ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಅವರ ಅಭಿನಂದನಾ ಗ್ರಂಥ ‘ಸಾರ್ಥಕ ಬದುಕು‘
ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಪ್ರತಿಷ್ಠಾನ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ.
–ಹಳೆಮನೆ ರಾಜಶೇಖರ
ಅಮೂರ್ತವಾದ ಮನಸ್ಸಿನ ಸ್ಥಿತಿಯನ್ನು ಭಾಷೆಯಲ್ಲಿ ಹಿಡಿದಿಡುವುದು ಕಷ್ಟ. ಅಗಾಧವಾದ ಮನಸ್ಸಿನ ಸಾಧ್ಯತೆಗಳನ್ನು ಅರ್ಥ ಮಾಡಿಕೊಂಡು, ಸುಸ್ಥಿತಿಗೆ ತಂದು, ಅದಮ್ಯ ಚೈತನ್ಯವಾಗಿ ರೂಪಿಸಿಕೊಳ್ಳುವುದು ದೊಡ್ಡ ಸವಾಲು. ಈ ಸವಾಲನ್ನು ಸ್ವೀಕರಿಸಿ ಜಯಿಸುವುದು ವೈಯಕ್ತಿಕವಾದಾಗ ಮನಸ್ಸು ವಿಶ್ವಾತ್ಮಕ ನೆಲೆಯನ್ನು ಪಡೆಯುವದಿಲ್ಲ. ಅದೇ ಮನಸ್ಸು ಲೋಕಾತ್ಮಕವಾದಾಗ ಮನಸ್ಸಿನ ಸಾಧ್ಯತೆಗಳು ಲೋಕದ ದಂದುಗಗಳ ಜೊತೆ ಸಂವಾದ ಮಾಡುತ್ತಾ ಹೋಗುತ್ತದೆ. ವಿಮರ್ಶಾತ್ಮಕ ಅವಲೋಕನದ ಮೂಲಕ ಹೊಸ ಸ್ಥಿತಿಯನ್ನು ಪಡೆಯಲು ಚಿಂತನೆ ಮಾಡುತ್ತದೆ. ಆ ಚಿಂತನೆ ಲೋಕ ಕಲ್ಯಾಣದ ಸ್ವರೂಪವನ್ನು ಪಡೆಯುತ್ತದೆ. ಆಗ ಭಾಷೆಯು ಮನಸ್ಸಿನ ಭಾವದೊಂದಿಗೆ ಬೆರೆಯುತ್ತದೆ. ಭಾಷೆ-ಭಾವ-ಮನಸ್ಸು-ಗುಣಗಳು ಏಕಾಗ್ರಗೊಂಡು ಹೊಸ ಬನಿಯನ್ನು ಪಡೆಯುತ್ತವೆ. ಇಂತಹ ಸಂಯೋಗ ವ್ಯಕ್ತಿಯಲ್ಲಿ ಸಂಭವಿಸುವುದು ಲೋಕವನ್ನು ತಮ್ಮದೆಂದು ಮಿಡಿಯುವ ಹೃದಯಗಳಿಗೆ ಸಾಧ್ಯ. ಸದಾ ಇಲ್ಲದವರ ಸಾನಿಧ್ಯದಲ್ಲಿಯೇ ತಮ್ಮ ಸಾರ್ಥಕತೆಯನ್ನು ಪಡೆದುಕೊಳ್ಳುವ ಮನಸ್ಸು ದುರ್ಬಲರನ್ನು ಬಲಗೊಳಿಸಲು ನಿರತವಾಗುತ್ತದೆ. ಜಗತ್ತಿನ ಪ್ರತಿ ಜೀವಿಯೂ ಮುಖ್ಯವೆಂದು ಭಾವಿಸಿ ಸರ್ವರನ್ನು ಹಿಮಾಲಯದೆತ್ತರಕ್ಕೆ ಏರಿಸಲು ಚಿಂತನೆ ಮಾಡುತ್ತದೆ. ನ್ಯಾಯ, ನೀತಿ, ಧರ್ಮ, ಸೌಹಾರ್ಧತೆ, ಭಾತೃತ್ವ, ಸಹಬಾಳ್ವೆ, ಜಾತ್ಯಾತೀತತೆ, ನಿರಪೇಕ್ಷತೆ ಬದುಕಿನ ಭಾಗವಾಗಿರುತ್ತದೆ. ಈ ಮೌಲ್ಯಗಳ ಅನುಷ್ಠಾನದಲ್ಲಿಯೇ ನಿರಂತರ ಮನಸ್ಸು ತೊಡಗಿರುತ್ತದೆ. ಇಂತಹ ಅಗಾಧ ಸಂತರ, ಮಹಾತ್ಮರ ವ್ಯಕ್ತಿತ್ವ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರದು.
ಪರಂಪರೆಯಲ್ಲಿ ಲೋಕದ ಉದ್ಧಾರಕ್ಕೆ ತೊಡಗಿಸಿಕೊಂಡ ದಾರ್ಶನಿಕರ ಆದರ್ಶವನ್ನೇ ಉಸಿರಾಗಿಸಿಕೊಂಡ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರನ್ನು ಗೌರವಿಸುವ ಅಭಿನಂದನಾ ಗ್ರಂಥಗಳು ಮುಂದಿನ ತಲೆಮಾರಿಗೆ ಜ್ಞಾನ ಭಂಡಾರಗಳಾಗಿವೆ. ದುರ್ಬಲರ ಏಳಿಗೆಗಾಗಿ ಗಂಧದಂತೆ ತೇದ ವ್ಯಕ್ತಿತ್ವಗಳನ್ನು ಅವಲೋಕನ ಮಾಡುವುದರ ಮೂಲಕ ಶ್ರೀಯುತರಿಗೆ ಜ್ಞಾನ ತೋರಣ ಕಟ್ಟದ್ದು ಮಾದರಿಯಾದುದು. ನಡೆ ನುಡಿ ಶುದ್ಧವುಳ್ಳವರನ್ನು ನಾಡು ನೆನೆಯುತ್ತದೆ. ಅವರ ದರ್ಶನದ ಬೆಳಕಿನಲ್ಲಿ ನಡೆಯುತ್ತದೆ. ತಮ್ಮ ಕಷ್ಟ- ಸುಖಗಳನ್ನು ಅವರ ಮಡಲಿಗೆ ಹಾಕುತ್ತದೆ. ಸಾಂತ್ವಾನವನ್ನು ಪಡೆಯುತ್ತದೆ. ಇಂತಹ ಮಮಕಾರದ ಅಂತಃಕರಣವನ್ನು ಒಡಲಲ್ಲಿ ತುಂಬಿಕೊಂಡ ಮಾನವತವಾದಿಗಳನ್ನು ನಿರಂತರ ನೆನಪಿಸಿಕೊಂಡು ಆರಾಧಿಸಬೇಕಾಗುತ್ತದೆ. ಡಾ. ಅಮರೇಶ ಯಾತಗಲ್ ಅವರು ಸಾವಿರದ ಐದುನೂರು ಪುಟಗಳ ಬೃಹತ್ ಗ್ರಂಥವನ್ನು ಮಾನ್ಯರಿಗೆ ಸಲ್ಲಿಸುವುದರ ಮೂಲಕ ಮಾದರಿ ಕಾರ್ಯವನ್ನು ಮಾಡಿದ್ದಾರೆ.
ಸಾರ್ಥಕ ಬದುಕು ಎಂಬ ಅಭಿನಂದನಾ ಗ್ರಂಥ ವಿಶೇಷವಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಬಾಳಿದ ಶರಣರ ಚಿಂತನೆಗಳನ್ನು ಒಂದೆಡೆ ಸಂಗ್ರಹಿಸಿ, ನಾಡಿಗೆ ನೀಡಿದ್ದಾರೆ. ಶರಣರನ್ನು ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಆಕರ ಗ್ರಂಥವಾಗಿದೆ. ಶರಣರ ಬದುಕನ್ನೇ ತಮ್ಮ ಆದರ್ಶವಾಗಿಸಿಕೊಂಡ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ಘನತೆಯ ಬದುಕಿಗೆ ಈ ಗ್ರಂಥ ಕಳಶಪ್ರಾಯವಾಗಿದೆ. ಮನಸ್ಸಿನ ಆಹಾಂಕಾರವನ್ನು ಕಳೆದುಕೊಳ್ಳದೆ ಹೊರಗಿನ ಸುಧಾರಣೆ ಸಾಧ್ಯವಿಲ್ಲ. ಬಸವಣ್ಣ ಜಗತ್ತಿನಲ್ಲಿ ಮೊದಲ ಬಾರಿಗೆ ಮನಸ್ಸಿನ ಅಹಂಕಾರವನ್ನು ಕಳೆದುಕೊಂಡು ಸಾಮಾಜಿಕದೊಂದಿಗೆ ಸಮಾನತೆಯ ಭಾವದಿಂದ ಒಂದಾಗುವ ದೊಡ್ಡ ಅರಿವಿನ ಆಂದೋಲನವನ್ನು ಭಕ್ತಿಯ ಮೂಲಕ ಸೃಷ್ಟಿಸಿದವರು. ಈ ಆಂದೋಲನ ಕಾಲಾಂತರದಲ್ಲಿ ಅನೇಕರ ವ್ಯಕ್ತಿತ್ವವನ್ನು ರೂಪಿಸುತ್ತಲೇ ಬಂದಿದೆ. ಬಸವಣ್ಣನವರ ಆಶಯಗಳನ್ನು ಸಾಕಾರಗೊಳಿಸುವ ಪ್ರಯತ್ನಗಳು ನಿರಂತರ ನಡೆಯಿತ್ತಲೇ ಇವೆ. ಇಂತಹ ಸಾರ್ಥಕ ದಾರಿಯನ್ನು ಈ ಕೃತಿ ಪ್ರತಿಯಬ್ಬರಿಗೂ ತೋರಿಸುತ್ತದೆ.

ನಮ್ಮ ವರ್ತಮಾನದ ಸಾಂಸ್ಕೃತಿಕ ಸಂವೇದನೆಯನ್ನು ರೂಪಿಸಬೇಕಾದ ಚಾರಿತ್ರಿಕ ಅಂಶಗಳು ಯಾವುವು ಎಂಬ ಪ್ರಶ್ನೆ ಕಾಡುತ್ತಲೇ ಇವೆ. ನಡೆ-ನುಡಿ ಶುದ್ದತೆಯ ಮೂಲಕ ಲೋಕವನ್ನು ಕಾಣುವ ಪರಿ ಯಾವುದು ಎಂಬ ಜಿಜ್ಞಾಶೆಯು ಜೊತೆಗಿದೆ. ಈ ಜಿಜ್ಞಾಶೆ ಮೂಡಿದಾಗಲೆಲ್ಲ ನಾವು ಮತ್ತೆ ಹನ್ನೆರಡನೆಯ ಶತಮಾನದ ಬಸವಣ್ಣನ ಕಾಲಕ್ಕೆ ಹೋಗುತ್ತೇವೆ. ಅಲ್ಲಿಂದ ಹೊಸ ಕಸುವನ್ನು ಪಡೆಯುತ್ತೇವೆ. ಅವರ ಕಾಯಕ ಪ್ರಜ್ಞೆ, ಆತ್ಮಶುದ್ದಿ, ಅನುಭಾವ, ಎಲ್ಲರನ್ನು ಒಳಗೊಳ್ಳುವ ಮನೋಭಾವ, ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಪ್ರೀತಿಸುವ ಸದ್ಗುಣ, ಭಕ್ತಿಯ ನಿಜಶಕ್ತಿ, ದೇವರ ಅಸ್ತಿತ್ವದ ಶೋಧ ಈ ಅಂಶಗಳನ್ನು ಕುರಿತು ಚಿಂತನೆ ಮಾಡುತ್ತೇವೆ. ವಾಸ್ತವನ್ನು ಸುಧಾರಿಸಲು ಈ ಅಂಶಗಳೇ ಪ್ರಮುಖವಾದುವು ಎಂದು ಭಾವಿಸುತ್ತೇವೆ. ಇದರಿಂದ ಇವರ ಅರಿವು ನಮ್ಮ ಮನಸ್ಸುಗಳ ಮಾರ್ಪಾಟಿಗೆ ಪ್ರೇರೇಪಿಸುತ್ತವೆ. ಸಮಸ್ಯೆ ಇರುವುದು ಇವರ ಮನೋಭಾವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಲೋಕ ಕಲ್ಯಾಣಕ್ಕೆ ಹೇಗೆ ಸಮರ್ಪಿಸಿಕೊಳ್ಳುವುದು. ಇಂತಹ ಗೊಂದಲ್ಲಿರುವಾಗ ಲೋಕಕ್ಕೆ ಸ್ಪಷ್ಟವಾದ ದಾರಿಯನ್ನು ತೋರಿಸಿದವರು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು.
ತಮ್ಮ ಬದುಕಿನ ಪಯಣದಲ್ಲಿ ಶರಣರ ಕಾಯಕ ತತ್ವವನ್ನು ಬದುಕಿನ ಭಾಗವಾಗಿಸಿಕೊಂಡು ಲೋಕೋದ್ದಾರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶರಣರು ಬದುಕಿದ ಕ್ರಮವನ್ನೇ ಬದುಕಿದವರು. ಪ್ರತಿಯೊಬ್ಬರನ್ನು ತಮ್ಮ ತನು ಮನದಂತೆ ಕಂಡವರು. ಶರಣರ ಎಲ್ಲಾ ತತ್ವಗಳನ್ನು ಪಾಲಿಸುತ್ತಾ ಬಂದವರು. ಈ ಕೃತಿಯಲ್ಲಿರುವ ಪ್ರತಿಯೊಂದು ಲೇಖನದ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಅಧಿಕಾರದಲ್ಲಿ ಕರುಣೆ, ನ್ಯಾಯದಲ್ಲಿ ಮಾನವೀಯತೆ, ಕಾರ್ಯದಲ್ಲಿ ನಿಷ್ಠುರತೆ, ಕಾಯದಲ್ಲಿ ದಾಸೋಹ, ಚಿಂತನೆಯಲ್ಲಿ ಅನುಭಾವ ಮೂಡಬೇಕಾದರೆ ಅದಕ್ಕೆ ಮಹಾ ನಿರ್ಮೋಹ ಬೇಕಾಗುತ್ತದೆ. ಇಂತಹ ಬದುಕನ್ನು ಸಹಜವಾಗಿ ಬದುಕುವ ಚೈತನ್ಯ ಶರಣರ ಆಲೋಚನೆಗಳಿಂದ ದಕ್ಕುತ್ತದೆ. ಪ್ರತಿಯೊಬ್ಬರು ಈ ಬದುಕಿನ ದಾರಿಯನ್ನು ತುಳಿಯಲು ಸಾಧ್ಯವಿದೆ. ಹೀಗಾಗಿ ಈ ಕೃತಿಯನ್ನು ಯಾರೇ ಓದಿದರೂ ಒಂದು ಮಹಾ ಚೈತನ್ಯ ಮನಸ್ಸಿಗೆ ಇಳಿಯುತ್ತದೆ. ಈ ಚೈತನ್ಯದೊಂದಿಗೆ ಹೊಸ ಬದುಕನ್ನು ಕಟ್ಟುವ ಚಿಂತನೆ ಕ್ರಿಯಾರೂಪಿಯಾಗಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರಲ್ಲಿ ಬೆಳೆಯುತ್ತಾ ಬಂದಿದೆ. ಇದರಿಂದ ಈ ಕೃತಿಯ ಪ್ರತಿಯೊಂದು ಅಕ್ಷರಗಳು ಹುಸಿಯಾಗದೆ ಸತ್ಯದ ಸತ್ವವನ್ನು ಒರೆಗೆ ಹಚ್ಚುತ್ತವೆ. ಸತ್ಯದೊಂದಿಗೆ ಬದುಕುವ ಸನ್ಮಾರ್ಗಿಗಳಿಗೆ ಈ ಕೃತಿ ದೀಪವಾಗಿದೆ.
ಯಾಕೆಂದರೆ ಜಗತ್ತಿನ ಸಂಸ್ಕೃತಿಯಲ್ಲಿ ತನ್ನ ಒಳಗನ್ನು ತಾನು ನೋಡಿಕೊಳ್ಳುವ ಪ್ರಕ್ರಿಯೆ ಆರಂಭವಾದದ್ದು ವಚನಕಾರರಿಂದ. ಹೊಟ್ಟೆ ಹೊರೆಯುವ ಡಾಂಭಿಕ ಭಕ್ತಿಗೆ ಅನುಭಾವಿಕ ಸ್ಪರ್ಷ ನೀಡಿ ಬದುಕನ್ನು ಶದ್ಧಗೊಳಿಸಿಕೊಳ್ಳುವ ಕಾಯಕ ಕಲ್ಪನೆ ಅಗಾಧವಾದುದು. ಅತೀತ ಶಕ್ತಿಗಳನ್ನು ವೈಭವೀಕರಿಸದೇ ಸಾಮಾನ್ಯನೊಂದಿಗೆ ಅರಿವಿನ ಒಡನಾಟವೇ ʻಅತೀತ ಶಕ್ತಿʼ ಎಂಬುದನ್ನು ಮನವರಿಕೆ ಮಾಡುವ ಬದುಕು ಅವರದಾಗಿತ್ತು. ಹೀಗಾಗಿ ಪ್ರತಿಯೊಬ್ಬರು ಹುಟ್ಟಿನಿಂದಲೇ ಬದುಕಿನ ಸ್ವರೂಪವನ್ನು ಪಡೆಯುವದಿಲ್ಲ. ಅವರ ಅರಿವಿನ ವಿಕಾಸದಲ್ಲಿ ತಮ್ಮನ್ನು ಕಂಡುಕೊಂಡು ಅಲೌಕಿಕ ಶಕ್ತಿಯನ್ನು ಪಡೆಯುತ್ತಾರೆ ಎಂಬ ಹೊಸ ಪ್ರಮೇಯವನ್ನು ಮಂಡಿಸಿದರು. ಇದು ಜನರಲ್ಲಿ ಬೆರಗು ಮೂಡಿಸಿತು. ಇದುವೇ ಸತ್ಯದ ದಾರಿ ಎಂದು ತಿಳಿಯಲು ಸಾಧ್ಯವಾಯಿತು. ದೇವರು ಕೈಯಲ್ಲೇ ಇರುವ ʻಜ್ಞಾನರೂಪಿʼ ಎಂಬ ಸತ್ಯದ ದರ್ಶನವೂ ಆಯಿತು. ಇಂತಹ ದಿಟದ ದರ್ಶನವನ್ನು ದೀವಿಗೆಯಾಗಿಸಿಕೊಂಡ ನ್ಯಾಯಮೂರ್ತಿ ಶಿವರಾಜ ಪಾಟೀಲರು ಶರಣರ ಪರಂಪರೆಯನ್ನು ಮುಂದುವರೆಸುವ ವಿಭೂತಿ ಪುರುಷರಂತೆ ಕಾಣುತ್ತಾರೆ. ಅವರ ಕಾಣ್ಕೆಗೆ ಅನುಗುಣವಾಗಿ ಈ ಕೃತಿಯಲ್ಲಿ ವಿಚಾರಗಳಿವೆ.
ಸಾರ್ಥಕ ಬದುಕು ಕೃತಿಯಲ್ಲಿ ನಾಡಿನ ಮುಖ್ಯ ಚಿಂತಕರು ಶರಣರ ವಿಚಾರಗಳನ್ನು ಮರುಶೋಧಕ್ಕೆ ಒಳಪಡಿಸಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬಾಳಿ ಬದುಕಿದ ಎಲ್ಲಾ ವಚನಕಾರರನ್ನು ಒಂದೆಡೆ ಸೇರಿಸಿ ಆಲೋಚಿಸಲಾಗಿದೆ. ವಚನಗಳ ಚರಿತ್ರೆ, ವಚನಕಾರರ ವ್ಯಕ್ತಿತ್ವ, ನಡೆ-ನುಡಿಯ ಆಯಾಮಗಳು ಈ ಕೃತಿಯಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿವೆ. ಸಾತ್ವಿಕವಾದ ಚಿಂತನೆಗಳ ಜೊತೆಗೆ ಈ ಎಲ್ಲಾ ಬರಹಗಳಿವೆ. ಸಾಮಾಜಿಕ ಅಸಮಾನತೆಯ ನೆಲೆಗಳನ್ನು ಧರ್ಮ, ಪ್ರಭುತ್ವ, ಜಾತಿಯ ನೆಲೆಯಲ್ಲಿ ನೋಡುವ ದೃಷ್ಟಿಕೋನಗಳು ಇಲ್ಲಿ ಮುಖ್ಯವಾಗಿವೆ. ಧರ್ಮದ ಕಾರ್ಯಗಳು, ಪ್ರಭುತ್ವದ ಕಾರ್ಯಗಳು, ಜಾತೀಯ ಕೇಡುಗಳು ಯಾವುವು ಎಂಬುದನ್ನು ಗಂಭೀರವಾಗಿ ಚಿಂತನೆ ಮಾಡಲಾಗಿದೆ. ಪ್ರತಿಯೊಬ್ಬ ವಚನಕಾರರ ವಿಶೇಷತೆಯನ್ನು ಗುರುತಿಸಿ ಅವರ ಚಿಂತನೆಗಳ ಅನನ್ಯತೆಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇವರ ಚಿಂತನೆಗಳು ನ್ಯಾಯಮೂರ್ತಿ ಶಿವರಾಜ ಪಾಟೀಲರ ಚಿಂತನೆಗೆ ಹತ್ತಿರವಾಗಿವೆ. ವಚನಕಾರರ ವಚನಗಳನ್ನು ಆಳವಾಗಿ ಶ್ರೀಯುತರು ಅಧ್ಯಯನ ಮಾಡಿದ್ದರಿಂದ ವಚನಗಳ ಪ್ರಭಾವ ಸಹಜವಾಗಿ ಅವರನ್ನು ಧೀಮಂತ ವ್ಯಕ್ತಿಯನ್ನಾಗಿಸಿದೆ. ವಚನಗಳಲ್ಲಿರುವ ಕ್ರಿಯಾರೂಪಿ ಸ್ವರೂಪವನ್ನು ತಮ್ಮ ಬದುಕಿನ ಭಾಗವಗಿಸಿಕೊಂಡಿದ್ದರಿಂದ ಅವರು ವಚನ ಪರಂಪರೆಯ ಆಶಯಗಳನ್ನು ಸಮಾಜದಲ್ಲಿ ಬಿತ್ತುವ ಮಹತ್ಕಾರ್ಯವನ್ನು ಸಹಜವಾಗಿ ಕೈಗೊಂಡಿದ್ದಾರೆ. ಅವರು ನ್ಯಾಯವನ್ನು ಸಂವಿಧಾನಾತ್ಮಕವಾಗಿಯೇ ನೋಡಿದ್ದಾರೆ. ಜಾತಿ, ಭೌಗೋಳಿಕ ನೆಲೆಯಲ್ಲಿ ನೋಡಿಲ್ಲ. ಇದರಿಂದ ಅವರ ವ್ಯಕ್ತಿತ್ವಕ್ಕೆ ರಾಷ್ಟ್ರ ಮಾನ್ಯತೆ ಇದೆ.
ʻಗುರಿಯಿಲ್ಲದ ಜೀವನ ದಿಕ್ಸೂಚಿಯಿಲ್ಲದ ಹಡಗಿನಂತೆ. ಶಿಸ್ತಿಲ್ಲದ ಬದುಕು ನಾವಿಕನಿಲ್ಲದ ನಾವೆಯಂತೆ. ಶೀಲವಿಲ್ಲದ ನಡೆ ಸುಂಟಗಾಳಿಯಂತೆ ಮತ್ತು ಅನುಕಂಪವಿಲ್ಲದ ಜೀವನ ಸುವಾಸನೆರಹಿತ ಪುಷ್ಪವಿದ್ದಂತೆ.ʼ ಎಂದು ಮಾನ್ಯರು ನುಡಿದಿದ್ದಾರೆ. ಈ ನುಡಿಯನ್ನು ತಮ್ಮ ಬದುಕಿನಲ್ಲಿ ಅನುಕ್ಷಣವೂ ಬದುಕಿದ್ದಾರೆ. ಸದಾ ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ, ಸಂತೈಸುತ್ತಾ ಬದುಕಿನ ದಾರಿಯನ್ನು ಸವಿಸಿದ್ದಾರೆ. ಇಂತಹ ಅವರ ನುಡಿಗಳನ್ನು ಹೊತ್ತಿಗೆಯಲ್ಲಿ ಮಧ್ಯೆ ಮಧ್ಯೆ ಬಳಸಿದ್ದಾರೆ. ಈ ನುಡಿಗಳು ಶರಣರ ನುಡಿಗಳ ಜೊತೆ ಸೇರಿಕೊಂಡು ಆತ್ಮಸಾಕ್ಷಿಯ ಬದುಕಿಗೆ ಪ್ರೇರೇಪಿಸುತ್ತವೆ. ಯಾರು ನುಡಿದಂತೆ ಬದುಕುವರೋ ಅವರು ಇನ್ನೊಬ್ಬರಿಗೆ ಉಪದೇಶ ಮಾಡುವ ನೈತಿಕತೆಯನ್ನು ಹೊಂದಿರುತ್ತಾರೆ. ಅಂತವರ ಮಾತುಗಳಿಗೆ ಸಮಾಜದಲ್ಲಿ ಒಂದು ಗೌರವ ಇರುತ್ತದೆ. ಆದ್ದರಿಂದ ಅವರದು ತಾಯಿಯಂತ ಅನುಕಂಪದ ಮನಸ್ಸು. ಈ ಮನಸ್ಸನ್ನು ರೂಪಿಸಿದ್ದು ವಚನಗಳು. ಹೀಗಾಗಿ ಈ ಗ್ರಂಥ ವಿಶೇಷವಾದುದು.
ಪ್ರಕೃತಿಪ್ರಿಯತೆ ಮತ್ತು ಜ್ಞಾನ ಪರಸ್ಪರ ಪೂರಕವಾದುವು. ಯಾರೂ ಪ್ರಕೃತಿಯ ಆರಾಧಕರಾಗಿತ್ತರೋ ಅವರು ಪ್ರಕೃತಿಯಂತೆ ಸಹಜವಾಗಿ ಬದುಕುತ್ತಾರೆ. ಎಂತ ಎತ್ತರಕ್ಕೆ ಹೋದರೂ ತಮ್ಮ ಬೇರುಗಳನ್ನು ಮರೆಯುವದಿಲ್ಲ. ವಚನಕಾರರು ತಮ್ಮ ಬೇರುಗಳೊಂದಿಗೆ ಮಾತಾಡಿದವರು. ಮಾತೃಭಾಷೆಯ ನುಡಿಗಟ್ಟನ್ನು ವಚನಗಳಲ್ಲಿ ಸೃಷ್ಟಿಸಿದವರು. ಇದು ಯಾರ ಹಂಗಿಲ್ಲದ ಭಾಷಿಕ ದಾರಿ. ಈ ಬೆಡಗಿನ ಭಾಷೆಯು ಕೇವಲ ವಿದ್ವತ್ ಪ್ರದರ್ಶನದ ಚಮತ್ಕಾರವಾಗುವುದಿಲ್ಲ. ಬದುಕಿಗೆ ಅನ್ವಯಿಸಿ ತತ್ವವನ್ನು ಕಟ್ಟುತ್ತದೆ. ಇಂತಹ ತತ್ವವನ್ನು ಮಾನ್ಯರು ಸೃಷ್ಟಿಸಿದ್ದಾರೆ. ಇದರಿಂದ ಅವರ ಬದುಕಿಗೆ ʻಘನತ್ವʼ ಸಿದ್ದಿಸಿದೆ. ಆಡಂಬರ ಮತ್ತು ಭೋಗಕ್ಕೆ ಒಡ್ಡಿಕೊಳ್ಳದೆ ಪ್ರಕೃತಿಯ ಮಡಿಲಲ್ಲಿ ಇರಲು ಅವರು ಬಯಸುತ್ತಾರೆ. ಈ ಕಾರಣಕ್ಕೆ ಅವರು ʻಎಲ್ಲ ವಯಸ್ಸಿನಲ್ಲೂ ಎಲ್ಲಕ್ಕಿಂತ ಕಡಿಮೆ ಖರ್ಚಿನ ವ್ಯಾಯಾಮ ಎಂದರೆ ವಾಯು ವಿಹಾರ.ʼ ಎಂದು ಹೇಳಿರುವುದು.
ತತ್ವಗಳು ನ್ಯಾಯದ ದಾರಿಯಲ್ಲಿ ನಡೆಯಬೇಕು. ಬದುಕಿನ ಜೊತೆಗೆ ಇರಬೇಕು. ಆದರೆ ತತ್ವ ಹೇಳುವವರು ತತ್ವಗಳನ್ನೇ ಪಾಲಿಸುವುದಿಲ್ಲ. ಅವು ಇನ್ನೊಬ್ಬರು ಅನುಸರಿಸಲಿಕ್ಕೆ ಮಾತ್ರ ಇವೆ. ತಮಗಲ್ಲ ಎಂಬ ಭಾವನೆ ಬಹುತೇಕ ವಿದ್ವಾಂಸರಲ್ಲಿ ಮನೆ ಮಾಡಿದೆ. ನೀತಿ ಹೇಳುತ್ತಲೇ ಅನೀತಿಯಿಂದ ನಡೆದುಕೊಳ್ಳುತ್ತಾರೆ. ಈ ಕೃತಿಯಲ್ಲಿಯ ಬರಹಗಳು ನೀತಿಯಿಂದ ಬದುಕಲು ಪ್ರೇರೇಪಿಸುತ್ತವೆ. ನೀತಿ ತತ್ವಗಳು ಭೋಧನೆಗಲ್ಲ. ಬದುಕಿನಲ್ಲಿ ಅಳವಡಿಸಿಕೊಳ್ಳಲು ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತವೆ. ಎಲ್ಲ ಶರಣರು ನೀತಿಯುತವಾಗಿಯೇ ಜೀವನವನ್ನು ಸಾಗಿಸಿದವರು. ಅವರು ಕೇವಲ ಉಪದೇಶಿಕರಾಗಿರಲಿಲ್ಲ. ಏನು ಉಸಿರುವರೋ ಅದನ್ನು ಮೊದಲು ತಮ್ಮ ಬದುಕಿನಲ್ಲಿ ಅನುಷ್ಠನಕ್ಕೆ ತಂದವರು. ಇದರಿಂದ ಶರಣರ ಮಾತುಗಳಿಗೆ ಮಹತ್ವ ಇದೆ. ಈ ಕಾರಣಕ್ಕಾಗಿ ಜನರು ಅವರನ್ನು ನಂಬುತ್ತಾರೆ. ಆರಾಧಿಸುತ್ತಾರೆ. ಪ್ರಭುತ್ವಗಳು ಇಂತವರನ್ನು ಭ್ರಷ್ಟಗೊಳಿಸಿ ಸಾಮಾಜಿಕವಾಗಿ ನಿರುಪಯುಕ್ತ ಎಂಬಂತೆ ಬಿಂಬಿಸುತ್ತವೆ. ಈ ಎಚ್ಚರ ಇದ್ದಾಗ ಮಾತ್ರ ಮನುಷ್ಯ ಕಾಯಕ ಜೀವಿಯಾಗಲು ಸಾಧ್ಯ. ಹೀಗಾಗಿ ಮನುಷ್ಯ ಧರ್ಮದಿಂದ ನಡೆಯಬೇಕು. ʻಜ್ಞಾನವಿಲ್ಲದ ಮನುಷ್ಯ ಕುರುಡನಂತೆ, ಹಣವಿಲ್ಲದ ಮನುಷ್ಯ ರೆಕ್ಕೆಯಿಲ್ಲದ ಪಕ್ಷಿಯಂತೆ ಮತ್ತು ಧರ್ಮವಿಲ್ಲದ ಮನುಷ್ಯ ಲಗಾಮಿಲ್ಲದ ಕುದುರೆಯಂತೆ ʼ ಎಂದು ಮಾನ್ಯರು ಹೇಳಿದ್ದಾರೆ.
ಸಾಮಾಜಿಕ ಸುಧಾರಣೆ ಮಾನವನ ಕಾಯಕವಾಗಬೇಕು. ಅಜ್ಞಾನದಿಂದ ನರಳುವ ಜನರನ್ನು ಕರುಣೆಯಿಂದ ನೋಡುವುದು ಮುಖ್ಯ. ಆದ್ದರಿಂದ ಶರಣರು ಅಜ್ಞಾನಿಗಳ ಸುಧಾರಣೆಗೆ ಮುಂದಾದರು. ಉಳ್ಳವರಿಂದ ಶೋಷಣೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನ ಮಾಡಿದರು. ನಿರಂತರ ದಬ್ಬಾಳಿಕೆಗೆ ಒಳಗಾಗುತಿದ್ದ ಈ ಜನರನ್ನು ಶಿಕ್ಷಿತರನ್ನಾಗಿ ಮಾಡಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಕೈಗೊಂಡರು. ಇದರಿಂದ ಸಮಾಜದಲ್ಲಿ ಚಲನೆ ಪ್ರಾರಂಭವಾಯಿತು. ಮೊದಲು ಮನುಷ್ಯ ತನ್ನನ್ನು ಅರಿತುಕೊಳ್ಳಬೇಕು. ಎಲ್ಲವನ್ನು ಅನ್ಯರಿಗೆ ಹೊರಿಸಿ ದೂಷಿಸುವುದು ತರವಲ್ಲ. ತನ್ನ ಶಿಲಿಬೆಯನ್ನು ತಾನೇ ಹೊತ್ತುಕೊಳ್ಳಬೇಕು. ವೈಯಕ್ತಿಕ ಶುದ್ಧತೆಯೇ ಸಾಮಾಜಿಕ ಶುದ್ಧತೆಯಾಗಿ ಮಾರ್ಪಾಡಾಗುತ್ತದೆ. ಯರೋ ಸಮಾಜವನ್ನು ಸುಧಾರಿಸುತ್ತಾರೆ ಎಂದು ಆಲೋಚಿಸುವದಕ್ಕಿಂತ ತನ್ನನ್ನು ಸುಧಾರಿಸಿಕೊಳ್ಳಲು ಮೊದಲು ಪ್ರಯತ್ನ ಮಾಡಬೇಕು. ಈ ನೀತಿಯನ್ನು ಶರಣರು ಹೊಂದಿದ್ದರು. ʻಸಮಾಜ ಸುಧಾರಣೆಗೆ ಬೇರೆಯವರ ಬರುವಿಕೆಗೆ ಕಾಯದೆ, ಅದನ್ನು ನಮ್ಮಿಂದಲೇ ಪ್ರಾರಂಭಿಸಿದಾಗ ಹೆಚ್ಚಿನ ಡಂಗುರವಿಲ್ಲದೆ ತಾನಾಗಿಯೇ ಸಮಾಜ ಸುಧಾರಿಸುತ್ತದೆʼ ಎಂಬ ಮಾನ್ಯರ ಉಕ್ತಿ ಶರಣರ ತತ್ವವನ್ನೇ ಸೂಚಿಸುತ್ತದೆ.
ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ ಕೇಳಿರಯ್ಯಾ
ಕೈಲಾಸವೆಂಬದೊಂದು ಭೂಮಿಯೊಳಿರುವ ಹಾಳುಬೆಟ್ಟ
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು
ಅಲ್ಲರ್ದ ಚಂದ್ರಶೇಖರನು ಬಹು ಎಡ್ಡ
ಇದರಾಡಂಬರವೇಕಯ್ಯ?
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ
ಲಿಂಗಾಂಗ ಸಾಮರಸ್ಯವ ತಿಳಿದು
ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯ
ಕಪಿಲಸಿದ್ದ ಮಲ್ಲಿಕಾರ್ಜುನ
ಚೆನ್ನಬಸವಣ್ಣನ ಕೈಲಾಸ ಕಲ್ಪನೆಯನ್ನು ಸಾಕಾರಗೊಳಿಸಿದವರು ನ್ಯಾಯಮೂರ್ತಿ ಶಿವರಾಜಪಾಟೀಲರು. ಲಿಂಗಾಂಗ ಸಾಮರಸ್ಯ ಎಂಬುದು ಭೌತಿಕ ನೆಲೆಯಲ್ಲಿಯೂ ಮುಖ್ಯವಾಗಬೇಕು. ವ್ಯಕ್ತಿಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ, ಶ್ರದ್ಧೆ, ಪ್ರಮಾಣಿಕತೆ, ನ್ಯಾಯಯುತವಾಗಿ ನೆರವೇರಿಸುವದೇ ಲಿಂಗಾಂಗ ಸಾಮರಸ್ಯವಾಗುತ್ತದೆ. ಕೇವಲ ಮನಸ್ಸಿಗೆ ನಿಷ್ಠನಾಗಿದ್ದು, ಲೌಕಿಕವಾಗಿ ಸಾಮರಸ್ಯವಿಲ್ಲದಿದ್ದರೆ ಅದು ಹುಸಿಯಾಗುತ್ತದೆ. ಭವ ಮತ್ತು ಭಕ್ತಿಯಲ್ಲಿ ಲಿಂಗಾಂಗ ಸಾಮರಸ್ಯವನ್ನು ಸಾಧಿಸಿದವರು ಶರಣರು. ಈ ಸಾಮರಸ್ಯವನ್ನು ವ್ರತದಂತೆ ಬದುಕಿನಲ್ಲಿ ಸಾಕಾರಗೊಳಿಸಿದವರು ನ್ಯಾಯಮೂರ್ತಿ ಶಿವರಾಜ ಪಾಟೀಲರು. ಹೀಗಾಗಿ ಇಲ್ಲಿಯ ಬರಹಗಳು ನ್ಯಾಯಮೂರ್ತಿ ಶಿವರಾಜ ಪಾಟೀಲರ ವುಕ್ತಿತ್ವಕ್ಕೆ ಅನ್ವಯಿಸುತ್ತವೆ. ಅವರು ಹೇಳುವ ʻಯಾವುದೇ ಕಾನೂನು ಅರ್ಥಪೂರ್ಣವಾಗಬೇಕಾದರೆ ಅದು ಕೇವಲ ಕಾಗದದ ಮೇಲೆ ಉಳಿಯದೆ, ಜೀವನದ ನಡವಳಿಕೆಗಳ ಭಾಗವಾಗಬೇಕುʼ ಎಂಬ ಮಾತುಗಳನ್ನು ಗಮನಿಸಬೇಕು.
ದೇವರನ್ನು ಪೂಜಿಸುವ ಕ್ರಿಯೆ ನಮ್ಮ ಪರಂಪರೆಯಲ್ಲಿ ಸಹಜವಾಗಿ ಸಕ್ರಿಯವಾದುದು. ದೇವರನ್ನು ಅನೇಕ ಬಗೆಯಲ್ಲಿ ಆರಾಧಿಸುತ್ತೇವೆ. ಪೂಜಿಸುತ್ತೇವೆ. ಜನರ ಮುಗ್ದ ಭಾವನೆಯನ್ನು ದುರುಪಯೋಗ ಮಾಡಿಕೊಳ್ಳುವ ದುರುಳರು ನಮ್ಮ ನಡುವೆ ಇದ್ದಾರೆ. ಜನರನ್ನು ಭಯದಲ್ಲಿ ಮುಳುಗಿಸಿ ತಮ್ಮ ಸ್ವಾರ್ಥ ಮೆರೆಯುವ ಅಮಾನವೀಯ ಮೂರ್ತಿಗಳು ದೇವರನ್ನು ಮಾರುಕಟ್ಟೆ ಮಾಡುತ್ತಾರೆ. ಇಂತಹ ಕೇಡುಗರಿಂದ ದೂರವಿರಬೇಕು. ನಿಜವಾದ ದೇವರ ಸಾನಿಧ್ಯ ಅರಿಯಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಅರಿವನ್ನು ಈ ಕೃತಿ ಮೂಡಿಸುತ್ತದೆ. ʻದೇವರ ಮುಂದೆ ಹಚ್ಚುವ ದೀಪ ದೇವರಿಗೆ ಬೆಳಕು ಕೊಡುವುದಕ್ಕಲ್ಲ. ಆದರೆ ನಮ್ಮಲ್ಲಿರುವ ಕತ್ತಲೆಯನ್ನು ಕಳೆದು ಹೃದಯ ಮತ್ತು ಮನಸ್ಸನ್ನು ಬೆಳಗಿಸಲುʼ ಎಂಬ ನ್ಯಾಯಮೂರ್ತಿ ಶ್ರೀ ಶಿವರಾಜ ಪಾಟೀಲರ ಮಾತುಗಳನ್ನು ಈ ಹಿನ್ನಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು.
ದೇವರು ಮತ್ತು ವಿಜ್ಞಾನ ಮನುಷ್ಯನ ವಿಕಾಸದಲ್ಲಿ ಮಹಾ ಶಕ್ತಿಗಳು. ಈ ಎರಡು ಶಕ್ತಿಗಳು ಮನುಷ್ಯನನ್ನು ಕೈ ಹಿಡಿದು ನಡೆಸುತ್ತಿವೆ. ಜಗತ್ತಿನ ಸರ್ವರನ್ನು ಆಳುತ್ತಿವೆ. ಇವುಗಳ ಜೊತೆಗೆ ಮಾನವ ಅನಿವಾರ್ಯವಾಗಿ ಬದುಕಬೇಕು. ಮಾನವ ನಿರ್ಮಿತ ಈ ಶಕ್ತಿಗಳನ್ನು ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ವಿವೇಕ ಇರಬೇಕಾಗುತ್ತದೆ. ಈ ವಿವೇಕ ಮಾನವನಲ್ಲಿ ಇಲ್ಲದಿರುವದರಿಂದ ಇವು ಅಪಾಯವನ್ನು ಸೃಷ್ಟಿಸುತ್ತಿವೆ. ಮಾನುಷ್ಯನ ಏಳಿಗೆಗೆ ದಾರಿ ತೋರಿಸುವ ವಿಜ್ಞಾನವನ್ನು ವಿನಾಶಕ್ಕೂ ಬಳಸುತ್ತಿದ್ದೇವೆ. ಪ್ರಕೃತಿಯನ್ನು ಇದರ ಮೂಲಕ ನಿರ್ನಾಮ ಮಾಡುತ್ತಿದ್ದೇವೆ. ನಮ್ಮ ಬದುಕಿನ ವಿಕಾಸಕ್ಕೆ ಈ ಜ್ಞಾನವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬ ಚಿಂತನೆಯನ್ನು ಈ ಕೃತಿ ಮಾಡುತ್ತದೆ. ಶರಣರ ಕುರಿತ ಪ್ರತಿಯೊಂದು ಲೇಖನವೂ ಬದುಕಿನ ಸಾರ್ಥಕತೆಯ ಸದುಪಯೋಗದ ನೆಲೆಯನ್ನು ಶೋಧಿಸುತ್ತವೆ. ನ್ಯಾಯಮೂರ್ತಿ ಶ್ರೀ ಶಿವರಾಜ ಪಾಟೀಲರ ಆಶಯವನ್ನು ಪ್ರತಿಬಿಂಬಿಸುತ್ತವೆ. ʻವಿಜ್ಞಾನಿಯ ಒಂದು ಅವಿಷ್ಕಾರ ಸದುಪಯೋಗವಾದರೆ ಇಡೀ ಮಾನವ ಜನಾಂಗಕ್ಕೆ ಒಂದು ವರ. ಅದು ದುರುಪಯೋಗವಾದರೆ ಶಾಪ.ʼ ಎಂಬ ಶ್ರೀಯವರ ಮಾತು ನಿಜವಾದುದು.
ಉತ್ತಮ ಆಡಳಿತ ಮಾನವನಿಗೆ ಶಾಂತಿ, ನೆಮ್ಮದಿ, ಸಹಬಾಳ್ವೆ, ಬಾತೃತ್ವ, ಸೌಹಾರ್ಧತೆಯನ್ನು ನೀಡುತ್ತದೆ. ಪ್ರಾಕೃತಿಕ ನ್ಯಾಯವನ್ನು ಪ್ರತಿಯಬ್ಬರಿಗೆ ಒದಗಿಸುತ್ತದೆ. ಜನರ ಬೆವರಿನ ಮೇಲೆ ನಿಂತಿರುವ ಆಡಳಿತ ಜನರಿಗೆ ಸರಿಯಾದ ಸವಲತ್ತುಗಳನ್ನು ಒದಗಿಸಿ ಘನತೆಯ ಬದುಕನ್ನು ಕೊಡಬೇಕು. ಜನರು ಕಟ್ಟುವ ತೆರಗೆಯನ್ನು ಜನರಿಗೆ ಸರಿಯಾಗಿ ತಲುಪಿಸಬೇಕು. ಅವರ ದುಡುಮೆಯ ತೆರಗೆಯನ್ನು ಆಡಳಿತ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಅದು ಜನರಿಗೆ ಬಗೆಯುವ ವಂಚನೆಯಾಗುತ್ತದೆ. ನಮ್ಮ ಆಡಳಿತದ ಇತಿಹಾಸವನ್ನು ಗಮನಿಸುತ್ತಾ ಬಂದರೆ ಜನರಿಗೆ ಎಸಗಿದ ವಂಚನೆಯನ್ನೇ ಹೆಚ್ಚಾಗಿ ಕಾಣುತ್ತೇವೆ. ಈ ವಂಚನೆಯಿಂದ ಪಾರಾಗಲು ಜನರು ಜಾಗೃತರಾಗಬೇಕು. ಆಡಳಿತನ್ನು ಸರಿ ದಾರಿಗೆ ತರಬೇಕು. ಹೀಗಾಗಿ ಜನರು ಆಡಳಿತಕ್ಕೆ ಪ್ರಜ್ಞೆ ಮೂಡಿಸುವ ಧ್ವನಿಯನ್ನು ಮಾಡುತ್ತಲೇ ಇರಬೇಕು. ಆಗ ಆಡಳಿತ ಸಕ್ರಿಯವಾಗಿ ಜನತೆಯ ಸೇವೆಯನ್ನು ಮಾಡುತ್ತದೆ. ಇಲ್ಲದಿದ್ದರೆ ಜನರನ್ನು ಪಾತಳಕ್ಕೆ ಇಳಸಿ ಆಳ ನೋಡುತ್ತದೆ. ಈ ವಿವೇಕವನ್ನು ಸಾರ್ಥಕ ಬದುಕು ಕೃತಿ ಮೂಡಿಸುತ್ತದೆ. ಶರಣರ ಆಲೋಚನೆಗಳು ಈ ನೆಲೆಯನ್ನು ಹೊಂದಿವೆ. ʻಮೂಕ ಜನಾಂಗ ಮತ್ತು ಕಿವುಡು ಸರಕಾರ ಉತ್ತಮ ಪ್ರಜಾಪ್ರಭುತ್ವವನ್ನು ಕೊಡಲಾರವು ʼ ಎಂಬ ಮಾನ್ಯರ ಮಾತು ನಮಗೆ ತಿಳುವಳಿಕೆಯನ್ನು ನೀಡುತ್ತದೆ.
ಈ ಕೃತಿಯಲ್ಲಿ ದಾಖಲಾಗಿರುವ ಪ್ರತಿಯಬ್ಬ ಶರಣ ಸರಳ, ಸಜ್ಜನ, ವಿನಯಶೀಲ, ಪ್ರಜಾಪ್ರಭುತ್ವ ಆಶಯದ ಮನೋಭಾವದವರು. ನ್ಯಾಯ, ನಿಷ್ಠುರತೆ, ಬಂಧುತ್ವ, ಬಹುತ್ವದಲ್ಲಿ ನಂಬಿಕೆ ಇರುವವರು. ನಡೆ-ನುಡಿಯಲ್ಲಿ ಶುದ್ದವುಳ್ಳವರು. ವೈಯಕ್ತಿಕವಾಗಿ ಸ್ವಚ್ಚ ಮನಸ್ಸನ್ನು ಹೊಂದಿದವರು. ಸದಾ ಜನರಲ್ಲಿ ಜ್ಞಾನ ತುಂಬಲು ತುಡಿಯುವವರು. ಜನರ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಸಾರ್ಥಕ ಬದುಕನ್ನು ಸಾಕಾರಗೊಳಿಸಲು ಅವಿರತ ಹೋರಾಟ ಮಾಡುವವರು. ಪ್ರಭುತ್ವ ಶಕ್ತಿಯನ್ನು ದಿಟ್ಟವಾಗಿ ಎದುರಿಸಿ ಘನ ಬದುಕನ್ನು ಪ್ರತಿಯಬ್ಬರ ಮನಸ್ಸಿನಲ್ಲಿ ಬಿತ್ತುವವರು. ಇಂತಹ ವ್ಯಕ್ತಿತ್ವನ್ನು ಪ್ರತಿಯೊಂದು ಸಂಸ್ಥೆ, ಸಮುದಾಯ, ಜನಾಂಗ, ಆಡಳಿತ, ರಾಷ್ಟ್ರ ಬೆಳಸಿಕೊಂಡಾಗ ಜೀವನ ಸುಂದರವಾಗುತ್ತದೆ. ಪ್ರತಿಯಬ್ಬರು ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಸಮಾಜ ಒಳ್ಳೆಯ ರೀತಿಯಲ್ಲಿ ಮುನ್ನಡೆಯುತ್ತದೆ. ಮುಂದಿನ ಜನಾಂಗವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ. ಈಗಾಗಲೇ ನಾವು ಮುಂದಿನ ಜನಾಂಗವನ್ನು ಅನಾಥ ಮಾಡುವ ಯೋಜನೆಗಳನ್ನೇ ರೂಪಿಸಿ ಅಧೋಗತಿಗೆ ಇಳಿಯುತ್ತಿದ್ದೇವೆ. ಈ ಸ್ಥಿತಿಯಿಂದ ಪಾರಾಗುವ ಬಗೆಯ ಪರ್ಯಾಯ ದಾರಿಗಳನ್ನು ಈ ಕೃತಿ ಕಟ್ಟಿ ಕೊಡುತ್ತದೆ. ಇಂತಹ ಸಾರ್ಥಕ ದಾರಿಯನ್ನು ನಮ್ಮ ಶರಣರು ತುಳಿದು ಯಶಸ್ವಿಯಾದದ್ದನ್ನು ಚರಿತ್ರೆಯಲ್ಲಿ ಕಾಣುತ್ತೇವೆ. ಇಂದಿನ ಜನಾಂಗ ಅವರ ಬದುಕಿನ ಆದರ್ಶಗಳನ್ನು ಅಳವಿಸಿಕೊಂಡು ಮುನ್ನಡೆದರೆ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಆದ್ದರಿಂದ ಯಾವುದೇ ದೇಶ ಘನತೆಯಿಂದ ಜೀವಿಸಬೇಕಾದರೆ ಗುಣಮಟ್ಟದ ಪ್ರಮಾಣಿಕ ಬದುಕು ಪ್ರತಿಯಬ್ಬರದಾಗಬೇಕು. ಇಂತಹ ಬದುಕಿನ ಪಾಠವನ್ನು ಈ ಕೃತಿ ಕಲಿಸುತ್ತದೆ.
ಡಾ. ಅಮರೇಶ ಯತಗಲ್ ಅವರು ಒಂದು ಮಾದರಿಯ ಅಭಿನಂದನ ಗ್ರಂಥವನ್ನು ನಾಡಿಗೆ ಕೊಟ್ಟಿದ್ದಾರೆ. ನ್ಯಾಯಮೂರ್ತಿ ವಿ. ಪಾಟೀಲರ ವ್ಯಕ್ತಿತ್ವ, ಆಶಯ, ಚಿಂತನೆ, ಜ್ಞಾನಕ್ಕೆ ಅನುಗುಣವಾಗಿ ಈ ಕೃತಿ ರೂಪಗೊಂಡಿದೆ. ಇಡೀ ವಚನಕಾಲವನ್ನು ಮತ್ತೆ ಈ ಕಾಲಕ್ಕೆ ತಂದು ಚಿಂತನೆಗೆ ಒಳಪಡಿಸಲಾಗಿದೆ. ಇದು ಕೇವಲ ತೋರಿಕೆಯ ಅಭಿನಂದನಾ ಗ್ರಂಥವಲ್ಲ. ನಾಡಿನ ನಿಜವಾದ ಕಳಕಳಿಯಿರುವ ಮನಸ್ಸುಗಳ ಬಲವರ್ಧನೆಯ ದ್ಯೋತ್ಯಕವಾಗಿದೆ. ಪ್ರತಿಯೊಂದು ಸಂಸ್ಥೆ, ವ್ಯಕ್ತಿಗಳು ಸಂಗ್ರಹಿಸಿಟ್ಟುಕೊಂಡು ಅಧ್ಯಯನ ಮಾಡುವ ಕೃತಿಯಾಗಿದೆ. ಅಭಿನಂದನಾ ಗ್ರಂಥಕ್ಕೆ ಉತ್ತಮ ಮಾದಿಯಾಗಿದೆ. ಇಂತಹ ಸಾರ್ಥಕ ಕಾರ್ಯ ಮಾಡಿದ ಡಾ. ಅಮರೇಶ ಯತಗಲ್ ಬಳಗಕ್ಕೆ ಅಭಿನಂದನೆಗಳು ಸಲ್ಲಬೇಕು.






0 Comments