ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಟಿ ಆಫ್ ಲೈಟ್ಸ್…

ಜಯರಾಮಾಚಾರಿ

ಬಹುರೂಪಿ, ಸಂಜಯನಗರ 2023

“ತಾನು ಕನಸು ಕಂಡಂತೆ ಶ್ರೀಮಂತಳಾಗಿ ಬೆಳೆದ ಬಿಂದು ಓಡಿಸುತ್ತಿದ್ದ ಆಡಿ ಕ್ಯೂ೫ ಕಾರು ಸರ್ಕಲ್ ದಾಟಿ ಸ್ಟೇಡಿಯಂನಲ್ಲಿ ಲೆಫ್ಟ್ ಎಳೆದು ಅಲ್ಲೇ ಮೂವತ್ತು ಅಡಿ ರೋಡಿನ ಅಂಚಿನಲ್ಲಿ ಪಾರ್ಕ್ ಆಯ್ತು, ನೀಲಿ ಕಲರಿನ ಪೆನ್ಸಿಲ್ ಡ್ರೆಸ್, ಅದರ ಮೇಲೆ ಬೆಳ್ಳನೆಯ ಜಾಕೆಟ್, ಕೈಯಲ್ಲಿ ಕಪ್ಪನೆಯ ವ್ಯಾಲೆಟ್ ಹಿಡಿದುಕೊಂಡು ಅವಸರದಲ್ಲಿ ನಡೆಯಲು ಶುರುಮಾಡಿದಳು, ‘ರಂಗಶಂಕರದಲ್ಲಿ ಕೊನೆಯ ಬೆಲ್ ಹೊಡೆದರೆ ಮುಗಿಯಿತು ಆಮೇಲೆ ಬೇಡಿಕೊಂಡರು ಒಳಗೆ ಬಿಡುವುದಿಲ್ಲ’ ಎಂದು ಅವಳಿಗೆ ಭಾರ್ಗವ್ ಹೇಳಿದ್ದ, ಹೈ ಹೀಲ್ಡ್ ಹಾಕಿಕೊಂಡರೂ ಆರಾಮಾಗಿ ನಡೆದು ಬುಕ್ ಮೈಶೋನಲ್ಲಿ ಬುಕ್ ಮಾಡಿದ ಟಿಕೆಟ್ ತೋರಿಸಿದಳು, ಒಳಗೆ ಹೋಗಿ ಕೂತಳು. ಕೊನೆಯ ಬೆಲ್ ಹೊಡೆಯಿತು. ನಾಟಕ ಶುರು ಆಯಿತು, ಹಯವದನ. ಭಾರ್ಗವ ದೇವದತ್ತನಾಗಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ, ಎಲ್ಲರೂ ನಿಂತು ಸುಮಾರು ಹೊತ್ತು ಚಪ್ಪಾಳೆ ತಟ್ಟಿದರು, ಅವನನ್ನು ಅಭಿಮಾನಿಗಳು ಚಿತ್ರಕರ್ಮಿಗಳು ಮುತ್ತಿಕೊಂಡರು, ಆಟೋಗ್ರಾಫ್  ಸೆಲ್ಫಿಗಳ ಸುರಿಮಳೆಯಲ್ಲೂ ಮಿಂಚಿನಿನಂತೆ ನೇರ ನಿಂತು ಭಾರ್ಗವನನ್ನ ಹೆಮ್ಮೆಯಿಂದ ನೋಡುತ್ತಿದ್ದ ಬಿಂದು ಕಣ್ಣಿಗೆ ಬಿದ್ದಳು. ಭಾರ್ಗವ ಮುತ್ತುವರಿದವರಿಂದ ನಿಧಾನವಾಗಿ ತಪ್ಪಿಸಿಕೊಂಡು ಬಿಂದುವಿನ ಬಳಿ ಬಂದ, ತಬ್ಬಿಕೊಂಡ.

ಬಿಂದು ಕಣ್ಣಂಚಲ್ಲಿ ನೀರಿಟ್ಟುಕೊಂಡೇ ‘ಐ ಆಮ್ ಪ್ರೌಡ್ ಆಫ್ ಯೂ’ ಎಂದಳು, ಅವನು ‘ಐ ಲವ್ ಯೂ’ ಎಂದ, ಬಿಂದು ‘ಸರಿ ಮೇಕಪ್ ತೆಗೆದು ಬಾ’ ಎಂದು ಹೊರಗೆ ಹೋದಳು. ಭಾರ್ಗವ ಮೇಕಪ್ ಕಳಚಿ ಲೂಸು ಲೂಸಾದ ಸಾದಾ ಟೀ ಶರ್ಟು ದೊಗಳೆ ಪ್ಯಾಂಟ್ ಹಾಕಿಕೊಂಡು ತನ್ನ ಉದ್ದ ಕೂದಲನ್ನು ಹಿಂದೆ ಸರಿಸಿ ಬ್ಯಾಂಡ್ ಹಾಕಿಕೊಂಡು ಈಚೆ ಬಂದ, ಕಾರಿಗೆ ಜಿಗಿದ, ಬಿಂದುವಿನ ಕೈ ಹಿಡಿದ, ಅವಳ ತುಟಿಗೆ ಗಾಢವಾಗಿ ಕಿಸ್ ಮಾಡಿದ, ಬಿಂದು ನಗುತ್ತಲೇ ಗಾಡಿ ಶುರು ಮಾಡಿದಳು. ‘ಮತ್ತೆ ನೀನು ಸಿಗೋಲ್ವೇನೋ ಈ ನಾಟಕಕ್ಕೆ ಬರೋಲ್ವೇನೋ ಅಂದ್ಕೊಂಡಿದ್ದೆ’ ಎಂದ, ಬಿಂದು ಮಾತು ಸಾಕು ಎಂದು ಶ್!!! ಮಾಡಿ ಗೇರ್ ಬದಲಾಯಿಸಿದಳು. ಕೊನೆಯಿಲ್ಲದ ಅವರ ಪ್ರೀತಿಯ ಪ್ರಣಯದ ಪಯಣ ಶುರುವಾಯ್ತು”    

ಕಡೆಯ ಸಾಲು ಮುಗಿಯುತ್ತಿದ್ದಂತೆ, ಅಲ್ಲಿಗೆ ಬಂದಿದ್ದ ಓದುಗರು ಚಪ್ಪಾಳೆ ತಟ್ಟಿದರು. ಅದು ಭಾರ್ಗವನ ಮೊದಲ ಕಾದಂಬರಿಯ ಬಿಡುಗಡೆ ಸಮಾರಂಭ, ಒಂದಿಪ್ಪತ್ತು ಜನ ಸೇರಿದ್ದರು, ಭಾರ್ಗವ ಕಾದಂಬರಿಯ ಕೊನೆಯ ಸಾಲು ಓದಿ ಮುಗಿಸಿದ, ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಭಾರ್ಗವನನ್ನು ಒಮ್ಮೆ ಆತ್ಮೀಯವಾಗಿ ತಬ್ಬಿ ಭುಜವನ್ನ ತಟ್ಟಿದರು, ಅವರಿಗೆ ಗೊತ್ತಿತ್ತು ಇದು ಹೆಚ್ಚು ಕಮ್ಮಿ ಭಾರ್ಗವನದೇ ನಿಜವಾದ ಕತೆ ಎಂದು ಆಗಾಗಿ ಅವರು ಕೂಡ ಭಾವುಕವಾಗಿದ್ದರು, ‘ಸಿಟಿ ಆಫ್ ಲೈಟ್ಸ್’ ಎಂಬ ಹೆಸರಿನ ಇದೆ ಕಾದಂಬರಿ ಧಾರಾವಾಹಿಯಾಗಿ ಅವಧಿಯಲ್ಲಿ ೨೫ ಕಂತು ಪ್ರಕಟವಾಗಿತ್ತು.   

**

ಮಹಾಲಕ್ಷ್ಮಿ ಲೇಔಟ್ 2018

ಇನ್ನೇನೋ ಆಪಿನಲ್ಲಿ ಲಾಗ್ ಔಟ್ ಆಗಿ ರೂಮಿಗೆ ಹೋಗೋಣ ಎಂದು ತನ್ನ ಪ್ಲಾಟಿನಂ ಬೈಕನ್ನ ಕಿಕ್ ಹೊಡೆದ ಮೂರನೇ ಕಿಕ್ಕಿಗೆ ಶುರುವಾಯ್ತು, ಅಷ್ಟರಲ್ಲಿ ಮತ್ತೊಂದು ಆರ್ಡರ್ ನೋಟಿಫಿಕೇಶನ್, ರಫೀಕ್ ಶಾಪಿನ ಶೆವರ್ಮ ರೋಲ್, ಆರ್ಡರ್ ಕೊಡಬೇಕಾದ ಅಡ್ರೆಸ್ ನೋಡಿದ ಮಹಾಲಕ್ಷ್ಮಿ ಲೇಔಟ್ ಆಂಜನೇಯ ದೇವಸ್ಥಾನದ ಹಿಂದಿನ ರಸ್ತೆ, ರೂಮಿಗೆ ಅದೇ ದಾರಿ ಬಳಸಿ ಹೋಗಬೇಕು, ಸರಿ ಅದು ಮುಗಿಸಿ ಲಾಗ್ ಔಟ್ ಮಾಡೋಣ ಎಂದುಕೊಂಡು ಯಶವಂತಪುರದ ರಫೀಕ್ ಶಾಪಿನ ಕಡೆ ಬೈಕು ತಿರುಗಿಸಿದ. ಬೈಕು ಮೇಲೆ ಕೂತು ವಾಟ್ಸಾಪಲ್ಲಿ ಮುಳುಗಿ, ಹತ್ತು ನಿಮಿಷ ಕಾದ ಕೂಡಲೇ ‘ಸ್ವೀಗ್ಗಿ ಆರ್ಡರ್ ಶೆವರ್ಮ ಒಂದು’ ಎಂದು ಕೂಗಿದಾಗ ಭಾರ್ಗವ ಮೊಬೈಲಲ್ಲಿ ಆರ್ಡರ್ ರಿಸೀವ್ ಮಾಡಿದನ್ನು ಅಪಡೇಟ್ ಮಾಡಿ ಕವರ್ ತೆಗೆದುಕೊಂಡು ಕಿವಿಗೆ ಬೋಲ್ಟ್ಸ್ ಹಿಯರ್ ಬಡ್ಸ್ ಸಿಗಿಸಿಕೊಂಡು ಹೊರಟ. ಅವನ ಹಿಯರ್ ಬಡ್ಸಿನಲ್ಲಿ ‘ಸಿಟಿ ಆಫ್ ಲೈಟ್ ಆರ್ ಯೂ ಶೈನಿಂಗ್ ಜಸ್ಟ್ ಫಾರ್ ಮೀ’ ಹಾಡು ಲೂಪಿನಲ್ಲಿ ಕಳೆದ ಮೂರು ತಿಂಗಳಿಂದ ಹಾಡುತ್ತಿದೆ, ‘ಲಾಲಾ ಲ್ಯಾಂಡ್’ ಸಿನಿಮಾ ನೋಡಿದ ಮೇಲೆ ತುಂಬಾ ಕನೆಕ್ಟ್ ಆಗಿದ್ದ ಆ ಸಿನಿಮಾಕ್ಕೆ ಅವತ್ತಿನಿಂದ ಅದೇ ಹಾಡು ಅವನ ಕಿವಿಯಲ್ಲಿ. ಆ ಹಾಡು ಅವನಿಗೇನೇ ಬರಿದಂತಿದೆ ಎಂದು ಅವನಿಗೆ ಅನಿಸಿತ್ತು.

“ಮೇಡಂ ಸ್ವಿಗ್ಗಿ, ನಂಬರ್ 105” 

“ಹಾ ಮೇಲೆ ಬನ್ನಿ ಫಸ್ಟ್ ಫ್ಲೋರ್”

“ಸರಿ ಮೇಡಂ”   

ಗೇಟು ತೆರೆದ, ಮೂರನೇ ಬಿಲ್ಡಿಂಗಿನ ನಾಯಿ ಬೊಗಳಿತು, ಗೇಟು ದಾಟಿ ಮೆಟ್ಟಿಲು ಹತ್ತಿ ಮೊದಲ ಫ್ಲೋರ್ ತಲುಪಿದ ಒಂದೇ ಮನೆ, ಬೆಲ್ ಒತ್ತಿದ, ಹಿಯರ್ ಬಡ್ಸ್ ತೆಗೆದ, ಆಶ್ಚರ್ಯವಾಯ್ತು. ಹಿಯರ್ ಬಡ್ಸ್ ತೆಗೆದರು ಅದೇ ಹಾಡು. ‘ಯಸ್, ಆಲ್ ವೀ ಆರ್ ಲುಕಿಂಗ್  ಫಾರ್ ಐಸ್ ಲವ್ ಫ್ರಮ್ ಸಂಒನ್ ಎಲ್ಸ್ – ಎ ರಶ್, ಎ ಗ್ಲಾನ್ಸ್, ಎ ಟಚ್, ಎ ಡಾನ್ಸ್’, ಆಮೇಲೆ ಗೊತ್ತಾಯ್ತು ಮನೆಯ ಒಳಗಿನಿಂದ ಅದೇ ಹಾಡು ಬರ್ತಿದೆ, ಖುಷಿಯಾಯ್ತು. ಹಾಡನ್ನು ಕೇಳಿಸಿಕೊಂಡೇ ಹಾಡನ್ನು ಗುನುಗುತ್ತ ನಿಂತ. ಬಾಗಿಲು ತೆರೆದದ್ದು ಬಿಂದು. ಬೆಳ್ಳಿ ಬಟ್ಟಲಿನ ಕಂಗಳಿನ, ಹೆಚ್ಚು ಅಲ್ಲ ಕಮ್ಮಿಯೂ ಅಲ್ಲದ ಮೂಗಿನ, ತುಸುವೇ ಪಿಂಕ್ ಕಲರ್ ಲಿಪ್ ಸ್ಟಿಕ್ ಬಳಿದುಕೊಂಡ ತುಟಿಯ, ಬೆಳ್ಳನೆಯ ಯಾವ ಅಡೆತಡೆಯಿಲ್ಲದ ಕತ್ತಿನ, ಬಿಳಿ ಟಿ ಶರ್ಟ್, ಮಂಡಿ ಮೇಲೆ ತೊಡೆ ಕಾಣುವ ಶಾರ್ಟ್ಸ್, ಸ್ಲಿಮ್ ದೇಹ, ಘಮ್ಮೆನ್ನುವ ಸೆಂಟು, ಹಾಡನ್ನು ಹಾಡುತ್ತಲೇ ಬಾಗಿಲು ತೆಗೆದು ನಿಂತಳು. ಭಾರ್ಗವ ಅವಳನ್ನು ನೋಡುತ್ತಾ ನಿಂತಿದ್ದ.

“ಎಷ್ಟಾಯ್ತು?” 

“135” 

“ತಗೊಳ್ಳಿ” 

“ಮೇಡಂ.. ಐನೂರು ಚೇಂಜ್ ಇಲ್ಲ” 

“ಅಯ್ಯೋ ನನ್ ಹತ್ರಾನೂ ಇಲ್ವಲ್ಲ ……ಹ್ಮ್ಮ್ಮ್…..ಫೋನ್ ಪೇ ಮಾಡ್ಲಾ” 

“ಹಾ ಮಾಡಿ ಮೇಡಂ” 

“ನಂಬರ್ ಅದೇನ ನೀವು ಕಾಲ್ ಮಾಡಿದ್ರಲ್ಲ” 

“ಇಲ್ಲ ನನ್ ನಂಬರಿಗೆ ಮಾಡಿ ಅದು ಆಫೀಸಿನ ನಂಬರ್” 

“ಹ್ಮ್ಮ್ ಹೇಳಿ” 

“9876543210” 

(ಹಾಡು – ಥಿಂಕ್ ಐ ವಾಂಟ್ ಇಟ್ ಟು ಸ್ಟೇ -)

ಬಿಂದು ಮತ್ತು ಭಾರ್ಗವನ ಬಾಯಿಗೆ ಸಾಲುಗಳು ಬಂದು ಇಬ್ಬರು ಗುನುಗಿದರು 

“ಸಿಟಿ ಆಫ್ ಸ್ಟಾರ್ಸ್ ..ಆರ್ ಯು ಶೈನಿಂಗ್ ಜಸ್ಟ್ ಫಾರ್ ಮೀ?”

ಬಿಂದು ಭಾರ್ಗವನ ಮುಖ ನೋಡಿದಳು. ನಕ್ಕಳು 

“ಬಂತಾ”

“ಹಾ ಮೇಡಂ ಬಂದಿದೆ” 

“ಥ್ಯಾಂಕ್ ಯೂ” 

ಭಾರ್ಗವ ಖುಷಿಯಿಂದ ಮತ್ತೆ ಮತ್ತೆ ಬಿಂದುವಿನ ಕಣ್ಣುಗಳನ್ನು, ಅವಳು ನಕ್ಕಾಗ ಗುಳಿ ಬಿದ್ದ ಕೆನ್ನೆಗಳನ್ನು, ಬಿಳಿ ಹಲ್ಲುಗಳನ್ನು, ಕೆಂಪು ತುಟಿಯನ್ನು ನೆನಪಿಸ್ಕೊಳ್ಳುತ್ತ ಗಾಡಿಯನ್ನು ಕಿಕ್ ಮಾಡಿದ, ಅಪರೂಪಕ್ಕೆ ಎಂಬಂತೆ ಒಂದೇ ಕಿಕ್ಕಿಗೆ ಗಾಡಿ ಸ್ಟಾರ್ಟ್ ಆಯ್ತು. ಅವನು ಖುಷಿಯಿಂದ ಹೋದದ್ದನ್ನು ಕಿಟಿಕಿಯಿಂದ ಬಿಂದು ನೋಡಿ ನಕ್ಕಿದ್ದು ಅವನಿಗೆ ಗೊತ್ತಾಗಲಿಲ್ಲ. 

**

ಎಮ್ಮಾ ವಾಟ್ಸನ್ ಡಿಪಿ ಇರೋ ಬಿಂದುವಿನ ಪ್ರೊಫೈಲನ್ನ ಭಾರ್ಗವ, ರಿಯಾನ್ ಗೋಸ್ಲಿಂಗ್ ಡೀಪಿ ಇರೋ ಭಾರ್ಗವನ ಪ್ರೊಫೈಲನ್ನ ಬಿಂದು ನೋಡುತ್ತಾ, ಮೆಸೇಜು ಮಾಡೋದೋ ಬೇಡವೋ ಎಂದು, ‘ಆನ್ ಲೈನ್’ ಎಂದು ಇರುವ ವಾಟ್ಸಾಪನ್ನೇ ನೋಡುತ್ತಿದ್ದರು, ಇಬ್ಬರಿಗೂ ತಾವೇ ಮೊದಲು ಮೆಸೇಜು ಮಾಡುವ ಧೈರ್ಯವಿಲ್ಲ, ಒಬ್ಬ ಡೆಲಿವರಿ ಬಾಯ್ ಗೆ ನಾನೆ ಹೇಗೆ ಮಾಡಲಿ, ನಾನು ಮಾಡಿದರೆ ಏನು ಅನ್ಕೋತಾನೋ ಎಂದು ಬಿಂದು, ಆರ್ಡರ್ ಮಾಡಿದ ನಂಬರನ್ನು ಸೇವ್ ಮಾಡಿ ಮೆಸೇಜು ಮಾಡಿದರೆ ಅಕಸ್ಮಾತ್ ಆ ಹುಡುಗಿಗೆ ಸಿಟ್ಟು ಬಂದು ಕಂಪ್ಲೇಂಟ್ ಮಾಡಿ ಕೆಲಸ ಹೋದರೆ ಎಂಬ ಭಯದಿಂದ ಭಾರ್ಗವ, ಹಂಗೂ ಧೈರ್ಯ ಮಾಡಿ ಗುಡ್ ಮಾರ್ನಿಂಗ್ ಇಲ್ಲ ಗುಡ್ ನೈಟ್ ಕಳಿಸೋಣ ಎಂದುಕೊಂಡ, ಮೀಟರ್ ಆಫ್ ಆಗಿ ಸುಮ್ಮನಿದ್ದ, ಪ್ರತಿ ಶೆವರ್ಮ ರೋಲ್ ಮತ್ತು ರಫೀಕ್ ಹೋಟೆಲಿನ ಆರ್ಡರ್ ಬಂದಾಗ ಅದು ಬಿಂದುವಿನದೇ ಆಗಿರಬಹುದು ಎಂದು ಖುಶಿಯಾಗಿ, ಅದು ಅವಳದಲ್ಲ ಎಂದು ಗೊತ್ತಾದಾಗ ಬೇಜಾರಾಗುತ್ತಿದ್ದ. ಈ ಕಡೆ ಬಿಂದುವು ಕೂಡ ಒಂದೆರಡು ಸಲ ಶೆವರ್ಮ ರೋಲ್ ಆರ್ಡರ್ ಮಾಡಿ ಅವನೇ ತಂದುಕೊಡ್ತಾನೇನೋ ಎಂದು ಕಾಯುತ್ತ ನಿಂತು ಇನ್ಯಾರೋ ಬಂದು ಡೆಲಿವರಿ ಮಾಡಿದಾಗ ಬೇಜಾರಾಗಿದ್ದಳು. ಅವರಿಬ್ಬರ ವಾಟ್ಸಾಪ್ ಪ್ರೊಫೈಲ್ ಸ್ಟೇಟಸ್ ಒಂದೇ ಆಗಿತ್ತು ‘ಸಿಟಿ ಆಫ್ ಲೈಟ್ಸ್ ಆರ್ ಯು ಶೈನಿಂಗ್ ಜಸ್ಟ್ ಫಾರ್ ಮೀ ..’ ಅದೊಂದು ಹಾಡು ಅದೊಂದು ಸಾಲು ಎಲ್ಲೆಲ್ಲೋ ಇದ್ದ ಅವರಿಬ್ಬರನ್ನು ಒಂದು ಮಾಡಿತ್ತು.

ಕೊನೆಗೂ ಬಿಂದು ಧೈರ್ಯ ಮಾಡಿ ಒಂದು ಟೈಟಾದ ಟೀಶರ್ಟ್ ಅದರ ಮೇಲೊಂದು ಜಾಕೆಟ್, ನೀಲಿ ಜೀನ್ಸ್ ಧರಿಸಿ, ಪೋನಿ ಟೆಲ್ ಹಾಕಿಕೊಂಡು, ಸ್ಪಾಟಿಫೈನಲ್ಲಿ ‘ಸಿಟಿ ಆಫ್ ಲೈಟ್ಸ್’ ಹಾಡನ್ನ ಲೂಪಲ್ಲಿ ಇಟ್ಟುಕೊಂಡು ವೆಸ್ಪಾ ಗಾಡಿ ಈಚೆ ತೆಗೆದು ರಫೀಕ್ ಅಂಗಡಿಯ ಲೊಕೇಶನ್ ಮ್ಯಾಪ್ ಹಾಕಿಕೊಂಡು ಹೊರಟಳು. ಗುಜರಿ ಅಂಗಡಿಯಲ್ಲಿ ಬಿಟ್ಟ ಗುಲಾಬಿ ಹೂವಿನಂತೆ ಅವಳನ್ನು ಅಲ್ಲಿರುವವರೆಲ್ಲ ನೋಡುತ್ತಿದ್ದರು, ರಫೀಕನ ಶಾಪಿನ ಮುಂದೆ ಜನ, ಸ್ವೀಗ್ಗಿ ಝೋಮೋಟೋ ಡೆಲಿವರಿ ಹುಡುಗರು ಕೂಡ ಇದ್ದರು, ಅದರಲ್ಲಿ ಭಾರ್ಗವ ಇರಬಹುದಾ? ಎಂದು ಅವಳ ಕಣ್ಣುಗಳು ಹುಡುಕಲು ಶುರುಮಾಡಿತು, ಅವನನ್ನು ಕಂಡು ಹಿಡಿಯೋದು ಅಷ್ಟು ಕಷ್ಟವಾಗಲಿಲ್ಲ, ಕ್ರೀಮ್ ಕಲರಿನ ಹಿಯರ್ ಬಡ್ಸ್ ನೋಡಿ ಅವನನ್ನು ಗುರುತು ಹಿಡಿದಳು, ಆದರೆ ಹೇಗೆ ಮಾತಾಡಿಸೋದು, ತಾನೇ ಹೋಗಿ ಮಾತಾಡಿಸಿದರೆ ಸರಿ ಹೋಗೋಲ್ಲ ಚೀಪ್ ಆಗಿಬಿಡ್ತೀನ ಅನಿಸಲು ಶುರು ಆಯ್ತು, ಆದರೆ ಅಪರೂಪಕ್ಕೆ ಸಿಕ್ಕವನು ಮತ್ತೆ ಮಿಸ್ ಆದರೆ ..ಅಲ್ಲೇ ನಿಂತಲ್ಲೇ ಒದ್ದಾಡಿದಳು, ಕೊನೆಗೆ ಅವನ ಬೈಕು ಕಣ್ಣಿಗೆ ಬಿಟ್ಟು, ತನ್ನ ವೆಸ್ಪಾ ಗಾಡಿಯನ್ನು ಅದರ ಪಕ್ಕ ನಿಲ್ಲಿಸಿ ಅವನು ಬರುವುದನ್ನೇ ಕಾದು ಅವನು ಬರುತ್ತಿದ್ದಂತೆ ಬೇರೆ ಕಡೆ ಮುಖ ಮಾಡಿದಳು, ನಾಲ್ಕು ಶವರ್ಮ ರೋಲ್ಸ್ ಪ್ಯಾಕ್ ಹಿಡಿದುಕೊಂಡು ಗಾಡಿ ತೆಗೆಯಲು ನೋಡಿದಾಗ ಪಕ್ಕದಲ್ಲೇ ವೆಸ್ಪಾ ಮೇಲೆ ಕುಳಿತ ಬಿಂದು ನೋಡಿ ಅವನ ಎದೆ ಧಗ್ ಅಂತು, ಒಂದೇ ಸಮನೆ ಎದೆ ಹೊಡೆದುಕೊಳ್ಳಲು ಕಾಲು ತಣ್ಣಗಾಗಿ ನಡುಗಲು ಶುರುವಾಯ್ತು, ಉಸಿರು ಜೋರಾಯ್ತು, ಮಾತಾಡಿಸಲಾ ಬೇಡವಾ ಎಂದು ಅವನು ಗಂಟಲು ಒಣಗಿಸಿಕೊಂಡು ಉಗುಳು ನುಂಗಿಕೊಂಡು ಒದ್ದಾಡುವಾಗಲೇ ಅವಳು ಅವನ ಕಡೆ ತಿರುಗಿ ಒಂದು ಕ್ಷಣ ಅವನು ಗೊತ್ತೇ ಇಲ್ಲವೇನೋ ಎಂದು ನಟಿಸಿ ಆಮೇಲೆ ಗುರ್ತು ಸಿಕ್ಕಿದ್ದಂತೆ ಮತ್ತೆ ನಟಿಸಿ ‘ಹೇ ಹಾಯ್..ನೀವು ..ಸಿಟಿ ಆಫ್ ಲೈಟ್ಸ್’ ಎಂದಳು, ಅವನು ‘ಹಾಯ್ ..’ ಎಂದ, ಅಷ್ಟರಲ್ಲಿ ಕಷ್ಟೋಮರ್ ಕಾಲ್ ಎಷ್ಟೊತ್ತಾಗುತ್ತೆ ಅಂತ. ಅವನು ಮುಖ ಸಿಂಡರಿಸ್ಕೊಂಡು ‘ಬರ್ತೀನಿ ಸರ್ ಆನ್ ದಿ ವೇ ಇದ್ದೀನಿ’ ಎಂದ, ಅವಳೇ ಅವನ ಒದ್ದಾಟ ನೋಡಿ ‘ಆರ್ಡರ್ ಇದೆ ಅನ್ಸುತ್ತೆ ಹೊರಡಿ’ ಎಂದಳು ಅವನು ಒಲ್ಲದ ಮನಸಿನಿಂದ ಬೈಕ್ ಕಿಕ್ ಹೊಡೆದ ಒಂದು..ಎರಡು..ಮೂರು..ಬೈಕು ಸ್ಟಾರ್ಟ್ ಆಯ್ತು, ಕನ್ನಡಿಯನ್ನು ಅವಳು ಕಾಣುವಂತೆ ಅಡ್ಜಸ್ಟ್ ಮಾಡಿಕೊಂಡು ಅವಳು ಮರೆಯಾಗುವವರೆಗೂ ಕನ್ನಡಿ ನೋಡುತ್ತಾ ಹೊರಟ, ಅವಳು ಒದ್ದಾಟವನ್ನು ನೆನೆಸಿಕೊಂಡು ನಕ್ಕಳು.

ಅವತ್ತು ರಾತ್ರಿ ರೂಮಿಗೆ ಹೋದವನೇ ಭಾರ್ಗವ ಸಿಂಗಲ್ ಕಾಟ್ ಮೇಲೆ ಒದ್ದಾಡಿಕೊಂಡೇ ಮೆಸೇಜು ಅವಳಿಗೆ ಮಾಡಲು ಶುರುಮಾಡಿದ.

‘ಸಾರಿ ಆರ್ಡರ್ ಇತ್ತು ಜಾಸ್ತಿ ಹೊತ್ತು ಮಾತಾಡ್ಸಕ್ ಆಗ್ಲಿಲ್ಲ’

‘ಇರ್ಲಿ ಪರವಾಗಿಲ್ಲ ಕೆಲಸ ಮುಖ್ಯ’

‘ಹ್ಮ್ಮ್..ನಿಮಗೆ ಲಾಲಾ ಲ್ಯಾಂಡ್ ಇಷ್ಟಾನ ಮೂವೀ’

‘ಹ್ಮ್ಮ್ ..ನಿಮಗೂ ಇಷ್ಟ ಅಂತ ಗೊತ್ತು..’

‘ಮತ್ತೆ…’

‘ಹೇಳಿ ನೀವೇ ..’

ಹೀಗೆ ಶುರುವಾದ ಮೆಸೇಜು, ಗುಡ್ ಮಾರ್ನಿಂಗ್, ಗುಡ್ ಮಾರ್ನಿಂಗ್ ಬಿಂದು, ಗುಡ್ ಮಾರ್ನಿಂಗ್ ಡಿಯರ್, ಗುಡ್ ಮಾರ್ನಿಂಗ್ ಚಿನ್ನಿ ಕೂಡ ಆಯಿತು, ಇಬ್ಬರಿಗೂ ಅವವರದೇ ಆದ ಕಷ್ಟದ ಬದುಕಿತ್ತು, ಕಣ್ಣು ಪೂರ್ತಿ ಕಟ್ಟಿಕೊಂಡ ಕನಸುಗಳಿದ್ದವು. ಉಕ್ಕಿ ಹರಿಯುತಿದ್ದ ಯೌವ್ವನದ ಸೇತುವೆ ಇತ್ತು, ಪ್ರೀತಿ ನದಿ ಹರಿಯುತಿತ್ತು. ನಾಳೆ ಇನ್ನೇನೋ ಆಗುತ್ತೆ ಎನ್ನುವ ಭರವಸೆ ಇತ್ತು. ಭಾರ್ಗವ ಪಿಯುಸಿ ಫೇಲ್ ಆಗಿ ತನ್ನ ವೃದ್ಧ ತಂದೆಯನ್ನ ಅವನ ಊರಿನ ತಾಂಡ್ಯದಲ್ಲೇ ಬಿಟ್ಟು, ಇಲ್ಲಿ ಬಂದು ಯಾವುಯಾವುದೋ ಕೆಲಸ ಮಾಡಿ ಕೊನೆಗೆ ಡೆಲಿವರಿ ಬಾಯ್ ಆಗಿದ್ದ, ಅದನ್ನೇ ಮುಂದುವರೆಸಲು ಇನ್ನೊಂದು ಕಾರಣ ಅವನ ನಾಟಕದ ಅಭ್ಯಾಸ, ನೋಡಲು ಚೆನ್ನಾಗಿಯೇ ಇರುವ ಭಾರ್ಗವನಿಗೆ ಚಿಕ್ಕಂದಿನಿಂದಲೂ ಅಭಿನಯದ, ಡ್ಯಾನ್ಸ್ ಹುಚ್ಚು, ಒಂದಲ್ಲ ಒಂದು ದಿನ ತಾನು ಸ್ಟಾರ್ ಆಗೇ ಆಗುತ್ತೇನೆ ಎಂಬ ಹಠ, “ಸುಮ್ನೆ ಆಕ್ಟಿಂಗ್ ಮಾಡೋದಲ್ಲ ಕಲಿಬೇಕು, ಮೆಥಡ್ ಆಕ್ಟಿಂಗ್ ಕಲಿ” ಎಂದು ಕಾಲೇಜಿನಲ್ಲಿ ನಾಟಕ ಆಡಿಸಿದ್ದ ಮೇಸ್ಟ್ರು ಹೇಳಿದ ಮೇಲೆ ಪಿಯುಸಿ ಫೇಲ್ ಆದ ಕೂಡಲೇ ಬೆಂಗಳೂರಿಗೆ ಇಳಿದಿದ್ದ. ಇಲ್ಲಿ ಆಗಲೇ ಹೆಸರು ಮಾಡಿರುವ ಒಂದಷ್ಟು ನಾಟಕ ತಂಡಗಳ ಹತ್ತಿರ ಹೋಗಿ ಸೇರಿಕೊಳ್ಳಲು ಪ್ರಯತ್ನಿಸಿದ್ದ, ಕೊನೆಗೂ ಜೆ.ಪಿ.ನಗರದ ಕಾಲೇಜೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ಹವ್ಯಾಸಿ ರಂಗಭೂಮಿ ತಂಡ ‘ರಂಗವ್ಯಸನ’ ಅವನನ್ನು ಸೇರಿಸಿಕೊಂಡಿತು, ಕಿರುತೆರೆಯಲ್ಲಿ ಹೆಸರು ಮಾಡಿದ ರಂಗಭೂಮಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಕೃಪಾಕರ್ ಒಂದಷ್ಟು ಆಸಕ್ತ ಪ್ಯಾಶನೇಟ್ ಹುಡುಗ ಹುಡುಗಿಯರನ್ನು ಇಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದರು. ವೃದ್ಧ ತಂದೆಯನ್ನು ನೋಡಿಕೊಳ್ಳುವುದು, ಬೆಂಗಳೂರಲ್ಲಿ ಬಾಡಿಗೆ, ಊಟ, ಓಡಾಟಕ್ಕೆ ಮತ್ತು ಖರ್ಚಿಗೆ ಸ್ವಲ್ಪ ದುಡ್ಡು ಇಷ್ಟೇ ಬೇಕಿದ್ದು ಭಾರ್ಗವನಿಗೆ. ನಾಟಕ ಅಭ್ಯಾಸ ಮತ್ತು ಡೆಲಿವರಿ ಇಷ್ಟೇ ಅವನ ಬದುಕಾಗಿತ್ತು, ಲಾಲಾ ಲ್ಯಾಂಡ್ ಸಿನಿಮಾ ನೋಡಿದ ಮೇಲಂತೂ ಅಭ್ಯಾಸದ ಮೇಲೆ ತುಂಬಾ ಆಸಕ್ತಿ ವಹಿಸಿದ್ದ. ಇತ್ತ ಕಡೆ ಬಿಂದು ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮ ಕಳೆದುಕೊಂಡು ಬೆಂಗಳೂರಲ್ಲಿ ಇದ್ದ ಚಿಕ್ಕಮ್ಮನ ಮನೆಯಲ್ಲಿ ಓದಿ ಬೆಳೆದಿದ್ದಳು, ಭರತನಾಟ್ಯ ಅವಳ ಜೀವಾಳ ಆಗಿತ್ತು. ಆದರೆ ಚಿಕ್ಕಮ್ಮ ಅದಕ್ಕೆ ಅಷ್ಟೊಂದು ಸೊಪ್ಪು ಹಾಕದೆ ಓದಿದ ಮೇಲೆ ಒಳ್ಳೆ ಹುಡುಗನ ನೋಡಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಆತುರದಲ್ಲಿದ್ದರು, ಬಿಂದುವಿಗೆ ಕ್ಲಾಸ್ ಆಗಿ ಬದುಕಲು ಇಷ್ಟ, ಎಲ್ಲ ಇಷ್ಟಗಳಿಗೂ ಕಾಂಪ್ರೊಮೈಸ್ ಆಗಿ ತೀರಾ ಅವರೇಜ್ ಅನ್ನುವ ಮಿಡಲ್ ಕ್ಲಾಸ್ ಬದುಕು ಅವಳಿಗೆ ಇಷ್ಟವಿರಲಿಲ್ಲ, ಒಂದು ಶ್ರೀಮಂತ ಮತ್ತು ಸೆಕ್ಯೂರ್ಡ್ ಬದುಕಿಗೆ ಹೊಂಚು ಹಾಕುತ್ತಿದ್ದಳು, ಬೇರೆಯವರ ಮನೆಯಲ್ಲಿ ಬೆಳೆದ ಅವಳಿಗೆ ವಯೋಸಹಜ ಪ್ರೀತಿ ಪ್ರೇಮದ ದೊಡ್ಡ ಕನಸುಗಳಿದ್ದವು. ಆ ಕನಸುಗಳಿಗೆ ಕಣ್ಣಾಗಿದ್ದು ಈ ಭಾರ್ಗವ.

ಭಾರ್ಗವನಿಂದ ಅವಳಿಗೆ ಬೇಕಿದ್ದು ಬೇರೆ ಮನೆಯಲ್ಲಿ ಬೆಳೆದು ದಕ್ಕದೆ ಹೋದ ಪ್ರೀತಿ ಮಮತೆ, ಅದು ಧಾರಾಳವಾಗಿಯೇ ಭಾರ್ಗವ ಕೊಟ್ಟ, ನಾಟಕ ಮತ್ತು ಡೆಲಿವರಿ ಅಷ್ಟೇ ಬದುಕಾಗಿದ್ದ ಅವನಿಗೆ ಬಿಂದು ಬದುಕಿನ ಇನ್ನೊಂದು ಭಾಗವಾದಳು. ತನ್ನ ಕನಸುಗಳ ರಾಶಿಗಳನ್ನ ಅವಳ ಮುಂದೆ ಸುರಿಯುತ್ತಿದ್ದ ಅವಳು ಕೂಡ ಮುಂದೆ ನಾವು ಕ್ಲಾಸ್ ಆಗಿ ಬದುಕೋಣ ಎಂದು ಅವಳ ಆಸೆಗಳನ್ನು ಸುರಿಯುತ್ತಿದ್ದಳು, ಅವನು ನಗುತ್ತಿದ್ದ. ಭಾರ್ಗವನ ಬದುಕಿಗಿಂತ ಅವನ ಸಾಮಿಪ್ಯ ಪ್ರೀತಿ ಮತ್ತು ಆರೈಕೆ ಬಿಂದುವಿಗೆ ಖುಷಿ ನೆಮ್ಮದಿ ಕೊಡುತ್ತಿದ್ದವು. ಮೊದಲ ಸಲ ಅವನ ರೂಮಿಗೆ ಹೋದಾಗ ಅಷ್ಟು ಚಿಕ್ಕ ರೂಮು ಅಲ್ಲೇ ನೇತುಹಾಕಿದ್ದ ಬಟ್ಟೆಗಳು ಮಬ್ಬು ವಾಸನೆ ಅವಳಿಗೆ ತಡೆಯಲು ಆಗದೆ ಹೊರಗೆ ಹೋಗೋಣ ಅಂದಿದ್ದಳು, ಇನ್ಯಾವತ್ತೋ ರೂಮಿಗೆ ಕರೆದಾಗ ‘ಬೇಡ ಒಬ್ನೇ ಇರೋ ನೀನು ಅಕ್ಕ ಪಕ್ಕ ನೋಡಿದೋರು ಏನ್ ಅನ್ಕೋತಾರೆ’ ಎಂದು ಮಾತು ಬದಲಿಸಿದ್ದಳು, ರೋಡು ಬದಿಯ ಪಾನಿಪೂರಿ ತಿನ್ನೋಣ ಅಂದ್ರೆ ‘ನಿಂತ್ಕೊಂಡ್ ತಿನ್ನೋದ್ ಬೇಡ ಅವರಿವರು ನೋಡ್ತಾರೆ’ ಎಂದು ಸರ್ವಿಸ್ ಇರುವ ಹೋಟೆಲಿಗೆ ಕರೆದುಕೊಂಡು ಹೋಗುತ್ತಿದ್ದಳು, ಅವಳು ಬದುಕು ನೋಡುವ ರೀತಿಗೂ ಅವನು ಬದುಕುವ ರೀತಿಗೂ ದೊಡ್ಡ ಕಂದಕವೇ ಇತ್ತು. ಬಲವಂತ ಮಾಡಿ ಭಾರ್ಗವ ಕರೆದುಕೊಂಡು ಹೋಗುತ್ತಿದ್ದ ನಾಟಕಗಳನ್ನು ಆಕಳಿಸುತ್ತ ನೋಡುತ್ತಿದ್ದಳು ಕೆಲವೊಮ್ಮೆ ಮಲಗಿಬಿಡುತ್ತಿದ್ದಳು. ಆದರೆ ಅವನ ಪ್ರೀತಿ ಸಾಮಿಪ್ಯ ಆರೈಕೆಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ ಅಟ್ಲಿಸ್ಟ್ ಅವನಷ್ಟೇ ಪ್ರೀತಿಸುವ ಹೃದಯ ಸಿಗುವರೆಗೂ. ಕೆಲವೊಮ್ಮೆ ಅವನ ಒದ್ದಾಟಗಳು ಅವಳಿಗೆ ಸಿಟ್ಟನ್ನು ವಿನಾಕಾರಣ ಒಂದು ಅಸಹ್ಯ ನಿರ್ಲಕ್ಷ್ಯವನ್ನು ರಾಚಿ ಎಸೆಯುತ್ತಿತ್ತು, ಮೂರನೇ ಕಿಕ್ಕಿಗೆ ಶುರುವಾಗುವ ಬೈಕು, ಪರ್ಫ್ಯೂಮ್ ಇಲ್ಲದೆ ನಾರುವ ಅವನ ಬಟ್ಟೆಗಳು, ಪೆಟ್ರೋಲಿಗೂ ಒಮ್ಮೊಮ್ಮೆ ಒದ್ದಾಡುವ ಅವನ ಒದ್ದಾಟ, ಮಾಲ್ ಗಳಲ್ಲಿ ಮುದುಡಿ ಹೋಗುವ ಅವನ ಭುಜ, ಒಂದು ಕಡೆ ನಿಲ್ಲದ ಅವನ ಬದುಕು ಇದೆಲ್ಲವನ್ನು ನೋಡಿದಾಗ ಅವಳ ಮುಖ ಬೇರೆಯೇ ಸ್ವರೂಪ ತಳೆಯುತ್ತಿತ್ತು, ಆದರೆ ಇದ್ಯಾವ ಹೆಣ್ಣಿನ ಸೂಕ್ಷ್ಮಗಳು ಭಾರ್ಗವನಿಗೆ ಗೊತ್ತೇ ಆಗುತ್ತಿರಲಿಲ್ಲ. 

ಎಲ್ಲ ಮುರಿದುಬಿದ್ದ ಪ್ರೀತಿಯ ಕತೆಗಳಂತೆ ಒಂದು ಸಣ್ಣ ಮುನಿಸು, ಸಣ್ಣ ವಾಗ್ವಾದ, ಬ್ಲಾಕ್, ಆನ್ ಫ್ರೆಂಡ್, ಕಿತ್ತಾಟ, ಕಿರುಚಾಟ, ಬೈಗುಳದ ಹಂತ ತಲುಪಿ “ನಿನ್ನ ಈ ದಿಕ್ಕೆಟ್ಟ ಬದುಕಲ್ಲಿ ನಾನು ಇರಲಾರೆ” ಎಂದು ಬಿಂದು ನಯವಾಗಿ ನೇರವಾಗಿ ಹೇಳುವ ಹೊತ್ತಿಗೆ ಇಬ್ಬರ ಪ್ರೀತಿಯ ಸೇತುವೆ ಮುರಿದುಹೋಗಿತ್ತು, ಪ್ರೀತಿಯ ನದಿ ಬತ್ತಿಹೋಗಿತ್ತು. ಅಷ್ಟರಲ್ಲಿ ಬಿಂದುವಿಗೆ ಆಸ್ಟ್ರೇಲಿಯಾದ ಸಂಬಂಧ ಕುದುರಿತ್ತು, ಅದನ್ನು ನಿರಾಕರಿಸಲು ಯಾವ ಕಾರಣ ಇರಲಿಲ್ಲ ಹಾಗೆಯೆ ಇನ್ನೂ ಸೆಟ್ಟಲ್ ಆಗದ ಭಾರ್ಗವನ ಜೊತೆ ಇರಲು ಕೂಡ ಸಕಾರಣಗಳು ಇರಲಿಲ್ಲ. “ಒಟ್ಟಿಗೆ ಬಾಳಿ ಬದುಕಲು ಪ್ರೀತಿಗಿಂತ ದೊಡ್ಡ ಕಾರಣ ಬೇಕಾ?” ಎಂದು ಭಾರ್ಗವ ಕಿತ್ತಾಟದಲ್ಲಿ ಕೇಳಿದಾಗ “ಪ್ರೀತಿನ ಏನು ಉಪ್ಪಿನಕಾಯಿ ಹಾಕೊಂಡ್ ನೆಕ್ಲಾ? ಸಂಸಾರ ಮಾಡಕ್ಕೆ ಆಗುತ್ತಾ?” ಎಂದು ಅವನನ್ನ ಅವನ ಪ್ರೀತಿಯನ್ನ ಹೆಚ್ಚಾಗಿ ಅವನ ಬಡತನವನ್ನ ಹಂಗಿಸಿ ಹೊರನಡೆದಿದ್ದಳು. ಅವರ ಪ್ರೀತಿ ಸತ್ತು ಹೋಗಿತ್ತು.  

ಯಾಕೆ ಹೀಗಾಯ್ತು ಎಂದು ಯೋಚಿಸುವಷ್ಟರಲ್ಲಿ ಬದುಕಿನ ಕೆಲವು ಮಹತ್ತರ ಹಂತಗಳು ‘ಹಾಯ್’ ಮಾಡಿ ಹೋದವು, ಬಿಂದು ಮದುವೆಯಾಗಿ ಆಸ್ಟ್ರೇಲಿಯಾ ಸೇರಿಕೊಂಡಳು, ಯೂರೋಪ್ ದೇಶಗಳಲ್ಲಿ ಹನಿಮೂನ್ ನಡೆದು ಅಲ್ಲಿ ಗಂಡನ ಜೊತೆ ನಗುತ್ತ ತೆಗೆಸಿಕೊಂಡ ಅವಳ ವಾಟ್ಸಾಪ್ ಸ್ಟೇಟಸ್ ನೋಡಿ ಭಾರ್ಗವ ರೋಸಿ ಹೋಗಿದ್ದ. ಅವನ ಅಪ್ಪ ಸತ್ತಿಲ್ಲ ಅಂದಿದ್ರೆ ಬಿಂದುವಿನ ಬಣ್ಣದ ಜೀವನ ಕಂಡು ಇನ್ನೇನು ಆಗ್ತಾ ಇತ್ತೋ, ಚಿಕ್ಕ ವಯಸ್ಸಿನಿಂದ ಸಾಕಿದ್ದ ಅಪ್ಪ ಸತ್ತು ಹೋದ ಮೇಲೆ ಬದುಕಿನ ಮೇಲೆ ಸಂಬಂಧಗಳ ಮೇಲೆ ನಂಬಿಕೆ ಕಳಕೊಂಡು ಬಸ್ಸು ಟ್ರೇನು ಹೀಗೆ ಯಾವುದೊ ಹತ್ತಿಕೊಂಡ ಗೊತ್ತಿಲ್ಲದ ಊರುಗಳನ್ನು ಅಲೆದ, ಗಡ್ಡ ಬಿಟ್ಟ, ಉದ್ದ ಕೂದಲು ಬಿಟ್ಟ, ಒಂದು ಹೊತ್ತು ಊಟ ಬಿಟ್ಟ, ಎಲ್ಲಿ ಬೇಕಾದರೂ ಬದುಕುವ ಒಂದು ಆತ್ಮವಿಶ್ವಾಸ ಬೆಳೆಸಿಕೊಂಡ, ಯಾರು ಇಲ್ಲದೆಯೂ ಬದುಕು ನಡೆಯುತ್ತದೆ ಎನ್ನುವ ಅನಿವಾರ್ಯ ತಿಳಿದುಕೊಂಡ, ಅಲೆಯೋದು ಸುಸ್ತಾದ ಮೇಲೆ ಮತ್ತೆ ಬೆಂಗಳೂರು ಸೇರಿಕೊಂಡ, ಮತ್ತೆ ಡೆಲಿವರಿ. ಜೆ.ಪಿ ನಗರದಲ್ಲೇ ಒಂದು ಚಿಕ್ಕ ರೂಮು, ನಟನೆ ಬಗ್ಗೆ ಹುಚ್ಚು ಹತ್ತಿಸ್ಕೊಂಡ. ಹಳೆಯ ನಡುವಿನ ಹೊಸ ಕಾಲದ ನಟನೆಯ ಪಟ್ಟುಗಳನ್ನು ಕಲಿಯತೊಡಗಿದ, ಭಿಕ್ಷುಕನ ಪಾತ್ರಕ್ಕೆ ನಿಜವಾಗಿಯೂ ಭಿಕ್ಷೆ ಬೇಡುವ ಮಟ್ಟಿಗೆ ಪಾತ್ರಗಳನ್ನೂ ಜೀರ್ಣಿಸಿಕೊಳ್ಳತೊಡಗಿದ, ರಂಗವ್ಯಸನದಿಂದ ಹೊರಬಂದು ಹತ್ತಾರು ತಂಡ ಸೇರಿಕೊಂಡು ಅಲ್ಲೇನೋ ಕಲಿತು ಮತ್ತೆ ಹೊಸ ತಂಡಕ್ಕೆ ಸೇರಿಕೊಂಡ, ನಿಧಾನವಾಗಿ ಅವನ ಅಭಿನಯಕ್ಕೆ ಪತ್ರಿಕೆಗಳಲ್ಲಿ, ರಂಗವಲಯದಲ್ಲಿ ಮೆಚ್ಚುಗೆ ಬರತೊಡಗಿತು, ಕಿರುತೆರೆಯಲ್ಲಿ ಅವಕಾಶಗಳು ಸಿಕ್ಕವು ಬಾಚಿಕೊಂಡ, ಬೆಳ್ಳಿತೆರೆಯಲ್ಲೂ ಸಿಗತೊಡಗಿದವು.

ಹೀಗೆ ಸುರೇಂದ್ರನಾಥರ ನಾಟಕವೊಂದನ್ನು ಅವರ ಹೊಸ ತಂಡ ಮಾಡಿದಾಗ ಅಲ್ಲೇ ಸಿಕ್ಕ ಬಹುರೂಪಿಯಾ ಜಿ.ಎನ್.ಮೋಹನ್ ಭಾರ್ಗವನ ಅಭಿನಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು, “ನಾಟಕದ ಬಗ್ಗೆ ಏನಾದ್ರು ಬರೀರಿ ಅವಧಿಯಲ್ಲಿ” ಅಂದ್ರು, ಒಂದಷ್ಟು ಅಲ್ಲಲ್ಲಿ ಭೇಟಿ ಆಗಿ ಮಾತುಕತೆ ಆಗಿ ಅವನ ಬದುಕು ಅನಾವರಣ ಆದ ಮೇಲೆ, ಅವನ ಫೇಸ್ಬುಕ್ಕು ವಾಟ್ಸಾಪಿನ ಗಾಢವಾದ ಪೋಸ್ಟು ಸ್ಟೇಟಸ್ ನೋಡಿದ ಮೇಲೆ “ಏನಾದ್ರು ಪರ್ಸನಲ್ ಮೆಮೊರಿಸ್ ಇದ್ರೆ ಬರೀರಿ, ಚೆನ್ನಾಗಿ ಬರೀತೀರಾ” ಅಂದ್ರು, ಅದಕ್ಕೆ ಭಾರ್ಗವ ತನ್ನ ಬದುಕಿನ ಕೆಲವು ಪಾತ್ರಗಳಿಗೆ ಬೇರೇನೋ ಬಣ್ಣ ಹೊಡೆದು ಒಂದು ಕಾದಂಬರಿ ಬರ್ಯೋ ಪ್ಲಾನ್ ಇದೆ ಅಂದಾಗ, ‘ಪ್ಲೀಸ್ ಬರೀರಿ, ನಾವೇ ಪಬ್ಲಿಶ್ ಮಾಡೋಣ, ಆದ್ರೆ ದಯವಿಟ್ಟು ನಿಮ್ ಹಳೆ ಹುಡುಗೀನ ಸಾಯಿಸ್ಬೇಡಿ ಪಾಪ ಬದುಕೊಳ್ಳಿ ಬುಡಿ’ ಎಂದು ನಕ್ಕರು.

ಅವತ್ತಿನಿಂದ ಅವನ ಕಾದಂಬರಿ ಶುರು ಆಯ್ತು. ಮೋಹನ್ ‘ಎನ್ ಹೆಸರು ಇಡ್ತೀರಿ?’ ಎಂದು ಮೆಸೇಜು ಮಾಡಿದಾಗ.’ಸಿಟಿ ಆಫ್ ಲೈಟ್ಸ್’ ಎಂದು ಉತ್ತರಿಸಿದ್ದ, ‘ಬ್ಯೂಟಿಫುಲ್, ಬಟ್ ಐ ಗೆಸ್ಸ್ಡ್ ಇಟ್ ‘ ಎಂದು ರಿಪ್ಲಯ್ ಮಾಡಿದ್ದರು. 

**

ಬೆಂಗಳೂರು ರಂಗಶಂಕರ 2022 

ಕಿರುತೆರೆ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದರೂ ಭಾರ್ಗವ ರಂಗಭೂಮಿಯ ಸಾಂಗತ್ಯ ಬಿಟ್ಟಿರಲಿಲ್ಲ ವರ್ಷಕ್ಕೆ ಎರಡು ನಾಟಕದಲ್ಲಿ ಆದರೂ ಅಭಿನಯಿಸುತ್ತಿದ್ದ, ಹಯವದನದ ದೇವದತ್ತ ಪಾತ್ರ ಅವನಿಗೆ ಅಪಾರವಾಗಿ ಹೆಸರು ತಂದುಕೊಟ್ಟಿತ್ತು. ಅವತ್ತು ಕೂಡ ಅದೇ ನಾಟಕ ಅದೇ ಪಾತ್ರ ಪ್ರವೇಶ ಅದೇ ಅಧ್ಭುತ ನಟನೆ. ನಾಟಕ ಮುಗಿದ ಮೇಲೆ ಪ್ರೇಕ್ಷಕರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೆ ತಟ್ಟಿದ್ದು. ಮೇಕಪ್ ತೆಗೆದು ವೇದಿಕೆ ಮೇಲೆ ಬಂದು ಪ್ರೇಕ್ಷಕರಿಗೆ ಕೈ ಮುಗಿದು ವೇದಿಕೆಗೆ ಬಾಗಿ ನಮಸ್ಕರಿಸಿದಾಗಲೇ ಚಪ್ಪಾಳೆ ನಿಂತಿದ್ದು, ಆಮೇಲೆ ಸೆಲ್ಫಿಗಾಗಿ ಜನ ಮುತ್ತಿಕೊಂಡರು.ಸೆಲ್ಫಿ ತೆಗಿಸಿಕೊಳ್ಳುವಾಗಲೇ ಬಿಂದು ಕಣ್ಣಿಗೆ ಬಿದ್ದಳು ಕೊನೆಯ ಸಾಲಿನಲ್ಲಿ. ಪಕ್ಕದಲ್ಲಿ ಒಬ್ಬ ದಡೂತಿ ವ್ಯಕ್ತಿ. ಹೌದು ಅದೇ ಬಿಂದು ! ಅವಳನ್ನು ಅಲ್ಲಿಂದಲೇ ನೋಡಿ ನಕ್ಕ, ಆ ನಗುವಿನ ಹಿಂದೆ ವಿಷಾದ ನೋವು ಯಾವುದು ಇರಲಿಲ್ಲ ಅದನ್ನೇ ಹುಡುಕುತ್ತಿದ್ದ ಬಿಂದುವಿಗೆ ಆ ನಗುವಿನಲ್ಲಿ ಏನು ಇಲ್ಲದ್ದು ಕಂಡು ಎದೆಯಲ್ಲಿ ನೋವೊಂದು ಮೂಡಿ ಅದನ್ನು ಮರೆಸುವ ಒಂದು ಒಣ ನಗೆಯನ್ನು ಕಣ್ಣೀರು ತುಂಬಿಕೊಂಡು ನಕ್ಕಳು. ಪಕ್ಕದಲ್ಲಿದ್ದ ಗಂಡ ‘ಹೊರಡೋಣ ಟ್ರಾಫಿಕ್ ಜಾಸ್ತಿ ಇರುತ್ತೆ, ಇಲ್ಲ ನಿನ್ ಫ್ರೆಂಡ್ ಏನಾದರು ಮಾತಾಡಿಸಬೇಕಾ?’ ಎಂದು ಕೇಳಿದ, ಬಿಂದು ಏನು ಹೇಳದೆ ಬಾಗಿಲ ಕಡೆಗೆ ಹೊರಟಳು ಗಂಡ ಅವಳ ಹಿಂದೆ ಹಿಂದೆ ನಡೆದ, ಬದುಕಿನ ಹೊಸ್ತಿಲು ದಾಟಿ ಹೋದವಳನ್ನು ರಂಗಭೂಮಿಯ ಬಾಗಿಲನಾಚೆ ಹೋಗುವವರೆಗೂ ಭಾರ್ಗವ ನೋಡುತ್ತಲಿದ್ದ.     

‍ಲೇಖಕರು avadhi

14 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading