ಸತ್ಯ -ಸಾಕ್ಷಿ – ಅತೀತ
ಸ್ವರ್ಣ ಎನ್ ಪಿ
ಧಾರವಾಹಿಗಳನ್ನು ನೋಡುವ ಪ್ರೇಕ್ಷಕರಲ್ಲಿ ವಿಧವಿಧವಾದ ಜನರಿರುತ್ತಾರೆ. ಟಿ.ವಿ.ಯ ಮುಂದೇ ಕೂತು ಪಾತ್ರವೇ ತಾನಾಗಿ ನೋಡುವವರು , ಅಡುಗೆ ಮನೆಯಿಂದ ಯಾವಾಗಲೋ ಹಣುಕು ಹಾಕಿ ಉಳಿದಂತೆ ಮಾತು ಮಾತ್ರ ಕೇಳಿಸಿಕೊಳ್ಳುವವರು , ವಾರಕ್ಕೊಮ್ಮೆ ನೋಡಿ ಎಲ್ಲಿಗೆ ಬಂದಿದೆ ಅಂತ ತಿಳಿಯುವವರು , ನೋಡುತ್ತಾ ಕೂತವರನ್ನು ಜೊತೆ ಕೂತು “ಇದನ್ನೇನು ನೋಡ್ತಿಯೋ , ಆರಕ್ಕೆರಲಿಲ್ಲ ಮೂರಕ್ಕಿಳಿಲ್ಲ ” ಅಂತ ಆಡಿಕೊಳ್ಳುತ್ತಲೇ ನೋಡುವವರು ….ಆದರೆ ಕೆಲವು ಧಾರಾವಾಹಿಗಳನ್ನು ಮನೆಯವರೆಲ್ಲರೂ ನೋಡುತ್ತಾರೆ. ಕೆಲವು ನಮ್ಮ ಸಂಪೂರ್ಣ ಏಕಾಗ್ರತೆಯನ್ನು ಬೇಡುತ್ತವೆ . ಎಸ್.ಏನ್.ಸೇತುರಾಮ್ ಅವರ ಧಾರಾವಾಹಿಗಳು ಈ ಎರಡೂ ಲಿಸ್ಟಿನಲ್ಲೂ ಖಂಡಿತವಾಗಿಯೂ ಸ್ಥಾನ ಪಡೆಯುತ್ತವೆ . ದೇಹ ಮತ್ತು ಮನಸು ಸೇರಿ ಬದುಕು ಎಂಬ ಅವರ ಅನಾವರಣದ ಸಾಲು ಎಷ್ಟೋ ದಿನ ಕಾಡಿತ್ತು . ‘ಗತಿ’ ನಾನು ನೋಡಿದ ಸೇತುರಾಮ್ ಅವರ ಮೊದಲ ನಾಟಕ . ಅತೀತ ಮೊನ್ನೆ ನೋಡಿದ್ದು . ಬದುಕಿನ ರೀತಿನೀತಿಗಳ ಬಗ್ಗೆ ಪ್ರಶ್ನೆಗಳು ಎರಡೂ ನಾಟಕಗಳಲ್ಲೂ ಇರುವ ಸಮಾನ ಅಂಶ. ಎಷ್ಟೋ ಬಾರಿ ಒಂದು ಪುಸ್ತಕ , ನಾಟಕ ಅಥವಾ ಇನ್ನಾವುದೇ ಕಲಾ ಮಾಧ್ಯಮ ನಮ್ಮಲ್ಲಿ ಹುಟ್ಟುಹಾಕುವ ಪ್ರಶ್ನೆಗಳು, ತೋರಿಸುವ ನಮ್ಮದೇ ಆದ ಅಪರಿಚಿತ ಮುಖಗಳಿಂದಾಗಿ ನಮಗೆ ಮುಖ್ಯವಾಗುತ್ತವೆ. ಹಾಗೆ ಮುಖ್ಯವಾಗಬಹುದಾದ ನಾಟಕಗಳು ‘ಗತಿ’ ಮತ್ತು ‘ಅತೀತ ‘.
ಹುಟ್ಟಿನಿಂದಲೂ ನಮ್ಮೊಂದಿಗೆ ಬೆಳೆವ , ನಡೆವ ಸಾಕ್ಷಿ ಪ್ರಜ್ಞೆ (ಸಾಕ್ಷಿ ) ನಮಗೆ ಗೋಚರಿಸುವ ಹೊತ್ತಿಗೆ ನಾವು ಬಾಲ್ಯದ ಉದ್ಯಾನವನದ ಹೊರಗಿರುತ್ತೇವೆ. ಎಲ್ಲೋ ಹೋಗಿ ಬಂದು ಮನೆಯಲ್ಲಿ ಅಮ್ಮ ಅಪ್ಪನಿಗೆ ಹೇಳಿದ ಸುಳ್ಳು ಹೇಳಿದಾಗ, ಸಣ್ಣ ಮೊತ್ತದ ಕಳುವು ನಡೆದಾಗ “ಇದು ತಪ್ಪಲ್ಲವೇ ?” ಎಂದು ಕಾಡುವ ಪ್ರಶ್ನೆಗಳನ್ನು ಹೊತ್ತು ಸಾಕ್ಷಿ ನಮಗೆ ಇದಿರಾಗುತ್ತದೆ. “ನಿನಗೇನು? “ನಿನಗ್ಯಾಕೆ ?” ಎಂಬ ಉತ್ತರ ಕಷ್ಟ . ಬದುಕಿದ್ದೇನೆ ಎನ್ನಲು ಒಂದು ಪ್ರಬಲ ಸಾಕ್ಷಿ ಬೇಕಲ್ಲ ?! ಅದಕ್ಕೆ ನಾವು ಅದನ್ನು ತೊರೆಯಲಾರೆವು ಮತ್ತು ಅದು ತಪ್ಪೆನ್ನುವ ಕ್ರಿಯೆಯನ್ನು ಮಾಡದಿರಲಾರೆವು. ಬಹುತೇಕರು ಆಯ್ದು ಕೊಳ್ಳುವ ಉತ್ತರ ಇದೇ ಸರಿ ಎಂಬ ಸಮಜಾಯಿಶಿ . ಆ ಸಮಜಾಯಿಶಿಗಳೊಟ್ಟಿಗೆ ಸವೆಯುವ ಬದುಕು. ಈ ಪ್ರಶ್ನೆಗಳು ನಮ್ಮೆಲ್ಲರನ್ನೂ ಕಾಡಿರಬಹುದು : ಯಾವುದು ಸರಿ? ಆ ಹೊತ್ತಿಗೆ ಬದುಕನ್ನು ಸುಂದರವಾಗಿಸುವ ಜರೂರತ್ತೋ? ಸಮಾಜ ಅಥವಾ ಒಂದು ಹಂತದಲ್ಲಿ ತಾನು ಕೂಡ ನಂಬಿದ ಮೌಲ್ಯಗಳೋ ? ಅಪ್ಪನ ಜೇಬಿನಿಂದ ತೆಗೆದ ನೂರರ ನೋಟು ಅಂದಿನ ಅಗತ್ಯವಾಗಿತ್ತು , ನಾನೇನೂ ಆ ಚಾಳಿಯನ್ನು ಮುಂದುವರೆಸಿಲ್ಲವಲ್ಲ ? ಅದರಿಂದ ಅಪ್ಪನಿಗೂ ಅಂಥಾ ನಷ್ಟವೇನೂ ಆಗಿಲ್ಲ ! ಎಂಬ ಉತ್ತರ ತಾರುಣ್ಯಕ್ಕೆ ಅದೆಷ್ಟು ಸಲೀಸು.

ಜೊತೆಗೆ ಬಾಳಿದ ಗಂಡ ಹೆಂಡತಿ ಜೀವನ ಸಂಧ್ಯೆಯಲ್ಲಿ ಎಷ್ಟೋ ಸತ್ಯಗಳನ್ನು ಒಬ್ಬರೊಬ್ಬರಿಗೆ ತೆರೆದಿಡಬಹುದು. ಮೂರ್ನಾಲ್ಕು ಹೆತ್ತು ಅವಕ್ಕೂ ಮಕ್ಕಳಾದ ಮೇಲೆ “ಅಯ್ಯೋ ನಮ್ಮಲ್ಲಿ ಯಾವತ್ತೂ ಪ್ರೀತಿ ವಿಶ್ವಾಸವೇ ಇರಲಿಲ್ಲ ” ಎಂದ ಜೀವಗಳನ್ನು ನಾನು ನೋಡಿದ್ದೇನೆ . “ನೀನು ನನಗೆ ತಾಳಿ ಕಟ್ಟುವ ಮುಂಚೆ ಇನ್ಯಾರೋ ಕನಸಾಗಿ ನನ್ನಲ್ಲಿ ಹುಟ್ಟಿ ಬಹು ವರ್ಷಗಳವರೆಗೆ ನನ್ನೋದಿಗೆ ಜೀವಿಸಿದ್ದ ” ಎನ್ನುವಂತಹ ಹೆಂಡತಿಯ ಸತ್ಯ , “ನಿನ್ನೊಂದಿಗೆ ನಾ ಕಳೆದ ರಾತ್ರಿಗಳಲ್ಲೂ ಅವಳ ನೆನಪಿತ್ತು ” ಎನ್ನುವಂತಹ ಗಂಡನ ಸತ್ಯ ಎರಡೂ ನಾಲ್ಕು ಗೋಡೆಗಳ ಮಧ್ಯೆ ಒಬ್ಬರಿಗೊಬ್ಬರು ಕೊಡುವ ಸಮಜಾಯಿಶಿಗಳಲ್ಲಿ ಮುಗಿದುಹೋಗುತ್ತವೆ. ಲೋಕಕ್ಕೆ ಕಾಣುವುದು ಅವನು ಅವಳಿಗಾಗಿ ತರುವ ಚಿನ್ನದ ಮೆರುಗು , ಅವಳು ಅವನ ಆಯುಸ್ಸಿಗಾಗಿ ಮಾಡುವ ಭೀಮನ ಅಮಾವಾಸ್ಯೆ ಮಾತ್ರ !
ಅತೀತ ನಾಟಕದ ವಕೀಲ ಪಾತ್ರವೂ ಹೀಗೆ ತನ್ನ ಬದುಕಿನಲ್ಲಿ ನಡೆದ , ತಪ್ಪೆನಿಸಬಹುದಾದ ಎಲ್ಲ ಘಟನೆಗಳಿಗೂ ಒಂದು ಸಮಜಾಯಿಶಿ ಕೊಡುತ್ತಾ ಸಾಗುತ್ತದೆ. ವಕೀಲ ಹೇಳುವ ಎಲ್ಲ ಸಮಜಾಯಿಶಿಗಳ ಸತ್ಯದರ್ಶನ ಮಾಡಿಸುವ ಸಾಕ್ಷಿ ಅತೀತ ನಾಟಕದ ಬಹು ಮುಖ್ಯ ಪಾತ್ರ. ಈ ಸಾಕ್ಷಿ ಪ್ರಬಲವಾಗುವುದು ಬಾಳ ಸಂಜೆಯಲ್ಲಿ ಮಾತ್ರವೇ ? ದೇಹದ ಶಕ್ತಿ ಕುಂದಿದಾಗಲೇ ಬದುಕಿನುದ್ದಕ್ಕೂ ಮಾಡಿದ ತಪ್ಪುಗಳಿಗೂ ದನಿ ಬರುವುದು ಕಾಕತಾಳೀವಾಗಿರಲಾರದು. ಅಷ್ಟಾದರೂ ತನ್ನ ಮೂಗಿನ ನೇರದ ಉತ್ತರ ಕೊಟ್ಟು ಪ್ರಶ್ನೆ ಮುರಿಯುವ ಕಲೆಯನ್ನು ಮನುಷ್ಯ ಮರೆಯುವುದಿಲ್ಲ. ನಾಟಕದಲ್ಲಿ ಜೂನಿಯರ್ ಆಗಿ ತನ್ನಲ್ಲಿಗೆ ಬರುವ ಒಂದು ಹೆಣ್ಣಿನ ಸಂಗ ಮಾಡುವ ವಕೀಲ ಅದಕ್ಕೂ ತನ್ನದೇ ಆದ ಉತ್ತರವನ್ನು ಸಿಧ್ಧವಿಟ್ಟುಕೊಂಡಿದ್ದಾನೆ. ‘ದೈಹಿಕ ಸುಖದ ಭಾಗವಾದ ಹೆಣ್ಣು ಕೆಲ ಬಾರಿ ಹಲವಾರು ಕಾರಣ ಕೊಟ್ಟು ತಾನು ಅದರ ಭಾಗವಾಗಿರಲೇ ಇಲ್ಲ ಎನ್ನುತ್ತಾಳೆ. ಇದು ಸುಳ್ಳು ‘ ಎನ್ನುವುದು ವಕೀಲನ ವಾದ. ಆದರೆ ಗಂಡಿಗೆ ಈ ಉತ್ತರ ಸಾಧ್ಯವೇ ? ಅವನಿಚ್ಛೆಯನ್ನು ಒಪ್ಪಿಕೊಂಡು ಜವಾಬುದಾರಿಯನ್ನು ಅವನ ಮೇಲೆ ಹಾಕುವ ಹುನ್ನಾರವೇ ? ಭಾವಲೋಕದ ರಾಯಭಾರಿ ಹೆಣ್ಣು ಮಾತ್ರ ಕೊಡಬಹುದಾದ ಉತ್ತರವೇ ಇದು ?
ಬದುಕಿನ ಕಥೆಗಳನ್ನೇಕೆ ‘ಆತ್ಮಚರಿತ್ರೆ’ ಎನ್ನಬೇಕು ? ಬದುಕಿರುವಾಗ ಆತ್ಮವನ್ನು ಕಂಡವರು ಎಷ್ಟು ಜನ ?ಅದರಂತೆ ನಡೆದವರೆಷ್ಟು ಜನ? ನಡೆದ ಹಾದಿಯ ಸತ್ಯವನ್ನು ದಾಖಲಿಸಿದವರೆಷ್ಟು ಜನ ? ಆತ್ಮ ಚರಿತ್ರೆ ಎಂಬ ಪದವನ್ನು ಕೇಳಿದಾಗಲೆಲ್ಲಾ ಈ ಪ್ರಶ್ನೆಗಳು ನನ್ನಲ್ಲಿ ಮಿಂಚಿ ಮಾಯವಾಗಿವೆ. ‘ಸತ್ಯವಿಲ್ಲದ್ದು ಚರಿತ್ರೆ ಮಾತ್ರ ಆತ್ಮ ಚರಿತ್ರೆಯಲ್ಲ .ಸತ್ಯ ಕಸವಿದ್ದಂತೆ , ಸೆಗಣಿಯಂತೆ ನಾರುತ್ತದೆ. ಸಾಧಿಸುತ್ತಾ ಹೋದಂತೆ ಸುಳ್ಳು ಸತ್ಯವಾಗುತ್ತದೆ.’ ಇವು ನಾಟಕದ್ದೇ ಮಾತು . ಸುಳ್ಳೆಂಬುದು ಒಂಟಿಯಾಗಿ ಬದುಕಲಾರದು. ಒಂದಕ್ಕೆ ಆಸರೆಯಾಗಿ ಮತ್ತೊಂದನ್ನು ಪೋಣಿಸುತ್ತಲೇ ಇರಬೇಕು. ಪೋಣಿಸಿದ್ದು ದಾರದಿಂದ ಜಾರದಂತೆ ಕಾಯುತ್ತಲೇ ಇರಬೇಕು. ಅಷ್ಟಕ್ಕೂ ಸತ್ಯವೆಂದರೇನು ? ಯಾರ ಪಾಲಿನ ಸತ್ಯವನ್ನು ದಾಖಲಿಸಬೇಕು ? ಈ ಪ್ರಶ್ನೆಗಳಿಗೆ ಎಲ್ಲರಿಗೂ ಅವರದ್ದೇ ಆದ ಉತ್ತರ ದೊರಕಬಹುದು .
ಬದುಕಿನುದ್ದಕ್ಕೂ ನಮ್ಮ ಜೊತೆ ನಡೆವ , ಬಹುತೇಕರು ನಿರ್ಲಕ್ಷಿಸುವ ನೆರಳಿನಂತಾ ಸಾಕ್ಷಿ ಪ್ರಜ್ಞೆ ಮತ್ತು ನಮ್ಮ ಸತ್ಯದ ನಡುವೆ ನಡೆವ ತಿಕ್ಕಾಟವೇ ಅತೀತ ನಾಟಕ. ಸಾಕ್ಷಿಯ ಸತ್ಯ ಮತ್ತು ನಮ್ಮ ಸತ್ಯ ಒಂದೇ ಆದರೆ ನಮ್ಮ ಬದುಕೂ ಅತೀತ.
ವೀಣಾ ಬನ್ನಂಜೆಯವರು ಸೇತುರಾಮ್ ಅವರ ಎರಡು ನಾಟಕಗಳ (ನಿಮ್ಮಿತ್ತ ಮತ್ತು ಗತಿ) ಪುಸ್ತಕದ ಬೆನ್ನುಡಿಯಲ್ಲಿ ಬರೆಯುತ್ತಾರೆ “ಘಟನೆಗಳೇ ಇಲ್ಲದ ನಾಟಕದಲ್ಲಿ ಮಾತಿನ ಆಭರಣವಿದೆ. ಆ ಮಾತೇ ಸರ್ವರನ್ನು ಬೆಳೆಸುವ ಮಂತ್ರದಂತೆ ಇದೆ .” ಕಥೆಗಿಂತಲೂ ನಾಟಕದ ಮಾತು ಮುಖ್ಯವಾದ್ದರಿಂದ ನಾನಿಲ್ಲ ಕಥೆಯನ್ನು ದಾಖಲಿಸಿಲ್ಲ . ಇನ್ನು ರಂಗದ ಮೇಲೆ ನುರಿತ ಕಲಾವಿದರೇ ಮಾತಾಗಿದ್ದಾರಾದ್ದರಿಂದ ಅವರ ಅಭಿನಯದ ಬಗ್ಗೆಯೂ ತುಂಬು ಮೆಚ್ಚುಗೆಯೊಂದನ್ನು ಬಿಟ್ಟು ಹೆಚ್ಚೇನೂ ಹೇಳಲಾಗದು . ವಕೀಲನಾಗಿ ಸೇತುರಾಮ್ , ಸಾಕ್ಷಿಯಾಗಿ ಶ್ರೀಪತಿ ಮಂಜನಬೈಲು, ಆತ್ಮ ಚರಿತ್ರೆಯನ್ನು ದಾಖಲಿಸಲು ಬಂದು ವಕೀಲನ ಬದುಕಿನ ಒಳ ಪದರಗಳನ್ನು ತೆರೆದಿಡುವ ದೀಪಾ , ವಕೀಲನ ಮಗನಾಗಿ ಶರತ್ ಪರ್ತವಾಣಿ ಮತ್ತು ವಕೀಲನ ಜೂನಿಯರ್ ಆಗಿ ಬಂದು ಗೆಳತಿಯಾಗುವ ಉಷಾ ಭಂಡಾರಿ ಅವರುಗಳ ಅಭಿನಯ ಮತ್ತು ಪ್ರವೀಣ್ ಡಿ ರಾವ್ ಅವರ ಸಂಗೀತ ಸೊಗಸಾಗಿದೆ. ಎಲ್ಲೋ ಹುದುಗಿ ಹೋಗಿರುವ ಸಾಕ್ಷಿಯೊಂದಿಗೆ ಮತ್ತೆ ಮುಖಾಮುಖಿಯಾಗಲು ನಾಟಕ ದಾರಿಯಾಗುತ್ತದೆ.






ಅವರ ಅನಾವರಣ ಧಾರವಾಹಿ ತುಂಬಾ ಚೆನ್ನಾಗಿ ಬರ್ತಾ ಇತ್ತು. ಆದ್ರೆ ಅರ್ಧಕ್ಕೆ ನಿಂತಿತೇನೋ ಅನ್ನೋ ಹಾಗೆ ಮುಗಿದುಹೋಯಿತು(ಬಹುಶಃ ಅರ್ಧಕ್ಕೆ ನಿಂತಿತ್ತು).
ಅವರ ಅಭಿನಯದ ಪಾತ್ರಗಳು,ತನ್ನೊಳಗೆ ಏನನ್ನೋ ಹುದುಗಿಸಿಕೊಂಡ ನಿಗೂಢ-ಅಮೂರ್ತ ಚಿತ್ರಗಳಂತೆ ಇರುತ್ತವೆ.
ಇಲ್ಲಿ ಮಂಗಳೂರಲ್ಲಿ ಅವರ ನಾಟಕ ಪ್ರದರ್ಶನವಾಗುತ್ತದೋ ಗೊತ್ತಿಲ್ಲ. ಆದ್ರೆ ಖುಷಿ..
nimma vimarshe atma parivikshaneya dhatiyallide. good. congrats
ನಾನು ಸೇತುರಾಂ ಸರ್ ಅವರ ಮೂರೂ (ಮಂಥನ, ದಿಬ್ಬಣ, ಅನಾವರಣ) ಧಾರಾವಾಹಿಗಳನ್ನು ನೋಡಿದ್ದೇನೆ. ಹಾಗೆಯೇ ಅವರ ಮೊದಲಿನ ಎರಡು ನಾಟಕಗಳಾದ ಗತಿ ಮತ್ತು ನಿಮಿತ್ತವನ್ನೂ ನೋಡಿದ್ದೇನೆ. ಎಲ್ಲದರಲ್ಲೂ ಮನುಷ್ಯ ಸಂಬಂಧಗಳನ್ನು ಅವರು ಎಲ್ಲೂ ಉತ್ಪ್ರೇಕ್ಷೆಗೊಳಪಡಿಸದೆ ಅವಿರುವಂತೆ ಇದ್ದ ಹಾಗೆ ತೆರೆದಿಡುತ್ತಾರೆ. ಇನ್ನು ಅವರ ಸಂಭಾಷಣೆಗಳು ಎಲ್ಲೂ ಆವುಟವೆನಿಸದ, ಅಬ್ಬರವೆನಿಸದ ಕಂಡಿದ್ದನ್ನು ಕಂಡಹಾಗೆ ಹೇಳುವ ಕೆಂಡದುಂಡೆಗಳೇ ಸರಿ! ಒಟ್ಟಾರೆ ಸೇತುರಾಂ ಅವರು ಬದುಕಿನ ನಗ್ನ ಸತ್ಯಗಳನ್ನು ಹೇಳುವ ಮೂಲಕ ಬೇರೆಲ್ಲ ನಿರ್ದೇಶಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಹ್ಯಾಟ್ಸಾಫ್ ಟು ಹಿಮ್! ಅವರಿಂದ ಮತ್ತಷ್ಟು ಇಂಥ ನಾಟಕಗಳು ಮತ್ತು ಧಾರಾವಾಹಿಗಳು ಬರಲಿ. ಈ ಸಾರಿ ಬೆಂಗಳೂರಿಗೆ ಬಂದಾಗ ಈ ನಾಟಕವನ್ನು ನೋಡುವೆ.
One of your best, Swarna!