ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿನತ್ತ ಧಾವಿಸುವಾಗ ಬೆರಳು ಹಿಡಿದ ಬದುಕಿನ ಕಥೆ

ಸಾವಿನತ್ತ ಧಾವಿಸುವಾಗೆಲ್ಲಾ ಕೈ ಬೆರಳು ಹಿಡಿಯುವ ಬದುಕಿನ ಕಥೆ – A man called Ove

ಬದುಕಲು ಏನೆಲ್ಲಾ ಕಾರಣಗಳು.

ಹಣ, ಪದವಿ, ಅಧಿಕಾರ, ಪ್ರೇಮ, ಮೋಹ, ವ್ಯಾಮೋಹ…..

ಆದರೆ ವಯಸ್ಸಾದಂತೆ ಇವೆಲ್ಲಾ ಒಂದೊಂದಾಗಿ ನಮ್ಮ ಕೈ ಜಾರಿ ಹೋಗುತ್ತಿರುತ್ತದೆ. ಬದುಕಿನ ಮುಖ್ಯ ಭಾಗವನ್ನು ವಿನಿಯೋಗಿಸಿ ಕಟ್ಟಿದ ವೃತ್ತಿಗೆ ಈಗ ನಾವು ’ಯಾವ ಕೊಡುಗೆಯನ್ನೂ ನೀಡದವರು’ ಅದು ನಮ್ಮಿಂದ ತನ್ನನ್ನು ನಿವೃತ್ತಿಗೊಳಿಸಿಕೊಂಡಿದೆ. ಆಗ ಅರ್ಥವಾಗುತ್ತದೆ, ಬದುಕಲು ಇರುವ ಮುಖ್ಯ ಆಕರ್ಷಣೆ ಇವು ಯಾವುದೂ ಅಲ್ಲ, ನಾವು ಇನ್ಯಾರಿಗಾದರೂ ಬೇಕು ಎನ್ನುವುದು ಎಂದು. ಬದುಕು ಬೇಸತ್ತ ವೃದ್ಢನೊಬ್ಬ ತನ್ನ ಅಗತ್ಯ ಮತ್ತೊಬ್ಬರಿಗೆ ಇದೆ ಎನ್ನುವ ಕಾರಣಕ್ಕೆ ಬದುಕಿನತ್ತ ತಿರುಗುವ ಕಥೆ ಇದು.

ನಿರ್ದೇಶಕ Hannes Holm ಇದೇ ಹೆಸರಿನ ಪುಸ್ತಕವನ್ನಾಧರಿಸಿ ಚಿತ್ರ ಮಾಡಿದ್ದಾರೆ. ಇಡೀ ಚಿತ್ರವನ್ನು ಶಾಲ್ಮಲೆಯಂತೆ ಆವರಿಸಿರುವುದು ಊವೆ ಎನ್ನುವ ವೃದ್ಧನ ಒಂಟಿತನ, ಏಕಾಕಿತನ ಮತ್ತು ಇಳಿವಯಸ್ಸು ತರುವ ಅಸಹಾಯಕತೆ, ಸಿಡಿಮಿಡಿ, ಆತಂಕ. ಚಿತ್ರ ನೋಡುವಾಗ ಆ ಪಾತ್ರದಲ್ಲಿ ನಮ್ಮವರು ಯಾರೋ ಕಂಡರೆ ಅಚ್ಚರಿ ಬೇಡ. ಆ ಮಟ್ಟಿಗೆ ಆ ಪಾತ್ರ ಸಾರ್ವತ್ರಿಕ.

ಊವೆ ಸುಮಾರು 60 ವರ್ಷಗಳ ವೃದ್ಧ. ಕಿರಿಕಿರಿ, ಸಿಡಿಮಿಡಿ, ಹೊಸತನ್ನು ಕಂಡರೆ ಅಸಹನೆ, ಒಂದಿಷ್ಟು ನಿಯಮ ಮೀರಿದರೆ ಸಿಟ್ಟು. ಹಲವಾರು ಯುದ್ಧಗಳನ್ನು ಆತ ಏಕಾಂಗಿಯಾಗಿ ಎದುರಿಸುತ್ತಿದ್ದಾನೆ. ಆತನ ಹೆಂಡತಿ ಇತ್ತೀಚೆಗಷ್ಟೇ ತೀರಿಕೊಂಡಿದ್ದಾಳೆ. ಪ್ರತಿ ದಿನ ಅವಳ ಸಮಾಧಿಯ ಬಳಿ ಹೋಗಿ, ಅದನ್ನು ಸ್ವಚ್ಛ ಮಾಡಿ, ಅಲ್ಲಿ ಹೂವಿರಿಸಿ, ತನ್ನ ದೈನಂದಿನ ಬದುಕಿನ ಬಗ್ಗೆ ಹೇಳಿಕೊಳ್ಳುವುದು ಇವನ ದಿನಚರಿಯ ಒಂದು ಭಾಗ.

ಬೆಳಗ್ಗೆ ಹೊತ್ತು ಮೂಡುವುದರೊಂದಿಗೆ ಅವನ ದೈನಂದಿನ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಕಥೆ ನಡೆಯುವುದು ಸ್ವೀಡನ್ ನಲ್ಲಿ. ಅದೊಂದು ಕಾಲನಿಯಂತಹ ವಸತಿ ಸಮುಚ್ಛಯ. ನೀಟಾದ ರಸ್ತೆಗಳು, ಅಚ್ಚುಕಟ್ಟಾದ ಮನೆಗಳು. ಅದರ ಸುತ್ತ ಬೇಲಿ. ಗೇಟ್ ತೆಗೆದು ಒಳಗೆ ಬಂದ ತಕ್ಷಣ ಒಂದರ ಪಕ್ಕದಲ್ಲಿ ಒಂದರಂತೆ ಕಾರ್ ಗ್ಯಾರೇಜುಗಳು. ಎಲ್ಲರೂ ಗಾಡಿಗಳನ್ನು ಅಲ್ಲೇ ನಿಲ್ಲಿಸಬೇಕು. ಮನೆಗಳ ನಡುವೆ ಕಾರ್ ಗಳನ್ನು ತರುವಂತಿಲ್ಲ, ಅಲ್ಲಿ ಮಕ್ಕಳು, ಹಿರಿಯರು ಆರಾಮಾಗಿ ಓಡಾಡಿಕೊಳ್ಳಬೇಕು. ಅವುಗಳನ್ನು ತೋರಿಸುವ ಒಂದು ಏರಿಯಲ್ ಶಾಟ್ ತುಂಬಾ ಮುದ್ದಾಗಿ ಬಂದಿದೆ.

ಬೆಳಗ್ಗೆ ಈತ ತನ್ನ ಗಸ್ತು ತಿರುಗಲು ಹೊರಟರೆ, ತಪ್ಪು ತಪ್ಪಾಗಿ ಪಾರ್ಕ್ ಮಾಡಿದ ಕಾರ್ ಗಳ ರಿಜಿಸ್ಟರ್ ಸಂಖ್ಯೆ ಬರೆದುಕೊಳ್ಳುತ್ತಾನೆ, ದಾರಿಗಡ್ಡವಾಗಿ ಬಿದ್ದಿದ್ದ ಸೈಕಲ್ ಎತ್ತಿಡುತ್ತಾನೆ, ಯಾರೋ ಎಸೆದ ಸಿಗರೇಟು ತುಂಡುಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕುತ್ತಾನೆ, ಕಸ ವಿಂಗಡನೆಗಾಗಿ ಇಟ್ಟಿರುವ ಕಸದ ಬುಟ್ಟಿಗಳನ್ನು ಪರಿಶೀಲಿಸುತ್ತಾನೆ. ಒಟ್ಟಿನಲ್ಲಿ ಅವನು ರೀತಿ, ನೀತಿ, ನಿಯಮ ಮತ್ತು ವರ್ತನೆಯಾಗಿರುವ ಅಭ್ಯಾಸಗಳನ್ನು ಬಿಟ್ಟು ಒಂದು ಹೆಜ್ಜೆ ಆಚೀಚೆ ಇಡುವವನಲ್ಲ. ಯಾವ ಮಟ್ಟಿಗೆ ಎಂದರೆ ಕಾಂಪೌಂಡಿನಲ್ಲಿ ನಾಯಿ ಸಾಕಿರುವ ಒಬ್ಬಾಕೆಗೆ ’ಇನ್ನೊಂದು ಸಲ ಆ ನಾಯಿ ಬಂದು ನನ್ನ ಕಾಂಪೌಂಡಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ನೋಟೀಸ್ ಕೊಡ್ತೀನಿ’ ಎನ್ನುವಷ್ಟು, ಬೀದಿ ಬೆಕ್ಕಿಗೆ ’ನನ್ನ ಮನೆ ಹತ್ತಿರ ಬರುವ ಹಾಗಿಲ್ಲ, ಇದು ಖಾಸಗಿ ಆಸ್ತಿ’ ಎಂದು ಆವಾಜ್ ಹಾಕುವಷ್ಟು!

ಈ ಚಿತ್ರದ ಏರಿಯಲ್ ಶಾಟ್ ಗಳ ಬಗ್ಗೆ ಬರೆದಿದ್ದೆ. ಮುಂದಿನ ದೃಶ್ಯದಲ್ಲಿ ಅಂತಹದೇ ಇನ್ನೊಂದು ಶಾಟ್ ಇದೆ. ಸಾಲಾಗಿ ಹೋಗುವ ಕಾರುಗಳು, ಅವುಗಳ ನಡುವೆ ಇವನ ಕಾರು ಮಾತ್ರ ಬೇರೆ ದಾರಿ ಹಿಡಿದು ಹೋಗುತ್ತದೆ. ಅಂತಹ ಮತ್ತೊಂದು ದೃಶ್ಯ ಇವನು ಹೆಂಡತಿಯ ಸಮಾಧಿಯ ಪಕ್ಕ ಕುಳಿತು ಅವಳಿಗೆ ತನ್ನ ದೈನಂದಿನ ಬದುಕಿನ ಕಷ್ಟ ಸುಖಗಳನ್ನು ಹೇಳಿಕೊಳ್ಳುವುದು. ಕಥೆಯ ಒಳಗೆ ನಾವಿರುವಾಗಲೇ ನಮ್ಮನ್ನು ಕಥೆಯ ಆಚೆಗೆ ಒಂದು ಕ್ಷಣ ಕರೆದುಕೊಂಡು ಹೋಗಿ ದೃಶ್ಯದ ಪೂರ್ಣ ವಿವರ ಕೊಡುವ ತಂತ್ರ ವಿನೂತನ ಅನ್ನಿಸುತ್ತದೆ.

ತಂತ್ರದ ವಿಷಯ ಹೇಳುವುದಾದರೆ ಈ ಕಥೆಯಲ್ಲಿ ಬಳಸಿರುವ ಫ್ಲಾಷ್ ಬ್ಯಾಕ್ ಬಗ್ಗೆ ಸಹ ಹೇಳಬೇಕು. ಮುದುಕನ ಈಗಿನ ನಡವಳಿಕೆ ಅವನ ಬದುಕು ಅವನಿಗಿತ್ತ ಎಲ್ಲವುಗಳ ಫಲಿತಾಂಶ. ಆದರೆ ಬದುಕು ಅವನಿಗಿತ್ತದ್ದೇನು ಎನ್ನುವುದನ್ನು ತುಣುಕು ತುಣುಕಾಗಿ ಸಿನಿಮಾ ಕಟ್ಟಿಕೊಡುತ್ತದೆ. ಹೀಗೆ ಅವುಗಳನ್ನು ಬಿಡಿಬಿಡಿಯಾಗಿ ಹೇಳುವ ಮೂಲಕ ಚಿತ್ರ ಮೆಲೋಡ್ರಾಮ ಆಗುವ ಅಪಾಯ ತಪ್ಪಿಸಿ ಅದನ್ನೊಂದು ನಿರ್ಲಿಪ್ತ ನಿರೂಪಣೆಯಾಗಿಸಿರುವುದು ನಿರ್ದೇಶಕರ ಜಾಣ್ಮೆ, ಇಲ್ಲದಿದ್ದರೆ ಇದೂ ಸಹ ಹತ್ತರೊಳಗೊಂದು ಚಿತ್ರವಾಗಿ ಬಿಡುತ್ತಿತ್ತು.

ಎಂದಿನಂತೆ ಒಂದು ದಿನ ಆತ ಆಫೀಸಿಗೆ ಹೋಗುತ್ತಾನೆ. ಮ್ಯಾನೇಜ್ಮೆಂಟ್ ಸುತ್ತಿ ಬಳಸಿ ಆತ ಇನ್ನು ಸಂಸ್ಥೆಗೆ ಅಗತ್ಯವಿಲ್ಲ ಎಂದು ಹೇಳುತ್ತದೆ. ಅವನು ನೆಟ್ಟಗೆ ಹೊರಗೆ ಬರುತ್ತಾನೆ. ತಾನು ಯಾರಿಗೂ ಬೇಡ ಎನ್ನುವ ಭಾವ ಹುಟ್ಟಿಸುವ ಅನಾಥಪ್ರಜ್ಞೆ ಅಂಥಿಂಥದ್ದಲ್ಲ. ಅಂದು ಹೆಂಡತಿಯ ಸಮಾಧಿಯ ಬಳಿಗೆ ಹೋದವನಲ್ಲಿ ಒಂದು ನಿರ್ಧಾರ, ’ನಾನು ಬೇಗನೆ ಬಂದು ನಿನ್ನನ್ನು ಸೇರಿಕೊಳ್ಳುತ್ತೇನೆ’ ಎಂದು ಅವಳಿಗೆ ಹೇಳುತ್ತಾನೆ. ಅವನು ಎಷ್ಟು ನಿಯಮವಾಸಿ ಎಂದರೆ ಮನೆಯ ಫೋನ್ ಕನೆಕ್ಷನ್ ಕ್ಯಾನ್ಸಲ್ ಮಾಡುತ್ತಾನೆ, ಅಚ್ಚುಕಟ್ಟಾಗಿ ಶೇವ್ ಮಾಡಿ, ಸ್ನಾನ ಮಾಡಿ, ಆಫ್ಟರ್ ಶೇವ್ ಲೋಶನ್ ಹಚ್ಚಿಕೊಂಡು, ಸೂಟ್ ಹಾಕಿ, ಟೈ ಕಟ್ಟಿಕೊಂಡು, ಹೆಂಡತಿಯ ಫೋಟೋ ಮೇಲೆ ನವಿರಾಗಿ ಕೈ ಆಡಿಸಿ, ನೇಣು ಹಾಕಿಕೊಳ್ಳಲು ತಯಾರಾಗುತ್ತಾನೆ.

ಅವನ ಪ್ರಶಾಂತ ವಾತಾವರಣದಲ್ಲಿ ಸಣ್ಣದಾಗಿ ಶುರುವಾದ ಕಂಪನ ದೊಡ್ಡ ಸದ್ದಾಗಿ ಪರಿವರ್ತನೆ ಆಗುತ್ತದೆ. ಮನೆಗಳ ನಡುವೆ ಯಾರೋ ಕಾರ್ ಓಡಿಸಿಕೊಂಡು ಬರುತ್ತಿದ್ದಾರೆ! ನೇಣು ಹಾಕಿಕೊಳ್ಳುವ ಕೆಲಸ ಬಿಟ್ಟು, ಕಾನೂನು ಮುರಿದವರನ್ನು ಸರಿಯಾಗಿ ದಬಾಯಿಸಲು ಆತ ಓಡುತ್ತಾನೆ! ಅಲ್ಲಿ ಒಬ್ಬ ಕಾರ್ ಚಾಲಕ ರಿವರ್ಸ್ ತೆಗೆದುಕೊಳ್ಳಲು ಪರದಾಡುತ್ತಿರುತ್ತಾನೆ. ಅವನ ಹೆಂಡತಿ ಊವೆ ಗೆ ತಿಳಿಯದ ಭಾಷೆಯಲ್ಲಿ ಜೋರಾಗಿ ಕೈ ಆಡಿಸುತ್ತಾ ಅವನಿಗೆ ನಿರ್ದೇಶನ ಮಾಡುತ್ತಿರುತ್ತಾಳೆ. ಅವಳೇನನ್ನುತ್ತಿದ್ದಾಳೆ ಎಂದು ಚಾಲಕನನ್ನು ಕೇಳಿದರೆ ಅವನು, ’ನಂಗೊತ್ತಿಲ್ಲ, ಅದು ಪರ್ಶಿಯನ್’ ಅನ್ನುತ್ತಾನೆ! ಅದು ಹೋಗಲಿ ಎಂದರೆ ಆ ಹೆಂಡತಿಗೆ ಡ್ರೈವಿಂಗ್ ನ ಗಂಧಗಾಳಿಯ ಸುಳಿವಿಲ್ಲ! ಇಡೀ ಸನ್ನಿವೇಶ ಒಂದು ಅಸಂಗತ ಪ್ರಸಂಗದಂತೆ ಕಾಣತೊಡಗುತ್ತದೆ. ಕಡೆಗೆ ಊವೆ ತಾನೆ ಸರಿಯಾಗಿ ಗಾಡಿ ನಿಲ್ಲಿಸಬೇಕಾಗುತ್ತದೆ.

ಆ ಕುಟುಂಬ ಇವನ ಪಕ್ಕದ ಮನೆಗೆ ವಾಸಕ್ಕೆ ಬಂದಿರುತ್ತದೆ. ಗಂಡ, ಗರ್ಭಿಣಿ ಹೆಂಡತಿ, ಇಬ್ಬರು ಹೆಣ್ಣುಮಕ್ಕಳು. ಗಂಡ ಇಲ್ಲಿಯವನು, ಒಂದು ರೀತಿಯ ಆಲಸಿ. ಅವನು ಕೈಲಾಗದ ಮುಟ್ಠಾಳ ಎಂದು ಊವೆ ಮೊದಲ ಭೇಟಿಯಲ್ಲೇ ನಿರ್ಧರಿಸಿಬಿಡುತ್ತಾನೆ. ಆ ಮನೆಯ ಚುಕ್ಕಾಣಿ ಹಿಡಿದಿರುವವಳು ಹೆಂಡತಿ ಪರ್ವಾನೆ. ಅವಳ ಮುಖದ ಮೇಲಿಂದ ನಗು ಮಾಸುವುದಿಲ್ಲ, ಸುಲಭಕ್ಕೆ ಅವಳನ್ನು ಯಾರೂ ಜೋರು ಮಾಡಿ ಹೆದರಿಸಲಾಗುವುದಿಲ್ಲ. ಊವೆಯ ಆಕಾರದ ಅರ್ಧದಷ್ಟಿರುವ ಹೆಣ್ಣು ಅವನ ಕೂಗಾಟ, ಆಟಾಟೋಪಗಳಿಗೆ ಒಂದಿಷ್ಟೂ ಹೆದರದೆ ಅವನ ಪರಿಧಿಯೊಳಗೆ ಕಾಲಿಟ್ಟೇ ಬಿಡುತ್ತಾಳೆ.

ಆಗಿನಿಂದ ಅವನು ಆತ್ಮಹತ್ಯೆಗೆ ಪ್ರಯತ್ನಿಸಿದಾಗಲೆಲ್ಲಾ ಇವಳು ಅಥವಾ ಮತ್ಯಾರೋ ಅವನ ಪ್ರಯತ್ನಕ್ಕೆ ಅಡ್ಡಿ ಆಗುತ್ತಲೇ ಇರುತ್ತಾರೆ. ಆದರೆ ಅದು ಎಲ್ಲೂ ಬಲವಂತಕ್ಕೆ ತುರುಕಿದಂತೆ ಕಾಣದೆ ಕಥೆಯ ನಡುವೆ ಸಹಜವಾಗಿ ಒಡಮೂಡಿದೆ. ಅವನು ಪ್ರತಿಸಲ ಸಾವಿನ ಪ್ರಯತ್ನ ಮಾಡಿದಾಗಲೂ ಅವನ ಗತ ಬದುಕು ಸ್ವಲ್ಪ ಸ್ವಲ್ಪವಾಗಿ ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಅವನು ಪುಟ್ಟ ಬಾಲಕನಾಗಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಅದು ಅವನ ಜೀವನದ ಮೊದಲ ಹೊಡೆತ. ಅವನ ಮಟ್ಟಿಗೆ ಅಪ್ಪನೇ ಸರ್ವಸ್ವ. ಸರಿ ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವುದನ್ನು ಅವನಿಗೆ ಹೇಳಿಕೊಡುವುದು ಅವನ ಅಪ್ಪ. ಅಪ್ಪನಿಗೆ ಭಾವನೆಗಳನ್ನು ತೋರ್ಪಡಿಸಿ ಅಭ್ಯಾಸವಿಲ್ಲ, ಅದೇ ಗುಣ ಮಗನಲ್ಲೂ ಬರುತ್ತದೆ. ಅಪ್ಪ ’ಸಾಬ್’ ಕಂಪನಿ ಕಾರುಗಳ ಕಟ್ಟಾ ಅಭಿಮಾನಿ. ಬಾಲ್ಯದಲ್ಲೇ ಅಪ್ಪ ಹೇಳಿಕೊಟ್ಟ ಎನ್ನುವ ಒಂದೇ ಕಾರಣಕ್ಕೆ ಅವನು ಆ ಕಂಪನಿ ಕಾರ್ ಗಳನ್ನು ಬಿಟ್ಟು ಬೇರೆ ಕಾರ್ ಕೊಳ್ಳುವವರ ಜೊತೆ ಸ್ನೇಹವನ್ನೂ ಉಳಿಸಿಕೊಳ್ಳಲಾರ!

ಇವನು ಬೆಳೆದು ದೊಡ್ಡವನಾಗುತ್ತಾನೆ. ಆಗಷ್ಟೇ ಅವನ ಕಾಲೇಜಿನ ಫಲಿತಾಂಶ ಬಂದಿರುತ್ತದೆ. ಅದನ್ನು ಕೈಲಿ ಹಿಡಿದುಕೊಂಡು ಅಪ್ಪ ಕೆಲಸ ಮಾಡುವ ರೈಲ್ವೇ ಟ್ರಾಕಿಗೆ ಓಡುತ್ತಾನೆ. ಅಪ್ಪನಿಗೆ ಇನ್ನಿಲ್ಲದ ಹಿಗ್ಗು, ಎಲ್ಲರಿಗೂ ಅದನ್ನು ತೋರಿಸುತ್ತಾ ತಿರುಗಾಡುವಾಗ ಅವನನ್ನು ಒಂದು ಟ್ರೇನು ಅಪ್ಪಳಿಸುತ್ತದೆ. ಸಂತಸದಲ್ಲಿದ್ದ ಹುಡುಗನಿಗೆ ಇದು ಇನ್ನೊಂದು ಆಘಾತ. ಅಪ್ಪನ ಕೆಲಸ ಇವನಿಗೆ ಸಿಗುತ್ತದೆ.

ವಸತಿ ಸಮುಚ್ಛಯ ಕಟ್ಟಲು ಇವನ ಮನೆಯನ್ನು ವಶ ಪಡಿಸಿಕೊಳ್ಳಲಾಗುತ್ತದೆ. ಕಂಗಾಲಾಗಿ ಸಿಕ್ಕ ರೈಲೇರಿ ಕುಳಿತ ತರುಣ ಕಣ್ಣು ಬಿಟ್ಟಾಗ ರೈಲು ಚಲಿಸುತ್ತಿರುತ್ತದೆ, ಕಣ್ಣೆದುರಲ್ಲಿ ಕೆಂಪು ಬಣ್ಣದ ಶೂಗಳಲ್ಲಿ ಬಂಧಿಯಾದ ಎರಡು ಸಿರಿಪಾದಗಳು. ಆಕೆ ಸೋಂಜಾ. ಇವನ ಬದುಕಿನ ಮೊದಲ ಮತ್ತು ಒಂದೇ ಒಂದು ಪ್ರೀತಿ. ’ಸೋಂಜಾ ಬರುವ ಮೊದಲು ಏನೂ ಇರಲಿಲ್ಲ, ಸೋಂಜಾ ಹೋದ ನಂತರ ಏನೂ ಉಳಿದಿಲ್ಲ’ ಇದು ಆತ ಹೆಂಡತಿಯ ಬಗ್ಗೆ ಹೇಳುವ ಮಾತು. ಆಕೆ ಇವನನ್ನು ಇಂಜಿನಿಯರ್ ಆಗಲು ಪ್ರೇರೇಪಿಸುತ್ತಾಳೆ, ಇವನ ಪ್ರೇಮಿಯಾಗುತ್ತಾಳೆ, ಮಡದಿಯಾಗುತ್ತಾಳೆ, ಇವನ ಪ್ರಪಂಚವೇ ಆಗುತ್ತಾಳೆ. ಅವಳು ಬಿಟ್ಟು ಹೋದ ಬದುಕು ಇವನನ್ನು ಹಣ್ಣು ಮಾಡಿ ಹಾಕಿರುತ್ತದೆ. ಹಾಗಾಗಿ ಇವನಿಗೆ ಸಾವಿನ ಹಂಬಲ.

ಈ ನಡುವೆ ನೆರೆಮನೆಯಾತ ಏಣಿಯಿಂದ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಕಾರ್ ನಲ್ಲಿ ಕೂತು ಸಾಯುವ ಪ್ರಯತ್ನದಲ್ಲಿದ್ದ ಊವೆಯನ್ನು ಪರ್ವಾನೆ ಜೋರು ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಮಕ್ಕಳನ್ನು ಇವನ ಬಳಿ ಬಿಟ್ಟು ಗಂಡನನ್ನು ನೋಡಲು ಹೋಗುತ್ತಾಳೆ. ಊವೆ ಅಲ್ಲಿದ್ದ ಪುಸ್ತಕದಿಂದ ಕಥೆಯೊಂದನ್ನು ಮಕ್ಕಳಿಗೆ ಓದುತ್ತಾನೆ. ಮೊಟ್ಟ ಮೊದಲ ಬಾರಿಗೆ ಅವನ ಮುಖ ಬಿಗಿ ಕಳೆದುಕೊಳ್ಳುತ್ತದೆ. ಆನಂತರ ಮನೆಗೆ ಹೋಗುವಾಗ ಮಕ್ಕಳು ಅವನನ್ನು ಅಪ್ಪಿ, ಟಾಟಾ ಮಾಡುತ್ತವೆ. ಜನರ ನಿರ್ಲಿಪ್ತತೆ, ಕ್ರೌರ್ಯ, ಲೇವಡಿ ಎಲ್ಲವನ್ನೂ ತೆಗೆದುಕೊಳ್ಳಬಲ್ಲ ಊವೆಗೆ ಪ್ರೀತಿಯನ್ನು ಹೇಗೆ ಸಂಭಾಳಿಸುವುದು ಬರುವುದೇ ಇಲ್ಲ. ಮಕ್ಕಳು ಅಪ್ಪಿಕೊಂಡಾಗ ಅವನು ಕಂಗಾಲಾಗುವುದನ್ನು ನೋಡಿದರೆ ನಗು ಬರುವುದಿಲ್ಲ, ನಮ್ಮೊಳಗೆ ವಿಷಾದದ ಶಾಲ್ಮಲೆ ಹರಿಯುತ್ತಾಳೆ.

ತನ್ನ ಮಕ್ಕಳು ಮಾಡಿರುವ ಪೇಂಟಿಂಗ್ ಅನ್ನು ಪರ್ವಾನೆ ಇವನಿಗೆ ತೋರಿಸುತ್ತಾಳೆ, ಅದರಲ್ಲಿ ಇವನೂ ಅವರ ಕುಟುಂಬದ ಭಾಗವಾಗಿರುತ್ತಾನೆ. ಅಷ್ಟರಲ್ಲಿ ಅಲ್ಲಿ ಒಂದು ಬೇವಾರಸು ಬೆಕ್ಕು ಚಳಿಯಲ್ಲಿ ನಡುಗುತ್ತಿರುವುದನ್ನು ನೋಡಿ ಪರ್ವಾನೆ ಅದನ್ನು ಇವನ ಮನೆಗೆ ತಲುಪಿಸುತ್ತಾಳೆ. ಇವನ ’ಆ’ ’ಊ’ ಗೆ ಅವಳು ಕ್ಯಾರೆ ಅನ್ನುವುದಿಲ್ಲ! ಸರಿ ಆ ಬೆಕ್ಕನ್ನೂ ಎತ್ತಿಕೊಂಡು ಇವನು ಹೆಂಡತಿಯ ಸಮಾಧಿ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಳ್ಳುತ್ತಾನೆ. ಇದಕ್ಕೊಂದು ವ್ಯವಸ್ಥೆ ಮಾಡಿ ಬಂದು ಬಿಡುತೀನಿ ಎಂದು ಗಡುವು ಕೇಳುತ್ತಾನೆ.

ಬದುಕು ಸದಾ ಜೀವನ್ಮುಖಿಯಾಗಿಯೇ ಇರುತ್ತದೆ. ಸಾಯಲು ಸಿದ್ಧವಾದ ಮನಸ್ಸೂ ಸಹ ಬದುಕಿಗೆ ಅಂಟಿಕೊಳ್ಳಲು ಕಾರಣ ಹುಡುಕುತ್ತಿರುತ್ತದೆ. ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ, ಊವೆ ಪರ್ವಾನೆಗೆ ಕಾರು ಓಡಿಸುವುದು ಕಲಿಸುತ್ತಿರುತ್ತಾನೆ. ಅವಳು ಹೆದರಿದಾಗ ಅವನು ಅವಳಿಗೆ ಧೈರ್ಯ ತುಂಬುವ ರೀತಿ ನೋಡಬೇಕು, ’ದೇಶ ಬಿಟ್ಟು ಬಂದಿರುವೆ, ಹೊಸ ಭಾಷೆ ಕಲಿತಿರುವೆ, ಮುಟ್ಠಾಳನೊಬ್ಬನನ್ನು ಮದುವೆಯಾಗಿ ಹೆದರದೆ ಸಂಸಾರ ಮಾಡುತ್ತಿರುವೆ, ಇಬ್ಬರು ಮಕ್ಕಳಾಗಿದ್ದಾರೆ, ಇನ್ನೊಂದು ಮಗು ಆಗುತ್ತಿದೆ. ಇಷ್ಟೆಲ್ಲಾ ಸಾಧಿಸಿದವಳು ಡ್ರೈವಿಂಗ್ ಗೆ ಹೆದರುವೆಯಾ’ ಎಂದು ಕೇಳುತ್ತಾನೆ. ಎಲ್ಲೋ ಒಂದು ಕಡೆ ಇದು ಆತ ತನಗೂ ಹೇಳಿಕೊಳ್ಳುವ ಮಾತೇನೋ ಅನ್ನಿಸಿಬಿಡುತ್ತದೆ.

ಪರ್ವಾನೆ ಅವನಿಗೆ ಮಗಳಾಗುತ್ತಾ ಹೋಗುತ್ತಾಳೆ. ಈಗ ಅವನ ಫ್ಲಾಷ್ ಬ್ಯಾಕ್ ಗಳು ಅವನ ಸಾವಿನ ಪ್ರಯತ್ನಕ್ಕಾಗಿ ಕಾಯುವುದಿಲ್ಲ. ಸಹಜವಾಗಿ ಬರುತ್ತವೆ. ಈಗೀಗ ಮಲಗುವಾಗ ಅವನು ಬೆಕ್ಕಿನ ಸ್ಪರ್ಶದಲ್ಲಿ ಜೀವನವನ್ನು ಕಂಡುಕೊಳ್ಳುತ್ತಾನೆ. ಬಹಳಷ್ಟು ಸಲ ಒಂಟಿಯಾಗಿರುವವರು ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನು ಸಾಕುವುದು ಬೇಸರಕ್ಕಾಗಿಯೋ ಒಂಟಿತನಕ್ಕಾಗಿಯೋ ಅಲ್ಲ, ತಾವು ಮತ್ತೊಬ್ಬರಿಗೆ ’ಅಗತ್ಯ’ವಾಗಿರಬೇಕು ಎನ್ನುವುದಕ್ಕೆ. ಬದುಕಲು ಅದೊಂದು ದೊಡ್ಡ ಕಾರಣ.

ಆ ವಸತಿ ಸಮುಚ್ಛಯದ ಸಂಘಕ್ಕೆ ಇವನು ಅಧ್ಯಕ್ಷನಾಗಿರುತ್ತಾನೆ. ಒಮ್ಮೆ ಇದ್ದಕ್ಕಿದ್ದಂತೆ ಇವನ ಗೆಳೆಯ ತಾನು ಅಧ್ಯಕ್ಷನಾಗುವುದರೊಂದಿಗೆ ಅವನೊಂದಿಗೆ ಇವನ ಸ್ನೇಹ ಮುರಿದಿರುತ್ತದೆ. ಈಗ ಆತ ದೇಹದ ಸ್ವಾಧೀನ ಕಳೆದುಕೊಂಡು ವೀಲ್ ಚೇರಿನಲ್ಲಿ ದಿನ ಕಳೆಯುತ್ತಿರುತ್ತಾನೆ. ಆತನ ಹೆಂಡತಿ ಅವನನ್ನು ನೋಡಿಕೊಳ್ಳುತ್ತಿರುತ್ತಾಳೆ. ಅವನನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿಕೊಳ್ಳಲು ಒಂದು ಸಂಸ್ಥೆ ಪ್ರಯತ್ನಿಸುತ್ತಿರುತ್ತದೆ. ಆ ಸಂಸ್ಥೆಯ ಪ್ರತಿನಿಧಿ ಬಂದಾಗ ಅವನೊಂದಿಗೆ ಊವೆ ಜಗಳವಾಡುತ್ತಾನೆ. ಸಿಟ್ಟಿನಿಂದ ಬಂದವನು ಮನೆ ಬಾಗಿಲು ಹಾಕಿಕೊಂಡು ಶತಪಥ ತಿರುಗುತ್ತಿರುತ್ತಾನೆ. ಅವನ ಹಿಂದೆಯೇ ಓಡಿಬಂದ ಪರ್ವಾನೆ ಆತಂಕದಲ್ಲಿ ’ಏನಾಯಿತು, ಹುಷಾರಾಗಿರುವೆಯಾ’ ಎಂದು ಕೇಳುತ್ತಾಳೆ. ಆಗ ಮೊದಲ ಬಾರಿ ಅವನು ಅಳತೊಡಗುತ್ತಾನೆ.

ಚಿತ್ರದಲ್ಲಿ ಪ್ರತಿ ದಿನ ಬೆಳಗ್ಗೆದ್ದು ಅವನು ಗಸ್ತು ಹಾಕುವ ದೃಶ್ಯವನ್ನು ಪುನರಾವರ್ತನೆ ಮಾಡಲಾಗುತ್ತದೆ. ಅವನಲ್ಲಾಗಿರುವ ಬದಲಾವಣೆಯನ್ನು ಅದರ ಮೂಲಕ ತೋರಿಸಲಾಗುತ್ತದೆ. ಚಿತ್ರ ಶುರುವಾದಾಗ ಗಂಟು ಮುಖ ಹೊತ್ತು, ಒಬ್ಬಂಟಿಯಾಗಿ ತಿರುಗುವ ಊವೆ ನಂತರ ಗಸ್ತು ಹೋಗುವಾಗ ಅದೇ ಒಂದು ಮೆರವಣಿಗೆ! ಒಂಟಿಯಾಗಿದ್ದ ಅವನ ಬದುಕಿನಲ್ಲಿ ಬೆಕ್ಕನ್ನೂ ಸೇರಿ ಈಗ ಹಲವಾರು ಸ್ನೇಹಿತರು.

ಸದಾ ಅವನ ಅರಿವಿನ ಭಾಗವಾಗಿ ತಾನೇತಾನಾಗಿ ಬರುವ ಅವನ ಗತಜೀವನವನ್ನು ಮೊದಲ ಸಲ ಆತ ಪರ್ವಾನೆಯೊಡನೆ ಮಾತುಗಳಲ್ಲಿ ಹಂಚಿಕೊಳ್ಳುತ್ತಾನೆ. ಇದು ಅವರಿಬ್ಬರೂ ಕ್ರಮಿಸಿದ ದೂರವನ್ನು ಹೇಳುತ್ತದೆ. ಮದುವೆಯಾಗಿ ಎಷ್ಟೋ ದಿನಗಳ ನಂತರ ಹೆಂಡತಿ ಗರ್ಭಿಣಿ ಆಗುತ್ತಾಳೆ. ಗಂಡ ಹೆಂಡತಿ ಪ್ರವಾಸಕ್ಕೆ ಹೋಗುತ್ತಾರೆ. ಬಸ್ ನಲ್ಲಿ ಬರುವಾಗ ಮಗು ಹೊಟ್ಟೆಯನ್ನು ಒದೆಯುತ್ತಿರುವುದನ್ನು ಹೆಂಡತಿ ತೋರಿಸುತ್ತಾಳೆ. ಆ ಸ್ಪರ್ಶ ಅವನನ್ನು ವಿಪರೀತ ಭಾವುಕನನ್ನಾಗಿಸಿಬಿಡುತ್ತದೆ. ಎದ್ದು ಬಾತ್ ರೂಮಿಗೆ ಹೋಗುತ್ತಾನೆ. ಅದೇ ಸಮಯದಲ್ಲಿ ಬಸ್ ಅಪಘಾತ ಆಗುತ್ತದೆ. ಹೆಂಡತಿ ಕೋಮಾಗೆ ಹೋಗುತ್ತಾಳೆ.

ವೈದ್ಯರೆಲ್ಲಾ ಅವಳ ಆಸೆಯನ್ನು ಬಿಟ್ಟಿರುತ್ತಾರೆ. ಆದರೆ ಅವನು ಬಿಡುವುದಿಲ್ಲ. ಅವಳನ್ನು ಬದುಕಿಗೆ ಎಳೆದುತರುತ್ತಾನೆ. ಆದರೆ ಮಗು ಹೊಟ್ಟೆಯಲ್ಲೇ ಸತ್ತಿರುತ್ತದೆ, ಜೊತೆಗೆ ಅವಳು ಕಾಲುಗಳನ್ನು ಕಳೆದುಕೊಂಡಿರುತ್ತಾಳೆ. ಅವಳನ್ನು ಆತ ಜೀವದಂತೆ ಜೋಪಾನ ಮಾಡುತ್ತಾನೆ. ಕಾಲು ಕಳೆದುಕೊಂಡ ಅವಳಿಗೆ ಎಲ್ಲೂ ಕೆಲಸ ಸಿಗದಾಗ ಮಳೆಸುರಿವ ರಾತ್ರಿಯಲ್ಲಿ ಶಾಲೆಗೆ ಅಟ್ಟಣಿಗೆ ಕಟ್ಟಿ ಅವಳ ವೀಲ್ ಚೇರ್ ಹೋಗಲು ಅಣಿಯಾಗಿಸುತ್ತಾನೆ. ಹೀಗೆ ಒಬ್ಬರಿನ್ನೊಬ್ಬರಿಗೆ ಆಸರೆಯಾಗಿ, ಅಗತ್ಯವಾಗಿ, ಕಾರಣವಾಗಿ ಬದುಕಿದ್ದ ಅವರನ್ನು ಕ್ಯಾನ್ಸರ್ ಬೇರ್ಪಡಿಸಿಬಿಟ್ಟಿರುತ್ತದೆ. ಆತ ಎಲ್ಲವನ್ನೂ ಪರ್ವಾನೆಗೆ ಹೇಳುತ್ತಾ ಹೋಗುತ್ತಾನೆ. ಅವಳು ಮೌನವಾಗಿ ಆತನ ಕೈ ಹಿಡಿದುಕೊಳ್ಳುತ್ತಾಳೆ

ಹೀಗೆ ಪರಸ್ಪರ ಜಗಳವಾಡುತ್ತಾ ಪರಿಚಯವಾದ ಅವರ ನಡುವೆ ಒಂದು ಬಾಂಧವ್ಯ, ಒಂದು ಬಂಧ ಹೆಣೆದುಕೊಳ್ಳುತ್ತದೆ. ಪರ್ವಾನೆ, ಅವಳ ಮಕ್ಕಳು, ಆ ಬೆಕ್ಕು, ಅವನ ಮನೆಗೆ ಆಶ್ರಯ ಕೇಳಿ ಬರುವ ಒಬ್ಬ ನಿರಾಶ್ರಿತ ಎಲ್ಲರೂ ಅವನ ಬದುಕಿಗೆ ಕಾರಣಗಳಾಗುತ್ತಾ ಹೋಗುತ್ತಾರೆ. ’ಎಲ್ಲವನ್ನೂ ಇನ್ನೊಬ್ಬರ ಸಹಾಯವಿಲ್ಲದೆ ಮಾಡಿಕೊಳ್ಳುತ್ತೇವೆ ಎನ್ನುವುದು ತಪ್ಪು ಕಲ್ಪನೆ ಊವೆ, ಅದು ಯಾರಿಂದಲೂ ಆಗುವುದಿಲ್ಲ, ನಿನ್ನಿಂದಲೂ. ಬದುಕಲು ಜನ ಬೇಕು’ ಎನ್ನುವ ಪರ್ವಾನೆಯ ಮಾತಿನಲ್ಲಿ ಚಿತ್ರದ ಕಥೆ ಇದೆ.

ಕಥೆಯನ್ನು ಹಾಸ್ಯಮಿಶ್ರಿತವಾಗಿ ಹೇಳುವುದರ ಮೂಲಕವೇ ನಿರ್ದೇಶಕರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿದ್ದಾರೆ. ಇಲ್ಲಿನ ಹಾಸ್ಯ ಜೋರು ದನಿಯದಲ್ಲ, ’ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿದೋಣಿ’ಯಂತಹುದು. ಆ ಕಾರಣದಿಂದಲೇ ಚಿತ್ರ ನಮ್ಮನ್ನು ಹೆಚ್ಚು ಕಾಡುತ್ತದೆ.

‍ಲೇಖಕರು avadhi

27 May, 2017

13 Comments

  1. Ravi Kulkarni

    Ultimate Review..

    • ಸಂಧ್ಯಾರಾಣಿ

      🙂 ಅಕ್ಕನ ಬರಹ ಅಂದ್ರೆ ಪ್ರೀತಿ ನಿನಗೆ. ಥ್ಯಾಂಕ್ಸ್ ಕಣೋ

  2. ಭಾರತಿ ಬಿ ವಿ

    ನೋಡಲೇಬೇಕಾದ ಸಿನೆಮಾಗಳ ಪಟ್ಟಿ ಉದ್ದವಾಗುತ್ತಿದೆ … ತುಂಬ ಸುಂದರ ಬರಹ

    • ಸಂಧ್ಯಾರಾಣಿ

      ಥ್ಯಾಂಕ್ಸ್ 🙂 ಏಕಾಕಿತನದ ಬಗ್ಗೆ ಎಷ್ಟೊಳ್ಳೆ ಚಿತ್ರ ಇದು…

  3. ದ್ಯಾವನೂರು ಮಂಜುನಾಥ್

    ಸಿನಿಮಾದ ವಿಮರ್ಶೆ ತುಂಬಾ ಚನ್ನಾಗಿದೆ.

    ’ಸೋಂಜಾ ಬರುವ ಮೊದಲು ಏನೂ ಇರಲಿಲ್ಲ, ಸೋಂಜಾ ಹೋದ ನಂತರ ಏನೂ ಉಳಿದಿಲ್ಲ’
    ಮಾತು ತುಂಬಾ ಇಷ್ಟವಾಯಿತು

    • ಸಂಧ್ಯಾರಾಣಿ

      thanks ಮಂಜುನಾಥ್. ಆ ಸಾಲು ನನ್ನನ್ನೂ ತುಂಬಾ ಕಾಡಿತು. ಅದು ಕೇವಲ ಭಾವಾತಿರೇಕದ ಮಾತಾಗದಂತೆ ಚಿತ್ರ ಮೂಡಿಬಂದಿದೆ. ಚಿತ್ರ ನೋಡಿ ನೀವು.

  4. Kantharaj Raj

    This Review created much interest in me….wants to see this film….Nice and Superrrrrrr story…..

  5. ಸಂಗಮೇಶ ಡಿಗ್ಗಿ ಸಂಗಾಮಿತ್ರ

    ಕನ್ನಡ ಸಿನೆಮಾಗಳು ನಿಮ್ಮ ಪ್ರಕಾರ ನೋಡತಕ್ಕ ಸಿನೆಮಾಗಳಲ್ಲವೇ?
    ಎರಡು ವರ್ಷದಿಂದ ಅವಧಿಯನ್ನು ಗಮನಿಸುತ್ತಾ ಬಂದಿದೇನೆ. ಇತ್ತಿಚೇಗೆ ಅವಧಿ ಇಲ್ಲಿಯದನ್ನು ಬಿಟ್ಟು ಹೊರದೇಶದ, ಹಾಗೂ ಹೈಪೈ ಜೀವನವನ್ನೇ ಉಲ್ಲೇಖಿಸುತ್ತಾ ಬರುತ್ತಿದೆ.

    • Avadhi

      ಎರಡು ವರ್ಷದಿಂದ ‘ಅವಧಿ’ ಓದುತ್ತಿರುವುದಕ್ಕೆ ಮೊದಲು ವಂದನೆಗಳು
      ಎರಡು ವರ್ಷದಿಂದಲೂ ‘ಅವಧಿ’ ಓದುತ್ತಿದ್ದರೂ ‘ಅವಧಿ’ ಏನು ಎಂದು ಗೊತ್ತಾಗದಿರುವುದು ವಿಷಾದ

    • ಸಂಧ್ಯಾರಾಣಿ

      ಮೊದಲನೆಯದಾಗಿ ಈ ಅಂಕಣ ಇರುವುದು ನನಗೆ ಇಷ್ಟವಾದ ಚಲನಚಿತ್ರಗಳ ಬಗ್ಗೆ. ಅವುಗಳ ಬಗ್ಗೆ ನಾನು ಬರೆಯುತ್ತಿದ್ದೇನೆ. ಕನ್ನಡದ ಬದುಕು ಎಂದರೆ, ಕನ್ನಡದ ಬಗ್ಗೆ ಪ್ರೀತಿ ಎಂದರೆ ಕನ್ನಡ ಚಲನಚಿತ್ರಗಳನ್ನು ಪ್ರೀತಿಸುವುದು ಮಾತ್ರ ಎಂದು ನಾನು ಎಂದೂ ಅಂದುಕೊಂಡಿಲ್ಲ. ಪ್ರಪಂಚದ ಯಾವುದೇ ಭಾಷೆಯ ಒಳ್ಳೆಯ ಚಿತ್ರವನ್ನು ನೋಡುವುದು ನನಗೆ ಇಷ್ಟ. ಒಬ್ಬ ವೃದ್ಧನ ಒಂಟಿತನವನ್ನು ಹೇಳುವ ಕಥೆ ನಿಮಗೆ ಹೈಫೈ ಜೀವನ ಎಂದು ಹೇಗೆ ಅನ್ನಿಸಿತು? ಅಲ್ಲಿ ನಿಮಗೆ ನಮ್ಮದೇ ನೆಲದ ತಂದೆ, ತಾತ ಕಾಣಲಿಲ್ಲವೇ?

      • Samyuktha

        very well written and thanks for these good film reviews!

  6. ಉಮಾ ವಲ್ಲೀಶ್

    ಪ್ರಿಯ ಸಂದ್ಯಾ “ಕಣ್ಣಿಗೆ ಕಟ್ಟುವಂತೆ “ಬರೆಯುವ ನಿಮ್ಮ ಶೈಲಿ ಯೇ ನನ್ನನ್ನು ನಿಮ್ಮ ಅಭಿಮಾನಿ ಯಾಗಿ ಮಾಡಿರುವುದು . ಅದೆಷ್ಟು ಚೆನ್ನಾಗಿ ನಿರೂಪಿಸಿದ್ದೀರಿ ದನ್ಯ ವಾದಗಳು

  7. Anonymous

    very very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading