ಪ್ರಯಾಣಿಕರಲ್ಲಿ ವಿನಂತಿ
ಮೈಲಾರಿ ಸುತಗಟ್ಟಿ
ಪ್ರಯಾಣಿಕರಲ್ಲಿ ವಿನಂತಿ ಒಂಭತ್ತು ಗಂಟೆಯ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ತಡವಾಗಿ ಆಗಮಿಸಲಿದೆ ಎಂದು ರೇಲ್ವೇ ಸ್ಟೇಷನಲ್ಲಿ, ನೀವು ಎದುರು ನೋಡುತ್ತಿರುವ ಬಸ್ ತಡವಾಗಿ ಆಗಮಿಸಲಿದೆ ಎಂದು ಬಸ್ ನಿಲ್ದಾಣದಲ್ಲಿ ಕೇಳಿರುತ್ತೇವೆ. ಆದರೆ ನಾನಿಲ್ಲಿ ಹೇಳ್ತಾ ಇರೋದು ರೇಲ್ವೆ ಅಥವಾ ಬಸ್ ತಡವಾಗಿ ಬರುತ್ತದೆ ಎಂದಲ್ಲ. ಎಲ್ಲರೂ ಬಸ್ ನಲ್ಲಿ ಓಡಾಡಿರಲೇಬೇಕು. ಶಾಲೆಗೆ ಹೋಗಬೇಕಾದ್ರೋ, ಕಾಲೇಜಿಗೆ ಹೋಗಬೇಕಾದ್ರೋ ಅಥವಾ ಅಜ್ಜಿಯ ಊರಿಗೆ ಹೋಗಬೇಕಾದ್ರೋ ಬಸ್ ಏರಿರಲೇಬೇಕು. ಅದರಲ್ಲೇನು ವಿಶೇಷ ಇಲ್ಲಾ ಬಿಡಿ. ಆದ್ರೆ ನಾವು ಟಿಕೇಟ್ ಪಡೆಯುವಾಗ ನೀಡುವ ಲೇಡಿ ಕಂಡಕ್ಟರ್ ಬಗ್ಗೆ ನಾನಿಲ್ಲಿ ಹೇಳ್ತಾ ಇರೋದು.
ಬಸ್ ಲ್ಲಿ ಹಲವಾರು ರೀತಿಯ ಜನ ದಿನವು ಪ್ರಯಾಣಿಸುತ್ತಿರುತ್ತಾರೆ. ಅವರಿಗೆ ಅವರದೇ ಆದ ಕೆಲಸ, ಜಂಜಾಟ, ಟೆನ್ಷನ್ ಇದ್ದೇ ಇರುತ್ತೆ. ಹೀಗಿರುವಾಗ ಟಿಕೇಟ್ ಕೊಡುವ ತೆಗೆದುಕೊಳ್ಳುವ ಸಂಧರ್ಭದಲ್ಲಿ ಚಿಲ್ಲರೆ ಸಲುವಾಗಿಯೋ, ಯಾವುದಕ್ಕೋ ಕಂಡಕ್ಟರ್ ಜೊತೆ ಜಗಳ, ವಾದ ಸಾಮಾನ್ಯ. ಅದರಲ್ಲೂ ಲೇಡಿ ಕಂಡಕ್ಟರ್ ಇದ್ರೆ ಪ್ರಯಾಣಿಕರ ಜಗಳ ಸ್ವಲ್ಪ ಜಾಸ್ತಿನೇ. ಬಸ್ ನಿಲ್ಲಿಸಬೇಕಾದ ಸ್ಟಾಪ್ ಗಿಂತ ಎರಡು ಹೆಜ್ಜೆ ಮುಂದೆ ಹೋಗಿ ನಿಂತ್ರು ಡ್ರೈವರ್ ಗಿಂತ ಕಂಡಕ್ಟರ್ ಗೆ ಬೈಗುಳ ಜಾಸ್ತಿ. ಯಾಕಂದ್ರೆ ವಿಜಲ್ ಹೊಡೆಯುವ ಕೆಲ್ಸ ಕಂಡಕ್ಟರದಲ್ವ, ವಿಜಲ್ ಕಂಡಕ್ಟರ್ ಹತ್ರ ಇದ್ರು, ಬ್ರೇಕ್ ಇರೋದು ಡ್ರೈವರ್ ಕಾಲಲ್ಲಿ ಅಂದ್ರೆ, ಡ್ರೈವರ್ ದೂ ತಪ್ಪಲ್ಲ ಬಿಡಿ ಯಾಕಂದ್ರೆ, ಬಸ್ ಲ್ಲೇನು ಪಿನ್ ಡ್ರಾಪ್ ಸೈಲೆನ್ಸಾ ಇರುತ್ತೆ ? ಹುಡುಗರ ಮೊಬೈಲ್ ಸಂಗೀತದಲ್ಲಿ ವಿಜಲ್ ಸೌಂಡ್ ಎಲ್ರೀ ಕೇಳಬೇಕು. ಕೆಲವು ಜನ ಇರ್ತಾರೆ ಲೇಡಿ ಕಂಡಕ್ಟರ್ ಜೊತೆಗೆ ಬೇಕು ಅಂತಾನೆ ಚಿಲ್ಲರೆ ಸಲುವಾಗಿಯೊ, ಬಾಗಿಲಲ್ಲಿ ನಿಂತಿದ್ದಕ್ಕೆ ಮೇಲೆ ಬನ್ನಿ ಅಂತ ಹೇಳಿದ್ದಕ್ಕೊ, ಮೊಬೈಲ್ ನಲ್ಲಿ ಹಚ್ಚಿದ ಹಾಡನ್ನು ಆಫ್ ಮಾಡಿ ಅಂತ ಹೇಳಿದ್ದಕ್ಕೊ ಜಗಳ ಮಾಡ್ತಾರೆ. ಇಂತವರಲ್ಲಿ ನನ್ನದೊಂದು ವಿನಂತಿ.

ಮದುವೆಯಾಗಿ ಗಂಡ, ಮನೆ, ಮಕ್ಕಳು ಅಂತ ಹಾಯಾಗಿ ಇರಬೇಕಾದ ಸಮಯದಲ್ಲಿ, ಈ ಕಂಡಕ್ಟರ್ ಕೆಲಸಕ್ಕೆ ಬಂದಿದ್ದಾರೆ ಅಂದ್ರೆ, ಅದರ ಹಿಂದೆ ಹಲವಾರು ಕಾರಣ, ಅನಿವಾರ್ಯತೆ ಇರಲೇಬೇಕು. ಹೆಣ್ಣಿಗೆ ಸ್ವಾತಂತ್ರ್ಯ, ಎಲ್ಲದರಲ್ಲೂ ಸಮಾನತೆ ನೀಡಿದ್ರೂ, ಹೆಣ್ಣು ಮಕ್ಳು ಮನೆಯಾಚೆ ಕಷ್ಟ ಪಡಬಾರದೆಂದು ಕೆಲಸಕ್ಕೆ ಕಳಿಸದೇ ಇರೋರೆ ಹೆಚ್ಚು. ಇಂತಹುದರ ನಡುವೆ ಕಂಡಕ್ಟರ್ ಕೆಲಸಕ್ಕೆ ಬರ್ತಾರೆ ಅಂದ್ರೆ, ಅದರ ಹಿಂದೆ ಬಡತನ,ತಂದೆ-ತಾಯಿ ಅನಾರೋಗ್ಯ, ಅಣ್ಣ-ತಮ್ಮ ಇಲ್ದೇ ಇರೋದು ಅಥವಾ ಅಣ್ಣ-ತಮ್ಮ ಇದ್ದು ಇಲ್ದೇ ಇರೋ ಥರಾ ಇರೋದು, ಸ್ವಂತ ದುಡಿಮೆ ಮೇಲೆ ಬಾಳಬೇಕೆಂಬ ಸ್ವಾಭಿಮಾನ ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಕಾರಣ ಸಿಗುತ್ತವೆ.
ಕೆಲವರು ಪ್ರಯಾಣಿಸುವಾಗ ಟಿಕೇಟ್ ಎಂದು ಕೇಳಿದ್ರೆ ಕೀಟಲೆ, ತಮಾಷೆ ಮಾಡ್ತಾರೆ. ಅವರು ಸಹಿಸ್ಗೊಂಡು ನಗುತ್ತಾ ತಮ್ಮ ಕೆಲ್ಸ ಮಾಡ್ತಾರೆ ಅಂದ್ರೆ ಅವರಿಗೆ ನಿಮ್ಮ ತಮಾಷೆ, ಕೀಟಲೆ ಇಷ್ಟ ಅಂತಲ್ಲ. ಕೆಸರಿನ ಮೇಲೆ ಕಲ್ಲು ಹಾಕೋದು ಬೇಡ ಅಂತ ಅಷ್ಟೇ. ಹೆಣ್ಣಿಗೆ ಸಹನೆ ಜಾಸ್ತಿ ಅಂತಾರೆ, ಲೇಡಿ ಕಂಡಕ್ಟರ್ ಗೆ ಅದಕ್ಕಿಂತ ಒಂದು ಕೈ ಜಾಸ್ತಿನೇ ಅನಿಸುತ್ತೆ. ಬಸ್ ಲ್ಲಿ ನೂರಾರು ರೀತಿಯ ಜನ ಬರ್ತಾರೆ, ಹೋಗ್ತಾರೆ ಇವರನ್ನೇಲ್ಲಾ ಸಹಿಸ್ಗೊಂಡು ಸಾಗ್ತಿರಲ್ಲಾ ಹ್ಯಾಟ್ಸ್ ಆಫ್ ರೀ ನಿಮಗೆ.
ಕೆಲವು ವಿದ್ಯಾವಂತರು, ಕಾಲೇಜಿಗೆ ಬರುವವರು ಕಂಡಕ್ಟರ್ ಗೆ ತಮ್ಮ ಪಾಸ್ ತೋರಿಸಿದ್ರೆ ಅದೇನಾಗುತ್ತೋ ಏನೋ. ಪಾಸ್ ತೋರಿಸಿ ಅಂತ ಕೇಳಿದ್ರೆ ಅದಕ್ಕೂ ಜಗಳ. ‘ ಇದೇ ಬಿಡ್ರಿ, ನಂಬಿಕೆ ಇಲ್ವ’ ಅಂತಾರೆ. ನಂಬಿಕೆ ಇಡೋಕೆ ಇವರೇನು ಅವರ ಮಾವನ ಮಕ್ಳಾ? ಒಂದು ವೇಳೆ ಪಾಸ್ ಇಲ್ದೇ ಹೋದ್ರೆ, ಚಕಿಂಗ್ ಇನ್ಸ್ ಪೆಕ್ಟರ್ ಬಂದ್ರೆ ಕಂಡಕ್ಟರ್ ಗೆ ತೊಂದ್ರೆ. ನಾವೆನೋ ಮಾನ ಮರ್ಯಾದೆ ಕಳ್ಕೊಂಡು ಎಂಭತ್ತೋ ನೂರು ರೂಪಾಯಿಯನ್ನೋ ದಂಡ ಕಟ್ತೀವಿ. ಉಂಬಳಕ್ಕಾಗಿ ಸಂಬಳವನ್ನೇ ನಂಬಿರುವ ಆ ಮಹಿಳಾ ಮಣಿಗಳು ಸಾವಿರಾರು ರೂಪಾಯಿ ದಂಡ ತೆರಬೇಕು.
ಒಂದೇ ಒಂದು ಸಾರಿ ಯೋಚ್ನೇ ಮಾಡಿ, ನಾವು ಮಾಡಿದ್ದು ಸರಿನಾ? ಅಂತಾ. ಒಂದು ವೇಳೆ ತಪ್ಪು ಅನಿಸಿದ್ರೆ ಆ ತಪ್ಪನ್ನಾ ಇನ್ನೊಮ್ಮೆ ಮಾಡಬೇಡಿ. ಸಾಧ್ಯವಾದರೆ ಆ ಕಂಡಕ್ಟರ್ ಹತ್ತಿರ ಒಮ್ಮೆ ಸಾರಿ ಕೇಳ್ಬಿಡಿ. ಅವರನ್ನು ಗೌರವಿಸುವದನ್ನು ಕಲಿಯಿರಿ. ಇದೇ ಪ್ರಯಾಣಿಕರಲ್ಲಿ ನನ್ನ ವಿನಂತಿ.






parvagilla olle yochane