ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಸರ್ರಾ, ನಮ್ಮ ನಿಮ್ಮ ಸಂಬಂಧ ಇಲ್ಲಿಗೇ ಮುಗೀತೇನ್ರೀ?”

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 23

ಶ್ರೀಮಂತಿಕೆಯ ಸೊಕ್ಕು

avadhi-column-rahul bw-edited2

ತೊಡೆಸ್ನಾಯುಗಳ ಮತ್ತು ಮಂಡಿ ನೋವಿನಿಂದ ಕಳೆದ ರಾತ್ರಿ ಸರಿಯಾಗಿ ನಿದ್ರೆ ಆಗಲಿಲ್ಲ. ಇತ್ತೀಚಿಗೆ ಯಾಕೋ ಸಾಕಾದಂತೆ ಅನಿಸುತ್ತಿತ್ತು. ಹರಿಹರದ ತನಕ ಕಾಲ್ನಡಿಗೆ ಅಲ್ಲಿಂದ ಮುಂದಕ್ಕೆ ಒಂದು ಬೈಸಿಕಲ್ ಪಡೆದು ಪ್ರಯಾಣ ಮುಂದುವರಿಸಬೇಕು ಎನಿಸಿತು.

ಶಿವಣ್ಣನವರ ಮನೆಯಿಂದ ಒಂದೆರಡು ರಸ್ತೆ ದಾಟಿದರೆ ಅವರು ಇತ್ತೀಚಿಗೆ ಕೊಂಡ ಜಾಗದಲ್ಲಿ ಶೌಚಾಲಯ ಕಟ್ಟಿಸಿಕೊಂಡಿದ್ದರು. ಬಹಳ ಬುದ್ಧಿವಂತಿಕೆಯಿಂದ ಯೋಜನಾ ರೂಪದಲ್ಲಿ ಮಕ್ಕಳಿಬ್ಬರಿಗೂ ಶಿಕ್ಷಣ ಕೊಡಿಸಿ, ಮನೆಯ ಖರ್ಚಿಗೆ ಮನೆಯಲ್ಲೇ ಒಂದು ದಿನಸಿ ಅಂಗಡಿಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಮನೆಯಲ್ಲೇ ತಿಂಡಿ ಸ್ನಾನ ಮುಗಿಸಿ ಡಾ ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಗೆ ಹೋದೆವು.

avadhi- column- rahul- low res- editedತಕ್ಷಣ ಅವಕಾಶಗಿಟ್ಟಿಸಿ ಉಪನ್ಯಾಸ ಮುಗಿಸಿದೆ. ನನ್ನ ಜೊತೆಗೂಡಿ ಬಂದಿದ್ದ ಶಾಲೆಯ ಹಳೆಯ ವಿದ್ಯಾರ್ಥಿಯಾದ ವಿನಯ್ ಕೂಡ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಒಂದು ಭಾಷಣ ಕೊಟ್ಟ. ಊರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲ್ಲೂಕು ಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದರು. ಅಲ್ಲಿಯೇ ತಿರುಗಾಡುತ್ತಿದ್ದ ಗ್ರಾ.ಪಂ ಯುವಕರನ್ನು ಮಾತನಾಡಿಸಿ ಅವರ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದೆ. ನಮ್ಮ ಸ್ಯಾಟಿಸ್ಫೈ ಮಾವನ ಭೇಟಿಯಾಯಿತು. ಕುಡಿತದ ನಶೆಯಿಳಿದಿದ್ದರಿಂದ ಅದರ ಜೊತೆ ತನ್ನ ರಾಜಾರೋಷವೂ ಇಳಿದು ಮೂಕನಾಗಿದ್ದ. ಎಷ್ಟು ಒತ್ತಾಯಿಸಿದರೂ ಒಂದು ಮಾತೂ ಕೂಡ ಉದುರಲಿಲ್ಲ. ವಿನಯ್ ಹೆದ್ದಾರಿಯ ತನಕ ಬಂದು ತನ್ನ ವಯಕ್ತಿಕ ನೂರು ರೂಪಾಯಿ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟ. ಅಲ್ಲಿಂದ ಹೊರಟು ಐದು ಮೈಲು ದೂರವಿದ್ದ ಚಳಗೇರಿಗೆ ನಡೆಯಲು ಶುರುಮಾಡಿದೆ.

ಊಟದ ಸಮಯಕ್ಕೆ 1964ರಲ್ಲಿ ಸ್ಥಾಪನೆಯಾಗಿ ಐದು ದಶಕಗಳಿಂದ ಮಕ್ಕಳಿಗೆ ಜ್ಞಾನ ಭೋದನೆ ಮಾಡುತ್ತಾ ಬಂದಿರುವ ಚಳಗೇರಿಯ ಸಿ.ಇ.ಎಸ್ ಪ್ರೌಢಶಾಲೆಯನ್ನು ತಲುಪಿದೆ. ಎಂದಿನಂತೆ ಶಾಲೆಯಲ್ಲೇ ಬಗೆಬಗೆ ತಿನಿಸಿನ ಊಟ. ಊಟದ ನಂತರ ಉಪನ್ಯಾಸ. ಉಪನ್ಯಾಸದಲ್ಲಿ ಒಂದು ಹುಡುಗಿ ಎದ್ದು ನಿಂತು ಒಂದು ಅದ್ಬುತ ಪ್ರಶ್ನೆ ಕೇಳಿದಳು.

“ಸರ್ರಾ, ನಿಮ್ಮ ಉಪನ್ಯಾಸ ಚಲೋ ಇತ್ತು ರೀ. ನಾವೆಲ್ಲಾ ನಿಮ್ ಕೂಡ ಕೈ ಜೋಡಿಸ್ತಿವೀ. ಆದ್ರ ನಮ್ಗಾ ಪರಿಸರ ಮೇಲಿನ ಕೆಲಸದ ಬಗ್ಗೆ ಏನಾದ್ರು ಪ್ರಶ್ನೆ ಮೂಡಿದ್ರಾ ಅಥವಾ ನಾವ್ ಮಾಡ್ತಿರೋ ಕೆಲಸದ ಬಗ್ಗೆ ನಿಮ್ ಕೂಡ ಹೇಳ್ಕೋಬೇಕು ಅಂದ್ರಾ ಏನ್ ಮಾಡೋದ್ ರ್ರೀ. ನಮ್ಮ ನಿಮ್ಮ ಸಂಬಂಧ ಇಲ್ಲಿಗೇ ಮುಗೀತೇನ್ರೀ?” ಎಂದಳು.

ಹೌದು ನನ್ನ-ಮಕ್ಕಳ ಸಂಬಂಧ ಇಲ್ಲಿಗೇ ಮುರಿಯಬಾರದು. ಸಾವಿರದಲ್ಲಿ ಒಬ್ಬ ವಿದ್ಯಾರ್ಥಿಗಾದರು ನನ್ನ ಜೊತೆ ಸಂಪರ್ಕದಲ್ಲಿ ಇದ್ದು ನನ್ನ ಕೆಲಸಗಳಿಗೆ ಕೈ ಜೋಡಿಸಬೇಕು ಅಥವಾ ಅವರ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಮತ್ತು ಸಹಾಯ ಬೇಕೆನಿಸಿದರೆ, ಅದಕ್ಕೆ ಅವಶ್ಯವಾಗಿ ಅವಕಾಶ ಮಾಡಿಕೊಡಬೇಕು ಎಂದೆನಿಸಿತು.  “ಇಲ್ಲಿಯವರಿಗೆ ಕೇಳಿದ ಪ್ರಶ್ನೆಗಳಲ್ಲಿ ಇದು ಅತ್ತ್ಯುತ್ತಮ ಪ್ರಶ್ನೆ. ಎಲ್ಲರೂ ನಮ್ಮ ಹುಡುಗಿಗೆ ಜೋರಾದ ಚಪ್ಪಾಳೆ ಮುಖಾಂತರ ಅಭಿನಂದಿಸೋಣ” ಎಂದು ಅವಳಿಗೆ ಚಪ್ಪಾಳೆ ಬರುವಂತೆ ಮಾಡಿದೆ.

“ಈಗ ಒಂದು ಕೆಲಸ ಮಾಡೋಣ. ಬೋರ್ಡಿನ ಮೇಲೆ ನನ್ನ ದೂರವಾಣಿ ಸಂಖ್ಯೆ ಮತ್ತು ವಿಳಾಸ ಬರೆದಿರುತ್ತೇನೆ. ನಿಮಗೆ ನನ್ನ ಜೊತೆ ಸಂಪರ್ಕದಲ್ಲಿರಬೇಕಾದರೆ, ದೂರವಾಣಿ ಕರೆಯ ಮುಖಾಂತರ ಅಥವಾ ಒಂದು ಅಂಚೆ ಕಾರ್ಡಿನ ಮುಖಾಂತರ ಸಂದೇಶ ಕಳುಹಿಸಬಹುದು. ನಿಮ್ಮ ಎಲ್ಲಾ ಸಂದೇಶಗಳಿಗೂ ಉತ್ತರಿಸುವ ಸಹನೆ, ಸೌಜನ್ಯ ಹಾಗೂ ಸಮಯ ನನ್ನಲ್ಲಿದೆ. ಹಾಗಾಗಿ ಯಾರೂ ಕೂಡ ಮುಜುಗರ ಪಡುವ ಅಗತ್ಯವಿಲ್ಲ” ಎಂದು ಹೇಳಿ ನನ್ನ ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ಕೊಟ್ಟು ಅಲ್ಲಿಂದ ಹೊರಟೆ.

ತದನಂತರ ಅದೇ ಊರಿನ ಉಜ್ಜನಗೌಡ ಬಸವನಗೌಡರ ಪ್ರೌಢಶಾಲೆಯಲ್ಲಿ ಉಪನ್ಯಾಸ. ಕ್ರೀಡಾಕೂಟಕ್ಕೆ ಹೋಗಿದ್ದ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದಿದ್ದವರು ಬರೀ ಮೂವತ್ತು ವಿದ್ಯಾರ್ಥಿಗಳು. ಹಾಗಾಗಿ ಮೊದಲು ನಿರಾಕರಿಸಿದ್ದರು. ನನ್ನ ಕೋರಿಕೆಯ ನಂತರ ಒಪ್ಪಿದರು. ಆದರೆ ಅಲ್ಲಿ ಅಕ್ಕಿ ಹೋಗಿ ಬರೀ ಅಕ್ಕಿಯ ನುಚ್ಚು ಉಳಿದಿತ್ತು. ನುಚ್ಚಿನಲ್ಲಿ ಅನ್ನ ಮಾಡಿದರೆ ರುಚಿಸುವುದೇ? ಹಾಗಾಗಿ ಬರೀ ಗಂಜಿ ಮಾಡಿ ಬಡಿಸಿ ಬಂದಂತಾಯಿತು ನನ್ನ ಉಪನ್ಯಾಸ.

ಚಳಗೇರಿಯಿಂದ ಎರಡು ಮೈಲು ನಡೆದು ಹೆದ್ದಾರಿಯಿಂದ ಎಡಕ್ಕೆ ತಿರುಗಿ ಮತ್ತೆರಡು ಮೈಲು ನಡೆದು ರೈಲ್ವೆ ಹಳಿ ದಾಟಿದರೆ ಕರೂರ. ಪಟ್ಟಣವನ್ನೇ ಹೋಲುತ್ತಿದ್ದ ತಾರಸೀ ಮನೆಗಳ ಊರು. ಒಂದಕ್ಕಿಂತ ಒಂದು ಮೀರಿಸುವ ಬಂಗಲೆಗಳು. ಹಾಗೇ ಪ್ರೌಢಶಾಲೆಯನ್ನು ಹುಡುಕಿಕೊಂಡು ಹೋದ ನಾನು ದಾರಿ ತಪ್ಪಿ ಪ್ರಾಥಮಿಕ ಶಾಲೆಯನ್ನು ತಲುಪಿದೆ. ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಮಾತನಾಡಿಸಿ, ಪ್ರೌಢಶಾಲೆಯ ವಿಳಾಸ ಕೇಳಿದೆ. ಬಂದ ದಾರಿಯಲ್ಲೇ ಮತ್ತೆ ವಾಪಸ್ಸು ಹೋಗಬೇಕೆಂದು ಹೇಳಿದರು. ಸರಿ ಗ್ರಾಪಂ ಕಚೇರಿಯ ವಿಳಾಸ ಕೇಳಿದೆ ಒಂದು ದಾರಿ ತೋರಿಸಿದರು. ಅವರು ಕುತೂಹಲದಿಂದ ನಾನು ಅಲ್ಲಿಗೆ ಬಂದ ವಿಚಾರವನ್ನು ಕೆದಕಿದರು. ನಾನು ವಿವರಿಸಿದ ನಂತರ ಒಂದು ಕ್ಞಣವೂ ಯೋಚಿಸದೆ ಅವರು ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ಪ್ರಸ್ತಾಪ ಮಾಡಿದರು. ನಾನು ಕೂಡ ಒಂದು ಕ್ಷಣವೂ ಯೋಚಿಸದೆ ಒಪ್ಪಿದೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಇತ್ತು ಆ ಕ್ಷಣ.

ಅವರು ಶಾಲೆಯ ಗುಮಾಸ್ತರಿರಬೇಕು ಎಂದು ತಿಳಿದಿದ್ದ ನನಗೆ ಅವರು ಶಾಲೆಯ ಮುಖ್ಯೋಪಾಧ್ಯಾಯರು ಎಂದು ತಿಳಿದು ಅಚ್ಚರಿಯಾಯಿತು. ಅಷ್ಟು ಸರಳ ವ್ಯಕ್ತಿತ್ವ. ಹಾಗೇ ಆ ಊರಿನ ಐಷಾರಾಮಿ ಜೀವನದ ಬಗ್ಗೆ ಕೇಳಿದಾಗ ತಿಳಿದಿದ್ದು ಅಲ್ಲಿನ ಕಲ್ಲಿನ ಕ್ವಾರೆಗಳು ಅಥವಾ ಕಣಿವೆಗಳಿಂದ, ಜಮೀನಿಗೆ ಸಿಗುವ ಬೆಲೆಯಿಂದ ಮತ್ತು ಸುತ್ತ ಮುತ್ತ ಇರುವ ಕಾರ್ಖಾನೆಗಳಲ್ಲಿರುವ ನೌಕರಿಯಿಂದಾಗಿ ಲಕ್ಷ, ಕೋಟಿ ರೂಪಾಯಿ ಚಲಾವಣೆ ಮಾಡುವ ಕುಳಗಳೇ ಅಲ್ಲಿ ವಾಸಿಸುತ್ತಿದ್ದವು. ಮುಖ್ಯೋಪಾಧ್ಯಾಯರ ಮನೆಗೆ ಬಂದು ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ ಊಟವನ್ನು ಉಂಡು, ಲೋಕಾರೂಢಿ ಮಾತಾಡಿಕೊಂಡು ನಿದ್ರೆಗೆ ಜಾರಿದೆವು.

ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಮೇಷ್ಟ್ರು ಮಾಡಿದ್ದ ಉಪ್ಪಿಟ್ಟು ತಿಂದು ಮಾತಾಡಲು ಕುಳಿತೆವು. ಶಾಲೆಯಲ್ಲಿ ಗುಮಾಸ್ತರಿಲ್ಲದ ಕಾರಣ ದಿನವೂ ಒಂದು ಗಂಟೆ ಮುಂಚೆ ಹೋಗಿ ಶಾಲೆಯ ಆವರಣದಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡಿ ಎಸೆದು ಹೋಗಿದ್ದ ತ್ಯಾಜ್ಯವನ್ನೆಲ್ಲಾ ತಾವೇ ಸ್ವಚ್ಛ ಮಾಡಿ ಕಸವನ್ನು ಹೊರ ಎಸೆಯಬೇಕು ಎಂದುದನ್ನು ಕೇಳಿ ನನಗೆ ಆಘಾತವಾಯಿತು.

village warliಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುವುದೆಂದರೆ ಏನರ್ಥ? ಊರಿನವರಿಗೆ ಶ್ರೀಮಂತಿಕೆಯ ಸೊಕ್ಕೇ? ಗ್ರಾ ಪಂ ಅಥವಾ ಊರಿನ ಮುಖಂಡರಿಗೆ ಇವ್ಯಾವುವು ಕಾಣಿಸುವುದಿಲ್ಲವೇ? ಎಷ್ಟೇ ಶ್ರೀಮಂತವಾದ ಊರಾದರೂ ಕೂಡ ಈ ಊರು ಸ್ವಚ್ಛತೆ, ನೈರ್ಮಲ್ಯ ಮತ್ತು ಇಂತಹ ವಿಲಕ್ಷಣ ವಿಷಯದಲ್ಲಿ ಪಡೆದ ಸಂಖ್ಯೆ ಮಾತ್ರ ಸೊನ್ನೆ. ಇದು ಊರಿನ ಜನರೆಲ್ಲಾ ತಲೆತಗ್ಗಿಸುವಂತಹ ವಿಚಾರ. ಪರಊರಿನವರಾದ ಮೇಷ್ಟ್ರುಗಳು ಈ ಊರಿನ ಜನರ ಜೊತೆ ಗಲಾಟೆ ಮಾಡಿ ದ್ವೇಷ ಕಟ್ಟಿಕೊಳ್ಳುವರೇ? ಅದೇ ಬೇಜಾರಿನಲ್ಲಿ ನಾನು ಕರೂರಿನ ಶ್ರೀ ಬೀರೇಶ್ವರ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ತಲುಪಿ, ಶಾಲೆ ತೆರೆಯಲು ಇನ್ನೂ ಸಮಯವಿದ್ದ ಕಾರಣ, ಆ ದಿನದ ಕನ್ನಡಪ್ರಭ ದಿನಪತ್ರಿಕೆಯ ಹಾಳೆಗಳನ್ನು ತಿರುಚಿಹಾಕುತ್ತಿದ್ದೆ. ಏಳನೇ ಪುಟದಲ್ಲಿ ಪ್ರಕಟವಾಗಿದ್ದ “ಬೇಗ ಬರಲಿದೆಯೇ ಭಯಂಕರ ಭವಿಷ್ಯ?” ಎಂಬ ಮುಖ್ಯಾಂಶವಿದ್ದ ಲೇಖನದಲ್ಲಿ ಭೂಮಿಯ ವಾತಾವರಣದಲ್ಲಿ ಆಗುತ್ತಿರುವ ವೇಗದ ಬದಲಾವಣೆಯ ಪರಿಣಾಮಗಳ ಬಗ್ಗೆ ಬರೆದಿದ್ದರು.

ನನ್ನ ಉಪನ್ಯಾಸ ಮಾತುಗಳಿಗೆ ಈ ಲೇಖನ ಪುಷ್ಟಿ ಕೊಟ್ಟಿತು. ಆ ಎಳೆಯನ್ನೇ ಹಿಡಿದುಕೊಂಡು, ವಿದ್ಯಾರ್ಥಿಗಳ ಕೈಯಲ್ಲೇ ದಿನಪತ್ರಿಕೆಯ ಲೇಖನವನ್ನು ಓದಿಸಿ ವಿವರಿಸಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆ ಕಾಲೇಜಿನ ವಿದ್ಯಾರ್ಥಿಗಳೂ ಉಪನ್ಯಾಸದಲ್ಲಿ ಭಾಗವಹಿಸಿ, ನಾಟಕದಲ್ಲಿ ಪಾಲ್ಗೊಂಡು ಜಾಗೃತರಾದರು. ಮಕ್ಕಳಿಗೆ ನನ್ನ ವಿಳಾಸಕೊಟ್ಟು, ಶಾಲೆಯ ಆತಿಥ್ಯವನ್ನು ಪಡೆದು ಹೊರಟೆ. ಶಾಲೆಯಲ್ಲಿ ಒಂದು ವಿಷಯ ನನ್ನ ಗಮನಕ್ಕೆ ಬಂದು ಕಾಡಿತು. ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ಪಡೆದು ಶಾಲೆಗೆ ಹೊಸ ಪೀಠೋಪಕರಣಗಳನ್ನು ಕೊಂಡಿದ್ದರು. ಅವಶ್ಯಕತೆಯಿದ್ದರೆ ಈ ತರಹ ಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ನಾನು ಶೌಚಾಲಯವನ್ನು ವಿಚಾರಿಸಿದಾಗ, ದೂರದಲ್ಲಿದ್ದ ರೈಲ್ವೇ ಹಳಿಯ ಹತ್ತಿರ ಹೋಗಲು ಹೇಳಿದರು. ನನ್ನ ಪ್ರಶ್ನೆ, ಶಾಲೆಗೆ ಅತ್ಯಾವಶ್ಯಕವಾಗಿದ್ದು ಶೌಚಾಲಯವೋ ಅಥವಾ ಪೀಠೋಪಕರಣಗಳೋ?

ರೈಲ್ವೇ ಹಳಿಯನ್ನು ದಾಟಿ, ಒಂದು ಮೈಲು ನಡೆದು ಹೆದ್ದಾರಿಯನ್ನು ದಾಟಿ, ಸಿಕ್ಕ ಕಾಲು ದಾರಿಯಲ್ಲಿ ನಡೆದು ಮಾಕನೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಕಡೆಗೆ ಹೊರಟೆ. ಸಮೃದ್ದವಾಗಿ ಬೆಳೆದಿದ್ದ ಕಬ್ಬು ಮತ್ತು ಆಗ ತಾನೇ ನಾಟಿಮಾಡಿದ್ದ ಭತ್ತದ ಬೆಳೆಗಳು ನನಗೆ ನಮ್ಮ ಮಂಡ್ಯ, ಮೈಸೂರು, ನಂಜನಗೂಡಿನ ಸೀಮೆಯಲ್ಲಿ ಓಡಾಡಿದಂತೆ ಭಾಸವಾಯಿತು.  ಸುತ್ತ ಗದ್ದೆಯಿದ್ದರಿಂದ ಕಾಲುದಾರಿಯು ಕೆಸರಿನಂತಾಗಿತ್ತು. ಸ್ವಲ್ಪ ದೂರದಲ್ಲಿ ಸಿಕ್ಕ ನಾಲೆಯನ್ನು ನೋಡಿ ಇದು ತುಂಗಭದ್ರ ನದಿಯ ಬಳುವಳಿ ಎಂದು ಅರಿವಾಯಿತು.

ಸ್ವಲ್ಪ ಹೊತ್ತು ನಾಲೆಯ ನೀರಿನಲ್ಲಿ ಕಾಲಾಡಿಸುತ್ತಾ ಕುಳಿತು ನನ್ನ ಕಾಲುಗಳಿಗೆ ವಿರಾಮ ಕೊಟ್ಟೆ. ಹಾಗೇ ನನ್ನ ಬ್ಯಾಗಿಗೆ ತಲೆಕೊಟ್ಟು ಒಂದು ಹತ್ತು ನಿಮಿಷ ತೂಕಡಿಸಿದೆ. ತಕ್ಷಣ ಏನೋ ಸರ್ರನೇ ಹೋದಂತೆ ಶಬ್ದವಾಯಿತು. ನಾಯಿಯೇನಾದರು ಬಂದು ಕಚ್ಚಿದರೆ ನನಗೆ ಈಗ ಹಿಡಿದಿರುವ ಹುಚ್ಚು ಇನ್ನೂ ಹೆಚ್ಚಾಗಿ ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದು ಭಾವಿಸಿ ಚಕ್ಕನೆ ಎದ್ದು ನೋಡಿದೆ. ನಾಲ್ಕರಿಂದ ಐದು ಅಡಿಯ ಕೇರೆ ಹಾವು ಗದ್ದೆಯಿಂದ ನಾಲೆಯ ಕಡೆಗೆ ಹೋಗುತ್ತಿತ್ತು. ಮೈ ಜುಮ್ಮೆಂದು ತಕ್ಷಣ ಅಲ್ಲಿಂದ ಕಾಲ್ಕಿತ್ತು ಶಾಲೆಯ ಕಡೆಗೆ ಓಡಿದೆ. ಒಂದೇ ಇದ್ದ ಕಾಲು ದಾರಿ ಒಡೆದು ಮೂರಾಯಿತು. ಯಾವ ದಾರಿ ಶಾಲೆಗೆ ಹೋಗಬಹುದು ಎಂದು ಯೋಚಿಸುತ್ತಾ ನಿಂತರೆ ದೂರದಲ್ಲಿ ಒಬ್ಬ ಅಜ್ಜ ದನ ಮೇಯಿಸುತ್ತಿದ್ದ.

ಜೋರಾಗಿ “ಅಜ್ಜಾ, ಶಾಲೆಗೆ ಯಾವ ದಾರಿ ಹಿಡಿಯಬೇಕು?” ಎಂದು ಕೂಗಿದೆ. ಅವನ ಕಡೆಯಿಂದ ಉತ್ತರವಿಲ್ಲ. ಸ್ವಲ್ಪ ಹತ್ತಿರ ಹೋಗಿ ಮತ್ತೆ ನನ್ನ ಪ್ರಶ್ನೆಯನ್ನು ತುಸು ತುಂಡು ಮಾಡಿ “ಅಜ್ಜಾ, ಶಾಲೆಗೆ ಯಾವ ದಾರಿ” ಎಂದು ಕೂಗಿದೆ. ಮಾತಿಲ್ಲ. ಮತ್ತೆ ಹತ್ತು ಹೆಜ್ಜೆ ಹತ್ತಿರ ನಡೆದು “ಅಜ್ಜಾ, ಶಾಲೆ?” ಎಂದು ಕಿರುಚಿಕೊಂಡೆ. ಅವನು ತಿರುಗಲೇ ಇಲ್ಲ. ನನಗೂ ಸುಸ್ತಾಯಿತು. ಇನ್ನೂ ಸ್ವಲ್ಪ ಹತ್ತಿರ ಹೋಗಿ “ಅಜ್ಜಾ?” ಎಂದರೂ ಉತ್ತರವಿಲ್ಲ. ಒಂದೇ ಕಡೆ ಗರ ಬಡಿದಂತೆ ಕುಳಿತಿದ್ದ. ನನಗೆ ಭಯವಾಯಿತು. ಏನಾದರು ಅವನ ಪ್ರಾಣ ಪಕ್ಷಿ ಹಾರಿ ಹೋಗಿದೆಯೇ ಎಂದು ತಿಳಿಯಲು ಹತ್ತಿರ ಹೋಗಿ ಬೆನ್ನು ಸವರಿದೆ. ಸರಕ್ಕನೆ ಹಿಂದೆ ತಿರುಗಿ, ನನ್ನನ್ನು ಗುರಾಯಿಸಿ “ಏನ್ರೀ” ಎಂದ.

ಅವನು ತಿರುಗಿದ ವೇಗಕ್ಕೆ ನಾನೇ ಬೆಚ್ಚಿ ಬಿದ್ದು ಎರಡು ಅಡಿ ಹಿಂದಕ್ಕೆ ಜಿಗಿದು “ಅಜ್ಜಾ. ಎಷ್ಟು ಹೊತ್ತಿನಿಂದ ಕೂಗುತ್ತಾ ಇದೀನಿ. ಮಾತೇ ಇಲ್ಲ. ಏನು ಕನಸು ಕಾಣುತ್ತಿದ್ದೀರಾ?” ಎಂದರೆ ಅವನು “ಯಾವೂರ್ರೀ?” ಎಂದ. ಓಹೋ ನಾನು ಕೇಳಿದ ಪ್ರಶ್ನೆಗೂ ಅವನ ಉತ್ತರಕ್ಕೂ ತಾಳೆಯಾಗದಿದ್ದನ್ನು ನೋಡಿ ಏನೋ ಎಡವಟ್ಟು ಆಗಿದೆ ಎಂದು ಭಾವಿಸಿ, ಕಿವಿಗಳು ಕೇಳುವುದಿಲ್ಲವೋ? ಎಂದು ಸನ್ನೆ ಮಾಡಿ ಕೇಳಿದೆ. ಅವನು “ಕಿವಿ ಕೇಳೋಲ್ರೀ. ಸನ್ನೆ ಮಾಡಿ ಮಾತಾಡಿದ್ರಾ ಸ್ವಲ್ಪ ಅರ್ಥ ಆಗ್ತದಾ” ಎಂದ.

footprintಹೇಗಿದ್ದರೂ ಕಿವುಡು. “ಅಯ್ಯೋ ನಿನ್ನ ಮನೆ ಕಾಯೋಗ. ಕಿವಿ ಕೇಳದ ಮೇಲೆ ಮನೆಯಲ್ಲೇ ಕುಳಿತು ಸಾಯಬಾರ್ದಾ? ಹೊರಗೆ ಬಂದು ಯಾಕೆ ನಮ್ಮಂತಹ ಜನರ ಪ್ರಾಣ ಹಿಂಡ್ತೀಯ” ಎಂದು ಬೈದು ನನ್ನ ಕೋಪ ತೀರಿಸಿಕೊಂಡೆ. ಅದಕ್ಕೂ ಉತ್ತರವಿಲ್ಲ. ಸರಿ ನಾನೇ ಸುಧಾರಿಸಿಕೊಂಡು ಓದಿ ಬರೆಯುವಂತೆ ನಟನೆ ಮಾಡಿ ಶಾಲೆಗೆ ದಾರಿ ಕೇಳಿದೆ. “ಶಾಲೆಗಾ?” ಹಿಂಗ ಇದೇ ದಾರಿ ಹಿಡ್ಕೊಂಡ್ ಹೋಗ್ರಿ ಸಿಗ್ತದಾ” ಎಂದ. “ನಿನ್ ಮುಂಡಾ ಮೋಚಾ” ಎಂದು ಹೇಳಿ ಅವನಿಗೆ ಕೈಮುಗಿದು ಹೊರಟು ಶಾಲೆಯ ಆವರಣ ಸೇರಿದೆ.

ಬಹುತೇಕ ಮೊರಾರ್ಜಿ ಶಾಲೆಗಳು ಊರಿನ ಹೊರಗೆ ಅದ್ಭುತ ವಾತಾವರಣದಲ್ಲಿ, ಸುಸಜ್ಜಿತ ಕಟ್ಟಡಗಳೊಂದಿಗೆ ಇರುತ್ತವೆ. ಆವರಣದಲ್ಲಿ ಈಗಾಗಲೇ ಮುನ್ನೂರು ಸಸಿಗಳನ್ನು ನೆಟ್ಟು, ಆಳೆತ್ತರಕ್ಕೆ ಬೆಳೆಸಿದ್ದರು. ಕೆಲವು ಹಳೇ ಮರಗಳೂ ಇದ್ದವು. ಶಾಲೆಯ ಮುಖ್ಯಸ್ಥರು ಇಲ್ಲದ ಕಾರಣ ಸಹ ಶಿಕ್ಷಕರಿಗೆ ಹೇಳಿ ವಿನಂತಿಸಿಕೊಂಡೆ. ತಕ್ಷಣ ಸ್ಪಂದಿಸಿ ಊಟದ ಸಮಯವಾದರೂ ನನ್ನ ಉಪನ್ಯಾಸಕ್ಕೆ ಅವಕಾಶ ಮಾಡಿಕೊಟ್ಟು ವಿದ್ಯಾರ್ಥಿಗಳನ್ನು ಸೇರಿಸಿದರು. ಮಕ್ಕಳೂ ಅಷ್ಟೇ ಶಿಸ್ತಿನಿಂದ ಕೇಳಿ ತಿಳಿದುಕೊಂಡು, ನಲಿದು ಪ್ರತಿಜ್ಞೆ  ಪಡೆದರು.

ಮಾತಿನ ನಂತರ ಮಕ್ಕಳ ಜೊತೆ ಕುಳಿತು ರಾಗಿ ಮುದ್ದೆ ಊಟ ಮಾಡಿದೆ. ಮುಂದಿನ ಶಾಲೆಗೆ ಹೊರಡುವ ಆತುರದಲ್ಲಿ ಮಕ್ಕಳಿಗೆ ನನ್ನ ದೂರವಾಣಿ ಸಂಖ್ಯೆ ಮತ್ತು ವಿಳಾಸ ಕೊಡಲು ಮರೆತೇ ಹೋಯಿತು. ಮಳೆ ಶುರುವಾಗಿದ್ದರಿಂದ ಶಿಕ್ಷಕರೇ ನನ್ನನ್ನು ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಸರ್ಕಾರಿ ಶಾಲೆಗೆ ಬಿಟ್ಟರು. ಮಾಕನೂರಿನೊಳಗಿರುವ ಶ್ರೀ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲೂ ಅದ್ಬುತವಾಗಿ ಸ್ಪಂದಿಸಿ ನಾನು ಹೋದ ಹತ್ತೇ ನಿಮಿಷದಲ್ಲಿ ಧ್ವನಿವರ್ಧಕವನ್ನು ಅಳವಡಿಸಿ ಆಸ್ಪದ ಮಾಡಿಕೊಟ್ಟರು. ಬೇರೆ ಶಾಲೆಗಳಿಗೆ ಹೋಲಿಸಿದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿನ ಅಶಿಸ್ತು ಎದ್ದು ಕಾಣುತ್ತಿತ್ತು. ಹಿಂದೆ ಕುಳಿತಿದ್ದ ಹುಡುಗರಂತೂ ಧಾಂದಲೆ ಮಾಡಿಬಿಟ್ಟರು. ತುಂಗಭದ್ರೆಯ ನೀರು ಕುಡಿದ ಪೊಗರಿರಬೇಕು.

ಶಾಲೆಯ ಕೊನೆಯ ಗಂಟೆ ಬಾರಿಸಲು ಇನ್ನೂ ಸಮಯವಿದ್ದರಿಂದ ಮಾಕನೂರಿನಿಂದ ಹೊರಟು ವೇಗವಾಗಿ ನಡೆದುಕೊಂಡು ಹೆದ್ದಾರಿ ಹಿಡಿದು ಬಲಕ್ಕೆ ತಿರುಗಿ ಎರಡು ಮೈಲು ನಡೆದು ಕೋಡಿಹಾಲ್ ಹೊಸಪೇಟೆಯ ಶ್ರೀ ದುರ್ಗಾಮಾತಾ ಪ್ರೌಢಶಾಲೆಯನ್ನು ತಲುಪಿದೆ. ಆದರೆ ಮೂರೂ ತರಗತಿಗಳ ವಿದ್ಯಾರ್ಥಿಗಳನ್ನೂ ಆಟವಾಡಲು ಹೊರಗೆ ಶಾಲೆಯ ಆವರಣದಲ್ಲಿ ಬಿಟ್ಟಿದ್ದರು. ಹಾಗಾಗಿ ನನ್ನ ಉಪನ್ಯಾಸಕ್ಕೆ ಸಮಯ ಕೊಡದೆ ನಾಳೆ ಅಂದರೆ ಶನಿವಾರ ಬೆಳೆಗ್ಗೆ ಬರುವಂತೆ ಹೇಳಿದರು. ವಾಸ್ತವ್ಯದ ವ್ಯವಸ್ಥೆಯ ಬಗ್ಗೆ ವಿಚಾರಿಸಿದಾಗ ಹತ್ತಿರದಲ್ಲೆ ಸಿಗುವ ದುರ್ಗಾದೇವಿ ದೇವಸ್ಥಾನದಲ್ಲಿ ಸಂಪರ್ಕಿಸುವಂತೆ ಹೇಳಿ ಕಳಿಸಿಕೊಟ್ಟರು.

ಕೊಡಿಹಲ್ ಹೊಸಪೇಟೆಯನ್ನು ಕುಮಾರಪಟ್ಟಣಂ ಎಂದೂ ಕರೆಯುತ್ತಾರೆ. ಇಲ್ಲಿ ಆದಿತ್ಯಾ ಬಿರ್ಲಾ ಸಂಸ್ಥೆಯ ಎರಡು ಬೃಹತ್ತಾದ ಕಾರ್ಖಾನೆಗಳಿವೆ. ಕಾರ್ಖಾನೆಯ ಸಿಬ್ಬಂದಿ ವರ್ಗಕ್ಕೆ ಅನುಕೂಲವಾಗಲೆಂದು ವಸತಿ ಪ್ರದೇಶ, ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಹೊಸದಾಗಿ ಬೆಳೆದ ಊರಿಗೆ, ತಮ್ಮ ಕಾರ್ಖಾನೆಯ ಮುಖ್ಯಸ್ಥರಾದ ಕುಮಾರ ಮಂಗಳಂ ಬಿರ್ಲಾ ಅವರಿಗೆ ಗೌರವಪೂರ್ವಕವಾಗಿ ಊರಿಗೆ ಅವರ ಹೆಸರನ್ನೇ ಅಂದರೆ ಕುಮಾರಪಟ್ಟಣಂ ಎಂಬ ಹೆಸರಿಟ್ಟಿದ್ದಾರೆ. ಕಾರ್ಖಾನೆಗಳಿಂದ ಸಾವಿರಾರು ಉದ್ಯೋಗಗಳು ಸೃಷ್ಠಿಯಾಗಿ ಹಳ್ಳಿಯ ವಾತಾವರಣ ಮಾಯವಾಗಿ ಪಟ್ಟಣ ವಾತಾವರಣ ತುಂಬಿಕೊಂಡಿದೆ. ಇದೇ ಅಖಂಡ ಧಾರವಾಡದ ಹಾಗೂ ಈಗಿನ ಹಾವೇರಿಯ ಗಡಿ.

ಅಖಂಡ ಧಾರವಾಡದಿಂದ ಜಾರಿ,

ಮೂಡಿ ಬಂದ ಊರೇ ಹಾವೇರಿ.

ಬ್ಯಾಡಗಿಯ ಮೆಣಸಿನ ಖಾರ,

ರಾಣೇಬೆನ್ನೂರಿನ ಹತ್ತಿಯ ಹಾರ.

ರುಂಡವೇ ವರದಾ ನದಿಯೂ,

ಪಾದವೇ ಭದ್ರಾ ಹರಿವೂ.

ಪ್ರತಿ ಹಟ್ಟಿಯ ಅನ್ನ ಉಂಡು,

ಕೊಟ್ಟಳು ಎನಗೆ ಸ್ನೇಹಿತರ ದಂಡು.

ಏರಿತು ಎನ್ನ ಮೇಲಿನ ಋಣವೂ,

ನೆನಪಿನ ಮಾಲೆ ಈ ಪ್ರತಿ ಕ್ಷಣವೂ.

‍ಲೇಖಕರು admin

6 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading