ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಧೂರ ಲಕ್ಷ್ಮಣನೆಂದರೆ ಸಾಕು…

ಮರೆಯಲಾಗದ ಮಹಾನ್ ಹೋರಾಟಗಾರ ಸಿಂಧೂರ ಲಕ್ಷ್ಮಣ

(ಇಂದು, ಜುಲೈ 22 ರಂದು ಸಿಂಧೂರ ಲಕ್ಷ್ಮಣನ ಹುತಾತ್ಮದಿನ)

ಡಾ ಪ್ರಕಾಶ ಗ ಖಾಡೆ


‘ಸ್ವಾತಂತ್ರ್ಯ’ ಎನ್ನುವುದು ಪ್ರತಿ ಜೀವಿತ ಪ್ರಾಣಿಯ ಸಾಮಾಜಿಕ ಹಕ್ಕು ಅದನ್ನು ಯಾರೂ ಯಾವ ಕಾಲಕ್ಕೂ ಕಸಿದುಕೊಳ್ಳಲಾರರು. ಇದರ ರಕ್ಷಣೆಗಾಗಿ ಮನುಷ್ಯ ತನ್ನದೇಯಾದ ರಕ್ಷಣಾತ್ಮಕ ನಿಲುವು ಮತ್ತು ನೆಲೆ ಹೊಂದಿರುತ್ತಾನೆ. ಇದು ವ್ಯಕ್ತಿಗತವಾದ ಸ್ವಾತಂತ್ರ್ಯ ಪ್ರಜ್ಞೆ. ಆದರೆ ಇದು ಒಂದು ಸಮುದಾಯ ಒಂದು ದೇಶ, ಒಂದು ಜನಾಂಗ ಸ್ವಾತಂತ್ರ್ಯಕ್ಕಾಗಿ ತನ್ನ ಇರುವನ್ನು ಪ್ರಕಟಿಸುವ ಅಲ್ಲಿನ ಒಬ್ಬೊಬ್ಬರ ಕಾಳಜಿಗಿಂತ ಒಟ್ಟು ಸಮೂಹದ ತುರ್ತಾಗಿರುತ್ತದೆ. ಹೀಗಾಗಿ ಇದನ್ನು ಹೋರಾಟದ ಚಳುವಳಿಯ, ಪ್ರತಿಭಟನೆಯ ಹಿನ್ನಲೆಯಲ್ಲಿ ಗ್ರಹಿಸಬೇಕು. ಈ ಹೋರಾಟ ಪ್ರಜ್ಞೆ ಜಾಗ್ರತವಾಗಿರುವದು ಕೇವಲ ಮುಂದುವರೆದ, ಅಕ್ಷರಸ್ಥ ಸಂಸ್ಕøತಿಯಲ್ಲಿ ಮಾತ್ರ ಅಲ್ಲ. ತೀರಾ ಹಿಂದುಳಿದ ಅನಕ್ಷರಸ್ಥ ನೆಲೆಯಲ್ಲೂ ಇದು ಗರಿಗೆದರುತ್ತದೆ. ಆದರೆ ಈ ಕಾಲದ ಈ ಸಂದರ್ಭದ ದೊಡ್ಡ ವಿಪರ್ಯಾಸವೆಂದರೆ ನಾಗರಿಕ ಸಮಾಜ ಕಟ್ಟಿದ ಚಳುವಳಿಗಳು ಪ್ರಚಾರಕ್ಕೆ ಬಂದು ಅವರೇ ಅಂತಿಮರಾಗಿ ಎಲ್ಲ ಸುಖ ಸವಲತ್ತುಗಳನ್ನು ಪಡೆಯುವುದು. ಆದರೆ ಮೂಲ ಹೋರಾಟದ ಕಿಚ್ಚು ಹಚ್ಚಿದ ನಮ್ಮ ಹಳ್ಳಿಗರು, ದೇಶಿ ಚಳುವಳಿಗಾರರು ಕಟ್ಟಿದ ವಿರೋಧಿ ಧ್ವನಿಗಳುಹೋರಾಟದ ಸಂದರ್ಭಗಳು ದಾಖಲಾಗದೇ ಅಜ್ಞಾತವಾಗಿ ಅಳಿದು ಹೋಗುತ್ತದೆ ಮತ್ತು ಶಿಷ್ಠ ಪ್ರಜ್ಞೆಯ ಹೋರಾಟವೇ ಶ್ರೇಷ್ಠ ಮತ್ತು ಸಾರ್ಥಕವೆಂದೂ, ಗ್ರಾಮೀಣರು ಹೋರಾಟ ಅನಾಗರಿಕವೆಂದೂ ಕಳ್ಳತನ, ದರೋಡೆ, ಹಿಂಸೆ, ಕೊಲೆಗೆ ಸಂಬಂಧಿಸಿದ್ದೆಂದು ಹೇಳಿ ಅವರನ್ನು ನೋಡುವ ದೃಷ್ಟಿಕೋನದಲ್ಲಿ ಅಪರಾಧಿಗಳಾಗಿ ಕಂಡು ಇತಿಹಾಸವನ್ನು ತಮಗೆ ಬೇಕಾದ ದಿಕ್ಕಿನಲ್ಲಿ ತಿರುಚಿ ಓದುವ ದಿನಗಳು ಇಂದಿನವು.
ಇಂಥ ದೇಶಿ ಚಳುವಳಿಯನ್ನು ತನ್ನ ನಲೆಯಲ್ಲಿ ಕಟ್ಟಿ ಬಡವರ, ದೀನ ದಲಿತರ ಉಪಜೀವನಕ್ಕಾಗಿ ಜಮೀನ್ದಾರರು, ಶ್ರೀಮಂತರು ಮನೆಹೊಕ್ಕು ಕೂಡಿಟ್ಟ ಕಾಳು ಕಡಿಯನ್ನು ಬಡಬಗ್ಗರಿಗೆ ಹಂಚಿ ಸಮಾನತೆಯ ಸಂದೇಶ ಸಾರಿದ ಅಪ್ರತಿಮ ಹೋರಾಟಗಾರ ಸಿಂಧೂರ ಲಕ್ಷ್ಮಣ. ಆ ಕಾಲದ ಬ್ರಿಟೀಷ ಷೋಷಿತ ಆರಕ್ಷಕರು ಇವರನ್ನು ಹಿಡಿಯಲು ಹರಸಾಹಸ ಪಡಬೇಕಾಯಿತು. ಬ್ರಿಟೀಷ ಸೈನಿಕರಿಗೆ ಸಿಂಹ ಸ್ವಪ್ನವಾಗಿ ಲಕ್ಷ್ಮಣನ ದಂಡು ಅವರಲ್ಲಿ ನಡುಕ ಹುಟ್ಟಿಸುವ ಮೂಲಕ ಪರ್ಯಾಯವಾಗಿ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ಶಕ್ತಿಗೆ ದೇಶಿಯ ಬಲ ತುಂಬಿದರು.ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಆಂದೋಲನದ ಚರಿತ್ರೆಯಲ್ಲಿ ತಳಮಟ್ಟದ ಒಳ ಬಂಡಾಯಗಳ ತೀವ್ರತೆಯನ್ನು ಕಟ್ಟಿಕೊಡದೇ ಹೋದ ಕಾರಣವಾಗಿ ಅನೇಕ ದೇಸೀ ನಾಯಕರು ಪ್ರಧಾನ ಭಿತ್ತಿಗೆ ಬರದೇ ಆಳರಸರ ದೃಷ್ಟಿಯಲ್ಲಿ ಕಂಡುಬಂದಂತೆ ‘ದರೋಡೆ ಕೋರ’ರಾಗಿ ಮಾತ್ರ ಉಳಿಯುವಂತಾಯಿತು. ಇಂಥ ದೇಸೀ ನಾಯಕರ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಜಾನಪದ ಮೊದಲಾಯಿತು. ಜನಪದ ಗೀತೆಗಳು ಇಂದು ದೇಸಿ ಚಳವಳಿಯ ದಾಖಲೆಗೆ ಸಿಕ್ಕುವ ಅಮೂಲ್ಯ ಸಾಮಗ್ರಿಗಳೆನಿಸಿವೆ.ಬ್ರಿಟೀಷ್ ಆಳರಸರು ಜಾರಿಗೊಳಿಸಿದ ಈ ನೆಲಕ್ಕೆ ಹೊಂದದ ಕಾಯಿದೆಗಳು, ನ್ಯಾಯ ಪದ್ಧತಿ, ಹೇರಿದ ತೆರಿಗೆ ಮೊದಲಾದವು ಸ್ಥಳೀಯರನ್ನು ದುರ್ಬಲಗೊಳಿಸಿದವು. ರೈತರು, ಬಡವರು, ಕೂಲಿಕಾರರಾದ ಸ್ಥಳೀಯರಿಂದ ದುಡ್ಡು ವಸೂಲಿ ಮಾಡಿಕೊಡುವ ದಾಸ್ಯಕ್ಕೆ ಸ್ಥಳೀಯ ಅರಸರು ಶರಣಾಗುವಂತಾಯಿತು. ಇಂಥ ಧೋರಣೆ ನೀತಿಗಳು ಸ್ಥಳೀಯ ನಾಯಕ ರನ್ನು ರೊಚ್ಚಿಗೆಬ್ಬಿಸಿದವು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಅನೇಕ ಬಂಡಾಯ ಗಳಲ್ಲಿ ವೀರ ಸಿಂಧೂರ ಲಕ್ಷ್ಮಣನ ಮತ್ತವರ ಸಹಚರರ ಬಂಡಾಯ ಉತ್ತರ ಕರ್ನಾಟಕದ ಭಾಗದಲ್ಲಿ ಜನಜನಿತವಾಗಿದೆ.
ಉತ್ತರ ಕರ್ನಾಟಕ ಅದರಲ್ಲೂ ಮುಂಬೈ ಕರ್ನಾಟಕದ ಪ್ರದೇಶಗಳಲ್ಲಿ ಸಿಂಧೂರ ಲಕ್ಷ್ಮಣನ ಹೆಸರು ನೆನಪಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. ಬ್ರಿಟೀಷ್ ಅಧಿಕಾರಶಾಹಿ ಹಾಗೂ ಅವರ ಪೋಷಕರಾಗಿದ್ದ ಜಮೀನ್ದಾರರ ವಿರುದ್ಧ ತನ್ನ ಸಣ್ಣ ಗುಂಪನ್ನು ಜೊತೆಯಲ್ಲಿ ಟ್ಟುಕೊಂಡು ದೊಡ್ಡ ಹೋರಾಟ ಮಾಡಿದ ಸಿಂಧೂರ ಲಕ್ಷ್ಮಣ ಚರಿತ್ರೆ ಅಜರಾಮರ ವಾದುದು.
ಬಿದರಿಗ್ರಾಮದ ಬಸವಪ್ರಭು ಹಾಡಿದ ಲಾವಣಿ ಸಿಂಧೂರ ಲಕ್ಷ್ಮಣನ ಸಮಗ್ರ ಜೀವನಗಾಥೆ ಸಿಕ್ಕುತ್ತದೆ. ಸರಕಾರಿ ಸೇವೆಯಲ್ಲಿದ್ದ ಲಕ್ಷ್ಮಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ತನ್ನ ಬಂಡಾಯದ ಮೂಲಕ ಮೇಲ್ವರ್ಗದ ಬಂಡವಾಳಶಾಹಿಗಳ ನಿದ್ದೆಗೆಡಿಸಿ ಬಡವರ, ದೀನದಲಿತರ ಹಾಗೂ ಅಸಹಾಯಕ ಜನರ ನೆರವಿಗೆ ನಿಂತ ಪರಿಸರವಾಗಿ ನಿರೂಪಿತವಾಗಿದೆ. ಲಾವಣಿ ಆರಂಭದಲ್ಲಿ ‘ಘಟ ಹೋಗುವುತನಕ ಹಟ ಬಿಡದ’ ಲಕ್ಷ್ಮಣನ ಧೈರ್ರ, ಸಾಹಸ ಹಾಗೂ ಸ್ವಾಭಿಮಾನದ ಚಿತ್ರ ಬರುತ್ತದೆ.
ಸಿಂಧೂರಾಗ ಲಕ್ಷ್ಮಣ ಹುಟ್ಟ್ಯಾನ ಭಂಟ ಅನಿಸ್ಯಾನ
ಕೊಟ್ಟ ವಚನ ಹುಟ್ಟ ತಪ್ಪಲಿಲ್ಲ
ಘಟಹೋಗುತನಕ ಹಿಡಿದ ಹಟ ಬಿಡಲಿಲ್ಲ.
ಪಾಂಡವರೊಳಗ ಇದ್ದಾಂಗ ಭೀಮ ಚೆಲುವ ಚಂದ್ರಾಮ
ಥೇಟ ಹೋಳಿಕಾಮ ರೂಪದಲಿ ಡೌಲ
ಹೆತ್ತತಾಯಿ ಹೊಟ್ಟೀಲಿ ಹುಟ್ಟ್ಯಾನ ಪ್ರಬಲ.
ಹೀಗೆ ಸಿಂಧೂರ ಬಂಟನ ವರ್ಣನೆಯನ್ನು ಜನಪದರು ಕಂಡರಿಸಿದ್ದಾರೆ.
ಕಂಪನಿ ಸರಕಾರದ ಇನಿಸ್ಪೆಕ್ಟರ್ಗಳಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷ್ಮಣ ವಾಯದೆ ಕೊಟ್ಟು ಅದರಂತೆ ನಡೆದುತೋರಿಸಿದ ಧೀರ. ಒಂದು ಸಂದರ್ಭದಲ್ಲಿ ಲಕ್ಷ್ಮಣ ಇನಿಸ್ಪೆಕ್ಟರ್ಗೆ ಹೇಳುತ್ತಾನೆ.
ಲಕ್ಷುಮಣ ತಿರುಗಿ ಹೇಳತಾನ ನಾಳೆ ಬರತೀನಿ
ಹುಷಾರಿ ಇರು ನೀ ಚಾವಡಿ ಒಳಗ
ಈ ಮಾತು ಸುಳ್ಳ ಅಲ್ಲ ಗಂಟು ಹಾಕು ಪದರಾಗ
ಅನೇಕ ಊರುಗಳಲ್ಲಿ ಗುಡ್ಡ ಗವ್ವರಗಳಲ್ಲಿ ಹುಲಿಯಂತೆ ಮೆರೆದು ಆಳರಸರ ಮತ್ತು ಶ್ರೀಮಂತರ ನಿದ್ದೆಗೆಡಿಸಿದ ಸಿಂಧೂರ ಲಕ್ಷ್ಮಣ ಇಂಗ್ಲೀಷರ ದರ್ಬಾರಕ್ಕೆ ಸವಾಲು ಆಗಿದ್ದ. ಜನಪದ ಗೀತೆಯಲ್ಲಿ ಲಕ್ಷ್ಮಣನ ಕಾಲಕ್ಕೆ ಹಾಗೂ ಮುಂಚೆ ಹೋರಾಟದ ಮುಂಚೂಣಿ ಯಲ್ಲಿದ್ದ ವೀರನನ್ನು ನೆನೆಯುತ್ತಾ ಆ ವೀರರಿಗಿಂತ ಲಕ್ಷ್ಮಣ ಬಹದ್ದೂರನಾಗಿದ್ದ ಎಂದು ಸಾರುತ್ತಾರೆ.
ಸಂಗೋಳಿ ಸಂಪಗಾಂವಿ ರಾಯಣ್ಣ
ಮುಂಡರಗಿ ಭೀಮರಾಯಣ್ಣ
ಶೂರರಾದಾರಣ್ಣ ಆಗೀನ ಕಾಲಕ
ಕಟ್ಟಿಚೆನ್ನ ಸತ್ತಹ್ವಾದ
ದೇಶದಾಗ ಮಾಡಿಕೊಂಡ
ಶಿವಾಜಿ ಟೀಪುಸುಲ್ತಾನ ಗಾಯಕವಾಡ ನಾನು
ಪೇಶ್ವೆ ನಾರಾಯಣ ಹೆಸರ ದೂರತನಕ
ಅವ್ರ ಪ್ರಬಲರಾದರು ಪೇಶ್ವೆ ಆಳುವ ಕಾಲಕೆ||
ಈ ಇಂಗ್ರೇಜಿ ದರಬಾರದಾಗ
ಲಕ್ಷ್ಮಣನ್ಹಾಂಗ ಆಗಿಲ್ಲ ಯಾರು ತಿಳಿರಿ ನಿಮ್ಮನಕ
ಅಂತ ಈ ಶೂರನಿಗೆ ಬಹದ್ದೂರ ಅನ್ನಬಾರದ್ಯಾಕ
ಹೀಗೆ ವೀರಭಂಟ ಲಕ್ಷ್ಮಣ ಬಡವರ ಪಾಲಿಗೆ ಆಪತ್ಬಾಂಧವನಾಗಿ ಸ್ವಾಭಿಮಾನಿಯಾಗಿ ನಿಜವಾದ ಅರ್ಥದಲ್ಲಿ ಬಹದ್ದೂರನಾಗಿ ಗುರುತಿಸಿಕೊಳ್ಳುತ್ತಾನೆ. ಲಕ್ಷ್ಮಣ ತೀರಿಕೊಂಡಾಗ ‘ಮೋಸಮಾಡಿ ಅಭಿಮಾನ್ಯಗ ಹೊಡದಂಗಾತು ಕೌರವರು’ ಎಂದು ಹೋಲಿಸುತ್ತಾರೆ. ಕೊನೆಗೆ, “ಹುಟ್ಟಬೇಕು ಲಕ್ಷ್ಮಣನಂತವರು ಶ್ರೇಷ್ಠ ಅನಿಸಿಕೊಂಡು ಹ್ವಾದ ಗಬರು” ಎಂದು ಹಾಡು ಮುಗಿಸುತ್ತಾರೆ.

ಕಲಿತನಕೆ ಹೆಸರಾದ ಸಿಂಧೂರ ಲಕ್ಷ್ಮಣ 22 ಜುಲೈ 1922 ರಂದು ಮೋಸದಿಂದ ಬಲಿಯಾಗುತ್ತಾನೆ. ಈ ಸಂಗತಿ ಕಾಳ್ಗಿಚ್ಚಿನಂತೆ ಹಬ್ಬಿ ಸಿಂಧೂರಿನ ಅವನ ಕುಟುಂಬವರ್ಗವನ್ನು ತಲುಪಿತು. ಅವರ ರೋದನ ಹೇಳತೀರದು. ಜನಪದದ ಹಾಡಿನಲ್ಲಿ ಆ ಸಂದರ್ಭ ಹೀಗೆ ಚಿತ್ರಿತವಾಗಿದೆ.
ತೊಟ್ಟಿಲ ತೂಗತಿದ್ದೆ ಬಟ್ಟಲು ಬೆಳಗತಿದ್ದೆ
ಕೇಳಿಲ್ಲ ನಾನು ಹೊಸಸುದ್ದಿ! ಲಕ್ಷ್ಮಣನ
ಮಡದಿ ತಾ ಕೇಳಿ ಹೊರಳ್ಯಾಳ
ಅಂಗಳ ಹುಡುಗತಿದ್ದೆ ಗಂಗಾಳ ಬೆಳಗತಿದ್ದೆ
ಕೇಳಿಲ್ಲ ನಾನು ಹೊಸಸುದ್ದಿ! ಲಕ್ಷ್ಮಣನ
ತಾಯವ್ವ ಕೇಳಿ ಅಳತಾಳ
ಒಲಿಯ ಮ್ಯಾಲಿನ ಅಕ್ಕಿ ಉಕ್ಕುಕ್ಕಿ ಕುದಿವಾಗ
ಅವನಕ್ಕ ಅತ್ತಾಳ ಬೋರಾಡಿ! ಲಕ್ಷ್ಮಣಗ
ಹೊಡೆದವರ ವಂಶ ಅಳಿಯಲಿ.
ಜನೋಪಯೋಗಿ ಕೆಲಸ ಮಾಡಿ ಎಲ್ಲರ ನಾಲಿಗೆಯ ಮೇಲಿರುವ ವ್ಯಕ್ತಿಗೆ ಸಮಯ ಬಂದಾಗ ಜೊತೆಯಲ್ಲಿ ಯಾರೂ ಇರುವುದಿಲ್ಲ ಎಂಬುದು ಜನಪದ ನಂಬಿಕೆ. ಇಲ್ಲೂ ಹಾಗೆಯೇ ಆಯಿತು. ಜನಪದರು ಹೇಳುವ ಹಾಗೆ,
ಮ್ಯಾಳಿಗೆ ಮ್ಯಾಲಿನ ಹುಲ್ಲು ಗಾಳಿಗೆ ಹೋಗಾಗ
ಗಾಳಿನ ತರಬಾಕ ಸಗತಿಲ್ಲ- ಲಕ್ಷ್ಮಣಗ
ವ್ಯಾಳ್ಯಾ ಬಂದಾಗ ಯಾರಿಲ್ಲ.
ತಿಪ್ಪಿ ಮ್ಯಾಲಿನ ಹುಲ್ಲ ತೆಪ್ಪಾಗಿ ತೇಲಾಗ
ಎತ್ತಿ ತರುವ ಜಾಣ ಒಬ್ಬಿಲ್ಲ-ಲಕ್ಷ್ಮಣಗ
ಹೊತ್ತ ಬಂದಾಗ ಯಾರಿಲ್ಲ.
ಎಂಬಲ್ಲಿ ಲಕ್ಷ್ಮಣನ ಮೋಸದ ಸಾವು ಜನಪದರ ರೋಷಕ್ಕೆ ಕಾರಣವಾಗಿದೆ. ನಂಬಿದವರೆ ವಿಶ್ವಾಸದ್ರೋಹ ಮಾಡಿದ ಸಂಗತಿಯನ್ನು ಜನಪದರು,
ಜಾಣ ಜಾಣರು ಕೂಡಿ ಜಾಲಿಯ ಗಿಡದಾಗ
ಜಾಲ್ಯಾಗ ಕತ್ತಿ ಮಸ್ತಾರ-ಲಕ್ಷ್ಮಣನ
ಕುತ್ತಿಗಿ ಮ್ಯಾಲ ಎಳೆದಾರ
ಬಂಟ ಬಂಟರು ಕೂಡಿ ಕಂಟ್ಯಾಗ ಕೂತಾರ
ಕಂಟ್ಯಾಗ ಕತ್ತಿ ಮಸ್ತಾರ-ಲಕ್ಷ್ಮಣನ
ಟೊಂಕದ ಮ್ಯಾಲ ಎಳೆದಾರ.
ಹೀಗೆ ಮೋಸಕ್ಕೆ ಬಲಿಯಾದ ವೀರನ ಸಾವನ್ನು ಜನಪದರು ತುಂಬಾ ನೋವಿನಿಂದಲೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಿಂಧೂರ ಲಕ್ಷ್ಮಣನ ಅವಸಾನದ ನಂತರ ರಚಿತವಾದ ಜನಪದ ಕೋಲಾಟವೊಂದರಲ್ಲಿ ಜನಸಾಮಾನ್ಯರ ರೋದನ ಹೆಪ್ಪುಗಟ್ಟಿದೆ. ಮೋಸದಿಂದ ಆದ ಅವಸಾನವನ್ನು ಈ ಕೋಲಾಟ ಪದ ಚಿತ್ರಿಸುತ್ತದೆ.
ವಿಶ್ವಾಸ ಹಳಬರು ಊಟಕ ಹೇಳ್ಯಾರ
ಬಂಧೂಕ ಭಾರ ಬರಿಮಾಡಿ ಕೋಲ|
ಬಂದೂಕ ಭಾರಬರಿ ಲಕ್ಷ್ಮಣನ
ಊಟಕ್ಕೆ ಕೊತ್ತವಗ ಒಗದಾದ ಕೋಲ.
ವಿಶ್ವಾಸದ್ರೋಹ ಬಗೆದ ಸಂದರ್ಭದಲ್ಲಿ ವೀರನ ಅಂತ್ಯವನ್ನು ಚಿತ್ರಿಸಿದ ಈ ಪದದಲ್ಲಿ.
ಬಿದ್ದಾನ ಬಿದ್ದಾನ ಬಿಳಿಯಂಗಿ ಮೇಲಾಗಿ
ರುದ್ದರ ಜೋಡಂಗಿ ರಗತಾಗಿ ಕೋಲ
ರುದ್ದರ ಜೋಡಂಗಿ ರಗತಾಗಿ ಲಕ್ಷ್ಮಣ್ಣ
ಬಿದ್ದಾನ ಬೀಳಗಿ ಬಯಲಾಗ| ಕೋಲ”
ಜನಸಾಮಾನ್ಯರ ಆಪತ್ಬಾಂಧವ, ಅನಾಥರ ಪಾಲಿನ ರಕ್ಷಕನಾಗಿದ್ದ ಸಿಂಧೂರ ಲಕ್ಷ್ಮಣ ಬೀಳಗಿಯ ಬಯಲಲ್ಲಿ ಶವವಾಗಿ ಬಿದ್ದಕೊಂಡ ಸಂದರ್ಭವನ್ನು ಹೆಣ್ಣು ಮಕ್ಕಳು ಹೀಗೆ ಹಾಡಿದ್ದಾರೆ.
ಮಠಬಿಟ್ಟ ಮನೆಬಿಟ್ಟ ಮಠದ ಗೊಡವಿಯ ಬಿಟ್ಟ
ತನ್ನವರ, ಬಂಧುಗಳ ಕೈಬಿಟ್ಟು ಕೋಲ|
ತನ್ನವರ ಬಂಧುಗಳ ಕೈಬಿಟ್ಟು ಮಲಗ್ಯಾನ
ಕಪ್ಪರ ಪಡೆವ್ವಗ ತಲಿಕೊಟ್ಟು ಕೋಲ.
ಜನಪದರ ಬದುಕು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಅಗಲಿ ಹೋದ ಲಕ್ಷ್ಮಣನನ್ನು ಕುರಿತು ಕಾವ್ಯ ಕಟ್ಟಿದ ಜನಪದರು ಲಕ್ಷ್ಮಣನನಿಲ್ಲದ ಸಂದರ್ಭಕ್ಕೆ ಅರಳಿದ ಹೂಗಳಿಗೆ ಏನು ಅರ್ಥವೆಂದು ಮಾರ್ಮಿಕವಾಗಿ ಕೇಳಿಕೊಳ್ಳುತ್ತಾರೆ.
ಸಿಂಧೂರ ತೋಟದಾಗ ಚೆಂದಕ ಮಲ್ಲಿಗಿ ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ|
ಬಂದು ಲಕ್ಷ್ಮಣ್ಣ ಮುಡಿಲಲ್ಲಿ ಆ ಹೂವ
ಅಕ್ಕ ತಂಗೇರು ನೋಡಿ ಅಳತಾರ ಕೋಲ.
ಸಿಂಧೂರ ತೋಟದಾಗ ಚೆಂದಕ ಸಂಪಿಗಿ ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಆ ಹೂವ
ಗೆಳತೆರು ನೋಡಿ ಅಳತಾರ ಕೋಲ.
ಸಿಂಧೂರ ತೋಟದಾಗ ಚಂದಕ ಚಂಡು ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ|
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಆ ಹೂವ
ತಾಯಿ ತಂದಿ ನೋಡಿ ಅಳತಾರ ಕೋಲ
‘ಎಣ್ಣಿಯ ಬಿಂದಿಗಿಗಿ ಸಣ್ಣರವಿ ಕವಿದಂಗ’ ಎಂದು ಮಾರ್ಮಿಕವಾಗಿ ನಾಣ್ನುಡಿಯನ್ನು ಬಳಸಿ ಹೇಳಿಕೊಟ್ಟ ಈ ಮುಂದಿನ ಸಾಲುಗಳು ಲಕ್ಷ್ಮಣ್ಣನಿಲ್ಲದ ಶೂನ್ಯದಲ್ಲಿ ಆತನ ಬಳಗ ಹರಿಸಿದ ಕಣ್ಣೀರಿನ ಸಂದರ್ಭವನ್ನು ದೃವ್ಯವಾಗಿ ಬಿಚ್ಚಿಡಲಾಗಿದೆ.
ಎಣ್ಣಿsಯ ಬಿಂದಿಗಿಗಿ ಸಣ್ಣಿರವಿ ಕವಿದಂಗ
ಅವನಮ್ಮ ಲಕ್ಷ್ಮಣನ ಬಳಗದ ಕೋಲ
ಅವನಮ್ಮ ಲಕ್ಷ್ಮಣನ ಬಳಗದ ಕಣ್ಣೀರ
ಸಣ್ಣ ಮಳಿಯಾಗಿ ಸುರಿದಾವ ಕೋಲ.
ತುಪ್ಪದ ಬಿಂದಿಗಿಗಿ ಕಟ್ಟಿರವಿ ಕವಿದಂಗ
ಅವನಮ್ಮ ಲಕ್ಷ್ಮಣನ ಬಳಗದ ಕೋಲ
ಅವನಮ್ಮ ಲಕ್ಷ್ಮಣನ ಬಳಗದ ಕಣ್ಣೀರು
ಉತ್ತರಿಯ ಮಳಿಯಾಗಿ ಸುರಿದಾವ ಕೋಲ.
ಸಿಂಧೂರ ಲಕ್ಷ್ಮಣ ತೀರಿಕೊಂಡಾಗ ಹೆಂಡತಿ ಚಂದ್ರವ್ವಳ ರೋದನವನ್ನು ಜನಪದರು ತಮ್ಮ ಗೀತೆಯಲ್ಲಿ ಕಂಡರಿಸಿದ್ದಾರೆ.
ಆ ಬಳಿಯ ಈ ಬಳಿಯ ಜಂಬ ನೀರಲು ಬಳಿಯ
ಮಡದಿ ಚಂದ್ರವ್ವನ ಕೈಬಳಿಯ ಕೋಲ
ಮಡದಿ ಚಂದ್ರವ್ವನ ಕೈ ಬಳಿಯ ತಗೆವಾದ
ತಾಯಿ-ತಂದಿ ನೋಡಿ ಅಳತಾರ ಕೋಲ.
ಅ ಮಣಿಯ ಈ ಮಣಿಯ ಜಂಬನೀಲದ ಮಣಿಯ
ಮಡದಿ ಚೆಂದ್ರವ್ವನ ಗುಳದಾಳಿ ಕೋಲ|
ಮಡದಿ ಚಂದ್ರವ್ವನ ಗುಳದಾಳಿ ತೆಗೆವಾಗ
ಗೆಳತಿಯರು ನೋಡಿ ಅಳತಾರ ಕೋಲ
ಹೀಗೆ ವೀರ ಸಿಂಧೂರ ಲಕ್ಷ್ಮಣನ ಸಾವಿನ ನಂತರ ತಂದೆ ತಾಯಿ ಹೆಂಡತಿ ಅಪಾರ ಬಳಗ ರೋಧಿಸುವ ಪರಿಯನ್ನು ಈ ಜನಪದಗೀತೆ ಕಟ್ಟಿಕೊಡುತ್ತದೆ.ಜನಪದ ಗೀತೆಗಳಲ್ಲಿ ವೀರರ ಚಿತ್ರಣ ಹೆಚ್ಚಾಗಿ ಲಾವಣಿಗಳಲ್ಲಿ ಕಂಡುಬರುತ್ತವೆ. ಕೆಲ ತ್ರಿಪದಿಗಳಲ್ಲಿ ಉಲ್ಲೇಖಿತವಾಗಿವೆ. ಕನ್ನಡ ಜನಪದ ಗೀತೆಗಳಲ್ಲಿ ವೀರರನ್ನು ಕುರಿತ ಗೀತೆಗಳ ಸಮಗ್ರ ಸಂಪಾದನೆ ಮತ್ತು ಪ್ರಕಟಣೆಯಾಗಬೇಕಿದೆ. ಸಂಗ್ರಹಿತ ಕೆಲವೇ ಕೆಲವು ಸಾಹಿತ್ಯದಿಂದ ಹೋರಾಟಗಾರರ ಒಟ್ಟು ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವುದು ತೊಡಕಾಗುತ್ತದೆ. ಪ್ರತಿಷ್ಠಿತ ವಲಯದಿಂದ ಬಂದ ಹೋರಾಟಗಾರರಿಗಿಂತಲೂ ಅಪ್ರತಿಷ್ಠಿತ ವಲಯದಿಂದ ರೂಪುಗೊಂಡು ಬಂದ ಹೋರಾಟಗಾರರ ಚರಿತ್ರೆಯನ್ನು ಶಿಷ್ಟಸಾಹಿತಿಗಳು ಕಟ್ಟಿಕೊಡುವಲ್ಲಿ ಮಡಿವಂತಿಕೆ ತೋರಿರುವುದು ಕಂಡುಬರುತ್ತದೆ.ಹೋರಾಟದ ಸಿಂಧೂರ ಲಕ್ಷ್ಮಣನ ಕೆಚ್ಚು, ಶೌರ್ಯ,ಸಾಹಸ ಇಂದಿನವರಿಗೆ ಆದರ್ಶವಾಗಬೇಕಾಗಿದೆ.
 

‍ಲೇಖಕರು avadhi

22 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading