ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾರಾಯಿ ಮಾರಾಟ ಮತ್ತು ಕ್ರಾಂತಿಕಾರಿ ಸುಬ್ಬಣ್ಣನ ಸಾವು…

ನಾಗರಾಜ್ ಹೆತ್ತೂರು

`ಕಡಿಮೆ ದರದ ಮಧ್ಯ’ ಪ್ರಸ್ತಾಪ ಸರ್ಕಾರದ ಮುಂದಿದೆ. ಕಡಿಮೆ ಬೆಲೆಗೆ ಅಗ್ಗದ ಮಧ್ಯ ಕೊಡುತ್ತೆವೆ ಎಂಬ ಬಗ್ಗೆ ಮಾತುಕತೆ ನಡೆದಿದೆ. ಈ ಮೂಲಕ ನಿಷೇಧವಾಗಿರುವ ಸಾರಾಯಿಯನ್ನು ಮತ್ತೆ ಮಾರಾಟ ಮಾಡುತ್ತಾರಂತೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಾರಾಯಿ ಮಾರಾಟ ಎಂದಾಗಲೆಲ್ಲ. ಒಂದು ಘಟನೆ ನೆನಪಾಗುತ್ತದೆ. ಇದು ಸತ್ಯ ಘಟನೆ.

ಬಹುಶಃ ಇಲ್ಲಿಗೆ 12 ವರ್ಷ ಆಗಿರಬಹುದು. ನಮ್ಮೂರಿನಲ್ಲಿ ಸುಬ್ಬು ಎಂಬ ಯುವಕನಿದ್ದ. ಎಲ್ಲರೂ ಅವರನ್ನು ಸುಬ್ಬಣ್ಣ ಎಂದೇ ಕರೆಯುತ್ತಿದ್ದರು. ನೀಳ ಕಾಯ. ಶಿಸ್ತಿನ ಯುವಕ. ತಂದೆಗೆ ಒಬ್ಬನೇ ಗಂಡು ಮಗ. ಪ್ರಾಥಮಿಕ ಶಿಕ್ಷಣವನ್ನು ಊರಲ್ಲೇ ಮುಗಿಸಿ ಪಿಯುಸಿ, ನಂತರ ಮೂಡಿಗೆರೆಲಿ ಓದುತ್ತಿದ್ದ. ಅಲ್ಲೇ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದು ದಲಿತ ಸಂಘರ್ಷ ಸಮಿತಿ ಸೇರಿದಂತೆ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ನಾವು ಹೈಸ್ಕೂಲಿಗೆ ಓದುವ ಕಾಲಕ್ಕೆ ಆತನಿಂದ ಪ್ರಭಾವಕ್ಕೆ ಒಳಗಾಗಿದ್ದೆವು. ಸುಬ್ಬು ಊರಿಗೆ ಮನೆ ಹತ್ತಿರ ಬಂದಿದ್ದಾರೆ ಎಂದರೆ ಒಂದಷ್ಟು ಹೊಸ ವಿಚಾರ ತಿಳಿಸುತ್ತಾರೆ ಎಂಬರ್ಥ.

ನಮ್ಮ ಮೂಡಿಗೆರೆ ಯ ಹಾಸ್ಟೆಲ್ ಹಾಸ್ಟೆಲ್ ಗೆ ಅದ್ಯಾರೋ ನಕ್ಸಲ್ ಬಂದಿದ್ದರಂತೆ. ಅವರನ್ನು ನೋಡಿದೆ… ನಮ್ಮ ರೂಮಿನಲ್ಲೇ ಉಳಿಯುತ್ತಿದ್ದರು. ಅವರು ನೋಡಲು ಹೇಗಿರುತ್ತಾರೆ ಗೊತ್ತಾ… ! ಕೈಯ್ಯಲ್ಲಿ ಗನ್ನು ನಮ್ಮ ದಲಿತರನ್ನು, ಬಡಬಗ್ಗರನ್ನು ಇನ್ನು ಮುಂದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ… ಎಂಬ ಮಾತುಗಳನ್ನು ಆಡುತ್ತಿದ್ದರು. ನಾವು ಕುತೂಹಲದೊಂದಿಗೆ ಅವರ ಮುಂದೆ ಕುಳಿತು ಕಿವಿಗೊಟ್ಟು ಕೇಳುತ್ತಿದ್ದೆವು. ನಮಗೆ ಚಂದ್ರಪ್ರಸಾದ್ ತ್ಯಾಗಿ ಹೆಸರು ಗೊತ್ತಿದ್ದು ಅವರ ಬಗ್ಗೆ ದಂತಕತೆಗಳು ಹುಟ್ಟಿಕೊಂಡಿದ್ದರಿಂದ. ಸುಬ್ಬಣ್ಣನ ಮಾತುಗಳನ್ನು ಕೇಳಿ ರೋಮಾಂಚನ ಆಗುತ್ತಿದ್ದೆವು.

ಸುಬ್ಬಣ್ಣ ಒಳ್ಳೆಯ ಕಲಾವಿದ ಕೂಡ ಆಗಿದ್ದರಿಂದ ಅವರ ಮನೆ ಮುಂದೆ (ಚಿಳ್ಳು) ಬೆಂಚು ಅಲ್ಲಿ ಗೋಡೆಗೆ ಬಟ್ಟೆ ಕಟ್ಟಿಕೊಂಡು ಏನೇನೋ ಬಿಡಿಸುತ್ತಿದ್ದರು. ಗೀಚುತ್ತಿದ್ದರು, ಕವನ ಬರೆಯುತ್ತಿದ್ದರು. ನೋಡು ಓದುತ್ತೇನೆ ಕೇಳಿ ಎಂದು ನಮ್ಮ ಮುಂದೆ ಓದುತ್ತಿದ್ದರು. ಸಂಜೆ ಆಯಿತೆಂದರೆ ಸೋಮಾರಿ ಕಟ್ಟೆ ಬಳಿ ಸುಬ್ಬಣ್ಣ ಕೆಲ ಹುಡುಗರನ್ನು ಸೇರಿಸಿಕೊಂಡು ಕ್ರಾಂತಿ ಗೀತೆ ಹೇಳುತ್ತಿದ್ದರೆ ಇಡೀ ಕಾಲನಿಯ ಮಂದಿ ಕೂಡಿಕೊಳ್ಳುತ್ತಿದ್ದರು. ಸ್ಯಾರಿ ಗಂಜಿಗಾಗಿ ಊರೂರು ತಿರುಗುತ್ತ ಕೂಲಿಗಾಗಿ ಸುತ್ತೋರು… ಅನುಸೂಯ ನನ್ನವ್ವ… ನಾಡ ನಡುವಿನಿಂದ ನುಡಿದ ನೋವಿನ ಕೂಗೆ… ಹೀಗೆ ಇಂಥಹ ಹತ್ತಾರು ಹಾಡುಗಳು ನಮಗೆ ಆಗಲೇ ಬಾಯಿಪಾಠ ಆಗಿದ್ದವು ಅವರು ಮೂಡಿಗೆರೆ ಯಿಂದ ಬಂತೆಂದರೆ ನಮಗೊಂದು ರೀತಿಯ ವಿಚಾರ ತಿಳಿಯುವ ಕುತೂಹಲ.

ಇಂತಹ ಸುಬ್ಬಣ್ಣ ನಾನು ಕಾಲೇಜು ಹೋಗುವ ಹೊತ್ತಿಗೆ ಗ್ರಾಮದಲ್ಲೇ ಉಳಿಯಲು ಪ್ರಾರಂಭಿಸಿದರು. ಕ್ರಾಂತಿ ಮಾತುಗಳು ಕಡಿಮೆ ಆಗಿತ್ತು. ಇದಕ್ಕೆ ಅವರ ತಾಯಿ ಕಾರಣ. ಇಡೀ ಕಾಲೊನಿಗೆ ಒಬ್ಬನೇ ಒಬ್ಬ ಸುಬ್ಬು ಓದುತ್ತಿದ್ದಾನೆ ಎಂದು ಅವನಿಗೆ ಯಾವತ್ತೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಳು. ಸುಬ್ಬಣ್ಣನ ಶಿಸ್ತು… ಅವ್ವನ ಸಾಲವನ್ನು ದುಪ್ಪಟ್ಟುಗೊಳಿಸಿತ್ತು. ಆದರೂ ಮುಂದೆ ನನ್ನ ಮಗ ನನ್ನನ್ನು ಕೈ ಬಿಡುವುದಿಲ್ಲ ಎಂದು ಸುಬ್ಬಣ್ಣ ಏನು ಕೇಳುತ್ತಾನೋ ಎಲ್ಲವನ್ನೂ ತಂದು ಹಾಕುತ್ತಿದ್ದಳು. ಎಂತಹ ಸಂದರ್ಭದಲ್ಲಿ ತನ್ನ ಮಗನನ್ನು ಬಿಟ್ಟು ಕೊಡುತ್ತಿರಲಿಲ್ಲ.

ಇಂತಹ ಸುಬ್ಬಣ್ಣ ಡಿಗ್ರಿಯಲ್ಲಿ ಇಂಗ್ಲೀಷ್ ಫೇಲ್ ಆದ ಕಾರಣ ಊರಿನಲ್ಲೇ ಉಳಿದುಕೊಂಡಿದ್ದ. ಮಗ ಎಲ್ಲೂ ಕೆಲಸಕ್ಕೆ ಹೋಗಬಾರದು ಎಂಬುದು ಅಮ್ಮನ ಒತ್ತಾಸೆ. ಇಷ್ಟು ಓದಿಕೊಂಡು ನಾನು ಕೆಲಸಕ್ಕೆ ಹೋಗಬೇಕಾ…? ಎಂಬ ಒಂದಷ್ಟು ಬಿಮ್ಮು ಸುಬ್ಬಣ್ಣನಿಗೆ. ಇಂತಹ ಸುಬ್ಬಣ್ಣ ಬರಬರುತ್ತಾ ಶಿಸ್ತು ಕಳೆದುಕೊಂಡ. ಎಲ್ಲೂ ಹೋಗದೆ ಮನೆಯಲ್ಲೇ ಕೂರಲು ಪ್ರಾರಂಭಿಸಿದ. ಮೂಡಿಗೆರೆಯ ಹಾಸ್ಟೆಲ್ ಗೆ ಹೋಗುವುದೂ ಕಡಿಮೆಯಾಗಿತ್ತು . ಮೂಡಿಗೆರೆಯಿಂದ ಒಂದಷ್ಟು ಸ್ನೇಹಿತರು ಆಗಾಗ ಬಂದು ಸುಬ್ಬಣ್ಣನನ್ನು ಭೇಟಿ ಮಾಡಿಕೊಂಡು ಹೋಗುತ್ತಿದ್ದರು. ವರ್ಷ ಊರಿನಲ್ಲೇ ಕಳೆದ ನಂತರವಂತೂ ನಮಗೆ ಸುಬ್ಬಣ್ಣನ ಬಗ್ಗೆ ಇದ್ದ ಆಸಕ್ತಿ ಕ್ರಮೇಣ ಕಡಿಮೆಯಾಗತೊಡಗಿತು.

ಅದಾಗಿ ನಾನು ಪಿಯುಸಿ ಮುಗಿಸಿಕೊಂಡು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿಕೊಂಡೆ. ನಾನು ಊರಿಗೆ ಹೋದಾಗಲೆಲ್ಲ ಮೈಸೂರು, ಪರಿಸರ, ಹಾಸ್ಟೆಲ್ ಹೀಗೆ ಸಾಕಷ್ಟು ಅನುಭವ ಹಂಚಿಕೊಳ್ಳುತ್ತಿದ್ದೆ. ಸುಬ್ಬಣ್ಣ ಹೌದಾ…? ಹಾಗೆ ಮಾಡು ಹೀಗೆ ಮಾಡು ಎಂದು ಒಂದಷ್ಟು ಪ್ರೀತಿಯ, ಭರವಸೆ ಮಾತನಾಡಿ ಕಳಿಸುತ್ತಿದ್ದರು. ಅದಾಗಿ ನಾನು ಡಿಗ್ರಿ 2 ನೇ ವರ್ಷಕ್ಕೆ ಬಂದಾಗ ಇದ್ದಕ್ಕಿದ್ದಂತೆ ನಮ್ಮ ಹಾಸ್ಟೆಲ್ ಕಾಯಿನ್ ಬೂತ್ ಗೆ ಊರಿನಿಂದ ಕರೆ ಬಂತು ` ಆ ಕಡೆಯಿಂದ ತಂದೆ ಮಾತನಾಡುತ್ತಿದ್ದರು ನಮ್ಮ ಕೆಳ್ಳ ಮನೆ ಸುಬ್ಬು ಸಾರಾಯಿ ಕುಡಿದು ಸೀರಿಯಸ್ ಆಗಿದೆ. ಸಕಲೇಶಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಆದ್ರೆ ಬಾ’ ಎಂದರು. ನನಗೆ ತಕ್ಷಣವೇ ಸುಬ್ಬಣ್ಣ, ಆತನ ಮುಖ , ಮಾತು ನೆನಪಾಗಿ ಬ್ಯಾಗು ನೇತು ಹಾಕಿಕೊಂಡು ಊರ ಕಡೆ ಹೊರಟೆ. ಸಕಲೇಶಪುರದ ಕ್ರಾಪರ್ಡ್ ಆಸ್ಪತ್ರೆಗೆ ಬರುವಷ್ಟರಲ್ಲಿ ಸುಬ್ಬಣ್ಣನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಜತೆಗೆ ಅವನೊಂದಿಗೆ ಕಳ್ಳಬಟ್ಟಿ ಕುಡಿದು 3 ಮಂದಿ ಸಾವನಪ್ಪಿದ್ದರು.

ಹಿಂದಿನ ದಿನ ನಡೆದಿದ್ದಷ್ಟು.

ನಮ್ಮ ದೊಡ್ಡಪ್ಪನ ಮಗ ಪುಟ್ಟ ಎಂಬ ಹುಡುಗನಿದ್ದಾನೆ. ಹೀಗೆ ಹಿಂದಿನ ದಿನ ರಾತ್ರಿ ಮಾತನಾಡುತ್ತ ಕಳಿತಿದ್ದಾರೆ. ಈ ಮಧ್ಯೆ ಸುಬ್ಬಣ್ಣ `ಪುಟ್ಟಾ ಯಾಕೋ ಬೇಸರ ಆಗುತ್ತಿದೆ ಸಾರಾಯಿ ತಂದ್ಕೊಂಡು. ಮನಸ್ಸಿಗೆ ಒಂದಷ್ಟು ನೆಮ್ಮದಿಯಾಗುತ್ತದೆ’ ಎಂದಿದ್ದಾರೆ. ಪುಟ್ಟನಿಗೆ ಸುಬ್ಬಣ್ಣನ ಬಾಯಲ್ಲಿ ಸಾರಾಯಿ ಕೇಳಿ ಅಚ್ಚರಿಯಾದರೂ ಕೊನೆಗೆ ಸುಬ್ಬಣ್ಣನೇ ಯಾರಿಗೂ ಹೇಳ್ಬೆಡಾ ಪುಟ್ಟಾ ನಾನು ಆಗಾಗ ತರಿಸ್ಕಂಡು ಕುಡೀತಿನಿ… ಈವತ್ತು ಮನಸ್ಸಿಗೆ ಯಾಕೋ ಬೇಜಾರು ಎಂದಿದ್ದಾರೆ. ಇರಬಹುದೇನೋ… ಎಂದುಕೊಂಡ ಪುಟ್ಟ, ಈ ಸುಬ್ಬಣ್ಣ ಕೇಳಿದ್ದೆ ದೊಡ್ಡ ವಿಚಾರ ಎಂದು ನೇರ ಅಲ್ಲೊಬ್ಬ ಪುಜಾರ್ರು ಮನೆಗೆ ಹೋಗಿ ಕಳ್ಳಬಟ್ಟು ತಂದುಕೊಟ್ಟಿದ್ದಾನೆ.

ಅದಾಗಿ ಸುಬ್ಬಣ್ಣ ತರಹವೇ ಸಾಕಷ್ಟು ಮಂದಿ ಅಲ್ಲಿಂದ ತಂದು ಕುಡಿದಿದ್ದಾರೆ. ರಾತ್ರಿ ಒಂದು ಹೊತ್ತಿನಲ್ಲಿ ಸುಬ್ಬಣ್ಣನಿಗೆ ಹೊಟ್ಟೆ ನೋವು ಶುರುವಾಗಿದೆ. ಆದರೆ ಸುಬ್ಬಣ್ಣ ತಡೆದುಕೊಂಡಿದ್ದಾನೆ. ಇವರ ನರಳಾಟ ಕ್ಕೆ ಒಂದು ಹೊತ್ತಿನಲ್ಲಿ ಎಚ್ಚರವಾದ ಅವ್ವ `ಯಾಕ ಸ್ವಾಮಿ ಏನಾಯ್ತು..?’ ಎಂದು ಕೇಳಿದ್ದಾಳೆ. ಆದರೆ ಸುಬ್ಬಣ್ಣ ಮಾತ್ರ ತುಟಿಕ್ ಎಂದಿಲ್ಲ ನೋವನ್ನು ನುಂಗಿಕೊಂಡೇ ಹೊಳ್ಳಾಡಿದ್ದಾನೆ. ರಾತ್ರಿ 3 ಗಂಟೆ ವೇಳೆಗೆ ಎಲ್ಲರ ಮನೆಯ ಲೈಟುಗಳು ಆನ್ ಆಗಿವೆ. ಕಾಲೂನಿಯಲ್ಲಿ ಮಾತು ಜೋರಾಗಿದೆ. ಅದ್ದ ಸುಬ್ಬಣ್ಣನ ಅವ್ವ ಏನು ಎಂದು ಹೊರಗೆ ನೋಡಿದಾಗ ಪಕ್ಕದ ಮನೆಯ ಮಂಜ ` ಅವ್ವಾ ಸಾರಾಯಿ ಕುಡ್ದು ಸುಮಾರ್ ಜನರನ್ನು ಆಸ್ಪತ್ರಿಗೆ ಕರ್ಕೊಂಡು ಹೋಗ್ತಿದ್ದಾರಂತೆ ಎಂದಿದ್ದಾಳೆ’

ಮಲಗಿ ಹೊರಳಾಡುತ್ತಿದ್ದ ಸುಬ್ಬಣ್ಣನ ಕಿವಿಗೂ ವಿಚಾರ ಮುಟ್ಟಿದ್ದೆ ಆದರೂ ಅವ್ವ ಏನು ಅಂದುಕೊಳ್ಳುತ್ತಾಳೋ…? ನನ್ನ ನಂಬಿಕೆಗೆ ದ್ರೋಹಗ ಬಗೆದನಲ್ಲ ಎಂದು ಕೊಳ್ಳುತ್ತಾಳೆಂದು ಆದರೂ ಸುಮ್ಮನೆ ಮಲಗಿದ್ದಾರೆ. ಈ ಮಧ್ಯೆ ಅವ್ವನಿಗೆ ಮಗನ ನರಳಾಟ ಅನುಮಾನ ತಂದಿದೆಯಾದರೂ ನನ್ನ ಮಗ ಕುಡಿಯುವನಲ್ಲ ಎಂದು ಮತ್ತೆ ಮಲಗಿದ್ದಾಳೆ. ಅದಾಗಿ ಈದು ಗಂಟೆ ಹೊತ್ತಿಗೆಲ್ಲ ಮತ್ತೆ ಮಾತು ಜೋರಾಗಿದೆ. ಎದ್ದ ಅವ್ವ ` ಸಾರಾಯಿ ಮಾರವ್ರ ಮನೆ ಹಾಳಾಗ’ ಎಂದು ಬೈಯ್ಯುತ್ತಲೇ ಎದ್ದಿದ್ದಾಳೆ. ಇದೇ ಸಂದರ್ಭ ಸುಬ್ಬಣ್ಣನ ನರಳಾಟ ಹೆಚ್ಚಾದಾಗ ಅವ್ವ ಯಾಕೆ ಸ್ವಾಮಿ ಏನಾಯ್ತು..? ಎಂದು ಮತ್ತೆ ಕೇಳಿದ್ದಾಳೆ. ಅವ್ವಾ ಅವ್ವಾ… ಎಂದು ಏನೋ ಹೇಳಲು ಪ್ರಯತ್ನಿಸಿದವನು ಮತ್ತೆ ಸುಮ್ಮನಾಗುತ್ತಿದ್ದ.

ಈ ಮಧ್ಯೆ ಮಂಜ ಬಂದವನೇ ` ಸುಬ್ಬಣ್ಣಾ ನ ಏಳ್ಸು ಆ ಕಡೆ ಕಾಲೂನಿಲಿ ರಾತ್ರಿ ಸಾರಾಯಿ ಕುಡ್ದು 5 ಜನನ ಹೇರ್ಕಂಡು ಹೋದ್ರಂತೆ ನಮ್ ಕಾಲೂನಿಲಿ ಒಬ್ಬ… ಇಬ್ರು ಹೋದ್ರಂತೆ ಅಂತಾ ಸುದ್ದಿ’ ಎಂದ. ಇವನ ಮಾತು ಕೇಳಿ ನರಳುತ್ತಿದ್ದ ಸುಬ್ಬಣ್ಣನ ಜೀವ ಅರ್ಧ ಹೋದಂತಾಗಿಗೆ… ತಕ್ಷಣವೇ ಅವ್ವನ ಕೈ ಹಿಡಿದು `ಅವ್ವಾ ನಿಂಗೆ ಮೋಸ ಮಾಡ್ಬುಟ್ಟೆ. ನನ್ ಉಳಿಸ್ಕೊ ಅವ್ವಾ’ ಎಂದಿದ್ದಾನೆ. ಅವ್ವನ ಜೀವ ಒಮ್ಮೆಲೆ ಹೊರಟು ಹೋದಂತಾಗಿದೆ.

ಅಷ್ಟರಲ್ಲಿ ಅಲ್ಲಿಗೆ ಬಂದ ಪುಟ್ಟ ಸುಬ್ಬಣ್ಣನ ನರಳಾಟ ನೋಡಿ ` ಅವ್ವಾ ಸುಬ್ಬಣ್ಣನೂ ನನ್ನ ಜತೆ ತರಿಸ್ಕೊಂಡ’ ನಾನೆ ತಂದ್ಕೊಟ್ಟೆ ಎಂದ. ಇದನ್ನು ಕೇಳಿದ ಸುಬ್ಬಣ್ಣನ ಅವ್ವಾ ಅಯ್ಯೋ ನನ್ ಮಗುನ್ನ ತಗುದ್ರಲ್ಲೋ… ಎಂದು ಕಿರುಚಿದ್ದಾಳೆ. ಮಂಜ ಓಡಿದವನೇ ಇದ್ದ ಒಂದು ವ್ಯಾನ್ ಕಡೆದುಕೊಂಡು ಬಂದಿದ್ದಾನೆ. ಈ ಮಧ್ಯೆ ಸುಬ್ಬಣ್ಣ ರಕ್ತದ ವಾಂತಿ ಮಾಡಿದ್ದಾರೆ. ಕಾಲೂನಿಯ ಜನರೆಲ್ಲ ಸುಬ್ಬಣ್ಣನ ಮನೆ ಮುಂದೆ ನೆರೆದು ಸುಬ್ಬಣ್ಣನನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಸೇರಿಸಿದ್ದಾರೆ…. ವ್ಯಾನಿನಲ್ಲಿ ಇದ್ದಷ್ಟು ಸಮಯ ಸುಬ್ಬಣ್ಣ ಅವ್ವನ ಕೈ ಹಿಡಿದುಕೊಂಡು ಗೋಳಾಡಿದ್ದಾನೆ. ಅವ್ವಾ ಇದೊಂದು ಸಾರಿ ಬದುಕಿಸಿಕೋ ಎಂದಿದ್ದಾನೆ. ಅವ್ವಾ ನನ್ ಮಗನೇ… ಬದುಕಿಸ್ಕೋತಿನಿ.. ಎಂದು ಎಂದು ಹೇಳಿದ್ದಾಳೆ.

ಬೆಳಗ್ಗೆ 6. ಗಂಟೆಗೆ ವೇಳೆಗೆ ಒಂದು ಗ್ಲೂಕೂಸ್ ಹಾಕಿಸಿಕೊಂಡಿದ್ದ ಸುಬ್ಬಣ್ಣನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅವನೊಂದಿಗೆ ಅವತ್ತು ಆರು ಜನ ಮೃತಪಟ್ಟರು. ಅಲ್ಲಿದ್ದ ಡಾಕ್ಟರ್ ಸ್ವಲ್ಪ ಬೇಗನೆ ತಂದಿದ್ರೆ ಬದುಕಿಸಿಕೊಳ್ಳಬಹುದಿತ್ತು ಎನ್ನುತ್ತಿದ್ದರೇ, ತಾಯಿ ಎಲ್ಲಿ ನೊಂದುಕೊಳ್ಳುತ್ತಾಳೆ ಎಂದು ಹೇಳದೆ ನೋವು ನುಂಗಿಕೊಂಡು ಬೆಳಗ್ಗೆವರೆಗೂ ಕಾಯಿಸಿದ ಮಗನ ಮುಖ ನೋಡುತ್ತ ಅವ್ವ ಎದೆ ಹೊಡೆದುಕೊಳ್ಳುತ್ತಿದ್ದ ದೃಶ್ಯ, ಅಯ್ಯೋ ಸಾರಾಯಿ ತಂದುಕೊಟ್ಟು ನಾನೇ ಸಾರಾಯಿ ತಂದುಕೊಟ್ಟು ಸಾವಿಗೆ ಕಾರಣನಾದಲ್ಲ ಎಂದು ಗೋಳಾಡುತ್ತದ್ದ ಪುಟ್ಟನ ಗೋಳಾಟ ಇನ್ನೂ ನನ್ನ ಕಣ್ಣ ಮುಂದಿದೆ.

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಪ್ರಕರಣ ಇದು. ಸರ್ಕಾರ ಮತ್ತೆ ಕಡಿಮೆ ದರಕ್ಕೆ ಸಾರಾಯಿ ಮಾರಾಟ ಮಾಡಿದರೆ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಈಗ ಸುಬ್ಬಣ್ಣನ ಅವ್ವನು ಬದುಕಿಲ್ಲ. ಸರಕಾರಗಳಿಗೆ ಸಬ್ಬಣ್ಣನಂತಹವರ ಸಾವು ಎಂದಿಗೂ ಪಾಠ ಆಗುವುದೇ ಇಲ್ಲ ಎಂಬುದೇ ದುರಂತ…!

‍ಲೇಖಕರು avadhi

22 May, 2013

5 Comments

  1. ರೂಪ ಹಾಸನ

    ನಿಮ್ಮೊಳಗಿನ ಇಂಥಹ ಕರುಳು ಮಿಡಿಯುವ ಅನುಭವ ಕಥನಗಳು ಹೊರಬರಬೇಕು. ಅದು ಪ್ರಭುತ್ವದ ಕಣ್ಣು ತೆರೆಸಬೇಕು ನಾಗರಾಜ್. ನಿಮ್ಮ ಚಿಂತನೆ ಮತ್ತು ಬರವಣಿಗೆ ಈಗ ಮಾಗುವ ಹಂತದ ಕಡೆಗೆ ಹೊರಟಿರುವುದು ನನಗೆ ಖುಷಿಯಾಗಿದೆ.

  2. ನಾಗರಾಜ್ ಹೆತ್ತೂರ್

    ಥ್ಯಾಂಕ್ಸ್ ಮೇಡಂ ನಿಮ್ಮ ಮಾತುಗಳಿಗೆ ನಾನು ಋಣಿ.

  3. chalam

    ಒಮ್ಮೆ ಹಾಸನದಲ್ಲಿ ಜಿಲ್ಲಾದಿಕಾರಿಯಾಗಿದ್ದ ರಾಕೇಶ್ ಸಿಂಗ್ರ ಜೊತೆ ಮಾತನಾಡುತ್ತಾ ಸಾರಾಯಿಯ ಬಗ್ಗೆ ಮಾತಾಡುತ್ತಾ ಸುಮ್ಮನೆ ಎಲ್ಲವನ್ನು ನಿಷೇದಿಸಿದರೆ ಹೇಗೆ ಅಂತ ಕೇಳಿದೆ.ಅದಕ್ಕವರು ನೀಡಿದ ಕಾರಣ ಸಾರಾಯಿ ನಿಲ್ಲಿಸಿದ ತಕ್ಷಣ ಕಳ್ಳಬಟ್ಟಿ ಶುರುವಾಗುತ್ತದೆ.ಸರ್ಕಾರದಿಂದ ನಿಗದಿತ ಪ್ರಮಾಣದ ಆಲ್ಕೋಹಾಲ್ ಇರುವ ಡ್ರಿಂಕ್ಸ್ನಿಂದ ಆಗುವ ಅನಾಹುತಕ್ಕಿಂತಾ ಕಳ್ಳಬಟ್ಟಿಯ ಅನಾಹುತ ದೊಡ್ಡದು ಅಂತಾ ಹೇಳಿದ್ದರು.ಕೆಲವು ವಿಚಾರಗಳನ್ನು ವೈಜ್ಷಾನಿಕವಾಗಿ ಯೋಚಿಸಬೇಕಾಗುತ್ತದೆ.ಆದರೆ ಇಂತಹಾ ಅನಾಹುತಗಳು ನ,ಮ್ಮನ್ನು ದಿಕ್ಕೆಡಿಸುದು ಸಹಜ.ಸಮಯೋಚಿತ ಬರವಣಿಗೆ.

  4. krishnegowda

    Prices of drinks to be reduced; not the quality

  5. hksharath

    kaaduva baraha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading