ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
14
ಹಬ್ಬಾ- ಹುಣ್ಣಿವಿ ಬಂದೂ ಅಂದ್ರ ನಮ್ಮ ಏಕಾನ ದಿನ, ದಿನದ ಸಂಭ್ರಮಕ್ಕನ ಪುಚ್ಚಾ ಹಚ್ಚಿಧಾಂಗ ಆಗೂದು.ಆ ಹಬ್ಬದ ಸಂಭ್ರಮಕ್ಕ ಒಂದ ಹೊಸಾ ಕಳೆ ಕಟ್ಟೂದು ಆಕೀ ಹುರುಪು, ಹೌಸು. ಒಂದೊಂದ ಹಬ್ಬಕ್ಕ ಒಂದೊಂದ ವಿಶೇಷತಾ. ಹಂಗs ಸಂಕ್ರಾಂತಿ ಹಬ್ಬಕ್ಕೂ. ನಮ್ಮ ಕಡೆ ಸಂಕ್ರಾಂತಿ ಆಚರಣೆ ಒಂಚೂರ ಬ್ಯಾರೆ. ನಾವು ಎಳ್ಳು ಬೆಲ್ಲ ಒಬ್ಬರಿಗೊಬ್ಬರು ಅಂದ್ರ ಪರಸ್ಪರ ಕೊಟ್ಟು ಆಚರಸ್ತೀವಿ. ಅದಕ್ಕ ಈ ದೇಶೀ ಎಳ್ಳು ಅಂದ್ರ ಹುರದ ಎಳ್ಳು, ಬೆಲ್ಲ, ಶೇಂಗಾ, ಕೊಬ್ರಿ, ಪುಠಾಣಿ ಕೂಡಿಸಿ ಮಾಡಿದ್ದು ಅಂತೂ ಇರ್ತದ. ಅದರ ಜೋಡಿ ಎಳ್ಳಚಿಗಳಿ, ಎಳ್ಳಿನ ಉಂಡಿ, ಚಿಕ್ಕಿ, ವಡಿ ಇವನ್ನ ಮಾಡೂದೂ ಇದ್ದs ಇರ್ತದ; ಇಷ್ಟಲ್ಲದ ನಮ್ಮ ಕಡೆ ಇನ್ನೊಂದ ಸ್ಪೇಷಲ್ ಅಂದ್ರ ಕುಸುರೆಳ್ಳ ಮಾಡೂದು.
ಕುಸುರೆಳ್ಳು, ಕುಸುರೆಳ್ಳಿನ ಪಾಕ ನಮ್ಮ ಏಕಾಂದು ಏಕದಂ ವಿಶೇಷ. ಪ್ರತಿ ಕೆಲಸಾ ತನ್ನದ ರೀತಿಯೊಳಗ, ಒಂದ ಸ್ವಂತಿಕೆ ಇಟ್ಟು ಅಗದೀ ಚೊಕ್ಕ ಮಾಡೋದು ನಮ್ಮ ಏಕಾನ ಹುಟ್ಟಗುಣಾನs ಹೌದು. ಅದರಿಂದನ ಅವು ವಿಶೇಷ ಅನಸೂದು. ಈ ಕುಸರೆಳ್ಳ ಮಾಡೂದೂ ಒಂದ ಕುಶಲ ಕಲೇನ. ಅಗದೀ ಹುಷಾರಕೀಲೇ,ಜ್ವಾಕೀಲೇ ಮಾಡಬೇಕು ಅದನ ; ಅದs ನಾ ಹಿಂದ ಹೇಳಿಧಾಂಗ ಥೇಟ್ ಕುಸರಿ ಕೆಲಸ ಅದು. ಇದರಕಿಂತ ಶಾಣ್ಯಾತನದ ನಾಜೂಕ ಕೆಲಸ ಕುಸುರೆಳ್ಳಿನ ಪಾಕ ಮಾಡೂದು. ಈ ಪಾಕದ ಮ್ಯಾಲ ಕುಸರೆಳ್ಳ ಹೆಂಗಾಗ್ತಾವ ಅನೂದು ನಿರ್ಭರ ಆಗ್ತದ. ಒಟ್ಟ ವಾರಗಟ್ಟಲೆ ಆಗೂ ಕೆಲಸ ಇದು. ಅದಕs ನಮ್ಮ ಏಕಾ ಜೋಳದ ರಾಶಿ ಮುಗಿಸಿ ಕೊಂಡ ಬರೂದ ತಡಾ ಕುಸರೆಳ್ಳಿನ ಕೆಲಸ ಸುರೂನs.
ಕುಸುರೆಳ್ಳು ಮಾಡ್ಲಿಕ್ಕೆ ಬಿಳಿ ಎಳ್ಳು, ಶೇಂಗಾ ಕಾಳು, ಚುನಮುರಿ, ಪುಠಾಣಿ, ಸಾಬೂದಾಣಿ, ಜೀರಿಗೆ , ಲವಂಗ, ಬಡೆಸೋಪು ಇವನ್ನೆಲ್ಲಾ ಬಳಸ್ತಾರ. ಮೊದಲ ಪಾಕ ತಯಾರ ಆಗಬೇಕು; ಅದs ಭಾಳ ಮುಖ್ಯ. ಈ ಪಾಕ ಮಾಡೂ ನಾಜೂಕು ಕೆಲಸಾನ ಏಕಾ ಬಲೆ ಜ್ವಾಕೀಲೆ ಮಾಡಾಕಿ; ಅದರಲೇ ಕುಸರೆಳ್ಳ ಮಾಡೂದೂ ಹಂಗs ಅಷ್ಟs ಹುಷಾರಕೀಲೆ ಮಾಡ್ರಿ ಅಂತ ಒತ್ತಿ ಒತ್ತಿ ಹೇಳಾಕಿ ನನಗ, ಅವ್ವಾಗ.
ಪಾಕ ಮಾಡ್ಲಿಕ್ಕೆ ಅಗದೀ ಬೆಳ್ಳಗಿನ ಸಕ್ರಿ ತಗೊಂಡು ಅದರಲೆ ಒಂದೆಳಿ ಹತ್ರನs ಅಗದೀ ಕಿಂಚಿತ್ ಕಡಮಿ ಪಾಕ ಮಾಡೂದು. ಸಕ್ರಿ ಕರಗೂ ಪೂರ್ತೆ ನೀರ ಹಾಕಿ , ಸಕ್ರಿ ಕರಗಿತಂದ್ರ ಹಾಲ ಹಾಕಿ ಹಾಲಿನ್ಯಾಗನs ಈ ಪಾಕ ಮಾಡಬೇಕು. ಹಾಲ ಹಾಕಿ ಅದ ಕುದೀಲಿಕ್ಹತ್ತಂಗ ಸಕ್ರಿಯೊಳಗಿನ ಕಸರು, ಸಕ್ರಿದ ತೆಳು ಕಂದ ಬಣ್ಣಾ ಬಿಡ್ಲಿಕ್ಹತ್ತದ. ಆಗ ಅದನ್ನ ಸ್ವಚ್ಛ ಶುಭ್ರ ಬಿಳಿ ನೂಲಿನ ಅರಿವಿಲೇ ಸೋಸಬೇಕು. ಮತ್ತ ಅದನ್ನ ಕುದಿಲಿಕ್ಕಿಡಬೇಕು. ಪಾಕ ಆಗಲಿಕ್ಕ ಬಂದಾಗ ಅದಕ ಒಂದು ನಿಂಬೆ ಹಣ್ಣಿನ ರಸ ಹಿಂಡಿ ಕುದಿಸಿ ಹದಾ ಬಂದ ಕೂಡಲೆ ಕೆಳಗಿಳಿಸಿ ಮತ್ತೆರಡ ಸಲಾ ಸೋಸಬೇಕು. ಪ್ರತಿ ಬಾರಿ ಬೇರೇನ ಅರಿವಿ ಬಳಸಬೇಕು.ಈಗ ಶುಭ್ರ ಪಾಕ ತಯಾರ; ಅಂದ್ರ ಕುಸರೆಳ್ಳಿನ ಪಾಕ ತಯಾರ ಆಧಂಗ ಲೆಕ್ಕ.ಅದರ ಹದಾ ಗೊತ್ತಾಗ್ಲಿಕ್ಕೆ ಒಂಚೂರ ಜಾಸ್ತಿನೇ ಪಾರಖಪಣ ಬೇಕಾಗ್ತದ. ನಮ್ಮ ಏಕಾಗ ಅದು ಮಸ್ತ್ ಜಮಾಸಿತ್ತು. ಆಕಿ ಮಾಡಿದ ಪಾಕಲೆ ಅಗದೀ ಛಂದ ನಾಜೂಕ ಕುಸರು ಬಂದು, ಬೆಳ್ಳಗ ಶುಭ್ರ ಕುಸುರೆಳ್ಳು ತಯಾರ ಆಗ್ತಿದ್ದು. ಹೆಚ್ಚು ಕಡಿಮಿ ಆಜೂ ಬಾಜೂದವರು, ಪರಿಚಯದವ್ರು ನಮ್ಮ ಏಕಾನ ಕಡೆ ಪಾಕ ಮಾಡಿಸ್ಕೋತಿದ್ರು. ನನಗೂ ಪಾಕ ಮಾಡೂದು ಗೊತ್ತದ; ಖರೆ ನಾ ಎಂದೂ ಮಾಡಿಲ್ಲ. ಅಲ್ಲಿರೂ ತನಕಾ ಏಕಾ ಪಾಕ ಮಾಡ್ತಿದ್ಲು ; ನಾನು, ಅವ್ವಾ, ಏಕಾ ಮೂರೂ ಮಂದಿ ಎಳ್ಳ ಹಚ್ಚತಿದ್ವಿ. ಆ ಮ್ಯಾಲ ನಾ ಬಿಟ್ಟ ಹಂಗೇ ಆತು ಕುಸುರೆಳ್ಳಿನ ಕೆಲಸಾ.

ಎಳ್ಳ ಹಚ್ಚಲಿಕ್ಕೆ (ಕುಸರೆಳ್ಳ ಮಾಡೂದಕ ಎಳ್ಳ ಹಚ್ಚೂದು ಅನೋ ರೂಢಿ) ಶೇಗಡಿನs ಬರೋಬ್ಬರಿ ಆಗ್ತದ. ಶೇಗಡಿ ಮ್ಯಾಲ ಮಂದ ಕೆಂಡದ ಮ್ಯಾಲೆ ದಪ್ಪ ತಳದ ಹಿತ್ತಾಳೆ ಬುಟ್ಟಿಯೊಳಗ ಮಾಡಬೇಕು. ಎರಡ ಬುಟ್ಟಿ ಬೇಕಾಗ್ತಾವ ಇದಕ. ಪಾಕ ಒಂದು ಸಣ್ಣ ಭಾಂಡಿಯೊಳಗ ಸ್ವಲ್ಪ ತಕ್ಕೊಂಡು ಉಳಿದ ಪಾಕ ಸ್ವಚ್ಛ ಒಣಾ ಕಾಜಿನ ಭರಣಿಯೊಳಗ ಹಾಕಿ ಗಟ್ಟಿ ಬಾಯಿ ಮುಚ್ಚಿ ಸ್ವಚ್ಛ ಬಿಳೇ ಅರಿವಿಲೆ ಬಾಯಿ ಕಟ್ಟಿ ಭಾಳ ಜ್ವಾಕೀಲೇ ಇಡಬೇಕು. ಧೂಳ ಸೇರಿ ಕಪ್ಪ ಒಡೀಧಂಗ ಕಾಯಬೇಕು ಆ ಪಾಕಾನ. ಒಟ್ಟ ಇಲ್ಲಿ ಸ್ವಚ್ಛತಾ ಭಾಳ ಮುಖ್ಯ.ಕೈ ಹಿಡೀಲಿಕ್ಕೆ, ಬುಟ್ಟಿ ಒರಸಲಿಕ್ಕೆ, ಹಚ್ಚಿದ ಎಳ್ಳು ಆರಲಿಕ್ಕ ಇಡ್ಲಿಕ್ಕೆ ಎಲ್ಲಾದಕೂ ಸ್ವಚ್ಛ ಬಿಳೇ ಅರವೀನs ಬೇಕು. ಅದಕ ನಮ್ಮ ಏಕಾ ಕರವತ್ತ ಕಾಟಿ ಅಂಥಾ ಬೆಳ್ಳಗಿಂದ ಒಂದ ಧೋತರಾನs ಹವಣಿ ಚೌಕ ಚೌಕ ತುಂಡ ಮಾಡಿ ಇಡ್ತಿದ್ಲು.
ಇಷ್ಟ ತಯಾರಿ ಮಾಡ್ಕೊಂಡು ಎಳ್ಳು ಹಚ್ಚು ಕೆಲಸ ಸುರು ಇನ್ನ. ಶೇಗಡಿಯೊಳಗ ಸಣ್ಣ ಕೆಂಡಾ ಮಾಡಿ ಹಿತ್ತಾಳಿ ಬುಟ್ಟಿ ಇಡಬೇಕು. ಅದರೊಳಗ ಬಿಳಿ ಎಳ್ಳು (ಎದಕ ಎಳ್ಳು ಹಚ್ಚೂದದನೋ ಆ ಕಾಳು) ಹಾಕಬೇಕು. ಕೈಯಾಡಿಸಿ ಸ್ವಲ್ಪ ಬಿಸಿ ಆದಮ್ಯಾಲೆ ಸಣ್ಣಭಾಂಡಿಯೊಳಗ ತಕ್ಕೊಂಡ ಪಾಕನ ಒಂದು ಸಣ್ಣ ಚಮಚಾದ್ಲೆ ಸ್ವಲ್ಪ ಹಾಕಿ ಕೈಯಾಡಸಬೇಕು. ಅಂದ್ರ ಕೈಲೇನ ಅಗದೀ ಹಗೂರ ಹಂಗ ಕೈ ಬೆರಳ ತುದಿಯಿಂದ ಕೈಯಾಡಿಸ ಬೇಕು. ಚಮಚಾ ಅಜೀಬಾತ ಬಳಸೋ ಹಂಗಿಲ್ಲ. ಭಾಳ ನಾಜೂಕಪಣಲೆ , ಸಮಾಧಾನಲೇ ಈ ಕೆಲಸ ಆಗಬೇಕು. ಆ ಪಾಕು ಇಂಗಿದ ಹಂಗ ಆದಕೂಡಲೆ ಮತ್ತ ಸ್ವಲ್ಪ ಪಾಕ ಹಾಕಿ ಕೈಯಾಡಿಸಿಗೋತ ಇರಬೇಕು. ಬುಟ್ಟಿ ಚೂರ ಬಿಸಿ ಆತಂದ್ರ ಶೇಗಡಿ ಮ್ಯಾಲಿಂದ ಕೆಳಗಿಳಿಸಿ ಹಂಗs ಕೈಯಾಡಿಸಿಗೋತನ ಇರೂದು. ಬುಟ್ಟಿ ಒಂಚೂರ ಆರಿಧಾಂಗ ಆತಂದ್ರ ಅದನ ಮತ್ತ ಶೇಗಡಿ ಮ್ಯಾಲ ಇಡಬೇಕು; ಎಳ್ಳ ಹಚ್ಚೂದು ಹಂಗs ಮುಂದವರಸೂದು. ಒಂದ ಹತ್ತು ನಿಮಿಷ ಆಗೂದ್ರಾಗ ಪಾಕ ಗಟ್ಟಿಯಾಗಿ ಬುಟ್ಟಿ ತಳಕ್ಕ ಹತ್ತಿಧಾಂಗ ಆಗ್ತದ. ಆಗ ಪಟಕ್ಕನ ಆ ಬುಟ್ಟಿ ಒಳಗಿನ ಎಳ್ಳು ಇನ್ನೊಂದ ಬುಟ್ಟಿಗೆ ಹಾಕಿ ಆ ಬುಟ್ಟಿ ಈಗ ಶೇಗಡಿ ಮ್ಯಾಲ ಇಡಬೇಕು. ಕೈಯಾಡಸೂದ್ರಾಗ ಮಾತ್ರ ಕಿಂಚಿತ್ ಸುದ್ಧಾ ಹೈಗೈ ಆಗಬಾರದು. ಆ ಮೊದಲಿನ ಬುಟ್ಟಿಗೆ ಸ್ವಲ್ಪ ನೀರ ಹಾಕಿ ಇಡಬೇಕು. ಈಗ ಶೇಗಡಿ ಮ್ಯಾಲ ಇರೂ ಬುಟ್ಟಿಗೆ ಪಾಕ ಹತ್ತೂದ್ರಾಗ ಅದ ಸ್ಥಚ್ಛ ಆಗಿರತದ. ಆಗ ಅದನ್ನ ತಗೋಳದು ಮತ್ತ. ಹೀಂಗs ಮಾಡಕೋತ ಹೋಗೂದು.
ಅದಕs ನಾ ಹೇಳ್ತಿದ್ದೆ ನಮ್ಮ ಏಕಾಗ -” ಏಕಾ ಈ ಕುಸುರೆಳ್ಳು ಮಾಡೂ ಕೆಲಸಾ ನಮ್ಮ ಸಹನಶೀಲತಾ , ಶಾಣ್ಯಾತನಾ, ನಾಜೂಕತನಾ ಎಲ್ಲಾನೂ ಒರೀಗ್ಹಚ್ಚಿ ನೋಡ್ತದ ನೋಡ ” ಅಂತ. ಸ್ವಲ್ಪ ಪಾಕ ಹತ್ತಿದಂದ್ರ ಎಳ್ಳಿನ ಮ್ಯಾಲೆ ಸಕ್ರಿಪಾಕದ್ದು ಒಂದ ಪದರ ಕೂಡ್ತದ. ಹಂಗs ಚೂರ ಚೂರ ಪಾಕ ಹಾಕೋತ, ಕೈಯಾಡಿಸ್ಕೋತ ಹೋಧಂಗ ಕಾಳಿನ ಸೈಜು ದೊಡ್ಡವಗ್ತಾವ; ಸಣ್ಣ ಸಣ್ಣ ನಾಜೂಕ ಕುಸುರೂ ಬರತಾವ. ಈ ಕುಸರ ಬಂದ ಮ್ಯಾಲ ಅವಕ ಧಕ್ಕಿ ಆಗಧಾಂಗ, ಮುರೀಧಾಂಗ , ಕೈಗೂ ಝಳಾ ಹತ್ತಧಾಂಗ ಭಾಳ ಸಂಭಾಳಿಸಿಕೊಂಡು ಮಾಡ ಬೇಕಾಗ್ತದ. ಸ್ವಲ್ಪ ವ್ಯಾಳ್ಯಾ ತಗೋಳು ಕೆಲಸ ಇದು. ಹೆಚ್ಚು ಕಡಿಮಿ ಬೆಳಗ ಮುಂಜಾನೆ ತಂಪ ಹೊತ್ತಿನ್ಯಾಗ ನಾವು ಎಳ್ಳ ಹಚ್ಚಲಿಕ್ಕೆ ಕೂಡ್ತಿದ್ವಿ. ಮತ್ತ ಸವಡ ಸಿಕ್ಕಾಗ ಮಾಡಬಹುದು; ಆದ್ರ ಪ್ರಶಸ್ತ ವ್ಯಾಳ್ಯಾ ಅಂದ್ರ ಬೆಳಗ ಮುಂಜಾನೆ ಮತ್ತ ರಾತ್ರಿ. ನಾ ಮೊದಲ ಸರ್ತೆ ಎಳ್ಳ ಹಚ್ಚಿದ್ದು ಎಂಟನೇ ಕ್ಲಾಸ್ ನಲ್ಲಿದ್ದಾಗ. ಶೇಂಗಾ ಕಾಳಿಗೆ, ಚುನಮುರಿಗೆ ಹಚ್ಚಿದ್ದ ನಾ. ಅದs ಪಾಕಕ್ಕ ಜೀಲೆಬಿ ಬಣ್ಣ, ಕೇಶರಾ ಹಾಕಿ ಬಣ್ಣದ ಕುಸುರೆಳ್ಳ ಮಾಡೂದು. ಹಂಗೇ ಬ್ಯಾರೆ ಬ್ಯಾರೆ ಫುಡ್ ಕಲರ್ ಬಳಸ ಬಹುದು. ನಮ್ಮ ಏಕಾಂದು ಅವ್ವಾಂದು ಎಳ್ಳು ಪ್ರದರ್ಶನಕ್ಕ ಇಡೂ ಹಂಗ ಆಗಿರತಿದ್ದು; ಹಂಗs ನನ್ನೂನೂ!
ಹೀಂಗ ತಯಾರಾದ ಕುಸುರೆಳ್ಳು ಸಂಕ್ರಾಂತಿ ದಿನಾ ಕೊಡೂದು- ತಗೋಳೂದು ನಡೀತದ. ಕೊಡು ಮುಂದೆ ” ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು; ಎಳ್ಳು ಬೆಲ್ಲ ತಗೊಂಡ ಎಳ್ಳು ಬೆಲ್ಲಧಂಗ ಇರೂಣು ” ಅಂತ ಹೇಳೂದ ಪದ್ಧತಿ.
ನಮ್ಮ ಕಡೆ ಮತ್ತ ಜಾಸ್ತಿತ ಜಾಸ್ತ ಮಹಾರಾಷ್ಟ್ರದಾಗ ಈ ಕುಸುರೆಳ್ಳಿನ ದಾಗೀನ ಮಾಡೂದು ಭಾಳ ಚಾಲ್ತಿಯೊಳಗ ಅದ. ಸಣ್ಣ ಮಕ್ಕಳಿಗೆ ಸಂಕ್ರಾಂತಿ ಕರಿ ಎರಿಯೂ ವ್ಯಾಳ್ಯಾಕ್ಕ ಕುಸುರೆಳ್ಳಿನ ಕಿರೀಟಾ, ಸರಾ, ಬಾಜೂಬಂದ್, ಬಳಿ , ಕೈಯಾಗ ಹಿಡ್ಕೊಳ್ಳಿಕ್ಕೆ ಮಾಟ ಕೊಳಲು ಎಲ್ಲಾ ಮಾಡಿ ಹಾಕಿ ಕರಿ ಎರೀತಾರ.
ಮದವಿ ಆದ ಮೊದಲ ವರ್ಷ ಹೆಣ್ಮಕ್ಕಳಿಗೂ ರಥಸಪ್ತಮಿ ದಿವಸ ಕರೀ ಸೀರಿ, ಎಳ್ಳಿನ ದಾಗೀನ ಅಂದ್ರ ವಸ್ತಾ ಹಾಕಿ ಆರತಿ ಮಾಡೂ ರಿವಾಜ ಅದ. ಈ ವಸ್ತಾ ಎಲ್ಲಾ ಮಾಡೂದ್ರಾಗ ನಮ್ಮ ಏಕಾಂದು ತಲಿ, ಕೈ ಅಗದೀ ಸರಳ ಓಡ್ತಿತ್ತು. ಈ ದಾಗೀನ ಎಲ್ಲಾ ಮಾಡ್ಲಿಕ್ಕೆ ಶೇಂಗಾ, ಪುಠಾಣಿ, ಚುನಮುರಿ, ದಪ್ಪ ಅವಲಕ್ಕಿ, ಲವಂಗ, ಸಾಬೂದಾಣಿ – ಇಂಥಾವಕೆಲ್ಲಾ ಹಚ್ಚಿದ ಎಳ್ಳು ಹೆಚ್ಚ ಬೇಕಾಗ್ತದ. ನಮ್ಮ ಏಕಾನ ಸೋಬತಿಯೊಳಗ ನನಗೂ ಇಂಥಾವೆಲ್ಲಾ ಹವ್ಯಾಸ ಭಾಳೇ ಅಂಟಿಕೊಂಡಿದ್ದು.ಅಭ್ಯಾಸದ ಗದ್ದಲದಾಗನs ವ್ಯಾಳ್ಯಾ ತಗದು ನಾನೂ ಮಾಡ್ತಿದ್ದೆ.
ನಮ್ಮ ಏಕಾಂದು ಒಂದ ಗುಣಾ ನನ್ನ ಮ್ಯಾಲ ಭಾಳ ಆಳ ಪರಿಣಾಮ ಮಾಡೇದ; ಹಂಗs ಭಾಳ ವಿಶೇಷ ಅದು ಅಂತಾನೂ ಅನಸ್ತದ. ಎಲ್ಲಿ ಹೆಂಗ ಹಂಗs ನಡದ ಬಿಡಾಕಿ. ಅಲ್ಲೆ ಹೊಲದಾಗ ಪಕ್ಕಾ ಮಾಲ್ಕೀತನ. ವ್ಯಾಳ್ಯಾ ಬಂತಂದ್ರ ಆಳಿನ ಜೋಡಿ ಆಳಾಗಿ ದುಡ್ಯಾಕಿ. ಆ ಕೆಲಸದಾಗ ಪೂರಾ ಏಕ ಆಗಿ ಬಿಡ್ತಿದ್ಲು ಏಕಾ. ಇಲ್ಲೆ ಹುಕ್ಕೇರಿಗೆ ಬಂದ್ಲಂದ್ರ ಇಲ್ಲೀನ ಕೆಲಸದಾಗೂ ಅದs ಥರಾ ಏಕಜೀವ ಆಗ್ತಿದ್ಲು ಆಕಿ. ಬೆಳವಿ ಒಂದು ದೊಡ್ಡ ಗುಡ್ಡದ ಬಗಲಾಗ, ಅದರ ನೆಳ್ಳಿನ್ಯಾಗ ನಿಂತ ಸಣ್ಣ ಹಳ್ಳಿ. ಆ ಊರ ಗ್ರಾಮದೇವತೆ ಗುಡದವ್ವ ; ಅಂದ್ರ ಗುಡ್ಡದ ಅವ್ವ ಅಂತ.ಬೆಳವ್ಯಾಗ ಇರೂ ತನಕಾ ಪ್ರತಿ ಹುಣ್ಣಿವಿಗೊಮ್ಮೆ ನಡಕೋತ ಗುಡದವ್ವಗ ಹೋಗಿ ಬರ್ತಿದ್ಲು. ಬರೀಗಾಲಲೆ ಗುಡ್ಡಾ ಹತ್ತಿಹೋಗಿ ದರ್ಶನಾ ಮಾಡ್ಕೊಂಡು, ಕಾಯಿ ಒಡೆಸ್ಕೊಂಡ ಬರೋ ಪದ್ಧತಿ ಇಟ್ಕೊಂಡಿದ್ಲು. ನಮ್ಮ ಹೊಲದಿಂದ ಮೂರ-ನಾಕ ಮೈಲಿ ಆಗ್ತಿತ್ತು. ಸುಗ್ಗಿ ಮುಗದು ಹೊಲದ ಕೆಲಸ ಎಲ್ಲಾ ಒಂದ ಹೊಂದಿಗೆ ಬಂತಂದ್ರ ಹುಕ್ಕೇರಿಗೆ ಬರೂಕಿಂತಾ ಮೊದಲ ಮಡೀಲೆ ಹೋಳಿಗಿ ನೈವೇದ್ಯ ಗುಡದವ್ವಗ ಕೊಟ್ಟs ಆಮ್ಯಾಲ ಹುಕ್ಕೇರಿಗೆ ಬರತಿದ್ಲು. ಈ ಭಕ್ತಿ ಶ್ರದ್ಧಾ ಒಳಗನೂ ನನಗ ಕುಸುರೆಳ್ಳ ಮಾಡೂವಾಗಿನ ಆಸ್ಥೆ, ಅಕರಾಸ್ಥೀನs ಕಾಣಸ್ತಿತ್ತು. ಏಕಾನ ಈ ಗುಣದ ಪ್ರಭಾವ ಭಾಳ ಆಳ.
ಮದವಿ ಮಾಡ್ಕೊಂಡ ಹೋದ ಹೆಣ್ಮಕ್ಕಳು ಗುಡದವ್ವಗ ಸೀರಿ ಉಡಿಸಿ ಉಡಿ ತುಂಬಿ ನೈವೇದ್ಯ ಮಾಡಸೂದೊಂದ ರಿವಾಜ ಅದ ಅಲ್ಲೆ. ಹಂಗ ನಾ ನನ್ನ ಎರಡನೇ ಮಗಳು ಸಣ್ಣಾಕಿ ಇದ್ದಾಗ ಗುಡದವ್ವಗ ನೈವೇದ್ಯ ಮಾಡಿ ಸೀರಿ ಉಡಿಸಿ ಉಡಿ ತುಂಬಿದೆ. ಆಗ ಏಕಾ ಅಲ್ಲೇ ಬೆಳವ್ಯಾಗs ಇದ್ಲು.ನಾವು ಹುಕ್ಕೇರಿಂದ ರಾಯಪ್ಪನ ಚಕಡಿಯೊಳಗ ಹೋಗಿದ್ವಿ. ನಮ್ಮ ಚಕಡಿ ಗುಡ್ಡದ ತಳಕ್ಕ ಬರೂದ್ರಾಗ ನಮ್ಮ ಏಕಾ ನೈವೇದ್ಯ ತಯಾರ ಮಾಡ್ಕೊಂಡ ಶಿಸ್ತಾಗಿ ಕಟ್ಕೊಂಡು ತಗೊಂಡು ಬಂದಿದ್ಲು. ಗುಡ್ಡದ ಮ್ಯಾಲ ಹೋಗಲಿಕ್ಕೆ ಒಂದು ಸಣ್ಣ ಚಕಡಿ ಹಾದೀನೂ ಇತ್ತು. ನಾವು ಸಣ್ಣಾವ್ರೆಲ್ಲಾ ಚಕಡಿ ಒಳಗೆ ಕೂತು ಹೊಂಟ್ವಿ; ದೊಡ್ಡಾಕಿ ನಮ್ಮ ಏಕಾ ಚಕಡಿ ಹಿಂದ ಹಿಂದ ನೈವೇದ್ಯ ತಗೊಂಡು ಬರೀಗಾಲಲೇ ನಡಕೋತ ಗುಡ್ಡಾ ಹತ್ತಿ ಬರಲಿಕ್ಹತ್ತಿದ್ಲು. ನನಗ ಮರೀಲಾಗದ ದೃಶ್ಯ ಅದು. ಮೂಡಗಾಳಿ ದಿವಸ ಅವು; ಭsರ ಬಾರಾದ ಚುರಕ ಬಿಸಿಲು. ಅಂಥಾ ಬಿಸಲಾಗ ನಮ್ಮ ಏಕಾ ಮಾರಿಗೆ , ಥೋಡೆ ಕಣ್ಣಿಗೂ ಮರಿ ಆಗೂ ಹಂಗ ಕೈ ಅಡ್ಡ ಇಟ್ಟುಕೊಂಡು ಗುಡ್ಡಾ ಹತ್ಲಿಕ್ಹತ್ತಿದ್ಲು; ಆಕಿ ಉಟ್ಕೊಂಡ ಕೆಂಪ ರಾಸ್ತಾ ಇದ್ದ ಗುಲಾಬಿ ಬಣ್ಣದ ಸೀರಿಕಿಂತಾ ಆಕಿ ಮಾರಿ ಕೆಂಪ ಆಗಿತ್ತು ಬಿಸಿಲಿಗೆ. ಅಲ್ಲೆ ಅಡವ್ಯಾಗಿನ ಥಂಡಿ ಒಣಾ ಹವಾಕ್ಕ ಮೈ ಮಾರಿ ಒಡದ್ಹಾಂಗ ಆಗಿತ್ತು. ಅದ ಯಾವುದರದೂ ದರಕಾರೇ ಇಲ್ಲ ಅಕಿಗೆ. ಹಂಗ ಬರಲೀಕ್ಹತ್ತಿದ್ಲು. ” ಏಕಾ ನೀನೂ ಚಕಡ್ಯಾಗನ ಬಂದ ಬಿಡು” ಅಂತ ಕರದ್ರ ಸಾಧ್ಯನ ಇಲ್ಲ.” ಅಯ್ಯ ಬಾಳಾ ನಡೀರಿ ನೀವು. ಅದೆಷ್ಟ ದೂರ ಅದ. ಅಕಾ ಅಲ್ನೋಡ ಗುಡಿ ಕಳಸ ಕಾಣ್ಲಿಕ್ಹತ್ತೇದ ನೋಡ ‘ ಅನಾಕಿ.
ಅಂದೂ ನನ್ನ ಕಣ್ಣು ಡಬಡಬಿಸಿದ್ದು; ಇಂದೂ ಇದನ ಬರಿಯೂ ಮುಂದೆ ಕಣ್ಣು ಮಂಜು ಮುಸುಕಿದ ಹಂಗಾಗೇದ. ಇಂಥಾ ಏಕಾ ಎಲ್ಲಿ ಸಿಕ್ಕಾಳು? ನಮ್ಮ ಪುಣ್ಯ ಭಾಳ ಜಾಡ ಅಂತ ಅನಸ್ತದ ನನಗ, ಹಜಾರ ಸರ್ತೆ ಅನಸ್ತದ.
ಗುಡದವ್ವ ಬೆಳವಿ ಗ್ರಾಮದೇವತೆ ಇದ್ಧಾಂಗ ಹುಕ್ಕೇರಿ ಗ್ರಾಮದೇವತಾ ಬಡಕುಂದ್ರಿ ಲಕ್ಷ್ಮಿ, ಹೊಳೆವ್ವ. ಬಡಕುಂದ್ರಿ ಊರ ತುದಿಗೆ ಹರೀತಿದ್ದ ಹಿರಣ್ಯಕೇಶಿ ನದಿ ದಂಡಿ ಮ್ಯಾಲ ಈ ಲಕ್ಷ್ಮಿ ಗುಡಿ ಅದ. ಅದಕ ಆಕೀಗೆ ಹೊಳೆವ್ವ ಅಂತನs ಕರೀತಾರ; ಹಂಗs ಪ್ರಸಿದ್ಧ ಆಗ್ಯಾಳ ಈ ಲಕ್ಷ್ಮಿ. ಹೊಳೆವ್ವನ ಜಾತ್ರಿ ದsರ ವರ್ಷ ಭಾರತ ಹುಣ್ಣಿವಿಗೆ ಸುರು ಆಗ್ತದ; ಹುಣ್ಣಿವಿ ಹಿಂದ ಮುಂದ ಬರೂ ಮಂಗಳವಾರ ಅಥವಾ ಶುಕ್ರವಾರ ಸುರು ಆಗ್ತದ. ಮೊದಲನೇ ವಾರ ಅಂದ್ರ ಜಾತ್ರಿ ಸುರು ಆದದ್ದ ದಿನಾ ಭರಜಾತ್ರಿ ಅಂತಾರ; ಮೂರನೇ ವಾರ ನಡುವಿನ ಜಾತ್ರಿ; ಐದನೇ ವಾರದ್ದು ಕಡೀ ಜಾತ್ರಿ. ಒಟ್ಟು ಐದವಾರ ಹೊಳೆವ್ವನ ಜಾತ್ರಿ ನಡೀತದ. ಸುತ್ತ ಮುತ್ತ ಎಲ್ಲಾ ಆ ಜಾತ್ರಿ ಭಾಳ ಪ್ರಸಿದ್ಧ ಮತ್ತ ದೊಡ್ಡ ಜಾತ್ರಿನೂ ಹೌದು.
ಭಾರತ ಹುಣ್ಣಿವಿಕಿಂತ ಅಂದ್ರ ಜಾತ್ರಿ ಸುರು ಆಗೂಕಿಂತಾ ಮೊದಲೇ ಐದು ಶುಕ್ರವಾರ ಇಲ್ಲಾ ಐದು ಮಂಗಳವಾರ ಹೊಳೆವ್ವಗ ಹುಕ್ಕೇರಿಂದ ನಡಕೋತ ಹೋಗಿ ಬರ್ತಾರ. ಅದಕ ವಾರಾ ಮಾಡೂದು ಅಂತಾರ. ಹೆಚ್ಚು ಕಡಿಮಿ ಎಲ್ಲಾರ ಮನಿಂದನೂ ದೊಡ್ಡಾವರು ಒಬ್ರು, ಇಬ್ರು ವಾರಾ ಮಾಡೇ ಮಾಡ್ತಾರ. ಐದನೇ ವಾರ ಹೊಳೆವ್ವಗ ನೈವೇದ್ಯ ಕೊಟ್ಟು ವಾರಾ ಮುಗಸೂದು. ಹೀಂಗ ಪದ್ಧತಿ ಅದ. ಒಂದ ವರ್ಷನೂ ತಪ್ಪದs ಏಕಾ ವಾರಾ ಮಾಡ್ತಿದ್ಲು. ಬೆಳಕ ಹರ್ಯೂದ್ರಾಗ ತಂಪ ಹೊತ್ತಿನ್ಯಾಗ ಹೊಂಟ ಬಿಡ್ತಿದ್ಲು. ಹುಕ್ಕೇರಿಂದ ಹೊಳೆವ್ವನ ಗುಡಿ ಐದಾರ ಮೈಲ ಸಹಜ ಆಗ್ತದ. ಆಮ್ಯಾಲ ಕಡೀ ವಾರ ನೈವೇದ್ಯ ಕೋಡೂದು.

ಒಂದೊಂದ ಸಲಾ ನದಿಯೊಳಗ ನೀರ ಛಲೋ ಇತ್ತಂದ್ರ ಆ ಪ್ರಕಾರ ಛಂಧಂಗ ಬೇಜಿಮಿ ಮಾಡ್ಕೊಂಡು ಅಲ್ಲೇ ನದಿ ದಂಡಿ ಮ್ಯಾಲ ಒಲಿ ಹೂಡಿ ಮಡೀಲೇ ಅಡಿಗಿ ಮಾಡಿ ನೈವೇದ್ಯ ಮಾಡಿದ್ದೂ ಅದ. ಹಂಗಿದ್ದಾಗ ನಾವೂ ಎಲ್ಲಾ ಹೋಗ್ತಿದ್ವಿ. ಆ ದಿವಸ ನಾವು ಹುಡುಗೂರು, ಅವ್ವಾ ಎಲ್ಲಾ ಸಾಮಾನ- ಸರಂಜಾಮು ಇಟ್ಕೊಂಡು ರಾಯಪ್ಪನ ಚಕಡಿಯೊಳಗ ಹೋಗ್ತಿದ್ವಿ. ಏಕಾ ಮೊದಲs ನಡಕೋತ ಹೋಗಿರತಿದ್ಲು. ನಾವು ಅಲ್ಲಿಗ ಮುಟ್ಟೂದ್ರಾಗ ಏಕಾಂದು ದರ್ಶನ, ನಮಸ್ಕಾರ ಪ್ರದಕ್ಷಿಣಿ ಎಲ್ಲಾ ಮುಗಿದಿರತಿತ್ತು.
ಅಲ್ಲೆ ನದಿ ದಂಡಿ ಮ್ಯಾಲ ಗುಂಪ ಗುಂಪ ಗಿಡಾ ಅವ. ಭಾಳ ಛಂದ ನೆರಳ ಇರೋದಲ್ಲಿ. ರಾಯಪ್ಪ ಅಲ್ಲೆ ನೆಳ್ಳಾಗ ಒಂದ ಛಲೋ ಜಾಗಾ ನೋಡಿ, ಸ್ವಚ್ಛ ಮಾಡಿ ಮೂರ ಕಲ್ಲ ಇಟ್ಟು ಒಲಿ ಹೂಡಿ ಕೊಡ್ತಿದ್ದ. ಏಕಾ ನದಿಯೊಳಗ ಸ್ನಾನಾ ಮಾಡಿ ಬಂದು ಅದೇ ಒದ್ದೀಲೇನs ಮಡಿ ಅಡಿಗಿ ಮಾಡ್ತಿದ್ಲು. ಆಕಿ ಅಡಿಗಿ ಆಗೂ ತನಕಾ ನಮ್ಮದೇನ ಕೆಲಸಾ; ನೀರಾಟಾ ಆಡಕೋತ ಹುಡದಿ ಹಾಕೂದು, ಹಾಡ ಹಾಡೂದು, ಪತ್ತೆ ಆಡೂದು . ಈ ದಾಂಧಲೆಯೊಳಗ ವ್ಯಾಳ್ಯಾ ಸರದದ್ದೇ ಗೊತ್ತಾಗ್ತಿದ್ದಿಲ್ಲ. ಆ ಮ್ಯಾಲ ಆ ನದಿ ದಂಡಿ ಮ್ಯಾಲ, ಗಿಡದ ನೆಳ್ಳಾಗ, ಆ ಬಯಲಿನ್ಯಾಗ ನಮ್ಮ ಏಕಾನ ಕೈಯಡಗಿ ಊಟಾ! ಆ ಮಜಾನ ಬ್ಯಾರೆ; ಗರ್ದಿ ಗಮ್ಮತ್ತ ಅದು. ಎಲ್ಲಿ ಹೆಂಗ ಆ ದಿನ ಹೋದು ಅನಸ್ತದ ಈಗ. ನಮ್ಮಣ್ಣ ಈಗ ಪ್ಲಾನ್ ಮಾಡ್ಲಿಕ್ಹತ್ಯಾನ – ಒಂದು ಹ್ಯಾಂಡಿ ಗ್ಯಾಸ್ ತಗೊಂಡ ಹೋಗಿ ನದಿ ದಂಡಿ ಮ್ಯಾಲ ಒಂದ ಅನ್ನಾ – ಝುಣಕಾ ಮಾಡಿ ಊಟಾ ಮಾಡೂದ ಅಂತ. ಇಷ್ಟ್ರಾಗ ನದಿ ದಂಡಿ ಊಟಾ ಮತ್ತ ಘಡಾಸೂದ ಅದ ಅಂತ ಅನ್ಕೋಳಿಕ್ಹತ್ತೀವಿ ಎಲ್ಲಾರೂ.
ಹೀಂಗ ಇತ್ತು ನಮ್ಮ ಬಾಲ್ಯ ಏಕಾನ ಸೋಬತಿಯೊಳಗ ; ಹಿಂಗಿದ್ಲು ನಮ್ಮ ಏಕಾ. ಏಕಾನ್ನ ಒಂದೊಂದ ರೀತಿಯೊಳಗ ನೋಡಿದಾಗ ನನಗ ಅನಸೂದು- ದೇವರು ನಮ್ಮ ಏಕಾಗ ಎಲ್ಲಾ ಥರದ ಶಾಣ್ಯಾತನ ಅಗದೀ ಕೈ ಬಿಟ್ಟ ಕೊಟ್ಟಾನ ಅಂತ. ಹೌದು ಆಕೀ ಜೀವನಾನ ಘನಘೋರ ಮಾಡಿದ್ದಕ್ಕ ಅಪರಾಧೀ ಭಾವ ಕಾಡಿರಬೇಕು ಅಂವಗೂ. ಅದಕs ಶಾಣ್ಯಾತನ ಭರಪೂರ ಕೊಟ್ಟು ಆ ಬಾಜು ಮಜಬೂತ ಮಾಡ್ಯಾನ. ಅದರ ನೆಳ್ಳಾಗ ಇದ್ದದ್ರಾಗ ಖುಷಿ ಹುಡಕಿದ್ಲು ಏಕಾ. ತನ್ನ ಮಗನಿಗೂ ಅದನ್ನೇ ಕಲಸಿದ್ಲು. ಪೂರಾ ಮನೀತನಕ್ಕ ಅದೊಂದು ಅಖಂಡ ಖಜಾನಾದಂಥಾ ದೇಣಿಗಿ ಆಗಿ ಬಂತು. ಪ್ರತಿಯೊಂದ ಕೆಲಸದಾಗ ತನ್ನ ಸ್ವಂತಿಕೆ ಇಟ್ಟು ಅಗದೀ ಚೊಕ್ಕ ಮಾಡ್ತಿದ್ಲು ಆ ಕೆಲಸ ಏಕಾ. ಅದs ಬಲಬೂತೀಲೇ ಆಕೀ ಕರಳಕುಡಿ, ಅದರ ಚಿಗುರು ಎಷ್ಟೆತ್ತರಕ ಬೆಳದು!
ಅರ್ಧವಟಕ್ಕ ಬಾಡಿದ ತನ್ನ ಬದುಕನ್ನ ಹೀಂಗ ತನ್ನ ಸ್ವಂತಿಕೆಯಿಂದ ಅಸರಂತ ಮಲಮಲಸೂ ಹಂಗ ಚೊಕ್ಕ ಮಾಡಿದ್ಲು ನಮ್ಮ ಏಕಾ!
| ಇನ್ನು ಮುಂದಿನ ವಾರಕ್ಕೆ |
ಮೂಡಗಾಳಿ ದಿವಸ ಅವು; ಭsರ ಬಾರಾದ ಚುರಕ ಬಿಸಿಲು. ಅಂಥಾ ಬಿಸಲಾಗ ನಮ್ಮ ಏಕಾ ಮಾರಿಗೆ , ಥೋಡೆ ಕಣ್ಣಿಗೂ ಮರಿ ಆಗೂ ಹಂಗ ಕೈ ಅಡ್ಡ ಇಟ್ಟುಕೊಂಡು ಗುಡ್ಡಾ ಹತ್ಲಿಕ್ಹತ್ತಿದ್ಲು; ಆಕಿ ಉಟ್ಕೊಂಡ ಕೆಂಪ ರಾಸ್ತಾ ಇದ್ದ ಗುಲಾಬಿ ಬಣ್ಣದ ಸೀರಿಕಿಂತಾ ಆಕಿ ಮಾರಿ ಕೆಂಪ ಆಗಿತ್ತು ಬಿಸಿಲಿಗೆ. ಅಲ್ಲೆ ಅಡವ್ಯಾಗಿನ ಥಂಡಿ ಒಣಾ ಹವಾಕ್ಕ ಮೈ ಮಾರಿ ಒಡದ್ಹಾಂಗ ಆಗಿತ್ತು. ಅದ ಯಾವುದರದೂ ದರಕಾರೇ ಇಲ್ಲ ಅಕಿಗೆ. ಹಂಗ ಬರಲೀಕ್ಹತ್ತಿದ್ಲು. ”
ನಿಜ ಹೇಳುತ್ತೇನೆ.ಈ ಸಾಲು ಓದುತ್ತಿದ್ದಂತೆ ಕಣ್ತುಂಬಿ ಬಂದಿತು.
ಅವರ ಜೀವನಪ್ರೀತಿಗೆ ದೀರ್ಘದಂಡ ನಮಸ್ಕಾರ
-ರಮೇಶ ಪಟ್ಟಣ,ಕಲಬುರಗಿ
ನಿಜ ಸರ್; ಅಂದೂ ನನ್ನ ಕಣ್ಣ ತುಂಬಿ ಬಂದಿತ್ತು.ಇಂದಂತೂ ಕಣ್ಣು ಕೆರಿ ಆಗೇದ. ಎಂಥಾ ಜೀವ ನಮ್ಮ ಏಕಾ ಅಂತ ನನಗs ಆಶ್ಚರ್ಯ ಆಗ್ತದ.
ನಿಮ್ಮ ಆಸಕ್ತಿ ಸ್ಫೂರ್ತಿದಾಯಕ ನಂಗೆ. ನಿಮ್ಮ ಓದು, ಪ್ರತಿಕ್ರಿಯೆ ಕೂಡ ಅಷ್ಟೇ ಅಮೂಲ್ಯ.
ಧನ್ಯವಾದಗಳು ಸರ್
: ಅರ್ದವಟಕ್ಕ ಬಾಡಿದ ತನ್ನ ಬದುಕನ್ನ ತನ್ನ ಸ್ವಂತಿಕೆಯಿಂದ ಅಸರಂತ ಮವಮಲಸೂ ಹಂಗ ಚೊಕ್ಕ ಮಾಡಿದ ಏಕಾ “ಎಲ್ಲರಿಗೂ ಆದರ್ಶ ಪ್ರಾಯ ವ್ಯಕ್ತಿ. ಆ ತಣ್ಣೆಳಲ್ಲಿ ಬೆಳೆದು, ಅವರೊಡನೆ ಅನುಭವಿಸಿದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದ ನಿಮ್ಮ ಬರವಣಿಗೆ ಅಪೂರ್ವ!!! ಕುಸುರೆಳ್ಳ ಮಡುವ ವರ್ಣನೆ ನನ್ನನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯಿತು. ಸುಂದರ ಗಾಜಿನ ಡಬ್ಬಿಯಲ್ಲಿ ಕುಸುರೆಳ್ಳ ತಗೊಂಡು ಆತ್ಮೀಯರೊಡನೆ ಕುಸುರೆಳ್ಳೊಂದಿಗೆ ಸಂಕ್ರಾಂತಿಯ ಶುಭಾಶಯ ಹಂಚಿಕೊಳ್ಳುವದು ,ಗೆಳತಿಯಲ್ಲಿ ಯಾರ ಡಬ್ಬಿ ಸುಂದರ ಎಂಬ ಕುತೂಹಲ, ಸಂಕ್ರಾಂತಿಯ ಸಂಭ್ರಮದ ಸಂಜೆ ನೆನಪಾಯಿತು. ನಿಮ್ಮ “ತಣ್ಣೆಳಲ ಹಾದಿಯಲ್ಲಿ ” ಲೇಖನ ಏಕಾ ಓದಿ ಮೂಗಿನ ಮೇಲೆ ಬೆರಳಿಡುವದು ನಿಶ್ಚಿತ….ನನ್ನ ಬಾಳಾ ಎಷ್ಟು ಬುದ್ಧಿವಂತಳು ಎಂದು ಹೃದಯ ತುಂಬಿ ಹರಸುವಳು…ಅವರ ಚಾಕಚಕ್ಯತೆ ನಿಮ್ಮಲ್ಲಿ ಹಾಸುಹೊಕ್ಕಾಗಿದೆ…
ಶೀಲಾ ಅನಂತ ಧನ್ಯವಾದಗಳು ನಿಮಗೆ. ನಾನೂ ಆ ಕುಸರೆಳ್ಳ ಮಾಡೂದೂ, ದಾಗೀನ ಡಿಸೈನ್ ಹೆಂಗೆಂಗ ಅಂತ ವಿಚಾರ ಮಾಡೂದು, ಸಂಜೀ ಎಳ್ಳು ಕೊಡೂಮುಂದ ದೇಸೀ ಎಳ್ಳಿನ ಡಬ್ಬಿ ಬ್ಯಾರೆ,ಕುಸರೆಳ್ಳಿನ ಡಬ್ಬಿ ಬ್ಯಾರೆ ಈ ಎಲ್ಲಾ ನೆನಪಿನ್ಯಾಗ ತೇಲಕೋತನ ಬರದೀನಿ. ಖರೆ ಒಂದಂತೂ ಶಂಭರ್ ಟಕ್ಕೆ ಹೌದು – ನಮ್ಮ ಏಕಾನ ಕುಸರೆಳ್ಳಿನ ಪಾಕ ಅವ್ವಲ. ಈ ಎಲ್ಲಾದಕ್ಕೂ ಒಂದು ರೂಪ ಕೊಟ್ಟು ಎಲ್ಲಾರ ಮುಂದೆ ಇಡ್ಲಿಕ್ಕೆ ಅವಕಾಶ ಕೊಟ್ಟ ಅವಧಿಗೂ ನಿಮ್ಮೊಂದಿಗೆ ಧನ್ಯವಾದಗಳು ಶೀಲಾ.
ಪ್ರತಿವಾರದಲ್ಲೊಂದು ವೈಶಿಷ್ಠ್ಯ . ಈ ಸಲ ಕುಸುರೆಳ್ಳು ಹಚ್ಚೋದು. ಆ ಚಿಕ್ಕ ಚಿಕ್ಕ ಸಂಗತಿಗಳ ಡಿಟೇಲ್ ವರ್ಣನೆ! ಆಮೇಲೆ ನದಿ ದಂಡೆಯ ಮೇಲೆ ಊಟ. ‘ಜಾನೇ ಕಹಾಞ್ ಗಯೇ ವೋ ದಿನ್!” ಅಂತ ನಮ್ಮ ಉದ್ಗಾರ!
ಅನೇಕ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.ನಿಜ ಆ ದಿನಗಳೇ ಹಾಗೆ; ಕುಸುರೆಳ್ಳಿನ ಸಿಹಿಯೊಳಗ ಮುಳುಗಿಧಂಗ. ಆ ನಾಜೂಕು ಕುಸುರಿನಹಂಗ ಮೋಹಕ. ನಾನೂ ಹುಡಕಲೀಕ್ಹತ್ತೀನಿ ಎಲ್ಲಾದರೂ ಸಿಕ್ಕೀತೇ ಆ ದಿನಗಳು ಅಂತ. ನಿಮ್ಮ ಆರ್ದೃ ಪ್ರತಿಕ್ರಿಯೆಗೆ ಇನ್ನೊಮ್ಮೆ ಧನ್ಯವಾದಗಳು ಸರ್.