ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದು ಸತ್ಯಣ್ಣವರ ಕವಿತೆ- ಪೆನ್ನು-ಹಾಳೆಯ ಎರಡು ಜಗಳ…

ಸಿದ್ದು ಸತ್ಯಣ್ಣವರ

ಜಗಳ 1

ಕಾಗದ ಪೆನ್ನಿಗೆ ಒಣಜಗಳ
ಬಾಯಿಗೆ ಬಾಯಿ
ಗುದ್ದಾಡಿಕೊಂಡು
‘ಸಾಯಿ’ ಪರಸ್ಪರ ಬೈದುಕೊಂಡವು

ಪೆನ್ನು ಜೋರಾಗಿ ಚುಚ್ಚಲು
ಮುಂದಾಯಿತು
ಹಾಳೆ ಮೈಯುಬ್ಬಿಸಿತು

ಪೆನ್ನಿನ ನಿಬ್ಬು ತುಂಡಾದರೆ
ಹಾಳೆಯ ಹಗುರ ಕಳೇಬರ ಹಾರಾಡಿತು

ಪೆನ್ನಿಂದ ರಕ್ತ ಸೋರಿತು
ಕಪ್ಪಗೆ
ಚೀರಿತದು,
ರಕ್ತವನ್ನು ಬರೀ ಕೆಂಪು ಎಂದದ್ದ ನೆನಸಿಕೊಂಡು

ಹಾಳೆಯ ಕಳೇಬರ ಕೊಳೆತು ದುರ್ನಾತದೊಡಗೂಡಿ ಮಿಳಿತು ಹಳದಿಯಾಗಿದ್ದವು
ಎಲ್ಲಿದೆ ಸಬೂಬು?
ಹಾಳೆಗಳೆಲ್ಲ ಬರೀ ಬಿಳಿಯಾಗಿರಲೆಂಬುದಕ್ಕೆ?
ಹಾಳೆಗಿನ್ನೂ ದಕ್ಕದ ಸತ್ತ ಅನುಭವ

ಮುರಿದು ಬಿದ್ದ ನಿಶಕ್ತ ನಿಬ್ಬು
ತುಂಡು ತುಂಡಾದ ಹಳದಿ ಹಾಳೆಗಳ ಕಂಡು
ನಕ್ಕೆಂದಿತು ‘ನೀ ಸತ್ತೆ’

ಹಾಳೆ ತಾ ಸತ್ತರೂ
ಮತ್ತೊಂದು ಬಿಳಿ ಕಟ್ಟ ತೋರಿಸಿ ಹೆದರಿಕೆಯಲೇ ನಗಲು ತಯಾರಾಗತೊಡಗಿತು

ಜಗಳ 2

‘ದಪ್ಪ ಬರೆಯುತ್ತಿ’
ಹಾಳೆಯ ಜಗಳ
ನಾನಿರುವುದೇ ಹಾಗೇ ಪೆನ್ನಿನ ಸಬೂಬು

ಪೆನ್ನ ಅಂಚು ಬದಲಾಗಲಿಲ್ಲ
ಮುನಿಸು ;
ಎರಡೂ ಕೂಡಲಿಲ್ಲ
ಆ ಮನೆಯಲ್ಲಿ

ಎಷ್ಟು ಆಲೋಚನೆಗಳ,
ಅದೆಷ್ಟು ಲಕ್ಷ ಅಕ್ಷರಗಳ
ಭ್ರೂಣ ಹತ್ಯೆಯಾಗಿರಬಹುದು
ಪ್ರತಿದಿನ ?

ಯಾವನೋ ಎಲ್ಲೊ ಯೋಚಿಸುವಾಗಲೂ ಈ ಜಗಳ
ಬಗೆಹರಿದಿರಲಿಲ್ಲ

‍ಲೇಖಕರು Admin

17 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading