ರೇಣುಕಾ ನಿಡಗುಂದಿ
ಕಾಮರೂಪಿ ಅವರ ಸಮಗ್ರ ಬೇಕೆಂದರೂ.. ಹೋಗಲಿ ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನಾದರೂ ಓದಲೇಬೇಕೆಂದು ಹುಡುಕಿದರೂ ನನಗೆ ಆ ಪುಸ್ತಕಗಳು ಎಲ್ಲೂ ಸಿಕ್ಕಿರಲಿಲ್ಲ.
ಮೊನ್ನೆ ಧಾರವಾಡದ ಕಲಾಭವನದ ಎದುರು ಹಳೇಪುಸ್ತಕ ಮಾರುವವ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ತನ್ನ ಗಂಟುಬಿಚ್ಚಿ ಪುಸ್ತಕಗಳನ್ನು ಹರಡುತ್ತಿದ್ದ. ನಾನು ಮೈಮರೆತು ಹೊರಟ ಕೆಲಸ ಮರೆತು ನಿಂತುಬಿಟ್ಟೆ. ಸಿಕ್ಕಿದ್ದು ಕಾಮರೂಪಿ ಅವರ ‘ಅಂಜಿಕಿನ್ಯಾತಕಯ್ಯಾ’ !
ಈ ಕಾದಂಬರಿಯಲ್ಲಿ ಒಂಬತ್ತು ಅಧ್ಯಾಯಗಳಿವೆ. ಇವುಗಳ ಶೀರ್ಷಿಕೆಗಳು ಹಲವು ಯೂರೋಪಿಯನ್ ಕಾದಂಬರಿಗಳಲ್ಲಿರುವ ಅಧ್ಯಾಯಗಳ ಶೀರ್ಷಿಕೆಗಳನ್ನು ಹೋಲುವಂತಿವೆ.
ಉದಾಹರಣೆಗೆ ಈ ಶೀರ್ಷಿಕೆಗಳನ್ನು ನೋಡಿ: ಪ್ರಥಮಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವ ತನ್ನ ಮಹಾಕೃತಿ ನಿರ್ಮಾಣದ ಸಲುವಾಗಿ ಉಪಯುಕ್ತ ವಾತಾವರಣವನ್ನು ಅರಸುತ್ತಾನೆ; ಷಷ್ಠ್ಯಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವಿ ಅತೃಪ್ತ ಪ್ರೇಮದಿಂದ ಶೋಕಭರಿತನಾದ ಮಿತ್ರನ ಬಗ್ಗೆ ಕರುಣೆಯಿಟ್ಟು ಅವನ ವಿರಹವೇದನೆಯನ್ನು ಶಮನಗೊಳಿಸುವ ಆಶ್ವಾಸನೆಯನ್ನು ನೀಡುತ್ತಾನೆ; ನವಮಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವಿಯ ಮಹಾಕೃತಿ ಮತ್ತು ಅದರ ರಚನೆಯನ್ನು ಕುರಿತ ಈ ನಿರೂಪಣೆ ಎರಡೂ ಮುಕ್ತಾಯಗೊಳ್ಳುತ್ತವೆ.
ಇಡೀ ಕಿರುಕಾದಂಬರಿಯ ಕಥೆಯಲ್ಲಿ ಕಾಮರೂಪಿ ಅವರು ಬಳಸಿದ ನಿರೂಪಣಾ ತಂತ್ರ ದಲ್ಲಿ ಕಥಾನಾಯಕ ಹಾಗೂ ಇತರ ಪಾತ್ರಧಾರಿಗಳ ಮಾನವ ಸಹಜ ದೌರ್ಬಲ್ಯಗಳು. ವಿಲಕ್ಷಣತೆಗಳನ್ನು ಯಾವ ಮುಲಾಜೂ ಇಲ್ಲದೆ ನಾನು ಬರೇ ಚರಿತ್ರಕಾರ, ಕಥಾನಾಯಕ ಚರಿತ್ರಾರ್ಹ ವ್ಯಕ್ತಿ.. ಲಿಪಿ ಮಾತ್ರ ನನ್ನದು ಎಂದು ಹೇಳುತ್ತಲೇ ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲವೂ ಹೊಸ ಅನುಭವವನ್ನು. ಅವರೇ ವಿವರಿಸಿದ ವಿಲಕ್ಷಣತೆಯ ಹಲವು ಮಜಲುಗಳು ಕಣ್ಣಿಗೆ ಮಿಂಚಿದಂತಾಗುತ್ತದೆ.
0 Comments