ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಹೊಸ ಕವಿತೆ- ‘ರೆ’…….

ಸರೋಜಿನಿ ಪಡಸಲಗಿ

ಬೆಳ್ಳಿ ಬೊಟ್ಟು ಕೋದ ನಿಶೆಯ ಸೆರಗು ಹಾಸಿ
ಬಳುಕೋ ಬಳ್ಳಿ ಮಡಿಲು ಮೊಗ್ಗು ತುಂಬಿ ಸೂಸಿ
ಸ್ವಚ್ಛ ಮುಗಿಲ ಬಯಲ ಪೂರ್ಣಚಂದ್ರ ಬೆಳಗಿ
ಚಂದಿರನ ಹಾಲಬೆಳಕಿನ ಬೆಳದಿಂಗಳು ನಾನಾದ’ರೆ’……

ಕೊಳದೊಡಲ ನೀಲ ಸಲಿಲ ಮೊಗದ ಮೇಲೆ
ಅರಳಿ ನಿಂದ ತಾವರೆಯ ಮೃದುಲ ಸೊಬಗಿನ್ಹಾಸು
ದಡದಂಚಿನುದ್ದಕೂ ಹಚ್ಚನೆ ಹಸಿರು ಮೆತ್ತೆ ಬೀಸಿ
ಹಸಿರು ಮೆತ್ತೆ ಮೇಲೆ ಚುಕ್ಕೆ ಸಾಲು ಹುದುಗಿ
ಗುಂಜಿಸುವ ಭೃಂಗ ಗುಂಜನದ ಮಾಧುರ್ಯ ನಾನಾದ’ರೆ’…….||

ಧವಳ ಗಿರಿಯ ಶಿಖರದಿಂದ ಜರ್ರನೇ ಜಾರಿದ
ಧವಳ ಮಣಿ ರಾಶಿ ಇಳೆಯ ಒಡಲಲಿ ಒರಗಿ
ಕಣ್ಣು ಹರಿದಷ್ಟು ದೂರ ಶುಭ್ರ ಶ್ವೇತ ಸಿರಿ ಮೆರೆದು
ದಿನದ ಪ್ರಖರ ಬೆಳಕಲಿ ಬೆಣ್ಣೆ ಮಸೆಸಿದಂತಾಗಿ
ಮುತ್ತಿನ್ಹೊಳಪ ಪ್ರಭೆಲಿ ಮಿಂದ ತಂಬಿಸಿಲು ನಾನಾದ’ರೆ’……. ||

ಮತ್ತೆ ವಸಂತ ಮರಳಿ ಚಿಗುರು ಕೊನರಿ ತೂಗಿ
ಜೊಂಪೆ ಜೊಂಪೆ ಮೊಗ್ಗು ಹೂವು ಸುರಿದು
ಹೂತ ಚೂತವನದ ಕೆಂದಳಿರ ನೆರಳಲ್ಲಿ
ಕೋಗಿಲೆಯ ಕೂಜನದಿ ಸೃಷ್ಟಿ ಮೀಯುತಿರೆ
ಪಂಚಮದ ಇಂಚರದ ತಾನ ತಂತಿ ನಾನಾದ’ರೆ’….. ||

ಸರಿದು ಹೋದ ಚಣಗಳ ಹೊಳವು ಹೊಳೆದು
ಭಾವ ಭಾರಕೆ ಎದೆ ಬಿರಿದು ಕಣ್ಣ ಎವೆ ಬಾಗಿ
ಒದ್ದೆಗಣ್ಣು ಮಿರುಗಿ ಮಂದ ನಗುವೊಂದು ಮೂಡಿ
ನೋವು ನಲಿವು ಮಿಳಿಸಿ ಝರಿಯೊಂದು ಒಸರಿ
ಮನತುಂಬಿದ ಮಧುರತೆಯ ನವಿರತೆಯೇ ನಾನಾದ’ರೆ’….. ||

ಹೇಗೋ ಅದೇನೋ ಎದೆ ಹೊಕ್ಕು ಉಸುರುತಿದೆ
‘ರೆ’ ಇದರ ಹರಿವು ಅಂಕೆ ಮೀರಿ ಅಸಾಮಾನ್ಯ
ಆಳ ಅಂತ ತಿಳಿಯದ ಬಲು ವಿಸ್ತರದ ಸಾಮ್ರಾಜ್ಯ
ಅದೊಂದು ಚಿತ್ತಾರಗಳ ರಂಗಿನಾಟದ ರಂಗಸಾಲೆ
ಅಣು ಅಣುವಲೂ ಅದ ಬಿಂಬಿಸುವ ಕಲೆಯೇ ನಾನಾದ’ರೆ’…… ||

‍ಲೇಖಕರು Avadhi

23 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading