ಜಯಲಕ್ಷ್ಮಿ ಪಾಟೀಲ್ ಅಂಕಣ- ಹೇಸಿಗೆ ನಗೆಯೊಂದಿಗೆ ವಕ್ಕರಿಸುತ್ತಿದ್ದ ಆ ವಿಕೃತಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

8

‘ಅಲ್ಲ ಪಪ್ಪಿ, ಆ ಹಸರಡ್ಡಿ ಗೆ ಮಾಮಾ ಅಂತಿ. ನನಗೂ ನೀ ಸಣ್ಣಾಕಿದ್ದಾಗಿಂದನ ಗೊತ್ತು. ಆದ್ರೂ ಸರ್ ಅಂತಿದಿ. ಇದ್ ಬರೊಬ್ಬರಿ ಏನ್ ಹೇಳು ನೋಡೂನು?’ 

ಹೀಗೆ, ನಾನು ಕಾಲೇಜು ಓದುತ್ತಿರುವಾಗ, ಒಂದು ದಿನ ಅವರ ಮನೆಯಲ್ಲಿ ಕರೆದು ನಿಲ್ಲಿಸಿ ಕೇಳಿದ್ದರು ದಿ. ಪ್ರೊ. ಸಂಗಮನಾಥ. ಜಿ. ಹಂಡಿ ಸರ್. ಅದ್ಭುತ ಕನ್ನಡ ಪಂಡಿತರು ಅವರು. ಅವರ ಎರಡನೇ ಮಗಳು ದಾಕ್ಷಯಿಣಿ ನನ್ನ ಬಾಲ್ಯ ಸ್ನೇಹಿತೆ. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದೆವು. ಹೀಗಾಗಿ ಚಿಕ್ಕಂದಿನಿಂದಲೇ ಅವರ ಮನೆಗೆ ನಿತ್ಯ ಭೇಟಿ ಇರುತ್ತಿತ್ತಾದ್ದರಿಂದ ಸರ್ ಹೀಗೆ ಕೇಳಿದ್ದರು. ನಾನು ಮದುವೆಯಾಗಿ ಗಂಡನೊಡನೆ ಪುಣೆಗೆ ಬರುವವರೆಗೂ ಅವರ ಮನೆಯ ಭೇಟಿ ನಿತ್ಯ ಸತ್ಯವಾಗಿತ್ತು. ಮನೆಯಲ್ಲಿ ಯಾರಾದರೂ ನನ್ನನ್ನು ಕಾಣದೇ, 

‘ಪಪ್ಪಿ ಎಲ್ಲೆದಾಳ?’ ಅನ್ನುತ್ತಲೇ, ಇನ್ನ್ಯಾರೊ ಒಬ್ಬ್ರು, ‘ಇನ್ನೆಲ್ಲಿರ್ತಾಳ, ಹಂಡಿಯವ್ರ ಮನ್ಯಾಗಿರಬೇಕು’ ಎನ್ನುವುದು ಮಾಮೂಲಿ ಮಾತಾಗಿತ್ತು. 

ನಮ್ಮಜ್ಜಿಯ ಮನೆಯ ಪಕ್ಕದ ಮನೆ ಪ್ರೊ. ಎ. ಬಿ ಹಸರಡ್ಡಿ ಅವರದು (ಅವರೂ ಈಗಿಲ್ಲ). ನಮ್ಮ ಎರಡೂ ಮನೆಯವರ ನಡುವೆ ಅದೆಷ್ಟು ಆಪ್ತತೆ ಇದೆಯಂದರೆ ಪರಸ್ಪರ ಕಾಕಾ ಅತಿ, ಮಾಮಾ, ಅವ್ವಾರು ಹೀಗೆ ಸಂಬಂಧಿಕರಲ್ಲದೆಯೂ ಸಂಬಂಧಿಕರೆನ್ನುವಷ್ಟು.. ಅಲ್ಲದೇ ಪ್ರೊ. ಹಸರಡ್ಡಿ ಅವರನ್ನು ಅವರ ಮಕ್ಕಳು ಮಾಮಾ ಎಂದು ಕರೆಯುತ್ತಿದ್ದರಿಂದ ನಾನೂ ಮಾಮಾ ಎಂದೇ ಕರೆಯುತ್ತಿದ್ದೆ. ಅವರ ಹಿರಿಯ ಮಗ ಸುಧೀರ ನನ್ನ ಸಹಪಾಠಿಯಾಗಿದ್ದ. ಒಟ್ಟಿಗೇ ಲಿಬರಲ್ ಸ್ಕೂಲಿಗೆ ಹೋಗುತ್ತಿದ್ದೆವಾದ್ದರಿಂದ ಯಾವಾಗಲೂ ಶರಂಪರ ಜಗಳ ನನ್ನ ಅವನ ನಡುವೆ ನಡೆಯುತ್ತಲೇ ಇರುತ್ತಿತ್ತು. ಮೂಳೆ ತಜ್ಞನಾಗಿದ್ದ ಸುಧೀರ್ ದುರ್ದೈವವಶಾತ್ ಈಗ ಕೆಲ ವರ್ಷಗಳ ಹಿಂದೆ ಆಕ್ಸಿಡೆಂಟ್ ಒಂದರಲ್ಲಿ ಹೊರಟುಹೋದ…

ಪ್ರೊ. ಹಸರಡ್ಡಿ ಮತ್ತು ಪ್ರೊ. ಹಂಡಿ ಅವರು ಒಂದೇ ಕಾಲೇಜಿನಲ್ಲಿ (SB ARTS & KCP SCIENCE COLLEGE, BIJAPUR) ಕ್ರಮವಾಗಿ ಬಾಟನಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಒಂದೇ ಓಣಿಯಲ್ಲಿದ್ದರು ಮತ್ತು ಉತ್ತಮ ಸ್ನೇಹಿತರಾಗಿದ್ದರು. ಇಬ್ಬರೂ ಅತ್ಯುತ್ತಮ ಪ್ರಾಧ್ಯಾಪಕರಾಗಿದ್ದರಷ್ಟೇ ಅಲ್ಲ, ಇಬ್ಬರೂ ನನಗೆ ಕಾಲೇಜಿನಲ್ಲಿ ಪದವಿ ಓದುವಾಗ ಪಾಠ ಮಾಡುವ ಮೂಲಕ ಗುರುಗಳೂ ಆದರು. ಹಂಡಿ ಸರ್ ನಮಗಾಗ ಹಳೆಗನ್ನಡವನ್ನು ಬೋಧಿಸುತ್ತಿದ್ದರು. ಕ್ಲಾಸಿಗೆ ಬರುವಾಗ ಅವರ ಕೈಯಲ್ಲಿ ಪಠ್ಯಪುಸ್ತಕವಿದ್ದುದನ್ನು ನಾನಂತೂ ಯಾವತ್ತೂ ನೋಡಲಿಲ್ಲ. ಕ್ಲಾಸಿಗೆ ಬಂದವರೇ, 

‘ಇವತ್ತ ರನ್ನನ ‘ಸಾಹಸಭೀಮ ವಿಜಯ’ ಚಾಲೂ ಮಾಡೂನು, ಪಿಯೂಸಿಗೂ ಇತ್ತಲ್ಲಾ ನಿಮಗಿದು?’ ಎನ್ನುತ್ತಲೋ, 

‘ಪಂಪನ ‘ವಿಕ್ರಮಾರ್ಜುನ ವಿಜಯ’ದ ಇಂಥಾ ಚಾಪ್ಟರ್ ತಿಳ್ಕೊಣೂನಂತ’, 

‘ಕುಮಾರವ್ಯಾಸನ ‘ಗದುಗಿನ ಭಾರತ’ದ ವಿರಾಟ ಪರ್ವದಾಗ…’

ಎನ್ನುತ್ತಾ ಕಣ್ಣೆದುರಿಗೆ ಪುಸ್ತಕವಿದೆ ಏನೋ ಎಂಬಂತೆ ಮೆಲುದನಿಯಲ್ಲಿ ಸ್ಪುಟವಾಗಿ ಹಳೆಗನ್ನಡ, ನಡುಗನ್ನಡದಲ್ಲಿ ಅವರು ಪಾಠ ಮಾಡುತ್ತಿದ್ದರೆ, ಕೈಯಲ್ಲಿ ಪುಸ್ತಕ ಹಿಡಿದ ನಾವುಗಳು ಆಯಾ ಅಧ್ಯಾಯಗಳ ಪುಟಗಳನ್ನು ಪರಿವಿಡಿಯಲ್ಲಿ ನೋಡಿಕೊಂಡು, ತೆರೆದು, ಅವರು ಯಾವ ಸಾಲಿನಲ್ಲಿದ್ದಾರೆ ಎಂದು ಹುಡುಕಲು ಪರದಾಡುತ್ತಿದ್ದೆವು. ಮೊದಲೇ ಅವರದು ಮೆಲುದನಿ ಅದರ ಮೇಲೆ ಸ್ಪುಟವಾಗಿದ್ದರೇನು ಅದು ಹಳೆಗನ್ನಡ! ಬೇಡ ನಮ್ಮ ಫಜೀತಿ.

ಸದಾ ಸಮಾಧಾನ ಎನ್ನುವಂತೆ ಕಾಣುತ್ತಿದ್ದ ಪುಟ್ಟ ದೇಹದ ಹಂಡಿ ಸರ್, ಸಿಟ್ಟಿಗೆದ್ದರೆ ಸ್ವಹಃ ಅವರೂ ಎದುರಿನವರೂ ಒಟ್ಟಿಗೇ ನಡುಗುವುದಿತ್ತು. ಮನೆಗೆ ಬಂದರೆಂದರೆ ಅವರಾಯಿತು ಅವರ ಪುಸ್ತಕಗಳು, ಗುಂಡಾಯಿತು. ಅಲ್ಲಿಯವರೆಗೆ ಕಲಕಲ ಅನ್ನುತ್ತಿದ್ದ ಮನೆಯೀಗ ಗಂಟೆಯೂ ಇಲ್ಲದ ದೇವರ ಗರ್ಭಗುಡಿಯಂತೆ ಪ್ರಶಾಂತ. ಹಂಡಿ ಸರ್ ಲ್ಲಿ, ನಾನು ಸಡಗರ, ನಗು ಮತ್ತು ಮಾತುಗಳನ್ನು ಕಂಡಿದ್ದು ಅವರ ಮನೆಗೆ ಸಾಹಿತಿಗಳು ಬಂದಾಗ. ಸಾಹಿತಿಗಳು, ಸಾಹಿತ್ಯ ಮತ್ತು ಸೋಮರಸ ಅವರನ್ನು ಚೈತನ್ಯಪೂರ್ಣವಾಗಿಸುತ್ತಿದ್ದವು.

ಆಗೆಲ್ಲ ಮನೆಯ ಯಜಮಾನನ ಜೊತೆ ಹೆಚ್ಚಾಗಿ ಎಲ್ಲರೂ ಹೆದರುತ್ತಲೇ ಮಾತಾಡುತ್ತಿದ್ದರು. ಎಲ್ಲದಕ್ಕೂ ಹೇಗೆ ಕೇಳುವುದು? ಹೇಗೆ ಹೇಳುವುದು ಅನ್ನುವ ಅಳುಕು ಉಳಿದವರಿಗೆ. ಅದರಲ್ಲೂ ಹಸರಡ್ಡಿ ಮಾಮಾನನ್ನು ಕಂಡರೆ ಮನೆಯವರಷ್ಟೇ ಅಲ್ಲ, ಹೊರಗಿನವರೂ ಹೆದರುತಿದ್ದರು, ಅಷ್ಟು ಖಡಕ್ ಮತ್ತು ಕಮ್ಮಿ ಮಾತಿನವರಾಗಿದ್ದರು. ಹಂಡಿ ಸರ್ ಸಹ ಅತ್ಯಂತ ಗಂಭೀರ ವ್ಯಕ್ತಿಯಾಗಿದ್ದರು, ಆದರೆ ಮಾಮಾನಂತೆ ಖಡಕ್ ದನಿಯವರಲ್ಲ.

ನನಗೆ ಹಸರಡ್ಡಿ ಮಾಮಾನಲ್ಲಿ ಸಲುಗೆ ಇದ್ದಷ್ಟು ಹಂಡಿ ಸರ್ ಜೊತೆಗಿರಲಿಲ್ಲ. ಅಲ್ಲದೇ ಸಣ್ಣ ಸಣ್ಣದಕ್ಕೂ ಅವರ ಮನೆಯ ಜನರೇ ಅವರೊಂದಿಗೆ ಹೆದರಿ ಹೆದರಿ ಮಾತಾಡುವ ಹೊತ್ತಲ್ಲಿ ನಾ ಹೇಗೆ ಸಲುಗೆಯಿಂದ ಮಾಮಾ ಅಥವಾ ಕಾಕಾ ಅನ್ನಲು ಸಾಧ್ಯವಿತ್ತು? ಅವರೆದುರು ನಿಂತು ಮಾತಾಡಿದವಳೂ ಅಲ್ಲ ನಾನು ಚಿಕ್ಕಂದಿನಲ್ಲಿ. ಆಗೆಲ್ಲ ನಾವೀಗ ನಮಗಿಷ್ಟವಾದವರೆದುರು ಅಕ್ಕರೆಯನ್ನು ವ್ಯಕ್ತಪಡಿಸ್ತೀವಲ್ಲ, ಹಾಗೆಲ್ಲ ಇರ್ಲಿಲ್ಲವಾದ್ದರಿಂದ ನನ್ನನ್ನು ಕಂಡರೆ ತಮ್ಮ ಮಗಳು ದಾಕ್ಷಾಯಿಣಿಯನ್ನು ಕಂಡಷ್ಟೇ ಅಕ್ಕರೆ ಅವರಿಗೆ ಅನ್ನುವುದು ಗೊತ್ತಾಗಿದ್ದು ಅಂದಿನ ದಿನವೇ. ಹಾಗೆ ಅವರು ಕೇಳಿದಾಗ ಏನು ಹೇಳಬೇಕೆಂದು ತೋಚದೆ ತೊದಲಿ ಸುಮ್ಮನಾಗಿದ್ದೆ.

ನಂತರ ಕಾಕಾರೀ ಎಂದು ಒಂದೆರಡು ಬಾರಿ ಪ್ರಯತ್ನಿಸಿದೆನಾದರೂ ಅದು ಅಸಹಜವೆನಿಸಿ ಮತ್ತೆ ಸರ್ ಎಂದೇ ಅನ್ನುತ್ತಿದ್ದೆ. ನಾನು ಚಿಕ್ಕವಳಿದ್ದಾಗ ಹಂಡಿ ಸರ್ ತಮ್ಮ ಸ್ಟಡಿ ರೂಮಲ್ಲಿ ಅವರನ್ನು ಕಾಣಲು ಬರುತ್ತಿದ್ದ ಸಾಹಿತಿಗಳೊಡನೆ, ಪದವಿಯಲ್ಲಿ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳೊಡನೆ ಚರ್ಚಿಸುವುದನ್ನು ಕಾಣುತ್ತಿದ್ದೆ. ಆಫೀಸ್ ರೂಮ್ ಎಂದು ಕರೆಸಿಕೊಳ್ಳುತ್ತಿದ್ದ ಅವರ ಸ್ಟಡಿ ರೂಂನ ಗೋಡೆಗಳೆಲ್ಲ ಬುಕ್ ಶೆಲ್ಫ್ ಆಗಿದ್ದವು.

ಚಿಕ್ಕಮಕ್ಕಳಿಗೆ ಅವರಿದ್ದಾಗ ಸುಲಭ ಪ್ರವೇಶವಿರಲಿಲ್ಲವಲ್ಲಿ. ಅವರೆಲ್ಲ ಅಲ್ಲಿ ಚರ್ಚಿಸುತ್ತಿರುವಾಗ ಮೆಲ್ಲ ಹೋಗಿ ಆ ಕೋಣೆ ಬಾಗಿಲ ತೋಳಿಗೆ ಮರೆಯಲ್ಲಿ ಆತು ನಿಂತು ಕುತೂಹಲದಿಂದ ಅವರೇನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಳ್ಳಲು ಯತ್ನಿಸುತ್ತಿದ್ದೆ. ಚೋಟುದ್ದದ ನನಗೆ ಅವರ ಅಷ್ಟುದ್ದದ ಚರ್ಚೆಗಳು ನೈಯಾ ಪೈಸಾದಷ್ಟೂ ಅರ್ಥವಾಗುತ್ತಿರಲಿಲ್ಲ. ಆದರೂ ಅದೇನೋ ಸೆಳೆತ ಅವರ ಚರ್ಚೆಗಳೆಡೆಗೆ. ಹಂಡಿ ಸರ್ ಅವರ ಶ್ರೀಮತಿ, ಭಾಗೀರತಿ (ಅಕ್ಕೋರ ಅನ್ನುತ್ತಿದ್ದೆ ನಾನವರನ್ನು) ಅವರು ಅಡುಗೆಮನೆಯಲ್ಲಿದ್ದುಕೊಂಡೇ ಸಣ್ಣಗೆ ಗದರುತ್ತಿದ್ದರು, 

‘ಪಪ್ಪಿ ಬಾ ಈ ಕಡಿಗಿ. ಸರ್ ನೋಡಿದ್ರಂದ್ರ ಅವ್ರ ಕಡಿಂದ ಬೈಸ್ಕೋತಿ ನೋಡು. ಹಂಗೆಲ್ಲಾ ನಿಂದ್ರಬಾರ್ದು, ಬಾ ಈ ಕಡೆ’

ಮನಸ್ಸು, ಕಿವಿಯನ್ನು ಆ ಬಾಗಿಲ ತೋಳಿಗಂಟಿಸಿಯೇ ಒತ್ತಾಯಪೂರ್ವಕ ಒಳಗೆ ಬರ್ತಿದ್ದೆ. ಬಹುಶಃ ಆಗಿನಿಂದಲೇ ನನಗೆ ಸಾಹಿತ್ಯದ ಚರ್ಚೆಗಳ ಬಗ್ಗೆ ಆಸಕ್ತಿ ಇತ್ತು ಅನ್ನುವುದು ಇತ್ತೀಚಿಗೆ ನನ್ನ ಗಮನಕ್ಕೆ ಬಂದ ಕಾರಣಕ್ಕೆ ಅದನ್ನಿಲ್ಲಿ ದಾಖಲಿಸಬೇಕೆನಿಸಿತು. ಗೊತ್ತಿಲ್ಲದಂತೆ ಒಂದು ಉತ್ತಮ ಅಭಿರುಚಿಯನ್ನು ನನ್ನಲ್ಲಿ ಹುಟ್ಟುಹಾಕಿದ ದಿ. ಹಂಡಿ ಸರ್ ಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತಿದ್ದೇನೆ. 

ಅಪ್ಪ ಅವ್ವ ನನ್ನನ್ನು ಲಿಬರಲ್ ಸ್ಕೂಲಿಗೆ ಇಂಗ್ಲಿಷಲ್ಲಿ ಓದಲೆಂದು ಹಾಕಿದ್ದರೂ ಅದ್ಯಾಕೋ ಇವತ್ತಿಗೂ ಇಂಗ್ಲಿಷ್ ನನಗಷ್ಟು ಆಪ್ತ ಭಾಷೆ ಆಗಿಲ್ಲ. ಬಹುಶಃ ನನ್ನ ಸುತ್ತಲೂ ಅಂಥದ್ದೊಂದು ಇಂಗ್ಲಿಷ್ ವ್ಯಾಮೋಹದ ವಾತಾವರಣವಿಲ್ಲದೇ ಇದ್ದಿದ್ದೂ ಒಂದು ಕಾರಣವಾಗಿರಬಹುದು. ನಾನು ದಡ್ಡಿ ಅಲ್ಲದಿದ್ದರೂ ತುಂಬಾ ಜಾಣ ವಿದ್ಯಾರ್ಥಿಯೂ ಆಗಿರಲಿಲ್ಲ ಎನ್ನುವುದೂ ಕಾರಣವಾಗಿರಬಹುದು.

ಹೀಗಾಗಿ ನಾಲ್ಕನೇ ತರಗತಿಯವರೆಗೆ ಇಂಗ್ಲಿಷ್ ಮಿಡಿಯಂನಲ್ಲಿ ಓದಿ ನಂತರ ನನ್ನ ತಂದೆ ತಾಯಿಗಳಿದ್ದ ಮೋರಟಗಿಯಲ್ಲಿ ಐದನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲಿ ನನ್ನ ಓದು ಮುಂದುವರೆಯಿತು. ತಮಾಷೆ ಅಂದರೆ ಆಂಗ್ಲ ಮಾಧ್ಯಮದಲ್ಲಿ ಓದುವಾಗ ಕುಂಟುತ್ತ ನಡೆಯುತ್ತಿದ್ದ ನನ್ನ ವಿದ್ಯಾಭ್ಯಾಸ, ಕನ್ನಡ ಮಾಧ್ಯಮಕ್ಕೆ ಬಂದಿದ್ದೇ ಓಡುವ ಕುದುರೆಯಾಯಿತು. ಒಂದನೇ ತರಗತಿಯಿಂದಲೇ ಕನ್ನಡ ಓದುತ್ತಿದ್ದೆನೇನೊ ಎನ್ನುವಷ್ಟು ಸರಾಗ. ಜೊತೆಗೆ ಮನೆಗೆ ಬರುತ್ತಿದ್ದ ದಿನಪತ್ರಿಕೆ, ಪ್ರಜಾಮತ, ಸುಧಾ, ತರಂಗ ಲಂಕೇಶ್ ಪತ್ರಿಕೆಗಳು, ಮೋರಟಗಿಯ ವಿರಕ್ತ ಮಠದಿಂದ ಅಪ್ಪ ತರುತ್ತಿದ್ದ ಪುಸ್ತಕಗಳು ಇಂಗ್ಲಿಷನ್ನು ಇನ್ನಷ್ಟು ಕಡೆಗಣಿಸುವಂತೆ ಮಾಡಿ, ಪಾಸಾಗುವಷ್ಟು ಇಂಗ್ಲಿಷು ಬಂದರಾಯಿತು ಮತ್ತು ಅಷ್ಟು ಬರುತ್ತದಲ್ಲ ಸಾಕು ಎಂದಿದ್ದುಬಿಟ್ಟೆ.

ಬಿಜಾಪುರದಲ್ಲಿ ಲಿಬರಲ್ ಸ್ಕೂಲಲ್ಲಿ ಓದುತ್ತಿರುವಾಗ ಶಾಲೆಗೆ ಹೋಗಲು ಸಿಟಿ ಬಸ್ಸೇ ಸ್ಕೂಲ್ ಬಸ್ಸಾಗಿ ಬದಲಾಗಿ ನಮ್ಮನ್ನು ಕರೆದುಕೊಂಡು ಹೋಗಿ ತಂದು ಬಿಡುತ್ತಿತ್ತು. ಸ್ಕೂಲ್ ಬಸ್ಸಾಗಿ ಬದಲಾಗಿದ್ದರೂ ಡ್ರೈವರ್ ಜೊತೆಗೆ ಆ ಬಸ್ಸಿನ ಕಂಡಕ್ಟರ್ ಕೂಡಾ ಅದೇ ಬಸ್ಸಲ್ಲಿರುತ್ತಿದ್ದರು. ಬಹುಶಃ ಮಕ್ಕಳನ್ನು ಶಾಲೆಗೆ ಮನೆಗೆ ಬಿಟ್ಟು ಮತ್ತೆ ಬಸ್ ಎಂದಿನ ರೂಟಿಗೆ ಹೋಗುತ್ತಿದ್ದಿರಬಹುದು.

ಇಬ್ಬರು ಕಂಡಕ್ಟರುಗಳು ಬಸ್ಸಲ್ಲಿ ಒಬ್ಬ ಕಂಡಕ್ಟರ್ ಅವರಿಲ್ಲದಿದ್ದರೆ ಇವರು ಎನ್ನುವಂತೆ ನಿಯಮಿತವಾಗಿ ಇರುತ್ತಿದ್ದರಾದ್ದರಿಂದ ಎಲ್ಲ ಮಕ್ಕಳಿಗೂ ಅವರಿಬ್ಬರ ಪರಿಚಯವಿತ್ತು. ಅವರಲ್ಲಿ ಒಬ್ಬ ಒಳ್ಳೆಯ ಕಂಡಕ್ಟರ್ ಅಂಕಲ್ ಇನ್ನೊಬ್ಬ ಕೆಟ್ಟ ಕಂಡಕ್ಟರ್ ಅಂಕಲ್ ಎಂದು ನಾನು ಗುರುತಿಸಿಕೊಂಡಿದ್ದೆ ಮನದಲ್ಲಿ. ಮೊದಮೊದಲಿಗೆ ರೇಣುಕಾ ಎನ್ನುವ ಸ್ಕೂಲಿನ ಆಯಾ ಬಸ್ಸಿನ ಜೊತೆಗೆ ಬಂದು ನಮ್ಮನ್ನು ಬಸ್ಸಲ್ಲಿ ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುತ್ತಿದ್ದವಳು ಅದ್ಯಾಕೋ ಮುಂದೆ ಬಸ್ಸಲ್ಲಿ ಬರುವುದನ್ನು ನಿಲ್ಲಿಸಿದ್ದಳು.

ಒಳ್ಳೆಯ ಕಂಡಕ್ಟರ್ ಅಂಕಲ್ ಏನಿದ್ದರೋ ಅವರು ಎತ್ತರಕ್ಕೆ ನೋಡಲು ಕಟ್ಟುಮಸ್ತಾಗಿ ಸುಂದರವಾಗಿದ್ದರು. ತುಂಬಾ ವಾತ್ಸಲ್ಯದಿಂದ ಮಕ್ಕಳೊಡನೆ ಮಾತಾಡುತ್ತಿದ್ದರು. ಅದೇನೋ ಗೊತ್ತಿಲ್ಲ ಅವರಿಗೆ ನನ್ನನ್ನು ಕಂಡರೆ ಅಕ್ಕರೆ. ಲಕ್ಷ್ಮಿ ಎನ್ನುತ್ತಿದ್ದರು ನನ್ನನ್ನು. ಯಾವಾಗಲಾದರು ನನ್ನ ಪಕ್ಕದಲ್ಲಿ ಸೀಟು ಖಾಲಿ ಇದ್ದರೆ, ಕುಳಿತುಕೊಂಡು ಮೃದುವಾಗಿ ತಲೆ ನೇವರಿಸುತ್ತಿದ್ದರು. ಮುಂದೆ ನಾನು ದೊಡ್ಡವಳಾದ ಮೇಲೂ ಸಿಟಿ ಬಸ್ಸಲ್ಲಿ ಕಂಡರೆ ‘ಆರಾಮದಿ?’ ಎಂದು ಕೇಳೋರು. ತಂದೆಯಂತಹ ಆ ನಿಷ್ಕಲ್ಮಶ ಪ್ರೀತಿಯನ್ನು ನೆನೆದರೆ ಈಗಲೂ ಭಾವುಕಳಾಗ್ತೀನಿ ನಾನು.

ಆ ಇನ್ನೊಬ್ಬ ಕಂಡಕ್ಟರ್ ಗೆ ಎಡಗೈಯಲ್ಲಿ ಆರು ಬೆರಳುಗಳಿದ್ದವು. ಆರನೇ ಬೆರಳು ಕಿರುಬೆರಳಿಗೆ ಗಮ್ ಹಾಕಿ ಶೇಂಗಾದ ಕಾಯಿಯನ್ನು ಅಂಟಿಸಿದಂತೆ ನೇತಾಡುತ್ತಿತ್ತು. ಗುಂಗರು ಕೂದಲಿನ ಬೆಳ್ಳನೇಯ ಅವನು ಬಸ್ಸಲ್ಲಿದ್ದಾನೆ ಎಂದರೆ ನಮ್ಮೆಲ್ಲರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇವನ ಬದಲಿಗೆ ಚೊಲೊ ಅಂಕಲ್ ಬರ್ಬಾರ್ದಿತ್ತಾ ಅನ್ನೊ ಹಳಹಳಿ. ಯಾರ ಪಕ್ಕದಲ್ಲಿ ಸೀಟು ಕಾಣುತ್ತಿತ್ತೋ ಅಲ್ಲಿ ಹೋಗಿ ಕುಕ್ಕರಿಸುತ್ತಿದ್ದ. ಹಲ್ಲು ಕಿಸಿಯುತ್ತಾ ತೊಡೆ, ಎದೆ ಚೂಟುತ್ತಿದ್ದ… ಬಿಡಿಸಿಕೊಂಡಷ್ಟೂ ಅವನ ನಗುವಿನ ಬಾಯಿ ಅಗಲಕ್ಕೆ ಹಿಗ್ಗುತ್ತಿತ್ತು.

ಬಸ್ಸಲ್ಲಿ ಅವನಿದ್ದಾಗ ನಮ್ಮ ಪಕ್ಕದ ಸೀಟಿನವರು ಇಳಿದು ಹೋಗಲಿದ್ದಾರೆ ಎನ್ನುವಾಗಲೇ ನಮ್ಮ ಕಣ್ಣುಗಳು, ಒಂದಿಬ್ಬರಿರುವ ಇನ್ನೊಂದು ಅರ್ಧ ಖಾಲಿಯಾಗುವ ಸೀಟನ್ನು ಹುಡುಕುತ್ತಿದ್ದವು. ಹಾಗೆ ಕಂಡಿದ್ದೇ ಇಳಿಯುವವರ ಜೊತೆಗೆ ನಾವೂ ಎದ್ದು ಆ ಖಾಲಿ ಸೀಟಿನೆಡೆಗೆ ದೌಡಾಯಿಸುತ್ತಿದ್ದೆವು. ಎಷ್ಟೋ ಸಲ ನಾನು ಹೋಗಿ ಇನ್ನಬ್ಬರ ಪಕ್ಕದ ಸೀಟು ಹಿಡಿಯುವಷ್ಟರಲ್ಲಿ ಮತ್ತ್ಯಾರೋ ಹುಡುಗಿ ನನಗಿಂತ ಮುಂಚೆ ಆ ಸೀಟು ಹಿಡಿದು, ನಿರಾಶಳಾಗಿ ಮರಳಿ ನಾನು ಕುಳಿತಿದ್ದ ಸೀಟಿಗೆ ಬಂದು ಕುಳಿತರೆ ಹೇಸಿಗೆ ನಗೆಯೊಂದಿಗೆ ವಕ್ಕರಿಸುತ್ತಿದ್ದ ಆ ವಿಕೃತಿ…

 | ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಸುಮಾವೀಣಾ

  ಸುಲಲಿತ ಬರೆಹ ಮೇಡಂ ಅಭಿನಂದನೆಗಳು

  ಪ್ರತಿಕ್ರಿಯೆ
 2. Akshata Deshpande

  ಪ್ರೊ. ಹಂಡಿ ಸರ್ ಮತ್ತು ಪ್ರೊ. ಹಸರಡ್ಡಿ ಸರ್ ಇಬ್ಬರಿಗೂ ನನ್ನ ನಮನಗಳು. ಇಂತಹ ಆಪ್ತ ಹಾಗೂ ಉತ್ತಮ ಗುರುಗಳು ನಿಮಗೆ ಲಭಿಸಿದ್ದಕ್ಕೆ ನೀವು ಭಾಗ್ಯವಂತ್ರು. ನಿಮ್ಮಲ್ಲಿ ಸಾಹಿತ್ಯದ ಚರ್ಚೆಯ ಬಗ್ಗೆ ಆಸಕ್ತಿ ಹುಟ್ಟಿಸಿ ಒಬ್ಬ ಉತ್ತಮ ಸಾಹಿತಿಯನ್ನು ಹುಟ್ಟುಹಕಿದ್ದಾರೆ.
  ಅಬ್ಬಾ! ಇಂತಹ ಕಂಡಕ್ಟರ್ ಗಳನ್ನ ಸಹಿಸುವುದು ಅಸಾಧ್ಯದ ಕೆಲಸ. ಚೆನ್ನಾಗಿ ಮೂಡಿ ಬರುತ್ತಿದೆ ಹೊರಳು ನೋಟ.
  ಮುಂದಿನ ಕಂತಿಗಾಗಿ ಕಾಯುತ್ತಿರುವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: