-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 13
ಅಂದಾನಿ ಬಸವರಾಜಪ್ಪ ದಾವಣಗೆರೆಯ ಅಸಂಖ್ಯಾತ ವಕೀಲರಲ್ಲಿ ಒಬ್ಬರು. ವಕೀಲಿ ವೃತ್ತಿ ಮಾಡಲೇ ಬೇಕೂಂತೇನಿಲ್ಲ. ವಂಶಪಾರಂಪರ್ಯವಾಗಿ ಬಂದಿರ ಕಬ್ಣಾ ಸಿಮೆಂಟು ಸ್ಟೀಲು ವ್ಯಾಪಾರ ನೋಡ್ಕೊಂಡ್ರೆ ಸಾಕು. ಆದರೆ ಪಾಲಿಟಿಕ್ಸ್‌ಗೆ ಹೆಲ್ಪಾಗ್ತತೋ ಅಂತ ಅವರ ಚಿಗಪ್ಪ ಹೇಳಿದ್ದಕ್ಕೆ ವಕೀಲಿ ಪರೀಕ್ಷೆ ಪಾಸು ಮಾಡಿದ್ದರು. (ಚಿಗಪ್ಪ ಹೇಳಿದ್ದೂ ಸರಿ. ಮೋಸ್ಟಾಫ್‌ದ ಪೊಲಿಟೀಶಿಯನ್ಸ್ ಎಲ್ಲಾ ವಕೀಲ್ರೇ.)
ಶಾಸ್ತ್ರಕ್ಕೆ ಕರೀ ಕೋಟು ಹಾಕಿ ಕೋರ್ಟಿಗೂ ಹೋಗಿ ಬಂದು ಮಾಡ್ತಾಯಿದಾರೆ. ಇವರ ಲಾ ಕಾಲೇಜು ಕ್ಲಾಸ್‌ಮೇಟು ಹಳೇಬೀಡು ಸುಂದರರಾಯರು ಗೇಟಿನಾಕಡೆಗೆ ಇವರಿಗಾಗಿ ಕಾಯುತ್ತಿರುವ ಈ ಕ್ಷಣದಲ್ಲಿ ಬಸವರಾಜಪ್ಪ ಬೆಸ್ಟಾಫ್ ಥರ್ಟೀನ್ನಲ್ಲಿ ಒಂದೈನೂರತ್ತತ್ರ ಕಳಕೊಂಡು, ಒಂದೆರಡು ಆರ‍್ಸೀ ಏರಿಸಿ ಲೈಟಾಗ್ತಾಯಿದ್ದರು. ಇನ್ನೊಂದರ್ಧ ಗಂಟೇಲಿ ಮತ್ತೆ ಒಂದೈವತ್ತು ಕಳಕೊಂಡು ’ಇವತ್ತಿಗೆ ಸಾಕು’ ಅಂತ ಎದ್ರು. ಅಂದಾನಿ ಬಸವರಾಜಪ್ಪ ಆಂಡ್ ಪಾರ್ಟಿ ಎದ್ರೂ ಅನ್ನೋ ಸುದ್ದಿ ಗೇಟು ತಲುಪಿ ಹಳೇಬೀಡು ಸುಂದರರಾಯರು ತಯಾರಾದ್ರು.
ಸುದ್ದಿ ಹಳೇಬೀಡು ಸುಂದರರಾಯರನ್ನು ತಲುಪಿ ಒಂದೈದು ನಿಮಿಷಗಳು ಕಳೆದಿರಬೇಕು. ಅಂದಾನಿ ಬಸವರಾಜಪ್ಪನೋರನ್ನೂ ಅವರ ಮಿತ್ರ ಮಂಡಳಿಯನ್ನೂ ತುಂಬಿಸಿಕೊಂಡ ಅಂಬಾಸೆಡರ್ ಕಾರು ಗೇಟ್ ಬಳಿ ಬಂದಕೂಡಲೇ ಹಳೇಬೀಡು ಸುಂದರರಾಯರು ಎದುರು ನಿಂತ ಪ್ರಯುಕ್ತ ಒಮ್ಮೆ ಕೆಮ್ಮಿ, ಗುಟುರು ಹಾಕುತ್ತಲೇ ನಿಂತಿತು. ಡ್ರೈವರ್ ಮಾಡುತ್ತಿದ್ದ ಬಸವರಾಜಪ್ಪ ಕಿಟಿಕಿಯಿಂದ ಹೊರಗೆ ತಲೆ ಹಾಕಿ ’ಏನಪಾ ಸುಂದರಾ, ಯೇನು ಸಮಾಚಾರ. ಬಾಳಾ ಅಪ್ರೂಪ ಆದೆಲಪಾ.’ ಅಂದರು.
ಹಳೇಬೀಡು ಸುಂದರರಾಯರು ತಮ್ಮ ಮಾಮೂಲೀ ಶೈಲಿಯಲ್ಲಿ ಇಡೀ ದೇಹವನ್ನು ಒಂದು ಅರ್ಧ ಅಡಿಗೆ ತಂದು ಕೊಂಡು, ಒಂಥರಾ ನಕ್ಕು ಕಾರಿನೊಳಗೆ ಕಣ್ಣು ಹಾಯಿಸಿದರು. ಬಸವರಾಜಪ್ಪನೋರನ್ನೂ ಒಳಗೊಂಡು ಎಲ್ಲರೂ ಇವರನ್ನೇ ನೋಡುತ್ತಿದ್ದರು.
’ಹೇಳು ಯೇನಾತೂ-’
’ಬಸರಾಜೂ ಒನ್ ಫೇವರ್ರಾಗ ಬೇಕಿತ್ತೂ ನಿನ್ನಿಂದ-’
’ಹೇಳಪಾ. ಕೈನಗಾದ್ರೆ ಮಾಡಣಂತೆ.’
’ಯಾರ‍್ನ ಕೇಳಬೇಕೂಂತ ತಿಳೀಲಿಲ್ಲ. ಕ್ಲಾಸು ಮೇಟು ನೀನು. ನಿನ್ನ ನೆನಪಾತು. ಅದ್ಕೇ ನಿನ್ನೇ ಕೇಳಣಾ ಅಂತ. ಸಾಯಂಕಾಲ ಆರ್ರಿಂದ ನಿನ್ನ ಕಾಯ್ತೆದಿನಿ. ಇಲ್ಲಾನಬಾರದು ನೀನು.’
’ಅಯ್ಯಾ ಅದೇನು ಹೇಳೋ. ಅದೇನೋ ಅಂತಾರಲ್ಲ ಮಾತಿಗಿಂತಾ ಹೂಂಸು ಜಾಸ್ತಿ ಅಂತ. ಹಂಗೆ ಬರೇ ಪುಂಗಿ ಊತ್ತಿದಿಯಾ.’
’ಒನ್ನಾಕು ದಿಸ ನಿನ್ನ ಕೋಟು ಕೊಡ್ತೀಯಾ ಅಂತ. ಒನ್ನಾಕು ದಿಸದ ಮಟ್ಟಿಗೆ-’
ಅಂದಾನಿ ಬಸವರಾಜಪ್ಪನೋರ ಮುಖ ಗಂಟು ಗಂಟಾಯಿತು. ’ಅಲ್ಲಪಾ, ನನ್ಕೋಟು ನಿಂಗೆ ಕೊಡಬೇಕಾ. ಮದ್ಲೇ ನಿನ್ನ ನಸೀಬು ನಾಯಿ ಹೇಲು ತಿಂತಾ ಐತಿ. ಅದ್ನ ನಂಗೆ ಟ್ರಾನ್ಸ್‌ಫರ್ ಮಾಡ್ಬೇಕೂಂತೇನು ನಿನ್ನ ಪ್ಲಾನು. ನಿಂಗೆ ಕೋಟು ಕೊಟ್ಟೂ ನನ್ನೇನು ಮಣ್ಣು ತಿನ್ನೂ ಅಂತೀಯೇನು.
ಒಂದೆಲ್ಡು ವ್ಯವಾರ ಮಾಡ್ಕೆಂಡು ಸುಕವಾಗಿದೀನಿ. ಅದ್ನೂ ಮುಚ್ಚುಸ್ಬೇಕೂಂತ ಇದೀಯೇನು ನೀನು? ಅಲ್ಲ ನನ್ನ ಕೋಟಾಕ್ಕೆಂಡ್ರೆ ನೀನೇನು ನಾನಾಗಿ ಬಿಡ್ತೀಂತ ಮಾಡ್ಕೆಂಡೀಯೇನು? ನೀನು ನಾನಾಗ್ತೀಯೋ ಬಿಡ್ತೀಯೋ, ನಿನ್ನ ನಸೀಬೇನರ ನನ್ ಗಂಟು ಬಿತ್ತಂದ್ರೆ ನಾನಂತೂ ನೀನಾಗದು ಗ್ಯಾರಂಟಿ ನೋಡು. ನಿನತ್ರ ಕೋಟಿಲ್ದೇ ಹೋದ್ರೆ ಶಂಟಾ ಹೋಯ್ತು, ಯಾರಿಗೂ ಯೇನೂ ಲಾಸಿಲ್ಲ ನೋಡು. ಇಷ್ಟು ವರ್ಷ ಅದೇನು ಮಾಡ್ಕೆಂತಿದ್ಯೋ ಅದ್ನೇ ಮಾಡ್ಕೆಂಡಿರು.’
ಹಳೇಬೀಡು ಸುಂದರರಾಯರ ಮುಂದಿನ ಮಾತಿಗೂ ಕಾಯದೇ ಕಾರು ಮುಂದೆ ಉರುಳಿತು.
ಮುಂದುವರೆಯುವುದು…
]]>






0 Comments