ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರ್ಕಾರ ಕಣ್ಬಿಡಲಿ – ದೇವನೂರು ಬರೆಯುತ್ತಾರೆ

ವಿಜಯ ಕರ್ನಾಟಕದಲ್ಲಿ ಹಿರಿಯ ಲೇಖಕ ದೇವನೂರು ಮಹಾದೇವ ಅವರು ಬರೆದ ಲೇಖನವನ್ನು ಅವರ ಒಪ್ಪಿಗೆಯ ಮೇರೆಗೆ ರೂಪ ಹಾಸನ್ ಅವರು ಅವಧಿಗೆ ಕಳುಹಿಸಿದ್ದರು.  ದೇವನೂರು ಅವರಿಗೆ ವ೦ದನೆಗಳೊ೦ದಿಗೆ ಈ ಲೇಖನ ಅವಧಿ ಓದುಗರಿಗಾಗಿ.

– ದೇವನೂರ ಮಹಾದೇವ

ನಡೆ ಮತ್ತು ನುಡಿಗೆ ತಾಳಮೇಳವಿಲ್ಲದೆ ಈ ಸರ್ಕಾರದ ಮರ್ಮವೇ ತಿಳಿಯದಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ದೇಶದ ಎಲ್ಲಾ ರಾಜ್ಯಗಳು ಅನುಷ್ಠಾನಗೊಳಿಸಿ ಎಷ್ಟೋ ಕಾಲವಾದ ಮೇಲೆ ಈ ನಮ್ಮ ಸರ್ಕಾರ ತಾನು ಹಿಂದಾಗಿ ಒತ್ತಾಯಕ್ಕೆ ಸಿಕ್ಕಿ ಅಸಹಾಯಕವಾಗಿಯೇನೋ ಎಂಬಂತೆ ಈಗಷ್ಟೇ ಜಾರಿಗೆ ತಂದಿತು. ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದ ಮೇಲಾದರೂ ಸರ್ಕಾರಕ್ಕೆ ಕಿಂಚಿತ್ ಹೃತ್ಪೂರ್ವಕತೆ ಇದ್ದಿದ್ದರೆ ಒಂದು ಲಕ್ಷಕ್ಕೂ ಮೇಲ್ಪಟ್ಟು ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಕಣ್ಣಿಗೆ ಬೀಳಬೇಕಿತ್ತು. ತನ್ನ ಕೆಂಪುದೀಪದ ಕಾರು ಓಡಾಡುವ ರಾಜಧಾನಿಯ ಬೀದಿಗಳಲ್ಲೆ ಬೀದಿಗೆ ಬಿದ್ದಿರುವ ಹತ್ತು ವರ್ಷ ಒಳಗಿನ ನಲವತ್ತು ಸಾವಿರಕ್ಕೂ ಹೆಚ್ಚಾದ ಈ ಮಕ್ಕಳು, ಚಿಂದಿ ಆಯುತ್ತ ಬಿಕ್ಷಾಟನೆಯಲ್ಲಿ ತೆವಳುತ್ತಿರುವ ಈ ಮಕ್ಕಳೂ ಸಹ ಕಾಣಿಸಬೇಕಿತ್ತು. ಇದ್ಯಾವುದೂ ಸರ್ಕಾರಕ್ಕೆ ಕಂಡಿಲ್ಲ. ಅಥವಾ ಸರ್ಕಾರ ಕಣ್ಮುಚ್ಚಿಕೊಂಡಿದೆ. ಸರ್ಕಾರ ಕಣ್ಣು ತೆರೆದಿದ್ದರೆ ಇದು ಕಾಣುತ್ತಿತ್ತು. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದಿದ್ದರೆ ಈ ಮಕ್ಕಳಿಗೂ ಶಿಕ್ಷಣ ಕೊಡುವುದು ತನ್ನ ಬಾಧ್ಯ್ಯತೆ ಎಂದು ಸರ್ಕಾರ ಪರಿಗಣಿಸುತ್ತಿತ್ತು. ಆದರೆ ನಮ್ಮ ಸರ್ಕಾರ ಕಣ್ಣುಚ್ಚಿದೆ. ಅದಕ್ಕೆ ಇದಾವುದೂ ಕಾಣುತ್ತಿಲ್ಲ. ಕಣ್ಮುಚ್ಚಿದ ಸರ್ಕಾರ ಸುಮ್ಮನಾದರೂ ಕುಳಿತಿಲ್ಲ. ಕುರುಡು ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿದೆ. ಅರಿವಾಗದೋಪಾದಿಯಲ್ಲಿ ಸಾವು ಬರುವಂತೆ ಶಾಲೆಗಳನ್ನು ಮುಚ್ಚುತ್ತಾ ಬರುತ್ತಿದ್ದ ಸರ್ಕಾರ ಈಗ ಅಪಘಾತ ಮಾಡಿದಂತೆ ಮೂರು ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿ ಕೊಂದುಹಾಕಲು ಹೊರಟಿದೆ ! ಇದೇ ಅರ್ಥವಾಗದ ಪ್ರಕ್ರಿಯೆ-ಒಂದು ಕಡೆ ಲಕ್ಷಾಂತರ ಮಕ್ಕಳು ಶಾಲೆಗೆ ಸೇರದೆ ಬೀದಿಗೆ ಬಿದ್ದಿರುವಾಗ, ಈಗ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು ಈ ಕಾಯ್ದೆಯಂತೆ ಪ್ರತಿ ಒಂದು ಕಿಲೋಮೀಟರಿಗೆ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರತಿ ಮೂರು ಕಿಲೋಮೀಟರಿಗೆ ಒಂದು ಹಿರಿಯ ಪ್ರಾಥಮಿಕ ಶಾಲೆ ಬೇಕೆಂದಿರುವಾಗ, ಜೊತೆಗೆ ಕೇಂದ್ರ ಸಂಪನ್ಮೂಲ ಸಚಿವಾಲಯದ ಅದಿಕಾರಿಗಳ ಕಾರ್ಯತಂಡವು “ಶಾಲಾ ದಾಖಲಾತಿ ಸಂಪೂರ್ಣ ಯಶಸ್ವಿಯಾಗಬೇಕಾದರೆ ಕರ್ನಾಟಕದಲ್ಲೆ ಮುಂದಿನ ಐದು ವರ್ಷಗಳಲ್ಲಿ ಇನ್ನು 1241 ಸಕರ್ಾರಿ ಶಾಲೆ ತೆಗೆಯಬೇಕಾಗುತ್ತದೆ” ಎಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವಾಗ – ಹೀಗಿದ್ದೂ ಈಗ ಇರುವ ಸರ್ಕಾರಿ ಶಾಲೆಗಳನ್ನು ಹೇಗೆ ತಾನೆ ಮುಚ್ಚಲು ಸಾಧ್ಯ ? ಇದರ ಜೊತೆಗೆ ಒಂದೊಂದಾಗಿ ದಲಿತ-ಹಿಂದುಳಿದ ವರ್ಗದ ಮಕ್ಕಳ ಹಾಸ್ಟೆಲ್ಗಳು, ಅಷ್ಟೇ ಅಲ್ಲಾ ಅಲೆಮಾರೀ ಮಕ್ಕಳ ಆಶ್ರಮ ಶಾಲೆಗಳನ್ನೂ ಈ ಸರ್ಕಾರ ಮುಚ್ಚುತ್ತಾ ಬರುತ್ತಿದೆ. ಒಟ್ಟಿನಲ್ಲಿ ಇದು ಮುಚ್ಚುವ ಸರ್ಕಾರವಾಗಿ ಬಿಟ್ಟಿದೆ. ಅದಕ್ಕಾಗೇ ಈ ಸರ್ಕಾರದ ಮರ್ಮವೇ ತಿಳಿಯದಾಗಿದೆ. ಸರ್ಕಾರವು ಹೀಗಿದ್ದರೆ, ಇನ್ನೊಂದು ಕಡೆ ಖಾಸಗಿ ಶಿಕ್ಷಣೋದ್ಯಮ ತನ್ನ ಶಾಲೆಗಳಲ್ಲೂ 25% ಮೀಸಲಾತಿ ಕೊಡಬೇಕಾಗಿ ಬಂದಿರುವುದನ್ನು ನುಂಗಲಾರದೆ ಒದ್ದಾಡುತ್ತಿದೆ. ಈ ಮೀಸಲಾತಿ ನೀತಿಯಿಂದ ಬಚಾವಾಗುವುದಕ್ಕಾಗಿ ಈ ಶಿಕ್ಷಣ ಉದ್ಯಮದವರು ಇನ್ನು ಮುಂದೆ ಅನದಿಕೃತ ಶಾಲೆಗಳನ್ನು ತಾವೆ ತೆರೆದು ತಂತಮ್ಮ ದಂಧೆ ಮುಂದುವರೆಸುವುದು ಸಹಜ ತಾನೆ ? “ಈ ಇರುವ ಅನದಿಕೃತ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಎಂದು ಶಿಕ್ಷಣ ಸಚಿವ ಶ್ರೀ ಸಿ. ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಹೇಳಿದರೆ ಉಳಿಯುವುದೇನು ? ಈ ಮಾತು ಏನನ್ನು ಹೇಳುತ್ತದೆ ? ಅದಿಕಾರ ನಡೆಸಲು ಅರ್ಹತೆ ಇಲ್ಲದವರು ಅದಿಕಾರಕ್ಕೆ ಬಂದರೆ ಸಹಜವಾಗಿ ಜರುಗುವ ಪ್ರಕ್ರಿಯೆಯಂತೆ ಕಾಣುವುದಿಲ್ಲವೆ ಇದು ? ಈ ಸರ್ಕಾರದ ಪಕ್ಷದ ಅಧ್ಯಕ್ಷರಾದ ಶ್ರೀ ಈಶ್ವರಪ್ಪನವರು “ಸರ್ಕಾರ ಉರುಳಿದರೂ ಶಾಲೆ ಮುಚ್ಚಲ್ಲ” ಎಂದು ರಾಜಾರೋಷವಾಗಿ ಹೇಳುತ್ತಾರೆ! ಇದು ನಿಜವೇ ಆಗಿದ್ದರೆ ಈಗಾಗಲೇ ಸರ್ಕಾರ ಉರುಳಿ ಹೋಗಬೇಕಿತ್ತಲ್ಲವೆ ? ಇದು, ಈ ರೀತಿ ಮಾತನಾಡುವುದು ಕಣ್ಮುಚ್ಚಿ ಕುಳಿತಿರುವ ಸರ್ಕಾರದ ಪಕ್ಷದ ಅಧ್ಯಕ್ಷರಿಗೆ ನಾಲಿಗೆಯೂ ಇಲ್ಲ ಎಂಬಂತಾಗಿಬಿಡುವುದಿಲ್ಲವೆ ? ಸರ್ಕಾರ ತಾನು ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳುವುದಕ್ಕಾಗಿಯಾದರೂ, ಒಂದು – ಅನದಿಕೃತ ಖಾಸಗಿ ಶಾಲೆಗಳನ್ನು ಮುಚ್ಚಲಿ. ಎರಡು – ಮಾತೃಭಾಷಾ ಶಿಕ್ಷಣಕ್ಕಾಗಿ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮವನ್ನು ಕಳ್ಳತನದಲ್ಲಿ ಕಲಿಸುತ್ತಾ ಜೊತೆಗೆ ಹೀಗೆ ಮಾಡುವುದರಿಂದ ಕಾನೂನು ಕಣ್ಣಿಗೆ ಮಣ್ಣೆರಚುವ ನೀತಿಯನ್ನು ಎಳೆಯ ಮಕ್ಕಳಿಗೆ ಉಣಿಸುತ್ತಿರುವುದನ್ನಾದರೂ ನಿಲ್ಲಿಸಿ ಮಕ್ಕಳನ್ನು ಬಚಾವು ಮಾಡಲಿ. ಮೂರು – ಶಿಕ್ಷಣ ಹಕ್ಕು ಕಾಯ್ದೆಯ “ಅಕ್ಕ ಪಕ್ಕ ಶಾಲಾ ಪದ್ಧತಿ”ಗೆ ಹೆಚ್ಚು ನಿಗಾ ಇಡಲಿ –ಕನಿಷ್ಟ ಇಷ್ಟಾದರೂ ಮಾಡಬೇಕಾಗಿದೆ. ಸರ್ಕಾರ ಕಣ್ಬಿಡಲಿ ಅದರ ನುಡಿಯ ಮುಖ ಮುಂದಕ್ಕಿದೆ. ಅದರ ನಡೆಯ ಪಾದಗಳು ಹಿಂದಕ್ಕಿವೆ! ಈಗಲಾದರೂ ಸರ್ಕಾರ ಬೇಗ ಕಣ್ಬಿಡಲಿ]]>

‍ಲೇಖಕರು G

16 August, 2012

1 Comment

  1. savitri

    ಹೌದು ಸರ್ ತಮ್ಮ ಅಭಿಪ್ರಾಯ ಸರಿಯಾದುದು, ನೊಂದ ಬಡ ಕನ್ನಡಿಗರ ಆಂತರ್ಯದ ಧ್ವನಿಗೆ ಶಬ್ದರೂಪ ನೀಡಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading