ಸುಮತಿ ಕೃಷ್ಣಮೂರ್ತಿ
**
ಉದ್ದಕ್ಕೂ ಚಾಚಿರುವ
ಪ್ರೇಮವೆನ್ನುವ ನಭಕೆ
ನೀನಲ್ಲವೇ ಆದಿ? ನೀನೇ ಅಂತ್ಯ?
ಇರುಳು ಮುಸುಕುವ ಮನಕೆ
ಬೆಳಕು ನೀಡುವ ನೆಪದಿ
ಝಗ್ಗನೇ ಅವತರಿಸೋ ನೀನೇ ಆದಿತ್ಯ
ಕಟ್ಟುಪಾಡನು ಮೀರಿ
ಜಗದೆಲ್ಲೆ ದಾಟಿರುವ
ನಾನು ಶಾಕುಂತಲೆ ನೀನು ದುಷ್ಯಂತ
ಯಮುನೆಯ ಅಲೆ ಕೂಗಿ
ತೆರೆಗಳನು ಚಿಮ್ಮಿಸಿದೆ
ಹೊತ್ತು ಮೀರಿದ ಹೊತ್ತು ಸಿಗುವುದೇಕಾಂತ
ಅತ್ತ ಕಡೆಯಿಂದ ನೀ
ಇತ್ತ ಕಡೆಯಿಂದ ನಾ
ಬೇಡ ಎಂದರೂ ಸೆಳೆವ ಘನ ಅಯಸ್ಕಾಂತ
ಶ್ವಾಸವೆಲ್ಲವ ಬಸಿದು
ಕೊಳಲಾಗಿ ಕಾದಿರುವೆ
ನಿನ್ನಧರ ಸೋಕದಿರೆ ಹೃದಯ ವಿಭ್ರಾಂತ
ಸಂಜೆಯಾದರೆ ಸಾಕು
ಗೋ ಕಾವ ಗೋಪಾಲ
ಓಡಿ ಬರುವನು ಬಳಿಗೆ ಪಡುತ ಧಾವಂತ
0 ಪ್ರತಿಕ್ರಿಯೆಗಳು