ಸಂಜೆಗಳು
–ರಾ. ಬಂದೋಳ್
೧೦ ರೂಪಾಯಿಯ ಚಹಾ
ದುಬಾರಿ ಎಂಬುದು ಗೊತ್ತು
ಆದರೂ ಒಂದು ಚಹಾ ಕೊಳ್ಳುತ್ತೇನೆ
ಕಲ್ಲು ಬೆಂಚಿನ ಮೇಲೆ ಕೂತು ಹೀರುತ್ತಾ
ಈ ಪ್ರಪಂಚವನ್ನು
ನನ್ನದಾಗಿಸಿಕೊಳ್ಳಲು ಯತ್ನಿಸುತ್ತೇನೆ
ಸಿಗರೇಟ್ ಸೇದುತ್ತಾ ಅವಳು
ಬಿಡುವ ರಿಂಗು ರಿಂಗು ಹೊಗೆಯಲ್ಲಿ
ಅವಳ ಸಪೂರ ಮಾಟದಂತ
ಕಾಲುಗಳನ್ನು ನೋಡುತ್ತೇನೆ
ನನ್ನ ಪ್ರೇಯಸಿಯಾಗಿದ್ದರೆ
ಮೀನಖಂಡಗಳನ್ನು
ಗಟ್ಟಿಯಾಗಿ ಚುಂಬಿಸಿ
ಮೆಲ್ಲಗೆ ಕಚ್ಚುತ್ತಿದ್ದೆ ಎಂದುಕೊಳ್ಳುತ್ತೇನೆ
ಅವಳು ನನ್ನನ್ನು
ಬಿಬಿಎಂಪಿ ಕಸದ ತೊಟ್ಟಿ ಯಂತೆ ನೋಡುತ್ತಾಳೆ
ಎಂದು ಬರೆಯಬೇಕು
ಆದರೆ ಬುಕೋವ್ಸ್ಕಿ ಆಗಲೇ ಬರೆದು ಬಿಟ್ಟಿದ್ದಾನೆ
ಹಾಗಂತ ನಾನು ಹೇಳುತ್ತಿರುವುದು ಸುಳ್ಳಲ್ಲ
ಫೂಟ್ ಪಾತ್ ಬದಿಗೆ
ಸಾಲಾಗಿ ನಿಲ್ಲಿಸಿದ ಬೈಕ್ ಗಳು
ಒಂಟಿ ಕಣ್ಣಲ್ಲಿ ನೋಡುತ್ತಾ ನನ್ನನ್ನು
ಪಾಪ ಎನ್ನುತ್ತವೆ ದಿನವೂ
ಪ್ರೇಮಿಗಳು ಕೈ ಕೈ ಹಿಡಿದು
ಗಾಳಿಗೆ ಕೇಳಿಸದಂತೆ ಪಿಸುಗುಡುತ್ತಾ
ನಲಿಯಲು
ನಾನು ಕೊನೆಗೆ ಅವಳೊಂದಿಗೆ
ನಕ್ಕದ್ದು ಯವಾಗೆಂದು
ನೆನೆಯಲು ಯತ್ನಿಸುತ್ತೇನೆ
ಪ್ರಪಂಚ ನಗುವವರಿಗಿಂತ
ನೆನೆಯುವವರಿಂದಲೇ ತುಂಬಿದೆ ಎನಿಸುತ್ತದೆ
ಕೊತ್ತಂಬರಿ ತೋರಿಸಿ
ಕೈಸಾ? ಎಂದು ಕೇಳಲು
ಹತ್ತು ರೂಪಾಯಿ ಅಂತ
ಹತ್ತು ಬೆರಳುಗಳನ್ನು ತೋರಿಸಲು
ಅವಳಿಗೆ ಚೌಕಾಸಿ ಮಾಡಲು
ತಿಳಿಯದೆ ಕೊಂಡು
ಎದುರಿನ ಸೂಪರ್ ಮಾರ್ಕೆಟ್ ನಲ್ಲಿ
ಕೊಂಡ ದಿನಸಿಯೊಂದಿಗೆ ಇಟ್ಟುಕೊಂಡಳು
ಸಿಗಬಹುದಾದ ಬ್ರೆಡ್ ಬಿಸ್ಕತ್ ತುಂಡಿಗಾಗಿ
ಬಾಲ ಅಲ್ಲಾಡಿಸಿಕೊಂಡು
ನಾಯಿಗಳು ಅಡ್ಡಾಡುತ್ತಿವೆ
ನಾಳೆಗೆ ಒಂದು ಟೀ ಕೊಳ್ಳಲು
ಹೇಗಾದರೂ ೧೦ ರೂಪಾಯಿ
ಹೊಂದಿಕೆಯಾಗಲಿ ಎಂದು ಹಲುಬುತ್ತೇನೆ
ಅಕಸ್ಮಾತ್ತಾಗಿ ಟೈರ್ ಗೆ ಸಿಕ್ಕ
ನಾಯಿ ಮರಿಯ ಸಾವಿಗೆ
ತಾಯಿ ಗೋಳಾಡುತ್ತಿದ್ದಾಳೆ
ತಂದೂರಿ ಒಲೆಯಲ್ಲಿ
ಮೈಯೆಲ್ಲಾ ಕೆಂಪು ಮಸಾಲೆ ಬಳಿದ
ಕೋಳಿಯ ದೇಹಗಳು
ಮೆಲ್ಲಗೆ ಬೇಯುತ್ತಾ ತಿರುಗುತ್ತಿವೆ
ಖಾಲಿ ಟೀ ಲೋಟದ
ಪಕ್ಕದಲ್ಲಿ ಕೂತ ನನ್ನನ್ನು
ಬಸ್ಟ್ಯಾಂಡ್ ಮೇಲಿರುವ
ಒಂಟಿ ಕಾಗೆಯನ್ನು
ಫೋನ್ ಟವರ್ ಮೇಲಿರುವ
ಒಂಟಿ ಕಪ್ಪು ಹದ್ದನ್ನು
ಕೆರೆಯ ಮಧ್ಯ ಇರುವ
ಬಿಳಿ ಕೊಕ್ಕರೆಗಳನ್ನು
ನಾಯಿಯೊಂದಿಗೆ ಬಂದ
ಪ್ರೀತಿಯ ಮಾಲಿಕ-ಸೇವಕರನ್ನು
ಕತ್ತಲು ಹುಡುಕಿಕೊಂಡು ಬರುತ್ತದೆ






ರಾ .ಬಂಡೋಳ ಅವರ ಕವಿತೆ “ಸಿಗರೇಟ್ ಸೇದುತ್ತ ಅವಳು”
ಸನ್ನಿವೇಶದ ಕೂಸಾದ ಕವೆಯ ಕನವರಿಕೆಯ ಮೇಲು ಮಾತುಗಳನ್ನು
ಹದವಾಗಿ ಹೊಂದಿಸಿದೆ.
ಓದುತ್ತಾ ಓದುತ್ತಾ ಕವಿತೆ ಚೇ
ತೋಹಾರಿ ಅನುಭವ ನೀಡುತ್ತದೆ.
ಡಿ.ಎಂ. ನದಾಫ್
ಅಫ್ಜಲ್ಪುರ.