ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಟಿ ಎಸ್ ಗೊರವರ ಅವರ ’ಆಡು ಕಾಯೋ ಹುಡುಗನ ದಿನಚರಿ’ ಯ ಒಂದು ಅಧ್ಯಾಯ ನಿಮಗಾಗಿ
ಟಿ ಎಸ್ ಗೊರವರ
ನನಗೆ ಕ್ಲಾಸಿನಲ್ಲಿ ಕುಳಿತುಕೊಳ್ಳೋದು ಅಂದ್ರೆ ಅವ್ವ ಈಚಲು ಮರದ ಗರಿಗಳಿಂದ ಹೆಣೆದ ಬುಟ್ಟಿಯಲ್ಲಿ ಕೋಳಿ ಮರಿಗಳನ್ನು ಮುಚ್ಚಿದಂತೆ ಉಸಿರುಗಟ್ಟಿಸುತ್ತಿತ್ತು. ಗ್ವಾದಲಿಯ ಗೂಟಕ್ಕೆ ಚಿನ್ನಾಟವಾಡುವ ಆಕಳು ಕರವನ್ನು ಕಟ್ಟಿದಂತೆ ಹಿಂಸೆ ಅನಿಸುತ್ತಿತ್ತು. ಆ ಪೆನ್ಸಿಲ್, ಪಾಟಿ, ಕರಿ ಬೋರ್ಡ್ಡ ನೋಡಿದರೆ ಸಾಲೆಗೆ ಹೋಗುವುದೇ ಬೇಡವೆಂದು ಜೀವ ಚಂಡಿ ಹಿಡಿಯುತ್ತಿತ್ತು.
ಇಂತಹ ಸಂದಿಗ್ಧ ಹೊತ್ತಿನಲ್ಲಿ ನಮ್ಮ ನಾಲ್ಕನೇ ತರಗತಿಗೆ ಎಸ್.ಸಿ. ಶೀಲವಂತರ ಸರ್, ನೀವು ಹೊಸ ಮಾಸ್ತರಾಗಿ ಕೈಯಲ್ಲೊಂದು ರೂಲು ಕಟ್ಟಿಗೆ ಹಿಡಿದುಕೊಂಡು ಗಂಭೀರವದನರಾಗಿ ನಮ್ಮ ಕ್ಲಾಸಿಗೆ ಆಗಮಿಸಿದಿರಿ. ಮೌನವೆಂಬುದೇ ಗೊತ್ತಿರದಿದ್ದ ನಮಗೆ ನಿಮ್ಮ ಮೊದಲನೆಯ ಕ್ಲಾಸು ಯಮಯಾತನೆ ಅನುಭವಿಸುವಂತೆ ಮಾಡಿತ್ತು. ಇವತ್ತಿನ ಕ್ಲಾಸು ಮುಗಿದರೆ ಸಾಕು. ಮತ್ತೆಂದೂ ಸಾಲೆಗೆ ಬರಲೇ ಬಾರದು ಎಂದು ಅಕಲು ಹಾಕತೊಡಗಿತ್ತು.
ನಿಮ್ಮನ್ನು ನೋಡಿ, ನಿಮ್ಮ ಮಾತುಗಳನ್ನು ಕೇಳಿ ನನ್ನ ಎದಿ ಅಳ್ಳು ಒಡೆದಿತ್ತು. ನೀವು ರೂಲು ಕಟ್ಟಿಗೆಯಿಂದ ಮೇಜಿಗೆ ಬಾರಿಸಿದ ಆವಾಜಿಗೆ ನಮ್ಮ ಮಾತು ಅದೆಲ್ಲೋ ಕಳೆದು ನಿಶ್ಶಬ್ದದೊಳಗೆ ಲೀನವಾಗುತ್ತಿದ್ದವು. ಮಗ್ಗಿ ಅನಿಸಲು ಶುರು ಮಾಡಿದರೆ ಮಗ್ಗಿಯ ಗಂಧ ಗಾಳಿ ಗೊತ್ತಿರದಿದ್ದ, ಕಿಟಕಿಯ ಪಕ್ಕದ ಹಿಂದಿನ ಸಾಲಿನಲ್ಲಿ ಕುಳಿತಿರುತ್ತಿದ್ದ ನನಗೆ ಸಣ್ಣಗೆ ಬೆವರೊಡೆಯುತ್ತಿತ್ತು. ಚೊಣ್ಣದಲ್ಲಿ ಜಿನುಗೊಡೆಯುತ್ತಿತ್ತು.

ದಿನಗಳು ಕಾಲನ ಒಳಗೆ ಒಂದಾಗುತ್ತಾ ಹೋದಂತೆ ನಾನು ನಿಮ್ಮ ಕ್ಲಾಸು ತಪ್ಪಿಸಿ, ಅಪ್ಪನಿಗೂ ಗೊತ್ತಾಗದಂತೆ ಎಮ್ಮೆ ಮೇಯಿಸುವ ನನ್ನ ಫೆವರೆಟ್ ಜೀವದ ಗೆಳೆಯರ ಜೊತೆ ಒಂದಾಗಿ ಅವರೊಂದಿಗೆ ಅಲೆಯತೊಡಗಿದ್ದೆ. ಸರ್, ಅದೆಂತ ಖುಷಿ, ಉಲ್ಲಾಸ, ಮಜಾ ಅಂತೀರಿ. ಮುಗಿಲೆತ್ತರದ ಗಿಡದಲ್ಲಿ ಮರಕೋತಿ ಆಟವಾಡುತ್ತಾ, ದ್ವಾರಿಗಾಯಿ ಹುಣಸೆ ಹಣ್ಣು ತಿನ್ನುತ್ತಾ, ಮೈ ತುಂಬಾ ಹಾಲು ತುಂಬಿಕೊಂಡು ಬೀಗುತ್ತಾ ನಿಂತಿರುತ್ತಿದ್ದ ಗೌಡರ ಹೊಲದಲ್ಲಿನ ಗ್ವಾಂಜಾಳ ಕದ್ದು ಸುಟ್ಟು ತಿನ್ನುತ್ತಿದ್ದ ರುಚಿಯ ಮುಂದೆ ನಿಮ್ಮ ಕ್ಲಾಸನ್ನು ನಿವಾಳಿಸಿ ಒಗೆಯಬೇಕು ಅನಿಸುತ್ತಿತ್ತು.
ನಾನು ಕ್ಲಾಸು ತಪ್ಪಿಸುತ್ತಿರುವುದನ್ನು ನಿಮ್ಮಪ್ಪನಿಗೆ ಹೇಳುತ್ತೇನೆಂದು ಪಕ್ಕದ ಮನೆಯ ‘ಹಚುಗ’ ಗೆಳೆಯ ಧಮಿಕಿ ಹಾಕುತ್ತಿದ್ದ. ಚೊಣ್ಣದ ಜೇಬಿನ ತುಂಬಾ ತುಂಬಿಕೊಂಡು ಬಂದಿರುತ್ತಿದ್ದ ಬಾರೆಹಣ್ಣನ್ನು ಅವನಿಗೆ ಕೊಟ್ಟು ಅವನ ಪ್ರಾಮಾಣಿಕತೆಯನ್ನು ಕೊಂಡುಕೊಳ್ಳುತ್ತಿದ್ದೆ.
ಗತ್ತು, ಗೈರತ್ತಿನಿಂದ ಎಮ್ಮೆ ಮ್ಯಾಲೆ ಹತ್ತಿಕೊಂಡು, ರಾಜಕುಮಾರ ಪಿಚ್ಚರಿನ ‘ಎಮ್ಮೆ ನಿನಗೆ ಸಾಟಿ ಇಲ್ಲ….’ಹಾಡನ್ನು ಹೇಳುತ್ತಾ ಹಳ್ಳದ ದಂಡೆಯಲ್ಲಿ ಎಮ್ಮೆ ಬಿಟ್ಟು ಹಳ್ಳದಲ್ಲಿ ಈಸು ಬಡಿದು ನೀರಾಟವಾಡುತ್ತಿದ್ದೆವು. ನಮ್ಮ ಎಮ್ಮೆ ಟೀಮಿನ ಲಿಡರ್ ಭೀಮನಿಗೆ ನೀವು ಬಾಳ ಸ್ಟ್ರಿಕ್ಟು ಅಂತ ಹೇಳಿದ್ದೆ. ಸರ್, ನಿಮಗೆ ಮರೆತು ಹೋಗಿರಬಹುದು. ನನ್ನನ್ನು ನೀವು ಪದೇ ಪದೆ ಬಯ್ಯುತ್ತೀರಿ ಎಂಬುದನ್ನು ಕೇಳಿದ್ದ ಭೀಮ ಒಂದಿನ ದೂರದಿಂದ ನಿಮಗೆ ಹಲ್ಕಟ್ಟು ಬೈಯ್ದು ಓಡಿ ಬಂದಿದ್ದನಂತೆ. ಸರ್, ಅವನಿಗೆ ಜೇನು ಬಿಡಿಸುವುದೆಂದರೆ ಜೇನು ತಿಂದಷ್ಟೇ ಖುಷಿ. ಭೀಮ ಜೇನು ಬಿಡಿಸುವ ಪರಿಯನ್ನು ನೀವು ನೋಡಬೇಕಿತ್ತು. ಅಂವ ಜೇನು ಹುಟ್ಟಿನಿಂದ ತುಪ್ಪ ಬಳುಚಿ ಬೊಗಸೆಗೆ ಸುರುವುತ್ತಿದ್ದ. ನಾವು ಬೊಗಸೆಯೊಳಗಿನ ಜೇನು ಮೆಲ್ಲುತ್ತಾ ಜಗತ್ತು ಮರೆಯುತ್ತಿದ್ದೆವು. ಅಂತದ್ದರಲ್ಲಿ ನಿಮ್ಮ ಕ್ಲಾಸಿನ ದ್ಯಾಸವಾದರೂ ಅದ್ಹೇಗೆ ಆದೀತು ಸರ್?
ನಾನು ಹೀಗೆ ಕ್ಲಾಸು ತಪ್ಪಿಸಿ ಪೋಲಿ ಅಲೆಯುತ್ತಿರುವುದು ಅದ್ಹಾಗೋ ಅಪ್ಪನಿಗೊಮ್ಮೆ ಗೊತ್ತಾಗಿ ನನ್ನನ್ನು ನಿಮ್ಮೆದುರಿಗೆ ಅಪರಾಧಿಯಂತೆ ತಂದು ನಿಲ್ಲಿಸಿದ್ದ. ನಿಮ್ಮೊಳಗಿನ ಸಿಟ್ಟು ಅದೆಲ್ಲಿತ್ತೋ ಏನೊ. ನಿಮ್ಮ ಬೆತ್ತದ ಏಟಿಗೆ ನನ್ನ ಅಂಗೈ ಮಿದುವಿನ ತುಂಬಾ ಬಾಸುಂಡೆಗಳು ಪುದು ಪುದು ಎದ್ದು ಸಾಲುಗಟ್ಟಿ ನಿಂತಿದ್ದವು. ನೀವು ಅದೆಷ್ಟು ಕ್ರೂರ, ಕಠೋರ ಅನಿಸಿದ್ರಿ. ನಿಮಗೆ ಕೆಟ್ಟೆನಿಸಿರಬೇಕು. ನನ್ನ ಮ್ಯಾಲೆ ಮರುಕ ಹುಟ್ಟಿರಬೇಕು. ಅಂಗೈ ಮೇಲಿನ ಬಾಸುಂಡೆಗಳನ್ನು ಸುಮ್ಮನೆ ನೇವರಿಸಿದಿರಿ. ಆಗ ನೀವು ಅವ್ವನಂತೆ ತೋರಿದಿರಿ.
ನಿಜಕ್ಕೂ ನಿಮ್ಮೊಳಗೆ ಅವ್ವನಂತ ಮನಸಿತ್ತು. ಅವತ್ತಿನಿಂದ ನೀವು ನನಗೆ ಬೆತ್ತದ ರುಚಿ ತೋರಿಸುವುದನ್ನು ಕಡಿಮೆ ಮಾಡಿದಿರಿ. ಪೆನ್ಸಿಲ್ನಿಂದ ಬರೆಯುವುದನ್ನು ಗಮನಿಸಿದ ನೀವು, ನಿಮ್ಮ ಪೆನ್ನನ್ನು ಕೊಟ್ಟು ನೋಟ್ ಪುಸ್ತಕ ಕೊಡಿಸಿದಿರಿ. ಅಕ್ಷರಗಳನ್ನೇ ಅರಿಯದ ನನ್ನನ್ನು ಕ್ಲಾಸಿನ ಲೀಡರ್ ಮಾಡಿ, ನಿತ್ಯವೂ ಕ್ಲಾಸಿಗೆ ಬರುವಂತೆ ತಾಕೀತು ಮಾಡಿದಿರಿ. ಆದರೂ ನಾನು ಅಪ್ಪ ಸಾಲೆ ಬಿಡಿಸಿದ್ದ ಅಂತ ನಿಮಗೆ ಸುಳ್ಳು ಹೇಳುತ್ತಿದ್ದೆ. ಯಾಕಂದ್ರೆ ಎಮ್ಮೆ ಟೀಮಿನ ಗೆಳೆಯರ ಸ್ನೇಹಕ್ಕೆ ನಾನು ಯಾವತ್ತೋ ಆತುಕೊಂಡಿದ್ದೆ. ನನ್ನೊಳಗಿನ ಎಲ್ಲ ಸ್ನೇಹವನ್ನು ಅವರಿಗೆ ಮಾರಿಕೊಂಡಿದ್ದೆ.
ಈ ಎಲ್ಲದರ ಮಧ್ಯೆಯೂ ನೀವು ಕಲಿಸಿದ ಅಕ್ಷರಗಳು ಕೊನೆಗೂ ಕೈಹಿಡಿದಿವೆ. ಆ ಅಕ್ಷರಗಳ ಬೆಳಕಿನಲ್ಲೇ ಹೆಜ್ಜೆ ಹಾಕುತ್ತಿದ್ದೇನೆ. ಅದರಲ್ಲಿಯೇ ಬದುಕು ಕಟ್ಟಿಕೊಳ್ಳುವ ಹವಣಿಕೆಯಲ್ಲಿದ್ದೇನೆ. ಅದೆಲ್ಲೋ ಕಳೆದು ಹೋಗುತ್ತಿದ್ದ ನನಗೆ ನಾಕು ಅಕ್ಷರ ಕಲಿಸಿದ ನಿಮಗೆ ಶರಣು ಗುರುವೆ.






Eshtu chendakke bardidiraa