
ರಾಜಾರಾಂ ತಲ್ಲೂರು
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿರುವ ಕೇಂದ್ರೀಯ ನೆಡುತೋಪು ಬೆಳೆಗಳ ಸಂಶೋಧನಾ ಕೇಂದ್ರ (CPCRI) ಕ್ಕೆ ಸಂಶೋಧನಾ ಬಳಕೆಗಾಗಿ ಇನ್ನೂರು ಮೆಟ್ರಿಕ್ ಟನ್ ಸೆಗಣಿ ಬೇಕಂತೆ. ಹಾಗಂತ ಮೊನ್ನೆ ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟಣೆ ಬಂದಿದೆ. ರೈತರ ಆತ್ಮಹತ್ಯೆಗಳು ನುಸಿ-ನೊಣಗಳ ಸಾವಿನ ಸಾಲಿಗೆ ಬಂದು ನಿಂತಿರುವ ಈ ಹಂತದಲ್ಲೂ ನೀತಿಗಳನ್ನು ರೂಪಿಸುವವರು ಹೇಗೆ ಕಾರ್ಪೋರೇಟ್ ಪರವಾದ ಹಾದಿಯಲ್ಲೇ ಹೋಗುತ್ತಿದ್ದಾರೆ ಎಂಬುದಕ್ಕೆ ಇದು ಒಳ್ಳೆಯ ನಿದರ್ಶನ.
ಕೇಂದ್ರ ಸರಕಾರದ ಅಧೀನದಲ್ಲಿರುವ ಭಾರತೀಯ ಕ್ರಷಿ ಸಂಶೋಧನಾ ಪರಿಷತ್ತಿನ (ICAR) ಅಂಗಸಂಸ್ಥೆ, ಕಾಸರಗೋಡಿನಲ್ಲಿರುವ ಕೇಂದ್ರೀಯ ನೆಡುತೋಪು ಬೆಳೆಗಳ ಸಂಶೋಧನಾ ಕೇಂದ್ರ (CPCRI) ದ ವಿಟ್ಲ ಘಟಕ ಸೆಗಣಿ ಸಂಗ್ರಹಿಸುವ ಟೆಂಡರ್ ಜಾಹೀರು ಮಾಡುತ್ತಿರುವ ಘಳಿಗೆಯಲ್ಲೇ ದಿಲ್ಲಿಯಲ್ಲಿ ಕೂತ ಪ್ರಧಾನ ಸೇವಕರು “ಗಾಂವ್, ಗರೀಬ್, ಕಿಸಾನ್” ಎಂಬ ಹೊಸ ಸ್ಲೋಗನ್ ದಯಪಾಲಿಸಿದ್ದಾರೆ. ಈ ರೀತಿಯ ‘ಮೆಳ್ಳಗಣ್ಣು’ ನೀತಿಗಳಿಗೆ ಕಾರಣ – ಅದನ್ನು ನಿರ್ಧರಿಸುವವರ ನೀಯತ್ತು ಕಾರ್ಪೋರೇಟ್ ಗಳ ಕಡೆಗಿರುವುದು.
ಸಣ್ಣ ಲೆಕ್ಕಾಚಾರ ತೆಗೆಯುವುದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು ಮೂರು ಲಕ್ಷ ದನಕರುಗಳಿದ್ದು, ಅವುಗಳಿಂದ ಎರಡು ಲಕ್ಷ ಕಿಲೋಗ್ರಾಂ ಸೆಗಣಿ ಸಂಗ್ರಹ ಏಕ ಗಂಟಿನಲ್ಲಿ ಅಸಾಧ್ಯ. ಹಾಗಾಗಿ ಯಾವೊಬ್ಬ ಸ್ಥಳೀಯ ಹೈನುಗಾರನೂ ಇದರಿಂದ ಲಾಭ ಪಡೆಯಲಾರ. ಸಹಜವಾಗಿಯೇ ಯಾರೋ ಪರವೂರ ದಳ್ಳಾಲಿ ಅಥವಾ ಹೊರರಾಜ್ಯದ ಹೈನುಗಾರಿಕೆ ಕಾರ್ಪೋರೇಟ್ ಈ ಟೆಂಡರಿನ ಲಾಭ ಪಡೆಯಲಿದೆ.
ಕರ್ನಾಟಕದಲ್ಲಿ ಹಾಲು ಫೆಡರೇಶನ್ ಸುಸಂಘಟಿತವಾಗಿದೆ. ರೈತರ/ಹೈನುಗಾರರ ಹಿತಾಸಕ್ತಿ ಕಾಯುವ ಮನಸ್ಸಿದ್ದಿದ್ದರೆ, ಹಾಲಿನಂತೆಯೇ ಸೆಗಣಿಯನ್ನೂ ಸಹಕಾರಿ ತತ್ವದಡಿ ಸಂಗ್ರಹಿಸಿ ಪಡೆಯುವ ವ್ಯವಸ್ಥೆಯೊಂದನ್ನು ರೂಪಿಸುವ ಮನಸ್ಸು ಮಾಡಬಹುದಿತ್ತು; ಸೆಗಣಿ ಖರೀದಿಗೆ ಒಳ್ಳೆಯ ದರವನ್ನೂ ಹೈನುಗಾರನಿಗೆ ಕೊಡಬಹುದಿತ್ತು. ಈಗ ಈ ಟೆಂಡರ್ ಪರಿವಾರದ ಯಾವುದೋ ಗೋಶಾಲೆಯೋ ಅಥವಾ ಇನ್ಯಾವುದೋ ಡೈರಿ ಫಾರ್ಮಿಂಗ್ ಸಂಸ್ಥೆಯೋ ಈ ಲಾಭ ಪಡೆಯಲು ಸಹಾಯ ಮಾಡಲಿದೆ. ಒಂದು ವೇಳೆ ಯಾರೋ ದಳ್ಳಾಲಿ ಊರೂರು ತಿರುಗಿ ಸೆಗಣಿ ಸಂಗ್ರಹಿಸಿದರೂ, ಆತ ರೈತನಿಗೆ ಏನು ಕೊಡುತ್ತಾನೆಂಬುದನ್ನು ನಾವಿಲ್ಲಿ ಕರಾವಳಿಯಲ್ಲಿ ತೆಂಗಿನ ಕಾಯಿಯ ಸಂದರ್ಭದಲ್ಲಿ ಕಂಡಿದ್ದೇವೆ. ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಬೆಲೆ 15-16 ರೂಪಾಯಿ ಇರುವಾಗ, ಅದು ಇಲ್ಲಿ ದಳ್ಳಾಲಿ ಮೂಲಕ ರೈತನಿಂದ ಸಂಗ್ರಹ ಆಗುವುದು 5-6ರೂಪಾಯಿಗೆ.
ನೀತಿ ನಿರೂಪಕರಿಗೆ ರೈತಪರ ವಿಷನ್ ಇದ್ದಿದ್ದರೆ, ರೈತರಿಗೆ ಎಲ್ಲೆಲ್ಲಿ ಲಾಭ ಮಾಡಿಕೊಡಲು ಸಾಧ್ಯವೋ ಅಲ್ಲೆಲ್ಲ ಲಾಭ ಮಾಡಿಕೊಡುವುದು ಸಾಧ್ಯವಾಗುತ್ತಿತ್ತು. ಕಾರ್ಪೋರೇಟ್ ಗಳಿಗೇ ಸಹಾಯ ಮಾಡುವ ಉದ್ದೇಶ ಇದ್ದರೆ, ಸೆಗಣಿಯಲ್ಲೂ ಅವರಿಗೆ ನಾಲ್ಕು ಕಾಸು ಗಿಟ್ಟಿಸಿಕೊಡುವ ಯೋಚನೆಗಳೇ ಹೊಳೆಯುತ್ತವೆ. ಇಲ್ಲಿ ಪ್ರಶ್ನೆ ಇರುವುದು ನೀಯತ್ತಿನದು.






“ನೀತಿ ನಿರೂಪಕರಿಗೆ ರೈತಪರ ವಿಷನ್ ಇದ್ದಿದ್ದರೆ, ರೈತರಿಗೆ ಎಲ್ಲೆಲ್ಲಿ ಲಾಭ ಮಾಡಿಕೊಡಲು ಸಾಧ್ಯವೋ ಅಲ್ಲೆಲ್ಲ ಲಾಭ ಮಾಡಿಕೊಡುವುದು ಸಾಧ್ಯವಾಗುತ್ತಿತ್ತು. ಇಲ್ಲಿ ಪ್ರಶ್ನೆ ಇರುವುದು ನೀಯತ್ತಿನದು.”
ನಿಜ. ಆದರೂ ರೈತ ನಡು ಬಗ್ಗಿಸಿ ತಲೆ ತಗ್ಗಿಸಿ ಉಳುತ್ತಲೇ ಇರುತ್ತಾನೆ, ಮತ್ತು ಇಂಥವರು ಅವನ ಬೆವರಿನ ಫಲವನ್ನು ಉಣ್ಣುತ್ತಲೇ ಇರುತ್ತಾರೆ.