ಈ ಆರಿದ್ರಾ ಮಳೆ ಹತ್ತಾರು ನೆನಪು ಹುಯ್ಯುತ್ತಿದೆ..

 

nempe devaraj

ನೆಂಪೆ ದೇವರಾಜ್, ತೀರ್ಥಹಳ್ಳಿ

ಈ ಆರಿದ್ರಾ ಮಳೆ ಹತ್ತಾರು ನೆನಪುಗಳನ್ನು ತರುತ್ತಲೇ ಹುಯ್ಯುತ್ತಿದೆ. ಶೀತ ಗಾಳಿ ಬೀಸಿದಂತೆಲ್ಲ ಇವತ್ತೂ ಮಳೆ ಜಾಸ್ತಿ ಎಂದು ನನ್ನೂರಿನವರು ಭವಿಷ್ಯ ನುಡಿದ ಸ್ವಲ್ಪ ಹೊತ್ತಲ್ಲೇ ಧೋ… ಎಂದು ಸುರಿದು, ಮತ್ತೆ ಮೆಲ್ಲಗೇ ನಿಲ್ಲುತ್ತಾ.. ಮತ್ತೆ ಶುರು ಹಚ್ಚುತ್ತಾ ಹೋಗುತ್ತಿದೆ.

rain1ಗದ್ದೆಯ ಹೂಟಿ ಮಾಡಿ  ಎಳೆನೀರಿನಷ್ಟೇ ಶುಭ್ರತೆಯೊಂದಿಗೆ ನಿನಾದಿಸುತ್ತಾ ಹರಿಯುತ್ತಿದ್ದ ಹಳ್ಳದಲ್ಲಿ ಎತ್ತುಗಳ ಮೈತೊಳೆದು, ಬಯಲಲ್ಲಿ ಚಿಗುರೊಡೆಯುತ್ತಿದ್ದ ಹುಲ್ಲಿನಲ್ಲಿ ಸ್ವಲ್ಪ ಹೊತ್ತು ಮೇಯಿಸಿ ಒದ್ದೆ ಮುದ್ದೆಯಲ್ಲಿ ಹಾಕಿಕೊಂಡ ಬಟ್ಟೆಯಿಂದ ನೀರಿಳಿಸುತ್ತಾ ಮನೆಗೆ ನಡುಗುತ್ತಾ ಬರುವುದನ್ನು ನೆನಪು ಮಾಡಿಕೊಂಡರೆ, ಈಗಿನ ನಮ್ಮ ಸುಖದ ಬಗ್ಗೆ ಜಿಗುಪ್ಸೆ ಮೂಡುತ್ತದೆ…

ಅಗೇಡಿ ಹೂಟಿ ಮುಗಿಸಿ ಮನೆಗೆ ಬಂದು ಒಲೆಯ ಹತ್ತಿರ ಹೋದಾಗ ಬೆಂಕಿ ಇಲ್ಲದ ಒಲೆ ನೋಡಿದರೆ ನಡುಗುವ ಚಳಿಯಲ್ಲೂ ಮೈ ರೋಮಗಳು ಸಿಟ್ಟಿನಿಂದ ನೆಟ್ಟಗಾಗದೆ ಉಳಿಯುವುದಿಲ್ಲ. ಹೆಂಗಸರು ಅಡುಗೆ ಮಾಡಲು ಸಾಧ್ಯವಾಗದಂತೆ, ಒಲೆಯ ಬೆಂಕಿಗೆ ಮೈ ಒಡ್ಡುತ್ತಾನೆ. ಅಂಗಾಲು ಅಂಗೈಗಳು ಸುಟ್ಟು ಕರಕಲಾಗುವಂತೆ ಬಿಸಿ ಬಿಸಿ ಮಾಡಿಕೊಂಡು ಸ್ವರ್ಗಸುಖದಲ್ಲಿ ಆಹಾ.. ಆಹಾ…  ಎಂದು ಹೇಳುತ್ತಾ ಪಕ್ಕದಲ್ಲೇ ಬೆಂಕಿಗೆ ಹಾರಲು ಸತಿಯಂತೆ ತಯಾರಾಗಿರುವ  ಕಟಿ ಕಟಿಯಾದ ಅಡಿಕೆ ಹಾಳೆ ಹೊರೆಯ ಒಂದೊಂದನ್ನೇ ಒಲೆಗೆ ಹಾಕುತ್ತಾನೆ…

ಬೆಂಕಿ ಜ್ವಾಜಲ್ಯಮಾನವಾಗಿ  ನೀಲ ಚಿತ್ರ ವಿಚಿತ್ರಾಕಾರದೊಂದಿಗೆ ಮೇಲೆದ್ದಂತೆ ಇಡೀ ದಿನ ಒದ್ದೆಯಾದ ಕೋಳಿಯಂತೆ ಮನೆಗೆ ಬಂದ ನನ್ನಪ್ಪನಂತವರು ಮದಿರೆ ಕುಡಿದವರಂತೆ ಸೆಟೆದುಕೊಂಡು ಮತ್ತೆ ಮಾರನೇ ದಿನಕ್ಕೆ ತಯಾರಾಗುವ ರೀತಿಯೇ ಅನನ್ಯವಾದುದು.

ದೊಡ್ಡ ಒಲೆ, ಒಲೆಯ ಮೇಲೆ ಅನ್ನದ ಗಡಿಗೆ, ಒಲೆಯ ದಂಡೆಯ ಅಕ್ಕ ಪಕ್ಕ ಹೆಂಗಸರ ಸಿಟ್ಟಿನ ಹತ್ತಾರು ಪೆಟ್ಟುಗಳಿಂದ ಮೂಲ ಆಕಾರವನ್ನು ಕಳೆದುಕೊಂಡ ಅಲ್ಯೂಮಿನಿಯಮ್ ಚರಿಗೆ. ಒಂದೆರಡು ಮಣ್ಣಿನ ಗಡುಗೆಯಲ್ಲಿ ಹುದುಗಿಸಿಕೊಂಡ ಹುರುಳಿ ಸಾರು ಮತ್ತು ಕೆಸುವಿನ ಸೊಪ್ಪಿನ ಪಲ್ಯ. ಈ ಹುರುಳಿ ಸಾರು ಮತ್ತು ಕೆಸುವಿನ ಸೊಪ್ಪಿನ ಪಲ್ಯಗಳು ಮಳೆಗಾಲದ ಭೀಕರ ತಂಡಿಯನ್ನು ಸಂಪೂರ್ಣ ಇಲ್ಲವಾಗಿಸುವುದರಿಂದ ಮಳೆಗಾಲ ಮುಗಿವರೆಗೆ ತಮ್ಮ ಖಾಯಂ ಸದಸ್ಯತ್ವಕ್ಕೆ ಧಕ್ಕೆ ತಂದುಕೊಳ್ಳುವುದು ಸಾಧ್ಯವಿಲ್ಲದ ಮಾತು.

ಒಮ್ಮೆ ಮಾಡಿದ ಹುರುಳಿ ಕಟ್ಟು ಮಾಡುವ ಮಣ್ಣಿನ ಗಡುಗೆ ಹೆಂಗಸರಿಂದ ತಿಕ್ಕಿಸಿಕೊಳ್ಳುವುದೇ ಅಪರೂಪ. ಮತ್ತೆ ಈ ಗಡುಗೆ ಹಳೆಯದರ ಜೊತೆ ಹೊಸತನ್ನು ಸೇರಿಸುತ್ತಾ ಹೋಗುವುದು ನಿರಂತರವಾಗಿ ನಡೆದುಕೊಂಡು ಬಂದ ಪದ್ದತಿ. ಬೆಂದೂ ಬೆಂದೂ ಕಪ್ಪಾಗಿರುವ ಹುರುಳಿ ಸಾರಿನೊಳಗೆ ಕತ್ತಲೆಯಲ್ಲಿ ಬಿದ್ದ ಜಿರಲೆ, ಜೇಡ, ನೊಣಗಳು ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆಗಳಾಗಿ ಹೊಟ್ಟೆ ಸೇರಿಯೂ ನಮ್ಮ ಜನರನ್ನು ಬದುಕಿಸಿಕೊಂಡು ಹೋಗಿದ್ದೇ ವಿಸ್ಮಯಕಾರಕ ವಿಷಯ.

ಕುಗುರುತ್ತಾ ಕಾಲ ನೂಕುತ್ತಿದ್ದ ಚಿಮಣಿ ಬೆಳಕಿಗೆ ಸವಾಲೊಡ್ಡುವಂತೆ ಒಲೆಯೊಳಗೆ ದೊಡ್ಡ ಕುಂಟೆ. ಅದಕ್ಕೆ ಬೆಂಬಲಾರ್ಥವಾಗಿ ತಾಗಿಕೊಂಡ ಅಡಿಕೆ ಹಾಳೆ. ಸಣ್ಣ ಸಣ್ಣ  ಜಿಗ್ಗುಗಳು ಬೆಂಕಿಯೊಂದಿಗೆ ಸೆಣಸಲಾರದೆ ಅಸ್ತಂಗತವಾಗುತ್ತಾ ಹೋಗುವ ರೀತಿ, ಒಲೆಯ ಮೇಲೆ ಇಟ್ಟ ದಬ್ಬೆಯ ಮೇಲೆ ನೇತು ಬಿದ್ದು ಒಣಗುತ್ತಿರುವ ಸೂಡುಗಂಬಳಿಯಿಂದ ತೊಟ್ಟಿಕ್ಕುವ ಒಂದೊಂದೇ ಹನಿ ನೀರು ನೆನಪಿಸಿಕೊಂಡರೆ, ಇದೇನು ಅಡುಗೆ ಮನೆಯೋ ಅಥವಾ ಚಿಕ್ಕ ಕಾರ್ಖಾನೆಯೋ ಎಂದೆನಿಸದಿರಲು ಸಾಧ್ಯವಿಲ್ಲ.

fishಒಮ್ಮೆ ನನ್ನ ಅಪ್ಪ ಗದ್ದೆಯ ಹೂಟಿ ಮುಗಿಸಿ ಮನೆಗೆ ಬಂದಾಗ ತಲೆಗೆ ಹಾಕುವ ಹಾಳೆಯ ಟೋಪಿ (ಮಂಡಾಳೆ)ಯ ತುಂಬಾ ಹೆಗ್ಗಾನು ಅಣಬೆಗಳನ್ನು ತಂದು ನಮಗೆಲ್ಲ ದಂಗುಬಡಿಸುತ್ತಾನೆ. ಏಕೆಂದರೆ ಹೂಟಿ ಮಾಡಲೋ, ಬದ ಕಡಿಯಲೋ ಹೋದಾಗ ಏಡಿ ಮೀನುಗಳನ್ನು ಕಂಡರೂ ಅವುಗಳನ್ನು ಹಿಡಿದು ತರುವ ಯೋಚನೆಯಲ್ಲಿ ಈತ ಇದ್ದದ್ದು  ಬಹು ಅಪರೂಪ. ಹೆಗ್ಗಾನು ಅಣಬೆಯಂತಹ ಅಪರೂಪದ, ಗುಪ್ತ ಗಾಮಿನಿಯಾಗೇ ಉಳಿವ, ರುಚಿಕಟ್ಟಿಗೆ ನಮ್ಮ ಪ್ರಾಂತ್ಯದಲ್ಲೇ ಪ್ರಸಿದ್ದಿ ಪಡೆದ ಈ ಅಣಬೆ ನನ್ನಪ್ಪನಂತಹ ಒಡ್ರ ಬಡ್ರಾ ಮನುಷ್ಯನಿಗೆ ಸಿಕ್ಕಿದ್ದೇ ನನಗೆ ಹಾಗೂ ನನ್ನ ತಂಗಿಗೆ ಆಶ್ಚರ್ಯ ಉಂಟು ಮಾಡಿದ ಸಂಗತಿ.

ಹುರುಳಿ ಕಟ್ಟು ಮತ್ತು ಕೆಸುವಿನ ಸೊಪ್ಪು, ಗದ್ದೆ ಸೌತೆಕಾಯಿ ಸಾರು ತಿಂದೂ ತಿಂದೂ ಬೇಸತ್ತಿದ್ದ ನಮಗೆ ಹೆಗ್ಗಾನು ಅಣಬೆಯ ಸಾರಿನ ಊಟ ಮಾಡುವ ಕಲ್ಪನೆಯೇ ಚೇತೋಹಾರಿಗೊಳಿಸಿತ್ತು.  ಹೆಗ್ಗಾನು ಅಣಬೆಯ ಸಾರು ಕೊತ ಕೊತನೆ ಕುದಿಯುತ್ತಿದೆ. ಇಡೀ ಮನೆಗೆ ತನ್ನಲ್ಲಿ ಅಡಗಿಸಿಕೊಂಡಿದ್ದ ಸವಾಸನೆಯನ್ನೆಲ್ಲ ಬೀರಿ ಮಸಾಲೆಯೊಂದಿಗೆ ನಮ್ಮ ಹಸಿವನ್ನು ನೂರ್ಮಡಿಗೊಳಿಸುತ್ತಿದೆ. ಹೊರಗೆ ಆರಿದ್ರಾ ಮಳೆ ಆರ್ಭಟಿಸುತ್ತಿದೆ.

ಒಂದಾದ ಮೇಲೊಂದರಂತೆ ಹಾಳೆಗಳು ಬೆಂಕಿಗೆ ಬೀಳುತ್ತಿವೆ. ಅಪ್ಪನ ಅಂಗಾಲು ಅಂಗೈ ತಲೆ ಹೊಟ್ಟೆಗಳೂ ಸೇರಿದಂತೆ ಸರ್ವಾಂಗಗಳೂ ಶಾಖಕ್ಕೆ ಒಡ್ಡಿಕೊಂಡು ಸುಖ ಅನುಭವಿಸುತ್ತಿವೆ. ಚುರ್ಚೆ ಮರದ ಬೃಹದಾಕಾರದ ಬೇರಿನಿಂದ ಮಾಡಿದ್ದ ಮರಿಗೆಯಲ್ಲಿ ಅಕ್ಕಿಯ ಬೆಂದ ಹಿಟ್ಟನ್ನು ಹಾಕಿಕೊಂಡು ಅಮ್ಮ ರೊಟ್ಟಿ ಮಾಡಲು ಕೈಯಿಂದ ನುರಿಯುತ್ತಿದ್ದಾಳೆ. ಅಪರೂಪಕ್ಕೆ ಮನೆ ಔಂತ್ಲವೊಂದಕ್ಕೆ ರೆಡಿಯಾಗುತ್ತಿದೆ. ಒಲೆಯ ಬೆಂಕಿ ಮೇಲೆ ಹರಡಿದ್ದ, ನೆಂದು ಮುದ್ದೆಯಾಗಿದ್ದ ಕಂಬಳಿಯನ್ನು ಗರಿಗುಟ್ಟಿಸುತ್ತಿದೆ.

ಆದರೂ ಅಪ್ಪನ ಚಳಿಗೆ ಬೆಂಕಿಯೇ ಸುಸ್ತು ಹೊಡೆದಂತೆ ಕುಗುರ ಹತ್ತಿತು. ಒಲೆಯ ಪಕ್ಕದಲ್ಲಿದ್ದ ಕಟ್ಟಿಗೆಯೊಂದನ್ನು ತೆಗೆದು ಒಲೆಗೆ ಕಚ್ಚುವ ತವಕಕ್ಕೆ ಯಾರೆಷ್ಟೇ ಕಡಿವಾಣ ಹಾಕಿದರೂ ಕೇಳದೆ ಕಟ್ಟಿಗೆ ತುರುಕಿದ್ದು ಮಾತ್ರವಲ್ಲದೆ ಮೇಲೆ ಗರಿಗಟ್ಟುತ್ತಿದ್ದ ಕಂಬಳಿಯನ್ನು ಮಗುಚಿ ಹರಡಲು ಯತ್ನಿಸಿದ. ಕಂಬಳಿಯ ಮೇಲೆ ಇದ್ದ ಸಿಕ್ಕದಲ್ಲಿ ಔಂಕಿಯನ್ನು ಒಣ ಹಾಕಿದ್ದು ಅಪ್ಪನ ಕನಸು ಮನಸ್ಸಿನ ಯೋಚನೆಗೂ ಬಂದಿರಲಿಲ್ಲ. (ನಮ್ಮ ಕಡೆ ಬತ್ತವನ್ನು ಮೊಳಕೆ ಬರಿಸಿ ಹೆಂಡ ಮಾಡುವುದು ಮಾಮೂಲಿ. ಮೊಳಕೆ ಬಂದ ಬತ್ತವನ್ನು ಸಂಪೂರ್ಣ ಒಣಗಿಸಲು ಒಲೆಯ ಮೇಲೆ ಹಗ್ಗದಿಂದ ಸಿಕ್ಕವನ್ನು ಮಾಡಿ ಸಣ್ಣೆಯಲ್ಲಿ ಹಾಕಿ ಹರಡಿರುತ್ತಾರೆ.

fireಇದನ್ನು ಹೆಂಡವೆಂದೂ, ಅಕ್ಕಿ ಭೋಜನವೆಂದೂ, ಇತ್ತೀಚೆಗೆ ಅಕ್ಕಿ ವೈನ್ ಎಂದೂ ಹೇಳುತ್ತಾರೆ. ಈ ರೀತಿ ಒಣಗಿದ ಮೊಳಕೆ ಬಂದ ಭತ್ತವನ್ನು ಕುಟ್ಟಿ ಪುಡಿ ಮಾಡಿ ಬೇಯಿಸಿ ನಿರ್ದಿಷ್ಟ ಗಿಡ ಮೂಲಿಕೆಗಳನ್ನು ಹಾಕಿ ಒಂದಷ್ಟು ದಿನ ಮಡಕೆಯಲ್ಲಿಟ್ಟು ನಂತರ ಬಟ್ಟೆಯಲ್ಲಿ ಸೋಸಿ ಆ ರಸವನ್ನು ಕುಡಿಯುತ್ತಾರೆ. ಇದನ್ನು ಕುಡಿದರೆ ಸಣ್ಣ ಪ್ರಮಾಣದ ಮತ್ತಿನಲ್ಲಿ ಓಲಾಡುತ್ತಾ ಇರಬಹುದು. ಇತ್ತೀಚೆಗೆ ಇದೆಲ್ಲ ಮಾಯವಾದರೂ ಶೃಂಗೇರಿ ಸೀಮೆಯವರು ಇನ್ನೂ ಉಳಿಸಿಕೊಂಡಿದ್ದಾರೆ.) ಯಾವಾಗ ಅಪ್ಪ ಕಂಬಳಿ ಒಣಗಿಸುತ್ತಿದ್ದ ಬಡಿಗೆಯನ್ನು ಮುಟ್ಟಿದನೋ ಮೇಲೆ ಇದ್ದ ಸಿಕ್ಕ ಮಗುಚಿ ಇಡೀ ಸಣ್ಣೆ ಕೆಳಗೆ ಬಿತ್ತು. ಕೆಳಗೆ ಕೊತನೆ ಕುದ್ದು ನಮ್ಮ ಹಸಿವನ್ನು ನೂರ್ಮಡಿಗೊಳಿಸುತ್ತಾ ಇದ್ದ, ಹೆಗ್ಗಾನು ಅಣಬೆಯ ಪಲ್ಯ ಔಂಕಿಮಯವಾಯಿತು.

ಹೆಗ್ಗಾನು ಅಣಬೆ ಪಲ್ಯದಿಂದ ಭತ್ತವನ್ನು ಬೇರ್ಪಡಿಕೊಂಡು ತಿನ್ನುವುದೆಂದರೆ ವಿಸ್ಕಿಯಲ್ಲಿ ಬಿದ್ದ  ಗಾಜಿನ ಚೂರುಗಳನ್ನು ಬೇರ್ಪಡಿಸುವಷ್ಟು ತ್ರಾಸದಾಯಕ ಕೆಲಸ. ಆದ್ರೆ ಮಳೆಯಲ್ಲಿ ಸಿಕ್ಕ ಹೆಗ್ಗಾನು ಅಣಬೆ ನನ್ನಪ್ಪನ ಚಳಿ ಕಾಯಿಸುವಿಕೆಯ ದೆಸೆಯಿಂದ ಇಡೀ ಮನೆ ನಿರಾಸೆಯ ಮಡುವಲ್ಲಿ ಮುಳುಗಬೇಕಾಯಿತು. ಆ ದಿನ ಕೆಸುವಿನ ಸೊಪ್ಪಿನ ಪಲ್ಯದೊಂದಗೇ ರೊಟ್ಟಿ ಕಾಲಿಯಾಗಬೇಕಾಯಿತು. ಆದರೆ ಅಪ್ಪ ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಔಂಕಿ ಮಿಶ್ರಿತ ಹೆಗ್ಗಾನು ಅಣಬೆ ಪಲ್ಲೆಯನ್ನೇ ರೊಟ್ಟಿ ಜೊತೆ ತಿಂದು ಜೀರ್ಣಿಸಿಕೊಂಡಿದ್ದು ನೆನಪಿನಿಂದ ಮರೆಯಾಗದ ಸಂಗತಿ.

ಮಳೆಗಾಲದಲ್ಲಿ  ಬದ ಕಡಿದೋ ಗದ್ದೆ ಹೂಟಿ ಮಾಡಿಯೋ,  ಮನೆ ಸೇರುವವರು ಒಂದೋ ಎರಡೋ ಹಲಸಿನ ಕಾಯಿಗಳನ್ನು ಒಬ್ಬರೇ ದ್ವಂಸ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿರುವಾಗ ಮೊಳಕೆ ಬತ್ತ ಮಿಶ್ರಿತ ಹೆಗ್ಗಾನು ಅಣಬೆ ತಿಂದು ಜೀರ್ಣಿಸಿಕೊಳ್ಳಲಾರದಷ್ಟು ಕೃಶನಂತೂ ನನ್ನ ಅಪ್ಪನಲ್ಲವೆಂದೇ ಹೇಳಬೇಕು. ತಪ್ಪು ಮಾಡಿದ್ದು ನನ್ನ ಅಪ್ಪನಾದರೂ ಬಡಿಗೆ ಏಟುಗಳು ಹಾಗೂ ಸೊಂಟದ ಕೆಳಗಿನ ಬೈಗುಳಗಳು ನನ್ನ ಅಮ್ಮನ ಮೇಲೆ ಪ್ರಯೋಗಿಸಲ್ಪಡುವುದು ಮಾಮೂಲಿ ವಿಷಯವಾಗಿದೆ. ಆದ್ದರಿಂದ ನಾವ್ಯಾರು ಇದೊಂದು ಮಹದಪರಾಧವೆಂದು ಪರಿಗಣಿಸಿದ್ದು ತೀರಾ ಕಡಿಮೆ. ಬೈದ ಬೈಗುಳಗಳು ಹೊರಗೆ ಕೇಳಸಲು ಸಾಧ್ಯವಿರಲಿಲ್ಲೇಕೆಂದರೆ ಆರಿದ್ರಾ ಮಳೆಯ ಆರ್ಭಟ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

‍ಲೇಖಕರು admin

July 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: