ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ಸಮ್ಮೇಳನದ ಕನಸು ಕಂಡವರು..

-ಎಂ ನಾಗರಾಜ್ ಶೆಟ್ಟಿ

ಒಬ್ಬರು ಒಂದು ಕನಸು ಕಾಣುತ್ತಾರೆ‌‌. ಅದನ್ನು ಸಾಕಾರ ಮಾಡುವುದು ಅವರೊಬ್ಬರಿಗೆ ಸಾಧ್ಯವಿಲ್ಲ. ಇತರರಿಗೆ ಅದನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಕನಸು ನನಸು ಮಾಡಲು ಶ್ರಮಿಸುತ್ತಾರೆ. ಹೀಗೊಬ್ಬರು ಕನಸಿದ ಫಲ: ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’

ಕನ್ನಡ‌‌ ಸಾಹಿತ್ಯ ಸಮ್ಮೇಳನದ ಕಿರಿಯ ಆವೃತ್ತಿಯಂತೆ, ಸರಕಾರ, ಅಕಾಡೆಮಿಗಳು, ಖಾಸಗಿ ಸಂಸ್ಥೆಗಳ ನೆರವು ಪಡೆಯದೆ, ಪ್ರತಿನಿಧಿ ಶುಲ್ಕ ಮತ್ತು ಆಸಕ್ತರ ದೇಣಿಗೆಯಿಂದ ಆಯೋಜಿತವಾಗಿದ್ದು ಈ ಸಮ್ಮೇಳನ.

ಈ‌ ರೀತಿಯ ಸಮ್ಮೇಳನಗಳು ನಡೆದದ್ದು ಇದು ಮೊದಲೇನಲ್ಲ‌. ಆದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಜೋಷಿ ಗ್ರಹಣ ಹಿಡಿದ ಹೊತ್ತಲ್ಲಿ, ನವೆಂಬರ್ ತಿಂಗಳಲ್ಲೂ ಜೋಮಿನಲ್ಲಿ ಮುದುಡಿರುವ ಕನ್ನಡ ಮನಸ್ಸನ್ನು ಎಚ್ಚರಗೊಳಿಸುವ ಕಾರ್ಯಕ್ರಮದ ಅವಶ್ಯಕತೆ ಇತ್ತು. ಸಮಾಜಮುಖಿ ಸಾಹಿತ್ಯ ಸಮ್ಮೇಳನ ಈ ಅಗತ್ಯವನ್ನು ಬಹಳ ಚೆನ್ನಾಗಿ ಪೂರೈಸುವ ಕೆಲಸ ಮಾಡಿತು.

ಎರಡು ದಿನ ಇನ್ನೂರಕ್ಕೂ ಮೇಲ್ಪಟ್ಟು ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಪ್ರತಿ ದಿನ ಐದು ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಪ್ರತಿ ಗೋಷ್ಠಿಯಲ್ಲು ಯೋಗ್ಯ ಸಂಪನ್ಮೂಲ ವ್ಯಕ್ತಿಗಳಿದ್ದರು‌. ಅಧ್ಯಕ್ಷರ‌, ವಂದನಾರ್ಪಣೆ ಮಾಡುವವರ ಉಪಟಳವಿಲ್ಲದೆ ಸಮನ್ವಯಕಾರರ ಮೂಲಕ ಗೋಷ್ಠಿಗಳನ್ನು ನಡೆಸಿದ್ದು ಈ ಸಮ್ಮೇಳನದ ವಿಶೇಷ. ಎಡೆಬಿಡದೆ ನಲ್ವತ್ತೇಳು ಗೋಷ್ಠಿಗಳು ನಡೆಯುವಾಗ ಆಸಕ್ತರು ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಕಿರಿದಾಗ ಜಾಗದಲ್ಲಿ ಇವನ್ನೆಲ್ಲಾ ವ್ಯವಸ್ಥೆ ಮಾಡಿದ್ದು ಕಿರಿದರೊಳ್ ಪಿರಿದರ್ಥಮಂ ಹೇಳಿದಂತಿತ್ತು.

‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಯಾವುದೇ ಹಿತಾಸಕ್ತಿ, ಲಾಭಾಪೇಕ್ಷೆ ಇಲ್ಲದೆ, ಸಾಹಿತ್ಯ- ಸಮಾಜ ಇವೆರಡರ ಬಗೆಗಿನ ಕಾಳಜಿಯಿಂದ ರೂಪಿತವಾದದ್ದು. ಇದು ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕೋಟಿ ಬೆಲೆಯ, ಲಕ್ಷಾಂತರ ಹಾಜರಿಯ ಸಮ್ಮೇಳನವಲ್ಲ. ಆದರೆ ಉದ್ಘಾಟನೆ, ಸಮಾರೋಪಗಳಲ್ಲಿ ಕೆಲವರ ಮಾತು, ಕೆಲವು ಗೋಷ್ಠಿಗಳ ಮೌಲಿಕ ಚರ್ಚೆ ಬೆಲೆ ಕಟ್ಟಲು ಸಾಧ್ಯವಾಗದ್ದು.

ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ತಪ್ಪುಗಳಾಗುವುದು ಸಹಜ. ಅಂಥ ಸಂದರ್ಭಗಳಲ್ಲಿ ಉದ್ದೇಶವನ್ನು ಪರಿಗಣಿಸಿ‌ ದೋಷಗಳನ್ನು ಪಕ್ಕಕ್ಕೆ ಸರಿಸಬೇಕಾಗುತ್ತದೆ. ಸುಧಾರಣೆಯ ದೃಷ್ಟಿಯಿಂದ ಹೇಳಲಿಕ್ಕಿರುವುದು ಒಂದೇ: ಸಮಯದ ಸಂಯೋಜನೆ. ಉದ್ಘಾಟನೆಯಿಂದ ಸಮಾರೋಪದ ವರೆಗೆ ಎಲ್ಲಾ ಕಾರ್ಯಕ್ರಮಗಳು ಇಂಡಿಯನ್ ಸ್ಟಾಂಡರ್ಡ್ ಟೈಮ್ ನಲ್ಲೇ ಜರಗಿದವು. ಇದರಿಂದ ಆಸಕ್ತರು ಅಲ್ಲೋ‌ ಇಲ್ಲೋ ಎಂದು ದಿಕ್ಕು ತಪ್ಪಿದರೆ, ಅತಿಥಿಗಳ ಮಾತುಗಳು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡವು!

ಈ ಸಮ್ಮೇಳನದಲ್ಲಿ ‘ಪ್ರಗತಿ ಪರ’ ಪದ ಕೇಳಿ ಬರಲಿಲ್ಲ. ಬದಲಾಗಿ ಓರ್ವ ಅತಿಥಿಗಳು ‘ಸಮಾಜಮುಖಿ’ ‘ಜನಮುಖಿ’ ಶಬ್ದಗಳನ್ನು ಬಳಸಲು ಕರೆ ನೀಡಿದರು. ಈ ಸಲಹೆ ಸೂಕ್ತವಾಗಿದ್ದು ಸವಕಲು ಮತ್ತು ಲೇವಡಿಗೆ ಒಳಗಾಗಿರುವ ‘ಪ್ರಗತಿ ಪರ’ ಶಬ್ದದ ಬದಲು ಉಪಯೋಗಿಸಬಹುದೆನ್ನಿಸುತ್ತದೆ. ಇದು ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದ ಕೊಡುಗೆ.

ಸಾಹಿತ್ಯ ಸಮ್ಮೇಳನದ ಕನಸು ಕಂಡವರು ಜಯರಾಮ ರಾಯಪುರ. ದೊಡ್ಡ ತಂಡವೇ ಅವರೊಡನೆ ಸೇರಿ ಈ‌ ಸಮ್ಮೇಳನಕ್ಕೆ ದುಡಿದಿದೆ. ಅಚ್ಚುಕಟ್ಟಾಗಿ ಇಂತಹ ಸಮ್ಮೇಳನವನ್ನು ಆಯೋಜಿಸಿದ ಎಲ್ಲರಿಗೂ‌ ಧನ್ಯವಾದಗಳು. ವಂದನಾರ್ಪಣೆಯ ಸಮಯದಲ್ಲಿ ಮರೆತ ಚಂದ್ರಕಾಂತ ವಡ್ಡು ಅವರಿಗೂ ಧನ್ಯವಾದಗಳು.

‍ಲೇಖಕರು Admin

10 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading