ಸಹಜ ಸಾಗುವಳಿ ಪತ್ರಿಕೆ ಮಾರುಕಟ್ಟೆಯಲ್ಲಿ. ಪತ್ರಿಕೆಯ ಒಂದು ಲೇಖನ ಅವಧಿ ಓದುಗರಿಗಾಗಿ
ಬರದ ಕತೆಗಳು
ಬರ ನಿರ್ವಹಣೆಗೆ ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಸಾಮಾನ್ಯ ರೈತರಿಗೆ ಅವೆಲ್ಲಾ ಮರೀಚಿಕೆ. ಮೇವು ಕೊಡಲು ಪ್ರಾವಿಷನ್ ಇಲ್ಲ ಎನ್ನುವ ತಹಶೀಲ್ದಾರರ ಜಬರ್ದಸ್ತಿ, ಪುಸ್ತಕ ಹಾಳೆಯಲ್ಲೇ ಉಳಿದು ಹೋದ ಉದ್ಯೋಗ ಖಾತ್ರಿಯ ಕೋಟಿಗಟ್ಟಲೆ ಹಣ, ನಾಲ್ಕು ಕಿ.ಮೀ ದೂರದಿಂದ ಫ್ಲೋರೈಡ್ಯುಕ್ತ ನೀರು ತಂದು ಲಕ್ಷಾಂತರ ಜೇಬಿಗಿಳಿಸುವ ಕಂತ್ರಾಟುದಾರ, ಅಧಿಕಾರಿ, ರಾಜಕಾರಣಿಗಳ ದುಷ್ಟ ಕೂಟ. ನಿಜಸ್ಥಿತಿಯ ಒಂದು ಸಣ್ಣ ನೋಟ ಇದು.
ಮರೂರಲ್ಲಿ ಬೋರು ಚಪ್ಪರದಳ್ಳಿಗೆ ನೀರು
ಬರಕ್ಕಾದರೂ ಬರ ಬರಬಹುದು. ಬರದ ಕಥೆಗಳಿಗೆ ಬರ ಇಲ್ಲ. ಎಲ್ಲಾ ಗ್ರಾಮದಲ್ಲೂ ನಡೆಯೋದೆ ಇಲ್ಲೂ ನಡೆದದ್ದು. ಹೆಸರು ಚಪ್ಪರದಹಳ್ಳಿ. ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕು, ಕೊಟ್ಟೂರು ಹೋಬಳಿ, ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮ. ೧೬೦೦ ಜನ ಸಂಖ್ಯೆ, ೪೦೦ ಮನೆಗಳು. ಶೇಂಗಾ, ಹತ್ತಿ, ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ತೊಗರಿ, ಹಿಂಗಾರಿ ಜೋಳ, ಈರುಳ್ಳಿ, ಜಯಧರ್ ಹತ್ತಿ, ಬಳ್ಳಿ ಶೇಂಗಾ, ರಾಗಿ, ನವಣೆ, ಅಕ್ಕಡಿ/ಮಿಶ್ರ/ ಬಾರ್ಡರ್ ಬೆಳೆಗಳನ್ನು ಒಳಗೊಂಡಂತೆ ಎಲ್ಲಾ ತರಹದ ಬೆಳೆಗಳನ್ನು ಕಪ್ಪು/ಕೆಂಪು ಭೂಮಿಯಲ್ಲಿ ಬೆಳೆಯುತ್ತಾರೆ. ಬೇರೆ ಹಳ್ಳಿಗಳಿಗೆ ಹೋಲಿಸಿದರೆ ಈ ಗ್ರಾಮದಲ್ಲಿ ನೀರಾವರಿ ಭೂಮಿ ತುಂಬಾ ಕಡಿಮೆ. ಮಳೆಯಾಶ್ರಿತ ಒಣ ಬೇಸಾಯವೇ ಹೆಚ್ಚು ರೂಢಿಗತವಾಗಿ ಬೆಳೆದು ಬಂದಿದೆ. ಕಳೆದ ೧೦ ವರ್ಷದಲ್ಲಿ ಬೆಳೆಗಳಲ್ಲಿ/ ಬೆಳೆ ಪದ್ದತಿಯಲ್ಲಿ ಅಂಥ ಏನೂ ಬದಲಾವಣೆ ಏನೂ ಆಗಿಲ್ಲ. ಆದಾಗ್ಯೂ, ಸಾವಯವ ರೈತರು ಮಿಶ್ರ ಬೆಳೆ ಜೋಡಣೆಯನ್ನು ಹೆಚ್ಚು ಮಾಡುತ್ತಾ ಮಳೆ ಕೊರತೆಯನ್ನು ಸಂಬಾಳಿಸಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ೧೦ ವರ್ಷದಲ್ಲಿ ಮಳೆಯ ಏರಿಳಿತ ವಿಪರೀತವಾಗಿದೆ. ನಮ್ಮ ಪ್ರದೇಶದ ಮಳೆಗಳಾದ ಕೃತ್ತಿಕದಿಂದ ಅನುರಾಧವರೆಗೂ ಮಳೆ ಮಾದರಿಯಲ್ಲಿ ತುಂಬಾ ವ್ಯತ್ಯಾಸವಾಗಿದೆ. ಉದಾ, ಕೃತ್ತಿಕ ಮಳೆ ಕಳೆದ ೧೦ ವರ್ಷದಲ್ಲಿ ೩-೪ ಬಾರಿ ಬಿದ್ದರೆ, ರೋಹಿಣಿ ೬-೮ ಬಾರಿ, ಮೃಗಶಿರ, ಆರಿದ್ರ, ಪುಷ್ಯ, ಪುನರ್ವಸು ಮಳೆಗಳು ೪-೫ ಬಾರಿ ಬಿದ್ದಿವೆ. ಇನ್ನು ಆಶ್ಲೇಷ, ಮಘ, ಪುಬ್ಬ, ಉತ್ತರ, ಹಸ್ತ, ಚಿತ್ತ ಮಳೆಗಳು ಸರಿ-ಸುಮಾರು ೭-೮ ಬಾರಿ ಬಂದಿವೆ. ಹೆಚ್ಚು ಅರ್ಭಟಿಸುವ ಮಳೆಗಳು ರೋಹಿಣಿ, ಮಘ, ಹುಬ್ಬಿ, ಉತ್ತರ, ಹಸ್ತ ಚಿತ್ತ ಮಳೆಗಳು. ನಾವು ನಂಬಿ ವ್ಯವಸಾಯ ಮಾಡುವಂತಹ ಮಳೆಗಳು ಇವು. ಮುಂಗಾರಿಗೆ ಮುನ್ನ ಅಶ್ವಿನಿ, ಕೃತಿಕ, ರೋಹಿಣಿ ಮಳೆಗಳಲ್ಲಿ ಎರಡು ಮಳೆ ಬಿದ್ದವೆಂದರೆ ಎಲ್ಲಾ ರೈತರು, ಹೆಸರು, ಎಳ್ಳು, ಜೋಳ, ಮೆಕ್ಕೆಜೋಳ, ಹತ್ತಿ, ತೊಗರಿ ಬಿತ್ತನೆ ಮಾಡಿ ಬಿಡುತ್ತಾರೆ. ಮುಂದೆ ಉಳಿದ ಮಳೆಗಳು ತುಂತುರು ಬಂದು ನಂತರ ಆಶ್ಲೇಷ, ಮಘ, ಪುಬ್ಬ, ಹಸ್ತ, ಚಿತ್ತ ಮಳೆಗಳು ನಡೆಸಿದವೆಂದರೆ ಬೆಳೆಗಳು ಬಂದವು ಎಂದೇ ಲೆಕ್ಕ.
ಹೀಗಿರುವಾಗ ಕಳೆದ ವರ್ಷ ಮುಂಗಾರಿಗೆ ರೋಹಿಣಿ ಮಳೆ ಬಂತು. ನಂತರ ಎಲ್ಲಾ ಮಳೆಗಳು ತುಂತುರಾಗಿ ಸುರಿದವು. ಮಘ, ಪುಬ್ಬ, ಉತ್ತರ ಮಳೆಗಳು ಕೈ ಕೊಟ್ಟವು. ಮುಂಗಾರು, ಹಿಂಗಾರು ಎರಡೂ ಬೆಳೆಗಳ ಇಳುವರಿ ತುಂಬಾ ಕಡಿಮೆಯಾಯ್ತು. ಜೋಳ ಒಂದು ಬೆಳೆ ಸರಿಯಾಗಿ ಬಂದ ಕಾರಣ ನಮ್ಮ ಜಾನುವಾರುಗಳಿಗೆ ಸ್ವಲ್ಪ ಮಟ್ಟಿಗೆ ಮೇವು, ಊಟ ಮಾಡಲು ಜೋಳ ಕೈಗೆ ಬಂದವು. ಉಳಿದ ಎಲ್ಲಾ ಬೆಳೆಗಳೂ ಚನ್ನಾಗಿಯೇ ಕೈ ಕೊಟ್ಟಿದ್ದರಿಂದ ಬರುವ ವರ್ಷಕ್ಕೆ ಜಾನುವಾರಿಗೆ ಮೇವಿನ ಹೊಟ್ಟಿಗೆ, ಒಣಮೇವಿಗೆ ಕೊರತೆಯಾಗುವ ಆತಂಕ ಶುರುವಾಯ್ತು. ಈ ವರ್ಷ ಬೇಸಿಗೆಗೆ ಮೇವು ಹೊಂದಿಸಿಕೊಳ್ಳುವ ಬಗ್ಗೆ, ಮುಂದಿನ ಹಂಗಾಮಿನ ಮಳೆ ಬೆಳೆಗಳ ಬಗ್ಗೆ ರೈತರು ಚಿಂತೆಯಲ್ಲಿರುವಾಗಲೇ ಫೆಬ್ರವರಿ-ಮಾರ್ಚ್ ತಿಂಗಳ ಕಡು ಬೇಸಿಗೆಯ ಸಮಯದಲ್ಲಿ ಸರ್ಕಾರ ನಮ್ಮ ಜಿಲ್ಲೆಯನ್ನು ’ಬರ ಪೀಡಿತ’ ಎಂದು ಘೋಷಿಸಿತು. ಆ ಸಮಯದಲ್ಲಿ ಹೊಲದಲ್ಲಿ ಯಾವ ಬೆಳೆಯೂ ಇರಲಿಲ್ಲ. ನಮಗೆ ನಿಜವಾಗಿಯೂ ಅವಶ್ಯಕತೆ ಇದ್ದದ್ದು ಕೈಗಳಿಗೆ ಕೆಲಸ. ನಮ್ಮ ಜಾನುವಾರಿಗೆ ಮೇವು. ಈ ವರ್ಷ ಪೂರ್ತಿ ಜಾನುವಾರಿಗೆ ಸಾಕಾಗುವಷ್ಟು ಮೇವು ನಮ್ಮಲ್ಲಿ ಇರಲಿಲ್ಲ.
ಮೇವನ್ನು ಹೊಂದಿಸಿಕೊಳ್ಳುವ ಮಾರ್ಗಗಳನ್ನು ರೈತರು ಹುಡುಕುತ್ತಾ ಇದ್ದಂತೆಯೇ ಬರಪರಿಹಾರದ ಕಾರ್ಯ ಮೊದಲಾಯಿತು. ’ಕೋಟಿ ಹಣ ಬಂದೈತಂತೆ, ಹೊಲದಲ್ಲಿ ಬೆಳೆಗಳು ಒಣಗಿದ ಫೋಟೋ ಕೊಡಬೇಕಂತೆ, ಬ್ಯಾಂಕ್ ಖಾತೆ ತೆಗಿಸಬೇಕಂತೆ’ ಎಂಬ ಸುದ್ದಿಗಳು ಮಿಂಚಿನಂತೆ ಪ್ರಸಾರವಾಗತೊಡಗಿತು. ’ಹೊಲದಲ್ಲಿ ಒಂದೂ ಬೆಳೆ ಇಲ್ಲ, ಹೊಲ ಯಾವಾಗಲೋ ಹರಗಿ ಆಗಿದೆ. ಈಗ ಎಲ್ಲಿಂದ ಫೋಟೊ ಜೋಡಿಸಿಕೊಳ್ಳುವುದು?’ ಎಂದು ರೈತರು ಚಿಂತಿತರಾಗುತ್ತಿದ್ದಂತೆಯೇ, ’ಈ ಸಲದ ಬರ ಪರಿಹಾರ ಏನಿದ್ದರೂ ಕುಡಿಯುವ ನೀರಿಗೆ ಮತ್ತು ಮೇವಿಗೆ’ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದಾಗ ರೈತರು ನಿಟ್ಟುಸಿರಿಟ್ಟರು.
’ನಮ್ಮ ಚಪ್ಪರದಹಳ್ಳಿಗೆ ಕುಡಿಯುವ ನೀರು ಒದಗಿಸುತ್ತಾರಂತೆ’ ಎಂಬ ಸುದ್ದಿ ಈಗ ಕಾಳ್ಗಿಚ್ಚಿನಂತೆ ಹಬ್ಬಿತು. ನಮ್ಮ ಗ್ರಾಮದಲ್ಲಿ ಈಗಾಗಲೇ ೩ ಕೊಳವೆ ಬಾವಿಯಿಂದ ನೀರು ಬರುತ್ತಿದೆ. ಅದು ಪ್ಲೋರೆಡ್ಯುಕ್ತ ನೀರು. ಕುಡಿಯಲು ಯೋಗ್ಯವಲ್ಲ. ಆದರೂ ಊರಿನವರು ಕುಡಿಯುವುದು ಅದೇ ನೀರು. ತುಂಗಭದ್ರ ನೀರು ಕುಡಿಸುತ್ತೇವೆಂದು ಸರ್ಕಾರಗಳು ಆಗಾಗ್ಗೆ ಕೊಡುವ ಹೇಳಿಕೆಯೊಂದೇ ಜನರ ಕಿವಿಗೂ, ಮನಸ್ಸಿಗೂ ತಂಪು. ಈಗ, ’ಕುಡಿಯುವ ನೀರು ಅಂತ ಹೇಳ್ಯಾರ, ತುಂಗಭದ್ರ ನೀರು ಏನಾದರು ಪೂರೈಕೆ ಮಾಡಬಹುದು’ ಎಂದು ಜನ ಕನಸು ಕಾಣತೊಡಗಿದರು.
ಸ್ವಲ್ಪ ದಿನದ ತರುವಾಯ ಪೈಪ್ಲೈನ್ನಲ್ಲಿ ಊರಿಗೆ ನೀರು ಬಂತು. ಚಪ್ಪರದಹಳ್ಳಿ ಗ್ರಾಮದಿಂದ ೪ ಕಿ.ಮಿ ದೂರದ ’ಮರೂರು’ ಎನ್ನುವ ಗ್ರಾಮದ ಹತ್ತಿರ ಒಂದು ಬೋರ್ವೆಲ್ ಕೊರಿಸಿ ಅಲ್ಲಿಂದ ರೈತರ ಹೊಲಗಳಲ್ಲಿ ಅಡ್ಡಾದಿಡ್ಡಿ ಜೆಸಿಬಿ ಚಲಿಸಿ ಹೊಲಗಳಲ್ಲಿ ಪೈಪ್ಲೈನ್ ಹಾಯಿಸಿ ಚಪ್ಪರದಹಳ್ಳಿಗೆ ನೀರು ತಂದಿದ್ದರು. ಗ್ರಾಮದವರ ತುಂಗಭದ್ರ ನೀರಿನ ಕನಸು ಕೊನೆಗೊಂಡು ಮತ್ತೊಂದು ಪ್ಲೋರೆಡ್ಯುಕ್ತ ನೀರು ಪ್ರಾಪ್ತವಾಯಿತು. ಆದರೆ ಈ ಸಲ ಕೊಳವೆ ಬಾವಿಯಿಂದಲ್ಲ, ಪೈಪ್ನಲ್ಲಿ! ’ಸಿಕ್ಕಾಪಟ್ಟೆ ಕರೆಂಟಿಗೆ ಡಿಪಾಸಿಟ್ ತುಂಬಿ, ದೂರದಿಂದ ಪೈಪ್ ತಂದು ೮ ಲಕ್ಷ ನೀರಿಗೆ ಖರ್ಚು ಮಾಡಿದ್ದೇವೆ’ ಎಂದು ಪಂಚಾಯತಿಯವರು ತುತ್ತೂರಿ ಊದಹತ್ತಿದ್ದು ಜನರ ಕಿವಿಗೆ ಇಂಪಾಗಿ ಕೇಳಲಿಲ್ಲ. ಬದಲಿಗೆ ತರಾವರಿ ಪ್ರಶ್ನೆಗಳು ಕಾಡತೊಡಗಿದವು.
ನಮ್ಮ ಗ್ರಾಮಕ್ಕೆ ನೀರು ಪೂರೈಸಲು ೪ ಕಿ.ಮೀ ದೂರದಲ್ಲಿ ಬೋರು ಕೊರಿಸಿದ್ದೇಕೆ? ಸಿಕ್ಕ ನೀರು ಕುಡಿಯಲು ಯೋಗ್ಯವಾದದ್ದೇ ಎಂದು ಯಾಕೆ ಪರೀಕ್ಷಿಸಲಿಲ್ಲ? ರೈತರ ಹೊಲದಲ್ಲಿ ಜೆಸಿಬಿ ಚಲಿಸಿ ಮಾಡಿದ ಡ್ಯಾಮೇಜಿಗೆ ಏನೂ ಪರಿಹಾರ ಇಲ್ಲವೇ?
ಆದರೆ ಕೆಲಸ ಮಾಡಿಸಿದ ಗುತ್ತಿಗೆದಾರ ಮಾತ್ರ ’ನನ್ನ ಬಿಲ್ಲು ಯಾವಾಗ ಆಗುತ್ತೆ, ಯಾರು ಯಾರಿಗೆ ಎಷ್ಟು ಪರ್ಸೆಂಟು ಕೊಡಬೇಕು’ ಅನ್ನೋ ಯೋಚನೆಯಲ್ಲಿ ಕೊನೆಗೂ ಎರಡು ಕಂತುಗಳಲ್ಲಿ ಹಣ ಜೇಬಿಗೆ ಇಳಿಸಿಕೊಂಡೇ ಬಿಟ್ಟ!
***
ಪಕ್ಕದ ಹೋಬಳಿಗೆ ಬರ, ನಿಮ್ಮ ಹೋಬಳಿಗಲ್ಲ!
ಜಾನುವಾರುಗಳಿಗೆ ವರ್ಷಪೂರ್ತಿಗೆ ಮೇವು ಸಾಕಾಗುವುದಿಲ್ಲ. ಬರ ನಿರ್ವಹಣೆಯಲ್ಲಿ ಮೇವಿನ ಪೂರೈಕೆ ಎಂದು ಘೋಷಣೆ ಮಾಡಿರುವುದರಿಂದ ಸರ್ಕಾರ ಮೇವು ಒದಗಿಸಬಹುದು ಎಂದು ತಾಲೂಕಿನ ತಹಶೀಲ್ದಾರರನ್ನು ಸಂಪರ್ಕಿಸಿದೆವು. ಅವರ ಜೊತೆ ನಡೆದ ಮಾತುಕತೆ ಹೀಗಿತ್ತು:
ನಾವು: ನಮ್ಮ ಕೊಟ್ಟೂರು ಹೋಬಳಿಗೆ ಮೇವಿನ ಪೂರೈಕೆಗೆ ಏನು ಕ್ರಮ ಕೈಗೊಂಡಿದ್ದೀರಿ ಸರ್ರ?
ತಹಶೀಲ್ದಾರ್: ನಿಮ್ಮ ಹೋಬಳಿಗೆ ಮೇವಿನ ಸಮಸ್ಯೆ ಇಲ್ಲ, ಸಮಸ್ಯೆ ಇರುವುದು ಪಕ್ಕದ ಗುಡಿಕೋಟೆ ಹೋಬಳಿಯಲ್ಲಿ.
ನಾವು: ಯಾಕ್ರೀ ಸರ್ರ, ನಮ್ಮ ಹೋಬಳಿಯ ಹಳ್ಳಿ ಹಳ್ಳಿಯಲ್ಲೂ ಮೇವಿನ ಸಮಸ್ಯೆ ಐತಿ. ಮೇವೆಲ್ಲ ಖಾಲಿಯಾಗೈತಿ. ಜಾನುವಾರುಗಳನ್ನು ಬದುಕಿಸಿಕೊಳ್ಳಬೇಕೆಂದರೆ ಅರ್ಜೆಂಟಾಗಿ ಮೇವು ಬೇಕ್ರಿ ಸರ್ರ.
ತಹಶೀಲ್ದಾರ್: ನಾನು ಈ ತಾಲೂಕಿನ ತಹಶೀಲ್ದಾರ. ನಿಮ್ಮ ಕಣ-ಕಣಗಳನ್ನು ನಾನು ನೋಡೀನಿ. ನಿಮ್ಮ ಹೋಬಳಿಯಲ್ಲಿ ಮೇವಿನ ಸಮಸ್ಯೆ ಇಲ್ಲ.
ನಾವು: ಸ್ವಾಮಿ, ನೀವು ನಮ್ಮ ಕಣಕ್ಕೆ ಯಾವಾಗ ಬಂದಿರ್ರೀ? ಹೋಗಣ ಬರ್ರೀ ನಮ್ಮ ಕಣಕ್ಕೆ.
ತಹಶೀಲ್ದಾರ್: ಜೀಪ್ನಲ್ಲಿ ಅಡ್ಡಾಡ್ತಾ ನಾನು ನೋಡೀನಿ. ನಿಮಗೆ ಮೇವಿನ ಸಮಸ್ಯೆ ಇಲ್ಲ. ನಿಮ್ಮ ಹೋಬಳಿಗೆ ಮೇವು ಒದಗಿಸಲು ನಮಗೆ ಪ್ರಾವಿಷನ್ನು ಇಲ್ಲ. ಬೇಕಾದರೆ ಡಿಸಿ ಹತ್ರ ಕೇಳರಿ.
ತಹಶೀಲ್ದಾರರು ’ಪ್ರಾವಿಷನ್ನಿನ’ ಮಾತನಾಡಿ ನಮ್ಮ ಬಾಯಿ ಮುಚ್ಚಿಸಿದರು. ನಾವು ಡಿಸಿ ಕಚೇರಿಗೆ ಫೋನ್ ಹಚ್ಚಿದರೆ, ’ನಿಮ್ಮ ತಾಲೂಕಿನ ತಹಶೀಲ್ದಾರರು ವರದಿ ಕೊಡದೆ ನಾವೇನು ಮಾಡುವಂತಿಲ್ಲ’ ಎಂಬ ಉತ್ತರ ಬಂತು. ಮತ್ತೆ ತಹಶೀಲ್ದಾರರಿಗೆ ದುಂಬಾಲು ಬಿದ್ದೆವು. ಕೊನೆಗೆ ಆತ, ’ನಿಮ್ಮ ಹೋಬಳಿಗೆ ಒಂದು ಮೇವಿನ ಬ್ಯಾಂಕ್ ತೆಗೆಯೋಣ. ಮೇವಿನ ದುಡ್ಡು ರೈತರು ಹಾಕಿಕೊಳ್ಳಲಿ. ನಾವು ಸಾಗಾಣೆ ವೆಚ್ಚ ಕೊಡುತ್ತೇವೆ, ಬೇಕಾದರೆ ಪಂಜಾಬಿಂದ ತರಿಸುತ್ತೇವೆ’ ಎಂದರು. ’ಇದ್ಯಾವ ಲೆಕ್ಕ?’ ಎಂದು ಕೇಳಿದರೆ, ’ನಿಮಗೆ ಪ್ರಾವಿಷನ್ ಇರುವುದು ಅಷ್ಟೆ’ ಎಂದರು.
ಹೀಗೆ ’ಪ್ರಾವಿಷನ್ನಿನ’ ಜಟಾಪಟಿ ನಡೆಯುತ್ತಾ ಇರಬೇಕಾದರೆ ರೈತರು ದೂರದ ಹರಿಹರ, ಅರಸೀಕೆರೆ, ಹರಪನಹಳ್ಳಿ ತಾಲೂಕುಗಳನ್ನು ಸುತ್ತು ಹಾಕಿ, ಬಂಗಾರ-ಒಡವೆ ಒತ್ತೆ ಇಟ್ಟು ಟ್ರಾಕ್ಟರಿಗೆ ೫ ಸಾವಿರದಿಂದ ಹತ್ತು ಸಾವಿರ ರೂಪಾಯಿ ಕೊಟ್ಟು ಒಣ ಮೇವು ತಂದು ಹಾಕಿ ಜಾನುವಾರು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು.
***
ಉದ್ಯೋಗ ಖಾತ್ರಿ ಬಂದ್!
ಮಳೆಯಿಲ್ಲದ ದಿನಗಳು. ಹೊಲದಲ್ಲಿ ಕೆಲಸವಿಲ್ಲ. ಉದ್ಯೋಗಖಾತ್ರಿಗೆ ಅರ್ಜಿ ಸಲ್ಲಿಸಿ ಆರು ತಿಂಗಳಾಯಿತು. ಇನ್ನೂ ಕೆಲಸ ಕೊಟ್ಟಿಲ್ಲ.
ರೈತರು ಗ್ರಾಮ ಪಂಚಾಯ್ತಿಗೆ ಹೋಗಿ, ಪಂಚಾಯ್ತಿ ಅಭಿವದ್ಧಿ ಅಧಿಕಾರಿಯನ್ನು, ’ಸಾಹೇಬ್ರ ಉದ್ಯೋಗ ಖಾತ್ರಿಯಲ್ಲಿ ನಮಗೆ ಕೆಲಸ ಕೊಡರಿ, ಅರ್ಜಿ ಕೊಟ್ಟು ಆರು ತಿಂಗಳಾತು, ನಾವು ಖಾಲಿ ಕೈಯಲ್ಲಿ ಕೂತೀವಿ. ಹಿಂದೆಯೆಲ್ಲಾ ಇಂಥ ಸಮಯದಲ್ಲಿ ಕಾಫಿ ಸಿಮೇಗೆ, ಸಂಡೂರು ಮೈನ್ಸಿಗೆ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಈಗ ಅವರು ನಮ್ಮನ್ನ ಕೆಲಸಕ್ಕೆ ಕರೆಯುತ್ತಿಲ್ಲ. ದಯಮಾಡಿ ಕೆಲಸ ಕೊಡರಿ’ ಎಂದು ಕೇಳಿಕೊಂಡರು.
ಪಂಚಾಯ್ತಿ ಅಧಿಕಾರಿ, ’ನೋಡಿ, ನಮ್ಮ ಪಂಚಾಯ್ತಿಗೆ ಈ ಹಿಂದೆ ಲೋಕಾಯುಕ್ತ ರೈಡ್ ಆಗಿದೆ, ಕಾರ್ಯ ಯೋಜನೆ ಸಿದ್ದಪಡಿಸಿಲ್ಲ. ಆದ್ದರಿಂದ ಏನೂ ಕೆಲಸ ಕೊಡಲು ಸಾಧ್ಯವಿಲ್ಲ’ ಎಂದರು.
ರೈತರು, ’ಅಲ್ರೀ ಸರ್ರ, ಲೋಕಯುಕ್ತ ರೈಡ್ ಆಗಿರುವುದಕ್ಕೂ ನಮಗೆ ಕೆಲಸ ಕೊಡಲಿರದಕ್ಕೂ ಏನು ಸಂಬಂದ? ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಅರ್ಜಿ ಕೊಟ್ಟ ೧೫ ದಿನದಲ್ಲಿ ಕೆಲಸ ಕೊಡಬೇಕು ಅಂತ ಇದೆಯಲ್ಲ, ನಮಗೆ ಕೆಲಸ ಕೊಡಬೇಕಲ್ಲಾರಿ’ ಎಂದು ದಬಾಯಿಸಿದರು.
ಪಂಚಾಯ್ತಿ ಅಧಿಕಾರಿ, ’ನಮ್ಮ ಪಂಚಾಯ್ತಿಯಲ್ಲಂತೂ ಕೆಲಸ ಸ್ಥಗಿತ ಆಗೇತಿ, ಯಾವ ಕಾರ್ಯ ಯೋಜನೆ ಮಾಡುವ ಅವಕಾಶ ಇಲ್ಲ. ನೀವು ಬೇಕಾದರೆ ಮೇಲೆ ಹೋಗಿ ವಿಚಾರಿಸಿ’ ಎಂದು ಹೇಳಿ ಅಲ್ಲಿಗೇ ಮಾತು ಮುಗಿಸಿ ಜಾರಿಕೊಂಡು ಹೋದರು.
ಕೊನೆಗೆ ನಾವು ಕೂಡ್ಲಗಿಗೆ ಹೋಗಿ ಇಂಜಿನಿಯರ್, ನೋಡೆಲ್ ಆಫೀಸರ್, ಜಿಲ್ಲಾ ಪಂಚಾಯತಿ ಸಿಇಒ ಎಲ್ಲರನ್ನೂ ಭೇಟಿ ಮಾಡಿದೆವು. ಕೆಲಸಕ್ಕೆ ಅರ್ಜಿ ಸ್ವೀಕರಿಸುವುದಕ್ಕೂ ಅವರು ತಯಾರಿಲ್ಲ. ಎಲ್ಲದಕ್ಕೂ ಒಂದೇ ಉತ್ತರ ’ಮೇಲಿಂದ ಆರ್ಡರ್ ಬರಬೇಕು’.
ಈ ಬಾರಿ ಉದ್ಯೋಗ ಖಾತ್ರಿಯಡಿ ಕೆಲಸ ಸಿಕ್ಕಿದ್ದರೆ ನಮ್ಮ ತಾಲೂಕಿನ ರೈತರಿಗೆ ಎಷ್ಟೋ ಸಹಾಯ ಆಗುತ್ತಿತ್ತು. ಉದ್ಯೋಗ ಖಾತ್ರಿಯಲ್ಲಿ ಮನೆಗೆ ೧೦೦ ದಿನದ ಕೆಲಸ ಎನ್ನುವುದು ನಮ್ಮ ತಾಲೂಕಿನ ಮಟ್ಟಿಗಂತೂ ಶುದ್ಧ ಸುಳ್ಳು. ಕಾನೂನು ರೀತ್ಯ ಕೆಲಸ ಪಡೆದುಕೊಳ್ಳಲಿಕ್ಕೂ ಇಲ್ಲಿ ದೊಡ್ಡ ಹೋರಾಟವನ್ನೇ ಮಾಡಬೇಕಾಗಿದೆ.
ಇಕ್ರಾ ಬಳಗ, ಕೊಟ್ಟೂರು
———————————————————————-
ಸಾಯಿನಾಥ್ ಕೌಂಟರ್ ಮೀಡಿಯಾ
ಬೆಂಗಳೂರಿನ ಗಾಂಧಿ ಭವನದಲ್ಲಿ ಇದೇ ಜುಲೈ ೧ನೇ ತಾರೀಖು ಒಂದು ಅಪರೂಪದ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಅಂದು ಪತ್ರಿಕೋದ್ಯಮ ದಿನ. ಹೀಗೆ ಎಷ್ಟೋ ದಿನಾಚರಣೆಗಳ ಪಟ್ಟಿಯಲ್ಲಿ ಸೇರಿಹೋಗಬಹುದಾಗಿದ್ದ ಈ ಕಾರ್ಯಕ್ರಮವನ್ನು ಆತ್ಮೀಯರಾದ ಜಿ. ಎನ್ ಮೋಹನ್ ಒಂದು ಚಿರಸ್ಮರಣೀಯ ಕಾರ್ಯಕ್ರಮವಾಗಿಸಿದ್ದರು. ಭಾರತೀಯ ಪತ್ರಿಕೋದ್ಯಮದ ಅಮೂಲ್ಯ ರತ್ನ ಪಿ. ಸಾಯಿನಾಥ್ ಅವರನ್ನು ಇಡೀ ದಿನ ಅಲ್ಲಿ ಹಿಡಿದಿಟ್ಟು ಅವರ ಸುತ್ತಲೇ ಕಾರ್ಯಕ್ರಮವನ್ನು ಅಮೋಘವಾಗಿ ಹೆಣೆದಿದ್ದರು. ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ಪಿಲ್ಮ್ ಶೋ, ಸಾಯಿನಾಥರ ಭಾಷಣ ಮತ್ತು ಅವರ ಜೊತೆ ಸಂವಾದ ಎಲ್ಲವನ್ನೂ ಒಂದು ದಿನದ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ಬೆಸೆಯಲಾಗಿತ್ತು.
ಭಾರತದ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದ್ದ ಪಿ. ಸಾಯಿನಾಥ್ ಪತ್ರಿಕೋದ್ಯಮದ ಕೊಳಕು ಗಳನ್ನು ಕಂಡು ರೋಸಿಹೋಗಿದ್ದರು. ಪತ್ರಿಕೋದ್ಯಮಿಯಾಗಿ ತನ್ನ ಜವಾಬ್ದಾರಿ ಇರುವುದು ಸಮಾಜದ ಮೇಲಿನ ಸ್ತರದ ೫% ಜನರೆಡೆಗಲ್ಲ, ಸಮಾಜದ ಕೊಟ್ಟಕೊನೆಯ ೫% ಜನರಿಗೆ ಎಂದು ತೀರ್ಮಾನಿಸಿ ತಾವು ಕುಳಿತ್ತಿದ್ದ ದಂತ ಗೋಪುರವನ್ನು ಬಿಟ್ಟೆದ್ದು ಹಳ್ಳಿಗಳಿಗೆ ನಡೆದರು. ’ಟೈಮ್ಸ್ ಆಫ್ ಇಂಡಿಯಾ’ದ ಸಣ್ಣ ಫೆಲೋಷಿಪ್ ಸಹಾಯದಿಂದ ಭಾರತದ ಉತ್ತರ ತುದಿಯಿಂದ ದಕ್ಷಿಣದ ಕೊನೆಯವರೆಗೆ ಹತ್ತಾರು ಸಾವಿರ ಕಿ.ಮೀ ಸಂಚರಿಸಿ ಗ್ರಾಮೀಣ ಭಾರತದ ಯಥಾವತ್ತಾದ ಚಿತ್ರಣವನ್ನು ’ಟೈಂಸ್ ಆಫ್ ಇಂಡಿಯಾ’ ಪತ್ರಿಕೆಗೆ ಬರೆಯುತ್ತಾ ಹೋದರು.
ಕೊಟ್ಟಕೊನೆಯ ಪ್ರಜೆಗಳೆಂದು ಸರ್ಕಾರ ಪರಿಗಣಿಸಿಬಿಟ್ಟಿರುವ ಆದಿವಾಸಿ ಜನರ, ದಲಿತ ಜನಾಂಗದವರ, ಕೂಲಿಕಾರ ಪುರುಷ- ಮಹಿಳೆಯರ, ಸಣ್ಣ ಮಳೆಯಾಶ್ರಿತ ರೈತರ ಬದುಕಿನ ಬವಣೆಗಳು, ಅದಕ್ಕೆ ಕಾರಣವಾದ ಭ್ರಷ್ಟ ವ್ಯವಸ್ಥೆ ಅವರ ಲೇಖನಿಯಲ್ಲಿ ಪುಂಕಾನುಪುಂಕವಾಗಿ ಮೂಡುತ್ತಾ ಪತ್ರಿಕೆ ಗಳಲ್ಲಿ ಪ್ರಕಟವಾಗುತ್ತಿದ್ದಂತೆ ದೇಶದ ರಾಜಕಾರಣ, ಅಧಿಕಾರಶಾಹಿ ಅಕ್ಷರಶಃ ಬೆಚ್ಚಿ ಬೀಳತೊಡಗಿತು. ರೈತರ ಆತ್ಮಹತ್ಯೆಯ ಜೊತೆ ಅವರು ಚೆಲ್ಲಾಟವಾಡುತ್ತಿದ್ದರೆ ಸಾಯಿನಾಥರು ವಿದರ್ಭದ ರೈತರ ಮನೆ ಮನಗಳನ್ನು ಹೊಕ್ಕು ಬರೆಯತೊಡಗಿದ್ದರು. ಮನೆ ಹತ್ತಿ ಉರಿಯುವಾಗ ಬೀಡಿ ಹತ್ತಿಸಿಕೊಳ್ಳುವ ಇವರನ್ನು ’ನೇರೋನ ಅತಿಥಿ’ಗಳು ಎಂದು ಬಣ್ಣಿಸಿ ಸಾಯಿನಾಥ್ ಸಾಕ್ಷ್ಯಚಿತ್ರ ಮಾಡಿದರು.
ಮುಂದೆ ಸಾಯಿನಾಥರು ತಮ್ಮ ಈ ಎಲ್ಲಾ ಬರಹಗಳನ್ನು ಒಟ್ಟುಗೂಡಿಸಿ ’ಇveಡಿಥಿboಜಥಿ ಟoves ಚಿ gooಜ ಜಡಿoughಣ’ ಎನ್ನುವ ಹೆಸರಿನ ಪುಸ್ತಕವನ್ನು ಪೆಂಗ್ವಿನ್ ಮೂಲಕ ಪ್ರಕಟಿಸಿದರು. ಹೆಸರಿನಿಂದಲೇ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದ ಈ ಪುಸ್ತಕ ಹತ್ತು ವರ್ಷದಲ್ಲಿ ೩೫-೩೬ ಬಾರಿ ಮತ್ತೆ ಮತ್ತೆ ಅಚ್ಚಾಯಿತು. ಸಾಯಿನಾಥರಿಗೆ ರಾಯಲ್ಟಿ ಹಣವೂ ಚನ್ನಾಗಿಯೇ ಸಿಕ್ಕಿತು. ಈ ಹಣ ಅವರನ್ನು ಮತ್ತೆ ಕಾಡತೊಡಗಿತು.
ಬಂಡವಾಳಶಾಹಿ- ರಾಜಕಾರಣಿಗಳ ದುಷ್ಟ ಕೂಟದ ತೆಕ್ಕೆಯಲ್ಲಿ ಸೇರಿ ಭ್ರಷ್ಟವಾಗಿ ಹೋಗಿರುವ ಪತ್ರಿಕೋದ್ಯಮ ರಂಗದಲ್ಲಿ ತನ್ನಂಥೆ ಯೋಚಿಸುವ ಪತ್ರಕರ್ತರು ಪಡುತ್ತಿರುವ ಹಿಂಸೆ ಸಾಯಿನಾಥರಿಗೆ ಗೊತ್ತಿತ್ತು. ಸಮಾಜ ಪರಿವರ್ತನೆಯ ಕಾಳಜಿಯ ಕನಸುಗಣ್ಣಿನ ಪತ್ರಕರ್ತರು ಮುದುಡಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಹೊರೆ ಅವರ ಹೆಗಲನ್ನು ಜಗ್ಗತೊಡಗಿತ್ತು. ಅವರು ತಮ್ಮ ಪುಸ್ತಕದ ರಾಯಲ್ಟಿಯ ಹಣದಿಂದ ರಾಷ್ಟ್ರ ಮಟ್ಟದಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿದರು. ತಮ್ಮಂತೆ ಗ್ರಾಮೀಣ ಭಾಗದೆಡೆಗೆ ನಡೆದ ಪತ್ರಕರ್ತರನ್ನು ಗುರುತಿಸಿ ಅವರಿಗೆ ಈ ’ಕೌಂಟರ್ ಮೀಡಿಯಾ’ ಪ್ರಶಸ್ತಿಯನ್ನು ಕೊಟ್ಟು ಉತ್ತೇಜಿಸಲು ಪ್ರಾರಂಭಿಸಿದರು.
ಈಗಾಗಲೇ ಚತ್ತಿಸ್ಗಡ್ ಮತ್ತು ಆಂಧ್ರ್ರ ಪ್ರದೇಶಗಳ ಪತ್ರಕರ್ತರಿಗೆ ಸಂದಿರುವ ಈ ಪ್ರಶಸ್ತಿ ಈ ವರ್ಷ ಕರ್ನಾಟಕಕ್ಕೆ ಸಂದಿತು. ‘ಸಹಜ ಸಾಗುವಳಿ’ ಪತ್ರಿಕೆಯ ಸಂಪಾದಕಿ ವಿ. ಗಾಯತ್ರಿ ಮತ್ತು ಯುವ ಪತ್ರಕರ್ತ ಟಿ.ಕೆ ದಯಾನಂದ್ ಅವರನ್ನು ಈ ಪ್ರಶಸ್ತಿಗಾಗಿ ಹೆಸರಾಂತ ಪತ್ರಕರ್ತರಾದ ನಾಗೇಶ್ ಹೆಗಡೆ, ಜಿ.ಎನ್. ಮೋಹನ್, ಸಿ.ಎಸ್.ದ್ವಾರಕನಾಥ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಇವರನ್ನೊಳಗೊಂಡ ತೀರ್ಪುಗಾರರ ತಂಡ ಆಯ್ಕೆ ಮಾಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ಹೆಮ್ಮೆಯ ಲೇಖಕ/ಕಾರ್ಯಕರ್ತ ದೇವನೂರು ಮಹಾದೇವ ಪ್ರಶಸ್ತಿ ಪ್ರದಾನ ಮಾಡಿದರು.
ಕೊನೆಯಲ್ಲಿ ಸಾಯಿನಾಥ್ ಅವರು ಇವತ್ತಿನ ಕಳಂಕಿತ ಪತ್ರಿಕೋದ್ಯಮ ಕುರಿತು ಮಾಡಿದ ಅದ್ಭುತ ಭಾಷಣ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದವರಲ್ಲಿತಲ್ಲಣದ ವಿದ್ಯುತ್ ಅಲೆಗಳಾಗಿ ಸಂಚರಿಸಿತ್ತು. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮ ಇದಾಗಿತ್ತು.
’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಬಿಡುಗಡೆ
ಸಾಯಿನಾಥರನ್ನು ಹೆಚ್ಚಾಗಿ ಹಚ್ಚಿಕೊಂಡಿರುವ ಜಿ. ಎನ್ ಮೋಹನ್, ಅವರ ೫೦೦ ಪುಟಗಳ ದೊಡ್ಡ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿ ಅದಕ್ಕೆ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂದು ಹೆಸರು ಕೊಟ್ಟಿದ್ದಾರೆ. ನ್ಯಾಯವಾದಿ ನಾಗಮೋಹನ್ ದಾಸ್ ಅಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದು ಬರೀ ಅನುವಾದವಲ್ಲ, ಮೋಹನ್ ಇದನ್ನು ಆವಾಹಿಸಿಕೊಂಡು ಒಂದು ಅಸಲೀ ಕನ್ನಡ ಪುಸ್ತಕವಾಗಿಸಿದ್ದಾರೆ ಎಂಬುದು ಕೆಲ ಪುಟಗಳನ್ನು ಓದುವ ವೇಳೆಗೆ ಅರ್ಥವಾಗುತ್ತದೆ. ಅಭಿನವ ಪ್ರಕಾಶನ ಹೊರತಂದಿರುವ ಈ ಪುಸ್ತಕ ಪ್ರಕಟವಾದ ಒಂದು ತಿಂಗಳಲ್ಲೇ ೧೦೦೦ ಪ್ರತಿಗಳು ಮುಗಿದಿವೆಯಂತೆ! (ಪುಸ್ತಕದ ಆಯ್ದ ಅಧ್ಯಾಯಗಳನ್ನು ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸುತ್ತೇವೆ). ಇಂಗ್ಲೀಷಿನ ಪುಸ್ತಕದಂತೆಯೇ ಜನಪ್ರಿಯವಾಗುತ್ತಿರುವ ಈ ಕನ್ನಡ ಪುಸ್ತಕಕ್ಕೆ ಸಿಕ್ಕ ರಾಯಲ್ಟಿ ಹಣದಿಂದ ಕರ್ನಾಟಕದಲ್ಲಿ ಮುಂದಿನ ವರ್ಷಗಳಲ್ಲೂ ’ಕೌಂಟರ್ ಮೀಡಿಯಾ’ ಪ್ರಶಸ್ತಿಯನ್ನು ಮುಂದುವರೆಸುವ ಆಸೆ ಮೋಹನ್ಗೆ ಇದೆ.
ಪತ್ರಿಕೆಯ ಪ್ರತಿಗಳಿಗಾಗಿ ಇಲ್ಲಿ ಸಂಪರ್ಕಿಸಿ :
]]>



ಪತ್ರಿಕೆಯನ್ನು ಅವಧಿಯ ಓದುಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು
ವಿ ಗಾಯತ್ರಿ