
ಸಚೇತನ ಭಟ್
ಸಚೇತನ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್‌ವೇರ್ ಎಂಜನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. ಇವರ ಕೆಲವು ಅನುವಾದಿತ ಕತೆಗಳು ಕೆಲವು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಈ ಸಂಚಿಕೆಗಾಗಿ ಯಿಯುನ್ ಲಿ ಅವರ ಕತೆಯೊಂದನ್ನು ಅನುವಾದಿಸಿದ್ದಾರೆ.

ಬೀಜಿಂಗ್‌ನಲ್ಲಿ ಹುಟ್ಟಿ ಬೆಳೆದ ಯಿಯುನ್ ಲಿ ಓದಿದ್ದು ಪೀಕಿಂಗ್ ಯೂನಿವರ್ಸಿಟಿಯಲ್ಲಿ. 1996ರಲ್ಲಿ ಮೆಡಿಕಲ್ ವ್ಯಾಸಂಗ ಮಾಡಲು ಅಮೆರಿಕಕ್ಕೆ ಬಂದ ಯಿಯುನ್ ಲಿ ಅದಾದ ಎರಡು ವರ್ಷಗಳ ನಂತರ ಬರವಣಿಗೆ ಪ್ರಾರಂಭಿಸಿದಳು.
ಪ್ರಸ್ತುತ ಕತೆಯನ್ನು ಫ್ರಾಂಕ್ ಓ’ಕಾನರ್ ಇಂಟರನ್ಯಾಶನ್ ಅವಾರ್ಡ್ ಮತ್ತು ಹೆಮಿ೦ಗ್ವೆ ಪ್ರಶಸ್ತಿ ಪುರಸ್ಕೃತ A THOUSANDS YEARS OF GOOD PRAYER ಎನ್ನುವ ಸಣ್ಣ ಕತಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.
***
‘ರಾಕೆಟ್ ಸೈಂಟಿಸ್ಟ್’ – ಚೀನಾದಲ್ಲಿ ಅವನ ವೃತ್ತಿ ಏನೆಂದು ಕೇಳಿದವರಿಗೆಲ್ಲ ಶಿ ಹೇಳುತ್ತಿದ್ದುದು. ಈಗ ನಿವೃತ್ತನಾಗಿದ್ದೇನೆ ಎಂದು ಬೆರಗುಗಣ್ಣಿನಿಂದ ನೋಡುತ್ತಿದ್ದ ಜನರಿಗೆ ತುಸು ಸಂಕೋಚದಿಂದ ತಿಳಿಸುತ್ತಿದ್ದ. ‘ರಾಕೆಟ್ ಸೈಂಟಿಸ್ಟ್’ ಎನ್ನುವ ಪದವನ್ನು ಶಿ ಕಲಿತಿದ್ದು ತೀರಾ ಇತ್ತೀಚಿಗೆ ಇನ್ನೊಬ್ಬ ಹೆಂಗಸಿನಿಂದ. ಡೆಟ್ರಾಯಿಟ್‌ನಲ್ಲಿ ವಿಮಾನ ಬದಲಿಸಲು ಕಾಯುತ್ತ ಕುಳಿತವನಿಗೆ ತಾನು ನಿವೃತ್ತನಾಗುವ ಮೊದಲು ಯಾವ ವೃತ್ತಿಯಲ್ಲಿದ್ದೆ ಎನ್ನುವುದನ್ನು ಹರಕುಮುರುಕು ಇಂಗ್ಲಿಷಿನಲ್ಲಿ ವಿವರಿಸಲು ಸಾಧ್ಯವಾಗದೆ ಕೊನೆಗೆ ಚಿತ್ರ ಬಿಡಿಸಿ ತೋರಿಸಿದಾಗ ಆ ಮಹಿಳೆ ‘ಓಹ್! ರಾಕೆಟ್ ಸೈಂಟಿಸ್ಟ್’ ಎಂದು ಜೋರಾಗಿ ನಗುತ್ತ ಉದ್ಗರಿಸಿದ್ದಳು.
ಮೊದಲೇ ಸ್ನೇಹಪರರಾಗಿದ್ದ ಅಮೆರಿಕದ ಜನರು ಅವನ ವೃತ್ತಿಯ ಬಗ್ಗೆ ತಿಳಿದಾಗ ಇನ್ನೂ ಸ್ನೇಹದಿಂದ ವರ್ತಿಸುತ್ತಿದ್ದರಿಂದ ಅವನು ಇತ್ತೀಚಿಗೆ ಮಾತನಾಡುವಾಗಲೆಲ್ಲ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಈ ಶಬ್ದವನ್ನು ಪದೇ ಪದೇ ಬಳಸುತ್ತಿದ್ದ. ಅಮೆರಿಕದ ಮಧ್ಯಪಶ್ಚಿಮದ ಸಣ್ಣ ಪಟ್ಟಣದಲ್ಲಿರುವ ಮಗಳ ಮನೆಗೆ ಬಂದ ಈ ಐದು ದಿನಗಳಲ್ಲೇ ಶಿ ಅಕ್ಕಪಕ್ಕದ ಅನೇಕರ ಪರಿಚಯ ಗಳಿಸಿಕೊಂಡಿದ್ದ. ಪುಟ್ಟ ಮಕ್ಕಳನ್ನು ಪಾರ್ಕಿನಲ್ಲಿ ತಿರುಗಾಡಿಸಲು ಬರುವ ಅಮ್ಮಂದಿರು ಅವನತ್ತ ಕೈ ಬೀಸುತ್ತಿದ್ದರು. ಪ್ರತಿದಿನ ಒಂಬತ್ತು ಗಂಟೆಗೆ ಸರಿಯಾಗಿ ಪಾರ್ಕಿಗೆ ಬರುತ್ತಿದ್ದ ವಯಸ್ಸಾದ ಗಂಡ, ಅವನ ಕೈ ಹಿಡಿದುಕೊಂಡಿರುತ್ತಿದ್ದ ಸ್ಕರ್ಟ್ ಧರಿಸಿದ್ದ ಅವನ ಹೆಂಡತಿ ಯಾವಾಗಲು ಒಂದು ಕ್ಷಣ ನಿಂತು ಶಿ ಜೊತೆಗೆ ಮಾತನಾಡಿಕೊಂಡು ಮುಂದಕ್ಕೆ ಹೋಗುತ್ತಿದ್ದರು. ಸದಾ ಸೂಟು ಧರಿಸಿರುತ್ತಿದ್ದ ತಾತ ಏನಾದರೊಂದು ಹೇಳುತ್ತಲೇ ಇರುತ್ತಿದ್ದ, ಹೆಂಡತಿ ನಸುನಗುತ್ತ ಅವನ ಕೈ ಸವರುತ್ತಿರುತ್ತಿದ್ದಳು. ಪಾರ್ಕಿನಿಂದ ತುಸು ದೂರದಲ್ಲಿರುವ ನಿವೃತ್ತರ ವಿಶ್ರಾಂತಿ ಗೃಹದಲ್ಲಿರುವ, ಶಿ ಗಿಂತ ಎರಡು ವರ್ಷ ದೊಡ್ಡವಳಾದ ಎಪ್ಪತ್ತೇಳು ವರ್ಷದ ಮಹಿಳೆಯೊಬ್ಬಳು ಅವನ ಜೊತೆಗೆ ಹರಟಲು ಬರುತ್ತಿದ್ದಳು. ಹಾಗೆ ನೋಡಿದರೆ ಇಬ್ಬರಿಗೂ ಇಂಗ್ಲಿಷ್ ಬರುತ್ತಿದ್ದುದು ಅಷ್ಟಕ್ಕಷ್ಟೆಯಾದರೂ ಭಾಷೆಯ ತೊಡಕು ಅವರಿಬ್ಬರ ನಡುವಿನ ಸಂಭಾಷಣೆಗಾಗಲಿ, ಸ್ನೇಹಕ್ಕಾಗಲಿ, ಪರಸ್ಪರರನ್ನು ಅರ್ಥೈಸಿಕೊಳ್ಳುವುದಕ್ಕಾಗಲಿ ಅಡ್ಡಿಯಾಗಿರಲಿಲ್ಲ.
“ಅಮೆರಿಕ ಒಳ್ಳೆ ದೇಶ. ಇಲ್ಲಿ ಮಕ್ಕಳು ತುಂಬಾ ದುಡ್ಡು ಕಾಸು ಸಂಪಾದಿಸುತ್ತಾರೆ,” ಅವಳು ಆಗಾಗ ಹೇಳುತ್ತಿದ್ದಳು.
ನಿಜವಾಗಿಯೂ ಅಮೆರಿಕ ಒಳ್ಳೆಯ ದೇಶವೇ ಹೌದು. ಶಿ ಯ ಮಗಳು ಕಾಲೇಜೊಂದರ ಏಷಿಯಾ ಡಿಪಾರ್ಟ್ಮೆಂಟಿನಲ್ಲಿ ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿದ್ದವಳು ಒಂದು ವರ್ಷದಲ್ಲಿ ಶಿ ಯ ಇಪ್ಪತ್ತು ವರ್ಷಗಳ ದುಡಿಮೆಗಿಂತ ಹೆಚ್ಚು ಹಣ ಗಳಿಸುತ್ತಿದ್ದಳು.
“ನನ್ನ ಮಗಳು ಸಹ ಕೈ ತುಂಬಾ ಸಂಪಾದಿಸುತ್ತಾಳೆ.”
“ನನಗಂತೂ ಅಮೆರಿಕ ತುಂಬಾ ಇಷ್ಟ. ಎಲ್ಲರಿಗೂ ಒಳ್ಳೆ ಜಾಗ.”
“ಹೌದು. ನಾನು ಚೀನಾದಲ್ಲಿ ರಾಕೆಟ್ ಸೈಂಟಿಸ್ಟ್. ಆದರೆ, ಸಂಪಾದನೆ ಮಾತ್ರ ಏನಿಲ್ಲ. ‘ರಾಕೆಟ್ ಸೈಂಟಿಸ್ಟ್’ – ಗೊತ್ತೆ ನಿಮಗೆ?” ಶಿ ಹರುಕು ಮುರುಕು ಇಂಗ್ಲಿಷಿನಲ್ಲಿ ಮಾತನಾಡುತ್ತ ಕೈ ಮೇಲಕ್ಕೆತ್ತಿ ರಾಕೆಟ್ ತರಹ ಮಾಡಲು ಪ್ರಯತ್ನಿಸಿದ.
“ಐ ಲವ್ ಚೀನಾ. ಒಳ್ಳೆ ದೇಶ. ತುಂಬಾ ಹಳೆಯ ದೇಶ,” ಅವಳು ಹೇಳಿದಳು.
“ಅಮೆರಿಕ ಇನ್ನೂ ಪ್ರಾಯದ ದೇಶ, ಪ್ರಾಯದವರ ಹಾಗೆ.”
“ಅಮೆರಿಕ ಸುಖೀ ದೇಶ.”
“ಪ್ರಾಯದ ಜನ, ಹಳೆಯ ಜನರಿಗಿಂತ ಖುಷಿಯಾಗಿರುತ್ತಾರೆ,” ಶಿ ನುಡಿದ. ನಂತರ ಅವನಿಗೆ ತಾನು ಒಟ್ಟಾರೆ ಸಂಭಾಷಣೆಗೆ ಇದ್ದಕ್ಕಿದ್ದ ಹಾಗೆ ಮುಕ್ತಾಯವನ್ನು ಘೋಷಿಸಿದೆನೇನೋ ಎಂದು ಮುಜುಗರವಾಯಿತು. ನಿಜವಾಗಿಯೂ ಹೇಳಬೇಕು ಎಂದರೆ ತನ್ನ ಜೀವಮಾನದಲ್ಲಿ ಇದುವರೆಗೂ ಅನುಭವಿಸದಷ್ಟು ಖುಷಿಯನ್ನು ಅವನು ಇಲ್ಲಿ ಅನುಭವಿಸುತ್ತಿದ್ದ. ಅವನೆದುರಿಗೆ ಕುಳಿತ, ತನ್ನ ಸುತ್ತಲಿನ ಪ್ರತಿಯೊಂದನ್ನೂ ಪ್ರೀತಿಸುತ್ತಿದ್ದ ಈ ಹೆಂಗಸು ಸಹ ವಿನಾಕಾರಣ ಯಾವಾಗಲೂ ಖುಷಿಯಾಗಿರುವಂತೆ ತೋರುತ್ತಿತ್ತು.

ಕೆಲವೊಮ್ಮೆ ಅವರಿಬ್ಬರ ಮಾತುಕತೆಗೆ ಇಂಗ್ಲಿಷ್ ಸಾಲುತ್ತಿರಲಿಲ್ಲ. ಆಗೆಲ್ಲ ಅವಳು ಅಲ್ಲಿ ಇಲ್ಲಿ ಇಂಗ್ಲಿಷ್ ಶಬ್ದ ಪೊಣಿಸಿದ ಪರ್ಷಿಯನ್‌ನಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದಳು. ಶಿ ಗೆ ಅವಳೊಟ್ಟಿಗೆ ಚೈನೀಸ್‌ನಲ್ಲಿ ಮಾತನಾಡುವುದು ಸ್ವಲ್ಪ ಸಂಕೋಚದ ವಿಷಯವಾಗಿತ್ತು. ಆಗೆಲ್ಲ ಅವನು ಸುಮ್ಮನೆ ನಸುನಗುತ್ತಾ ತಲೆಯಾಡಿಸುತ್ತ ಕುಳಿತಿರುತ್ತಿದ್ದ. ಅವಳೇ ಮಾತುಕತೆಯ ಮುಂದಾಳತ್ವ ವಹಿಸುತ್ತಿದ್ದಳು. ಅವನಿಗೆ ಅವಳು ಮಾತನಾಡುತ್ತಿರುವುದು ಏನೆಂದು ಅರ್ಥವಾಗದಿದ್ದರೂ ಅವಳ ಉತ್ಸುಕತೆ, ಖುಷಿ ತನ್ನನ್ನೂ ಆವರಿಸುತ್ತಿರುವಂತೆ ಭಾಸವಾಗಿ ಅವನೂ ಉಲ್ಲಸಿತನಾಗುತ್ತಿದ್ದ.
ಶಿ ಪ್ರತಿದಿನ ಬೆಳಗ್ಗೆ ಪಾರ್ಕಿನಲ್ಲಿ ಅವಳ ಭೇಟಿಗಾಗಿ ಕಾದಿರುತ್ತಿದ್ದ. ಅವಳ ಹೆಸರು ಏನೆಂದು ಅವನು ಯಾವತ್ತೂ ಕೇಳಿರಲಿಲ್ಲ. ಹೀಗಾಗಿ ‘ಮ್ಯಾಡಮ್’ ಎಂದೇ ಕರೆಯುತ್ತಿದ್ದ. ಅವಳು ಧರಿಸುತ್ತಿದ್ದ ಕೆಂಪು, ಕೇಸರಿ, ಹಳದಿ, ನೇರಳೆ ಬಣ್ಣದ ಉಡುಪುಗಳನ್ನು ಅವಳ ದೇಶದಲ್ಲಿ ಅವಳಷ್ಟೇ ವಯಸ್ಸಾದ ಮಹಿಳೆಯೊಬ್ಬಳು ಧರಿಸಬಹುದು ಎನ್ನುವುದನ್ನು ಊಹಿಸಿಕೊಳ್ಳಲೂ ಶಿ ಗೆ ಸಾಧ್ಯವಾಗುತ್ತಿರಲಿಲ್ಲ. ಅವಳ ಬಳಿ ಕೂದಲಿಗೆ ಹಾಕುವ ಬಿಳಿಯ ಬಣ್ಣದ ಆನೆಯಾಕಾರದ, ನೀಲಿ ಹಸಿರು ಮಿಶ್ರಿತ ನವಿಲಿನಾಕಾರದ ಎರಡು ಕ್ಲಿಪ್ಪುಗಳಿದ್ದವು. ಅವಳ ತಲೆಯ ಕೂದಲಿನಲ್ಲಿ ಸಿಕ್ಕಿಹಾಕಿಕೊಂಡು ಅನಿಶ್ಚಿತತೆಯಿಂದ ಸಣ್ಣಗೆ ಅಲುಗಾಡುತ್ತಿದ್ದಂತೆ ತೋರುತ್ತಿದ್ದ ಆ ಕ್ಲಿಪ್ಪುಗಳನ್ನು ನೋಡಿದಾಗಲೆಲ್ಲ ಶಿ ಗೆ ಅವನ ಮಗಳು ಚಿಕ್ಕವಳಿರುವಾಗ ಇನ್ನೂ ಎಳೆಯ ಕೂದಲಿಗೆ ಒಂದು ಚಿಟ್ಟೆಯಾಕಾರದ ಪ್ಲಾಸ್ಟಿಕ್ ಕ್ಲಿಪ್ ಹಾಕಿಕೊಂಡು ಅದನ್ನು ಹಣೆಯವರೆಗೆ ಜೋತಾಡಿಸಿಕೊಂಡಿರುತ್ತಿದ್ದುದು ನೆನಪಿಗೆ ಬರುತ್ತಿತ್ತು. ಆಗೆಲ್ಲ ಅವನಿಗೆ ತನ್ನ ಮಗಳು ಇನ್ನೂ ಪುಟಾಣಿಯಾಗಿದ್ದ, ಬದುಕು ಆಶಾದಾಯಕವಾಗಿದ್ದ ಅವಳ ಆ ಬಾಲ್ಯದ ದಿನಗಳನ್ನು ತಾನು ಹೇಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಬೇಕು ಅನಿಸುತ್ತಿತ್ತು. ತನ್ನ ಸೀಮಿತ ಇಂಗ್ಲಿಷ್ ಜ್ಞಾನದಲ್ಲಿ ಈ ಭಾವನೆಯನ್ನು ವಿವರಿಸಲು ಸಾಧ್ಯವಾಗಲಾರದು ಎನ್ನುವುದು ಖಚಿತವಾಗಿ ತಿಳಿದಿತ್ತು. ಅಲ್ಲದೆ ನಡೆದುಹೋದುದರ ಬಗ್ಗೆ ಮಾತನಾಡುವುದು ಅವನ ರೀತಿಯೇ ಅಲ್ಲ.
ಸಂಜೆ ಮಗಳು ಕೆಲಸದಿಂದ ಬರುವಷ್ಟರಲ್ಲಿ ಶಿ ಅಡುಗೆ ಮಾಡಿಡುತ್ತಿದ್ದ. ಕೆಲ ವರ್ಷಗಳ ಹಿಂದೆ ಅವನ ಹೆಂಡತಿ ತೀರಿಹೋದ ನಂತರ ಅವನು ಅಡುಗೆ ಮಾಡುವುದನ್ನು ಕಲಿಸುವ ಕೋರ್ಸಿಗೆ ಸೇರಿಕೊಂಡಿದ್ದ. ತನ್ನ ಕಾಲೇಜಿನ ದಿನಗಳಲ್ಲಿ ಭೌತಶಾಸ್ತ್ರ, ಗಣಿತವನ್ನು ಕಲಿತಷ್ಟೇ ತೀವ್ರತೆಯಿಂದ ಅವನು ಅಡುಗೆ ಮಾಡುವುದನ್ನೂ ಕಲಿತಿದ್ದ. ಊಟಕ್ಕೆ ಕುಳಿತಾಗ ಅವನು, “ಪ್ರತಿ ಮನುಷ್ಯನೂ ಅವನಿಗೆ ಉಪಯೋಗಿಸಲು ತಿಳಿದಿರುವುದಕ್ಕಿಂತ ಹೆಚ್ಚಿನ ಕೌಶಲವನ್ನು ಹೊಂದಿರುತ್ತಾನೆ. ನನಗೆ ಇಷ್ಟು ಚೆನ್ನಾಗಿ ಅಡುಗೆ ಮಾಡಲು ಬರುತ್ತದೆ ಎಂದು ನನಗೇ ತಿಳಿದಿರಲಿಲ್ಲ,” ಎಂದು ಘೋಷಿಸಿದ.
“ಹೌದು, ಚೆನ್ನಾಗಿದೆ,” ಮಗಳು ಮರು ನುಡಿದಳು.
ಅವನು ಮಗಳತ್ತ ಕಣ್ಣು ಹಾಯಿಸುತ್ತ ಹೇಳಿದ, “ಅದೇ ತರಹ… ಬದುಕು ನಾವು ಕಲ್ಪಿಸಿಕೊಂಡಿರುವುದಕ್ಕಿಂತ ಹೆಚ್ಚಿನ ಸಂತೋಷವನ್ನು ಕೊಟ್ಟಿರುತ್ತದೆ. ಅದನ್ನು ಅನುಭವಿಸಲು ನಮ್ಮನ್ನು ನಾವು ತರಬೇತುಗೊಳಿಸಿಕೊಳ್ಳಬೇಕು.”
ಮಗಳು ಉತ್ತರಿಸುವುದಿಲ್ಲ. ಅವನ ಅಡುಗೆ ಕೌಶಲವನ್ನು ಅವಳು ಮೆಚ್ಚಿಕೊಂಡಿದ್ದರೂ ಅವಳು ತಿನ್ನುವುದು ಇಷ್ಟೇ ಇಷ್ಟು. ಅದೂ ತಿನ್ನಬೇಕು ಎನ್ನುವ ಕ್ರಿಯೆಯಂತೆ ಕಾಣಿಸುತ್ತಿತ್ತು. ಅವಳು ಈ ಬದುಕಿನಲ್ಲಿ ಯಾವುದರಲ್ಲಿಯೂ ಉತ್ಸುಕತೆ ತೋರಿಸುತ್ತಿಲ್ಲ ಎನ್ನುವುದು ಅವನಿಗೆ ಸದಾ ಕಾಲ ಕಾಡುತ್ತಿತ್ತು. ಖಂಡಿತವಾಗಿಯೂ ಅವಳಿಗೆ ಅವಳದ್ದೇ ಆದ ಕಾರಣಗಳಿವೆ – ಏಳು ವರ್ಷಗಳ ವೈವಾಹಿಕ ಜೀವನದ ನಂತರ ಈಗಷ್ಟೆ ವಿಚ್ಛೇದನ ಪಡೆದಿದ್ದಾಳೆ. ಅವನ ಹಳೆಯ ಅಳಿಯ ವಿಚ್ಛೇದನದ ನಂತರ ಶಾಶ್ವತವಾಗಿ ಬೀಜಿಂಗ್‌ಗೆ ಮರಳಿದ್ದ. ಯಾವ ಕಾರಣಕ್ಕಾಗಿ ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನುವುದು ಅವನಿಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅದಕ್ಕೆ ತನ್ನ ಮಗಳು ಮಾತ್ರ ಕಾರಣವಲ್ಲ ಎನ್ನುವುದು ಅವನ ನಂಬಿಕೆಯಾಗಿತ್ತು. ಅವಳು ಒಳ್ಳೆಯ ಹುಡುಗಿ, ಹೆಂಡತಿ. ಮೆಲುದನಿ, ಮೃದು ಮನಸ್ಸು, ಸುಂದರಿ, ಕರ್ತವ್ಯನಿಷ್ಠಳು, ಎಲ್ಲದರಲ್ಲಿಯೂ ಅವಳ ಅಮ್ಮನ ತದ್ರೂಪು. ಅವಳು ವಿಚ್ಛೇದನದ ವಿಷಯ ತಿಳಿಸಲು ಫೋನಾಯಿಸಿದಾಗ ಅವನು ಮಗಳನ್ನು ಅತೀವ ದುಃಖದಲ್ಲಿರುವಂತೆ ಕಲ್ಪಿಸಿಕೊಂಡಿದ್ದ. ಸಂತೈಸಲು ತನ್ನನ್ನು ಅಮೆರಿಕಕ್ಕೆ ಆಹ್ವಾನಿಸುತ್ತಾಳೆ ಎಂದುಕೊಂಡಿದ್ದ. ಆದರೆ, ಅವಳು ಅದನ್ನೆಲ್ಲ ನಿರಾಕರಿಸಿದ್ದಳು. ಅದಾದ ಮೇಲೆ ಅವನು ತನ್ನ ಒಂದು ತಿಂಗಳ ಪೆನ್ಶನ್ ಹಣವನ್ನೆಲ್ಲ ಮಗಳಿಗೆ ಪ್ರತಿದಿನ ಫೋನು ಮಾಡಲು ವ್ಯಯಿಸಿದ್ದ. ಕೊನೆಗೂ ಅವನು ತನ್ನ ಎಪ್ಪತ್ತೈದನೆಯ ಹುಟ್ಟು ಹಬ್ಬದ ಪ್ರಯುಕ್ತ ಅಮೆರಿಕ ನೋಡುವುದು ತನ್ನ ಬಯಕೆ, ತಾನು ಅದಕ್ಕಾಗಿ ಅಮೆರಿಕಕ್ಕೆ ಬರುತ್ತೇನೆ ಎಂದು ಘೋಷಿಸಿದಾಗ ಅವಳು ಒಪ್ಪಿಕೊಂಡಿದ್ದಳು. ಅವನು ಹೇಳುತ್ತಿರುವುದು ಸುಳ್ಳು ಎನ್ನುವುದು ಇಬ್ಬರಿಗೂ ತಿಳಿದಿತ್ತು. ಆದರೂ, ಒಂದು ಒಳ್ಳೆಯ ಕಾರಣಕ್ಕೆ ಸುಳ್ಳು ಹೇಳುವುದು ತಪ್ಪಲ್ಲ ಎನ್ನುವುದು ಅವನ ಭಾವನೆಯಾಗಿತ್ತು. ಒಟ್ಟಿನಲ್ಲಿ ಅವನು ಅಮೆರಿಕಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಅಮೆರಿಕ ನೋಡಬಹುದಾದ ಸುಂದರ ದೇಶ. ಅಲ್ಲದೇ ಈ ದೇಶ ಅವನನ್ನು ಮತ್ತೊಬ್ಬ ವ್ಯಕ್ತಿಯನ್ನಾಗಿ ಮಾಡಿತ್ತು – ಒಬ್ಬ ರಾಕೆಟ್ ಸೈಂಟಿಸ್ಟ್, ಮಗಳನ್ನು ಪ್ರೀತಿಸುವ ಅಪ್ಪ, ಚತುರ ಸಂಭಾಷಣೆಗಾರ ಎಲ್ಲಕ್ಕಿಂತ ಹೆಚ್ಚಾಗಿ ಸುಖಿ ಮನುಷ್ಯ.
ರಾತ್ರಿ ಊಟವಾದ ಮೇಲೆ ಮಗಳು ಒಂದೋ ರೂಮನ್ನು ಸೇರಿಕೊಂಡು ಏನಾದರು ಓದುತ್ತಿದ್ದಳು ಇಲ್ಲ ಕಾರನ್ನು ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗಿ ಅವನು ಮಲಗಿದ ಮೇಲೆ ಮರಳುತ್ತಿದ್ದಳು. ಅವಳು ಯಾವುದೋ ಸಿನಿಮಾ ನೋಡಲು ಒಬ್ಬಂಟಿಯಾಗಿ ಹೋಗುತ್ತಾಳೆ ಎಂದುಕೊಂಡು ಶಿ ಅವಳ ಬಳಿ ತಾನು ಬರುತ್ತೇನೆ ಎಂದಿದ್ದ. ಅವಳು ಅವನ ಕೋರಿಕೆಯನ್ನು ನಯವಾಗಿ, ಅಷ್ಟೇ ದೃಢವಾಗಿ ನಿರಾಕರಿಸಿದ್ದಳು. ಖಂಡಿತವಾಗಿಯೂ ಒಬ್ಬ ಮಹಿಳೆ ಅದರಲ್ಲೂ ಅವನ ಮಗಳ ಮಯಸ್ಸಿನ ಹುಡುಗಿ ಒಬ್ಬಂಟಿಯಾಗಿ ಜೀವನವನ್ನು ಕಳೆಯುವುದು ಒಳ್ಳೆಯದಲ್ಲ. ಅವನು ನಿಧಾನವಾಗಿ ಅವಳ ಬದುಕಿನ ವಿವರಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದ. ಅವಳ ಏಕಾಂತವನ್ನು ಮುರಿಯಲು ಸಹಾಯವಾಗಬಹುದು ಎಂದು ತಾನು ನೋಡಿರದ ಅವಳ ಬದುಕಿನ ಭಾಗವನ್ನು ಅರಿಯಲು ಅವಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದ.
“ಇವತ್ತು ಕೆಲಸ ಹೇಗಿತ್ತು?” ಅವನು ಕೇಳಿದರೆ “ಚೆನ್ನಾಗಿತ್ತು,” ಎಂದು ಅವಳು ಭಾರವಾಗಿ ಉತ್ತರಿಸುತ್ತಿದ್ದಳು. ಬೇಸರಿಸಿಕೊಳ್ಳದೆ ಅವನು ಅವನು ಅವಳ ಸಹೋದ್ಯೋಗಿಗಳ ಬಗ್ಗೆ ವಿಚಾರಿಸುತ್ತಿದ್ದ? ಗಂಡಸರು ಜಾಸ್ತಿ ಇದ್ದಾರೋ ಇಲ್ಲ ಹೆಂಗಸರೊ? ಅವರಿಗೆಲ್ಲ ಎಷ್ಟು ವರ್ಷ? ಮಕ್ಕಳಿದ್ದಾರೆಯೇ? ಆಫೀಸಿನಲ್ಲಿ ಅವಳು ಒಬ್ಬಳೇ ಊಟ ಮಾಡುತ್ತಾಳಾ? ಯಾವ ಕಂಪ್ಯೂಟರ್ ಉಪಯೋಗಿಸುತ್ತೀರಿ? ಯಾವ ಪುಸ್ತಕ ಓದುತ್ತಿದ್ದೀಯ? ಅವನು ಅವಳ ಬಾಲ್ಯದ ಸ್ನೇಹಿತರ ಬಗ್ಗೆ ವಿಚಾರಿಸುತ್ತಿದ್ದ. ಅವಳು ವಿಚ್ಛೇದನದ ಅವಮಾನದಿಂದ ದೂರವಾಗಿದ್ದಾಳೆ ಎಂದು ಅವನು ಭಾವಿಸಿದ್ದ ಅವಳ ಹಳೆಯ ಸ್ನೇಹಿತರ ಬಗ್ಗೆ ಕೇಳುತ್ತಿದ್ದ. ಅವಳ ಮುಂದಿನ ಜೀವನದ ಬಗ್ಗೆ ಕೇಳುತ್ತಿದ್ದ. ವಯಸ್ಸು ಹೆಚ್ಚಾದಂತೆ ಹುಡುಗಿಯರು ಮರದಿಂದ ಕಿತ್ತಿಟ್ಟ ಹಣ್ಣಿನಂತೆ – ದಿನಗಳೆದಂತೆ ಯಾರೂ ಅವರನ್ನು ಬಯಸುವುದಿಲ್ಲ ಎನ್ನುವುದನ್ನು ಅವಳಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುತ್ತಿದ್ದ. ಕೆಲವೇ ದಿನಗಳಲ್ಲಿ ಬೆಲೆ ಕಳೆದುಕೊಂಡ ಹಣ್ಣುಗಳನ್ನು ಯಾವುದೋ ಒಂದು ಕಡೆ ಸಿಕ್ಕಷ್ಟು ಬೆಲೆ ಮಾರಲಾಗುತ್ತದೆ.

ಶಿ ಈ ಮಾರಾಟದ ಬೆಲೆಯ ಬಗ್ಗೆ ಪ್ರಸ್ತಾಪಿಸದಿದ್ದರೂ ಕೆಲವೊಮ್ಮೆ ಜೀವನದ ಫಲಪ್ರದತೆಯ ಬಗ್ಗೆ, ಗುರಿಯ ಬಗ್ಗೆ ಆಗಾಗ ಉಪದೇಶ ಕೊಡುತ್ತಿದ್ದ. ಅವನು ಹೆಚ್ಚು ಹೆಚ್ಚು ಮಾತನಾಡಿದಷ್ಟೂ ತನ್ನ ತಾಳ್ಮೆಯ ಬಗ್ಗೆ ತಾನೇ ಅಚ್ಚರಿಗೊಳ್ಳುತ್ತಿದ್ದ. ಮಗಳು ಬದಲಾಗಲಿಲ್ಲ. ಇನ್ನೂ ಕಡಿಮೆ ತಿನ್ನುತ್ತಿದ್ದಳು. ಮತ್ತಷ್ಟು ಮೌನಿಯಾಗುತ್ತಿದ್ದಳು. ಕೊನೆಗೊಮ್ಮೆ ಅವನು ಅವಳು ಜೀವನವನ್ನು ಖುಷಿಯಿಂದ ಅನುಭವಿಸುತ್ತಿಲ್ಲ ಎಂದು ಬಾಯಿಬಿಟ್ಟು ಹೇಳಿದಾಗ ಅವಳು ಅವನನ್ನು ಮರು ಪ್ರಶ್ನಿಸಿದಳು, “ನಾನು ಖುಷಿಯಾಗಿಲ್ಲ ಎಂದು ನೀನು ಹೇಗೆ ತೀರ್ಮಾನಿಸಿದೆ? ನನ್ನ ಜೀವನವನ್ನು ನಾನು ಖುಷಿಯಿಂದ ಅನುಭವಿಸುತ್ತಿದ್ದೇನೆ.”
“ಅದು ಸುಳ್ಳು. ಖುಷಿಯಾಗಿರುವ ಮನುಷ್ಯ ಇಷ್ಟು ಮೌನವಾಗಿರಲು ಸಾಧ್ಯವಿಲ್ಲ.”
ಅವಳು ಊಟದ ಪ್ಲೇಟಿನಿಂದ ಕತ್ತೆತ್ತಿ ಅವನನ್ನು ಒಂದು ಕ್ಷಣ ದಿಟ್ಟಿಸಿದಳು. “ಅಪ್ಪಾ, ಮೊದಲೆಲ್ಲ ನೀನು ಸಹ ಹೀಗೆ ಮೌನವಾಗಿರುತ್ತಿದ್ದೆ. ನೆನಪಿದೆಯೇ? ಆಗ ನೀನು ದುಃಖಿಯಾಗಿದ್ದೆಯ?”
ಶಿ ತನ್ನ ಮಗಳು ತನ್ನನ್ನು ಹೀಗೆ ನೇರವಾಗಿ ಪ್ರಶ್ನಿಸುತ್ತಾಳೆ ಎಂದುಕೊಂಡಿರಲಿಲ್ಲ. ಒಂದು ಕ್ಷಣ ಅವನು ಅವಕ್ಕಾದ. ಒಳ್ಳೆಯ ನಡವಳಿಕೆಯುಳ್ಳವರು ಮಾಡುವಂತೆ ಮಾತಿನಲ್ಲಾದ ತಪ್ಪಿನರಿವಾಗಿ ತನ್ನ ಮಾತಿಗೆ ಕ್ಷಮೆ ಕೇಳಿ ಅವಳು ವಿಷಯವನ್ನು ಬದಲಿಸುತ್ತಾಳೆ ಎಂದು ಅವನು ಕಾದ. ಅವಳು ಹಾಗೆ ಮಾಡಲಿಲ್ಲ. ಕನ್ನಡಕದ ಹಿಂದಿನಿಂದ ಅವನನ್ನು ತೀಕ್ಷ್ಣವಾಗಿ ನೋಡುತ್ತಿದ್ದ ಅವಳ ಅಗಲ ಕಣ್ಣುಗಳು ಅವನಿಗೆ ಅವಳ ಬಾಲ್ಯದ ದಿನಗಳನ್ನು ನೆನಪಿಗೆ ತಂದವು. ಅವಳು ಐದು ಆರು ವರ್ಷದವಳಾಗಿದ್ದಾಗ ಅವನನ್ನು ಸದಾ ಕಾಲ ಪ್ರಶ್ನೆ ಕೇಳುತ್ತ ಉತ್ತರಕ್ಕಾಗಿ ಪೀಡಿಸುತ್ತಿದ್ದಳು. ಅವಳ ಕಣ್ಣುಗಳು ಅವಳಮ್ಮನನ್ನು ನೆನಪಿಸುತ್ತಿದ್ದವು. ಅವಳ ಅಮ್ಮನ ಕಣ್ಣುಗಳಲ್ಲಿ ಉತ್ತರಕ್ಕಾಗಿ ಕಾದು ಕುಳಿತಿರುವ ಪ್ರಶ್ನೆಗಳಿದ್ದವು. ಅವನ ಬಳಿ ಉತ್ತರಗಳಿರಲಿಲ್ಲ.
ಅವನು ನಿಟ್ಟುಸಿರು ಬಿಟ್ಟ. “ಖಂಡಿತವಾಗಿಯೂ ನಾನು ಖುಷಿಯಾಗಿದ್ದೆ.”
“ಆಯಿತಲ್ಲ. ಮೌನವಾಗಿದ್ದರೂ ಜನ ಖುಷಿಯಾಗಿರುತ್ತಾರೆ. ಅಲ್ಲವೇ?”
“ನಿನ್ನ ಬದುಕಿನ ಬಗ್ಗೆ ನನ್ನ ಜೊತೆಗೆ ಮಾತನಾಡು ಮಗಳೇ. ನಿನ್ನ ಕೆಲಸದ ಬಗ್ಗೆಯಾದರೂ ಹೇಳು,” ಶಿ ದೈನ್ಯದಿಂದ ಕೇಳಿದ.
“ನೀನು ನಿನ್ನ ಕೆಲಸದ ಬಗ್ಗೆ ಯಾವತ್ತೂ ಮಾತನಾಡುತ್ತಿರಲಿಲ್ಲ. ನೆನಪಿದೆಯ? ನಾನು ಕೇಳಿದಾಗಲೂ ಉತ್ತರಿಸುತ್ತಿರಲಿಲ್ಲ.”
“ನಾನೊಬ್ಬ ರಾಕೆಟ್ ಸೈಂಟಿಸ್ಟ್. ನಮ್ಮ ಕೆಲಸದಲ್ಲಿ ಗೌಪ್ಯತೆ ಅತ್ಯಗತ್ಯ.”
“ನೀನು ಯಾವುದರ ಬಗ್ಗೆಯೂ ಮಾತನಾಡುತ್ತಿರಲಿಲ್ಲ,” ಮಗಳು ಮರು ನುಡಿದಳು.
ಶಿ ಏನೋ ಹೇಳಲು ಬಾಯಿ ತೆರೆದ. ಶಬ್ದಗಳು ಹೊರಬರಲಿಲ್ಲ. ಒಂದು ಸುಧೀರ್ಘ ಮೌನದ ನಂತರ ಅವನು ನುಡಿದ, “ನಾನು ಈಗ ಮಾತನಾಡುತ್ತಿದ್ದೇನೆ. ನಾನು ತಿದ್ದಿಕೊಳ್ಳುತ್ತಿದ್ದೇನೆ. ಅಲ್ಲವೇ?”
“ನಿಜ.” ಮಗಳು ನುಡಿದಳು.
“ಅದನ್ನೇ ನೀನು ಮಾಡಬೇಕಾಗಿರುವುದು. ದಯವಿಟ್ಟು ಮಾತನಾಡು. ಈಗಲೇ ಪ್ರಾರಂಭಿಸು,” ಶಿ ಹೇಳಿದ.
ಮಗಳು ಉತ್ತರಿಸಲಿಲ್ಲ. ಮೌನವಾಗಿ ಊಟವನ್ನು ಮುಗಿಸಿ ಕೈ ತೊಳೆದು ಅವನು ಊಟವನ್ನು ಮುಗಿಸುವ ಮೊದಲೇ ಕಾರಿನ ಕೀ ತೆಗೆದುಕೊಂಡು ಹೊರಕ್ಕೆ ನಡೆದಳು.
ಮಾರನೆಯ ದಿನ ಬೆಳಗ್ಗೆ ಪಾರ್ಕಿನಲ್ಲಿ ಕುಳಿತಿದ್ದಾಗ ಶಿ ಮ್ಯಾಡಮ್‌ಗೆ ಹೇಳಿದ,
“ಮಗಳು. ಅವಳು ಸಂತೋಷವಾಗಿಲ್ಲ.”
“ಮಗಳಿದ್ದರೆ ಅದೇ ಒಂಥರ ಸಂತೋಷ.”
“ಅವಳು ವಿಚ್ಛೇದನ ತೆಗೆದುಕೊಂಡಿದ್ದಾಳೆ,” ಮ್ಯಾಡಮ್.
ಮ್ಯಾಡಮ್ ತಲೆಯಾಡಿಸುತ್ತಾ ಪರ್ಷಿಯನ್‌ನಲ್ಲಿ ಏನೋ ಹೇಳಲು ಪ್ರಾರಂಭಿಸಿದಳು. ಮ್ಯಾಡಮ್‌ಗೆ ವಿಚ್ಛೇದನ ಎಂದರೆ ಗೊತ್ತಿದೆಯೇ ಎನ್ನುವುದು ಶಿ ಗೆ ಖಚಿತವಾಗಲಿಲ್ಲ. ಜಗತ್ತಿನೊಟ್ಟಿಗೆ ಇಷ್ಟು ಸಂತೋಷದಿಂದ ಬದುಕುತ್ತಿರುವ ಮ್ಯಾಡಮ್‌ಳನ್ನು ಬದುಕಿನ ವಿಷಾದಗಳಿಂದ ಅವಳ ಗಂಡನೋ, ಮಗನೋ ಯಾರೋ ಒಬ್ಬರು ರಕ್ಷಿಸಿಕೊಳ್ಳುತ್ತಿರಬೇಕು. ಮಾತನಾಡುತ್ತ, ನಗುತ್ತ ಬದುಕಿನ ಪ್ರತಿ ಕ್ಷಣವನ್ನು ಉತ್ಕಟ ಆನಂದದಿಂದ ಅನುಭವಿಸುತ್ತ ಕೆಂಪಾಗಿರುವ ಮ್ಯಾಡಮ್‌ಳ ಮುಖವನ್ನು ದಿಟ್ಟಿಸಿದ. ಅವಳಿಗಿಂತ ಹೆಚ್ಚು ಕಡಿಮೆ ನಲವತ್ತು ವರ್ಷಕ್ಕೆ ಕಿರಿಯವಳಾದ ತನ್ನ ಮಗಳಲ್ಲಿ ಈ ಉತ್ಸುಕತೆಯಿಲ್ಲ ಎನ್ನುವ ನೋವು ಕ್ಷಣ ಕಾಲ ಕಾಡಿದಂತಾಯಿತು. ಮ್ಯಾಡಮ್ ಧರಿಸಿದ್ದ ದಟ್ಟ ಕಿತ್ತಳೆ ಬಣ್ಣದ ಉಡುಪಿನಲ್ಲಿದ್ದ ನೇರಳೆ ಬಣ್ಣದ ಚಿಕ್ಕ ಚಿಕ್ಕ ಮಂಗಗಳು ಖುಷಿಯಲ್ಲಿ ಜಿಗಿದಾಡುತ್ತಿದ್ದವು. ತಲೆಯ ಮೇಲೆ ಅದೇ ಬಣ್ಣದ ಸ್ಕಾರ್ಫ್ ಕಟ್ಟಿಕೊಂಡಿದ್ದಳು. ಹುಟ್ಟಿದೂರಿನಿಂದ ಸ್ಥಾನಪಲ್ಲಟಗೊಂಡಿರುವ ಹೆಂಗಸು. ಸಂದೇಹವೇ ಇಲ್ಲ ಇದು ಸಂತೋಷದಿಂದಾದ ಸ್ಥಾನಪಲ್ಲಟ. ಶಿ ತನಗೆ ಇರಾನ್‌ನ ಇತ್ತೀಚಿನ ವಿದ್ಯಮಾನವಾಗಲಿ ಅಥವಾ ಅದರ ಇತಿಹಾಸವಾಗಲಿ ಏನಾದರು ಗೊತ್ತಿದೆಯೇ ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಯಾವುದೂ ಜ್ಞಾಪಕಕ್ಕೆ ಬರಲಿಲ್ಲ. ಕೊನೆಗೆ ಮ್ಯಾಡಮ್ ಒಬ್ಬಳು ಅದೃಷ್ಟವಂತ ಮಹಿಳೆ ಎಂದು ನಿರ್ಧರಿಸಿದ. ಹಾಗೆ ನೋಡಿದರೆ ಬದುಕಿನ ಸಣ್ಣ ಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ ತಾನೂ ಸಹ ಅದೃಷ್ಟಶಾಲಿಯೇ. ಮ್ಯಾಡಮ್ ಮತ್ತು ತಾನು ಪ್ರಪಂಚದ ಬೇರೆ ಬೇರೆ ಪ್ರದೇಶದ ಬೇರೆಯದೇ ಆದ ಭಾಷೆಯ ತಮ್ಮದೇ ಆದ ವಿಭಿನ್ನ ಸಂಸ್ಕೃತಿಯವರು ಇಲ್ಲಿ ಹೀಗೆ ಬೆಳಗಿನ ಹಿತವಾದ ಬಿಸಿಲನಲ್ಲಿ ಕುಳಿತು ಹರಟುತ್ತಿದ್ದೇವೆ. ಎಂತಹ ಅದ್ಭುತ.
ಮ್ಯಾಡಮ್ ಮಾತು ನಿಲ್ಲಿಸಿದಾಗ ಶಿ ಸಾವಕಾಶವಾಗಿ ನುಡಿದ, ನಮ್ಮ ಚೀನಾದಲ್ಲಿ ಒಂದು ಮಾತಿದೆ ‘ಕ್ಸು ಬಾಯ್ ಶಿ ಜ್ಹೆ ತೊಂಗ್ ಜ್ಹೌ’ ಅಂದರೆ ಒಂದು ದೋಣಿಯಲ್ಲಿ ಜೊತೆಯಾಗಿ ಕುಳಿತು ನದಿಯನ್ನು ದಾಟುವ ಅವಕಾಶ ಸಿಗಬೇಕಾದರೆ ಮುನ್ನೂರು ವರ್ಷಗಳಷ್ಟು ಕಾಲ ನಿರ್ಮಲವಾಗಿ ಪ್ರಾರ್ಥಿಸಿರಬೇಕಂತೆ. ಅವನು ಅದನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿ ವಿವರಿಸಬೇಕು ಎಂದು ಯೋಚಿಸಿದ. ನಿಜಕ್ಕೂ ಭಾವನೆಗಳಿಗೆ ಭಾಷೆಗಳ ವ್ಯತ್ಯಾಸವಿದೆಯೇ? ತಾನು ಭಾಷಾಂತರಿಸಿದರೂ, ಭಾಷಾಂತರಿಸದಿದ್ದರೂ ಮ್ಯಾಡಮ್ ತನ್ನನ್ನು ಅರ್ಥೈಸಿಕೊಳ್ಳಬಲ್ಲಳು. “ಬಹುಶಃ ನಾವು ಹೀಗೆ ಇಲ್ಲಿ ಭೇಟಿಯಾಗಿ ಕುಳಿತು ಹರಟುತ್ತಿದ್ದೇವೆ ಎಂದರೆ ಇದರ ಹಿಂದೆ ಅದೆಷ್ಟು ವರ್ಷಗಳ ಸುಧೀರ್ಘ ಪ್ರಾರ್ಥನೆಯಿರಬಹುದು,” ಅವನು ಚೈನೀಸ್‌ನಲ್ಲಿ ನುಡಿದ.
ಮ್ಯಾಡಮ್ ನಸುನಗುತ್ತ ಅವನು ಹೇಳಿದ್ದಕ್ಕೆ ಸಹಮತ ವ್ಯಕ್ತಡಿಸುವಂತೆ ತಲೆಯಾಡಿಸಿದಳು.
“ಪ್ರತಿಯೊಂದು ಸಂಬಂಧದ ಹಿಂದೆ ಅದರದ್ದೇ ಕಾರಣಗಳಿವೆ ಎನ್ನುವುದು ಆ ಮಾತಿನ ಅರ್ಥ. ಗಂಡ-ಹೆಂಡತಿ, ತಂದೆ-ತಾಯಿ, ಮಕ್ಕಳು, ಮಿತ್ರರು-ಶತ್ರುಗಳು, ಹಾದಿಯಲ್ಲಿ ಅಚಾನಕ್ಕಾಗಿ ಮಾತನಾಡಿಸುವ ಯಾರೋ ಅಪರಿಚಿತರು… ನಾವು ಅಗಾಧವಾಗಿ ಪ್ರೀತಿಸುವವರೊಟ್ಟಿಗೆ ದಿಂಬಿನಲ್ಲಿ ತಲೆಯಿಟ್ಟು ಪರಸ್ಪರರ ತಲೆಗೆ ತಲೆ ತಾಕಿಸಿ ದಿವ್ಯಮೌನದಲ್ಲಿ ಮಲಗಬೇಕಾದರೆ ಮೂರು ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆಯ ಅಗತ್ಯವಿದೆ. ಅಪ್ಪ ಮತ್ತು ಮಗಳು? ಬಹುಶಃ ಒಂದು ಸಾವಿರ ವರ್ಷಗಳಷ್ಟಿರಬಹುದೇ? ಒಂದು ಮಾತು ಸತ್ಯ: ಗೊತ್ತು ಗುರಿಯಿಲ್ಲದ ಯಾರೋ ಇಬ್ಬರು ಅಪ್ಪ ಮಗಳಾಗುವುದಿಲ್ಲ. ನನ್ನ ಮಗಳಿಗೆ ಇದು ಅರ್ಥವಾಗುತ್ತಿಲ್ಲ. ಅವಳಿಗೆ ನಾನೊಬ್ಬ ಕಿರಿಕಿರಿ ಉಂಟುಮಾಡುವವ. ಅವಳಿಗೆ ನಾನು ಮೌನವಾಗಿದ್ದರೆನೇ ಸರಿ. ಯಾಕೆಂದರೆ ನಾನು ಯಾವತ್ತೂ ಇದ್ದುದು ಹಾಗೆ ಅಲ್ಲವೇ? ನಾನು ಅವಳೊಟ್ಟಿಗೆ, ಅವಳ ಅಮ್ಮನೊಟ್ಟಿಗೆ ಮಾತನಾಡುತ್ತಿರಲಿಲ್ಲ. ಯಾಕೆಂದರೆ ನಾನೊಬ್ಬ ರಾಕೆಟ್ ಸೈಂಟಿಸ್ಟ್ ಆಗಿದ್ದೆ. ಅವಳಿಗೆ ಅದು ಅರ್ಥವಾಗುತ್ತಿಲ್ಲ. ನನ್ನ ಕೆಲಸದಲ್ಲಿ ಪ್ರತಿಯೊಂದು ಗೌಪ್ಯ. ನಾವು ದಿನ ಪೂರ್ತಿ ಕೆಲಸ ಮಾಡುತ್ತಿದ್ದೆವು. ಸಂಜೆ ಮನೆಗೆ ಹೊರಡುವಾಗ ಸೆಕ್ಯೂರಿಟಿ ಗಾರ್ಡಗಳು ಬಂದು ನಮ್ಮ ಪುಸ್ತಕ, ಪೆನ್ನು ಕೊನೆಗೆ ಯಾವುದೋ ಸಣ್ಣ ಚಿಂದಿ ಚೀಟಿಯನ್ನೂ ತೆಗೆದಿರಿಸುತ್ತಿದ್ದರು. ನಾವು ಹಳೆಯ ಪುಸ್ತಕವೊಂದರಲ್ಲಿ ಸಹಿ ಮಾಡಿ ಬರುತ್ತಿದ್ದೆವು. ನಮ್ಮ ಕುಟುಂಬದವರೊಟ್ಟಿಗೆ ನಮ್ಮ ಕೆಲಸದ ಬಗ್ಗೆ ಮಾತನಾಡುವುದು ನಿಷಿದ್ಧವಾಗಿತ್ತು. ಮಾತನಾಡದಿರುವಂತೆ ನಮ್ಮನ್ನು ತರಬೇತುಗೊಳಿಸಿದ್ದರು.
ಮ್ಯಾಡಮ್ ಕೈಕಟ್ಟಿಕೊಂಡು ಕೇಳಿಸಿಕೊಳ್ಳುತ್ತಿದ್ದಳು. ತನ್ನ ಹೆಂಡತಿ ತೀರಿ ಹೋದಾಗಲಿನಿಂದ ಶಿ ತನ್ನದೇ ವಯಸ್ಸಿನ ಇನ್ನೊಬ್ಬ ಮಹಿಳೆಯ ಸಾಮೀಪ್ಯದಲ್ಲಿ ಇಷ್ಟು ಹತ್ತಿರಕ್ಕೆ ಯಾವತ್ತೂ ಕುಳಿತಿರಲಿಲ್ಲ. ಅವಳು ಬದುಕಿದ್ದಾಗಲೂ ಅವನು ಅವಳೊಟ್ಟಿಗೆ ಯಾವತ್ತೂ ಇಷ್ಟು ಮಾತನಾಡಿರಲಿಲ್ಲ. ಅವನ ಕಣ್ಣುಗಳು ಮಂಜಾದವು. ಇಷ್ಟು ವರ್ಷಗಳ ಕಾಲ ಬಲವಂತವಾಗಿ ಬಚ್ಚಿಟ್ಟಿದ್ದ ಶಬ್ದಗಳನ್ನು ಮಾತುಗಳನ್ನಾಗಿಸಿ ಹೊರಹಾಕಲು ಅವನು ಪ್ರಪಂಚದ ಆ ಮೂಲೆಯಿಂದ ಇಲ್ಲಿಗೆ ಬಂದಿದ್ದ. ಮಗಳಿಗೆ ಅವನ ಮಾತುಗಳಲ್ಲಿ ಆಸಕ್ತಿಯಿರಲಿಲ್ಲ. ಮ್ಯಾಡಮ್, ಅವನಾಡುವ ಭಾಷೆ ಗೊತ್ತಿಲ್ಲದ ಈ ಮ್ಯಾಡಮ್ ಅವನ ಮಾತುಗಳನ್ನು, ಅವನನ್ನು ಅರ್ಥೈಸಿಕೊಳ್ಳುವಂತೆ ಕೇಳುತ್ತಿದ್ದಳು.
ಶಿ ತನ್ನ ಕಣ್ಣುಗಳನ್ನು ಉಜ್ಜಿಕೊಂಡ. ಈ ವಯಸ್ಸಿನಲ್ಲಿ ಇಂತಹ ಭಾವನೆಗಳಿಗೆ ಬಲಿಯಾಗಬಾರದು. ಅವನು ದೀರ್ಘವಾಗಿ ಉಸಿರೆಳೆದುಕೊಂಡ. ಅರ್ಥಹೀನವಾಗಿ ನಸುನಕ್ಕ. “ಪ್ರತಿಯೊಂದಕ್ಕೂ ಅದರದ್ದೇ ಆದ ಕಾರಣಗಳಿವೆ. ಬಲಹೀನ ಸಂಬಂಧಗಳಿಗೂ ಸಹ. ಬಹುಶಃ ನಾನು ಹೃದಯಪೂರ್ವಕವಾಗಿ ಒಂದು ಸಾವಿರ ವರ್ಷ ಮಗಳಿಗೋಸ್ಕರ ಪ್ರಾರ್ಥಿಸಿಲ್ಲವೇನೋ?”

ಮ್ಯಾಡಮ್ ಗಂಭೀರವಾಗಿ ತಲೆಯಾಡಿಸಿದಳು. ಅವಳಿಗೆ ತಾನು ಹೇಳುತ್ತಿರುವುದು ಅರ್ಥವಾಗುತ್ತಿದೆ ಎನ್ನುವುದು ಅವನಿಗೆ ತಿಳಿದಿತ್ತು. ತನ್ನ ವಿಷಾದಗಳನ್ನು ಅವಳ ಸುಖಿ ಬದುಕಿನ ಮೇಲೆ ಹೇರಲು ಅವನು ಇಷ್ಟಪಡಲಿಲ್ಲ. ಅವನು ಹಳೆಯ ನೆನಪಿನ ಧೂಳುಗಳನ್ನು ಕೊಡವುವಂತೆ ಕೈಗಳೆರಡನ್ನೂ ಉಜ್ಜಿಕೊಂಡ. ‘ಪ್ರಾಚೀನ ನೆನಪುಗಳು’ ಅವನು ತನಗೆ ತಿಳಿದ ಇಂಗ್ಲಿಷಿನಲ್ಲಿ ಹೇಳಲು ಪ್ರಯತ್ನಿಸಿದ, “ಈ ಹಳೆಯ ನೆನಪುಗಳು ಖುಷಿ ಕೊಡುವುದಿಲ್ಲ.”
“ನನಗೆ ಕತೆಗಳೆಂದರೆ ಇಷ್ಟ,” ಮ್ಯಾಡಮ್ ಹೇಳಿ ಮಾತನಾಡಲು ಪ್ರಾರಂಭಿಸಿದಳು. ಶಿ ಕೇಳತೊಡಗಿದ. ಅವಳು ಮಧ್ಯೆ ಮಧ್ಯೆ ನಗುತ್ತಿದ್ದಳು. ಶಿ ಅವಳ ಉಡುಪಿನ ಮೇಲಿದ್ದ ಕೋತಿಗಳನ್ನು ದಿಟ್ಟಿಸಿದ. ಅವಳು ನಕ್ಕಾಗಲೆಲ್ಲ ಆ ಕೋತಿಗಳು ಮೇಲಕ್ಕೆ ಕೆಳಕ್ಕೆ ಓಲಾಡುತ್ತಿದ್ದವು.
ಅವಳು ಮಾತು ಮುಗಿಸಿದಾಗ ಅವನು ನುಡಿದ, “ನಾವು ಅದೃಷ್ಟವಂತರು. ಅಮೆರಿಕದಲ್ಲಿ ನಾವು ಏನು ಬೇಕಾದರೂ ಮಾತನಾಡಬಹುದು.”
“ಅಮೆರಿಕ ಒಳ್ಳೇ ದೇಶ,” ಮ್ಯಾಡಮ್ ತಲೆಯಾಡಿಸಿದಳು “ಐ ಲವ್ ಅಮೆರಿಕ.”
ಅವತ್ತು ಸಂಜೆ ಶಿ ಮಗಳಿಗೆ ಅವನು ಪಾರ್ಕಿನಲ್ಲಿ ಇರಾನಿ ಮಹಿಳೆಯನ್ನು ಭೇಟಿಯಾಗಿರುವುದನ್ನು ಹೇಳಿದ. “ನೀನು ಅವಳನ್ನು ಯಾವತ್ತಾದರೂ ಭೇಟಿಯಾಗಿದ್ದೀಯ?”
“ಇಲ್ಲ.”
“ನೀನು ಅವಳನ್ನು ಒಮ್ಮೆ ಭೇಟಿಯಾಗಬೇಕು. ಅವಳು ಎಷ್ಟು ಆಶಾವಾದಿ ಗೊತ್ತೇ? ಬಹುಶಃ ನಿನ್ನ ಈ ಪರಿಸ್ಥಿತಿಯಿಂದ ಹೊರಬರಲು ಅವಳು ಪ್ರೇರಣೆಯಾಗಬಹುದು.”
“ಯಾವ ಪರಿಸ್ಥಿತಿ?” ಮಗಳು ಊಟದ ತಟ್ಟೆಯಿಂದ ತಲೆಯೆತ್ತದೆ ಪ್ರಶ್ನಿಸಿದಳು.
“ನಿನಗೆ ಗೊತ್ತಲ್ಲ,” ಮಗಳು ಸಂಭಾಷಣೆ ಮುಂದುವರಿಸುವ ಲಕ್ಷಣ ತೋರದಿದ್ದಾಗ ತಾನೇ ಹೇಳಿದ, “ನಿನ್ನ ಬದುಕಿನ ಕತ್ತಲಿನ ದಿನಗಳಿವು ಅಲ್ಲವೇ?”
“ಅವಳು ನನಗೆ ಪ್ರೇರಣೆಯಾಗುತ್ತಾಳೆ ಎಂದು ನಿನಗೆ ಹೇಗೆ ಗೊತ್ತು?”
ಶಿ ಉತ್ತರಿಸಲು ಬಾಯಿ ತೆರೆದ. ಹೇಳುವುದು ಏನೆಂದು ತಿಳಿಯಲಿಲ್ಲ. ತಾನು ಮತ್ತು ಮ್ಯಾಡಮ್ ಇಬ್ಬರೂ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತೇವೆ ಎಂಬುದನ್ನು ಬಹಿರಂಗ ಪಡಿಸಿದರೆ ಮಗಳು ತಮ್ಮಿಬ್ಬರದು ಹುಚ್ಚಾಟ ಎಂದು ಭಾವಿಸಿದರೆ ಎಂದು ಅವನಿಗೆ ಅಂಜಿಕೆಯಾಯಿತು. ಒಂದು ಸಮಯದಲ್ಲಿ ಅರ್ಥವತ್ತಾಗಿ ಕಾಣಿಸವುದು ಮತ್ತೊಂದು ಸಮಯದಲ್ಲಿ ಅರ್ಥಹೀನವಾಗಿರುತ್ತದೆ ಅನಿಸಿತು. ತನ್ನ ಭಾಷೆಯನ್ನೇ ಮಾತನಾಡುವ ತನ್ನದೇ ಮಗಳೊಟ್ಟಿಗೆ ತಾನು ಒಂದೇ ಒಂದು ಅರ್ಥವತ್ತಾದ ಮಾತುಕತೆಯಲ್ಲಿ ತೊಡಗುವಾದಾಗಲಿ, ಒಂದು ಸುಂದರ ಕ್ಷಣವನ್ನು ಕಳೆಯುವುದಾಗಲಿ ಅಸಾಧ್ಯವೆನಿಸಿ ವಿಷಾದದ ಛಾಯೆಯೊಂದು ಹಾದು ಹೋದಂತಾಯಿತು. ಒಂದು ಸುಧೀರ್ಘ ಮೌನದ ನಂತರ ಅವನು ಮತ್ತೆ ನುಡಿದ, “ನೋಡು ಒಬ್ಬಳು ಹುಡುಗಿಯಾಗಿ ನೀನು ಕಟುವಾಗಿ ಮಾತನಾಡಬಾರದು. ಒಬ್ಬ ಒಳ್ಳೆಯ ಮಹಿಳೆ ಯಾವಾಗಲೂ ಗೌರವಾನ್ವಿತಳು, ಜನರನ್ನು ಹೇಗೆ ಮಾತನಾಡಿಸಬೇಕು ಎಂದು ಅರಿತವಳು.”
“ನಾನು ವಿಚ್ಛೇದಿತೆ. ಹೇಗಿದ್ದರೂ ನಿನ್ನ ಅಳತೆಗೋಲಿನ ಪ್ರಕಾರ ಒಳ್ಳೆಯವಳೂ ಅಲ್ಲ ಗೌರವಾನ್ವಿತಳೂ ಅಲ್ಲ.”
ಶಿ ಮಗಳು ಉದ್ದೇಶಪೂರ್ವಕವಾಗಿ ವ್ಯಂಗ್ಯದ ಮಾತನಾಡುತ್ತಿದ್ದಾಳೆ ಎಂದು ಅವಳ ಮಾತುಗಳನ್ನು ನಿರ್ಲಕ್ಷಿಸಿದ. “ನಿನ್ನ ಅಮ್ಮ ಅತ್ಯುತ್ತಮ ಹೆಂಗಸಾಗಿದ್ದಳು.”
“ಅವಳಿಗೆ ನಿನ್ನನ್ನು ಮಾತನಾಡಿಸಲು ಸಾಧ್ಯವಾಯಿತೇ?” ಅವಳು ಶಿಯ ಕಣ್ಣಿನಲ್ಲಿ ಕಣ್ಣು ನೆಟ್ಟು ಕೇಳಿದಳು. ಮಗಳ ದೃಷ್ಟಿ ಹಿಂದೆಂದಿಗಿಂತ ಹರಿತವಾಗಿದೆ ಅನಿಸಿತು.
“ನಿನ್ನಮ್ಮ ಯಾವತ್ತೂ ಹೀಗೆ ವಾದ ಮಾಡುತ್ತಿರಲಿಲ್ಲ.”
“ಬಾಬಾ, ಮೊದಲು ನಾನು ಮಾತನಾಡುತ್ತಿಲ್ಲ ಎಂದು ದೂರುತ್ತಿದ್ದೆ. ಈಗ ಮಾತನಾಡಿದರೆ ವಾದ ಮಾಡುತ್ತೇನೆ ಎನ್ನುತ್ತೀಯ ಅಥವಾ ನಾನು ಸರಿಯಾಗಿ ಮಾತನಾಡುತ್ತಿಲ್ಲ ಎನ್ನುತ್ತೀಯ.”
“ಮಾತುಕತೆ ಎಂದರೆ ಪ್ರಶ್ನೆಗಳನ್ನು ಮಾತ್ರ ಕೇಳುವುದಲ್ಲ. ಮಾತುಕತೆಯೆಂದರೆ ಎದುರಿನವರೊಟ್ಟಿಗೆ ನಿನ್ನ ಭಾವನೆಗಳನ್ನು ಹಂಚಿಕೊಳ್ಳುವುದು, ಅವರ ಭಾವನೆಗಳನ್ನು ಹಂಚಿಕೊಳ್ಳಲು ಆಹ್ವಾನಿಸುವುದು.”
“ಬಾಬಾ, ನೀನು ಥೆರಪಿಸ್ಟ್ ಆಗಿದ್ದು ಯಾವಾಗ?”
“ನಾನು ಇಲ್ಲಿಗೆ ಬಂದಿದ್ದು ನಿನಗೆ ಸಹಾಯ ಮಾಡಲು. ನನ್ನ ಕೈಯಿಂದ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ,” ಶಿ ಹೇಳಿದ, “ನಿನ್ನ ವಿಚ್ಛೇದನದ ಹಿಂದಿನ ಕಾರಣಗಳನ್ನು ನಾನು ತಿಳಿಯಬೇಕು. ಯಾವ ತಪ್ಪಿನಿಂದ ಹೀಗಾಯಿತು ಎಂದು ನನಗೆ ಅರಿವಾದರೆ ಮುಂದೆ ನೀನು ಒಬ್ಬ ಯೋಗ್ಯ ವ್ಯಕ್ತಿಯನ್ನು ಹುಡುಕಲು ನಾನು ಸಹಾಯ ಮಾಡಬಹುದು. ನೀನು ನನ್ನ ಮಗಳು, ನೀನು ಸಂತೋಷದಿಂದ ಇರುವುದು ನನಗೆ ಮುಖ್ಯ. ನೀನು ಮತ್ತೆ ಬದುಕಿನಲ್ಲಿ ಎಡವುದನ್ನು ನೋಡಲು ನನಗೆ ಸಾಧ್ಯವಿಲ್ಲ.”
“ಬಾಬಾ, ನಾನು ಮೊದಲು ಈ ಮಾತನ್ನು ನಿನ್ನಲ್ಲಿ ಕೇಳಿರಲಿಲ್ಲ. ಈಗ ಕೇಳುತ್ತಿದ್ದೇನೆ. ನೀನು ಇನ್ನೂ ಎಷ್ಟು ದಿನ ಅಮೆರಿಕದಲ್ಲಿ ಇರುತ್ತೀಯ?”
“ನೀನು ಸರಿಯಾಗುವವರೆಗೆ.”
ಮಗಳು ಎದ್ದು ನಿಂತ ರಭಸಕ್ಕೆ ಕುರ್ಚಿಯ ಕಾಲುಗಳು ನೆಲಕ್ಕೆ ಉಜ್ಜಿ ಕಿರ್ ಗುಟ್ಟಿದವು.
“ನಮ್ಮಿಬ್ಬರಿಗೆ ಬೇರೆ ಯಾರೂ ಇಲ್ಲ ಮಗಳೇ,” ಅಂಗಲಾಚುವ ದನಿಯಲ್ಲಿ ಶಿ ಹೇಳಿದ. ಅವನು ಮಾತು ಮುಂದುವರಿಸುವ ಮೊದಲೇ ಮಗಳು ರೂಮಿಗೆ ಹೋಗಿ ಧಡಾರನೆ ಬಾಗಿಲನ್ನು ಹಾಕಿಕೊಂಡಳು. ಶಿ ಮಗಳಿಗಾಗಿ ಮಾಡಿಟ್ಟಿದ್ದ ಅಡುಗೆಗಳತ್ತ ದಿಟ್ಟಿಸಿದ. ಅಣಬೆ ಹಾಕಿದ ಹುರಿದ ತೊಫು, ಶುಂಟಿ ಹಾಕಿ ಮಾಡಿದ ಸಿಗಡಿ, ಅಂದವಾಗಿ ಜೋಡಿಸಿಟ್ಟಿದ್ದ ಕಳಲೆ, ಕೆಂಪು ಮೆಣಸು ಸಿಂಪಡಿಸಿದ ಎಳೆ ಬಟಾಣಿ. ಪ್ರತಿದಿನ ಮಗಳು ಅವನ ಅಡುಗೆಯ ಕೌಶಲವನ್ನು ಮೆಚ್ಚಿದರೂ ಅದು ಅರೆ ಮನಸ್ಸಿನ ಮೆಚ್ಚುಗೆ ಎಂದು ಅವನಿಗೆ ಭಾಸವಾಗುತ್ತಿತ್ತು. ಅಡುಗೆ ಎನ್ನುವ ಅವನ ಪ್ರತಿನಿತ್ಯದ ಪ್ರಾರ್ಥನೆಗೆ ಮಗಳು ಸ್ಪಂದಿಸುತ್ತಿರಲಿಲ್ಲ.
“ನನ್ನ ಹೆಂಡತಿ ಇದ್ದಿದ್ದರೆ ಮಗಳನ್ನು ಸಮಾಧಾನ ಪಡಿಸಿ ಗೆಲುವಾಗುವಂತೆ ಮಾಡುತ್ತಿದ್ದಳು,” ಶಿ ಮಾರನೆಯ ದಿನ ಬೆಳಗ್ಗೆ ಮ್ಯಾಡಮ್ ಬಳಿ ಹೇಳಿದ. ಈಗೀಗ ಅವಳ ಬಳಿ ಚೈನೀಸ್ ಮಾತನಾಡುವುದರಲ್ಲಿ ಅವನಿಗೆ ಯಾವುದೇ ಸಂಕೋಚವಿರಲಿಲ್ಲ.
“ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ನಾನು ಅವರಿಬ್ಬರಿಗೂ ಅಷ್ಟೊಂದು ಹತ್ತಿರವಾಗಲಿಲ್ಲ. ನಾನು ಅವರನ್ನು ಪ್ರೀತಿಸಿಲ್ಲವೆಂದಲ್ಲ. ಒಬ್ಬ ರಾಕೆಟ್ ಸೈಂಟಿಸ್ಟ್ ಎಂದರೆ ಹಾಗೆಯೇ. ನಾನು ದಿನಪೂರ್ತಿ ಕಷ್ಟಪಟ್ಟು ದುಡಿಯುತ್ತಿದ್ದೆ. ರಾತ್ರಿಯಿಡಿ ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಿದ್ದೆ. ಪ್ರತಿಯೊಂದು ಗೌಪ್ಯ. ಹಾಗಾಗಿ ನಾನು ವಿಚಾರ ಮಾಡುತ್ತಿರುವುದು ಏನು ಎಂದು ಯಾರೊಟ್ಟಿಗೂ ಹೇಳುವ ಹಾಗಿಲ್ಲ. ನನ್ನ ಹೆಂಡತಿ, ಬಹುಶಃ ಅವಳಷ್ಟು ನನ್ನನ್ನು ಅರಿತವರು ಪ್ರಪಂಚದಲ್ಲಿ ಇನ್ನೊಬ್ಬರಿಲ್ಲ. ನಾನು ಸದಾ ಕಾಲ ಕೆಲಸದಲ್ಲಿ ಮುಳುಗಿದ್ದೆ ಎನ್ನುವುದರ ಅರಿವಿನಿಂದ ಯಾವತ್ತೂ ನನ್ನ ವಿಚಾರಸರಣಿಗೆ ಅಡ್ಡಿಯುಂಟು ಮಾಡುತ್ತಿರಲಿಲ್ಲ. ಮಗಳಿಗೂ ಅಡ್ಡಿಮಾಡಲು ಬಿಡುತ್ತಿರಲಿಲ್ಲ. ಬೆಳೆಯುತ್ತಿರುವ ಮಗಳಿಗೆ ಅದು ಒಳ್ಳೆಯದಾಗಿರಲಿಲ್ಲ ಎಂದು ನನಗೆ ಈಗ ಅರಿವಾಗುತ್ತಿದೆ. ನನ್ನ ಕೆಲಸದ ಮುಖವನ್ನು ನಾನು ಕಚೇರಿಯಲ್ಲೇ ಕಳಚಿಟ್ಟು ಬರಬೇಕಿತ್ತು. ಅದನ್ನು ಅರಿಯುವಷ್ಟು ತಿಳಿವಳಿಕೆ ಆಗ ನನಗಿರಲಿಲ್ಲ. ಈಗ ಮಗಳಿಗೆ ನನ್ನೊಟ್ಟಿಗೆ ಮಾತನಾಡಲು ವಿಷಯಗಳೇ ಇಲ್ಲ.”
ಮಗಳೊಟ್ಟಿಗೆ ಮಾತನಾಡಲು ಮೊದಲೆಲ್ಲ ಪ್ರಯತ್ನಿಸದೇ ಇದ್ದುದು ಅವನದೇ ತಪ್ಪೇನೋ. ಒಂದು ಮಹತ್ತರ ಕೆಲಸಕ್ಕೆ ಕಟಿಬದ್ಧರಾಗಿ ನಿಂತ ಕೆಲವೇ ಕೆಲವು ಮಂದಿಯಲ್ಲಿ ಒಬ್ಬನಾದ ತಾನು ಕೆಲವೊಂದು ತ್ಯಾಗಗಳನ್ನು ಮಾಡುವುದು ಅನಿವಾರ್ಯ. ಗೌರವ ಅಥವಾ ವಿಷಾದ. ಗೌರವ ವಿಷಾದಕ್ಕಿಂತ ದೊಡ್ಡದು. ಅವನು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದ.
ಅವತ್ತು ರಾತ್ರಿ ಊಟಕ್ಕೆ ಕುಳಿತಾಗ ಮಗಳು ಕರಾವಳಿಯುದ್ದಕ್ಕೂ ಪ್ರವಾಸಕ್ಕೆ ಕರೆದುಕೊಂಡು ಹೋಗುವ, ಚೈನೀಸ್‌ನಲ್ಲಿ ವ್ಯವಹರಿಸಬಲ್ಲ ಒಂದು ಟೂರಿಸ್ಟ್ ಕಂಪನಿಯನ್ನು ಹುಡುಕಿರುವುದಾಗಿ ತಿಳಿಸಿದಳು. “ನೀನು ಇಲ್ಲಿಗೆ ಬಂದಿರುವುದು ಅಮೆರಿಕವನ್ನು ನೋಡಲಿಕ್ಕೆ ಅಲ್ಲವೇ? ಚಳಿಗಾಲ ಶುರುವಾಗುವುದರೊಳಗೆ ನೀನು ಒಂದಷ್ಟು ಪ್ರವಾಸ ಮಾಡುವುದು ಒಳ್ಳೆಯದು.”
“ತುಂಬಾ ದುಬಾರಿಯೇ?”
“ನಾನು ಹಣ ಕೊಡುತ್ತೇನೆ. ಬಾಬಾ, ನಿನ್ನ ಹುಟ್ಟಿದ ಹಬ್ಬದ ಪ್ರಯುಕ್ತ ನೀನು ಇದನ್ನೇ ಮಾಡಬೇಕು ಎಂದುಕೊಂಡಿದ್ದಲ್ಲವೇ?”
ಏನೇ ಹೇಳಿದರು ಕೊನೆಗೆ ಅವಳು ಅವನ ಮಗಳಲ್ಲವೇ. ಅವನ ಆಸೆಗಳನ್ನು ನೆನಪಿನಲ್ಲಿಟ್ಟುಕೊಂಡು ಪೂರೈಸಲು ಪ್ರಯತ್ನಿಸುತ್ತಾಳೆ. ಅವಳಿಗೆ ತಿಳಿಯದಿರುವುದೆಂದರೆ ಅವನು ನೋಡಬಯಸುವುದು ಮಗಳು ಮದುವೆಯಾಗಿ ಖುಷಿಯಾಗಿರುವ ಅಮೆರಿಕವನ್ನು.
ಅವನು ಒಂದಷ್ಟು ತರಕಾರಿ, ಮೀನಿನ ಹೋಳನ್ನು ಅವಳ ಪ್ಲೇಟಿಗೆ ಹಾಕುತ್ತಾ, “ನೀನು ಸ್ವಲ್ಪ ಜಾಸ್ತಿ ತಿನ್ನುವುದನ್ನು ಕಲಿಯಬೇಕು.”
“ಸರಿ, ನಾಳೆ ನಾನು ಅವರಿಗೆ ಕರೆ ಮಾಡಿ ಟಿಕೆಟ್ ತೆಗೆದುಕೊಳ್ಳುತ್ತೇನೆ.”
“ಏನು ಗೊತ್ತ? ಬಹುಶಃ ನಾನು ಇಲ್ಲಿರುವುದೇ ಒಳ್ಳೆಯದೇನೋ. ವಯಸ್ಸಾಗಿದೆ ನನಗೆ. ತಿರುಗಾಟ ಆರೋಗ್ಯಕ್ಕೆ ಒಳ್ಳೆಯದಲ್ಲ.”
“ಆದರೆ, ಇಲ್ಲಿ ನೋಡಲಿಕ್ಕೆ ಜಾಸ್ತಿ ಏನಿಲ್ಲ.”
“ಯಾಕಿಲ್ಲ? ನಾನು ನೋಡಬೇಕಿದ್ದ ಅಮೆರಿಕ ಇದೇನೆ. ನೀನು ಚಿಂತಿಸಬೇಡ. ನನಗೆ ಇಲ್ಲಿ ಗೆಳೆಯರಿದ್ದಾರೆ. ನಾನು ನಿನಗೂ ತುಂಬಾ ತೊಂದರೆ ಕೊಡುವುದಿಲ್ಲ.”
ಮಗಳು ಏನಾದರು ಉತ್ತರಿಸುವ ಮೊದಲೇ ಫೋನು ರಿಂಗಾಯಿತು. ಅವಳು ಫೋನ್ ಎತ್ತಿಕೊಂಡು ರೂಮಿಗೆ ನಡೆದಳು. ಅವಳು ಧಡಾರನೆ ಬಾಗಿಲು ಹಾಕುವುದನ್ನು ಅವನು ನಿರೀಕ್ಷಿಸ ತೊಡಗಿದ. ಅವಳು ಯಾವತ್ತೂ ಅವನ ಎದುರಿಗೆ ಫೋನಿನಲ್ಲಿ ಮಾತನಾಡುವುದಿಲ್ಲ. ಅದು ಯಾವುದೋ ಜಾಹೀರಾತಿನ ಕರೆಯಾಗಿದ್ದರೂ ಅವಳು ರೂಮಿಗೆ ಹೋಗಿಯೇ ಮಾತನಾಡುತ್ತಿದ್ದಳು. ಕೆಲವೊಮ್ಮೆ ಅವಳು ಬಹಳ ಹೊತ್ತು ಮೆಲುದನಿಯಲ್ಲಿ ಮಾತನಾಡುತ್ತಿದ್ದಾಗ ಆ ಮಾತುಗಳನ್ನು ಕೇಳಿಸಿಕೊಳ್ಳಬೇಕು ಎನ್ನುವ ಅಪೇಕ್ಷೆಯನ್ನು ಅವನು ಬಲವಂತದಿಂದ ತಡೆಹಿಡಿದಿದ್ದ. ಇವತ್ತು, ಈ ಸಂಜೆ ಅವಳು ಮನಸು ಬದಲಿಸಿದಂತಿತ್ತು. ಬಾಗಿಲನ್ನು ತೆರೆದೆ ಇಟ್ಟಿದ್ದಳು.
ಅವಳು ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ. ಅವಳ ದನಿ ಸಾಧಾರಣಕ್ಕಿಂತ ತುಸು ಕೀರಲಾಗಿ ಕೇಳಿಸಿತು. ಅವಳು ಜೋರು ಜೋರಾಗಿ ಮಾತನಾಡುತ್ತ ಮಧ್ಯೆ ಮಧ್ಯೆ ನಗುತ್ತಿದ್ದಳು. ಅವಳ ಮಾತುಗಳು, ನಡವಳಿಕೆ ಅವನಿಗೆ ಅರ್ಥವಾಗಲಿಲ್ಲ. ಅವಳ ಹರಿತವಾದ, ಎಂದಿಗಿಂತ ದೊಡ್ಡದಾದ, ಸಂಕೋಚವಿಲ್ಲದ ಕೀರಲು ದನಿ ಅವನಿಗೆ ಅಪರಚಿತ ದನಿಯಂತೆ ಭಾಸವಾಯಿತು. ಒಂದು ಕ್ಷಣಕ್ಕೆ ಅವಳು ತನ್ನ ಮಗಳಲ್ಲದೆ ಅಪರಿಚಿತಳಾದಂತೆ, ಇದ್ದಕ್ಕಿದ್ದ ಹಾಗೆ ಅವಳ ಬೆತ್ತಲು ದೇಹವನ್ನು ನೋಡಿದ ಹಾಗೆ ಅನಿಸಿ ಅವನು ಬೆಚ್ಚಿಬಿದ್ದ.
ಅವಳು ರೂಮಿನಿಂದ ಹೊರಬಂದಾಗ ಅವಳನ್ನು ದುರುಗುಟ್ಟಿಕೊಂಡು ನೋಡಿದ. ಅವಳು ಫೋನನ್ನು ಇರಿಸಿ, ಒಂದೂ ಮಾತನಾಡದೆ ಊಟದ ಟೇಬಲಿನ ಬಳಿ ಕುಳಿತುಕೊಂಡಳು. ಅವನು ಅವಳ ಮುಖವನ್ನು ಕ್ಷಣ ಕಾಲ ದಿಟ್ಟಿಸಿ ನಂತರ ಪ್ರಶ್ನಿಸಿದ, “ಯಾರು ಅದು ಫೋನು ಮಾಡಿದ್ದು?”
“ಫ್ರೆಂಡ್.”
“ಹುಡುಗನೋ ಅಥವಾ ಹುಡುಗಿಯೋ?”
“ಹುಡುಗ.”
ಮತ್ತೇನಾದರೂ ವಿವರ ಕೊಡುತ್ತಾಳೇನೋ ಎಂದು ಕಾದ. ಅವಳು ಆ ಥರದ ಯಾವುದೇ ಪ್ರಯತ್ನ ಮಾಡಲಿಲ್ಲ. ಸ್ವಲ್ಪ ಸಮಯದ ನಂತರ ತಡೆಯಲಾಗದೆ ಕೇಳಿದ, “ಈ ಫ್ರೆಂಡ್ ಏನಾದರೂ ಸ್ಪೆಷಲ್ ಫ್ರೆಂಡ್ ಆಗಿದ್ದಾನೋ ಹೇಗೆ?”
“ಸ್ಪೆಷಲ್? ಖಂಡಿತ.”
“ಯಾವ ಥರ?”
“ಬಾಬಾ, ಬಹುಶಃ ಈಗ ನಿನಗೆ ನನ್ನ ಬಗ್ಗೆ ಸ್ವಲ್ಪ ಸಮಾಧಾನವಾಗಬಹುದು. ಹೌದು ಅವನು ನನಗೆ ಸ್ಪೆಷಲ್ ಫ್ರೆಂಡ್. ಅದು ಗೆಳೆತನಕ್ಕಿಂತ ಹೆಚ್ಚಿನದು. ಒಬ್ಬ ಪ್ರಿಯತಮ. ಈಗ ನಿನಗೆ ಸಮಾಧಾನವಾಯಿತೇ? ನನ್ನ ಬದುಕು ನೀನು ಅಂದುಕೊಂಡಷ್ಟು ನಿಕೃಷ್ಟವಾಗಿಲ್ಲ.”
“ಅಮೆರಿಕನ್?”
“ಅಮೆರಿಕನ್? ಹೌದು. ಈಗ ಅಮೆರಿಕನ್ ಆಗಿದ್ದಾನೆ. ಆದರೆ, ಅವನು ಬಂದಿರುವುದು ರೊಮಾನಿಯಾದಿಂದ.”
ಏನಿಲ್ಲವೆಂದರೂ ಕೊನೆಗೆ ಅವನು ಒಂದು ಕಮ್ಯುನಿಸ್ಟ್ ದೇಶದಿಂದ ಬಂದವನು ಶಿ ತನ್ನನ್ನು ತಾನೇ ಸಮಾಧಪಡಿಸಿಕೊಳ್ಳಲು ಪ್ರಯತ್ನಿಸಿದ.
“ಅವನಿಗೆ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿದೆಯೇ? ಅವನು ನಿನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವನೇ? ನೀನು ಬಂದಿರುವುದು ಎಲ್ಲಿಂದ, ನಿನ್ನ ಹಿನ್ನೆಲೆ, ಕುಟುಂಬ, ಸಂಸ್ಕೃತಿ? ನೋಡು ನೀನು ಅದೇ ಹಳೆಯ ತಪ್ಪನ್ನು ಮತ್ತೆ ಮಾಡುವ ಹಾಗಿಲ್ಲ. ಹುಷಾರಾಗಿರಬೇಕು.”
“ನಾವಿಬ್ಬರೂ, ಪರಸ್ಪರರನ್ನು ಬಹಳ ಹಿಂದಿನಿಂದ ಬಲ್ಲೆವು.”
“ಒಂದು ತಿಂಗಳು ಎನ್ನುವುದು ತುಂಬಾ ಸಮಯವಲ್ಲ.”
“ಅದಕ್ಕಿಂತ ಮೊದಲಿನಿಂದ ನನಗೆ ಪರಿಚಯವಿದೆ ಬಾಬಾ.”
“ಬಹುಶಃ ಒಂದೂವರೆ ತಿಂಗಳು ಇರಬಹುದೇ? ನನಗೆ ಗೊತ್ತು ನೀನು ದುಃಖದಲ್ಲಿದ್ದೀಯ. ಹೆಣ್ಣಾಗಿ ನೀನು ದುಡುಕಬಾರದು. ಅದರಲ್ಲೂ ನಿನ್ನ ಈ ಪರಿಸ್ಥಿತಿಯಲ್ಲಿ ಒಬ್ಬಂಟಿ ಹೆಣ್ಣು ಕೆಲವೊಮ್ಮೆ ಎಡುವುತ್ತಾಳೆ.”
ಮಗಳು ತಲೆಯೆತ್ತಿ ಅವನನ್ನು ನೋಡಿದಳು. “ಬಾಬಾ, ನನ್ನ ಮುರಿದುಬಿದ್ದ ಮದುವೆಯ ಬಗ್ಗೆ ನೀನು ಅಂದುಕೊಂಡಿರುವುದು ತಪ್ಪು. ಅದನ್ನು ಕೊನೆಗಾಣಿಸಿದ್ದು ನಾನು.”
ಶಿ ಮಗಳನ್ನು ದಿಟ್ಟಿಸಿದ. ಅವಳ ನಿರ್ಭೀತ ಕಣ್ಣುಗಳಲ್ಲಿ ಸಮಾಧಾನ, ದೃಢ ನಿಶ್ಚಯಗಳಿತ್ತು. ಒಂದು ಕ್ಷಣಕ್ಕೆ ಅವಳು ಇನ್ನೇನೂ ಮಾತನಾಡದಿರಲಿ ಎಂದು ಅವನು ಮನಸ್ಸಿನಲ್ಲೇ ಬೇಡಿಕೊಂಡ. ಅವಳನ್ನು ತಡೆದು ನಿಲ್ಲಿಸಲು ಅವನು ಅಶಕ್ತನಾಗಿದ್ದ. “ಬಾಬಾ, ನಾವು ವಿಚ್ಚೇದನ ಪಡೆದಿದ್ದೆ ಇವನಿಗೋಸ್ಕರ. ತ್ಯಜಿಸಿರುವುದು ನಾನೇ.”
“ಯಾಕೆ ಮಗಳೇ?”
“ವೈವಾಹಿಕ ಜೀವನದಲ್ಲಿ ತಪ್ಪುಗಳಾಗುತ್ತವೆ ಬಾಬಾ.”
ಒಂದು ರಾತ್ರಿ ಗಂಡ ಹೆಂಡತಿಯರಾಗಿ ಹಾಸಿಗೆಯಲ್ಲಿ ಮಲಗಿದರೆ ಮುಂದಿನ ನೂರು ದಿನಗಳ ಕಾಲ ಪರಸ್ಪರರು ಪ್ರೀತಿಯಲ್ಲಿ ಇರುತ್ತಾರಂತೆ. ನೀನು ಏಳು ವರ್ಷಗಳಿಂದ ಅವನ ಜೊತೆಗೆ ಸಂಸಾರ ಮಾಡಿದ್ದೆ. ನಿನ್ನ ಗಂಡನಿಗೆ ಅದು ಹೇಗೆ ನೀನು ಹೀಗೆ ಮಾಡಲು ಸಾಧ್ಯ? ನಿನ್ನ ಆ ವಿವಾಹೇತರ ಸಂಬಂಧದ ಹೊರತಾಗಿ ಅಂತಹ ಏನು ಸಮಸ್ಯೆಯಿತ್ತು?” ಶಿ ದನಿ ಎತ್ತರಿಸಿ ಕೇಳಿದ. ತನ್ನ ಗಂಡನಿಗೆ ನಿಷ್ಠಳಾಗಿರದ ಮಗಳನ್ನು ತಾನು ಬೆಳೆಸಿಲ್ಲ.
“ಆಗಿ ಹೋಗಿರುವುದರ ಬಗ್ಗೆ ಈಗ ಮಾತನಾಡಿ ಪ್ರಯೋಜನವಿಲ್ಲ.”
“ನಾನು ನಿನ್ನ ಅಪ್ಪ. ನನಗೆ ಅದನ್ನು ತಿಳಿಯುವ ಹಕ್ಕಿದೆ.”
ಶಿ ಅವನಿಗೆ ಅರಿವಿಲ್ಲದೆಯೇ ಕೈಯನ್ನು ಟೇಬಲಿನ ಮೇಲೆ ಕುಟ್ಟಿದ.
“ನಮ್ಮ ಸಮಸ್ಯೆ ಎಂದರೆ ನಾನು ಯಾವತ್ತೂ ಮೌನಿಯಾಗಿದ್ದೆ. ನನ್ನ ಗಂಡನಿಗೆ ಬೇಕಾದಷ್ಟು ನಾನು ಮಾತನಾಡುತ್ತಿರಲಿಲ್ಲ. ನಾನು ಏನನ್ನೋ ಮುಚ್ಚಿಡಲು ಮೌನವಾಗಿರುತ್ತಿದ್ದೆ ಎನ್ನುವ ಸಂದೇಹ ಅವನಿಗಿತ್ತು.”
“ನೀನು ನಿನ್ನ ಪ್ರಿಯತಮನನ್ನು ಅವನಿಂದ ಮುಚ್ಚಿಟ್ಟಿದ್ದೆ.”
ಅವಳು ಶಿ ಯ ಮಾತುಗಳನ್ನು ಅಲಕ್ಷಿಸಿದಳು.
“ಅವನು ಹೆಚ್ಚು ಹೆಚ್ಚು ಮಾತನಾಡಿದಂತೆಲ್ಲ ನಾನು ಹೆಚ್ಚು ಹೆಚ್ಚು ಮೌನಿಯಾಗುತ್ತಿದ್ದೆ. ನನಗೆ ಇನ್ನಷ್ಟು ಏಕಾಂತ ಬೇಕೆನಿಸುತ್ತಿತ್ತು. ನೀನೇ ಹೇಳಿದಂತೆ ನಾನು ಮಾತನಾಡುವುದರಲ್ಲಿ ಅಂತಹ ಚತುರಳಲ್ಲ.”
“ಸುಳ್ಳು. ಈಗಷ್ಟೇ ಫೋನಿನಲ್ಲಿ ಮಾತನಾಡಿದೆಯಲ್ಲ. ಸ್ವಲ್ಪವೂ ಸಂಕೋಚವಿಲ್ಲದೆ ದೊಡ್ಡ ದನಿಯಲ್ಲಿ ನಗುತ್ತ ಹಾದರಕ್ಕಿಳಿದವರಂತೆ.”
ಶಿ ಯ ಮಗಳು ಅವನ ಕಟು ಮಾತಿಗೆ ಅವಕ್ಕಾಗಿ ಅವನತ್ತ ಒಂದು ದೀರ್ಘ ನೋಟವನ್ನು ಬೀರಿದಳು. ನಂತರ ಅದೇ ಮೃದು ದನಿಯಲ್ಲಿ, “ಅದೇ ಬೇರೆ ಬಾಬಾ. ನಾವಿಬ್ಬರೂ ಇಂಗ್ಲಿಷಿನಲ್ಲಿ ಮಾತನಾಡುತ್ತೇವೆ. ಅದು ಸುಲಭ. ನಾನು ಚೈನೀಸ್‌ನಲ್ಲಿ ಹಾಗೆ ಮಾತನಾಡಲಾರೆ.”
“ಅದೆಂತ ಅಸಂಬಂದ್ಧ ವಿವರಣೆ.”
“ಬಾಬಾ, ನೀನು ಭಾವನೆಗಳನ್ನೇ ತೋರ್ಪಡಿಸದೆ, ಎಲ್ಲವನ್ನು ಅದುಮಿಟ್ಟು ಒಂದು ಭಾಷೆಯೊಟ್ಟಿಗೆ ಬೆಳೆದರೆ ಮುಂದೆ ಇನ್ನೊಂದು ಭಾಷೆಯನ್ನು ಆರಿಸಿಕೊಂಡು ಅದರಲ್ಲಿ ಸಂಭಾಷಿಸುವುದು ಸುಲಭ. ಹೊಸ ಭಾಷೆ ಹೊಸ ವ್ಯಕ್ತಿತ್ವವನ್ನು ಕೊಡುತ್ತದೆ.”
“ನಿನ್ನ ಈ ಅಕ್ರಮಕ್ಕೆ ನನ್ನನ್ನು, ನಿನ್ನ ಅಮ್ಮನನ್ನು ಹೊಣೆಗಾರರನ್ನಾಗಿಸುತ್ತಿರುವೆಯ?”
“ನಾನು ಹೇಳುತ್ತಿರುವುದು ಹಾಗಲ್ಲ, ಬಾಬಾ.”
“ಮತ್ತೇನು? ನಾವು ನಿನ್ನನ್ನು ನಮ್ಮ ಭಾಷೆಯಲ್ಲಿ ಸರಿಯಾಗಿ ಬೆಳಸಲಿಲ್ಲ. ಹಾಗಾಗಿ ನೀನು ದೊಡ್ಡವಳಾಗುತ್ತಲೇ ಇನ್ನೊಂದು ಭಾಷೆ ಮತ್ತು ಅದೇ ಭಾಷೆಯಲ್ಲಿ ಮಾತನಾಡುವ ಪ್ರಿಯಕರನನ್ನು ಆರಿಸಿಕೊಂಡೆ. ನಿನ್ನ ಗಂಡ ಚೈನೀಸ್ ಮಾತನಾಡುತ್ತಿದ್ದರಿಂದ ನಿನಗೆ ಅವನ ಜೊತೆಗೆ ಸಂಸಾರ ಮಾಡಲಾಗಲಿಲ್ಲ.”
“ನೀನು ಮಾತನಾಡುತ್ತಿರಲಿಲ್ಲ. ಅಮ್ಮ ಮಾತನಾಡುತ್ತಿರಲಿಲ್ಲ. ನಿಮ್ಮಿಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದವು. ನಾನು ಮೌನವಾಗಿರುವುದನ್ನ ಕಲಿತೆ.”
“ನಿನ್ನಮ್ಮ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆಗಳಿರಲಿಲ್ಲ ನಾವು ಮೌನದ ಮೊರೆಹೊಕ್ಕ ದಂಪತಿಗಳು ಅಷ್ಟೇ.”
“ಸುಳ್ಳು.”
“ಸುಳ್ಳಲ್ಲ. ನಾನು ಸದಾಕಾಲ ಕೆಲಸದಲ್ಲಿ ಮುಳುಗಿರುತ್ತಿದ್ದೆ. ಅದು ನನ್ನ ತಪ್ಪು. ಒಪ್ಪಿಕೊಳ್ಳುತ್ತೇನೆ. ಒಂದು ಅರ್ಥ ಮಾಡಿಕೋ ನನ್ನ ಕೆಲಸವೇ ಹಾಗಿತ್ತು.”
“ಬಾಬಾ,” ಮಗಳು ಕಣ್ಣಿನಲ್ಲಿ ಕನಿಕರವನ್ನು ಸೂಸುತ್ತ ನುಡಿದಳು, “ನೀನು ಹೇಳುತ್ತಿರುವುದು ಸುಳ್ಳು ಎನ್ನುವುದು ನಿನಗೂ ಗೊತ್ತು. ನೀನು ಯಾವತ್ತಿಗೂ ರಾಕೆಟ್ ಸೈಂಟಿಸ್ಟ್ ಆಗಿರಲಿಲ್ಲ. ಅದು ನಿನಗೂ ಗೊತ್ತಿತ್ತು. ಅಮ್ಮನಿಗೂ ಗೊತ್ತಿತ್ತು. ನನಗೂ ಗೊತ್ತಿತ್ತು. ಎಲ್ಲರಿಗೂ ಗೊತ್ತಿತ್ತು.”
ಶಿ ಅವನ ಮಗಳನ್ನು ಎವೆಯಿಕ್ಕದೆ ದಿಟ್ಟಿಸಿದ, “ಏನು ಹೇಳುತ್ತಿದ್ದೀಯ?”
“ಒಂದು ವಿಷಯ ಏನು ಗೊತ್ತೇ ಬಾಬಾ. ನೀನು ಏನು ಕೆಲಸ ಮಾಡುತ್ತಿದ್ದೆ ಎಂದು ನೀನು ಯಾವತ್ತೂ ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಉಳಿದವರು? ಅವರೆಲ್ಲರೂ ನಿನ್ನ ಬಗ್ಗೆ ಮಾತನಾಡುತ್ತಿದ್ದರು.”
ಶಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಶಬ್ದಗಳಿಗೆ ತಡಕಾಡಿದ. ಅವನ ತುಟಿಗಳು ಅಸ್ತವ್ಯಸ್ತವಾಗಿ ಅಲುಗಾಡಿದವು. ಅವುಗಳಿಂದ ಯಾವುದೇ ಶಬ್ದ ಹೊರಬರಲಿಲ್ಲ.
ಮಗಳು ಹೇಳಿದಳು, “ಬಾಬಾ ನನ್ನನ್ನು ಕ್ಷಮಿಸು, ನಿನಗೆ ನೋವು ಕೊಡಬೇಕು ಎನ್ನುವುದು ನನ್ನ ಉದ್ದೇಶವಾಗಿರಲಿಲ್ಲ.”
ಶಿ ಜೋರಾಗಿ ಉಸಿರಾಡುತ್ತ ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸಿದ. ಹಾಗೆ ನೋಡಿದರೆ ಅದು ಅವನಿಗೆ ಕಷ್ಟಕರವಲ್ಲ. ಜೀವನಪೂರ್ತಿ ಹೀಗೆಯೇ ಅಲ್ಲವೇ ಅವನು ದುರ್ಘಟನೆಯನ್ನು ಎಲ್ಲರಿಂದ ಮುಚ್ಚಿಟ್ಟು ಬದುಕಿದ್ದು.
“ನೀನು ನನಗೆ ನೋವು ಮಾಡಲಿಲ್ಲ ಮಗಳೇ. ನೀನು ಹೇಳಿದಂತೆ ನೀನು ಕೇವಲ ಸತ್ಯವನ್ನು ನುಡಿಯುತ್ತಿದ್ದೆ,” ಅವನು ಮಾತು ಮುಗಿಸಿ ಎದ್ದು ನಿಂತ. ಭಾರವಾದ ಹೆಜ್ಜೆಯಿಡುತ್ತ ತನ್ನ ರೂಮಿನತ್ತ ಹೊರಟವನ ಹಿಂದೆ ಬಂದ ಮಗಳು, “ಬಾಬಾ ನಾಳೆ ನಿನಗೆ ಟೂರ್ ಹೋಗಲು ಟಿಕೆಟ್ ಬುಕ್ ಮಾಡುತ್ತೇನೆ,” ಎಂದಳು.
ಶಿ ಪಾರ್ಕಿನಲ್ಲಿ ಕುಳಿತು ಮ್ಯಾಡಮ್‌ಗೆ ವಿದಾಯ ಹೇಳಲು ಕಾಯತೊಡಗಿದ. ಟೂರ್ ಮುಗಿಸಿ ಬಂದ ತಕ್ಷಣ ಮರಳಿ ಹೋಗಲು ಟಿಕೆಟ್ ಕಾಯ್ದಿರಿಸುವಂತೆ ಮಗಳಿಗೆ ಹೇಳಿದ್ದ. ಅವನು ಪ್ರವಾಸ ಮುಗಿಸಿ ಬಂದ ಮೇಲೂ ಒಂದು ವಾರ ಸಮಯವಿರುತ್ತದೆ. ಇಲ್ಲಿಯವರೆಗೆ ಮ್ಯಾಡಮ್‌ಗೆ ಅವನು ಹೇಳಿದ್ದ ಎಲ್ಲ ಸುಳ್ಳುಗಳ ಬಗ್ಗೆ ತಪ್ಪೊಪ್ಪಿಗೆ ಕೇಳಲು, ವಿವರಣೆ ಕೊಡಲು ಅವನಿಗೆ ಅಲ್ಲಿಯವರೆಗೆ ಕಾಯುವುದಕ್ಕೆ ಸಾಧ್ಯವಾಗಲಿಲ್ಲ. ಅವನು ರಾಕೆಟ್ ಸೈಂಟಿಸ್ಟ್ ಆಗಿರಲಿಲ್ಲ. ಅವನಿಗೆ ಅದರಲ್ಲಿ ತರಬೇತಿಯಾಗಿತ್ತು. ಅವನು ಕಚೇರಿಯಲ್ಲಿ ಕೆಲಸ ಮಾಡಿದ ಮೂವತ್ತೆಂಟು ವರ್ಷಗಳಲ್ಲಿ ಕೇವಲ ಮೊದಲ ಮೂರು ವರ್ಷ ಮಾತ್ರ ರಾಕೆಟ್ ಸೈಂಟಿಸ್ಟ್ ಆಗಿ ಕಳೆದಿದ್ದ. ತನ್ನ ಕೆಲಸದ ಬಗ್ಗೆ ಯಾರೊಟ್ಟಿಗೂ ಮಾತನಾಡದಿರುವುದು ಒಬ್ಬ ಯುವ ಕೆಲಸಗಾರನಿಗೆ ಅತ್ಯಂತ ಕಷ್ಟಕರವಾದದ್ದು. ಒಬ್ಬ ಯುವ ರಾಕೆಟ್ ಸೈಂಟಿಸ್ಟ್ ಎಂದರೆ ಗೌರವ, ಹೆಮ್ಮೆ. ಇವನ್ನೆಲ್ಲ ಯಾರೊಟ್ಟಿಗಾದರೂ ಹಂಚಿಕೊಳ್ಳಬೇಕಿತ್ತು. ಆ ಯಾರೊಟ್ಟಿಗೂ ಆಗಿ ಬಂದವಳು ನಲವತ್ತೆರಡು ವರ್ಷಗಳ ಹಿಂದೆ ಸಿಕ್ಕ ಇಪ್ಪತ್ತೈದು ವರ್ಷದ ಹಾಜರಾತಿ ಲೆಕ್ಕ ಹಾಕುವ ಕಾರ್ಡ್ ಪಂಚ್ ಮಾಡುವ ಯುವತಿ. ಅವರನ್ನು ಪಂಚರ್ಸ್ ಎಂದು ಕರೆಯುತ್ತಿದ್ದರು. ಇವತ್ತು ಕಾರ್ಡ್ ಪಂಚ್ ಕೆಲಸ ಸಂಪೂರ್ಣ ಕಣ್ಮರೆಯಾಗಿ ಕಂಪ್ಯೂಟರಿನಲ್ಲಿ ಹಾಜರಾತಿ ಹಾಕಲಾಗುತ್ತದೆ. ಅಂತಹ ಅನೇಕ ಕೆಲಸಗಳು, ವಸ್ತುಗಳು ಕಾಲದ ಹೊಡೆತಕ್ಕೆ ಮಾಯವಾಗಿವೆ. ತನ್ನ ಜೀವನದಲ್ಲಿ ಕಣ್ಮರೆಯಾದ ಬೇರೆಲ್ಲವುಗಳಿಗಿಂತ ಅವನು ಅತೀ ಹೆಚ್ಚು ಜ್ಞಾಪಿಸಿಕೊಳ್ಳುತ್ತಿದ್ದುದು ಕಾರ್ಡ್ ಪಂಚ್ ಮಾಡುವವರನ್ನು.
“ಅವಳ ಹೆಸರು ಯಿಲಾನ್,” ಶಿ ಜೋರಾಗಿ ಆಕಾಶದತ್ತ ತಲೆಯೆತ್ತಿ ಕೂಗಿದ.
ಅದಕ್ಕೆ ಪ್ರತಿಧ್ವನಿಯಾಗಿ ಯಾರದೋ ಮಾತು ಕೇಳಿದಂತಾಯಿತು. ಮ್ಯಾಡಮ್ ನೆಲಕ್ಕೆ ಬಿದ್ದಿದ್ದ ಚೆಂದನೆಯ ಎಲೆಗಳನ್ನು ಆರಿಸಿ ಬುಟ್ಟಿಯಲ್ಲಿಟ್ಟುಕೊಂಡು ನಸುನಗುತ್ತ ಅವನತ್ತ ನಡೆದು ಬರುತ್ತಿದ್ದಳು. ಅವಳು ಆ ಎಲೆಗಳ ಗೊಂಚಲಿನಿಂದ ಒಂದನ್ನು ತೆಗೆದು ಶಿ ಯ ಕೈಗಿತ್ತಳು, “ಎಷ್ಟು ಅದ್ಭುತವಾಗಿದೆಯಲ್ಲ!”
ಶಿ ಕೈಯಲ್ಲಿದ್ದ ಎಲೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ. ಎಲೆಯ ದೇಹವನ್ನು ಭಾಗವಾಗಿಸಿದ್ದ ಸಣ್ಣ ಸಣ್ಣ ಗೀಟುಗಳು, ಎಲೆಯನ್ನು ತುಂಬಿದ್ದ ಹಳದಿ ಕಿತ್ತಳೆ ಮಿಶ್ರಿತ ಬಣ್ಣ. ಇದಕ್ಕೂ ಮೊದಲು ಎಂದಿಗೂ ತನ್ನ ಜೀವನದಲ್ಲಿ ಯಾವುದನ್ನೂ ಇಷ್ಟು ಸೂಕ್ಶ್ಮವಾಗಿ ತಾನು ಅವಲೋಕಿಸಿರಲಿಲ್ಲ ಎಂದೆನಿಸಿತು. ಅವನು ತನ್ನ ಜೀವನದಿಂದ ನವಿರಾದ ಅಂಚುಗಳನ್ನು, ಮಾಸಿದ ಬಣ್ಣಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ. ಅವನು ಹೆಚ್ಚು ಹೆಚ್ಚು ಪ್ರಯತ್ನಿಸಿದಂತೆಲ್ಲ ಕಣ್ಣಿನ ಪೊರೆ ತೆಗೆದಾಗ ಕಾಣಿಸುವಂತೆ ಹರಿತವಾದ, ಗಾಢವಾದ ದಿಗಿಲುಗೊಳಿಸುವ ಆದರೆ, ಆಕರ್ಷಿಸುವ ಚಿತ್ರಗಳು ಮಾತ್ರ ಕಣ್ಣೆದುರಿಗೆ ಸುಳಿಯತೊಡಗಿದವು.
“ನಾನು ನಿಮಗೆ ಏನೋ ಹೇಳಬೇಕು,” ಶಿ ಹೇಳಿದ. ಮ್ಯಾಡಮ್ ಕಾತರದ ನಗು ಬೀರಿದಳು. ಶಿ ಕುಳಿತಲ್ಲೇ ಮಿಸುಕಾಡಿದ.
“ನಾನು ರಾಕೆಟ್ ಸೈಂಟಿಸ್ಟ್ ಅಲ್ಲ.”

ಮ್ಯಾಡಮ್ ತಲೆಯಾಡಿಸಿದಳು. ಒಂದು ಕ್ಷಣ ಶಿ ಅವಳನ್ನು ನೋಡಿ ನಂತರ ದೃಷ್ಟಿಯನ್ನು ಬೇರೆ ಕಡೆ ಹಾಯಿಸಿದ. “ನಾನು ರಾಕೆಟ್ ಸೈಂಟಿಸ್ಟ್ ಆಗದೆ ಇರುವುದಕ್ಕೆ ಕಾರಣ ಒಬ್ಬಳು ಹೆಂಗಸು. ನಾವು ಮಾಡಿದ ಒಂದೇ ಕೆಲಸವೆಂದರೆ ಅವಳ ಜೊತೆಗೆ ಮಾತನಾಡಿದ್ದು. ಮಾತನಾಡಿದ್ದರಲ್ಲಿ ಏನು ತಪ್ಪಿದೆ ಎಂದು ನಿಮಗೆ ಅನಿಸಬಹುದು. ಒಬ್ಬ ವಿವಾಹಿತ ಪುರುಷ ಅವಿವಾಹಿತ ಯುವತಿಯ ಜೊತೆಗೆ ಮಾತುಕತೆಯಾಡುವುದಕ್ಕೆ ಒಪ್ಪಿಗೆಯಿರಲಿಲ್ಲ. ಅದು ನಮ್ಮ ಕಾಲದ ದುರಂತ.” ಹೌದು ದುರಂತ ಎನ್ನುವುದೇ ಸರಿ. ಇವತ್ತಿನ ಹುಡುಗರು ಹೇಳುವಂತೆ ಅದು ಹುಚ್ಚುತನವಲ್ಲ. ದುರಂತ. “ಮಾತನಾಡದೆ ಇರುವುದು ನಮ್ಮ ತರಬೇತಿಯ ಭಾಗವಾಗಿತ್ತು. ನಾವು ಮಾತನಾಡಲು ಬಯಸುತ್ತಿದ್ದೆವು.”
ಮಾತು ಎನ್ನುವುದು ದಿನನಿತ್ಯದ ಬದುಕಿನ ಒಂದು ಅವಿಭಾಜ್ಯ ಭಾಗ. ಆದರೆ, ಜನ ಸದಾ ಮಾತಾನಾಡಲು ಹಾತೊರಿಯುತ್ತಿರುತ್ತಾರೆ. ಶಿ ಮತ್ತು ಯುವತಿಯ ನಡುವೆ ಐದು ನಿಮಿಷದ ಕೆಲಸದ ವಿರಾಮ ಕಾಲದಲ್ಲಿ ಮಾತು ನಿರುಪದ್ರವಿಯಾಗಿ ಸಣ್ಣಗೆ ಶುರುವಾಯಿತು. ನಂತರ ಅವರು ಕೆಫೆಟೇರಿಯದಲ್ಲಿ ಊಟದ ವಿರಾಮದ ವೇಳೆಯಲ್ಲಿ ಮಾತನಾಡುತ್ತಿದ್ದರು. ಅವರು ತಮ್ಮ ಕನಸುಗಳ ಬಗ್ಗೆ ಮಾತನಾಡುತ್ತಿದ್ದರು. ಕಮ್ಯುನಿಸ್ಟ್ ತಾಯಿಗಾಗಿ ತಾವು ನಿರ್ಮಿಸುತ್ತಿರುವ ದೇಶದ ಮೊಟ್ಟಮೊದಲ ರಾಕೆಟ್ ನಿರ್ಮಾಣ ತಂಡದ ಭಾಗವಾಗಿ ಮುಂದೆ ತಾವು ಸಹ ಇತಿಹಾಸದ ಪುಟದಲ್ಲಿ ಸೇರಿ ಹೋಗುವುದರ ಬಗ್ಗೆ ಹರಟುತ್ತಿದ್ದರು.
“ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಮಾತು ತನ್ನಷ್ಟಕ್ಕೆ ತಾನೇ ರೂಪುಗೊಳ್ಳುತ್ತ ಹೋಗುತ್ತದೆ. ಆ ಮಾತು ಕೆಲಸದ ನಂತರ ಮನೆಗೆ ಹೋಗಿ ಹೆಂಡತಿಯ ಜೊತೆಗೆ ಮಾತನಾಡುವುದಕ್ಕಿಂತ ಭಿನ್ನವಾಗಿತ್ತು. ನಾನು ಇಲ್ಲಿ ಯಾವುದನ್ನೂ ಮುಚ್ಚಿಡುವ ಅಗತ್ಯವಿರಲಿಲ್ಲ. ನಾವು ಪರಸ್ಪರರ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ಮಾತೆಂದರೆ ಕಡಿವಾಣವಿಲ್ಲದ ಕುದುರೆಯಂತೆ. ಅದು ಸೇರುವ ಗಮ್ಯವಾಗಲಿ, ವೇಗವಾಗಲಿ ನಮಗೆ ಅರಿವಿರುವುದಿಲ್ಲ. ಅದರ ಊಹೆಯೂ ಇರುವುದಿಲ್ಲ. ನಮ್ಮ ಮಾತುಕತೆಯೂ ಹಾಗೆ ಇತ್ತು. ನಾವು ಕೇವಲ ಹರಟುತ್ತಿದ್ದೆವು ಅಷ್ಟೇ. ಅದಕ್ಕೆ ಸಂಬಂಧವೆಂದು ಕರೆಯಲಾಯಿತು. ನಮ್ಮಿಬ್ಬರ ನಡುವೆ ಏನಿರದಿದ್ದರೂ ನಾವು ಪ್ರೀತಿಸುತ್ತಿದ್ದೇವೆ ಎಂದರು.” ಶಿ ಮಾತು ನಿಲ್ಲಿಸಿದ. ಒಂದು ಕ್ಷಣ ಅವನಾಡಿದ ಮಾತಿನ ಬಗ್ಗೆ ಅವನಿಗೆ ಗೊಂದಲವಾದಂತಾಯಿತು. ಯಾವ ತರದ ಪ್ರೀತಿಯ ಬಗ್ಗೆ ಅವನು ಹೇಳುತ್ತಿರುವುದು? ಖಂಡಿತವಾಗಿಯೂ ಅವರ ನಡುವೆ ಪ್ರೀತಿಯಿತ್ತು. ಅದು ಸಮಾಜ ನಿರ್ಧರಿಸಿದ ಪ್ರೀತಿಯಲ್ಲ. ಅವರಿಬ್ಬರ ನಡುವೆ ಸದಾ ಕಾಲ ಗೌರವದ ಅಂತರವಿತ್ತು. ಅಕಸ್ಮಾತಾಗಿಯೂ ಪರಸ್ಪರರ ಕೈ ಸಹ ಒಮ್ಮೆಯೂ ಸೋಕಿರಲಿಲ್ಲ. ಆದರೆ, ಅವರ ನಡುವೆ ಒಂದು ಸೆಳೆತವಿತ್ತು. ಆ ಸೆಳೆತದ ಪ್ರವಾಹದಲ್ಲಿ ಅವರಿಬ್ಬರೂ ಯಾವತ್ತೂ ಮಾತನಾಡುತ್ತಿದ್ದರು. ಆ ಪ್ರವಾಹದಲ್ಲಿ ಅವರಿಬ್ಬರ ಮನಸ್ಸುಗಳು ಪರಸ್ಪರರನ್ನು ತಾಕುತ್ತಿದ್ದವು. ಅದಕ್ಕೆ ಪ್ರೀತಿ ಎನ್ನಬಹುದೇ? ನನ್ನ ಮಗಳ ದಾಂಪತ್ಯ ಮುರಿದಿರುವುದು ಇದೇ ಕಾರಣಕ್ಕಾಗಿಯೇ? ಬೇರೊಬ್ಬನ ಜೊತೆಗೆ ಮಾತನ್ನು ಹಂಚಿಕೊಂಡಿರುವುದಕ್ಕೆ? ಶಿ ಕುಳಿತಲ್ಲೇ ಮಿಸುಕಾಡಿದ. ತಣ್ಣಗಿನ ವಾತಾವರಣದಲ್ಲೂ ಸಣ್ಣಗೆ ಬೆವರಿದ. ಅವರ ಮೇಲೆ ಪ್ರಣಯದ ಆರೋಪವನ್ನು ಹೊರಿಸಲಾಯಿತು. ಅವನು ಅದನ್ನು ಅಲ್ಲಗಳೆದ. ಅವಳನ್ನು ಯಾವುದೋ ಕುಗ್ರಾಮಕ್ಕೆ ಸಾಗಹಾಕಿದಾಗ ಅವಳ ಪರವಾಗಿ ಅವನು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ. ಅವಳೊಬ್ಬಳು ಕುಶಲ ಕಾರ್ಡ್ ಪಂಚ್ ಮಾಡುವವಳಾಗಿದ್ದಳು. ಕಾರ್ಡ್ ಪಂಚ್ ಮಾಡುವವರನ್ನು ಬದಲಿಸುವುದು ಸುಲಭ. ಆದರೆ, ಅವನ ಕೆಲಸ ಹಾಗಲ್ಲ. ಸೈಂಟಿಸ್ಟ್. ಅವನು ಬಹಿರಂಗವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳಿದರೆ ಅವನನ್ನು ಕೆಲಸದಲ್ಲಿ ಮುಂದುವರಿಸುವುದಾಗಿ ತಿಳಿಸಲಾಯಿತು. ಅವನು ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. “ನನ್ನ ಮೂವತ್ತೆರಡನೆಯ ವಯಸ್ಸಿನಿಂದ ನಾನು ರಾಕೆಟ್ ಸೈಂಟಿಸ್ಟ್ ಆಗಿರಲಿಲ್ಲ. ಅವತ್ತಿನಿಂದ ನಾನು ಯಾವುದೇ ರಿಸರ್ಚ್ ಕೆಲಸದಲ್ಲಿ ತೊಡಗಲಿಲ್ಲ. ನನ್ನ ಕೆಲಸದ ಬಗ್ಗೆ ಎಲ್ಲವೂ ಗೌಪ್ಯ. ಹೀಗಾಗಿ ನನ್ನ ಹೆಂಡತಿಗೆ ಇವೆಲ್ಲ ತಿಳಿಯಲಿಲ್ಲ.” ಅಥವಾ ಅವಳಿಗೆ ತಿಳಿದಿರಲಿಲ್ಲ ಎಂದು ಅವನು ನಿನ್ನೆ ರಾತ್ರಿಯವರೆಗೂ ಭಾವಿಸಿದ್ದ. ಅವನ ಬುದ್ಧಿಮತ್ತೆ, ತರಬೇತಿಗೆ ಹೋಲಿಸಿದರೆ ಅತ್ಯಂತ ಕೆಳದರ್ಜೆಯ ಕೆಲಸಕ್ಕೆ ಅವನನ್ನು ಹಾಕಲಾಯಿತು. ಅವನು ಚೇರ್ಮನ್ ಮಾವೋನ ಹುಟ್ಟಿದ ದಿನದಂದು ಆಫೀಸನ್ನು ಸಿಂಗರಿಸುತ್ತಿದ್ದ, ಕಚೇರಿಯಲ್ಲಿ ಫೈಲುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿದ್ದ, ಸಂಜೆ ಒಂದು ಕಾಲದ ಅವನ ಸಹೋದ್ಯೋಗಿಗಳಿಂದ ಫೈಲ್, ಪುಸ್ತಕ ಇತ್ಯಾದಿಗಳನ್ನು ಕಲೆ ಹಾಕುತ್ತಿದ್ದ, ಅವುಗಳ ಲೆಕ್ಕ ಬರೆಯಿತ್ತಿದ್ದ, ಗಾರ್ಡಗಳ ಸಮಕ್ಷಮದಲ್ಲಿ ಫೈಲುಗಳನ್ನು ಆಫೀಸಿನ ಲಾಕರಿನಲ್ಲಿ ಜೋಡಿಸಿಡುತ್ತಿದ್ದ. ಮನೆಗೆ ಹೋದಾಗ ಹೆಂಡತಿಯ ಎದುರಿನಲ್ಲಿ ಪ್ರತಿಷ್ಠಿತ ಕೆಲಸದಲ್ಲಿರುವಂತೆ, ಸದಾ ಕಾಲ ಕೆಲಸದ ಭಾರ ಹೊತ್ತವನಂತೆ ನಟಿಸುವ ರಾಕೆಟ್ ಸೈಂಟಿಸ್ಟ್ ಆಗಿದ್ದ. ಅವನ ಹೆಂಡತಿಯ ಕಣ್ಣುಗಳು ಪ್ರಶ್ನೆಗಳನ್ನು ಸೂಸಿದಾಗ ಅವನು ತನ್ನ ದೃಷ್ಟಿಯನ್ನು ಬೇರೆಡೆ ಹಾಯಿಸುತ್ತಿದ್ದ. ಒಂದು ದಿನ ಅವಳ ಕಣ್ಣುಗಳಲ್ಲಿ ಪ್ರಶ್ನೆಗಳು ಶಾಶ್ವತವಾಗಿ ಬತ್ತಿಹೋದವು. ಅವನು ತನ್ನ ಮಗಳು ಮೌನಿಯಾಗಿ ತನ್ನ ಹೆಂಡತಿಯಂತೆ ತನ್ನನ್ನು ಅರಿತವಳಾಗಿ, ಒಳ್ಳೆಯ ಹುಡುಗಿಯಾಗಿ ಬೆಳೆಯುವುದಕ್ಕೆ ಸಾಕ್ಷಿಯಾದ. ಅವನು ತನ್ನ ವೃತ್ತಿ ಜೀವನದಲ್ಲಿ ಮೂವತ್ತೆರಡು ಗಾರ್ಡುಗಳ ಜೊತೆಗೆ ಕೆಲಸ ಮಾಡಿದ್ದ. ಸಮವಸ್ತ್ರ ತೊಟ್ಟ ಯುವಕರು, ಅವರ ಬೆಲ್ಟಿನಲ್ಲಿನ ಒರೆ ಪಿಸ್ತೂಲಿಲ್ಲದೆ ಖಾಲಿಯಾಗಿರುತ್ತಿತ್ತು. ರೈಫಲ್ ತುದಿಯಲ್ಲಿರುವ ಬಾನೆಟ್ ಚೂಪಾಗಿ ಹರಿತವಾಗಿತ್ತು. ಸದಾಕಾಲ ಚುಚ್ಚುವಂತೆ ಭಾಸವಾಗುತ್ತಿತ್ತು.
ಆದರೆ, ಆವತ್ತು ಅವನಿಗೆ ಬೇರೆ ಆಯ್ಕೆಗಳಿರಲಿಲ್ಲ. ಅವನು ತೆಗೆದುಕೊಂಡ ನಿರ್ಧಾರ ಅವನ ಹೆಂಡತಿ ಮತ್ತು ಆ ಯುವತಿಗೆ ನಿಷ್ಠನಾಗಿಯೇ ಅಲ್ಲವೇ? ಕೇವಲ ರಾಕೆಟ್ ಸೈಂಟಿಸ್ಟ್ ಆಗಿ ಸಮಾಜದಲ್ಲಿ ಅತ್ಯಂತ ಪ್ರತಿಷ್ಠೆಯಿಂದ ಬದುಕಬೇಕು ಎನ್ನುವ ಸ್ವಾರ್ಥಕ್ಕಾಗಿ ತನ್ನದಲ್ಲದ ತಪ್ಪನ್ನು ಒಪ್ಪಿಕೊಂಡು ತನ್ನ ಹೆಂಡತಿಯಂತ ಒಳ್ಳೆಯ ಜೀವಕ್ಕೆ ಹೇಗೆ ನೋವನ್ನುಂಟು ಮಾಡಲಿ? ಅಥವಾ ತನ್ನ ವೃತ್ತಿ, ಹೆಂಡತಿ, ಪುಟ್ಟ ಮಗಳು ಎಲ್ಲವನ್ನು ಬಿಟ್ಟು ಇನ್ನೊಬ್ಬಳ ಜೊತೆಗೆ ತಾನು ಬಯಸಿಲ್ಲದ ಜೀವನವನ್ನು ಹೇಗೆ ಕಳೆಯಲಿ? ‘ನಾವು ಮಾಡುವ ತ್ಯಾಗ ನಮ್ಮ ಬದುಕಿಗೆ ಅರ್ಥವನ್ನು ಕೊಡುತ್ತದೆ’ ಶಿ ಅವನ ತರಬೇತಿಯಲ್ಲಿ ಹೇಳಿದ್ದ ವಾಕ್ಯವನ್ನು ಮತ್ತೆ ಮತ್ತೆ ಪುನರುಚ್ಚಿಸಿದ. ಅತ್ತಿತ್ತ ನೋಡಿದ. ತಲೆಯನ್ನು ಕೊಡವಿದ. ಬಹುಶಃ ಪರಕೀಯ ಸ್ಥಳದಲ್ಲಿ ಪರಕೀಯವಾದ ವಿಚಾರಗಳು ಹೊಳೆಯುತ್ತದೆ. ಈ ವಯಸ್ಸಿನಲ್ಲಿ ನಡೆದು ಹೋದುದರ ಕುರಿತು ಪದೇ ಪದೇ ವಿಚಾರ ಮಾಡುವುದು ಒಳ್ಳೆಯದಲ್ಲ. ಒಬ್ಬ ಒಳ್ಳೆಯ ವ್ಯಕ್ತಿ ವರ್ತಮಾನದಲ್ಲಿ ಬದುಕುತ್ತಾನೆ.
ಪಕ್ಕದಲ್ಲಿ ಕುಳಿತಿರುವ ಅವನ ಸ್ನೇಹಿತೆ ಮ್ಯಾಡಮ್ ಬಂಗಾರದ ಬಣ್ಣದ ಎಲೆಯನ್ನು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ ಹಿಡಿದು ಅದು ಪ್ರತಿಫಲಿಸುವ ಬಣ್ಣವನ್ನು ಅವನಿಗೆ ತೋರಿಸುತ್ತಿದ್ದಳು.
ನಾನೇಕೆ ಅನುವಾದಿಸುತ್ತೇನೆ
ನಾನು ಯಾಕೆ ಅನುವಾದವನ್ನು ಮಾಡುತ್ತೇನೆ ಎನ್ನುವುದು ಸದಾ ಉತ್ತರ ಬದಲಾಗುವ ಪ್ರಶ್ನೆ. ಒಂದು ಕತೆಯನ್ನು ಓದಿದಾಗ ಅದು ಓದಿದ ಬಹಳ ದಿನದ ನಂತರವೂ ಕತೆಯಲ್ಲಿನ ಪಾತ್ರ, ಘಟನೆ, ಸಾಲು ಅಥವಾ ಇವನ್ನೆಲ್ಲ ಒಟ್ಟಾಗಿ ಕಟ್ಟಿಕೊಡುವ ಚೌಕಟ್ಟು ನನ್ನೊಳಗೆ ಕಾಡುತ್ತಿದ್ದರೆ ನಾನು ಅದನ್ನು ಅನುವಾದಕ್ಕಾಗಿ ಆಯ್ಕೆ ಮಾಡುತ್ತೇನೆ. ಅನುವಾದದ ಸುಖವಿರುವುದು ಕತೆಯ ಸೂಕ್ಷ್ಮತೆಯನ್ನು ಒಂದು ಪರಿಸರದಿಂದ ಇನ್ನೊಂದಕ್ಕೆ ದಾಟಿಸುವುದರಲ್ಲಿ. ಹಲವಷ್ಟು ಬಾರಿ ನಮ್ಮದಲ್ಲದ ನೆಲದಲ್ಲಿ ಹುಟ್ಟಿಕೊಂಡ ಕತೆಗಳು ನಮ್ಮದೇ ಅನಿಸುವಷ್ಟು ಆಪ್ತವಾಗಿ ತೋರಿದಾಗ ಈ ಅಚ್ಚರಿಯ ಸುಖವನ್ನು ಬೇರೊಬ್ಬರೊಟ್ಟಿಗೆ ಹಂಚಿಕೊಳ್ಳುವ ಆಸೆ ನನ್ನ ಬಹುತೇಕ ಅನುವಾದ ಹಿಂದಿನ ಆಶಯ. ಇನ್ನು ಕೆಲವು ಸಲ ಇನ್ನೊಂದು ನೆಲದ ಕತೆ ನಮ್ಮಲ್ಲಿ ಹೇಗೆ ಉಸಿರಾಡಬಹುದು ಎನ್ನುವ ಕುತೂಹಲ. ಒಟ್ಟಿನಲ್ಲಿ ಕನ್ನಡದಲ್ಲಿ ಹೊಸತಾಗಿ ತೋರುವ, ನಮಗೆ ಹತ್ತಿರದ್ದು ಅನಿಸುವ ಕತೆಗಳು ಅನುವಾದಕ್ಕೆ ನನ್ನ ಆಯ್ಕೆ.






“ಪ್ರಾಯದ ಜನ, ಹಳೆಯ ಜನರಿಗಿಂತ ಖುಷಿಯಾಗಿರುತ್ತಾರೆ,” ಶಿ ನುಡಿದ. ನಂತರ ಅವನಿಗೆ ತಾನು ಒಟ್ಟಾರೆ ಸಂಭಾಷಣೆಗೆ ಇದ್ದಕ್ಕಿದ್ದ ಹಾಗೆ ಮುಕ್ತಾಯವನ್ನು ಘೋಷಿಸಿದೆನೇನೋ ಎಂದು ಮುಜುಗರವಾಯಿತು.
ತನ್ನ ಕಾಲೇಜಿನ ದಿನಗಳಲ್ಲಿ ಭೌತಶಾಸ್ತ್ರ, ಗಣಿತವನ್ನು ಕಲಿತಷ್ಟೇ ತೀವ್ರತೆಯಿಂದ ಅವನು ಅಡುಗೆ ಮಾಡುವುದನ್ನೂ ಕಲಿತಿದ್ದ.
ಬದುಕು ನಾವು ಕಲ್ಪಿಸಿಕೊಂಡಿರುವುದಕ್ಕಿಂತ ಹೆಚ್ಚಿನ ಸಂತೋಷವನ್ನು ಕೊಟ್ಟಿರುತ್ತದೆ. ಅದನ್ನು ಅನುಭವಿಸಲು ನಮ್ಮನ್ನು ನಾವು ತರಬೇತುಗೊಳಿಸಿಕೊಳ್ಳಬೇಕು.
ಒಳ್ಳೆಯ ನಡವಳಿಕೆಯುಳ್ಳವರು ಮಾಡುವಂತೆ ಮಾತಿನಲ್ಲಾದ ತಪ್ಪಿನರಿವಾಗಿ ತನ್ನ ಮಾತಿಗೆ ಕ್ಷಮೆ ಕೇಳಿ ಅವಳು ವಿಷಯವನ್ನು ಬದಲಿಸುತ್ತಾಳೆ ಎಂದು ಅವನು ಕಾದ. ಅವಳು ಹಾಗೆ ಮಾಡಲಿಲ್ಲ.
ಏನೇ ಹೇಳಿದರು ಕೊನೆಗೆ ಅವಳು ಅವನ ಮಗಳಲ್ಲವೇ. ಅವನ ಆಸೆಗಳನ್ನು ನೆನಪಿನಲ್ಲಿಟ್ಟುಕೊಂಡು ಪೂರೈಸಲು ಪ್ರಯತ್ನಿಸುತ್ತಾಳೆ. ಅವಳಿಗೆ ತಿಳಿಯದಿರುವುದೆಂದರೆ ಅವನು ನೋಡಬಯಸುವುದು ಮಗಳು ಮದುವೆಯಾಗಿ ಖುಷಿಯಾಗಿರುವ ಅಮೆರಿಕವನ್ನು.
ಅವಳ ಹರಿತವಾದ, ಎಂದಿಗಿಂತ ದೊಡ್ಡದಾದ, ಸಂಕೋಚವಿಲ್ಲದ ಕೀರಲು ದನಿ ಅವನಿಗೆ ಅಪರಚಿತ ದನಿಯಂತೆ ಭಾಸವಾಯಿತು. ಒಂದು ಕ್ಷಣಕ್ಕೆ ಅವಳು ತನ್ನ ಮಗಳಲ್ಲದೆ ಅಪರಿಚಿತಳಾದಂತೆ, ಇದ್ದಕ್ಕಿದ್ದ ಹಾಗೆ ಅವಳ ಬೆತ್ತಲು ದೇಹವನ್ನು ನೋಡಿದ ಹಾಗೆ ಅನಿಸಿ ಅವನು ಬೆಚ್ಚಿಬಿದ್ದ.
ಮಾತು ಎನ್ನುವುದು ದಿನನಿತ್ಯದ ಬದುಕಿನ ಒಂದು ಅವಿಭಾಜ್ಯ ಭಾಗ. ಆದರೆ, ಜನ ಸದಾ ಮಾತಾನಾಡಲು ಹಾತೊರಿಯುತ್ತಿರುತ್ತಾರೆ.
ಹಾಗೆ ನೋಡಿದರೆ ಬದುಕಿನ ಸಣ್ಣ ಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ ತಾನೂ ಸಹ ಅದೃಷ್ಟಶಾಲಿಯೇ. ಮ್ಯಾಡಮ್ ಮತ್ತು ತಾನು ಪ್ರಪಂಚದ ಬೇರೆ ಬೇರೆ ಪ್ರದೇಶದ ಬೇರೆಯದೇ ಆದ ಭಾಷೆಯ ತಮ್ಮದೇ ಆದ ವಿಭಿನ್ನ ಸಂಸ್ಕೃತಿಯವರು ಇಲ್ಲಿ ಹೀಗೆ ಬೆಳಗಿನ ಹಿತವಾದ ಬಿಸಿಲನಲ್ಲಿ ಕುಳಿತು ಹರಟುತ್ತಿದ್ದೇವೆ. ಎಂತಹ ಅದ್ಭುತ.
ನಿಮ್ಮ ಅನುವಾದಗಳು ಕೂಡ ನಿಜಕ್ಕೂ ಅದ್ಭುತ ಸಚೇತನ – ಅನುವಾದದ ಬಗ್ಗೆ, ಅನುವಾದದಲ್ಲಿ ಅಭಿರುಚಿ ಇರುವ ಎಲ್ಲರೂ – ಇಂಥದೊಂದು ಅನುವಾದ ಓದಲು ಸದಾ ಕಾಲ ನಿರ್ಮಲ ಪ್ರಾರ್ಥನೆಯಲ್ಲಿರುತ್ತಾರೆ. ಪ್ರಾರ್ಥನೆ, ಒಂದು ಮಾಂತ್ರಿಕ ಬಲೆಯಂತೆ ಊರು ಕೇರಿ, ನಗರ, ದೇಶ… ದಾಟಿ ಮನಸ್ಸನ್ನು ತಾಕುತ್ತದೆ!!