನು ಕನ್ನಡದಲ್ಲಷ್ಟೇ ಬರೆಯುತ್ತಿರುವ ಪರಿಣಾಮ, ಕನ್ನಡ ಓದಲಾಗದ ಹೊರರಾಜ್ಯದ ಗೆಳೆತಿಯರು ಬೆನ್ನುಬಿದ್ದು, ಕೆಲ ಬರಹಗಳನ್ನು ನನ್ನಿಂದಲೇ ಅನುವಾದಿಸಿಕೊಂಡು ಓದಿದ್ದಾರೆ. ಓದಿದ್ದಷ್ಟೇ ಅಲ್ಲದೆ ಇತರರಿಗೂ ಓದಿಸಿದ್ದಾರೆ.
ಹೀಗೆ ಬರಹದ ಕೊನೆಯಲ್ಲಿರುವ ಕಾಮೆಂಟು ಡಬ್ಬಕ್ಕೆ ಪತ್ರಗಳು ಬಿದ್ದಿಲ್ಲ ಎಂಬ ದುಃಖವನ್ನು ಸಹನೀಯರಾಗಿಸಿದ ಹಲವು ಓದುಗರಿದ್ದಾರೆ. ಅವರ ಪ್ರೀತಿಗೆ ನಾನು ಋಣಿ. ಇವರೆಲ್ಲರ ಈ ಓದಿನ ಪ್ರೀತಿಯೇ `ಕರ್ಮಣ್ಯೇ ವಾಧಿಕಾರಸ್ತೇ’ ಎನ್ನುತ್ತಾ ಕಾಮೆಂಟುಗಳ ಗೋಜಿಗೆ ಹೋಗದೆ, ಬರೆಯುತ್ತಾ ಹೋಗುವುದಕ್ಕೊಂದು ಸ್ಫೂರ್ತಿ.
2010 ರವರೆಗೆ ಓದುಗನಾಗೇ ಬೆಚ್ಚಗಿದ್ದವನು ನಾನು. ಕಾಲೇಜಿನ ಅಂತಿಮ ವರ್ಷಕ್ಕೆ ಕಾಲಿಟ್ಟ ಮೇಲೆ ಬರೆಯುವ ಸಾಹಸಕ್ಕಿಳಿದೆ. ಮುಂದೆ ದೆಹಲಿಯಲ್ಲಿ ವಾಸವಾಗಿದ್ದಾಗ ದರಿಯಾಗಂಜ್ ಗೆ ಹೋಗಿದ್ದ ನಾನು ಕೈತುಂಬಾ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಹೇರಿಕೊಂಡು ಬಂದಾಗ `ಅನ್ಯಗ್ರಹವಾಸಿಯೋ’ ಎಂಬಂತೆ ನನ್ನನ್ನು ನೋಡಿದ ಉತ್ತರಭಾರತದ ಗೆಳೆಯರನ್ನು ನೆನೆಸಿಕೊಂಡರೆ ನಗುಬರುತ್ತದೆ. ಮುಂದೊಂದು ದಿನ `ನಾನೇಕೆ ಓದುತ್ತೇನೆ’ ಎಂಬ ಲೇಖನವನ್ನು ಇವರಿಗಾಗಿಯೇ ಬರೆಯಬೇಕು.
`ನೂರನಲವತ್ತು ಅಕ್ಷರಗಳಲ್ಲಿ’. ಓದುವುದು ಎಂದರೆ `ಮಹಾಬೋರು’ ಎನ್ನುವ ಕಾಲಘಟ್ಟದಲ್ಲಿ ಬಂದ ತರುಣ ಬರಹಗಾರರ ಯೌವನದ ದುರಾದೃಷ್ಟವಿದು. ಫೇರ್ ನೆಸ್ ಕ್ರೀಮ್, ಸೈಝ್ ಝೀರೋ ಕಾನ್ಸೆಪ್ಟುಗಳು ಬಂದು ಸೌಂದರ್ಯದ ಪರಿಕಲ್ಪನೆಯೇ ತಲೆಕೆಳಗಾದಂತೆ, ನೂರನಲವತ್ತು ಅಕ್ಷರಮಿತಿಗಳ ಭರಾಟೆಯಲ್ಲಿ ಒಳ್ಳೆಯ ಒಂದು ಕಥೆಯೋ, ಕವನವೋ, ಲೇಖನವೋ ಮಿಸ್ ಆಗುವುದು ತಲೆಕೆಡಿಸಿಕೊಳ್ಳಬೇಕಾದ ಒಂದು ವಿಷಯವೇ ಅಲ್ಲ ಎಂಬ ಈ ಕಾಲದಲ್ಲಿ ಇರುವ ಓದುಗನನ್ನು ಹಿಡಿದಿಡುವುದೇ ಒಂದು ದೊಡ್ಡ ಚಾಲೆಂಜ್.
girl with bird3ಶೆಣೈಯವರು ಬರೆದಂತೆ ಹುಡುಗ-ಹುಡುಗಿಯರು ದಂಡಿಯಾಗಿ ಬಿಡುಗಡೆಯಾಗುತ್ತಿರುವ ಹೊಸ ಹೊಸ ಅದ್ಭುತವಾದ ಪುಸ್ತಕಗಳ ಬಗ್ಗೆ ಮಾತನಾಡಿಕೊಳ್ಳುತ್ತಿಲ್ಲ, ತಮ್ಮ ನಡುವೆಯೇ ಲೇಖಕ, ಲೇಖಕಿಯರಿದ್ದರೂ ಅವರಿಗೆ ಗೊತ್ತೇ ಇರುವುದಿಲ್ಲ ಮತ್ತು ತಿಳಿದುಕೊಳ್ಳುವ ಆಸಕ್ತಿಯೇ ಇರುವುದಿಲ್ಲ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹೀಗಾಗಿ ಒಂದು ಸುಂದರ ಸಂಜೆ, ಮಲೆನಾಡು, ಮಳೆ, ಕಾಫಿ ಕಪ್ಪು, ಪುಸ್ತಕವೊಂದರ ಬಗ್ಗೆ ಚರ್ಚೆ, ಬೌದ್ಧಿಕ ಸಹಚಾರಿಣಿ… ಇವೆಲ್ಲದರ ಸಾಧ್ಯತೆಗಳೂ ಗಾಳಿಗೆ ತೂರಿಹೋಗುತ್ತಿವೆ.
ಎಂದೋ ಓದಿದ ಒಂದು ಪುಸ್ತಕ, ಎಲ್ಲಿಂದಲೋ ಅನುವಾದಿಸಲ್ಪಟ್ಟ ಕೇಳರಿಯದ ಭಾಷೆಯ ಒಂದು ಕವಿತೆ, ಸದ್ದಿಲ್ಲದೆ ಬೆಚ್ಚಿಬೀಳಿಸುವ ಒಂದು ಆತ್ಮಕಥನ, ಓದಿದ ನಂತರವೂ ಕಾಡುವ ಕಾದಂಬರಿಯೊಂದರ ಪಾತ್ರಗಳು, ಚಿಂತನೆಗೆ ಹಚ್ಚುವ ಒಂದೊಳ್ಳೆ ಸಿನಿಮಾ… ಹೀಗೆ ಚಿಕ್ಕಪುಟ್ಟ ಸ್ವಾರಸ್ಯಕರ ಸಂಗತಿಗಳು ಶುರುವಾಗುವ ಮುನ್ನವೇ ಬಿದ್ದುಹೋಗುತ್ತಿವೆ. ಪತ್ರಗಳ ಮಾದರಿಯಲ್ಲಿ ಇ-ಮೇಲ್ ಬರೆಯುವ ನನ್ನ ಅಭ್ಯಾಸ ಕೆಲವರಿಗಷ್ಟೇ ಸಹನೀಯವಾಗುತ್ತದೆ.
ನನ್ನ ಅಕೌಂಟಿನಲ್ಲಿರುವ ಕೆಲವೇ ಕೆಲವು ಫೇಸ್ ಬುಕ್ ಗೋಡೆಗಳು ಮಾತ್ರ ಓದಬಹುದಾದ ಕಂಟೆಂಟ್ ಗಳನ್ನು ಶೇರ್ ಮಾಡುತ್ತಿವೆ. ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಮತ್ತು ಪಡೆಯಲಿಚ್ಛಿಸುವ ಸ್ನೇಹಿತರನ್ನು ದುರ್ಬೀನಿಟ್ಟುಕೊಂಡು ನೋಡಬೇಕಾಗಿ ಬಂದಿದೆ. ವೀಕೆಂಡುಗಳು ಸಿಸಿಡಿ, ಪಿವಿಆರ್, ಬೀರ್ ಕೆಫೆಗಳ ವಶವಾಗಿವೆ. ಡೇಟಿಂಗ್, ಸೋಶಿಯಲೈಸಿಂಗ್ ಇತ್ಯಾದಿಗಳು ಸೋಶಿಯಲ್ ಸ್ಕಿಲ್ ಗಳಾಗಿ ಉಳಿಯದೆ ವನ್ ನೈಟ್ ಸ್ಟ್ಯಾಂಡ್ ನ ನೆಪಗಳಾಗಿ ಬದಲಾಗುತ್ತಿವೆ. ಸೋ ಬೌದ್ಧಿಕ ಸಹಚಾರಿಣಿಯೆಂಬ ಆ `ಡ್ರೀಂ ಗರ್ಲ್’, ನನಗೂ ಸದ್ಯದ ಪರಿಸ್ಥಿತಿಯಲ್ಲಿ ಸಿಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಇವೆಲ್ಲದರ ಮಧ್ಯೆಯೇ ಬೌದ್ಧಿಕ ಸಹಚಾರಿಣಿಯೆಂದು ಬೊಟ್ಟು ಮಾಡಿ ಹೇಳಲಾಗದಿದ್ದರೂ, ನಮ್ಮದೇ ಆದ ಪುಟ್ಟ ಜಗತ್ತಿನಲ್ಲಿ ಕೆಲ ಹುಡುಗ-ಹುಡುಗಿಯರು ಸೇರಿ, ಓದಿ, ಓದಿಸಿಕೊಂಡು ಕಲಿತ ಮತ್ತು ಕಲಿಸಿದ ಸಂಗತಿಗಳು ಅನೇಕ. ಶಾಂತಾರಾಮ್ ಕಾದಂಬರಿಯ ಬಗ್ಗೆ ನನಗೆ ಮಾಹಿತಿ ದೊರಕಿದ್ದು ಬಂಗಾಲಿ ಮೂಲದ ಗೆಳತಿಯಿಂದ. ಮಾರ್ಕ್ವೆಸ್ ಸಿಕ್ಕಿದ್ದು ಓರ್ವ ಫ್ರೆಂಚ್ ಮೂಲದ ತರುಣಿಯಿಂದ. ಅಮೃತಾ ಪ್ರೀತಮ್ ದಕ್ಕಿದ್ದು ಓರ್ವ ಪಂಜಾಬಿ ಮಹಿಳಾ ಸಹೋದ್ಯೋಗಿಯಿಂದ. ಆದರೆ ಈ ಪುಟ್ಟ ಬಳಗ ಉದ್ಯೋಗ/ಅಧ್ಯಯನ ನಿಮಿತ್ತ ವಿವಿಧ ದೇಶಗಳಲ್ಲಿ ಚದುರಿಹೋಗಿರುವ ಪರಿಣಾಮ ಅಂತರ್ಜಾಲವೇ ಸದ್ಯದ ಮಟ್ಟಿಗೆ ನಮ್ಮ ಏಕೈಕ ಕೊಂಡಿ. ಏನಿಲ್ಲವೆಂದರೂ ಇಂಥಾ ಸಂಬಂಧಗಳು ಬೌದ್ಧಿಕ ವಿಕಸನಕ್ಕೆ ಸಹಕಾರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಇದರಲ್ಲಿ ಎರಡು ಮಾತಿಲ್ಲ.
ಅಗೋ, ಅಲ್ಲೊಬ್ಬ ತರುಣ ಲೇಖಕ ತನ್ನ ರಾತ್ರಿಗಳನ್ನು ಸುಟ್ಟು ಸುಮ್ಮನೆ ಬರೆಯುತ್ತಿದ್ದಾನೆ. ಡೀಗೋಗೆ ಸಿಕ್ಕಿದ ಫ್ರೀಡಾ, ಇಮ್ರೋಝ್ ಗೆ ಸಿಕ್ಕಿದ ಅಮೃತಾರ ಕಥೆಗಳು ಪುಸ್ತಕಗಳಾಗಿ, ಅವನ ಸುತ್ತಲೂ ಇರುವ ಆ ದೈತ್ಯ ಶೆಲ್ಫ್ ಗಳಲ್ಲಿ ಭದ್ರವಾಗಿ ಕುಳಿತಿವೆ. ಲೇಖಕನ ಪಿಸುಮಾತುಗಳು ಆ ಶೆಲ್ಫ್ ಗಳ ಮಧ್ಯೆ ಕಳೆದುಹೋಗುತ್ತಿವೆ. ಅವನ ಬರಹ ರಂಗೇರುತ್ತಿದೆ.

‍ಲೇಖಕರು Avadhi

23 April, 2016

10 Comments

  1. Jayashree Deshpande

    ಓದು ಬರಹಗಳೆಂಬ ಎರಡು ಬದಿಯ ಒಂದು ನಾಣ್ಯ ಇದೀಗ ಸವಕಲಾಗಿದೆ. ‘fast forward ‘ ಮಂತ್ರದ ಮೋಡಿ ಪುಸ್ತಕಗಳನ್ನು ಕಟ್ಟಿ ಅಟ್ಟಕ್ಕಿಟ್ಟಿದೆ.. ನಿಮ್ಮ ಬರಹ ನನ್ನ ಕಾಲೇಜಿನ ದಿನಗಳು, ಆಗಿನ ಲೈಬ್ರರಿಯಲ್ಲಿ ನಾವು ಗೆಳತಿಯರೆಲ್ಲ ಸೇರಿ ಕಳೆಯುತ್ತಿದ್ದ ಸಮಯದ ಸುಖವನ್ನು ನೆನಪಿಸಿತು.

  2. ಪ್ರಸಾದ್ ಶೆಣೈ ಆರ್ ಕೆ

    ತುಂಬಾ ಖುಷಿಯಾಯಿತು. ನನ್ನಂತೆ ಚಿಂತಿಸುವವನೊಬ್ಬ ಸಿಕ್ಕನಲ್ಲ …ಅದಕ್ಕೆ ಬರೆದಿದ್ದೆ ”ನನ್ನಂತೆ ಹೀಗೆ ದೂರದ ಯಾವುದೋ ಊರಲ್ಲಿ ಕೂತ ತರುಣ ಜೀವವೊಂದು ಚಿಂತಿಸಬಹುದು” ಅಂತ. ಓದಿ ನೀವೊಂದು ಚಂದದ ಬರಹವನ್ನೇ ಬರೆದಿದ್ದಕ್ಕೆ ಧನ್ಯನಾದೆ.ಹೀಗೆ ಬರೆದ ಬರಹಗಳನ್ನು ಓದಿ ಮಿಡಿಯೋ ಮನಸ್ಸುಗಳಾದರೂ ಇಲ್ಲಿದೆ ಅಲ್ವಾ ಪ್ರಸಾದ್ ? ಅದೇ ಖುಷಿ….ಆದರೂ ಮುಂದೆ ಸಿಗುವ ನನ್ನ ಹುಡುಗಿ ಅನ್ನೋ ಸಹಚಾರಿಣಿಯನ್ನೇ ಸಾಹಿತ್ಯ ಸಹಚಾರಿಣಿಯನ್ನಾಗಿ ಮಾಡುವ ಆಸೆ ಇದೆ ನನಗೆ……..ಇರಲಿ ನೀವು ಬರೆದದ್ದೂ ಮತ್ತೂ ಖುಷಿಯಾಯ್ತು…………..ಯುವಕರ ತಲ್ಲಣಗಳು ಹೀಗೆ ಹರಿದು ಬಂದರೆ ..ನಮ್ಮಂತೇ ಚಿಂತಿಸೋ ಯುವತಿಯರಾದ್ರೂ ಸಿಕ್ಕಿ ಸಾಹಿತ್ಯಕ್ಕೆ ಸ್ಪೂರ್ತಿಯಾದಾರು…..

    • Prasad Naik

      ಒಳ್ಳೆಯ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ ಮತ್ತು ಅವರ ಮನಸ್ಸುಗಳನ್ನು ಕ್ಷಣಮಾತ್ರಕ್ಕಾದರೂ ಹಿಡಿದಿಟ್ಟು ಚಿಂತನೆಗೆ ಹಚ್ಚುತ್ತವೆ ಎಂಬುದನ್ನು ನಿಮ್ಮಂತೆಯೇ ನಂಬಿಕೊಂಡು ಬರೆಯುತ್ತಾ ಬಂದಿದ್ದೇನೆ. ಹಾಗೆಯೇ ಓರ್ವ ಸಾಹಿತ್ಯಪ್ರೇಮಿ ಬೌದ್ಧಿಕ ಸಹಚಾರಿಣಿಯೂ ನಿಮಗೆ ಜೊತೆಯಾಗಲಿ ಎಂಬ ಹಾರೈಕೆ ಈ ಲೇಖನದೊಂದಿಗೆ…

  3. Prasad Naik

    ಪ್ರತಿಕ್ರಿಯೆಗಾಗಿ ಜಯಶ್ರೀಯವರಿಗೆ ಧನ್ಯವಾದಗಳು. ಓದುವ, ಓದಿಸುವ ಪಯಣ ಹೀಗೇ ಮುಂದುವರೆಯಲಿ ಎಂಬ ಆಶಯದೊಂದಿಗೆ…

  4. Vinathe

    Like x 2 + Prasad x 2 = tumbaa enjoy maadida barahagalu.

    • Prasad Naik

      ಗಣಿತದ ಸಮೀಕರಣವನ್ನು ಬಳಸಿ ಪ್ರತಿಕ್ರಯಿಸಿದ್ದೀರಿ. ನಾನು ಗಣಿತದಲ್ಲಿ ವೀಕ್ ಆದ ಹೊರತಾಗಿಯೂ, ಲೇಖನ ನಿಮಗೆ ಖು‍ಷಿ ಕೊಟ್ಟಿದೆ ಎಂದು ತಿಳಿದು ಸಂತೋಷವಾಯಿತು. ಮತ್ತೊಮ್ಮೆ ಹ್ಯಾಪೀ ರೀಡಿಂಗ್.

    • ಪ್ರಸಾದ್ ಶೆಣೈ

      Vinate hesrinavale doora saridalu kadambariyallu barutte…ಅವಳೆ ಅಲ್ಲಿ ಬೌದ್ದಿಕ ಸಹಚಾರಿಣಿ

  5. lalitha sid

    ಡೋಂಟ್ ವರಿ ಬರಹಗಾರರೇ ಕನ್ನಡಾಂಬೆ ಸಮೃದ್ಧೆ. ನಿಮ್ಮ ಆಸೆಯ ಸಹಚಾರಿಣಿ ನಿಮಗೆ ಖಂಡಿತಾ ದೊರೆಯುತ್ತಾಳೆ

  6. Anonymous

    Baraha thumba ishtavaythu yuva barahagarare..:)

  7. Manjula gh

    ನಿಮ್ಮ ಸಾಹಿತ್ಯದ ಪ್ರೀತಿ ನೋಡಿ ತುಂಬಾ ಖುಷಿಯಾಯ್ತು,ಆದಷ್ಟು ಬೇಗ ನಿಮ್ಮ ಓದುವ ಮನಸ್ಸಿಗೆ ಮಿಡಿಯುವ ಮನಸ್ಸು ಜೊತೆಯಾಗಲಿ ಸಾಹಿತ್ಯದ ರುಚಿ ಸವಿರುಚಿಯಾಗಿ ಜಗತ್ತಿನ ತುಂಬಾ ಪಸರಿಸಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading