ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೊಳ್ಳೆಯನ್ನು ಕಂಡಾಗಲೆಲ್ಲಾ ದಮ್ಮಯ್ಯ ಸೊಳ್ಳೆ..

ಜ್ವರದ ಹಳಹಳಿಕೆಗಳು

ಸ್ಮಿತಾ ಅಮೃತರಾಜ್, ಸಂಪಾಜೆ

ಮಳೆಗಾಲದ ಸಮಯದಲ್ಲಿ ಯಾರೊಂದಿಗಾದರೂ ಕುಶಲೋಪರಿಗೆಂದು ಹೇಗಿದ್ದೀರಿ ಅಂತ ವಿಚಾರಿಸಿ ನೋಡಿ.

ಚೆನ್ನಾಗಿದ್ದೀನಿ ಅಂತ ಮೊದಲ ಔಪಚಾರಿಕ ಉತ್ತರ ಕೊಟ್ಟ ನಂತರ, ಅಷ್ಟಕ್ಕೇ ಕಾದಿದ್ದವರಂತೆ ತಮ್ಮ ಖಾಯಿಲೆ ಕಸಾಲೆಗಳ ಮಾರುದ್ದ ಪಟ್ಟಿಯನ್ನು ಬಿರುಸು ಬಾಣದಂತೆ ಹೇಳುತ್ತಾ ಹೋಗುತ್ತಾರೆ.ಅವರಿಗೆ ಜ್ವರ ಬಂದದ್ದು, ಜ್ವರ ಬಂದು ಒಂದು ವಾರ ಮಲಗಿದ್ದು, ಜ್ವರ ಬಿಟ್ಟಿದೆ ಅಂತ ಅನ್ನಿಸಿದರೂ ಅದರ ಸುಸ್ತು ನಿತ್ರಾಣ ಇನ್ನೂ ಮೈಯಲ್ಲಿ ಹಾಗೇ ಉಳಿದುಕೊಂಡು ಕೈ , ಕಾಲು, ಗಂಟು, ಕೀಲುಗಳೆಲ್ಲಾ ಸೆಳೆತ ಶುರುವಾಗಿ ಯಮಯಾತನೆ ಶುರುವಾದದ್ದು, ಹೀಗೆ ಪೀಡಿಸುವ ಪೀಡೆ ಜ್ವರ ನಮ್ಮ ಶತ್ರುಗಳಿಗೂ ಬರಬಾರದಪ್ಪಾ ಅಂತ ಅವಲತ್ತುಕೊಳ್ಳುತ್ತಾ ಪರೋಕ್ಷವಾಗಿ ನಮಗೂ ಶತ್ರುಗಳಿದ್ದಾರೆ ಅಂತ ಸಾಬೀತುಪಡಿಸಿಕೊಂಡು ಬಿಟ್ಟಿರುತ್ತಾರೆ.

mosquito3 ಜ್ವರ ಶುರುವಾಗಿ ಬಿಟ್ಟ ನಂತರ ಅದು ಹೇಗೆ ತಮ್ಮ ಮನೆಯ ಒಬ್ಬೊಬ್ಬರಿಗೇ ಅಮರಿಕೊಳ್ಳುತ್ತಾ ಸರಿ ಸುಮಾರು ಒಂದು ತಿಂಗಳುಗಳ ಕಾಲ ತಮ್ಮ ಮನೆಯಲ್ಲಿಯೇ ಝಂಡಾ ಊರಿ, ಅಟ್ಟಾಡಿಸಿ ಹೇಗೆ ಅದು ನಮ್ಮನ್ನೆಲ್ಲಾ ಸತಾಯಿಸಿಬಿಟ್ಟಿತು ಅನ್ನೋದನ್ನ ಕೇಳುವವರಿಗೆ ಜ್ವರ ಬರಿಸುವ ಹಾಗೆ ಹೇಳುತ್ತಿರುತ್ತಾರೆ.

ಇದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಜ್ವರದ ತಾಪದಿಂದ ನರಳಿದ ವ್ಯಕ್ತಿ ಬಡ ಬಡಿಸುವ ಹಳಹಳಿಕೆಯ ಮಾತೆಂದು ಇದನ್ನು ತಳ್ಳಿ ಹಾಕುವಂತಿಲ್ಲ. ಜ್ವರದ ನರಳಿಕೆಯ ನರಕವನ್ನು ಅನುಭವಿಸಿ ಬಂದ ಪ್ರತಿಯೊಬ್ಬನೂ ತಾನು ಅನುಭವಿಸಿದಷ್ಟು ಯಾತನೆ ಮತ್ಯಾರೂ ಅನುಭವಿಸಿರಲಿಕ್ಕಿಲ್ಲ ಅಂತಾನೇ ಭಾವಿಸಿಕೊಂಡಿರುತ್ತಾರೆ. ಅವರವರ ಕಷ್ಟ ಅವರಿಗೇ ದೊಡ್ಡದು ಅನ್ನೋ ಹಾಗೆ. ಆದರೆ ಜ್ವರ ಬಂದು ಮಲಗಿದ ವ್ಯಕ್ತಿಗೆ ಉಪಚಾರ ಮಾಡಲು ಮನೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದಾದರೆ ಅದು ಜ್ವರ ಪೀಡಿತ ವ್ಯಕ್ತಿಯ ಭಾಗ್ಯವೆಂದೇ ಪರಿಗಣಿಸಬೇಕು.

ಆ ದಿಸೆಯಲ್ಲಿ ಸೋಮಾರಿತನ ಮತ್ತಷ್ಟು ಆವರಿಸಿಕೊಂಡು, ಮತ್ತೊಂದಷ್ಟು ದಿನ ನರಳಿಕೊಂಡು ವಿಶ್ರಾಂತಿಯ ಸುಖವನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಾ ಒಳಗೊಳಗೆ ಪರಮ ಸುಖವನ್ನು ಅನುಭವಿಸಿಬಿಡುತ್ತಾರೆ. ಆದರೆ ದೌರ್ಭಾಗ್ಯದ ಸಂಗತಿಯೆಂದರೆ, ಮನೆಯಲ್ಲಿ ನೋಡಿಕೊಳ್ಳಲು ದುಡಿಯಲು ಇನ್ಯಾರು ಇಲ್ಲದ ಮನೆಯ ಆಸಾಮಿಗೆ ಜ್ವರ ಎಡತಾಕಿತು ಅಂದರೆ ಅವನ ಗ್ರಹಚಾರ ಕೆಟ್ಟು ಶನಿಕಾಟ ಶುರುವಾಯಿತು ಅಂತಾನೆ ಅರ್ಥ.

ಅರೆ ಬರೆ ವಿಶ್ರಾಂತಿಯಲ್ಲಿ ಉಪಾಯವಿಲ್ಲದೆ ಮತ್ತೆ ಪುನ: ಕೆಲಸ ಶುರುಮಾಡಿ ಅರೋಗ್ಯವನ್ನು ಮತ್ತಷ್ಟು ಹದಗೆಡಿಸಿಕೊಳ್ಳುತ್ತಾರೆ. ವೈದ್ಯರು ಮದ್ದಿನ ಚೀಟಿಯ ಜೊತೆಗೆ ರೆಸ್ಟು ಕಡ್ಡಾಯ ತೆಗೆದುಕೊಳ್ಳಬೇಕೆಂದು ಕಟ್ಟು ನಿಟ್ಟಾಗಿ ಹೇಳಿದ ಮಾತನ್ನು ಆಸ್ಪತ್ರೆಯಲ್ಲಿ ಮಾತ್ರ ಕಿವಿ ತುಂಬಿಸಿಕೊಂಡು ಮನೆ ಮೆಟ್ಟಿಲು ಹತ್ತೋಕೆ ಮುಂಚೆ ಕಿವಿಯಿಂದ ಹೊರತಳ್ಳಿ ಮರೆತೇ ಬಿಟ್ಟಿರುತ್ತಾರೆ. ಮರೆಯದೆ ವಿಧಿ ಇಲ್ಲ ಕೂಡ.

ಬಾಲ್ಯದಲ್ಲಿ ಅಂದರೆ ನಮ್ಮ ಪ್ರಾಥಾಮಿಕ ಶಾಲಾದಿನಗಳಲ್ಲಿ, ಶಾಲೆಗಳಿಗೆ ಮಳೆಗಾಲದ ಸಮಯದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಬಿಳಿ ಸೀರೆ ಉಟ್ಟುಕೊಂಡ ನರ್ಸಮ್ಮಗಳು ಬರುತ್ತಿದ್ದರು. ಅದು 1,3,5,7 ನೇ ತರಗತಿಯ ಮಕ್ಕಳಿಗೆ ಮಾತ್ರ ಈ ಲಸಿಕಾ ಕಾರ್ಯಕ್ರಮ. ಆಗೆಲ್ಲಾ ಈ ಲಸಿಕೆ ಕೊಡುವ ಉದ್ದೇಶವಾದರೂ ಏನು ಅಂತ ನಮಗ್ಯಾರಿಗೂ ಗೊತ್ತಿರಲಿಲ್ಲ. ಅದರ ಬಗ್ಗೆ ನಮಗ್ಯಾರು ಮಾಹಿತಿಯನ್ನು ಕೊಡುತ್ತಿರಲಿಲ್ಲ. ಗುರುಗಳೆಂದರೆ ಭಯಂಕರ ಭಯ ಹೊಂದಿದ್ದ ಆ ದಿನಗಳಲ್ಲಿ ಈ ವಿಷಯದ ಬಗ್ಗೆ ಕೇಳುವ ಧೈರ್ಯವನ್ನು ನಾವ್ಯಾರೂ ಮಾಡುತ್ತಿರಲಿಲ್ಲ.

ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ ನರ್ಸಮ್ಮಗಳ ಕೈಯಿಂದ ಸೂಜಿಯಿಂದ ಚುಚ್ಚಿಸಿಕೊಳ್ಳುವುದೇ ಹೆಚ್ಚಿನ ಭಯದ ಸಂಗತಿಯಾಗಿತ್ತು. ಈ ಭಾರಿ ಸೂಜಿ ನೋವಿನ ಪ್ರಸಂಗದಿಂದ ಪಾರಾಗುವ ಸಂಧರ್ಭ ಬಂದದ್ದಕ್ಕಾಗಿ 2,4,6ನೇ ತರಗತಿಯ ಮಕ್ಕಳಿಗಂತೂ ಖುಷಿಯೋ ಖುಷಿ. ಹಾಗಾಗಿ ಅಚಾನಕ್ ಆಗಿ ಬಿಳಿ ಸೀರೆ ಉಟ್ಟ ನರ್ಸಮ್ಮಗಳನ್ನು ನಮ್ಮ ಶಾಲೆಯ ಆವರಣದಲ್ಲಿ ಕಂಡೇವು ಅಂದರೆ ಮುಗಿಯಿತು. ಆಗಲೇ ನಮ್ಮ ಕಣ್ಣಲ್ಲಿ ಹೇಳ ತೀರದ ದಿಗಿಲು.

mosquito1ಅವರುಗಳು ಬರುವ ವಿಷಯ ಬಹುಷ: ಟೀಚರ್ ಗಳಿಗೆ ಮೊದಲೇ ಗೊತ್ತಿರುತ್ತಿತ್ತೋ ಏನೋ. ಅಧ್ಯಾಪಕರೇ ಈ ವಿಷಯವನ್ನು ಮಕ್ಕಳಿಂದ ಗೋಪ್ಯವಾಗಿಡುತ್ತಿದ್ದರು ಅನ್ನಿಸುತ್ತೆ. ನಾಳೆ ಶಾಲೆಯಲ್ಲಿ ಮಕ್ಕಳಿಗೆ ಇಂಜೆಕ್ಷನ್ ಕೊಡೋದಿದೆ, ನೀವೆಲ್ಲರೂ ತಪ್ಪದೇ ಬರಬೇಕು ಅಂತ ಮುನ್ನಾ ದಿನ ಅಸೆಂಬ್ಲಿ ಹಾಲ್ನಲ್ಲಿ ಮುಖ್ಯೋಪಧ್ಯಾಯರು ದೊಡ್ಡ ಸ್ವರದಲ್ಲಿ ಹೇಳಿ ಬಿಟ್ಟರೆ ಏನಾದೀತು? ಅಲ್ಲಿಗೆ ಕತೆ ಗೋವಿಂದ. ಮಾರನೇ ದಿನ ಚುಚ್ಚುಮದ್ದು ಚುಚ್ಚಿಸಿಕೊಳ್ಳುವ ತರಗತಿಯ ಅರ್ಧಕರ್ಧ ಮಕ್ಕಳಿಗೆ ಜ್ವರ ಬಂದು ಗೈರು ಹಾಜರಿ. ಆದರೆ ಅನಿವಾರ್ಯ ಕಾರಣಗಳಿಂದ ಆ ದಿನ ಗೈರು ಹಾಜರಾದವರು ಮಾತ್ರ ನಮ್ಮ ಕಣ್ಣಲ್ಲಿ ಮಹಾನ್ ಪುಣ್ಯವಂತರು ಅಂತನ್ನಿಸಿಕೊಳ್ಳುತ್ತಿದ್ದರು.

ಇನ್ನು ಲಸಿಕೆ ಹಾಕುವ ಕಾರ್ಯಕ್ರಮ ಶುರುವಾದಾಗ ಒಂದೊಂದೇ ತರಗತಿಯ ಹುಡುಗರನ್ನು ಬೇರೆ ಸಾಲು, ಹುಡುಗಿಯರನ್ನು ಬೇರೆ ಸಾಲು ಮಾಡಿ ನಿಲ್ಲಿಸಿ ಸರದಿಯಂತೆ ಒಬ್ಬೊಬ್ಬರನ್ನೇ ಸೂಜಿ ಹಿಡಿದು ನಿಂತ ನರ್ಸಮ್ಮ ಇರುವ ತರಗತಿಯ ಕೋಣೆಯೊಳಗೆ ಬಿಡುತ್ತಿದ್ದರು. ಕೆಲ ಮಕ್ಕಳ ಚಡ್ಡಿ ಅದಾಗಲೇ ಒದ್ದೆಯಾಗಿ ಬಿಟ್ಟಿರುತ್ತಿತ್ತು. ಇನ್ನು ಕೆಲ ಮಕ್ಕಳ ಮುಸಿ ಮುಸಿ ಅಳು ಮಂದವಾಗಿ ಏರುತ್ತಾ ತಾರಕಕ್ಕೇರಿ ಬಿಡುತ್ತಿತ್ತು. ಆದರೆ ಇದ್ಯಾವ ಸಬೂಬುಗಳು ಇಂಜೆಕ್ಷನ್ನಿಂದ ನಾವು ತಪ್ಪಿಸಿಕೊಳ್ಳಲು ಸಹಾಯವಾಗುತ್ತಿರಲಿಲ್ಲ. ಇನ್ನು ಚುಚ್ಚಿಸಿಕೊಂಡ ಮಕ್ಕಳು ಕಣ್ಣಲ್ಲಿ ದಳ ದಳ ಅಂತ ನೀರಿಳಿಸಿಕೊಂಡು ಬರುವ ಅವರೊಂದಿಗೆ ಮೆಲ್ಲನೆ ನೋವಾಗ್ತದಾ.. ಅಂತ ಕೇಳಿದರೆ ಅಳುವೇ ಅವರ ಉತ್ತರವಾದಾಗ ಮಾತ್ರ ನಮ್ಮಲ್ಲಿ ಆಗಲೇ ನಡುಕ ಹುಟ್ಟಿ, ಚುಚ್ಚಿಸಿಕೊಳ್ಳುವುದಕ್ಕಿಂತ ಮೊದಲೇ ನೋವು ಉಲ್ಬಣಾವಸ್ಥೆಗೆ ತಲುಪುತ್ತಿತ್ತು.

ಇನ್ನು ನಮ್ಮ ನಮ್ಮ ಸರದಿ ಬಂದಾಗ ನರ್ಸಮ್ಮ ಒಂದು ಕೈಯಲ್ಲಿ ಸೂಜಿ ಹಿಡಿದುಕೊಂಡು ಮತ್ತೊಂದು ಕೈಯಿಂದ ಹತ್ತಿ ಚೂರಿನಿಂದ ಚರ್ಮಕ್ಕೆ ಮೃದುವಾಗಿ ಉಜ್ಜುತ್ತಾ ಕರುಣೆಯೇ ಮೂರ್ತಿವೆತ್ತ ದೇವತೆಯಂತೆ ಆದಷ್ಟೂ ಮೆಲು ಸ್ವರದಲ್ಲಿ ನಿನ್ನ ಹೆಸರೇನು? ನಿನ್ನ ಅಮ್ಮ ಯಾರು? ನಿನ್ನ ಅಪ್ಪನ ಹೆಸರೇನು ಅಂತ ಕೇಳುವಷ್ಟರಲ್ಲಿ ಸೂಜಿ ಒಳ ಹೊಕ್ಕು ಬಂದಾಗಿರುತ್ತಿತ್ತು. ಮತ್ತೆ ನರ್ಸಮ್ಮನ್ನಿಗೆ ಕೇಳಲು ಯಾವ ಪ್ರಶ್ನೆಗಳೇ ಇರುತ್ತಿರಲಿಲ್ಲ. ಇನಿತು ನೋವೇ ಆಗದಂತೆ ಚುಚ್ಚಿದರೂ ಸೂಜಿ ಚುಚ್ಚಿಸಿಕೊಳ್ಳುವ ಕಲ್ಪನೆಯೇ ನಮ್ಮಲ್ಲಿ ಭೀತಿ ಹುಟ್ಟಿಸಿ ಅಳು ಉಕ್ಕುತ್ತಿತ್ತು. ಮತ್ತೆ ಆ ಅಳು ಸಾಂಕ್ರಾಮಿಕದಂತೆ ಹಬ್ಬುತ್ತಿತ್ತು ಕೂಡ.

ಆ ದಿನ ಜ್ವರ ಬಂದರೆ ಮಾತ್ರ ತಿನ್ನಿ ಅಂತ ಒಂದು ಮಾತ್ರೆಯನ್ನು ಕೊಡುತ್ತಿದ್ದರು. ಸಾಮಾನ್ಯವಾಗಿ ಆ ದಿನ ಹೆಚ್ಚಿನವರಿಗೆ ಕಳ್ಳ ಜ್ವರವೊಂದು ಬಂದು ರಜೆಗೊಂದು ನೆವ ಸಿಗುತ್ತಿತ್ತು. ಆದರೆ ಒಮ್ಮೆಯಂತೂ ನರ್ಸಮ್ಮ ಕಕ್ಕುಲಾತಿಯಿಂದ ವಿಚಾರಿಸಿಕೊಂಡು ಚುಚ್ಚಿದ ಸೂಜಿ ಇಬ್ಬರು ಮಕ್ಕಳಿಗೆ ಅಸಾಧ್ಯ ನೋವು ತರಿಸಿ ಅವರಿಗೆ ಕೂರಲು ನಿಲ್ಲಲು ಆಗದಂತೆ ಕಾಡಿದಾಗ ಗಾಬರಿ ಬಿದ್ದು ಅವರನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದರೆ ಸಣ್ಣ ಸೂಜಿ ಮೊನೆಯ ತುಂಡು ಮಾಂಸದೊಳಗೆ ಉಳಿದು ಬಿಟ್ಟಿತ್ತಂತೆ. ಮಕ್ಕಳ ಹೇಳಿಕೆಯಲ್ಲಿಎಷ್ಟು ಸತ್ಯವಿತ್ತೋ? ಎಷ್ಟು ಸುಳ್ಳಿತ್ತೋ ಗೊತ್ತಿಲ್ಲ. ಆದರೆ ಈ ವಿಷಯವನ್ನು ಯಾರಲ್ಲೂ ಹೇಳಕೂಡದು ಅಂತ ತಾಕೀತು ಮಾಡಿ ಅವರನ್ನು ಹೋಟೇಲಿಗೆ ಕರೆದುಕೊಂಡು ಹೋಗಿ ಬನ್ನು ಹಾಲು ಕೊಟ್ಟು, ಚಾಕಲೇಟು ಕೈಗಿತ್ತು ಕಳಿಸಿದರೆಂಬ ಸಂಗತಿಯನ್ನು ನಮ್ಮಲ್ಲಿ ಗುಟ್ಟಿನಲ್ಲೆಂಬಂತೆ ಹೇಳಿ ನಮ್ಮ ಹೊಟ್ಟೆ ಉರಿಸಿಬಿಟ್ಟಿದ್ದರು.

ಮೊದಲೆಲ್ಲಾ ವಿಷಮ ಶೀತ ಜ್ವರವೊಂದೇ ಭಯಾನಕ ಜ್ವರವಾಗಿತ್ತು. ಇತ್ತೀಚೆಗೆ ವೈದ್ಯ ವಿಜ್ಞಾನದ ಪ್ರಗತಿಯ ಫಲವಾಗಿ ನಾವುಗಳು ಹೆಚ್ಚು ಭಾಗ್ಯಶಾಲಿಗಳು ಅಂತನ್ನಿಸುತ್ತದೆ. ಈಗೆಲ್ಲಾ ಜೀವನ ಶೈಲಿ ಉತ್ತಮವಾಗಿದ್ದರೆ ಈ ಹಾಳು ಮೂಳು ಶೀತ ಜ್ವರಗಳೆಲ್ಲಾ ಒಂದು ದೊಡ್ಡ ಸಂಗತಿಯೇ ಅಲ್ಲ ಅನ್ನುವಷ್ಟರಮಟ್ಟಿಗೆ. ಇಷ್ಟೆಲ್ಲಾ ಬದುಕು ನಮಗೆ ಅವಕಾಶಗಳನ್ನು ಕೊಟ್ಟು ಆಯುಷ್ಯ ಹೆಚ್ಚಿಸುತ್ತಿರುವಾಗ ನಾವುಗಳು ಇರುವುದಕ್ಕೆ, ಇಲ್ಲದಕ್ಕೆ ವೃಥಾ ಕೊರಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಮಾತ್ರ ಯಾತಕ್ಕಾಗಿ ಅಂತ ಗೊತ್ತಾಗುತ್ತಿಲ್ಲ.

ಬದುಕಿನ ಪರಿಯೇ ಹಾಗೇ ಅಲ್ಲವೇ?. ವಿಚಿತ್ರವೆನ್ನಿಸಿದರೂ ಇದು ಸತ್ಯವೇ. ಹಾಗಿರುವಾಗ ಬದುಕಿನ ಜೊತೆಗೆ ಇಂತಹ ಕೊರಗುವಿಕೆಯೂ ಒಂದು ಜ್ವರದ ತಾಪದಂತೆ ಅಂಟಿಕೊಂಡು ಬರುತ್ತದೆಯೋ ಏನೋ?. ಹಾಗೆಯೇ ಕೆಲವರು ಹೀಗೆ ಸುಮ್ಮಗೆ ಕೊರಗಿ ಕೊರಗಿ ಜ್ವರ ಹಿಡಿಸಿಕೊಳ್ಳುವುದೂ ಉಂಟು. ಇನ್ನು ಈಗ ಖಾಯಿಲೆಗಳನ್ನು ಗುಣಪಡಿಸಲು ಬೇಕಾದಷ್ಟು ಪಳಗಿದ ವೈದ್ಯರ ದಂಡೇ ಇದ್ದರೂ ಸಾಕಷ್ಟು ಔಷಧಿಗಳು ಲಭ್ಯವಿದ್ದರೂ ಹೆಚ್ಚುತ್ತಿರುವ ನಾನಾ ಜ್ವರಗಳನ್ನು ಅವಗಣನೆ ಮಾಡುವಂತಿಲ್ಲ.

ಇನ್ನು ಜ್ವರ ಬರುವುದಕ್ಕೆ ಇಂತಹುದೇ ಅಂತ ನಿರ್ಧಿಷ್ಟ ಕಾರಣ ಕೂಡ ಬೇಕಿಲ್ಲ. ಕೆಲವರಿಗೆ ಪ್ರೇಮ ಜ್ವರ, ಪರೀಕ್ಷೆ ಜ್ವರ, ಟೀಚರ್ ಹೆದರಿಕೆಗೆ ಜ್ವರ, ಅಪ್ಪನ ಹೆದರಿಕೆಯ ಜ್ವರ.. ಹೀಗೆ ಇಂತಹ ಕೆಲ ಕಳ್ಳ ಜ್ವರಗಳೆಲ್ಲವೂ ಆಯಾ ಕಾಲಕ್ಕೆ ತಕ್ಕಂತೆ, ವಯೋಮಾನಕ್ಕೆ ತಕ್ಕಂತೆ ಬೆಂಬಿಡದೆ ಕಾಡುವುದುಂಟು. ಇವೆಲ್ಲಾ ಸಹಜ ಜ್ವರಗಳಾದರೂ, ಕೆಲವೊಮ್ಮೆ ಇಂತಹ ಖಾಸಗಿ ಜ್ವರಗಳೆಲ್ಲಾ ಹದ್ದು ಮೀರಿ ವಿಕೋಪಕ್ಕೆ ಹೋಗಿ ಅಪಾಯಕ್ಕೆ ಎಡೆ ಮಾಡುವ ಸಂಭವವನ್ನೂ ಅಲ್ಲಗಳೆಯುವಂತಿಲ್ಲ.

mosquito6ಒಮ್ಮೆ ಹಾಸ್ಟೇಲಿನಲ್ಲಿರುವಾಗ ಎಲ್ಲಾ ಕಡೆಗಳಲ್ಲೂ ಮಲೇರಿಯಾ ಜ್ವರದ್ದೇ ಕಾರುಬಾರು. ಮಲೇರಿಯಾದಿಂದಾಗಿ ಇವತ್ತು ಇಷ್ಟು ಜನ ಅಸು ನೀಗಿದರು, ಇಷ್ಟು ಜನ ಆಸ್ಪತ್ರೆಗೆ ದಾಖಲಾದರು ಎಂಬಿತ್ಯಾದಿ ವರದಿಗಳು ಮಾಧ್ಯಮಗಳ ಮೂಲಕ ಬಿತ್ತರಗೊಂಡು ನಮ್ಮನ್ನು ತಲ್ಲಣಗೊಳಿಸುತ್ತಿದ್ದವು. ಆದರೂ ಇಂತಹ ಜ್ವರಗಳೆಲ್ಲವೂ ನಮಗೆ ತಟ್ಟಲಾರವು ಅಂತ ಹುಂಬ ಧೈರ್ಯದಲ್ಲಿರುವಾಗಲೇ ಹಾಸ್ಟೇಲಿನ ನನ್ನ ಗೆಳತಿಯೊಬ್ಬಳಿಗೆ ತೀವ್ರ ಜ್ವರ ಬಂದು ಅದು ಮಲೇರಿಯಾ ಅಂತ ಸಾಬೀತಾದಾಗ ಮಾತ್ರ ನಾವುಗಳೆಲ್ಲಾ ತತ್ತರಿಸಿಬಿಟ್ಟಿದ್ದೆವು.

ಯಾವುದೋ ಊರಿನಲ್ಲಿದ್ದ ಅಪ್ಪ, ಅಮ್ಮ, ತಮ್ಮ, ತಂಗಿಯರ ನೆನಪಾಗಿ ಅನಾಥ ಭಾವ ಆವರಿಸುತ್ತಿತ್ತು. ಈಗ ಜ್ವರ ಬಂದಾಕ್ಷಣ ಉಪೇಕ್ಷೆ ಮಾಡುವಂತಿಲ್ಲ, ಎಲ್ಲರೂ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದೇ ವಾಸಿ ಅಂತ ಎಲ್ಲರೂ ತೀರ್ಮಾನಿಸಿದ್ದರು. ಆದರೆ ರಕ್ತ ಪರೀಕ್ಷೆಗೆ ಮತ್ತೆ ಸೂಜಿಯಿಂದ ಚುಚ್ಚಿಸಿಕೊಳ್ಳಬೇಕು!. ನಾವು ಏನೆಲ್ಲಾ ಧಿಡೀರ್ ನೋವುಗಳನ್ನು ಅನುಭವಿಸುತ್ತೇವೆ. ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತೇವೆ, ಪೆಟ್ಟು ಕೊಟ್ಟರೆ, ಚಿವುಟಿದರೆ, ಗಾಯ ಮಾಡಿಕೊಂಡರೆ… ಹೀಗೆ ನಾನಾ ರೀತಿಯಲ್ಲಿ ನೋವುಗಳನ್ನು ಅನುಭವಿಸುತ್ತೇವೆ. ಆದರೆ ಸೂಜಿಯಿಂದ ಚುಚ್ಚಿಸಿಕೊಳ್ಳುವ ನೋವೆಂದರೆ ಹೌಹಾರಿ ಗಾಬರಿ ಬೀಳುತ್ತೇವೆ. ಆದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವುಗಳೆಲ್ಲರೂ ಸರಕಾರಿ ಆಸ್ಪತ್ರೆಗೆ ದೌಡಾಯಿಸಿ ರೋಗನಿರೋಧಕ ಮಲೇರಿಯ ಮಾತ್ರೆ ಕೊಡಬೇಕೆಂದು ವೈದ್ಯರಲ್ಲಿ ಒಂದೇ ಸಮನೆ ದುಂಬಾಲು ಬಿದ್ದಿದ್ದೆವು.

ನಮ್ಮಲ್ಲಿ ಇಂತಹದೊಂದು ಔಷಧಿ ಸಧ್ಯಕ್ಕೆ ಬಂದಿಲ್ಲವೆಂದು ನಮಗೊಬ್ಬೊಬ್ಬರಿಗೂ ಪ್ರತ್ಯೇಕವಾಗಿ ತಿಳಿ ಹೇಳಿ ನಮ್ಮ ಸರತಿ ಸಾಲಿನ ದಂಡನ್ನು ಸಾಗಹಾಕಬೇಕಾದರೆ ವೈದ್ಯರಿಗೂ ಹೆಚ್ಚು ಕಮ್ಮಿ ಒಳಜ್ವರ ಕಾದಿರಬಹುದು. ಹಾಗಾಗಿ ಸೊಳ್ಳೆಯ ನಿಯಂತ್ರಣ ಒಂದೇ ಇದಕ್ಕೆ ಏಕೈಕ ಮದ್ದು ಅಂತ ಗೊತ್ತಾದಾಗ, ಮತ್ತೆ ಸೊಳ್ಳೆ ಕಂಡಾಗಲೆಲ್ಲಾ ಚಪ್ಪಾಳೆ ತಟ್ಟುವುದು ನಿತ್ಯದ ಕಾಯಕವಾಯಿತು. ಸಭೆ ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳಿಗೂ ಇಷ್ಟು ಭರ್ಜರಿಯಾಗಿ ಚಪ್ಪಾಳೆ ಬಿದ್ದಿರಲಿಕ್ಕಿಲ್ಲ. ಇನ್ನು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯನ್ನು ಮಾತ್ರ ಪ್ರತ್ಯೇಕವಾಗಿ ಗುರುತಿಸುವುದೆಂತು? ಹಾಗಾಗಿ ಇದ್ದಬದ್ದ ಗಂಡು, ಹೆಣ್ಣು, ಅಜ್ಜ , ಅಜ್ಜಿ, ಮರಿ ಸೊಳ್ಳೆಗಳೆಲ್ಲಾ ನಮ್ಮ ಚಪ್ಪಾಳೆ ಕೈಯೊಳಗೆ ಅಪ್ಪಚ್ಚಿಯಾಗಿ ಬಿಡುತ್ತಿದ್ದವು.

ಕಾಲ ಎಷ್ಟೇ ಮುಂದುವರಿದರೂ ಯಕಶ್ಚಿತ್ ಒಂದು ಪುಟ್ಟ ಸೊಳ್ಳೆ ಕಚ್ಚಿ ನಮಗೆ ಜ್ವರ ಬಂದು ನಮ್ಮನ್ನು ಉದ್ದಾನೆ ಮಲಗಿಸಿ, ನಮ್ಮ ಜೀವಕ್ಕೇ ಸಂಚಕಾರ ತಂದೊಡ್ಡುವುದೆಂದರೆ ಇದು ಸಾಮಾನ್ಯ ಸಂಗತಿಯಾ..?.ಅತ್ತ ಕಡೆಯಿಂದ ಅದರ ಸಂಹಾರ ಮಾಡಿದಷ್ಟೂ ಇತ್ತ ಕಡೆಯಿಂದ ಅದರ ಸಂತತಿ ವೃದ್ಧಿಯಾಗುತ್ತಲೇ ಹೋಗುತ್ತದೆ. ಸಣ್ಣ ಕೀಟವೊಂದು ದೈತ್ಯ ಮನುಷ್ಯನ ರಕ್ತ ಹೀರಿ ಬದುಕುವುದೆಂದರೆ.. ಇದು ವಿಜ್ಞಾನಕ್ಕೊಂದು ಸವಾಲೇ ಅಲ್ಲವೇ? ಅಥವಾ ಮನುಷ್ಯ ಜಾತಿಗೊದಗಿದ ಅಪಮಾನವೇ..?.ಅದೇನೇ ಇರಲಿ ಸಾಲು ಸಾಲು ಹೆಸರೇ ಗೊತ್ತಿಲ್ಲದ ಚಿಕನ್ ಗುನ್ಯಾ, ಡೆಂಗ್ಯು, ಇಲಿಜ್ವರ, ಹಂದಿ ಜ್ವರಗಳೆಲ್ಲಾ ಬಂದು ವಕ್ಕರಿಸಿದ ಮೇಲೆ ಮಲೇರಿಯಾದ ಅಂಕ ಮುಗಿದು ನೇಪಥ್ಯಕ್ಕೆ ಸರಿದಿದೆ.

ಅಲ್ಲ, ಈ ಕೀಟ, ಪ್ರಾಣಿ, ಪಕ್ಷಿಗಳೆಲ್ಲಾ ಸೇರಿ ಮನುಷ್ಯನ ಬದುಕಿನ ಮೇಲೆ ಸವಾರಿ ಮಾಡುವುದೆಂದರೆ.. ಎಂಥಹ ವಿಪರ್ಯಾಸ? ಇದೇ ಅಲ್ಲವೆ ಬದುಕಿನ ವಿಚಿತ್ರ. ಆನೆ ಎಷ್ಟೇ ದೊಡ್ಡ ಗಾತ್ರದ ಬಲಶಾಲಿ ಪ್ರಾಣಿಯಾದರೂ ಪುಟಾಣಿ ಇರುವೆಯೊಂದು ಅದರ ಕಿವಿಯೊಳ ಹೊಕ್ಕಿ ಕಚ್ಚಿತೆಂದರೆ ಅಷ್ಟೇ. ಅದರ ಶಕ್ತಿ ಇರುವೆಯ ಯುಕ್ತಿಯ ಮುಂದೆ ಏನೇನು ಮಾಡಲಾರದು. ಆದಕಾರಣ ಈ ಪ್ರಪಂಚದಲ್ಲಿ ಸಮಯ ಸಂಧರ್ಭ ಬಂದಾಗ ಎಲ್ಲರೂ ಒಂದೊಂದು ರೀತಿಯಲ್ಲಿ ಬುದ್ದಿವಂತರು ಮತ್ತು ಬಲಶಾಲಿಗಳೇ ಅನ್ನುವುದು ಮಾತ್ರ ಒಪ್ಪತಕ್ಕ ವಿಷಯವೇ ಸರಿ. ಚಿಕನ್ ಗುನ್ಯ ಬಂದ ಸಮಯ, ಆ ಜ್ವರ ಎಲ್ಲರನ್ನು ಎಷ್ಟು ಅಲ್ಲಾಡಿಸಿಬಿಟ್ಟಿತೆಂದರೆ, ನಡೆಯೋಕೆ ಆಗದಷ್ಟು, ನೆಟ್ಟಗೆ ನಿಲ್ಲೋಕು ಆಗದಷ್ಟು.

ಬಹುಷ; ಚಿಕನ್ ಗುನ್ಯ ದೇಹವನ್ನು ಘಾಸಿಗೊಳಿಸಿದಷ್ಟು ಮತ್ಯಾವ ಜ್ವರವೂ ಬೇನೆ ಉಂಟು ಮಾಡಿರಲಿಕ್ಕಿಲ್ಲವೇನೋ. ಇವತ್ತಿಗೂ ಮಾಸದಂತೆ ಅದರ ಕುರುಹನ್ನು ಉಳಿಸಿಬಿಟ್ಟಿದೆ. ಆದರೆ ವೈದ್ಯರುಗಳಿಗೆ ಮಾತ್ರ ಶುಕ್ರ ದೆಸೆ. ಸರತಿ ಸಾಲಿನಂತೆ ರೋಗಿಗಳು. ಅವರೆಲ್ಲರ ಅದೃಷ್ಟ ಖುಲಾಯಿಸಿ ಏಕ್ ದಂ ಎಲ್ಲರ ಡ್ರಾಯರ್ ಗಳೂ ದಿನದೊಳಗೇ ಭರ್ತಿಯಾಗಿ ಬಿಡುತ್ತಿದ್ದವು. ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತೆ ಅಂತ ನಮ್ಮ ಹಿರಿಯರು ಸುಮ್ಮಗೆ ಹೇಳಲಿಲ್ಲ ನೋಡಿ. ಆದರೂ ಈಗ ಏನಿದ್ದರೂ ರಕ್ತ ಹೀರುವ ಸೊಳ್ಳೆಗಳದೇ ಅಧಿಪತ್ಯ. ಯಾವುದೋ ಊರಿನಲ್ಲಿ ಅಲೆಮಾರಿಯಂತೆ ಅಲೆದಾಡುತ್ತಿದ್ದ ಡೆಂಗ್ಯು ಈಗ ನಮ್ಮೂರನ್ನು ಆಕ್ರಮಿಸಿ ಬಿಟ್ಟಿದೆ.

ಯಾವುದೋ ಇಡೀಪಸ್ ಎಂಬ ಸೊಳ್ಳೆ ಅಂತೆ. ಅಲ್ಲ! ಈ ಸೊಳ್ಳೆಗಳೆಲ್ಲಾ ಭಾಷೆ ಬಾರದಿದ್ದರೂ ಇಂಗ್ಲಿಷ್, ಇಟಾಲಿಕ್ ಹೆಸರಿಟ್ಟುಕೊಂಡು ರಾಜಾರೋಷವಾಗಿ ನಮ್ಮ ಮುಂದೆ ಗುಂಯಿ ಅಂತ ಗಸ್ತು ತಿರುಗಿಕೊಂಡು ನಮ್ಮನ್ನು ಆಳುತ್ತಿದೆ ಅಂದರೆ..? ಬದುಕು ಎಲ್ಲಿಯವರೆಗೆ ನಮ್ಮನ್ನು ತಂದು ನಿಲ್ಲಿಸಿದೆ ಅಂದರೆ ಪ್ರತಿಕ್ಷಣ ಭೀತಿಯ ನೆರಳಲ್ಲಿ ಬದುಕುವಂತೆ. ಡೆಂಗ್ಯು ಅಂತ ಹೆಸರು ಕೇಳಿದರೆ ಸಾಕು ದೇಹ ಡಗ ಡಗ ಅಂತ ನಡುಗಲು ಶುರುವಾಗುತ್ತೆ.

mosquito5ಮೊನ್ನೆ ಮೊನ್ನೆ ಒಂದು ಸಾಹಿತ್ಯ ಗೋಷ್ಟಿಗೆ ಭಾಷಣ ಮಾಡೋದಿಕ್ಕೆ ಹೋಗೋದಿತ್ತು. ಭಾಷಣ ಎಲ್ಲಾ ಅದಾಗಲೇ ರೆಡಿ ಮಾಡಿಟ್ಟುಕೊಂಡಿದ್ದೆನಷ್ಟೆ.ಅಷ್ಟರಲ್ಲಿ ಗಂಟಲು ಕಿರಿಕಿರಿ ಎಬ್ಬಿಸಿ ಕಿರಿಕ್ ಕೊಡತೊಡಗಿತ್ತು. ಶುಂಠಿ,ಬೆಳ್ಳುಳ್ಳಿ ,ಕರಿ ಮೆಣಸು ಹಾಕಿ ಬಿಸಿ ಬಿಸಿ ಹಾಲು ಕಷಾಯ ಮಾಡಿ ಗಂಟಲಿಗೆ ಇಳಿಸಿದರೂ ಪ್ರಯೋಜನವೇ ಇಲ್ಲ. ನಾನು ಸರಾಗವಾಗಿ ಮಾತನಾಡಲು ಬಿಡೆ ಎಂಬಂತೆ ಗಂಟಲಾಳದಿಂದ ಗುರಾಯಿಸುವ ಕೆಮ್ಮು. ಗಂಟಲು ಸರಿಯಿಲ್ಲವಲ್ಲಾ ಎನ್ನುವ ದೊಡ್ಡ ಕೊರತೆಯ ನಡುವೆಯೂ ಸಧ್ಯಕ್ಕೆ ಜ್ವರ ಬಂದಿಲ್ಲವಲ್ಲ ಅನ್ನೋ ಸಣ್ಣ ಸಮಾಧಾನ ಹೊತ್ತು ಗೋಷ್ಠಿಗೆ ತೆರಳಿದ್ದೆ.

ಗೋಷ್ಠಿಯ ನಡುವೆ ಪಕ್ಕ ವಾದ್ಯ ನುಡಿಸುತ್ತಿದ್ದ ನನ್ನ ಕೆಮ್ಮಿನ ಉಪಟಳ ತಾಳಲಾರದೇ ಪಕ್ಕ ಕುಳಿತ್ತಿದ್ದವರೊಬ್ಬರು, ನೀವು ಒಮ್ಮೆ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಈಗ ಎಲ್ಲಾ ಕಡೆಗಳಲ್ಲೂ ಡೆಂಗ್ಯು ಜ್ವರ. ನಿಮಗೆ ಬಂದಿರಲಿಕ್ಕಿಲ್ಲ, ಆದರೂ ಯಾವುದಕ್ಕೂ ಟೆಸ್ಟು ಮಾಡಿಸಿಕೊಳ್ಳೋದೆ ಉತ್ತಮ ಅಂತ ಮೆಲ್ಲಗೆ ಉಸುರಿದಾಗ ನನ್ನ ಜಂಘಾಬಲವೇ ಉಡುಗಿಹೋಗಿತ್ತು. ಈ ನಿಲ್ಲಲಾರದ ಕೆಮ್ಮನ್ನು ಹೊತ್ತುಕೊಂಡು, ರಕ್ತ ಪರೀಕ್ಷೆಯ ಸೂಜಿಯನ್ನು ನೆನೆದುಕೊಂಡು ನೇರ ವೈದ್ಯರಲ್ಲಿಗೆ ಹೋದರೆ, ತಾಳ್ಮೆಯಿಂದ ಪರೀಕ್ಷಿಸಿದ ವೈದ್ಯರು ಅಷ್ಟೇ ತಾಳ್ಮೆಯಿಂದ ನಿನಗೆ ಡೆಂಗ್ಯು ಬಂದಿದೆಯಮ್ಮ, ಭಯಪಡಬೇಕಾಗಿಲ್ಲ. ಟಾನಿಕ್, ಮಾತ್ರೆ ಕುಡಿಯಿರಿ ಅಂತ ಭರವಸೆ ತುಂಬಿ ಕಳುಹಿಸಿಕೊಟ್ಟರು.

ಡಾಕ್ಟ್ರ ಮಾತು ಕೇಳಿ ಸಮಾಧಾನದಿಂದಿರಬೇಕೋ? ಅಥವಾ ಡೆಂಗ್ಯುನಿಂದ ನರಳುತ್ತಿರುವವರನ್ನು ನೆನೆದು ಸಂಕಟ ಹೆಚ್ಚಿಸಿಕೊಳ್ಳಬೇಕೋ ಗೊತ್ತಾಗದೆ, ವೈದ್ಯರು ಬೆಳಗ್ಗೆಗೆ ಅರ್ಧ, ರಾತ್ರೆಗೆ ಅರ್ಧ ಅಂತ ಕೊಟ್ಟ ಅರ್ಧ ಮಾತ್ರೆ ನನ್ನನ್ನು ಬದುಕಿಸ ಬಲ್ಲದೇ ಎಂಬ ಜಿಜ್ಞಾಸೆಯಲ್ಲಿ ಅಪಾರ ಧೈರ್ಯ ತಂದುಕೊಂಡು ಮಾತ್ರೆ ನುಂಗಿ ನೀರು ಕುಡಿದು ಮಲಗಿಬಿಡುತ್ತೇನೆ.

ಹಾಗಾಗಿ ಈಗ ಸಣ್ಣಗೆ ಹಾಡುತ್ತಾ ಹಾರುತ್ತಾ ಬರುವ ಸೊಳ್ಳೆಯನ್ನು ಕಂಡಾಗಲೆಲ್ಲಾ ದಮ್ಮಯ್ಯ ಸೊಳ್ಳೆ.. ನನ್ನ ರಕ್ತ ಹೀರಬೇಡವೋ.. ಜ್ವರ ಬರಿಸಬೇಡವೋ.. ದಮ್ಮಯ್ಯ ಅಂತ ಒಂದು ಸೂಕ್ಷ್ಮಾತಿ ಸೂಕ್ಷ್ಮ ಸೊಳ್ಳೆಯನ್ನು ಇವತ್ತು ನಾವು ದೈನೇಸಿ ಸ್ಥಿತಿಯಲ್ಲಿ ಬೇಡಿಕೊಳ್ಳುವಂತಾಗಿದೆ.

‍ಲೇಖಕರು Admin

9 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading