ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿರಾಜ್ ಆನಂದೂರು ಪ್ರಣಯ ಪದ್ಯಗಳು

ಎಲ್ಲ ಹುಡುಗಿಯರಿಗೆ

ಸವಿರಾಜ್ ಆನಂದೂರು

೧. ಸನಾತನಿ ಹುಡುಗಿಗೆ

ನಾ ಪೈಥಾಗರಸ್ ಸೂತ್ರವ ಉರುಹೊಡೆಯುವಾಗ,
ಬೌದಾಯನನ ನೆನಪಿಸಿ ದಿಕ್ಕು ತಪ್ಪಿಸಿದವಳೇ,
ನೆಮ್ಮದಿಯಲಿ ‘ಗೇಮ್ ಆಫ್ ಥ್ರೋನ್ಸ್’ ನೋಡಗೊಡದೆ
ಮಹಾಭಾರತದ ಪ್ರವರವ ಹೆಮ್ಮೆಯಿಂದೊಪ್ಪಿಸಿದವಳೇ,
ಇಗೋ, ನಿನ್ನ ಬಿಗಿದಪ್ಪಿ ಬೆಚ್ಚಗೆ ಮುತ್ತಿಕ್ಕುವೆ.
ಈಗ ಹೇಳು:
ಪ್ರಣಯಕ್ಕಿಂತ ಸನಾತನವಾದದ್ದೇನನ್ನು ಕೊಡಬಲ್ಲೆ?

೨. ಕಮ್ಯುನಿಸ್ಟ್ ಹುಡುಗಿಗೆ

ಧರ್ಮವು ಅಫೀಮು ಎಂದ ನಿನ್ನ ಮಾರ್ಕ್ಸ್‌ಗೆ
ಪ್ರೇಮದ ನಶೆ ತಿಳಿದಂತೆ ಕಾಣದು
ಬೆಳೆದ ಪೈರನ್ನಷ್ಟೇ ಹಂಚಿದರೆ ಸಾಕೇನು?
ಹಂಚಿಕೊಳ್ಳಬಾರದೇಕೆ-
ಸುತ್ತಿಗೆಯೇಟು ತಿಂದ ಮಿದುವೆದೆ,
ಕುಡುಗೋಲಿನಂಚಿನ ಬಿಸಿರಕ್ತ,
ಮೈಯ ಮೆತ್ತಿದ ಬೆವರು?

೩. ಗಾಂಧಿವಾದಿ ಹುಡುಗಿಗೆ

ಕಠೋರ ಬ್ರಹ್ಮಚರ್ಯವ ಪಾಲಿಸಿದರಷ್ಟೇ ಸಾಲದು
ಅದರ ಪರೀಕ್ಷೆಯೂ ಆಗಾಗ ಆಗಬೇಕು
ಬಾ-
ಟೆರೇಸಿನ ಮೇಲೆ ಅಂಗಾತ ಮಲಗಿ ಮುಗಿಲತ್ತ ನೋಡೋಣ
ಬಾಪು-
ಈಗ ಕಟ್ಟು ಕಳಚಿದ ಚಂದ್ರ
ತುಂಡು ಮೋಡಗಳು ಅವನುಟ್ಟ ಖಾದಿ
ಕಣ್ಣ ಮಿಟುಕಿಸುವ ನಕ್ಷತ್ರ ಇಳಿಬಿದ್ದ ಗಡಿಯಾರ
ಬದಲಾದ ಕಾಲದಲಿ ಮಹಾತ್ಮನೂ ತುಂಟ ಸಂಸಾರಿ.

೪. ನಾಸ್ತಿಕ ಹುಡುಗಿಗೆ

ಈ ಜಗತ್ತಿನಲ್ಲಿ ನಾವಿಬ್ಬರಷ್ಟೇ
ಹಾದಿಯಲಿ – ಬೀದಿಯಲಿ
ಮಬ್ಬಿನಲಿ – ಪಬ್ಬಿನಲಿ
ಸಂತೆಯ ಅಂಚಲ್ಲೂ
ಪಾರ್ಕಿನ ಬೆಂಚಲ್ಲೂ
ಎಲ್ಲೆಂದರಲ್ಲಿ ಹಿಂದೂ ಮುಂದೂ ನೋಡದೆ ಮುದ್ದಾಂ-
ಮುದ್ದಾಡಬಹುದು
ಹೇಗೂ,
ನಮ್ಮ ಮೇಲೊಂದು ಕಣ್ಣಿಡುವ
ದೇವರೆಂಬ ನೈತಿಕ ಪೋಲೀಸು ಎಲ್ಲೆಲ್ಲಿಯೂ-
‘ಇಲ್ಲ’.

೫. ಆಸ್ತಿಕ ಹುಡುಗಿಗೆ

ಆ ಕಂಬದಲ್ಲಿ ಇದ್ದಾನೆಯೇ?
ಅಲ್ಲಿಯೂ ಇದ್ದಾನೆ
ತೋಳ ದಿಂಬಿನಲ್ಲಿ ಇದ್ದಾನೆಯೇ?
ಅಲ್ಲಿಯೂ ಇದ್ದಾನೆ
ಕೊರಳ ದಾಟುವಲ್ಲಿ?
ಅಲ್ಲಿಯೂ ಇದ್ದಾನೆ
ಬೆರಳ ಆಟದಲ್ಲಿ
ಅಲ್ಲಿಯೂ ಇದ್ದಾನೆ
ಗಲ್ಲದಲ್ಲಿ?
ಇದ್ದಾನೆ.
ನಲ್ಲನಲ್ಲಿ?
ಎಲ್ಲೆಲ್ಲಿಯೂ ಇದ್ದಾನೆ!

ಅಂದ ಮೇಲೆ ಮಿಲನಕ್ಕೆ ಅನುಮಾನಗಳೇಕೆ?
ದೇವರೆಂದರೆ ದೇಹ
ಕರ್ಪೂರವಾಗಿರೆ ಮೋಹ.

೬. ಆಶಾವಾದಿ ಹುಡುಗಿಗೆ

ಬಟ್ಟಲೊಳಗಿನ ಮದ್ಯ ಅರ್ಧ ತುಂಬಿದ್ದರೆ
ಅರ್ಥವೇನು ಗೊತ್ತೆ?
ಬದುಕೆಂಬುದು ಬಟ್ಟಲು
ಪ್ರಣಯವಲ್ಲಿ ಜೇನ ಕಟ್ಟಲು-
ಅಧರಗಳ ಐಸ್‌ಕ್ಯೂಬ್ಸು ಚೆಲ್ಲಾಡಲಿ
ತುಂಬಿ ತುಳುಕಲಿ ಬಿಡು ಜೀವದ್ರವ್ಯ!

೭. ನಿರಾಶಾವಾದಿ ಹುಡುಗಿಗೆ

ಬಟ್ಟಲೊಳಗಿನ ಮದ್ಯ ಅದಾಗಲೇ
ಅರ್ಧಂಬರ್ಧ ಖಾಲಿ!
ಬದುಕೆಂದರೆ ಇಷ್ಟೇ:
ಬೊಗಸೆಯಲಿ ಹಿಡಿದ ನೀರು
ಮುರಿದ ಶೀಶೆಯ ಚೂರು
ಈಗಿಂದೀಗಲೇ ಕಣ್ಮುಚ್ಚಿ ಸಿಕ್ಕಷ್ಟು ನೆಕ್ಕಿಬಿಡೋಣ
ನಾಳೆಯೆಂಬುದು:
ಕಾಲ ಕತ್ತರಿಸುವ ಗಾಜು.

೮. ವಾಸ್ತವವಾದಿ ಹುಡುಗಿಗೆ

ಬಟ್ಟಲು ಅರ್ಧ ತುಂಬಿದ್ದರೂ
ಅರ್ಧ ಖಾಲಿಯಾದರೂ
ನಮಗೆ ಬಂದ ಸುಖವೇನು ಹೇಳು.
ಹಾಳು ರೂಪಕವಲ್ಲ ಬಾಳು
ನಮ್ಮ ದಾಹಗಳ ನಾವೇ ತಣಿಸಬೇಕು
ಏಳು, ಎದ್ದೇಳು.

೯. ಝೆನ್ ಹುಡುಗಿಗೆ

ಸರಿ!
ಬದುಕೆಂದರೆ ಮದ್ಯದ ಬಟ್ಟಲಲ್ಲ,
ಚಹಾ ಕಪ್.

೧೦. ಜೀವಶಾಸ್ತ್ರಜ್ಞೆ ಹುಡುಗಿಗೆ

ನಿನ್ನ ಎಂಜಲನ್ನವುಂಡ ನೊಣವೇ
ನನ್ನ ಕಾಫಿಯಲ್ಲಿ ಬಿದ್ದಿರುವಾಗ
ನೀ ಮಿಂದ ನೀರೇ ಮೇಲೇರಿ
ಮೋಡವೊಡೆದು ನನ್ನ ತೋಯ್ದಿರುವಾಗ
ಚರಾಚರಗಳ ರಕ್ತ – ಮಾಂಸ – ವೀರ್ಯವೆಲ್ಲ
ಕಡಲೊಳೊಂದಾಗಿ ಉಪ್ಪಾಗಿರುವಾಗ –
ಹೇಳು, ನಾವು ಕೂಡುವುದು ತಪ್ಪು ಹೇಗಾದೀತು?

೧೧. ಗಣಿತಶಾಸ್ತ್ರಜ್ಞೆ ಹುಡುಗಿಗೆ

ಗಣಿತದಲ್ಲಿ ಫೇಲಾದ ನನಗೆ=
[ನೀ ಜೊತೆಗಿಲ್ಲದ ದಿನಗಳ-]
ಕಳೆಯುವ ಲೆಕ್ಕವೇ ಕಷ್ಟ~|•
[ಅದೆಷ್ಟು ಸಲವಾದರೂ (1/0) ನಿನ್ನ+]
ಕೂಡುವುದೆಂದರೆ ಬಲು ಇಷ್ಟ|√π

ದೂರಾಗುವ <ಪ್ರಮೇಯ>ವು ಬಾರದೆ ಇರಲಿ
ಗಣಿಸಬಲ್ಲೆಯ ವ್ಯಾಮೋಹದ ಭಾರ×?
ಒಬ್ಬರ/ಮೇಲೊಬ್ಬರು ಇರೆ, ಅಳಿಯಲಿ ಗೆರೆ
ತಾಕಲಿ {ಎದೆಗಳ ಭಾಗಾ}ಕಾರ÷!%

೧೨. ಭೌತಶಾಸ್ತ್ರಜ್ಞೆ ಹುಡುಗಿಗೆ

ನೀ ನನ್ನ ಹಾಸಿಗೆಯಂಚಿಗೆ ಬಂದು
‘ಸೇಫ್ ಪೀರಿಯಡ್’ ಖಾತ್ರಿಯಾಗದೆ ಗೊಂದಲಕ್ಕೆ ಬಿದ್ದಾಗಲೆಲ್ಲ
ಅನಿಶ್ಚಯದ ಬಾಕ್ಸ್‌ನೊಳಗೆ ಸಿಕ್ಕ
ಶ್ರೊಡಿಂಗರ್‌ನ ಬೆಕ್ಕಿನಂತಾಗುತ್ತೇನೆ ನಾನು
(ಸೂಪರ್-ಪೊಸಿಶನ್ ಚೆಂದವೇ, ಆದರೂ)
ಇನ್‌ಬಾಕ್ಸ್ ತೆರೆದು ನೀ ಕಳೆದ ಋತುಕಾಲದಲಿ
ಕಳಿಸಿದ ಮೆಸೇಜುಗಳ ತಾರೀಖು ತಡಕಾಡುತ್ತೇನೆ.

ಆದರೆ ಭೌತಶಾಸ್ತ್ರದ ಬೆಕ್ಕಿಗೆ ಕಾಮನೆಗಳಿಲ್ಲ
ನನ್ನ ಆಸೆಗಳಾದರೋ: ಫ್ಲಾಸ್ಕ್‌ನೊಳಗೆ ಕುದಿಯುತ್ತಿರುವ ವಿಷದಷ್ಟು ಪ್ರಖರ
ಕ್ವಾಂಟಂ ಸೆಕೆಂಡಿನಲ್ಲಿ ಮೆಡಿಕಲ್ ಶಾಪಿಗೆ ಹಾರಿ
ಹಿಂದಿರುಗಿದ ಕಳ್ಳಬೆಕ್ಕು
-ಬಾಕ್ಸ್ ಒಡೆಯುತ್ತದೆ.

ಒಂದು ಘಂಟೆಯ ನಂತರ:
ದಣಿದ ಬೆಕ್ಕು ಬಿದ್ದಿದೆ?
ಅಲ್ಲ, ಎದ್ದಿದೆ?
ಒಟ್ಟಿನಲ್ಲಿ ಗೆದ್ದಿದೆ.

೧೩. ಟೆಕ್ಕಿ ಹುಡುಗಿಗೆ

ಸೆಲ್ಫ್ ಅಪ್ರೈಸಲ್‌ಗಳಲ್ಲೇ ಯೌವ್ವನ ಕಳೆಯಿತು
ಇನ್ನಾದರೂ ಕೊಡು ಪ್ರಣಯಕೆ ಪ್ರಮೋಶನ್ನು.
ಪರ್‌ಫಾರ್ಮನ್ಸ್‌ ರಿವ್ಯೂ ನಂತರವೂ ಮುತ್ತುಗಳ
ನೀ ಕೊಟ್ಟರೆ ಹೈಕು, ಬಿಟ್ಟರೆ ರಿಸೆಶನ್ನು!

೧೪. ಟಿಕ್‌ಟಾಕ್ ಹುಡುಗಿಗೆ

ನೀ ತುಟಿಗಳನು ನಟಿಸಿದರಷ್ಟೇ ಸಾಕು
ಹಿನ್ನೆಲೆಯಲಿ ಅದಕೊಪ್ಪುವ ಹಾಡು ನನದಿರಲಿ.
ನೀ ತೋಳುಗಳ ಚಾಚಿದರಷ್ಟೇ ಸಾಕು
ಹಿಂಬದಿಯಿಂದ ಬಿಗಿದಪ್ಪುವ ಪಾಡು ನನಗಿರಲಿ.

೧೫. ಕಾಂಗ್ರೆಸ್ ಹುಡುಗಿಗೆ

ನನ್ನಜ್ಜ ಅಜ್ಜಿಯರು
ನಿನ್ನ ಹಿರೀಕರು
ಹಿಂದೆ ಹತ್ತು ತಲೆಮಾರು
ಮಹಾನ್ ರಸಿಕರಾಗಿದ್ದರಂತೆ
ಬಾ, ತಬ್ಬಿಕೊಳ್ಳೋಣ
ಇಂಥ ಕಡುಕಷ್ಟದ ಹೊತ್ತಿನಲಿ
ಕುಟುಂಬ ನಿಷ್ಠೆಯ ತಪ್ಪಬಹುದೆ ನಾವು?

೧೬. ಭಾಜಪ ಹುಡುಗಿಗೆ

ಒಂದು ಕ್ಷಣ ನೀನಿಲ್ಲದಿರೆ ಜೀವವೇ ಒದ್ದಾಡುವಾಗ
ಎರಡು ಡೋಸು ಲಸಿಕೆ ಸಿಕ್ಕರೆಷ್ಟು, ಬಿಟ್ಟರೆಷ್ಟು
ಪೆಟ್ರೋಲು ರೇಟು ನೂರಲ್ಲ, ಸಾವಿರವಾದರೂ
ಭರಿಸಬಲ್ಲೆ
ನೀ ನನ್ನ ಕತ್ತಲೆಯೊಳಗೆ ಮೆಚ್ಚಿಕೊಂಡರೆ ಸಾಕು
ನಾಗ್ಪುರದ ಕಿತ್ತಳೆ ಕಿವಿಯ ಕಚ್ಚಿ ತಿಂದರೆ ಸಾಕು!

೧೬. ದಳದ ಹುಡುಗಿಗೆ

ವಿರಹದ ತೆನೆಭಾರ ಹೊತ್ತು ಬಳಲಿದವ ನಾನು
ಓ! ‘ಕಮಲ’ದಳನಯನೆ
‘ಕೈ’ಹಿಡಿದು ಕಾಪಾಡು ನನ್ನ
ಇಪ್ಪತ್ತು ಮುತ್ತುಗಳ ಮೊದಲು ನೀ ಕೊಡು
ನಾ ಮತ್ತೆ ಕೊಡುವೆ, ನಂಬು ನನ್ನ ನಿಯತ್ತು
ಮೋಹವೆಂಬುದು ಮಂತ್ರಿಸಿದ ನಿಂಬೆಹಣ್ಣು
ಇಟ್ಟರೆ ಮಾಟ, ತಟ್ಟಿದರೆ ಶರಬತ್ತು!

‍ಲೇಖಕರು Admin

8 September, 2021

2 Comments

  1. ಲಲಿತಾ ಸಿದ್ಧಬಸವಯ್ಯ

    ದಳದ ಹುಡುಗಿಗಾಗಿ ಬರೆದದ್ದು ಸವಿಯಾಗಿದೆ.

    • ಸವಿರಾಜ್ ಆನಂದೂರು

      ಧನ್ಯವಾದ madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading