
ಸರೋಜಿನಿ ಪಡಸಲಗಿ
ಬಂಕಾಪುರದ ಮೊದಲ ದಿನದ ಬೆಳಗು
ಈ ಜೀವನದ ಗಾಲಿಯ ಓಟದ ವೇಗ ಎಷ್ಟು ಎಂಬ ಬಗ್ಗೆ ವಿನಾಕಾರಣ ತಲೆ ಕೆಡಿಸಿಕೊಳ್ಳ ಹೋಗದಿದ್ರೂ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಅಚ್ಚರಿಯ ಗೆರೆ ಮೂಡುವುದಂತೂ ಖಂಡಿತ. ಎರಡು ಮಾತೇ ಇಲ್ಲ ಅಲ್ಲಿ. ಮೊನ್ನೆ ಮೊನ್ನೆಯೇ ಪಾಟೀಚೀಲ ಹೆಗಲಿಗೇರಿಸಿ ಶಾಲೆಗೆ ಹೋಗುವ ನೆನಪು ಹಸಿ ಹಸಿಯಾಗಿರುವಾಗಲೇ ಕಾಲೇಜು ಶಿಕ್ಷಣ ಮುಗೀತು. ಅಲ್ಲಿಗೆ ಒಂದು ಅಂಕ ಮುಗೀತು.
ಮದುವೆಯಾಗಿ ಡಾಕ್ಟರ್ ಪತ್ನಿಯಾಗಿ ಗಂಡನ ಮನೆಗೆ ಬಂದೆ. ಇನ್ನೊಂದು ಅಂಕ ಶುರು ಆಯ್ತು ಅಲ್ಲಿಗೆ. ಡಾಕ್ಟರ್ ಪತಿ ಎಂಬ ಹೆಮ್ಮೆ, ಆ ಹೊಸ ಹಸಿ ಬಿಸಿಯಲ್ಲಿ ಏನೋ ಒಂದು ಉಲ್ಲಾಸ ಉತ್ಸಾಹ. ಒಂದೊಂದೇ ಮಜಲು ಏರಿ ಅಲ್ಲಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತ, ಎಲ್ಲಿ ಸಾಧ್ಯವೋ ಅಲ್ಲಿಯೇ ಆ ಸಂಗತಿಗಳನ್ನು ಮರೆಯುತ್ತ ಇಲ್ಲಿಗೆ ಬಂದು ನಿಂತಾಯ್ತು.
ಒಮ್ಮೆ ಹಿಂದಿರುಗಿ ನೋಡಿದಾಗ ಆ ಅನುಭವ, ನೆನಪುಗಳ ಮೂಟೆ ಬಲು ಭಾರ ಅನಿಸಿ ನಿಮ್ಮೊಂದಿಗೆ ಹಂಚಿಕೊಂಡು ಹಗುರಾಗಬಾರದೇಕೆ ಅನಿಸಿ ಶುರು ಮಾಡಿಯೇ ಬಿಟ್ಟೆ. ಪ್ರತಿ ಹೆಜ್ಜೆಗೂ ಒಂದು ಹೊಸ ಅನುಭವ, ಹೊಸ ಕಲಿಕೆ. ನಿಜಕ್ಕೂ ನನಗೆ ಬಹಳ ವಿಚಿತ್ರ ಅನಿಸ್ತದೆ – ನಾವೆಲ್ಲಾದಕ್ಕೂ ಎಷ್ಟು ಸಲೀಸಾಗಿ ಹೊಂದಿಕೋತೀವಲಾ ಅಂತ.
ಆದ್ರೆ ಒಂದು ಮಾತು ನನಗೆ ಪಕ್ಕಾ ಮನವರಿಕೆ ಆಗಿ ಬಿಟ್ಟಿದೆ. ಆ ಹೊಂದಾಣಿಕೆ ಮಾಡಿಕೊಳ್ಳೋವಾಗ ನಾ ಎಲ್ಲೂ ನನ್ನತನ ಬಿಟ್ಟು ಕೊಡದೇ ಇರುವುದು ನನಗೆ ತುಂಬಾ ಮಜಬೂತಾದ ಗಟ್ಟಿತನ ಕೊಟ್ತು ಅಂತ. ನಾ ಇಲ್ಲಿ ನನ್ನ ಅನುಭವಗಳನ್ನ ಹೇಳ್ತಾ ಹೋದಾಗ ನಿಮಗೂ ಖಾತ್ರಿ ಆಗ್ತದ.
ನನ್ನ ಡಾಕ್ಟರ್ ಪತಿ ಸರ್ಕಾರಿ ಸೇವೆಯಲ್ಲಿ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಾ ನಿವೃತ್ತರಾದವರು. ಹೀಗಾಗಿ ನಮ್ಮಜೀವನ ಎಲ್ಲಾ ಹೆಚ್ಚು ಕಡಿಮೆ ಹಳ್ಳಿಗಳಲ್ಲೇ ಕಳೀತು. ಸಮಾಜವನ್ನು ಅತೀ ಹತ್ತಿರದಿಂದ ನೋಡುವವ ಒಬ್ಬ ವೈದ್ಯ. ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿ ಬೆರೆತು ಅವರ ಜೀವನದ ಪ್ರತೀ ಪದರನ್ನು ಸೂಕ್ಷ್ಮವಾಗಿ ಅವಲೋಕಿಸುವವರು ಹಳ್ಳಿಗಳಲ್ಲಿ ಕೆಲಸ ಮಾಡುವ ವೈದ್ಯರು ಅಂದರೆ ಎಳ್ಳಷ್ಟೂ ತಪ್ಪಿಲ್ಲ.
ಅವರ ಜೊತೆ ಅವರ ಕುಟುಂಬವೂ ಅಂದರೆ ಮುಖ್ಯವಾಗಿ ಅವರ ಪತ್ನಿ ಸರಿಸಮವಾಗಿ ಹೆಗಲು ಕೊಟ್ಟು ನಿಲ್ಲಬೇಕಾಗ್ತದೆ ಈ ಹಳ್ಳಿಯಲ್ಲಿ ಕೆಲಸ ಮಾಡುವ ವೈದ್ಯರಿಗೆ. ಅದೂ ಆ ಹಳ್ಳಿಗಳು ಎಷ್ಟು ಸೌಕರ್ಯ ಹೀನ ಇದ್ದವು ಎಂಬ ಕಲ್ಪನೆಯೇ ನಿಮಗೆ ಅಚ್ಚರಿ ಮೂಡಿಸೀತು. ಅದರ ಬಗ್ಗೆ ಮುಂದೆ ಬರೀತಾ ಹೋಗ್ತೀನಿ. ಈಗ ನನ್ನ ಮೊದಲ ದಿನದ ಅನುಭವ ಹೇಳ್ತೀನಿ.

ಇದು ಅಂದರೆ ಎಷ್ಟರ ಮಟ್ಟಿಗೆ ಸಹಕಾರ ನೀಡಬೇಕಾಗ್ತದೆ ಎಂದು ನನಗೆ ಮೊದಲ ದಿನವೇ, ಅಂದರೆ ಸರ್ಕಾರಿ ನೌಕರಿ ಸೇರಿದ ನನ್ನ ಪತಿಯೊಡನೆ ಇರಲು ಹೋದ ದಿನವೇ ಅನುಭವಕ್ಕೆ ಬಂದ ಬಗೆ ಹೇಳ್ತಿದೀನಿ. ಏನು ಮೊದಲ ದಿನವೇ ಇಂಥ ಅನುಭವವೇ ಅಂತ ಗಾಬರಿ ಬೀಳಬೇಡಿ.ಇನ್ನೊಂದು ಮಾತು- ನನ್ನ ಪತಿ 6-7 ವರ್ಷ ಪ್ರೈವೇಟ್ ಪ್ರಾಕ್ಟೀಸ್ ಮಾಡಿ ತಮ್ಮನ್ನು ನಂಬಿದ ಪೇಷಂಟ್ ಗಳನ್ನು ಬಿಡಲಾರದೇ ಬಿಟ್ಟು ಸರ್ಕಾರಿ ನೌಕರಿಗೆ ಸೇರಿದವರು.
ಹೀಗಾಗಿ ನಾವು ಕೆಲಸ ಮಾಡಿದ ಊರುಗಳೆಲ್ಲ ಅವರೂರು ಸವಣೂರಿನ ಆಸುಪಾಸಿನಲ್ಲಿಯೇ. ಬಂಕಾಪುರ ಧಾರವಾಡ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಒಂದು ಚಿಕ್ಕ ಗ್ರಾಮ. ಸವಣೂರ division ಲ್ಲಿ ಬರೋ ಅಲ್ಲಿನ ಅಂದರೆ ಬಂಕಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಆಡಳಿತ ವಹಿಸಿಕೊಂಡ ನನ್ನ ಪತಿ ಸುರೇಶ ಸವಣೂರಿನಲ್ಲಿದ್ದ ನನ್ನ ಕರೆದುಕೊಂಡು ಹೋಗಲು ಸಂಜೆ ಏಳು ಗಂಟೆಗೆ ಅಂದರೆ ಆಸ್ಪತ್ರೆಯ ಕೆಲಸದ ವೇಳೆ ಮುಗಿಸಿಕೊಂಡು ಬರುವುದಾಗಿ ಹೇಳಿದ್ರು. ಸರಿ ಸಾಮಾನೆಲ್ಲ ಹೋಗಿಯಾಗಿತ್ತು. ನಾನು ಚಿಕ್ಕಪುಟ್ಟ ಬ್ಯಾಗುಗಳೊಡನೆ ತಯಾರಾಗಿದ್ದೆ ನನ್ನ ಪುಟ್ಟ ಕಂದಮ್ಮಗಳೊಡನೆ.
ನನ್ನ ಅತ್ತೆಯವರೂ ನನ್ನ ಜೊತೆ ಬರೋರಿದ್ರು. ಸವಣೂರಿನಿಂದ ಬಂಕಾಪುರ ಅರ್ಧ ಗಂಟೆ ದಾರಿ ಅಷ್ಟೇ. ಆ ದಿನ ತುಲಸೀ ವಿವಾಹ. ಮನೆಯಲ್ಲಿ ನನ್ನ ಓರಗಿತ್ತಿಯರು ಎಲ್ಲಾ ಬೇಗ ಬೇಗ ಮುಗಿಸಿದ್ರು. ನಾ ಬಂಕಾಪುರಕ್ಕೆ ಹೊರಡೋಳಿದ್ದೆನಲ್ಲ! ಆಯ್ತು ಏಳು ಗಂಟೆ ಸರಿದು ಎಂಟು, ಒಂಬತ್ತು, ಹತ್ತು ಹತ್ತೂವರೆ ಆದ್ರೂ ಆಸಾಮಿ ಪತ್ತೆನೇ ಇಲ್ಲ! ಅಪ್ಪನ ದಾರಿ ಕಾಯ್ದು ಮಕ್ಕಳು ನಿದ್ದೆ ಹೋಗಿದ್ರು ಸೋತು.
ನನ್ನ ಮುಖವೂ ಸಣ್ಣಗೆ ಸೊರಗಿತ್ತು ಅನ್ನಿ. ಆಗಲೇ ಖಾಸಗಿ ಪ್ರಾಕ್ಟೀಸ್ ನಲ್ಲಿ ಇದೆಲ್ಲಾ ರೂಢಿಯಾಗಿದ್ರೂ ಮತ್ತೆ ಇಲ್ಲೂ ಹೀಗೇನಾ ಅಂತ ಸ್ವಲ್ಪ ನಿರಾಸೆ ಕಾಡ್ತಿತ್ತು. ಅಷ್ಟರಲ್ಲಿ ಜೀಪ್ ಹಾರ್ನ್ ಕೇಳಿ ಹೊರಗೆ ಬಂದೆ ಧಡಪಡಿಸಿ ಗಡಿಬಿಡಿಯಿಂದ. ಜೀಪ್ ಬಂದಿದೆ ಆದರೆ ಸುರೇಶ ಇಲ್ಲ! ಬರೀ ಡ್ರೈವರ್!
ನಾ ಆತನ್ನ ನೋಡಿದ್ದಿಲ್ಲ, ಆತ ನನ್ನ ನೋಡಿಲ್ಲ! ನನ್ನ ಭಾವ, ಅವರೂ ಡಾಕ್ಟ್ರೇ, ಅವರು ಹೊರಗೆ ಬಂದು ಡ್ರೈವರ್ ಜೊತೆ ಮಾತಾಡಿ, ನನ್ನೆಡೆ ತಿರುಗಿ ,” ಇಲ್ನೋಡ ಸರೋಜಿನಿ ಅಲ್ಲೇನೋ ಸೀರೀಯಸ್ ಕೇಸ್ ಇದೆಯಂತೆ. ಅದಕ್ಕೇ ಆತಗೆ ಬರಲಾಗಿಲ್ಲ. ಇಲ್ಲಿ ಡ್ರೈವರ್ ಬಿಸ್ತಿ ಮತ್ತು ಒಬ್ಬ ಅಟೆಂಡರ್ ರಾಮಣ್ಣಂತ ಬಂದಾರ. ಅವರ ಜೊತೆಗೆನೇ ಬರಬೇಕಂತ ಹೇಳಿ ಕಳಸ್ಯಾನ ನೋಡು” ಅಂದ್ರು. ಸರಿ ಅಂತ ತಲೆ ಅಲ್ಲಾಡಿಸಿ ಒಳಗೆ ಹೋದೆ.

ನನ್ನತ್ತೆಯವರೂ ನನ್ನ ಜೊತೆ ಬರೋರಿದ್ರು. ಸರಿ ನಮ್ಮ ಪಯಣ ಸಾಗಿತು ಬಂಕಾಪುರದತ್ತ ಆ ರಾತ್ರಿಯ 11.30 ಗಂಟೆಗೆ! ಅಲ್ಲಿನ ಸರ್ಕಾರಿ ಕ್ವಾಟ್ರರ್ಸ್ ಮುಂದೆ ಇಳಿದಾಗ ಸರಿಯಾಗಿ ಮಧ್ಯರಾತ್ರಿ 12.15! ಬಾಗಿಲ ಮುಂದೆ ಕಾಯ್ತಾ ನಿಂತಿದ್ದ ನನ್ನವರನ್ನು ನೋಡಿ ಬೇಜಾರು ಮಾಯ. ನಿದ್ದೆಗಣ್ಣಲ್ಲಿದ್ದ ಮಕ್ಕಳೂ ನಿಚ್ಚಳವಾಗಿ ಕಣ್ಣು ತೆರೆದು ಹಾರಿದರು ಅಪ್ಪನತ್ತ ಖುಷಿಯಿಂದ. ಯಾಕೆ ಬರಲಿಲ್ಲ ಅಂದಾಗ “ಈಗ ರಾತ್ರಿ ಹೊತ್ತು ಬ್ಯಾಡ ಅದೆಲ್ಲಾ. ಮೊದಲ ಹೆದರಪುಕ್ಕಿ ನೀ. ಮಲಕೋ ಈಗ” ಅನಬೇಕ ! ಖರೇನ ಸ್ವಲ್ಪ ಗಾಬರಿ ಹೆದರಿಕೆ ಜೊತೆನೇ ಮಲಗಿದೆ.
ಬೆಳಗಾಯ್ತು, ಕಣ್ತೆರೆದು ನೋಡಿದರೆ ಸುರೇಶ ಕಾಣಲಿಲ್ಲ! ನಮ್ಮತ್ತೇನ ಕೇಳಿದಾಗ ಅವರು, ” ಅಂವಾ ಆಗs ಹೋಗ್ಯಾನ. ಮುಕ್ಕಾಲು ಗಂಟೆ ಆತು. ಅದೇನೋ ಹೆಣಾ ಕೊಯ್ಯೋದ ಅದ ಅಂತ. ಕಲ್ಯೂದ ಮುಗದ್ರೂ ಇದೆಲ್ಲಾ ಇರತದೇನ” ಕೇಳಿದ್ರು ಅವರು. ಕಾಲ ನಡುಗ್ತಿತ್ತು ನಂಗೆ. ಹಂಗೇ ಕಣ್ಣು ತಿಕ್ಕುತ್ತಾ ಹೊರಗೆ ಬಂದ್ರೆ ಕಂಡೇ ಬಿಡಬೇಕಾ ಆ ವಿಚಿತ್ರ ದೃಶ್ಯ !
ಹಳ್ಳಿಯ ಸ್ವಚ್ಛ ವಾತಾವರಣದ ಸುಂದರ ಸೂರ್ಯೋದಯ, ಹಾಡುವ ಹಕ್ಕಿ, ಆ ಗುಂಜನಕೆ ತಲೆದೂಗೋ ಹಸಿರು ಗಿಡ ಬಳ್ಳಿಗಳ ಸುಂದರ ಕಲ್ಪನಾಲೋಕ ಒಂದೇ ಕ್ಷಣದಲ್ಲಿ ಮಾಯವಾಗುವಂತೆ ಆ ದೃಶ್ಯ ಕಂಡೇ ಬಿಡಬೇಕಾ ನಂಗೆ ! ನಮ್ಮತ್ತೆಯವರ ಮಾತಿನಿಂದಲೇ ಭ್ರಮನಿರಸನವಾದ ನಂಗೆ ಇದು ಇನ್ನೇನೋ ಎಂಬ ಭೀತಿ.
ಬಿಳೀ ಬೆಡ್ಶೀಟ್ ನ ಜೋಳಿಗೆಯಂತೆ ಮಾಡಿಕೊಂಡು ಇಬ್ಬರು ತಗೊಂಡು ಹೋಗ್ತಿದ್ರು. ಅದರಲ್ಲೇನಿರಬಹುದು ಎಂಬ ಭೀತಿ ಬೆರೆತು ಕುತೂಹಲ. ಒಬ್ಬ ಹೆಂಗಸು ಬಾಗಿಲ ಮುಂದೆ ಗುಡಸ್ತಿದ್ಲು. ನಾ ಕೇಳೋಷ್ಪ್ರಲ್ಲಿ ಅವಳೇ “ನಮಸ್ಕಾರ್ರಿ ಬಾಯಾರ. ನಾ ಸೀತವ್ವ. ರಾಮಣ್ಣನ ಹೆಂಡತಿ. ನಿಮ್ಮನೀ ಕೆಲಸಾ ನಾನs ಮಾಡ್ತೀನಿ” ಅಂದ್ಲು. ‘ಆತ ಸೀತವ್ವ, ಹಂಗs ಮಾಡು. ಸೀತವ್ವಾ ಅದೇನ ಅಲ್ಲಿ ಒಯ್ಯಲಿಕ್ಹತ್ಯಾರ ‘ ಅಂದೆ. ಅದಕ್ಕ ಆಕೀ “ಬಾಯರ ನೀವ ನಡೀರಿ ಒಳಗ. ಹಂಗೆಲ್ಲಾ ನೋಡಕೋತ ನಿಲ್ಲಬ್ಯಾಡ್ರಿ. ಮೊದಲs ಕೆಂಪಾನ ಹೆಣ್ಮಗಳು. ನಡೀರಿ ಒಳಗ ” ಅಂದ್ಲು.

ʼಯಾಕ ಸೀತವ್ವಾ ಏನಾತು? ಅದೇನ ಅದು? ‘ ಎಂದೆ. ಅಷ್ಟ್ರಾಗ ಅವರಿಬ್ಬರೂ ಆ ಜೋಳಿಗೆಯಂಥಾದ್ದು ತಗೊಂಡು ನಮ್ಮ ಕ್ವಾರ್ಟರ್ಸ್ ಮುಂದಿಂದನೇ ಅದನ್ನು ತಗೊಂಡು ಹೋದ್ರು. ಅದನ್ನು ನೋಡಿದ ನನ್ನ ಕಣ್ಣು ಇಷ್ಟಗಲ ಆದು, ಚೀರಲು ತೆಗೆದ ಬಾಯಿ ಹಾಗೇ! ಒಳಗೆ ಹೋಗಲೂ ತೋಚಲಿಲ್ಲ. ಅಷ್ಟು ಹೆದರಿ ನಿಂತಿದ್ದೆ. ಆ ಬೆಡ್ಶೀಟ್ ಪೂರ್ತಿ ರಕ್ತ! ಒಂದು ಮನುಷ್ಯನ ಕಾಲು ಹೊರಗೆ ಬಂದು ಕಟ್ಟಿಗೆಯಂತೆ ಸೆಟೆದು ಚಾಚಿತ್ತು! ಹೇಗೋ ಸಾವರಿಸಿಕೊಂಡು ಒಳಗೆ ಬಂದು ಕೂತೆ. ಸುತ್ತಲೂ ಹರಡಿದ್ದ ಇನ್ನೂ ಬಿಚ್ಚದೇ ಇದ್ದ ಸಾಮಾನುಗಳು ನನ್ನ ನೋಡಿ ನಕ್ಕಹಾಂಗ ಅನಿಸ್ತು ನಂಗೆ.
ಸೀತವ್ವ ಒಳಗೆ ಬಂದು ಹೇಳಿದ್ಲು “ಬಾಯರ ಗಾಬರಿ ಆಗಬ್ಯಾಡ್ರಿ. ಅದು accident ಕೇಸು. ಲಾರಿ ಬಸ್ ದು. ಅದರಾಗ ಸತ್ತಾನ್ರಿ ಈ ಲಾರಿ ಡ್ರೈವರ್. ಹೈವೇ ಹತ್ತೀಕ ಐತೆಲ್ರೀ , ಇಲ್ಲೆಲ್ಲಾ ಭಾಳ ಇವು, ಮಾಮೂಲು ಅನೋಷ್ಟು. ದಿನದಾಗ ಎರಡು ಮೂರರ ಇರತಾವ್ರಿ ಬಾಯರ. ನಿಮಗೂ ರೂಢಿ ಆಗ್ತತಿ.” ಅಂತ ಸರಳs ಹೇಳಿದ್ಲು.
ತಲೀಮ್ಯಾಲ ಕೈ ಇಟಗೊಂಡ ಕೂತ ನನ್ನ ನೋಡಿ ಒಳಗೆ ಹೋಗಿ ಒಂದು ಲೋಟ ನೀರು ಕೊಟ್ಟು, ‘ ನೀರೊಲಿಗೆ ಉರಿ ಹಾಕಲ್ರೀ? ಈಗ ಸಾಹೇಬ್ರು ಬಂದ ಕೂಡಲೇ ಜಳಕಕ್ಕs ಹೋಗ್ತಾರ್ರಿ ” ಅಂತ ಹೇಳಿ ಒಳಗೆ ಹೋದ್ಲು. ಸುಮ್ಮನೇ ಕೂತಿದ್ದ ನಮ್ಮತ್ತೆ, “ಇದೇನವಾ ಮಾರಾಯ್ತಿ. ಮೊದಲನೇ ದಿನಾ, ದೇವರ ಮುಂದೆ ದೀಪಾ ಹಚ್ಚೋಕಿಂತಾ ಮೊದಲ ಇದೇನವಾ ಸುದ್ದಿ” ಅಂತ ಮಾರಿ ಸೊಟ್ಟಗೆ ಮಾಡಿದ್ರು.
ಏನ ಹೇಳಲಿ ನಾ ಅವ್ರಿಗೆ? ಹೀಂಗ ಶುರು ಆಯ್ತು ನೋಡ್ರಿ ಬಂಕಾಪುರದಾಗ ನಮ್ಮ ಮೊದಲ ದಿನ, ನನಗೆ ಹೇಳ್ಕೋತ “ಇನ್ನ ನಿನ್ನ ಹೆದರಿಕೆ, ಅಂಜಿಕೆ ಎಲ್ಲಾ ಗಂಟು ಕಟ್ಟಿಡು” ಅಂತ. ಪಟ್ಟನ ಒಳಗೆ ಹೋಗಿ ಥಟ್ಟನೇ ಕೈಕಾಲು ಮುಖ ತೊಳೆದುಕೊಂಡು ದೇವರ ಕಪಾಟಿನಲ್ಲಿದ್ದ ಒಂದೇ ಒಂದು, ನಮ್ಮ ಮನೆದೇವರ ಫೋಟೋದ ಮುಂದೆ ದೀಪಾ ಹಚ್ಚಿ ಕೈ ಮುಗಿದು ನಿಂತೆ ಆ ಮೊದಲ ದಿನದ ವಿಚಿತ್ರ ಅನಸೋ ಮೊದಲ ಬೆಳಗಿನ ಬೆಳಕಿನಲ್ಲಿ.
ಎಲ್ಲ ಭಾರ ಆತನ ಮೇಲೆ ಹಾಕಿ ‘ಈ ಹೊಸ ಹಾದಿಯಲ್ಲಿ ಹೆಜ್ಜೆ ಇಡುವುದು ಹೇಗೆ ಅಂತ ಕಲಿಸಪ್ಪಾ’ ಅಂತ ಕೇಳಿಕೊಳ್ಳುತ್ತ. ನನ್ನ ಪುಟ್ಟ ಕಂದಮ್ಮಗಳು ನನ್ನ ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ರು ನನ್ನ ಮುಖದ ಕಡೆ ನೋಡುತ್ತಾ ನನ್ನ ಪ್ರಾರ್ಥನೆಗೆ ಧ್ವನಿಗೂಡಿಸೋ ಹಾಗೆ.
|ಮುಂದಿನ ಸಂಚಿಕೆಯಲ್ಲಿ|






ಅದ್ಭುತವಾದ ಬರಹ. ವೈದ್ಸನ ಹೆಂಡತಿಯ ಅನುಭವಗಳಲ್ಲಿ ಕರುಣಾರಸದಿಂದ ಹಿಡಿದು ಭೀಭತ್ಸದವರೆಗೆ ನವರಸಭರಿತವು! ಈ ಸರಣಿಯ ಮುಂದಿನ ಕಂತಿಗೆ ಕಾಯುವೆ.
ಶ್ರೀವತ್ಲ ದೇಸಾಯಿ
ನಾನು ನನ್ನ ತನ್ ಬಿಡಲಿಲ್ಲ ,ಇದು ನನಗೆ ತುಂಬಾ ಸೇರಿತು. Looking forward for more and more experience s of you.
ಅವಧಿಗೆ ಮೊದಲು ನನ್ನ ಧನ್ಯವಾದಗಳು.ಶ್ರೀವತ್ಸ ದೇಸಾಯಿಯವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ! ಹಾಸ್ಯ ,ಕರುಣ, ಭೀಭತ್ಸ ರಸಮಿಶ್ರಿತ ಜೀವನ ಒಬ್ಬ ವೈದ್ಯನ ದಂತೂ ಸರೀನೇ, ಅದಕ್ಕೂ ಮಿಕ್ಕಿದ ಒಂದು ರಸ ವೈದ್ಯನ ಪತ್ನಿಯ ಜೀವನದಲ್ಲಿ- ಸಮಯನಾಸಂಧಾನ ರಸ ( ನನ್ನ ನಾಮಕರಣ- ಕ್ಷಮಿಸಿ).
ಮಧು ನಿನಗೆ ಧನ್ಯವಾದ ಹೇಳಲೇಬೇಕು ಅನಕೊಂಡೀನಿ.ನಿನ್ನ ಅಭಿಪ್ರಾಯ ಛಂದ. ಆ ನನ್ನತನ , ಗಟ್ಟಿತನ ನೀ ನೋಡಿದಾಗಿನಕಿಂತಲೂ ಈಗ ಮಜಬೂತಾಗಿದೆ ನೋಡು.