ಅವಧಿಯ ಭಾಮಿನಿ ಷಟ್ಪದಿ ಅಂಕಣದಲ್ಲಿ “ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ?” ಅನ್ನೋ ಬರಹವನ್ನು ಪ್ರಕಟಿಸಿದ ಎರಡು ದಿನಗಳ ಬಳಿಕ ನಮಗೊಂದು ಅಚ್ಚರಿ ಕಾದಿತ್ತು. ಹಾಗೆ ನಮ್ಮ ಅಚ್ಚರಿಗೆ ಕಾರಣವಾದದ್ದು ಮಾಡರೇಟ್ ಮಾಡಬೇಕಾಗಿದ್ದ ಕಾಮೆಂಟುಗಳ ನಡುವೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕೂತಿದ್ದ ಅದೊಂದು ಮೇಲ್. ಲೇಖನಕ್ಕೆ ಟೀನಾ ಬರೆದ ಪ್ರತಿಕ್ರಿಯೆಗೆ ಉತ್ತರವಾಗಿದ್ದ ಆ ಮೇಲ್ ಹೀಗಿತ್ತು:
ನಮಸ್ತೇ.
ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು. ಹಂಗಾಮ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ಮತ್ತೆ ಅದರ ನೆನಪು ಮುದ ಕೊಡುತ್ತಿದೆ. ಹಂಗಾಮದ ಗಾನಾ ಈಗ ಚೇತನಾ ಆಗಿದ್ದಾಳೆ. ಗಾನಾಳಿಗೆ ದೊರೆತ ಪ್ರೀತಿ ಚೇತನಾಳಿಗೂ ದೊರೆಯಲಿ ಎಂದು ಆಶಿಸುತ್ತೇನೆ.
ನಿಮ್ಮ
ಚೇತನಾ ತಿರ್ಥಹಳ್ಳಿ
*
ಅವಧಿ ಶುರುವಾದದ್ದಕ್ಕೂ ಸಾರ್ಥಕವಾಯಿತು ಅನ್ನಿಸಿತು, ಈ ಮೇಲ್ ನೋಡಿದ ಮೇಲೆ. ಒಂದು ಸಣ್ಣ ನೆಪ. ಆದರೆ ಹಂಗಾಮ ಮರೆಯಾಗುತ್ತಿದ್ದಂತೆ ಅದರಲ್ಲಿ ಬಲು ಚುರುಕಿನ ಬರಹಗಳನ್ನು “ಹೌದೇನೆ?” ಎಂಬ ಅಂಕಣದಡಿ ಬರೆಯುತ್ತಿದ್ದ ಗಾನಾ ಜೋಯ್ಸ್ ಕೂಡ ಪತ್ತೆ ಇಲ್ಲದಂತಾಗಿಬಿಟ್ಟಿದ್ದರಲ್ಲ, ಈಗ ಹೀಗೆ ಪ್ರತ್ಯಕ್ಷರಾದರು. ಅದೂ ಮರೋ ಒಕ ಅವತಾರದಲ್ಲಿ. ಸಂಪರ್ಕವೇ ತಪ್ಪಿಹೋಗಿದ್ದ ಹೊತ್ತಿನಲ್ಲಿ, ಯಾವ ವ್ಯಕ್ತಿಗಾಗಿ ಹಂಬಲಿಸುತ್ತಿದ್ದೆವೊ ಅದೇ ವ್ಯಕ್ತಿಯ ಮುಖ ಟಿವಿ ಸ್ಕ್ರೀನ್ ಮೇಲೆ ಧುತ್ತನೆ ಮೂಡಿಬಿಟ್ಟರೆ, ಅದೇ ವ್ಯಕ್ತಿಯ ಬರಹವೊಂದು ಅಕಸ್ಮಾತ್ತಾಗಿ ವಿಳಾಸದ ಸಹಿತವೇ ಸಿಕ್ಕಿಬಿಟ್ಟರೆ ಆಗುವ ಸಂತಸಕ್ಕೆ ಪಾರವೆಲ್ಲಿದೆ? ಗಾನಾ ಜೋಯ್ಸ್ ಹೀಗೆ ಎಷ್ಟೋ ಅಕ್ಷರ ಪ್ರಿಯರ ಹಂಬಲವಾಗಿದ್ದವರು. ಚೇತನಾ ತಿರ್ಥಹಳ್ಳಿಯಾಗಿ, ಜೋರು ಮಳೆ ಗಾಳಿಯ ಮಲೆನಾಡಲ್ಲಿ ಯಾವುದೋ ಬೀದಿಯಲ್ಲಿ ನಡೆಯುತ್ತಿದ್ದವರು ಸ್ವಲ್ಪ ಕಾದು ಹೋಗೋಣ ಎಂದುಕೊಂಡವರಂತೆ ಬಂದವರು ಬಂದೂ ಬಂದೂ ಅವಧಿಯ ಜಗುಲಿಗೇ ತಲುಪಿದ್ದಾರೆ. ಅವರನ್ನು ಅವಧಿ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ.
ಇಷ್ಟನ್ನೆಲ್ಲ ಸಾಧ್ಯ ಮಾಡಿದ್ದು ಹಂಗಾಮದ ಪುಟ್ಟ ಬರಹವೊಂದರ ಮರು ಪ್ರಕಟಣೆ. ಒಂದು ಬರಹ, ಒಂದು ಕವಿತೆ, ಒಂದು ಕಥೆ ಕಳೆದು ಹೋಗಿದ್ದ ಬಾಂಧವ್ಯವನ್ನೇ ಮತ್ತೆ ಬೆಸೆಯುತ್ತದೆ ಅಂದರೆ ಇದಕ್ಕಿಂತ ಇನ್ನೇನು ಬೇಕು?
ಅಕ್ಷರದ ಶಕ್ತಿಯನ್ನು ಅವಧಿ ಸದಾ ಧ್ಯಾನಿಸುತ್ತದೆ.





gana or chetana call her by any name ,her writings are always have a natural flow .keep itup ,gaaaana !