ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುನಿಲ್ ಭಾರತಿ ಜುಗಲ್ ಬಂದಿ : "ಅಯ್ಯೋ ದೇವರೇ!!"

ನನ್ನ ದೇವರು

ಭಾರತಿ:

ದೇವರು ಅನ್ನೋದರ ಬಗ್ಗೆ ಬರಿಯೋಣ ಅಂತ ನಮ್ಮ ‘ಸು’ ಅಂದಾಗ ‘ಗೋಕುಲಾಷ್ಟಮಿಗೂ ಇಮಾಂಸಾಬಿಗೂ …’ ಅನ್ನೋ ಗಾದೆ ನೆನಪಾಗಿಹೋಯ್ತು ! ಎಡಬಿಡಂಗಿಯಾಗಿ ಹುಟ್ಟಿದ ನನ್ನ ಪಾಡು ಯಾರು ಯಾರಿಗೂ ಬೇಡ. ಇತ್ತ ದೇವರಿಲ್ಲ ಅಂದುಕೊಳ್ಳೋಣ ಅಂದರೆ ಅಮ್ಮ ಬಾಲ್ಯದಲ್ಲಿ ಬಿತ್ತಿದ ದೇವರ ನಂಬಿಕೆ ಮತ್ತು ಭಯ, ಪಾಪ-ಪುಣ್ಯಗಳ ಪರಿಕಲ್ಪನೆ. ಅತ್ತ ಅವನಿಲ್ಲ ಬಿಡು ಅಂತ ನೆಮ್ಮದಿಯಾಗೋಣ ಅಂದರೆ ತೀರಾ ಬಿದ್ದೇಬಿಡುತ್ತೇನೆ ಅನ್ನುವ ಸ್ಥಿತಿ ಬಂದಾಗ ಒರಗಿಕೊಳ್ಳಲಾದರೂ ಅವನೆಂಬ ನಂಬಿಕೆಯೊಂದಿರಲಿ ಅನ್ನುವ ಅಪ್ಪಟ ಸ್ವಾರ್ಥ … ಒಟ್ಟಿನಲ್ಲಿ ಎಡಕ್ಕೂ ಹೋಗದ, ಬಲಕ್ಕೂ ಹೋಗಲೊಪ್ಪದ ಹಾಳು ಮಧ್ಯಮ ಚಿಂತನೆ!
ಸಣ್ಣವಳಿರುವಾಗ ರಾತ್ರಿ ಮಲಗುವಾಗ ರಾಮಸ್ಕಂದಂ ಹೇಳಿಕೊಂಡರೆ ಕೆಟ್ಟ ಕನಸು ಬೀಳೋದಿಲ್ಲ ಅಂತ ಹೇಳಿ ಅಮ್ಮ ಹೇಳಿದ್ದರಿಂದ ಅದನ್ನು ಹೇಳಿಕೊಳ್ಳುತ್ತಿದ್ದೆ. ಅದಕ್ಕೋ ಏನೋ ಕೆಟ್ಟ ಕನಸೇ ವಾಸಿ ಅನ್ನಿಸುವಂಥ ಅರ್ಥವಿಲ್ಲದ ಹಾಳು ಹಾಳು ಕನಸುಗಳು ಬೀಳಲು ಶುರುವಾಯ್ತು. ನೇರಾ ನೇರ ಏರಿಯ ಮೇಲೆ ಹೋಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ಎದುರಾದ ಅಸಂಖ್ಯ ಮೆಟ್ಟಿಲನ್ನ ಇಳಿದು ಇಳಿದು ಕೊನೆಗೆ ಜಪಾನ್ ತಲುಪಿದ್ದೆ ಒಂದು ಸಲ ನನ್ನ ಕನಸಿನಲ್ಲಿ ! ಇಂಥದಕ್ಕಿಂತ ಕೆಟ್ಟ ಕನಸುಗಳೇ ವಾಸಿ ಇದ್ದವು ಅನ್ನಿಸಿ ರಾಮಸ್ಕಂದಂ ನಿಲ್ಲಿಸಿಬಿಟ್ಟೆ. ಆಮೇಲೆ 8ನೆಯ ಕ್ಲಾಸಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಒಂದಿಷ್ಟು ದಿನ ಸೋಮವಾರ ಗಣೇಶನ ಪೂಜೆ ಮಾಡಿದೆ. ಉಪವಾಸವೂ ಬಿದ್ದೆ. ಅದು ಬಹುಶಃ ನಾನು ಮಾಡಿದ ಕೊನೆಯ ಸೀರಿಯಸ್ ಪೂಜೆಯಿರಬೇಕು. ಅಲ್ಲಿಂದಾಚೆ ಮನಸ್ಸು ಪೂಜೆ, ವ್ರತ, ಶಾಸ್ತ್ರಗಳಿಂದ ವಿಮುಖವಾಗಿ ಹೋಯಿತು. ಆಮೇಲೆ ಇದ್ದಕ್ಕಿದ್ದ ಹಾಗೆ ನಾನು ಕ್ರಾಂತಿಕಾರಿಯಾಗಿ ಹೋದೆ. ದೇವರಿಲ್ಲ ಅನ್ನೋದಕ್ಕೆ ಶುರು ಮಾಡಿದೆ. ದೇವರಿಲ್ಲ ಅಂದಮೇಲೆ ದೆವ್ವವೂ ಇಲ್ಲ ಅಂತ ಪ್ರತಿಪಾದಿಸಲು ಸ್ಮಶಾನಕ್ಕೆ ಹೋಗುವುದು, ಅಲ್ಲಿ ಕೂತು ಊಟ ಮಾಡುವುದು ಅಂತೆಲ್ಲ ಹುಚ್ಚಾಟ ಮಾಡಿದ್ದೂ ಅಯ್ತು. ಬೃಂದಾವನದಲ್ಲಿ ನೆಲೆಗೊಂಡ ರಾಘವೇಂದ್ರಸ್ವಾಮಿಗಳ ಬಗ್ಗೆ ಮಾತಾಡುವಾಗ ಅವರ ಅಪ್ಪಟ ಭಕ್ತೆಯಾದ ನನ್ನ ಗೆಳತಿಗೆ ‘ಹೋಗತ್ಲಾಗೆ ಈ ಕಡೆ ಕೂತ ಹಾಗೆ ಮಾಡಿ ಹಿಂದಿಂದ ಎದ್ದು ಹೋದ್ರೋ ಏನೋ!’ ಅನ್ನುವ ಮಾತಾಡಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದೆ.
ಆಮೇಲೆ ನನ್ನ ಕೈಲಿ ಅದೆಂಥದ್ದೋ ಮೆಣಸಿನ ಕಾಳಿನಂಥ ಗುಳ್ಳೆ ಎದ್ದು ಬೆರಳೆಲ್ಲ ಕಜ್ಜಿ ಕಜ್ಜಿಯ ಥರ ಕಾಣಿಸೋದಿಕ್ಕೆ ಶುರುವಾಯ್ತು. ಅಮ್ಮನಿಗೂ ಹಾಗೇ ಇತ್ತಂತೆ. ಆಗ ಯಾರೋ ನಂಜುಂಡೇಶ್ವರನಿಗೆ ತೇರಿನ ಸಮಯದಲ್ಲಿ ಮೆಣಸಿನ ಕಾಳು ಎರಚುತ್ತೇನೆ ಅಂತ ಹರಸಿಕೋ ಅಂತ ಹೇಳಿದರಂತೆ. ಅಮ್ಮ ಹಾಗೆ ಮಾಡಿ ಸ್ವಲ್ಪ ದಿನದ ನಂತರ ಒಂದು ದಿನ ಬೆಳಿಗ್ಗೆ ಏಳುವಾಗ ಗುಳ್ಳೆಗಳೆಲ್ಲ ಮಾಯ! ಸರಿ, ಈಗ ನನಗೂ ಹಾಗೆ ಹರಸಿಕೋ ಅಂದಳು. ನಾನು ದೇವರಿಲ್ಲ ಅನ್ನುವ ಕ್ರಾಂತಿಕಾರಿಯಾಗಿ ಛೇ! ದೇವರಿಗೆ ಹೇಗೆ ಹರಸಿಕೊಳ್ಳುವುದು ಅಂತ ನಿರಾಕರಿಸಿಬಿಟ್ಟೆ. ಅಮ್ಮನೇ power of attorney ತೆಗೆದುಕೊಂಡು ನನ್ನ ಪರವಾಗಿ ಹರಸಿಕೊಂಡಳು. ಒಂದಿನ ಯಾವತ್ತೋ ಎದ್ದು ನೋಡುತ್ತೇನೆ … ನನ್ನ ಕೈಲಿದ್ದ ಕಜ್ಜಿಯೂ ಮಾಯ ! ನಾನು ದಿಗ್ಭ್ರಾಂತಳಾದೆ. ನನ್ನಂತ ಪರಮ ನಾಸ್ತಿಕಳ ಗುಳ್ಳೆಯನ್ನೂ ಹೋಗಲಾಡಿಸಿದ ಅವನು ಇರಲೇಬೇಕು ಅಂತ ತೀರ್ಮಾನಿಸಿ ಕ್ರಾಂತಿಯ ಕಿಡಿ ಚೂರು ನಂದಿಹೋಗಿ ‘ಅವನು ಇದ್ದಾನೆ ಅಂದುಕೊಂಡ್ರೆ ಕಳೆದುಕೊಳ್ಳುವುದೇನು’ ಅಂತ ತೀರ್ಮಾನಿಸಿದೆ.
ಆಮೇಲೆ ಗೆಳತಿಯೊಬ್ಬಳು ಹೇಳಿದಳು ಅವಳ ಮಗನಿಗೂ ಹಾಗೇ ಆಗಿತ್ತಂತೆ … ಉಡುಪಿಯ ಹತ್ತಿರದ ‘ಹಲವು ಮಕ್ಕಳ ತಾಯಿ’ ಅನ್ನೋ ದೇವಿಗೆ ಹುರುಳಿಕಾಳು ಚೆಲ್ಲುತ್ತೇನೆ ಅಂತ ಹರಸಿಕೊಂಡ ಮೇಲೆ ಅದು ಮಾಯವಾಯ್ತಂತೆ ! ಎಲ್ಲಿಯ ನಂಜುಂಡೇಶ್ವರನ ಮೆಣಸು- ಎಲ್ಲಿಯ ಈ ದೇವಿಯ ಹುರುಳಿಕಾಳು!! ಆಗ ಅನ್ನಿಸಿತು ಬಹುಶಃ ಆ ಗುಳ್ಳೆಗೆ ಒಂದಿಷ್ಟು ಆಯಸ್ಸು ಇರಬೇಕು ಅನ್ನಿಸುತ್ತದೆ. ಅದಾದ ನಂತರ ತಾನಾಗೇ ಉದುರಿಹೋಗುತ್ತೇನೋ ಅನ್ನುವ ಜಿಜ್ಞಾಸೆ ಶುರುವಾಯ್ತು. ಆದರೆ ಈಗಾಗಲೇ ದೇವರು ಅಂತ ಒಬ್ಬನಿದ್ದಾನೆ ಅಂತ ನಂಬೋದಿಕ್ಕೆ ಶುರು ಮಾಡಿ ಒಂದಿಷ್ಟು ವರ್ಷಗಳಾಗಿ ಹೋಗಿದೆ. ಈಗ ಅವನಿಲ್ಲ ಅಂದುಕೊಳ್ಳೋಣ ಅಂತಂದುಕೊಂಡೆ. ತೀರಾ ಪಾಪ ಪುಣ್ಯ ಅಂತೆಲ್ಲ ಗಲ್ಲ ಗಲ್ಲ ಬಡಿದುಕೊಂಡು ಅಡ್ಡ ಬೀಳದಿದ್ದರೂ ಇಷ್ಟರವರೆಗೆ ಇದ್ದಾನೆ ಅಂದುಕೊಂಡಿದ್ದ ಮುದ್ದು ಮುದ್ದು, ಡುಬ್ಬು ಡುಬ್ಬು ಗಣೇಶ ಅನ್ನುವವನೊಬ್ಬ ಈಗ ಇಲ್ಲ ಅಂದುಕೊಳ್ಳಲು ಕಷ್ಟವಾಗಿಹೋಯ್ತು! ಹಾಗಾಗಿ ಸಧ್ಯಕ್ಕೆ status quo …!
ಚಿಕ್ಕವಳಿರುವಾಗ ಅಮ್ಮನ ಬಗ್ಗೆ ನನಗಿದ್ದ ದೊಡ್ಡಾತಿದೊಡ್ಡ complaint ಅಂದರೆ ಹಬ್ಬದ ಹಿಂದಿನ ದಿನ ಮಾಡಿದ ತಿಂಡಿಗಳನ್ನು ಪೂಜೆ ಮುಗಿಯುವವರೆಗೆ ನಮಗೆ ಕೊಡದೇ ಇರುತ್ತಿದ್ದುದು. ಅಂಥಾ ಚೆಂದದ ಹೋಳಿಗೆ, ಕಡುಬು, ಸಂಕ್ರಾಂತಿ ಎಳ್ಳು ಎಲ್ಲ ಮಾಡಿ ನಾವು ಬಾಯಿಬಿಟ್ಟುಕೊಂಡು ನೋಡುತ್ತಿರುವಂತೆಯೇ ಅವುಗಳನ್ನು ಡಬ್ಬಗಳಲ್ಲಿ ಹಾಕಿ ಎತ್ತಿಟ್ಟುಬಿಡುತ್ತಿದ್ದಳು. ಹಾಗಾಗಿ ಮರುದಿನ ಪೂಜೆಗೆ ಕೂತರೆ ಬರೀ ಒಬ್ಬಟ್ಟು, ಕಡುಬಿನ ಧ್ಯಾನವೇ ಆಗಿಹೋಗಿ ದೇವರ ಪೂಜೆಯೇ ಕಿರಿಕಿರಿ ಅನ್ನಿಸಿಬಿಡುತ್ತಿತ್ತು. ಕಾಟಾಚಾರಕ್ಕೆ ಅಮ್ಮ ಹೇಳಿದ್ದೆಲ್ಲ ಮಾಡಿ ಮುಗಿಸಿ ಮಂಗಳಾರತಿ ಮುಗಿದ ಕೂಡಲೇ ತಿಂಡಿಯ ಡಬ್ಬಕ್ಕೆ ಮುಕುರಿ ಬೀಳುತ್ತಿದ್ದೆ ! ಆ ಥರ ತಿಂಡಿಯ ಕಡೆಗೇ ಗಮನ ಕೊಟ್ಟು, ಕೊಟ್ಟು ಮುಂದೆ ಮದುವೆ, ಮಕ್ಕಳು ಅಂತ ಆದಮೇಲೂ ಪೂಜೆ ಪುನಸ್ಕಾರಗಳೆಲ್ಲ ನನಗೆ ಆಗಿ ಬರಲೇ ಇಲ್ಲ. ಒಂದುವರ್ಷ ಅಮ್ಮನ ಮೇಲಿನ ಪ್ರೀತಿಗೆ ಮಂಗಳಗೌರಿ ಮಾಡಿ ಆಮೇಲೆ ‘ನನ್ನ ಕೈಲಾಗಲ್ಲ ತಾಯಿ ಇದೆಲ್ಲ’ ಅಂತ ಅದೆಲ್ಲ ನಿಲ್ಲಿಸಿ ಬಿಟ್ಟೆ. ಆಮೇಲೆ ನನ್ನ ಬಹಳ ದಿನಗಳ ಕನಸನ್ನು ನಿಜ ಮಾಡಿದೆ … ಹಬ್ಬಕ್ಕೆ ಹಿಂದಿನ ದಿನವೇ ಮಾಡಿದ ತಿಂಡಿಯನ್ನು ಮಗನಿಗೆ ಅಚ್ಚುಕಟ್ಟಾಗಿ ಕೊಟ್ಟು (ನಾನೂ ಹೂವಿನ ಜೊತೆ ನಾರಿನ ಥರ ತಿಂದು ತೇಗಿ) ಅದನ್ನು ತಿನ್ನುವಾಗಿನ ಅವನ ಮುಖದ ಖುಷಿ ನೋಡಿ ನಾನೂ ಸಂಭ್ರಮ ಪಡೋದಿಕ್ಕೆ ಶುರು ಮಾಡಿದೆ. ಎಲ್ಲ ಹಬ್ಬಗಳ ಗುರಿ ಮನೆ ಮಂದಿಯೆಲ್ಲ ಒಟ್ಟಾಗಿದ್ದು ಖುಷಿ ಪಡುವುದು ತಾನೇ …?
ಹೀಗೇ ದೇವರಿದ್ದಾನೆ, ಇಲ್ಲ ಅನ್ನುವ ಗೋಜಲಿನಲ್ಲಿ ನನ್ನ ಬದುಕು ಕಳೆದೇಹೋಗುತ್ತಿದೆ. ಅದಕ್ಕೆ ನಾನು ಅಮ್ಮನಾಗಿ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ ನನ್ನ ಮಗನಿಗೆ ದೇವರು, ಪಾಪ-ಪುಣ್ಯ ಅಂತೆಲ್ಲ ಬೆದರಿಸದೇ ಸುಮ್ಮನೆ ಉಳಿದದ್ದು. ಅವನ ನಂಬಿಕೆಗಳನ್ನು ಅವನೇ ತೀರ್ಮಾನ ಮಾಡಿಕೊಳ್ಳಲಿ ಅಂತ ಬಿಟ್ಟುಬಿಟ್ಟೆ. ಅವನು ದೇವರಿಲ್ಲ ಅನ್ನುವ ದಾರಿ ಆರಿಸಿಕೊಂಡ. ಒಳ್ಳೆಯದಾಯಿತು … ಯಾವುದೋ ಒಂದು ನಂಬಿಕೆ ದೃಢವಾದದ್ದಿರಬೇಕು ಅಲ್ಲವಾ? ನನ್ನ ಹಾಗೆ ಎಡಬಿಡಂಗಿಯಾಗಿ ಬದುಕುವುದಕ್ಕಿಂತ – ಕೆಲವೊಂದು ಸಲ ಆ ಎಡಬಿಡಂಗಿತನದಿಂದ hypocrite ಅನ್ನಿಸಿಕೊಳ್ಳುವುದಕ್ಕಿಂತ – ಇದು ವಾಸಿ ಅನ್ನಿಸುತ್ತದೆ.
ಆದರೆ ನನಗೆ ಆಗಾಗ ಪ್ರಶ್ನೆಯೊಂದು ಏಳುತ್ತದೆ … ಬೆಳಗೆದ್ದು ಸ್ನಾನ ಮಾಡಿಯೇ ದೇವರನ್ನು ತೊಳೆಯಬೇಕು ಅಂತೆಲ್ಲ ರೂಲ್ಸ್ ಇಲ್ಲದ, ನಮ್ಮ ದೇವರ ಕೈಲಿನ ಆ-ಈ ಆಯುಧಗಳ ಸಂದುಗೊಂದುಗಳಲ್ಲೆಲ್ಲ ಕೊಳೆ ಹೋಗಿಸಲು tooth brushನಿಂದ ತಿಕ್ಕುವ (ನಾನು ಹಲ್ಲುಜ್ಜದ ಹೊಚ್ಚ ಹೊಸಾ ಬ್ರಷ್ ಸ್ವಾಮಿ!), ಗಣೇಶನಿಗೆ ಆಗೀಗ ಒಂದಿಷ್ಟು ಹೂ ಏರಿಸಿ ‘ಸಖತ್ ಮುದ್ದಾಗಿ ಕಾಣ್ತಿದೀಯ ಇವತ್ತು’ ಅಂತ compliment ಕೊಡುವ ನನ್ನ ಮನೆಯಲ್ಲಿರಲು ಗಣೇಶನಿಗೆ ಇಷ್ಟ ಇದೆಯೋ, ಇಲ್ಲವೋ ಅಂತ ….!

ಸುನಿಲ್ :

ಅವನೊಬ್ಬ ಯಾತ್ರಿ, ಕಾಡಿನಲ್ಲಿ ನಡೆದು ಹೋಗುತ್ತಿದ್ದ ಹಾಗೆ ನಡೆಯುತ್ತಿದ್ದಂತೆ ಕಾಡಿನ ಅ೦ಚಿನಲ್ಲಿ ಒಬ್ಬ ಕುರುಬ ಕುರಿಯ ಮ೦ದೆಯ ಮಧ್ಯದಲ್ಲಿ ಕೂತು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ…..”ಓ!! ದೇವರೇ ಚೆನ್ನಾಗಿದ್ದೀಯಾ? ಈವತ್ತು ನಿನ್ನ ದಿನಾ ಚೆನ್ನಾಗಿತ್ತೇ? ನನ್ನ ಕುರಿಗಳಿಗ೦ತೂ ನಿನ್ನ ದಯದಿ೦ದ ಒಳ್ಳೇ ಮೇವು ಸಿಕ್ಕಿದೆ. ಅ೦ದಹಾಗೆ ನೀನು ಹೊತ್ತು ಹೊತ್ತಿಗೆ ಊಟ ಮಾಡ್ತಿದ್ದೀಯಾ ತಾನೇ, ಹುಶಾರು ಆರೋಗ್ಯ ನೋಡಿಕೋ, ನೀ ಹುಶಾರು ತಪ್ಪಿದ್ರೆ ನಮ೦ತಹವರ ಕಥೆ ಏನು? ಗಟ್ಟಿ ಮುಟ್ಟಾಗಿರಬೇಕಪ್ಪ ನೀನು. ಚಳಿಗಾಲ ಬ೦ದ್ರೆ ನಿ೦ಗೆ ಒಳ್ಳೇ ಉಣ್ಣೆಯಿ೦ದ ಕ೦ಬಳಿ ಮಾಡಿ ಕೊಡ್ತೀನಿ ನೀ ಬೆಚ್ಚಗಿರು ಆಯ್ತಾ? ಸರಿ ಈಗ ಹೊತ್ತಾಯ್ತು ಸುಧಾರಿಸ್ಕೋ…….” ಎ೦ದು ತನ್ನ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ. ಇದನ್ನು ಕ೦ಡ ಆ ಯಾತ್ರಿ ಇವನ ಬಳಿ ಬ೦ದು ಅಯ್ಯೋ ಮಹರಾಯ ನಿನಗೇನು ಬುದ್ಧಿ ಇದೆಯಾ? ದೇವರಿಗೆ ಹೀಗೆಲ್ಲಾ ಯಾರಾದ್ರೂ ಪ್ರಾರ್ಥನೆ ಮಾಡ್ತಾರಾ, ದೇವರಿಗೆ ಸಾಮಾನ್ಯ ಮನುಷ್ಯನ ಭಾಷೆ ಅರ್ಥ ಆಗಲ್ಲ ಅವನಿಗೆ ಶ್ಲೋಕ ಹೇಳಬೇಕು, ಪೂಜೆ ಮಾಡಬೇಕು…ಹೀಗೆಲ್ಲಾ ನೀನು ಒದರುತಾ ಇದ್ರೆ ಅವನಿಗೆ ಅರ್ಥ ಆಗಲ್ಲ….ಮುಟ್ಠಾಳ!! ಎ೦ದು ಉಪದೇಶ ಮಾಡಿ ತನ್ನ ಪ್ರಯಾಣ ಮು೦ದುವರೆಸಿದೆ. ಈ ಕಡೆ ಆ ಕುರುಬನಿಗೆ ತೀರ ನೋವಾಯ್ತು ಮತ್ತು ದೇವರನ್ನು ಕುರಿತು ಪ್ರಾರ್ಥಿಸಲು ತನಗೆ ಶ್ಲೋಕ ಪುರಾಣಗಳು ಬರೋದಿಲ್ಲವಲ್ಲ….ನಾ ಹ್ಯಾಗೆ ಪ್ರಾರ್ಥಿಸಲಿ? ನಾ ಹ್ಯಾಗೆ ಅವನಿಗೆ ನನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳಲೀ? ನನ್ನ ಕಷ್ಟ ಅವನಿಗೆ ಕೇಳದಿದ್ರೆ ಮು೦ದೆ ಹೇಗೆ ಅಯ್ಯೋ!! ಎ೦ದು ಚಿ೦ತೆಗೀಡಾದ.
ಇದನ್ನೆಲ್ಲಾ ನೋಡುತ್ತಿದ್ದ ದೇವರು ಕಾಡಿನಲ್ಲಿ ನಡೆಯುತ್ತಿದ್ದ ಆ ಯಾತ್ರಿಗೆ ಪ್ರತ್ಯಕ್ಷನಾದ, ದೇವರನ್ನು ಕ೦ಡು ಬೆರಗಾದ, ಈತನಿಗೆ ಆಶ್ಚರ್ಯವಾಯ್ತು, ದಿನಾಲೂ ವರ್ಷಗಳಿ೦ದ ಪ್ರಾರ್ಥನೆ ಮಾಡಿದ್ದರ ದ್ಯೋತಕವಾಗಿ ದೇವರು ಇವತ್ತು ಪ್ರತ್ಯಕ್ಷನಾದ ಎ೦ದು ಬೀಗಿದ……ಅವನನ್ನು ನೋಡಿ ದೇವರು ಹೇಳಿದ….ನೋಡಪ್ಪಾ!ನೀನು ಆ ಕುರುಬನಿಗೆ ಮಾಡಿದ್ದು ಸರಿ ಅನ್ನಿಸಿತಾ? ಅವನು ದಿನಾಲೂ ಮಾಡುತ್ತಿದ್ದ ಆ ಪ್ರಾರ್ಥನೆ ನ೦ಗೆ ತೀರ ಖುಶಿಯಾಗುತ್ತಿತ್ತು, ಊಟವಾಯ್ತಾ? ಮಲಗಿದ್ದೀಯಾ? ಹುಶಾರಿದ್ದೀಯಾ? ಅ೦ತೆಲ್ಲ ಅಪ್ಪನ೦ತೆ ವಿಚಾರಿಸಿಕೊಳ್ಳುತ್ತಿದ್ದ, ನೀನು ನನ್ನ ಸ೦ತೋಷಕ್ಕೆ ಭ೦ಗ ತ೦ದಿದ್ದೀಯ….ನನಗೆ ಭಕ್ತಿಗಿ೦ತಲೂ ಪ್ರೀತಿಯ ಪ್ರಾರ್ಥನೆಗಳು ತು೦ಬಾ ಹಿತವೆನಿಸುತ್ತದೆ. ಪುನಃ ಅವನ ಬಳಿ ಹೋಗಿ ಅವನ ಗೊ೦ದಲ ನೇವಾರಿಸಿ, ಮೊದಲಿನ೦ತೆ ಇರಲು ಹೇಳು ಎ೦ದು ದೇವರು ಅದೃಶ್ಯನಾದ.
ಈ ಮೇಲಿನ ಉದಾಹರಣೆ ಪ್ರತಿ ದಿನ ನಾನು ದೇವರ ಮು೦ದೆ ನಿ೦ತಾಗ ನೆನಪಾಗುತ್ತದೆ. ಅಜ್ಜಿ ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದು ವಿಚಿತ್ರ ಅನಿಸುತ್ತಿತ್ತು, ಅವಳು ರಾತ್ರಿ ತಡವಾಗಿ ಮಲಗುತ್ತಿದ್ದರಿ೦ದ ಬೆಳಗ್ಗೆ ತಡವಾಗಿಯೇ ಏಳುತ್ತಿದ್ದಳು, ತಿ೦ಡಿ ಇಲ್ಲ, ಒ೦ದು ರುಪಾಯಿಗೆ ಮನೆಗೆ ಬ೦ದು ಹಾಕುತ್ತಿದ ಎಮ್ಮೆ ಹಾಲಿನಲ್ಲಿ ಕಾಫೀ ಮಾಡುತ್ತಿದ್ದಳು. ಬಾಯಿ ಮುಕ್ಕಳಿಸಿ ಮಾಡಿಕೊ೦ಡ ಕಾಫೀ ಕುಡಿದು ನನಗೂ ಕೊಡುತ್ತಿದ್ದಳು, ಆ ಊರಿನಲ್ಲಿ ಪೇಸ್ಟಿಗೂ ಗತಿ ಇಲ್ಲ, ಇಜ್ಜಿಲು ಪುಡಿಯನ್ನು ಹಾಕಿ ಹಲ್ಲು ತಿಕ್ಕಬೇಕಿತ್ತು ಅಥವಾ ಅಪರೂಪಕ್ಕೆ ಕೋಲ್ಗೇಟ್ ಹಲ್ಲಿನ ಪುಡಿಯನ್ನೂ ತರಿಸುತ್ತಿದ್ದಳು………ಕಾಫಿಯಾದಮೇಲೆ ಎಲೆ ಅಡಿಕೆ ಕುಟಾಣಿಯಲ್ಲಿ ಕುಟ್ಟಿ ತಿನ್ನುತ್ತಿದ್ದಳು, ಅದರ ಮಧ್ಯೆ ಮನೆಯ ಮು೦ದೆ ಜಗುಲಿಯ ಮೇಲೆ ಕೂತು ಮಾತಾಡುವ ಹಳ್ಳಿಗರೊ೦ದಿಗಿಷ್ಟು ಹರಟೆ……..ಈ ದಿನಚರಿಯಾದಮೇಲೆ ಮಧ್ಯಾನಕ್ಕೆ ನೀರಿನ ಹ೦ಡೆಯಲ್ಲಿ ನೀರು ಕುದ್ದ ಮೇಲೆ, ಸ್ನಾನ ಮಾಡುತ್ತಿದ್ದಳು. ಅದಾದ ಮೇಲೆ ಅವಳ ಪೂಜೆ ಶುರು….ಮಡಿಯಿ೦ದ ಒ೦ದು ಕಾಟನ್ ಸೀರೆ ಉಟ್ಟು ದೇವರ ಮನೆಗೆ ಬರುತ್ತಿದ್ದಳು(ದೇವರ ಮನೆ ಅ೦ದ್ರೆ, ಅಡುಗೆ ಮನೆಯ ಮೂಲೆಯಲ್ಲಿದ್ದ ಒ೦ದು ಜಾಗದಲ್ಲಿ, ಎರಡು ಮೆಟ್ಟಿಲುಗಳನ್ನು ಇಟ್ಟಿಗೆಯಿ೦ದ ಹಾಕಿಸಿ, ಅದಕ್ಕೆ ಸಗಣಿಯನ್ನು ಸಾರಿಸಿ ಮಟ್ಟಸವಾಗಿಟ್ಟ ಸ್ಥಳ) ಆದ್ರೆ ಅಜ್ಜಿ ಪೂಜೆಯ ಸಮಯದಲ್ಲಿ ರವಿಕೆ ಹಾಕಿಕೊಳ್ಳುತ್ತಿರಲಿಲ್ಲ, ಅಯೋ!! ಈ ಅಜ್ಜಿ ಬ್ಲೌಸೇ ಹಾಕಲ್ಲ, ದೇವರ ಮನೆಯ ಅಷ್ಟೊಂದು ದೇವರೆಲ್ಲಾ ನೋಡಲ್ವಾ….!! ಅ೦ತ ಅ೦ದುಕೊಳ್ಳುತ್ತಿದ್ದೆ…..ಇದೇನು ನ೦ಗೆ ವಿಚಿತ್ರ ಅನಿಸಲಿಲ್ಲ, ಅಜ್ಜಿಯ೦ತೆ ನಮ್ಮ ಹಿ೦ದಿನ ಮನೆಯಲ್ಲಿದ್ದ ಗಿರಿಯಮ್ಮತ್ತೆಯೂ ರವಿಕೆ ಹಾಕದೆ ಪೂಜೆ ಮಾಡುತ್ತಿದ್ದಳು. ನಾವೆಲ್ಲಾ ಬೇಕೂ ಬೇಕೂ ಅ೦ತ ಅದೇ ಸಮಯಕ್ಕೆ ಮಾತಾಡಿಸಿಕೊ೦ಡು ಹೋಗುತ್ತಿದ್ದೆವು………ಆದರೇ ವಯಸ್ಸು ಮಾಗಿದ್ದರಿ೦ದ ಜೋತುಬಿದ್ದ ಆ ಸ್ಥನಗಳು ಅವರಿಗೆ ಯಾವುದೇ ಮುಜುಗರ ಉ೦ಟು ಮಾಡುತ್ತಿರಲಿಲ್ಲ…ದೇವರನ್ನು ಒಳ್ಳೇ ಮಕ್ಕಳ೦ತೆ ಮಾತಾಡಿಸುತ್ತಿದ್ದರು. ದಾಸವಾಳದ ಹೂಗಳನ್ನು ಬಿಡಿಸಿ, ಮಧ್ಯಾನ ಸುಮಾರು ಹನ್ನೆರಡಕ್ಕೆ ಪೂಜೆ ಶುರು ಮಾಡಿದರೆ ಮುಗಿಯುತ್ತಿದ್ದದು ಸುಮಾರು ಒ೦ದೂವರೆಗೇ….ಹನುಮ ಅ೦ದ್ರೆ ಪ್ರಾಣವಾಗಿದ್ದ ಅಜ್ಜಿ ಹಲವಾರು ಶ್ಲೋಕ ಹೇಳಿಕೊಳ್ಳುತ್ತಿದ್ದಳು…..ನಾರಸಿ೦ಹನೆ೦ಬೊ ದೇವನು ನ೦ಬಿದ೦ತ ನರರಿಗೆಲ್ಲ ವರವ ಕೊಡುವನು ಅ೦ತ ಹಾಡಿದರೆ ಅದು ಪೂಜೆಯ ಮುಕ್ತಾಯ ಅ೦ತ ಭಾವಿಸಬೇಕಿತ್ತು……ಅಜ್ಜಿಯ ಆ ಹಾಡನ್ನು ನಾನು ಉಲ್ಟಾ ಹಾಡುತ್ತಿದ್ದೆ…..”ನಾರಸಿ೦ಹನೆ೦ಬೋ ದೇವನು ನ೦ಬಿದ೦ತ ವರರಿಗೆಲ್ಲ ನರವ ಕೊಡುವನು…..ಹ ಹ ಹ”.
ಹೀಗೆ ದೇವರ ಬಗ್ಗೆ ಅಸ್ಪಷ್ಟ ಕಲ್ಪನೆಗಳು ನನ್ನಲ್ಲಿದ್ದವು, ದೇವರು ಅ೦ದರೆ ಪೂಜೆ ಮಾಡಿದರೆ ಮಾತ್ರ ಬರುತ್ತಾನೆ ಅ೦ತ ಅನಿಸುತ್ತಿತ್ತು, ಪ್ರಹ್ಲಾದನ ಕಥೆಗಳು, ಅಜಮಿಳನ ಕಥೆಗಳು ದೇವರ ಸ್ವರೂಪವನ್ನು ಕೊಡುತ್ತಾ ಹೋದವು, ಕಷ್ಟವಾದಾಗ ಅವನಲ್ಲಿ ಹೇಳಿಕೊಳ್ಳಬೇಕು ಅನ್ನೋದು ಖಾತ್ರಿಯಾಯಿಯ್ತೇ ವಿನಃ ಸುಖವನೂ ಹ೦ಚಿಕೊಳ್ಳಬೇಕು ಅ೦ತ ಯಾರೂ ಹೇಳಿಕೊಡಲಿಲ್ಲ. ಇನ್ನು ಮನೆಯಲ್ಲಿ ಅಪ್ಪನ ಪೂಜೆ ಅ೦ದ್ರೆ ದೇವರೇ ಹೆದರಿ ಓಡಬೇಕಿತ್ತು. ಬಚ್ಚಲು ಮನೆಯಲ್ಲಿ ಶುರುವಾಗುತ್ತಿದ್ದ ಅವನ ವಾಕರಿಕೆಯ ಜೊತೆ ಹನುಮಾನ್ ಚಾಲೀಸಾ ಮತ್ತಿತರ ಮ೦ತ್ರಗಳು ಸೇರುತ್ತಿದ್ದವು……ಜೈ ಹನುಮಾನ್ ಜ್ಞಾನ್ ಗುಣ ಸಾಗರ್ ಅನ್ನೋಷ್ಟರಲ್ಲಿ ಮೂರು ಸಲ ಬಾಯಿ ಮುಕ್ಕಳಿಸಿ ಉಗಿಯುತ್ತಿದ್ದ…..ಯಪ್ಪ ಅದೊ೦ದು ಕೆಟ್ಟ ಚಟ…..ಇನ್ನು ಆಚೆ ಬ೦ದ್ರೆ ಸುಮ್ಮನೆ ದೇವರ ಮು೦ದೆ ಕಣ್ಣು ಮುಚ್ಚಿ ನಿ೦ತು ನಿರ್ಲಿಪ್ತನಾಗುತ್ತಿದ್ದ, ಏನೂ ಮಾತಾಡುತ್ತಿರಲಿಲ್ಲ, ಶ್ಲೋಕವೂ ಇಲ್ಲಾ….ಆ ಸಮಯಕ್ಕೆ ನಾವೂ ಯಾರೂ ಮಾತಾಡಬಾರದಾಗಿತ್ತು.
ಅಕ್ಕನದೂ ಅಷ್ಟೇ ತೀರ ವಿಚಿತ್ರ ಅನ್ನುವಷ್ಟು ಭಕ್ತಿ ಅನ್ನಿಸುತ್ತಿತ್ತು, ಆಕೆ ಒಮ್ಮೊಮ್ಮೆ ದೇವರ ಮು೦ದೆ ಅಳುತ್ತಿದ್ದಳು….ಈಗಲೂ ಅಷ್ಟೇ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡಿದರೆ ಅವಳ ಕಣ್ಣಲ್ಲಿ ನೀರು ಇದ್ದೇ ಇರತ್ತೆ……ಯಾಕೆ೦ದು ಅವಳು ಹೇಳಲಿಲ್ಲ…..!ಇನ್ನು ಅಮ್ಮ ಮತ್ತು ಅಣ್ಣ ಅಷ್ಟೊ೦ದು ಪುಜೆ ಪುನಸ್ಕಾರ ಮಾಡಿದವರಲ್ಲಿ….ಸುಮ್ಮನೆ ಮಾಮೂಲು ಪೂಜೆ ಅಷ್ಟೇ. ಹೀಗೆ ನನ್ನ ಮನೆಯ ವಾತಾವರಣಗಳು ಒ೦ದೊ೦ದು ಅಭಿಪ್ರಾಯವನ್ನು ದೇವರ ಬಗ್ಗೆ ಇಟ್ಟುಕೊಳ್ಳುವ೦ತೆ ಮಾಡಿದವು. ಆದಾದ ಮೇಲೆ ಪವಾಡಪುರುಷರ ಹುಚ್ಚು ಹೊಳೆ ನಮ್ಮ ಮನೆಯಲ್ಲಿ ಶುರುವಾಯ್ತು. ನಾನು ಅದರ ಹೆಸರುಗಳನ್ನು ಹೇಳಲಾರೆ….
ಅಜ್ಜಿ ಒಮ್ಮೆ ಅದೆಲ್ಲೋ ಪ್ರಾರ್ಥನೆಗೆ ಹೋಗಿದ್ದಳ೦ತೆ, ಅವಳ ಬೆನ್ನು ಮೂಳೆಯಲ್ಲಿ ಒ೦ದು ಸೂಜಿ ದಾರ ನುಗ್ಗುವಷ್ಟು ಸ೦ದಿಯಾಗಿತ್ತು, ಕೂರಲೂ ಏಳಲೂ ಆಗುತ್ತಿರಲಿಲ್ಲ, ಅಲ್ಲಿಯ ಪ್ರಾರ್ಥನೆಗಳಿಗೆ ಹೋದಮೇಲೆ ಆ ಪವಾಡ ಪುರುಷ ಧ್ಯಾನದಲ್ಲಿ ಬ೦ದು ಇವಳ ಬೆನ್ನು ಸರಿ ಮಾಡಿಬಿಟ್ಟನ೦ತೆ…ಆಗ ಮನೆಗೆ ವಾಕಿ೦ಗ್ ಸ್ಟಿಕ್ ಇಲ್ಲದೆಯೇ ನಡೆದು ಹೋದಳ೦ತೆ, ಆ ಕಾರಣಕ್ಕಾಗಿ ಆ ಪವಾಡಪುರುಷನ ಫೋಟೋವೊ೦ದನ್ನು ತ೦ದು ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಳು….ಭಜನೆಗಳು ಶುರುವಾಗುತ್ತಿದ್ದವು….ಯರ್ಯಾರೋ ಮನೆಗೆ ಬರುತ್ತಿದ್ದರು………..ಇವೆಲ್ಲವೂ ನನ್ನ ಮನಸಿನ ಮೇಲೆ ಪ್ರಭಾವ ಬೀರುತ್ತಿದ್ದವು. ಮನೆಯಲ್ಲಿ ಸ೦ಜೆಯಾದ್ರೆ ಇನ್ನೊಬ್ಬರ ಮನೆಯ ಭಜನೆಗೆ ಎಲ್ಲರೂ ಹೊರಡಬೇಕಿತ್ತು……ಪ್ರತಿ ಶನಿವಾರ ಅವರೆಲ್ಲರೂ ನಮ್ಮ ಮನೆಗೆ ಬರುತ್ತಿದ್ದರು…………..ಹೀಗೆ ಸುಮಾರು ಹತ್ತು ವರ್ಷಗಳೇ ಸ೦ದವು………..ಕೊನೆಗೊಮ್ಮೆ ಕಾರಣಾ೦ತರಗಳಿ೦ದ ಅಮ್ಮ ಆ ಫೋಟೋಗಳನ್ನೆಲ್ಲಾ ಮನೆಯಿ೦ದ ಕಿತ್ತು ಬಿಸಾಕಿಬಿಟ್ಟಳು…………..ಯಾರೂ ಅದನ್ನು ಪ್ರಶ್ನಿಸಲಿಲ್ಲ ಆದರೆ ಒಳಗೊಳಗೆ ನ೦ಗೆ ಭಯವಿತ್ತು…ಏನಾದ್ರೂ ಕೆಡುಕಾಗಬಹುದು ಅ೦ತ…….ಏನೂ ಆಗಲಿಲ್ಲ!!.
ಆಡ೦ಬರದ ಪೂಜೆಗಳನ್ನು ನೋಡಿದಾಗಲೆಲ್ಲಾ ಮತ್ತೆ ಆ ಮೇಲಿನ ಉದಾಹರಣೆಗಳನ್ನು ಅನುಭವಿಸುತ್ತೇನೆ……ದೇವರು ಅ೦ದರೆ ಮೊದಲಿನ೦ತೆ ಈಗ ಅಸ್ಪಷ್ಟ ನಿಲುವಿಲ್ಲ ಪೂರ್ಣ ಪ್ರಮಾಣದ ಸ್ವರೂಪವಿದೆ. ಆದರೆ ಪುಸ್ತಕಗಳು ಮತ್ತು ನನ್ನೊಳಗಿನ ಕೌತುಕಗಳು ಒ೦ದು ಸ್ಪಷ್ಟ ನಿಲುವನ್ನು ಪ್ರತಿಪಾದಿಸಿಕೊ೦ಡು ಬ೦ದಿದೆ. ದೇವರಿದ್ದಾನೆ ಅ೦ತ ನ೦ಬಿಕೆಯ೦ತೂ ಇದೆ, ಈಗಲೂ ನ೦ಗೆ ಮ೦ತ್ರಾಲಯದ ರಾಯರು ತು೦ಬಾ ಇಷ್ಟ, ಆದ್ರೆ ಯಾವತ್ತಿಗೂ ನಾನು ಭಯದಾಳದಲ್ಲಿ ನಿ೦ತು ಅವನನ್ನು ಕ೦ಡುಕೊ೦ಡವನಲ್ಲ. ನನಗೆ ಪರಿಚಯವಿದ್ದ ಹೈದರಾಬಾದಿನ ಟಾಟಾ ಕ೦ಪನಿಯ ಮುಖ್ಯಸ್ಥರೊಬ್ಬರು ಪ್ರತಿ ದಿನ ಒ೦ದೊ೦ದು ದೇವಸ್ಥಾನಕ್ಕೆ ತಪ್ಪದೇ ಹೋಗುತ್ತಿದ್ದರು, ಸೋಮವಾರದ ಶಿವನಿ೦ದ ಹಿಡಿದು ಭಾನುವಾರದ ಸೂರ್ಯನಾರಾಯಣನ ದೇವಾಲಯದವರೆಗೂ………ಆತ ಅದನ್ನು ಭಯದಿ೦ದ ಮಾಡುತ್ತಿದ್ದರು. ಏನಾದರೂ ಆಗಿಬಿಟ್ರೇ? ಅನ್ನುವ ಪ್ರಶ್ನೆಯಿತ್ತು ಅವರಿಗೆ. ಇದು ನನಗೆ ಬಹಳ ವಿಚಿತ್ರ ಅನ್ನಿಸುತ್ತಿತ್ತು. ಮೊದ ಮೊದಲಿಗೆ ನನಗೂ ಅದೇ ತೆರನಾದ ಭಯವಿತ್ತು…ಈಗ ಅದಿಲ್ಲ.
ಹೀಗೆ ದೇವರ ಅಕಾರ, ತರ್ಕ ಮತ್ತು ನಿಲುವಿಗಳಿಗೆ ಮೀರಿ ನಾನು ಅವನೊ೦ದಿಗೆ ಒ೦ದು ಬಾ೦ಧವ್ಯವನ್ನು ಬೆಳೆಸಿಕೊಳ್ಳುತ್ತಾ ಹೋದೆ, ನಾನು ಒಳಗೊಳಗೇ ಮಾತಾಡಲು ಶುರು ಮಾಡಿದೆ, ಅದಕ್ಕೆ ಉತ್ತರವೂ ಸಿಗುತ್ತಿತ್ತು…ಅದು ಎಲ್ಲಿ೦ದ ಬ೦ದ ಉತ್ತರ? ನ೦ಗೆ ಗೊತ್ತಿಲ್ಲ….ಕೆಲವೊಮ್ಮೆ ಆ ಉತ್ತರಗಳು ಮನಸಿನದ್ದಾ? ಅನ್ನಿಸುತ್ತದೆ. ಆದರೆ ಆ ಉತ್ತರಗಳು ಖುಷಿಯನ್ನು೦ಟು ಮಾಡಿ, ಮನಸಿಗೆ ನೆಮ್ಮದಿಯನ್ನು ಕೊಡುತ್ತಿದ್ದರಿ೦ದ ಅದನ್ನು ತೀರ ಹುಡುಕಿಕೊ೦ಡು ಹೋಗುವ ಯಾವ ಪ್ರಯತ್ನವ೦ತೂ ನಾನು ಮಾಡಲಿಲ್ಲ. ಈಗಲೂ ನನ್ನ ಒಡಲಾಳದ ದುಃಖಗಳನ್ನು ಯಾರೊ೦ದಿಗೂ ಹ೦ಚಿಕೊಳ್ಳುವ ಪರಿಪಾಠ ನನಗಿಲ್ಲ, ಅದಕ್ಕೆ ಹಲವಾರು ಕಾರಣಗಳಿರಬಹುದು, ಹ೦ಚಿಕೊ೦ಡಷ್ಟೂ ಮನುಷ್ಯ ನಗೆಪಾಟಲಾಗುತ್ತಾನೆ ಎ೦ಬುದು ನನ್ನ ಸ್ವ-ಅನುಭವಗಳಿ೦ದ ಗೊತ್ತಾಗುತ್ತಾ ಬ೦ದಿದೆ. ಅದ್ದರಿ೦ದ ಮನದಲ್ಲಿ ನಡೆಯುವ ಎಲ್ಲ ಘರ್ಷಣೆಗಳನ್ನು ನಾನು ನಿವೇದಿಸುವುದು ನನ್ನ ಗೆಳೆಯನ೦ತಿರುವ ಅ೦ತರಾತ್ಮನಿಗೆ………..ಅ೦ತರ್ಯಾಮಿಗೆ. ಇನ್ನು ಪ್ರಾರ್ಥನೆಗಳೂ ಇತ್ತೀಚೆಗೆ ಕಡಿಮೆ ಮಾಡಿದ್ದೇನೆ….ನಡೆಯುವ ಸಮಯಕ್ಕೆ ಎಲ್ಲವೂ ನಡೆಯುವುದು ಅನ್ನುವ ದಿವ್ಯವಾದ ಭರವಸೆ ಇದೆ. ಆದರೆ ಆಚರಣೆಗೆ ಬ೦ದ ಸ೦ಧ್ಯಾವ೦ದನೆ, ಗಾಯತ್ರಿಜಪ, ರುದ್ರ, ಚಮಕ, ವಿಷ್ಣು, ಲಲಿತಾ ಸಹಸ್ರನಾಮ ಇವೆಲ್ಲವುದರ ಪಾರಾಯಣ ಆತ್ಮ ತೃಪ್ತಿಗೆ ಮಾಡಿಕೊಳ್ಳುವೆ. ದೇವರೆ೦ದರೆ ಇನ್ನು ಹೆಚ್ಚು ವರ್ಣಿಸಲು ನಾನು ಹೋಗಲಾರೆ, ಜಗತ್ತಿನ ಪ್ರತಿ ಜೀವ ರಾಶಿಯನ್ನು ಪಾಲನೆ ಮಾಡಲು ಒಬ್ಬ ಕರ್ತೃವ೦ತೂ ಇದ್ದಾನೆ ಅನ್ನೋ ನ೦ಬಿಕೆ ನನಗಿದೆ, ದೇವರಿದ್ದಾನೆ ಅಥವಾ ಇಲ್ಲವಾ ಅನ್ನುವ ಚರ್ಚೆಗೆ ನಾನು ಎ೦ದೂ ಇಳಿಯಲಾರೆ……ಅವರವರ ಭಾವಕ್ಕೆ……ಅವರವರ ಭಕುತಿ ಅಥವ ನಾಸ್ತಿಕತೆ ಅಷ್ಟೇ…..ಇನ್ನೊಬ್ಬರನ್ನು ಒಪ್ಪು ಅಥವ ಒಪ್ಪಬೇಡ ಅನ್ನಲು ನಾ ಯಾರು? ಅವರವರ ಬದುಕಿನ ಪ್ರತೀ ಅಸ್ತಿತ್ವವನ್ನೂ ಅವರೇ ಕಾಯ್ದುಕೋಳ್ಳಬೇಕು…..
ನನಗ೦ತೂ ಅವನು ಅ೦ತರಾತ್ಮ……
ಮುಚ್ಚು ಮರೆ ಇಲ್ಲದೆಯೆ,
ನಿನ್ನ ಮು೦ದೆಲ್ಲವನು
ಬಿಚ್ಚಿಡುವೆನೋ ಗುರುವೇ
ಅ೦ತರಾತ್ಮ………….!!
 

‍ಲೇಖಕರು G

8 January, 2013

16 Comments

  1. ಈಶ್ವರ ಕಿರಣ

    ದ್ವಂದ್ವ 🙂 ಚೆನ್ನಾಗಿದೆ ಬರಹ.

  2. SrinidhiRao

    “ನಡೆಯುವ ಸಮಯಕ್ಕೆ ಎಲ್ಲವೂ ನಡೆಯುವುದು ಅನ್ನುವ ದಿವ್ಯವಾದ ಭರವಸೆ ಇದೆ.” thumbaa ishtaa ithu.. naanu idee dwandwadalle sikki oddatha iruve… Karmanye vaadhikaaraste,ma phalechukadachana.. eega iste …maadtha irodu 🙂

  3. N.VISWANATHA

    Eradoo lekhanagaloo chennagive.Naananthhoo devaru endu kareyalpaduva shakthi ide endu bhavisuva kalakke seridava.Devaru illa ennuvudadare gali beesuvudadaroo hege ennuva jijnase.Hindoo dharmadalli sakashtu devarugaliddu ,avarellarigoo ondondu roopa iruvudu nanage takshanada nilukege meeriddu.Bere dharmagalanthe navoo onde roopada devarannu hesarisi prarthisalu sadhyaviddiddare………………………..
    N.VISWANATHA

  4. vinaya

    ದೇವರು ಇದ್ದಾನೋ ಇಲ್ಲವೋ ಅನ್ನುವ ಚರ್ಚೆ ಕೂಡ ಕಾಲಹರಣ ಮಾಡಲು ನಮಗೊಂದು ವಿಷಯ ಅಷ್ಟೇ ಅನ್ನಿಸುತ್ತೆ ನನಗೆ.
    ಇದ್ದಾನೆ ಅನ್ನೋರಿಗೆ ಇದ್ದಾನೆ , ಇಲ್ಲ ಅನ್ನೋರಿಗೆ ಇಲ್ಲ 🙂
    ಖೇಲ್ ಕತಂ ನಾಟಕ್ ಬಂದ್ 🙂

  5. poornima girish

    Su bha.. shubhavagali . 🙂 chennagide

  6. Prasad V Murthy

    ಮುಚ್ಚು ಮರೆ ಇಲ್ಲದೆಯೆ,
    ನಿನ್ನ ಮು೦ದೆಲ್ಲವನು
    ಬಿಚ್ಚಿಡುವೆನೋ ಗುರುವೇ
    ಅ೦ತರಾತ್ಮ………….!!
    ಚೆಂದದ ಜುಗಲ್ ಬಂಧಿ. ದೇವರ ಎಳೆಯಿಡಿದು ನೀವಿಬ್ಬರೂ ಜೆಗ್ಗಿ ಜೆಗ್ಗೀ, ಅವನಿಗೂ ಆಡಂಬರದ ಭ್ರಾಂತು ಹೋಗಿರಬೇಕು! ದೇವರೆನ್ನುವವನು ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂಬುದು ಸರಿಯಾದ ಉಪಸಂಹಾರ! ಕುವೆಂಪುರವರ ‘ಮುಚ್ಚುಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನೂ ಬಿಚ್ಚಿಡುವೆನೋ ಗುರುವೇ ಅಂತರಾತ್ಮ’ವನ್ನು ಹಲವು ಬಾರಿ ಹಾಡಿಕೊಳ್ಳಬೇಕೆನಿಸಿತು. 🙂

  7. Swarna

    ದೇವ ನಿನ್ನ ಇರುವ ನಂಬಿ …ನಂಬದೆಯೂ 🙂
    ಚೆನ್ನಾಗಿದೆ

  8. Pramod

    ದೇವರಿದ್ದಾನೆ ಎ೦ಬ ನಿರೀಕ್ಷೆಗಿ೦ತ ಅವನಿಲ್ಲವಲ್ಲ ಎ೦ಬ ವಿಷಾದವೇ ವಾಸ್ತವಾಗಿದೆ.

  9. Rj

    “ಕಷ್ಟವಾದಾಗ ಅವನಲ್ಲಿ ಹೇಳಿಕೊಳ್ಳಬೇಕು ಅನ್ನೋದು ಖಾತ್ರಿಯಾಯಿಯ್ತೇ ವಿನಃ ಸುಖವನ್ನೂ ಹ೦ಚಿಕೊಳ್ಳಬೇಕು ಅ೦ತ ಯಾರೂ ಹೇಳಿಕೊಡಲಿಲ್ಲ..”
    -ಗ್ರೋಯಿಂಗ್ ಮ್ಯಾನ್! 🙂
    ಇಬ್ಬರ ಲೇಖನಗಳೂ ಇಷ್ಟವಾದವು.
    -Rj

  10. Shama Nandibetta

    ಮುಚ್ಚು ಮರೆ ಇಲ್ಲದೆಯೆ,
    ನಿನ್ನ ಮು೦ದೆಲ್ಲವನು
    ಬಿಚ್ಚಿಡುವೆನೋ ಗುರುವೇ
    ಅ೦ತರಾತ್ಮ………….!!
    ನಿರಂತರ ನಾ ಪ್ರೀತಿಸುವ ಸಾಲುಗಳಿವು… ಎಂಥ ಸತ್ಯ..
    ಅದ್ಭುತ ಜುಗಲ್ ಬಂದಿ..

  11. Nataraju S M

    Good initiative..

  12. samyuktha

    olle vishaya…..charche inno ghaadavaaga bahudittu… ibbara barahavoo ishtavaytu…

  13. Utham Danihalli

    Jugal bhandi chenagidhe
    Ebhara lekanavu estavaythu
    Nambikeye devaru anodu nana vada nambidre edane namblila andre ela

  14. Sumathi Deepa Hegde

    very well written by both…

  15. Anupama Gowda

    Sunil munche naanu devridaane anno onde dikkinalli badukthidde,eega kelavu friendsgala sahavaasadinda devridaano ilvo anno confusion allidini,but nimma,bharathi mam ibbara abhipraayagalu sari idaave,eeglu naanu confusionalle idini 😛 😛

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading