ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಕ್ಸಿ ಒಂಟೆಗಳೂ.. ಸುರಮಾ ಕಣ್ಣಿನ ಸವಾರರೂ..

 

ಪೆಟ್ರಾ ಅನ್ನುವ ನಗರವೊಂದು ರೂಪುಗೊಂಡ ಬಗೆಯೇ ವಿಚಿತ್ರ.

ಏನೂ ಇಲ್ಲದ ಮರುಭೂಮಿಯೊಂದರಲ್ಲಿ ಒಂದು ಊರನ್ನು ಒಂದು ಜನಾಂಗದ ಜನರು ತಮ್ಮ ಬುದ್ಧಿವಂತಿಕೆಯಿಂದ ಹುಟ್ಟುಹಾಕುತ್ತಾರೆ, ಅಭಿವೃದ್ಧಿಗೊಳಿಸುತ್ತಾರೆ ಎಂದರೆ ಲೆಕ್ಕ ಹಾಕಿ …

ಅದೂ ಕ್ರಿಸ್ತಪೂರ್ವ 312ರ ಆ ಕಾಲದಲ್ಲಿ!

ಆ ಸ್ವಾರಸ್ಯದ ಕಥೆ ನಿಮಗೆ ಹೇಳಲೇಬೇಕು!

ಕ್ರಿಸ್ತಪೂರ್ವ ನಾಲ್ಕನೆಯ ಶತಮಾನಕ್ಕೂ ಮೊದಲು ಆ ಅಗಾಧ ಬಂಡೆಗಳು – ಅಂದರೆ ಸುಮಾರು 400-500 ಅಡಿ ಮತ್ತು ಕೆಲವೆಡೆ ಅದಕ್ಕಿಂತಲೂ ಎತ್ತರದ ಬಂಡೆಗಳು ಇದ್ದಕ್ಕಿದ್ದಂತೆ ಭೂಕಂಪದಿಂದ ಸೇಬಿನಂತೆ ಎರಡು ಭಾಗವಾಗಿ ಬಿಡುತ್ತವೆ. ನಡುವೆ ಒಂದು ಕಿರುದಾರಿ ಜಾಗ ಮಾತ್ರ ನಿರ್ಮಾಣಗೊಳ್ಳುತ್ತದೆ.

ಒಂದೂವರೆ ಕಿಲೋಮೀಟರ್‌ನಷ್ಟು ಉದ್ದದ ಈ ಹಾದಿಯಲ್ಲಿ ಕೆಲವೊಮ್ಮೆ ಆ ದಾರಿ ಹತ್ತು-ಹನ್ನೆರಡು ಮೀಟರ್‌ನಷ್ಟಿದ್ದರೆ, ಮತ್ತೆ ಕೆಲವೆಡೆ ಕೇವಲ ಮೂರು ಮೀಟರ್‌ನಷ್ಟು ಚಿಕ್ಕದಾಗಿದೆ! ಶತ್ರುಗಳ ಆಕ್ರಮಣದ ಭಯವಿಲ್ಲದ, ಅತಿಕ್ರಮಣದ ಆತಂಕವಿಲ್ಲದ ಈ ಜಾಗವನ್ನು ಕಂಡು ಈಗಿನ ಅರಬ್ಬರ ಪೂರ್ವಜರಾದ ಅಲೆಮಾರಿ ನೆಬಾಟಿಯನ್ನರಿಗೆ ಇಲ್ಲೊಂದು ನಗರ ನಿರ್ಮಿಸಿ, ಆ ಜಾಗದ ಮಾರ್ಗವಾಗಿ ಈಗಿನ ಗಾಜ಼, ಡಮಾಸ್ಕಸ್, ಅಕಾಬಾ ತಲುಪುವ ವರ್ತಕರು ಈ ಮಾರ್ಗವಾಗಿ ಹೋಗುವಾಗ ಸುಂಕ ವಿಧಿಸಿದರೆ ಅದು ತುಂಬ ಲಾಭ ತರುತ್ತದೆ ಎನ್ನಿಸಿತಂತೆ.

ಆ ಆಲೋಚನೆ ತಲೆಗೆ ಬಂದಿದ್ದೇ ತಡ, ಅವರು ಮೊದಲು ಮಾಡಿದ ಕೆಲಸವೆಂದರೆ ಅಲ್ಲಿನ ನಿಯಮಿತ ನೀರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವುದು! ಮರುಭೂಮಿಯಾದ ಆ ಪ್ರದೇಶದಲ್ಲಿ ಬಿರುಬೇಸಿಗೆಯಲ್ಲಿ ಹನಿ ನೀರೂ ಇರುವುದಿಲ್ಲವಾದರೂ, ಮಳೆಗಾಲದಲ್ಲಿ ಬೀಳುವ ನಾಲ್ಕಾರು ಇಂಚು ಮಳೆಯು ಇದ್ದಕ್ಕಿದ್ದ ಹಾಗೆ ಅಲ್ಲೊಂದು ಮಿನಿ ಪ್ರವಾಹವನ್ನು ಸೃಷ್ಟಿಸಿ, ಬಂಡೆಗಳ ನಡುವಿನ ಕಂದರದಲ್ಲಿ ಅಚಾನಕ್ ನುಗ್ಗಿ ಪ್ರವಾಹವಾಗಿ ಹರಿಯುತ್ತದೆ.

ಈ ನೀರನ್ನು ನೋಡಿದ ನೆಬಾಟಿಯನ್ನರು ಆ ನೀರಿನ ಹರಿವನ್ನು ನಿಯಂತ್ರಿಸಿ, ಅಣೆಕಟ್ಟು ಕಟ್ಟಿ, ಕೂಡಿಟ್ಟು, ಅಧೀನದಲ್ಲಿರಿಸಿಕೊಂಡರೆ ಇಡೀ ಪ್ರದೇಶವನ್ನೇ ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು ಎಂಬ ಆಲೋಚನೆ ಬಂದಿತಂತೆ.

ಲೆಕ್ಕ ಹಾಕಿ! ಈಗಿನ 21ನೆಯ ಶತಮಾನದಲ್ಲಿ ನೀರಿನ ಕಾರಣವಾಗಿ ಸರಕಾರಗಳು ಉದುರಿ ಬೀಳುವ, ನಾಯಕಿಯೊಬ್ಬರು ರಾಜ್ಯದ ಕಣ್ಮಣಿಯಾಗುವಷ್ಟು ಶಕ್ತಿವಂತರು ಹೇಗೆ ಆದರೆಂದು ಆಶ್ಚರ್ಯ ಪಡುತ್ತೇವೆ … ಆದರೆ 2300 ವರ್ಷಗಳಷ್ಟು ಹಿಂದೆಯೇ ಈ ರೀತಿಯಾದ ಅಸಾಧಾರಣ ಬುದ್ಧಿವಂತಿಕೆಯ ಜನಾಂಗದವರಿದ್ದರು ಈ ಅಲೆಮಾರಿ ಅರಬ್ಬರು! ಆ ಆಲೋಚನೆಯಿಂದಾಗಿ ಹುಟ್ಟಿದ್ದು ಈ ಪೆಟ್ರಾ!

ಆ ಆಲೋಚನೆ ಬಂದಿದ್ದೇ ತಡ, ಬಿರುಕು ಬಿಟ್ಟ ಆ ಬಂಡೆಗಳಲ್ಲಿ ನೀರು ಒಂದೆಡೆಗೆ ಹರಿದು ಹೋಗಲು ಅನುಕೂಲವಾಗುವಂತೆ ಕುಣಿಯನ್ನು ಕೆತ್ತುತ್ತಾರೆ, ನೀರನ್ನು ಒಂದು ಜಾಗದಿಂದ ಮತ್ತೊಂದೆಡೆ ಹರಿಸಲು ಪಿಂಗಾಣಿಯ ಪೈಪುಗಳನ್ನು ತಯಾರಿಸುತ್ತಾರೆ ಮತ್ತು ಹಾಗೆ ಹರಿದ ನೀರನ್ನು ಶೇಖರಿಸಲು ಅಣೆಕಟ್ಟನ್ನು ನಿರ್ಮಾಣ ಮಾಡುತ್ತಾರೆ! ಆ ಹೈರಾಣಾಗಿಸುವ ಮರುಭೂಮಿ ಪ್ರದೇಶದಲ್ಲಿ ಇವತ್ತಿಗೆ ಹಾಗೊಂದು ಅಣೆಕಟ್ಟು ನಿರ್ಮಾಣವಾದರೂ ಅದೇ ಗ್ರೇಟ್ ಎನ್ನುವಂಥ ಪರಿಸ್ಥಿತಿ.

ಹಾಗಿರುವಾಗ 2300 ವರ್ಷಗಳ ಕೆಳಗೆ ಈ ರೀತಿಯ ಒಂದು ಪ್ರಾಜೆಕ್ಟನ್ನು ಅನುಷ್ಠಾನಕ್ಕೆ ತರುತ್ತಾರೆ ನೆಬಾಟಿಯನ್ನರು! ಹಾಗೆ ಹುಟ್ಟುತ್ತದೆ ಪೆಟ್ರಾ ಮತ್ತು ಸುಮಾರು ಎರಡೂವರೆ ಲಕ್ಷ ಜನರಿಗೆ ಮನೆಯಾಗುತ್ತದೆ. ಪೆಟ್ರಾ ಅಂದರೆ ಗ್ರೀಕ್ ಭಾಷೆಯಲ್ಲಿ ಕಲ್ಲು ಅಂತಲೂ ಅರಾಬಿಕ್ ಭಾಷೆಯಲ್ಲಿ ಬಟಾರಾ ಅಂದರೆ ‘ಕತ್ತರಿಸುವುದು’ ಅಂತಲೂ ಅರ್ಥವಂತೆ. ಇಡೀ ಪೆಟ್ರಾ ನಗರವನ್ನು, ಕಲ್ಲುಗಳನ್ನು ಕತ್ತರಿಸಿ ನಿರ್ಮಿಸಿರುವುದರಿಂದ ಈ ಹೆಸರು ಬಂದಿರಬಹುದು ಎನ್ನುತ್ತಾರೆ. ನೆಬಾಟಿಯನ್ನರ ಕಾಲದಲ್ಲಿ ಪೆಟ್ರಾ ನಗರಕ್ಕೆ ರಕ್ಮು (Raqmu) ಎಂಬ ಹೆಸರಿತ್ತು. ನೆಬಾಟಿಯನ್ನರ ರಾಜ ರೆಕೆಮೆಯ ಕಾರಣದಿಂದ ಈ ಹೆಸರು ಬಂದಿದ್ದು. ಅಲ್ಲಿಂದ ಮುಂದೆ ನಮ್ಮ ಜೈಪುರದಂಥ ಕೆಂಪು ನಗರ ಪೆಟ್ರಾ ಅತ್ಯಂತ ಬಲಿಷ್ಠ ನಗರವಾಗಿ ಸುಮಾರು ನಾಲ್ಕು ಶತಮಾನಗಳಷ್ಟು ಕಾಲ ಆ ಮಾರ್ಗದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ತನ್ನ ಮುಷ್ಠಿಯಲ್ಲಿಟ್ಟುಕೊಳ್ಳುತ್ತದೆ.

ಬಂಡೆಯು ಬಿರುಕುಬಿಟ್ಟ ಕಣಿವೆ (ಅರಾಬಿಕ್ ಭಾಷೆಯಲ್ಲಿ ಸಿಕ್ ಎನ್ನುತ್ತಾರೆ)ಯನ್ನು ತಲುಪಲು ಸುಮಾರು ಒಂದೂವರೆ ಕಿಲೋಮೀಟರ್‌ನಷ್ಟು ನಡೆಯಬೇಕು ಎಂದ ಮಹಮ್ಮದ್.

ಜೋರ್ಡಾನ್ ದೇಶದ ಬಹುಪಾಲು ಹಣ ಬರುವುದು ಪ್ರವಾಸೋದ್ಯಮದಿಂದಲೇ. ಆದರೂ ಆಧುನಿಕ ಜಗತ್ತಿನ ಪ್ರವಾಸಿಗರು ಅಲ್ಲಿ ಕಾಲಿಡುವುದೇ ಭಾಗ್ಯ ಎನ್ನುವಂತೆ ಆ ರಸ್ತೆಯನ್ನು ಆಧುನೀಕರಣಗೊಳಿಸಿಲ್ಲ ಜೋರ್ಡಾನ್ ದೇಶ. ಕಿತ್ತುಹೋಗಿರುವ ಪುರಾತನ ಚೌಕಾಕಾರದ ಕಲ್ಲು ನೆಲದ ಮೇಲೆಯೇ ನಡೆಯಬೇಕು. ಮೊದಲಲ್ಲಿ ಉತ್ಸಾಹದಿಂದ ಜೋರಾಗಿ ನಡೆಯುತ್ತ ಅವನನ್ನು ಹಿಂಬಾಲಿಸಿದೆವು. ಬಲಭಾಗದಲ್ಲಿ ನೆಟ್ಟಿದ್ದ ಚೌಕಾಕಾರದ ಕಲ್ಲನ್ನು ತೋರಿಸುತ್ತಾ ‘ಇದೀಗ ನಮ್ಮ ಪ್ರಯಾಣ ನಿಜದಲ್ಲಿ ಶುರುವಾಗುತ್ತದೆ’ ಎಂದ.

ಚೌಕಾಕಾರದ ಕಲ್ಲುಗಳು ಪೆಟ್ರಾ ನಗರದ ಆರಂಭ ಎನ್ನುವುದನ್ನು ಸೂಚಿಸಲು ನೆಟ್ಟಿದ್ದೆಂದು ಮಹಮ್ಮದ್ ಹೇಳಿದ. ನನಗೆ ಕೆಂಪೇಗೌಡರು ಲಾಲ್‌ಬಾಗ್‌ನಲ್ಲಿ ನೆಟ್ಟ ಕಲ್ಲುಗಳ ಮಂಟಪದ ನೆನಪಾಯ್ತು. ಆಗ ಆರಂಭವೆನಿಸಿದ್ದು ಈಗ ಹಾರ್ಟ್ ಆಫ್ ದಿ ಸಿಟಿಯಾಗಿ ಬದಲಾಗಿಹೋಗಿರುವಂಥ ಕಾಲದಲ್ಲಿ, ಪೆಟ್ರಾದ ಕಲ್ಲುಗಳು ಈಗಲೂ ಆರಂಭದ ಕಲ್ಲುಗಳಾಗೇ ಉಳಿದಿವೆ. ಬಹುಶಃ ಆ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿರುವುದರಿಂದ ಅದಕ್ಕೆ ತಾಗಿದಂತೆ ಊರು ಬೆಳೆದಿಲ್ಲವೆನ್ನಿಸುತ್ತದೆ…

ಅಲ್ಲಿಂದ ಮುಂದೆ ಸಾಗಿದರೆ ಎಡಬದಿಯಲ್ಲಿದ್ದ ನಾಲ್ಕು ಜನರ ಸಮಾಧಿಯಾದ ಒಬೆಲಿಸ್ಕ್ ಟೂಂಬ್ ಇತ್ತು. ಅದು ಶ್ರೀಸಾಮಾನ್ಯನ ಸಮಾಧಿಯಾದ್ದರಿಂದ ಸರಳವಾಗಿ ಕಲ್ಲಿನಲ್ಲಿ ಕೆತ್ತಿದ ನಾಲ್ಕು ಕಂಭಗಳು ಮಾತ್ರ ಇದ್ದವು. ಅರೆಬರೆ ಕೆತ್ತಿದಂತಿದ್ದ ಮುಖವು ಆ ಕುಟುಂಬದ ಯಜಮಾನನದ್ದಾಗಿದ್ದು, ಒಟ್ಟಿನಲ್ಲಿ ಅಲ್ಲಿ ಐದು ಜನರ ಸಮಾಧಿ ಇದೆಯಂತೆ. ಅದರ ಕೆಳಗಿನ ಗುಹೆಯಲ್ಲಿ ಸತ್ತವನ ಕರ್ಮಗಳನ್ನು ಮಾಡಿ, ಊಟ ಮಾಡುತ್ತಿದ್ದರಂತೆ. ಹಾಗಾಗಿ ಎಲ್ಲವೂ ಬಂಡೆಯಲ್ಲಿ ಕೊರೆದು ಮಾಡಿದ್ದೇ.

ಹಾಗೆ ನೋಡಿದರೆ ಪೆಟ್ರಾದಲ್ಲಿ ಕೊರೆದಿರುವುದೇ ಹೆಚ್ಚು, ಕಟ್ಟಿರುವುದು ಬಹಳ ಕಡಿಮೆ ಎನ್ನಬೇಕು.

ಹಾಗೆಯೇ ಇನ್ನೊಂದು ಸ್ವಲ್ಪ ದೂರ ನಡೆವುದರಲ್ಲಿ ಮಹಮ್ಮದ್ ಬಲಬದಿಯಲ್ಲಿದ್ದ ಸುರಂಗ ತೋರಿಸಿದ. ಈ ಕಾಲಘಟ್ಟದಲ್ಲಿ ನೋಡಿದರೆ ಸಾಮಾನ್ಯ ಅನ್ನಿಸಬಹುದಾದಂಥ ಸುರಂಗವಾದರೂ, ನೆಬಾಟಿಯನ್ ಪ್ರಪಂಚ ಅದನ್ನು ಸೃಷ್ಟಿಸಿದ ಕಾಲಘಟ್ಟ ನೆನೆಸಿಕೊಂಡರೆ ಆ ಸುರಂಗ ಅದ್ಭುತಗಳಲ್ಲಿ ಒಂದು ಎನ್ನಿಸುತ್ತದೆ! ಧಿಡೀರ್ ಪ್ರವಾಹವನ್ನು ತಡೆಗಟ್ಟಲು ನೆಬಾಟಿಯನ್ನರು ಬಂಡೆಯಲ್ಲಿ ಕೊರೆದ ಎರಡು ಸಾವಿರ ವರ್ಷಗಳ ಹಿಂದಿನ ಸುರಂಗ ಮಾರ್ಗವದು! 1963ರ ಧಿಡೀರ್ ಪ್ರವಾಹದಲ್ಲಿ 27 ಜನ ಪ್ರವಾಸಿಗರು ಕೊಚ್ಚಿಕೊಂಡು ಹೋದ ನಂತರ ಜೋರ್ಡಾನ್ ಸರಕಾರವು ಈಗಿರುವ ಈ ಸುರಂಗವನ್ನು ನಿರ್ಮಿಸಿದೆಯಾದರೂ, 2000 ವರ್ಷಗಳ ಕೆಳಗೆ ಆ ಮರುಭೂಮಿಯಲ್ಲಿ ಬಂಡೆ ಕೊರೆದು 80 ಮೀಟರ್ ಉದ್ದದ ಆ ಸುರಂಗ ನಿರ್ಮಾಣ ಮಾಡುವುದೆಂದರೆ ನಿಜಕ್ಕೂ ತಮಾಷೆಯ ಮಾತಲ್ಲ.

ಅಲ್ಲಿಂದ ಸಾಗಿದ ನೀರು ಆ ಕೊನೆಯಲ್ಲಿ ಕಟ್ಟಿರುವ ಅಣೆಕಟ್ಟನ್ನು ಸೇರಿ ಇಡೀ ಪೆಟ್ರಾ ನಗರವನ್ನು ಸಲಹುವ ಮುನ್ನೋಟ ಇದ್ದ ಆ ಅರಬ್ಬರಿಗೊಂದು ಸಲಾಮ್ ಹಾಕಬೇಕು ಅನ್ನಿಸಿತು. ಈಗಲೂ ಆ ಸುರಂಗದ ಮಾರ್ಗವಾಗಿ ಸಾಗಿ ಮತ್ತೊಂದು ತುದಿ ತಲುಪಬಹುದು, ಸ್ವಲ್ಪ ಮುನ್ನೆಚ್ಚರಿಕೆಯೊಡನೆ ಎಂದ ಮಹಮ್ಮದ್. ಆದರೆ ಇರುವ ಒಂದು ದಿನದ ಸಮಯದಲ್ಲಿ ಅದೆಲ್ಲ ಸಾಹಸಕ್ಕಿಳಿಯುವುದು ಅಸಾಧ್ಯದ ಮಾತಾಗಿರುವುದರಿಂದ ಸುಮ್ಮನೆ ಮುನ್ನಡೆದೆವು.

ಹೀಗೆ ಮಾತಾಡುತ್ತ ನಡೆಯುತ್ತಿರುವಾಗಲೇ ಅದ್ಯಾವ ಮಾಯದಲ್ಲಿ ‘ಸಿಕ್’ ಎಂದು ಕರೆಸಿಕೊಳ್ಳುವ ಬಂಡೆಗಳ ನಡುವಣ ಕೊರಕಲು ಧುತ್ತೆಂದು ನಮ್ಮೆದುರು ಪ್ರತ್ಯಕ್ಷವಾಯಿತು?! ನಮ್ಮ ಸಿನೆಮಾಗಳಲ್ಲಿ ಬಾಗಿಲೆದುರು ಗರುಡಗಂಭದ ಹಾಗೆ ಯಾರೋ ನಿಂತಿದ್ದರೂ ಕಾಣದ ಹಾಗೆ ಉಳಿದಿಬ್ಬರು ಗುಟ್ಟು ಮಾತಾಡಿಕೊಳ್ಳುತ್ತಾರಲ್ಲ, ಅದನ್ನು ನೋಡಿ ‘ಎದುರಿಗಿರೋದು ಅದು ಹೇಗೆ ಕಾಣಲ್ಲ’ ಎಂದು ನಗುತ್ತಿದ್ದೆ. ಆದರೆ ಅದು ಸಾಧ್ಯವಿದೆ ಅಂತ ನಂಬುವ ಸಮಯ ಸನ್ನಿಹಿತವಾಗಿತ್ತು!  ಆ ಬೃಹದಾಕಾರದ ಬಂಡೆಗಳು ಎದುರಾದದ್ದು ಅರಿವಾಗಲಿಲ್ಲ ಅಂದರೆ ಅದೆಂಥ ವಿಚಿತ್ರ!

ಈಗ ಇದ್ದಕ್ಕಿದ್ದಂತೆ ಬೃಹದಾಕಾರದ ಬಂಡೆಗಳ ಮಧ್ಯದಲ್ಲಿ ನಾನೆಂಬ ಐದೂಮುಕ್ಕಾಲು ಅಡಿಗೂ ಮೀರಿದ ದೇಹ ತೃಣಮಾತ್ರವಾಗಿ ನಿಂತಿದ್ದೆ! ಜೈಪುರದ ಕಲ್ಲಿನ ಬಣ್ಣವನ್ನೇ ಹೋಲುವ ಕಲ್ಲುಗಳ ಕೊರಕಲಿನ ಒಳಗೆ ಕಾಲಿಟ್ಟಾಗ ಅದು ನನ್ನನ್ನು ಒಂದು ನಿಗೂಢ ಜಗತ್ತಿನೆಡೆಗೆ ಕರೆದುಕೊಂಡು ಹೋಗುತ್ತದೇನೋ ಅನ್ನುವಂತೆ ಭಾಸವಾಯಿತು. ಎರಡು ಸಾವಿರ ವರ್ಷಗಳ ಹಿಂದಿನ ಹಾದಿ…! ಪೆಟ್ರಾದ ಬಗ್ಗೆ ಒಂದು ಮಾತಿದೆ ‘ಎ ಸಿಟಿ ಆಸ್ ಓಲ್ಡ್ ಆಸ್ ಟೈಮ್’ ಎಂದು. ಆ ಮಾತು ಎಷ್ಟು ಸತ್ಯ! ನಿಜವಾಗಿ ಹೇಳಲಾ? ಈ ಕೊರಕಲಿನಲ್ಲಿ ನಡೆವ ಒಂದೇ ಅನುಭವಕ್ಕಾಗಿ ಈವರೆಗೆ ಬದುಕಿದ್ದೂ ಸಾರ್ಥಕ ಅನ್ನಿಸಿಬಿಟ್ಟಿತು ಆ ಕ್ಷಣಕ್ಕೆ. ಆ ಹಾದಿಯಲ್ಲಿ ನನ್ನ ಮುತ್ತಾತಂದಿರ, ಮುತ್ತಾತಂದಿರ ಮುತ್ತಾತಂದಿರ ಮುತ್ತಾತಂದಿರಷ್ಟು …. ಉಫ್! ಬಿಡಿ, ನನಗೆ ಲೆಕ್ಕ ತಪ್ಪುತ್ತಿದೆ. ಒಟ್ಟಿನಲ್ಲಿ ಮೂವತ್ತು, ಮೂವತ್ತೈದು ತಲೆಮಾರಿನಷ್ಟು ಹಿಂದಿನ ಜನ ಅಲ್ಲಿ ಓಡಾಡಿದ್ದರು ಅಂದರೆ ಸಾಕಲ್ಲವೇ ಆ ಕ್ಷಣದ ಆ ರೋಮಾಂಚನಕ್ಕೆ!

ಆ ಕೊರಕಲಿನಲ್ಲಿ ಕಾಲಿಟ್ಟ ಕೂಡಲೇ ಚಳಿಗಾಲದಲ್ಲೂ ಚರ್ಮ ಸುಡುತ್ತಿದ್ದ ಬಿಸಿಲು ನನ್ನೆಡೆಗೆ ತಲುಪದಂತೆ ಇಡೀ ಆಕಾಶ ನನ್ನಿಂದ ಮರೆಯಾಗಿ ಸಣ್ಣಗೆರೆಯಾಗಿ ಹೋಯಿತು!

ಅಲ್ಲಿಂದ ಮುಂದಿನ ಒಂದು ಕಿಲೋಮೀಟರ್ ದೂರದ ಹಾದಿಯಲ್ಲಿ ನೀರು ಸಾಗಲು ಬಂಡೆಯಲ್ಲಿ ಕೊರೆದಿದ್ದ ಗುಳಿ, ಅಲ್ಲಲ್ಲಿ ನೀರು ಶೇಖರವಾಗಲು ತೋಡಿದ್ದ ಪುಟ್ಟಪುಟ್ಟ ತೊಟ್ಟಿಗಳು, ಬಂಡೆಗಳ ನಡುವಲ್ಲಿ ಅಲ್ಲಲ್ಲಿ ಬೆಳೆದಿದ್ದ ಮರಗಳು, ಬಂಡೆಗಳಲ್ಲಿ ಕೊರೆದಿದ್ದ ದೇವರ ಕಂಭಗಳು, ನಮ್ಮ ತ್ರಿಮೂರ್ತಿಗಳಂತೆ ಮೂರು ಮೂರಾಗಿ ಕೆತ್ತಿದ್ದ ಕಂಭಗಳ ದೇವರು, ವಧು-ವರರನ್ನು ಅಕ್ಕ ಪಕ್ಕ ನಿಲ್ಲಿಸಿ ಮದುವೆ ಮಾಡಲು ಕೊರೆದ ಬಂಡೆಗಳ ನಡುವಣ ಜಾಗ (ನಮ್ಮ ಗೈಡ್ ಮಹಮ್ಮದ್ ಹೇಳುತ್ತಿದ್ದ – ವ್ಯಾಪಾರಿಗಳು ಸಾಗಿಹೋಗುವ ಹಾದಿಯಲ್ಲಿ ಮದುವೆ ಮಾಡಿಸುವ ಸಾಧ್ಯತೆ ಇದೆಯಾ ಅನ್ನುವ ಅನುಮಾನವೂ ಇತ್ತೀಚೆಗೆ ಹುಟ್ಟಿ, ಅದು ಸುಧೀರ್ಘ ವ್ಯಾಪಾರದ ಪ್ರಯಾಣದ ಒಳಿತಿಗೆ ಪ್ರಾಣಿ ಬಲಿ ಕೊಡಲು ನಿಗದಿಯಾಗಿರುವ ಜಾಗವೂ ಇರಬಹುದಾ ಎನ್ನುವ ದಿಕ್ಕಿನಲ್ಲೂ ಯೋಚಿಸುತ್ತಿದ್ದಾರೆ ಎಂದು), ಅಲ್ಲಲ್ಲಿ ಅನೂಹ್ಯವಾದ ಯಾವುದೋ ಗುಹೆಗೆ ಕರೆದೊಯ್ಯಲು ಕೆತ್ತಿದಂತಿದ್ದ ಮೆಟ್ಟಿಲುಗಳು … ಎಲ್ಲವನ್ನೂ  ನೋಡುತ್ತ ನಡೆದೆವು.

ಪ್ರವಾಸಿಗರ ಸಂಖ್ಯೆ ತೀರಾ ಹೆಚ್ಚಿಲ್ಲದಿದ್ದರಿಂದ ಅಲ್ಲಲ್ಲಿ ಮಧ್ಯದ ಕೆಲವು ತಿರುವುಗಳಲ್ಲಿ ಅಚಾನಕ್ ಲಭಿಸುವ ಏಕಾಂತದ ಸುಖವನ್ನು ಹೇಗೆ ವರ್ಣಿಸಲಿ ಅನ್ನುವುದೇ ಅರ್ಥವಾಗುತ್ತಿಲ್ಲ. ಆ ಸುಖದ ಅಮಲಿನಲ್ಲಿರುವಾಗಲೇ ಇದ್ದಕ್ಕಿದ್ದಂತೆ ತೀರಾ ಕಿರಿದಾಗಿ ಬಿಡುವ ಭಾಗಗಳಲ್ಲಿ ಸಾಗುತ್ತಿರುವಾಗಲೇ ಯಾವುದೋ ತಿರುವಿನಲ್ಲಿ ಕುದುರೆಗಾಡಿಯೊಂದು ಸಮೀಪಿಸುತ್ತಿರುವ ಸದ್ದು ಆ ಬಂಡೆಗಳ ನಡುವೆ ನೂರ್ಮಡಿಯಾಗಿ ಪ್ರತಿಧ್ವನಿಸಿ, ‘ಅಯ್ಯೋ ಗಾಡಿ ನಮ್ಮ ಮೇಲೆಯೇ ಏರಿ ಹೋಗಿಬಿಡುತ್ತದಾ’ ಅನ್ನುವ ಗಾಬರಿಯಲ್ಲಿ ಬಂಡೆಗೆ ದೇಹ ಒತ್ತಿ ನಿಲ್ಲುವುದರಲ್ಲಿ ಒಂದು, ಒಂದೂವರೆ ಅಡಿಗಳ ಅಂತರದಲ್ಲಿ ಗಾಡಿ ಸರಿದು ಹೋಗಿರುತ್ತಿತ್ತು. ಅದಾದ ನಂತರವೂ ಎಷ್ಟೋ ಹೊತ್ತಿನವರೆಗೂ ಕಿವಿಯಲ್ಲಿ ಮೊರೆಯುವ ಆ ಸದ್ದು ನಿಜಕ್ಕೂ ಕೇಳಿಸುತ್ತಿದೆಯೋ ಅಥವಾ ಕಳೆದುಹೋದ ಸವಿದಿನಗಳ ನೆನಪು ಎದೆಯಲ್ಲಿ ಉಳಿದಂತೆ, ಇದೂ ಕಿವಿಯಲ್ಲಿ ಉಳಿದುಹೋಗಿದೆಯಾ ಅನ್ನುವ ಅನುಮಾನ ಹುಟ್ಟುಹಾಕುತ್ತಿತ್ತು. ನನಗೀಗ ಸಧ್ಯದ ಕ್ಷಣದಲ್ಲಿ ಕಾಡುತ್ತಿರುವ ತೀವ್ರ ವಿಷಾದವೆಂದರೆ ಆ ಅನುಭವವನ್ನು ಪದಗಳಲ್ಲಿ ಕಟ್ಟಲು ನನ್ನಿಂದಾಗುತ್ತಿಲ್ಲವಲ್ಲ ಅನ್ನುವುದು ಮಾತ್ರ.

ಹೀಗೆ ನಡೆಯುವುದರಲ್ಲೇ ಪುರಾತನ ಕಾಲದ ಗುಂಗಿನಿಂದ ಹೊರಗೆಳೆಯುವ ಹಾಗೆ ಜನರ ಗಲಾಟೆ ಕಿವಿಗೆ ಬೀಳಲು ಶುರುವಾಯಿತು … ಜೊತೆಜೊತೆಗೆ ಬಂಡೆಗಳ ಕೊರಕಲಿನ ತುದಿಯಲ್ಲಿ ಸೂರ್ಯನ ಪ್ರಖರ ಬೆಳಕು ಇಣುಕಲಾರಂಭಿಸಿತು. ನೋಡನೋಡುತ್ತಿರುವಂತೆಯೇ ಅವತ್ತು ಟಿವಿಯಲ್ಲಿ ನನ್ನ ಗಂಡ ತೋರಿಸಿದ ‘ಅಲ್ ಖಾಜ಼್ನೆ’ (ಟ್ರೆಷರಿ ಹೌಸ್) ಆ ಕಿಂಡಿಯಲ್ಲಿ ಸ್ವಲ್ಪಸ್ವಲ್ಪವಾಗಿ ತೆರೆದುಕೊಳ್ಳಲಾರಂಭಿಸಿತು! ನಾನು ಉದ್ವೇಗಕ್ಕೊಳಗಾದವಳಂತೆ ಮೊದಲ ರಾತ್ರಿಯಲ್ಲಿ ಹೀರೋಯಿನ್ ತಲೆಯ ಮೇಲಿನ ಘೂಂಘಟ್ ಸರಿಸುತ್ತಾನಲ್ಲ ಹೀರೋ, ಥೇಟ್ ಅದೇ ರೀತಿ ಸ್ವಲ್ಪಸ್ವಲ್ಪವಾಗಿ ನನ್ನೆದುರು ಅನಾವರಣಗೊಳ್ಳುತ್ತಿರುವ ಟ್ರೆಷರಿಯೆಡೆ ಓಡುನಡಿಗೆಯಲ್ಲಿ ಹೆಜ್ಜೆ ಹಾಕಿದೆ!

ನೂರು ಹೆಜ್ಜೆಯಷ್ಟು ನಡೆದ ನಂತರ ನನ್ನೆದುರು ಬಿಸಿಲಿಗೆ ಚಿನ್ನದಂತೆ ಹೊಳೆಯುವ ಅಲ್ ಖಾಜ಼್ನೆ ನಿಂತಿತ್ತು. ಕುತ್ತಿಗೆ ಪೂರ್ತಿ ಎತ್ತಿ ನೋಡಬೇಕು ಅಲ್ ಖಾಜ಼್ನೆಯ ತುದಿಯನ್ನು ಮುಟ್ಟಲು! ಮತ್ತೂ ಒಂದು ಆಶ್ಚರ್ಯಕರ ವಿಷಯವೆಂದರೆ ಅಲ್ಲಿಯವರೆಗೆ ಅಲ್ಲಿ ಅಷ್ಟು ದೊಡ್ಡದಾದ ಜಾಗ ಇರಬಹುದು ಎಂಬ ಊಹೆಯೂ ಇರಲಿಲ್ಲ. ಕೆಂಪು ಮಣ್ಣಿನಿಂದಾವೃತವಾದ ವಿಶಾಲ ಆವರಣ, ಗಿಜಿಗುಡುತ್ತಿದ್ದ ಪ್ರವಾಸಿಗರು, ಕಣ್ಣಿಗೆ ಕಾಡಿಗೆ ಹಚ್ಚಿದ ಸೆಕ್ಸಿ ಅರಬ್ ಒಂಟೆ ಸವಾರರು, ವ್ಯಾಪಾರಿಗಳು, ಪೋರ್ಸಲೀನ್‌‌ನಂಥ ತೆಳು ಗುಲಾಬಿ ಬಣ್ಣದ ನಾಜೂಕಿನ ಕುಸುರಿ ಕಲೆಯಂಥ ಹೆಂಗಸರು, ಕಸೂತಿಯ ಮೇಲ್ವಸ್ತ್ರ ಬೆನ್ನ ಮೇಲೆ ಹೊತ್ತು ಮೆಲುಕು ಹಾಕುತ್ತಾ ಕೂತಿದ್ದ ಒಂಟೆಗಳು … ಹಾಯ್! ಇಡೀ ವಾತಾವರಣದ ತುಂಬ ಬರೀ ಸೌಂದರ್ಯವೇ!

ಸಿಕ್‌ನ ಕೊನೆಯಲ್ಲಿ ನಿಂತು ನೋಡಿದಾಗ ಅಲ್ ಖಾಜ಼್ನೆ ಎತ್ತರವಾಗಿ ಕಂಡಿತಾದರೂ, ಅದರೆಡೆಗೆ ಹೆಜ್ಜೆ ಹಾಕತೊಡಗಿದಾಗ ನಾನು ಎಣಿಸಿದ್ದಕ್ಕಿಂತ ಅದಿನ್ನೂ ಬೃಹತ್ತಾಗಿದೆ ಎನ್ನುವುದು ಅರಿವಿಗೆ ಬಂದಿತು. ಕಾಂಬೋಡಿಯಾ ಮತ್ತು ಲಡಾಕ್‌ನಲ್ಲಿ ಅನುಭವಿಸಿದ್ದ ಅಗಾಧತೆ ಮತ್ತೊಮ್ಮೆ ಅನುಭವಕ್ಕೆ ಬರುತ್ತಿತ್ತು!

ಹತ್ತಿರಹತ್ತಿರ ಹೋದಂತೆ ಒಂದೊಂದು ಕಂಭ, ಕೆತ್ತನೆ ಕೂಡಾ ಕಣ್ಣಿನ ದೃಷ್ಟಿಗೆ ಹಿಡಿಯಲಾಗದಷ್ಟು ಎತ್ತರೆತ್ತರಕ್ಕೆ! 127 ಅಡಿ ಎತ್ತರದ ಈ ಕಟ್ಟಡ ಕೂಡ ಕಟ್ಟಿದ್ದಲ್ಲ, ಕಲ್ಲಿನಲ್ಲಿ ಕೊರೆದಿದ್ದು. ಮಹಮ್ಮದ್ ಹೇಳುತ್ತಿದ್ದ ‘ಎಲ್ಲ ಕಟ್ಟಡಗಳನ್ನೂ ನೀವು ಕೆಳಗಿನಿಂದ ಮೇಲಕ್ಕೆ ಕಟ್ಟುತ್ತೀರಲ್ಲ, ಇದನ್ನು ಮೇಲಿನಿಂದ ಕೆಳಗೆ ಕೊರೆಯಲಾಗಿದೆ’ ಎಂದು! ಅಸಮ ಬಂಡೆಯೊಂದನ್ನು ಮೇಲಿನಿಂದ ಕೆಳಗೆ ಈ ರೀತಿ ಸಮರೂಪದಲ್ಲಿ (symmetrical) ಕೊರೆಯುವುದು ಹೇಗೆ ಅನ್ನುವುದೇ ನನಗೆ ಅರ್ಥವಾಗಲಿಲ್ಲ.

ಆತುರದಿಂದ ಟ್ರೆಷರಿಯ ಕಡೆ ಹೆಜ್ಜೆ ಹಾಕುವಾಗ ಮಹಮ್ಮದ್ ‘ಒಳಗೆ ಬಿಡುವುದಿಲ್ಲ. ಬ್ಯಾರಿಕೇಡ್ ಹಾಕಿದ್ದಾರೆ’ ಎಂದು ಕೂಗಿದ. ಉಕ್ಕಿಹರಿವ ಉತ್ಸಾಹ ಒಮ್ಮೆಲೇ ನೆಲ ಕಚ್ಚಿತು. ‘ಯಾಕೆ?!!’ ಎಂದೆ ಅರ್ಥವಾಗದೇ. ‘ಪ್ರವಾಸಿಗರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತೀರಾ ಹೆಚ್ಚಿದೆ. ಜೋರ್ಡಾನಿನಂಥ ಬಡದೇಶಕ್ಕೆ ಪ್ರವಾಸೋದ್ಯಮವೇ ಅನ್ನದ ಮಾರ್ಗ. ಆದರೆ ಈ 2000 ವರ್ಷಗಳಷ್ಟು ಹಳೆಯದಾದ ಕಟ್ಟಡಗಳಿಗೆ ಈ ಪರಿಯ ಪ್ರವಾಸಿಗರ ಹರಿವನ್ನು ತಾಳಿಕೊಳ್ಳುವ ಶಕ್ತಿ ಇಲ್ಲ. ಗೋಡೆಗಳ ಮೇಲೆ ಮತ್ತು ಕಂಭಗಳ ಮೇಲೆ ಕೈನಿಂದ ಮುಟ್ಟಿ ತುಂಬ ಕಡೆ ಬಂಡೆಗಳು ಶಿಥಿಲಗೊಳ್ಳುತ್ತಿವೆ. ಹಾಗಾಗಿ ಒಳಗೆ ಬಿಡುವುದಿಲ್ಲ’ ಎಂದು ವಿವರಿಸಿದ.

ಹೌದು, ಪುಟ್ಟಣ್ಣ ಕಣಗಾಲರ ನಾಗರಹಾವು ಸಿನೆಮಾದಿಂದ ಚಿತ್ರದುರ್ಗದ ಕೋಟೆ ಹೀರೋ ಪಟ್ಟಕ್ಕೇರಿದೆಯಲ್ಲ, ಅದೇ ರೀತಿ ಸ್ಪೀಲ್‌ಬರ್ಗ್‌ನ ‘ಇಂಡಿಯಾನಾ ಜೋನ್ಸ್ ಅಂಡ್ ದಿ ಲಾಸ್ಟ್ ಕ್ರುಸೇಡ್’ ನಿಂದ ಪೆಟ್ರಾಗೆ ಬರುವ ಪ್ರವಾಸಿಗರ ಸಂಖ್ಯೆ ಹುಚ್ಚುಚ್ಚಾಗಿ ಏರಿದೆ.

ಸೆಕ್ಸಿ ಒಂಟೆಗಳೂ.. ಸುರಮಾ ಕಣ್ಣಿನ ಸವಾರರೂ..

ಪೆಟ್ರಾದ ಪುರಾತನತೆಯೇ ಅದರ ವಿಶಿಷ್ಟತೆ. ಹಾಗಾಗಿ ಈ ರೀತಿಯ ರೂಲ್ಸ್ ಮಾಡಲೇ ಬೇಕಾಗುತ್ತದೆ ಮತ್ತು ಅನಿವಾರ್ಯವಾಗಿ ನಾವು ಅದನ್ನು ಫಾಲೋ ಮಾಡಲೇ ಬೇಕಾಗುತ್ತದೆ. ನಿಜಕ್ಕೂ ಹೇಳಬೇಕೆಂದರೆ ಅಲ್ ಖಾಜ಼್ನೆಯ ಒಳಾವರಣ ಅಂಥ ಚೆಂದವೇನೂ ಇಲ್ಲ, ಹೊರಗಿನ ಭಾಗವೇ ಹೆಚ್ಚು ಸುಂದರ ಎಂದು ಸಮಾಧಾನ ಪಡಿಸಿದ ಮಹಮ್ಮದ್. ಅದು ಸುಳ್ಳೋ, ನಿಜವೋ ಗೊತ್ತಿಲ್ಲ ಆದರೆ ಆ ನಿಮಿಷಕ್ಕೆ ಖುಷಿಯನ್ನಂತೂ ಕೊಟ್ಟಿತು!

ಅಲ್ ಖಾಜ಼್ನೆಯನ್ನು ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದ ಕ್ರಿಸ್ತಶಕ ಎರಡನೆಯ ಶತಮಾನದಲ್ಲಿ ಕೆತ್ತಿರಬಹುದು ಎಂದು ಊಹಿಸಲಾಗಿದೆ. ಈ ಕಟ್ಟಡ ಮೊದಲಿಗೆ ಗೋರಿ ಅಥವಾ ದೇಗುಲವಾಗಿತ್ತೆಂದು ಊಹಿಸಲಾಗುತ್ತದೆ. ಕೆಳ ಅಂತಸ್ತಿಗೆ ಹೋಗುವ ಮೆಟ್ಟಿಲುಗಳನ್ನು ಇಳಿದು ಹೋದರೆ ಅಲ್ಲಿ ಸ್ನಾನ ಮಾಡಿಸಿ ಪವಿತ್ರವಾಗಿಸುವಂಥ ಒಂದು ಕಟ್ಟೆ ಇದೆಯಂತೆ. ಹಾಗಾಗಿ ಇದು ಗೋರಿಯಾಗಿದ್ದಿರಬಹುದು ಎಂದು ಊಹಿಸಲಾಗುತ್ತದೆ. ಇದನ್ನು ನೆಬಾಟಿಯನ್ನರ ದೇವರಾದ ದುಶಾರನ ದೇಗುಲ ಇರಬಹುದು ಎಂದೂ ಹೇಳುತ್ತಾರೆ. ಆದರೆ ಅದರ ಮೇಲೆ ಕೆತ್ತಿರುವ ಕೆತ್ತನೆಗಳನ್ನು ನೋಡಿದರೆ ಅದು ಸಾವಿನ ನಂತರದ ಪ್ರಪಂಚಕ್ಕೆ ಸೇರಿರುವುದರಿಂದ ಅದು ಗೋರಿಯೇ ಇದ್ದಿರಬಹುದು ಎನ್ನುವ ವಾದಕ್ಕೆ ಪುಷ್ಟಿ ದೊರಕುತ್ತದೆ.

ಆದರೆ ಗೋರಿಗೆ ಯಾಕೆ ಟ್ರೆಷರಿ ಅನ್ನುವ ಹೆಸರು ಯಾಕೆ ಬಂದಿತು ಅನ್ನುವುದು ಯಾರಿಗೂ ಗೊತ್ತಿಲ್ಲ. ಒಂದು ಊಹೆಯ ಪ್ರಕಾರ ದರೋಡೆಕೋರರು ತಾವು ಲೂಟಿ ಹೊಡೆದದ್ದನ್ನು ಇಲ್ಲಿ ಬಚ್ಚಿಡುತ್ತಿದ್ದರಿಂದ ಆ ಹೆಸರು ಬಂದಿರಬಹುದು ಎನ್ನುತ್ತಾರೆ. ಇನ್ನು ಕೆಲವರು ಇದು ರಾಜವಂಶಸ್ಥರ ಸಮಾಧಿ ಸ್ಥಳವಾಗಿದ್ದರಿಂದ ಇಲ್ಲಿ ಚಿನ್ನ, ಹಣವನ್ನು ಹೂತಿಟ್ಟಿರಬಹುದು ಎನ್ನುವ ಊಹೆಯ ಮೇಲೆ ಆ ಹೆಸರು ಬಂದಿರಬಹುದು ಎಂತಲೂ ಹೇಳುತ್ತಾರೆ.

ಅದೇನಾದರೂ ಇರಲಿ, ಆದರೆ ಈ ಹೆಸರಿರುವ ಕಾರಣಕ್ಕೆ ಅದು ಅನುಭವಿಸಿದ ಕಷ್ಟ ಪಾಪ ಅಷ್ಟಿಷ್ಟಲ್ಲ. ಟ್ರೆಷರಿ ಹೌಸ್ ಅಂತ ಹೆಸರಿದ್ದ ಮೇಲೆ ಟ್ರೆಷರಿ ಇಲ್ಲದಿರುತ್ತದೆಯೇ ಅನ್ನುವ ಲಾಜಿಕ್ ಅಲ್ಲಿನ ಸ್ಥಳೀಯ ಬೆಡೋಯಿನ್ ಜನಾಂಗದವರದ್ದು. ದೇ ಆರ್ ರೈಟ್ ಅಲ್ಲವಾ?! ಅದಕ್ಕೆ ಸರಿಯಾಗಿ ಹೊರಮೈನಲ್ಲಿ ಕೆತ್ತಿರುವ ಹೂಜಿಯ ಒಳಗೆ ಚಿನ್ನ ಅಡಗಿಸಿಟ್ಟಿದ್ದಾರೆ ಅನ್ನುವ ಊಹಾಪೋಹ ಬೇರೆ ಹರಡಿಕೊಂಡಿದೆ! ಹಾಗಾಗಿ ಗೋಡೆಗಳ ತುಂಬ ಇದನ್ನು ಲಪಟಾಯಿಸಲು ಯತ್ನಿಸಿದ ಈಗಿನ ಜನಾಂಗದವರಾದ ಬೆಡೋಯಿನ್ನರು ಹೊಡೆದ ಗುಂಡುಗಳಿಂದ ಆದ ಅನೇಕ ತೂತುಗಳು ಕಾಣಿಸುತ್ತವೆ. ‘ಹೆಸರಿನಲ್ಲಿ ಏನಿದೆ ಅಂದ ಶೇಕ್ಸ್‌ಪಿಯರ್ ಮಹಾಶಯ, ಕೇಳಿಸಿಕೊ ಈ ಮಾತನ್ನು’ ಅಂದುಕೊಂಡೆ ಮನಸ್ಸಿನಲ್ಲೇ!

ಅಲ್ ಖಾಜ಼್ನೆ ಕಾಲನ ತುಳಿತಕ್ಕೆ ಸಿಕ್ಕಿ ತುಂಬ ಜೀರ್ಣವಾಗಿಹೋಗಿದೆ. ಅದರ ಮೇಲಿನ ಕೆತ್ತನೆಗಳಲ್ಲಿ ಹಲವಾರು ಮಾಸಿಹೋಗಿವೆ.  ಉರುಳಿಬಿದ್ದ ಒಂದು ಕಂಭವನ್ನು ಮತ್ತೆ ಜೀರ್ಣೋದ್ದಾರಗೊಳಿಸಿ ನಿಲ್ಲಿಸಲಾಗಿದೆ. ಕಂಭಗಳು ರೋಮನ್, ಕಂಭಗಳ ಮೇಲ್ಭಾಗವು ಗ್ರೀಕ್, ಅದರ ಮೇಲಿನ ಕೆತ್ತನೆಗಳಲ್ಲಿ ಕೆಲವು ಈಜಿಪ್ಷಿಯನ್ನರ ಶೈಲಿಯಲ್ಲಿದೆ. ಈ ರೀತಿ ರೋಮನ್ ಪ್ರಭಾವ ಇರುವುದರಿಂದ ಇದು ರೋಮನ್ನರು ಪೆಟ್ರಾವನ್ನು ವಶಪಡಿಸಿಕೊಂಡ ನಂತರ ಕಟ್ಟಿದ್ದು ಎನ್ನುವ ಊಹೆಯೂ ಇದೆ.

ಆದರೆ ನಮ್ಮ ಸಾರಥಿ ಯೂಸುಫ್ ನೋಡಿದ National Geographic Channelನ ಡಾಕ್ಯುಮೆಂಟರಿಯ ಪ್ರಕಾರ ನೆಬಾಟಿಯನ್ನರು ಈ ಮಾರ್ಗವಾಗಿ ಹೋಗುತ್ತಿದ್ದ ವ್ಯಾಪಾರಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರ ವಾಸ್ತುಶಿಲ್ಪದ ಮಾದರಿಗಳನ್ನೆಲ್ಲ ಒಳಗೊಂಡ ಅಲ್ ಖಾಜ಼್ನೆ ಕೆತ್ತಿದರು ಎನ್ನುವ ಮಾತಿದೆಯಂತೆ. ಅತ್ಯಂತ ಪುರಾತನ ಕಾಲಕ್ಕೆ ಸೇರಿದ್ದು ಅನ್ನುವ ಕಾರಣ ಮತ್ತು ಯಾವುದರ ಬಗ್ಗೆಯೂ ಬರಹದಲ್ಲಿ ಏನೂ ದಾಖಲಾಗಿಲ್ಲದ ಕಾರಣ ಯಾವುದು ಲಾಜಿಕಲ್ ಆಗಿ ಕಾಣುತ್ತದೋ ಆ ವಾದವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಅಷ್ಟೇ.

। ಇನ್ನು ನಾಳೆಗೆ ।

‍ಲೇಖಕರು avadhi

19 August, 2017

21 Comments

  1. ಸಂತೋಷ್ ಕುಮಾರ್.ಎಸ್

    ಪಟಗಳೆಲ್ಲವೂ ನೀವೇ ತೆಗೆದಿದ್ದಾ?

    • ಭಾರತಿ ಬಿ ವಿ

      ಕೆಲವು ಮಾತ್ರ ನನ್ನದು ಸಙತೋಷ್
      Aerial view ಯಾವುದೂ ನಂದಲ್ಲ

  2. K Nalla Thambi

    Wish to visit. Added in my wish list

    • ಭಾರತಿ ಬಿ ವಿ

      ನಿಮ್ಮ ಫೋಟೋಗ್ರಫಿಗೆ ಅದ್ಭುತ ತಾಣ

  3. Dr. Prabhakar M. Nimbargi

    ಎಷ್ಟೊಂದು ಸುಂದರವಾಗಿ ವರ್ಣಿಸಿದ್ದೀರಿ? ಡಾಕ್ಯೂಮೆಂಟರಿಯನ್ನು ನೋಡಿದಂತಾಗುತ್ತದೆ. ಅಲ್ಲಲ್ಲಿ ಬರುವ ಻ ಇಂತಹ ಬಾಕ್ಸುಗಳು ರಸಭಂಗ ಮಾಡುತ್ತವೆ. ಮುಂದಿನ ಸಲ ಧ್ಯಾನ ಕೊಟ್ಟರಾಯ್ತು. ಧನ್ಯವಾದ.

    • ಭಾರತಿ ಬಿ ವಿ

      ಥ್ಯಾಂಕ್ ಯು ಸರ್
      ಅದೇನು ಸರ್ ಬಾಕ್ಸ್ … ನನಗೆ ಯಾವುದೂ ಕಾಣ್ತಿಲ್ಲವಲ್ಲ , ಬಹುಶಃ ನಿಮ್ಮ ಮೊಬೈಲ್ ನಲ್ಲಿ ಮಾತ್ರ ರೀತಿ ಕಾಣಿಸುತ್ತಿರಬಹುದಾ ಅಂತ ಅಬುಮಾನ ಬಂದಿತು

  4. Lalitha siddabasavayya

    ಭಾರತಿಯವರೆ, ನಿಜವಾಗಿಯೂ ಖುಷಿ ಕೊಡುವ ಶೈಲಿ ನಿಮ್ಮದು. ಮತ್ತೆ ಓದೋಣ ಅನ್ನಿಸುತ್ತದೆ

    • ಭಾರತಿ ಬಿ ವಿ

      ಮೇಡಂ ನಿಮ್ಮಿಂದ ಇಂಥ ಮಾತು ಕೇಳಿದ್ದಕ್ಕೆ ತುಂಬ ತುಂಬ ಖುಷಿಯಾಯ್ತು. ಥ್ಯಾಂಕ್ ಯೂ

  5. Mamatha Arsikere

    ಅಕ್ಕ …
    ಎಷ್ಟು ಚಂದದ ವಿವರಣೆ
    ಹೊಟ್ಟೆಕಿಚ್ಚು

    • ಭಾರತಿ ಬಿ ವಿ

      ಥ್ಯಾಂಕ್ಸ್ ಮಮತಾ 🙂

  6. L. C. Nagaraj

    Excellent write up Barathi

    • ಭಾರತಿ ಬಿ ವಿ

      ಥ್ಯಾಂಕ್ಸ್ ಎಲ್ಸಿ!
      Thank you so much

  7. Rekha M S

    ಅದ್ಭುತ ವಿವರಣೆ..!!!! ನಿಮ್ಮ ಬರವಣಿಗೆ ನನಗೂ ಸ್ಪೂರ್ತಿಯಾಗುತ್ತಿದೆ.ನಾ ನೋಡಿದ ಉತ್ತರ ಅಮೇರಿಕಾದ ಸ್ಥಳಗಳ ಬಗ್ಗೆ ಬರೆಯಲು ಪ್ರೇರೇಪಿಸುತ್ತಿದೆ.

    • ಭಾರತಿ ಬಿ ವಿ

      ಶುರು ಮಾಡಿ ..
      ತಡ ಯಾಕೆ!

  8. Anuresh R Naik

    superb madam… nimma baravanige odidare navu alle iruva anubava basavaguthe

    • ಭಾರತಿ ಬಿ ವಿ

      ಥ್ಯಾಂಕ್ಸ್ ಅನುರೇಶ್ 🙂

  9. ಗಿರೀಶ್ ಭಟ್

    ಅಲ್ಲೆಲ್ಲೋ ಸಾವಿರಾರು ಮೈಲು ದೂರದ ಯಾವುದೋ ಜಾಗವನ್ನು ನಾವು ಇಲ್ಲಿ ಕೂತೆ ನೋಡುತ್ತಿದ್ದೇವೆ ಅನ್ನಿಸುವಂತೆ ಮಾಡುವ ಕಣ್ಣಿಗೆ ಕಟ್ಟುವ ಅಲ್ಲಲ್ಲ ಕೊರೆಯುವ ಬರವಣಿಗೆ !! ಧನ್ಯವಾದಗಳು ಮೇಡಂ

    • ಭಾರತಿ ಬಿ ವಿ

      ಥ್ಯಾಂಕ್ಸ್ ಗಿರೀಶ್

  10. Renuka

    ಚಂದದ ಬರಹ ಮ್ಯಾಮ್

    • ಭಾರತಿ ಬಿ ವಿ

      Thanks Renuka 🙂

  11. B.k.rathnaiah setty

    ವರ್ಣನೆ ಚೆನ್ನಾಗಿದೆ.
    ಸಿನಿಮಾ ವಿಷಯಗಳು ಅನಾವಶ್ಯಕ ತುರುಕಿದಂತಾಗಿದೆ.
    ಓದುಗರನಾಕರ್ಷಿಸಲು ಇಂತಾ ಎಡವಟ್ಟುಗಳು ಅನಿವಾರ್ಯವೇನೋ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading