ಸರೋಜಿನಿ ಪಡಸಲಗಿ ಅಂಕಣ- ಇಲ್ಲ – ಉಂಟುಗಳ ನಡುವಿನ ಬದುಕು…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

19

ನಮ್ಮ ಅಣ್ಣಾನ  ಜೀವನ ಆ ಕಷ್ಟಗಳ ಬಿಗಿ ಹಾದಿಯೊಳಗನೂ ಸರಳವಾಗಿ  ಸಾಗಿದ  ಜೀವನ. ತಮ್ಮದs  ಒಂದು ಸ್ವಂತ  ಜೀವನ- ಹೆಂಡತಿ, ಮನಿ, ಮಕ್ಕಳು ಅಂತ ಆದಮ್ಯಾಲನೂ ಕಠಿಣತೆಯ  ಕೊರಕಲಿನೊಳಗನs  ನಡದ  ಬದುಕು  ಅವರದು. ಆದ್ರ ಏಕದಂ  ಪರಿಪೂರ್, ಸಫಲ  ಬದುಕು. ಆಗ ಅಷ್ಟ ಪರಿ  ಕೆಸರಾಗ  ಗುದ್ದಾಡಿದ್ದಕ್ಕೋ  ಏನೋ  ಸಂಸಾರ ಒಂದ  ಹದಕ್ಕ  ಬಂದ ಮ್ಯಾಲ  ಹಾಲು – ಸಕ್ರಿ  ಹೊಳಿ  ಹರದಂಥಾ  ಸುಂದರ ಬದುಕು; ಒಂದು ಸಾಫಲ್ಯತೆ  ಕಂಡ  ಸಾರ್ಥಕ ಜೀವನ  ನಮ್ಮ ಅಣ್ಣಾ – ಅವ್ವಾಂದು. ತಮ್ಮ ಕೆಲಸಕ್ಕ ಅಣ್ಣಾ ಆಗಲಿ,  ಅವ್ವಾ ಆಗಲಿ  ಅಗದೀ  ನಿಷ್ಠ  ಆಗಿರು ಅಂಥಾವ್ರು. ತಮ್ಮ ತಮ್ಮ ಕೆಲಸ  ಅಂದ್ರ ತಮ್ಮ ಜೀವಾನs  ಅದು ಅಂಬಾವ್ರು  ಇಬ್ರೂ. ಅಣ್ಣಾ ತಮ್ಮ ಸಾಲಿ ನೌಕರಿ, ಹೊಲಾ- ಮನಿ ಮತ್ತ ಅವ್ವಾ ಮನಿ- ಮಕ್ಕಳ  ಕಾಳಜಿ  ತಗೊಂಡ  ಬಗಿ ನೋಡಿ  ಕಲೀಬೇಕು ಹಂಗಿರೋದು.

ನಮ್ಮ ಮನಿತನದ  ಅಡ್ಡಹೆಸರು  ಮುತಾಲೀಕ ದೇಸಾಯಿ; ಅಂದ್ರ  ನಾ  ಹಿಂದ ಹೇಳಿಧಾಂಗ  ನಾವು  ನಂದಿಕುರಳಿ ಮುತಾಲೀಕದೇಸಾಯರು. ಆದರ  ನಮ್ಮ ಅಣ್ಣಾ  ಈಗಿಲ್ಲದ  ಆ ದೇಸಗತಿಯ   ಪಳಿಯುಳಿಕಿ  ಹಂಗ ‌‌ಆ   ಕಿತಾಬು  ಯಾತಕ  ಬೇಕು  ಅಂತ  ದೇಸಾಯಿ ಅಂಬೂದನ್ನ ತಗದು  ಬರೀ  ಮುತಾಲಿಕ  ಅಂತ  ಇಟ್ಕೊಂಡ್ರು. ಹಿಂಗಾಗಿ  ನಮ್ಮ  ಅಣ್ಣಾ  ಹುಕ್ಕೇರಿಯೊಳಗ ‌ ಮತ್ತ ಹುಕ್ಕೇರಿ ಆಸುಪಾಸಿನೊಳಗ  “ಮುತಾಲಿಕ  ಮಾಸ್ತರ” ‌‌‌‌‌‌‌‌ಅಂತನs  ಗುರತಾದ್ರು, ಹೆಸರಾದ್ರು.

ನಮ್ಮ ಅಣ್ಣಾ  ಹುಕ್ಕೇರಿ  ಹೈಸ್ಕೂಲ್ ಸುರು ಆದಾಗಿಂದನs  ಅಲ್ಲಿ  ಟೀಚರ್ ಅಂತ  ಕೆಲಸಾ ಮಾಡ್ಲಿಕ್ಕ  ಸುರು  ಮಾಡಿದವ್ರು. ಅಂದ್ರ ಒಂದ ರೀತಿಲೆ   ಸಂಸ್ಥಾಪಕ ಸದಸ್ಯರು. ಹೊಸಾ ಸಂಸ್ಥಾ ಅಂದ ಮ್ಯಾಲ  ಅದರ  ಕಷ್ಟಾ ಸುಖಾದ್ದ  ಕಲ್ಪನಾ ಇದ್ದs  ಇರ್ತದ  ಎಲ್ಲಾರಿಗೂ. ಅವರ  ಕೊಡೋ ಅರ್ಧಾಗಿರ್ಧಾ  ಪಗಾರ ತಗೊಂಡು  ಪೂರಾ  ಪಗಾರಕ್ಕ ಸಹಿ  ಮಾಡೋದs  ರೂಢಿ ‌‌ಆಗಿಬಿಟ್ಟಿತ್ತು. ಆದರ  ರೊಕ್ಕದ್ದ  ಮಾರಿ ನೋಡಿ  ಕೆಲಸಕ್ಕಾಗಲಿ,  ತಮ್ಮನ್ನ ನಂಬಿಕೊಂಡ  ಬಂದ  ವಿದ್ಯಾರ್ಥಿಗಳಿಗಾಗಲಿ  ಅನ್ಯಾಯ  ಮಾಡೋ  ಜಮಾನಾ  ಅಲ್ಲ ಅದು. ಕಟ್ಟುನಿಟ್ಟಿನ, ಪ್ರಾಮಾಣಿಕ ಆದರ  ಖಂಡಿತವಾದಿ, ಅಗದೀ ಸರಳ  ಸಾದಾ  ಮನಶ್ಯಾ ನಮ್ಮ ಅಣ್ಣಾ ; ಆದ್ರ ಹಂಗs  ನೇರ ಸ್ಪಷ್ಟ  ಮಾತು  ಅವರದು. ಒಳಗ ಒಂದು  ಹೊರಗ ಒಂದು  ಮಾತಂತೂ  ಅವರ ಜನ್ಮಕ್ಕs  ಗೊತ್ತಿದ್ದಿಲ್ಲ. ಅಂಥಾವ್ರ ನಮ್ಮ ಅಣ್ಣಾ. ಸುಳ್ಳು – ತಟವಟಗಳ  ನೆರಳಿಗೂ  ಹಾಯದವರು ಅವರು. ನಡೆ-ನುಡಿ  ಎಷ್ಟ ಶಿಸ್ತುಕ್ರಮ ಬದ್ಧನೋ  ಅಷ್ಟೇ  ಮಮತಾಮಯಿ, ಕರಳಿ  ನಮ್ಮ ಅಣ್ಣಾ. ವಿದ್ಯಾರ್ಥಿಗಳಂದ್ರ  ಅವರ  ಆಸ್ತಿ; ಸ್ವಂತ  ಮಕ್ಕಳಿಗಿಂತ  ಹೆಚ್ಚಿನ  ಪ್ರೇಮಳ  ವರ್ತುಣಕಿ  ಅವರ ಜೋಡಿ. ಅಣ್ಣಾ  ಹಗಲೆಲ್ಲಾ  ಅದನ್ನೇ ಹೇಳ್ತಿದ್ರು – “ನಾ  ಒಬ್ಬ  ಹೈಸ್ಕೂಲ್ ಮಾಸ್ತರ. ನಾ ಏನ ಗಳಸೇನು,  ಎಷ್ಟ ಘಳಸೇನು  ಆ  ಪಗಾರ  ಮ್ಯಾಲ. ಆದ್ರ ನನ್ನ  ಆಸ್ತಿದು  ಅಕ್ಷಯ ಖಜಾನಾ  ಅಂದ್ರ ನನ್ನ ವಿದ್ಯಾರ್ಥಿಗಳೇ”  ಅಂತ. ಬಸ್ಸಿನಾಗ ಒಬ್ಬ  ವಿದ್ಯಾರ್ಥಿ  ಗೌರವದಿಂದ  ಎದ್ದು ನಿಂತು ಅಣ್ಣಾನ  ಕೈ ಹಿಡದು  ತನ್ನ ಸೀಟನ್ಯಾಗ  ಕೂಡಸಿದ್ದನ್ನ  ದೊಡ್ಡ ನಿಧಿ  ಸಿಕ್ಕ ಹಾಂಗ ಹೇಳಾವ್ರ ನಮ್ಮ ಅವ್ವಾನ  ಮುಂದ. ಅಷ್ಟ ಸಾಕಿತ್ತು ಆ ಜೀವಕ್ಕ ಹಿತಾ  ಅನಸಲಿಕ್ಕ. ಅದಕs ಮತ್ತ ಇಂದಿಗೂ  ಮುತಾಲಿಕ ಮಾಸ್ತರ  ಅಂದ್ರ ಅದs ಗೌರವ  ಅದ, ಅವರು ಹುಕ್ಕೇರಿ  ಬಿಟ್ಟು ಮೂವತ್ತ ವರ್ಷ ಆದ್ರೂ; ಅವರು  ಎಲ್ಲಾರನೂ  ಬಿಟ್ಟು ಆ ದೂರದ, ತಿರಗಿ ಬರಲಿಕ್ಕಾಗದ  ಲೋಕಕ್ಕ ಹೋಗಿ ಇಪ್ಪತ್ತ ಮೂರು  ವರ್ಷ ಆದ್ರೂ.

ನಮ್ಮ ಅಣ್ಣಾ  ಕಲಸ್ತಿದ್ದದ್ದು ಕನ್ನಡ. ಅವರು ಎಂ. ಎ. ಮಾಡ್ಕೊಂಡಿದ್ದು  ಕನ್ನಡದಾಗನs. ಅವರ  ಅಸ್ಖಲಿತ  ವಾಣಿ, ಮಧುರ, ಭಾವಪೂರ್ಣ ಧನಿ, ನಿರರ್ಗಳ ಮಾತು, ಅಪೂರ್ವ ಶಬ್ದಸಂಪತ್ತು – ಯಾರೂ ಕಳವು ಮಾಡ್ಲಿಕ್ಕೆ, ಕಸಗೋಳಿಕ್ಕೆ ಆಗದ ಅವರದೇ ಸೊತ್ತು. ನಮ್ಮ ಸಾಲಿ  ಹೆಡ್ ಮಾಸ್ತರು ಸುದ್ಧಾ  ಪುರುಸೊತ್ತ  ಮಾಡ್ಕೊಂಡ  ಆಗಾಗ  ನಮ್ಮ  ಅಣ್ಣಾನ  ಕ್ಲಾಸ್ ಕೇಳ್ತಿದ್ರು  ಕೂತು; ಅಗದಿ ಏಕಚಿತ್ತದಲೆ. ಅಣ್ಣಾಂದು  ಕಲಸೂ  ಧಾಟೀನs  ಹಂಗಿತ್ತು; ಏಕದಂ ಪ್ರೌಢ, ಪ್ರಬುದ್ಧತಾ ಜೋಡಿ ರಂಜಕತಾನೂ  ಕೂಡಿರತಿತ್ತು. ಪದ್ಯ ಪಾಠ ಹೇಳು ಮುಂದ  ಕವಿತಾಗೋಳಿಗೆ  ಧಾಟಿ ಹಚ್ಚಿ ರಾಗದಾಗ ಹಾಡಿ  ಕಲಸಾವ್ರು. ಆಗ  ಅವು ತಲ್ಯಾಗ ಪೂರಾ ಅಂಟಿ ಗಟ್ಟಿ  ಕೂತಹಂಗ  ಆಗಿ  ಬಿಡ್ತಿದ್ದು. ನಾ  ಎಂಟು, ಒಂಬತ್ತು  ಕ್ಲಾಸ್‌ನ್ಯಾಗ  ಇದ್ದಾಗ  ಅಣ್ಣಾ ಎಂ.ಎ. ಮಾಡ್ಲಿಕ್ಕೆ  ಧಾರವಾಡಕ್ಕ ಹೋಗಿದ್ರು. ನಾ ಹತ್ತನೇ ಕ್ಲಾಸ್‌ನ್ಯಾಗ ಇದ್ದಾಗ  ಅದs ಆಗ ಧಾರವಾಡದಿಂದ  ಬಂದು ಮತ್ತ  ಜಾಯಿನ್ ಆಗಿದ್ರು. ನಂಗ  ಹತ್ತನೇ ಕ್ಲಾಸ್ ಕನ್ನಡ ಕಲಸ್ಯಾರ ಅಣ್ಣಾ. ಆಗ  ಕವಿತಾ ಕಲಸೂ ಮುಂದ  ಅವರು ನಂಗ ” ಮುತಾಲಿಕ,  ಈ  ಕವಿತಾ ಹಾಡವಾ” ಅಂತ  ಹೇಳ್ತಿದ್ರು. ನಾ  ಒಂದೊಂದೇ  ನುಡಿ ಹಾಡಿಧಂಗ  ಅದನ್ನ  ಅವರು ವಿವರಿಸಿಕೋತ  ಹೋಗ್ತಿದ್ರು. ಭಾಳ  ಛಂದ  ಕಲಸೂಣಿಕಿ  ಅದು; ಆಗ  ಕೇಳಿದ್ದು ಈಗೂ  ತಲಿ ಒಳಗ  ಕೆತ್ತಿ ಇಟ್ಟಹಾಂಗ ; ಒಟ್ಟ ಮರೀಲಾರದಂಥಾದ್ದು.

ಹಳಗನ್ನಡ  ಅಂತೂ  ಅಗದೀ  ಸರಳ  ಆಗೂ ಹಂಗ ಶಬ್ದಗಳನ್ನು ಒಡೆದು ಗುರ್ತ ಹಾಕೋಳಿಕ್ಕ ಹೇಳ್ತಿದ್ರು. ಹಿಂಗಾಗಿ  ಗಡಚ  ಹಳಗನ್ನಡ ಕಲ್ಯೂದ  ಹೆಂಗಪಾ ಅನಾವ್ರ ಸುದ್ಧಾ ಆಡಾಡ್ತ  ಕಲ್ತ ಬಿಡ್ತಿದ್ರು. ಭೀಮ-ದುರ್ಯೋಧನರ ಗದಾಯುದ್ಧ, ಕೃಷ್ಣ ಸಂಧಾನ ಇಂಥಾವೆಲ್ಲಾ  ಬಂದಾಗ  ಆ ಸನ್ನಿವೇಶಗಳ  ಚಿತ್ರಾ ತಗದು  ವಿವರಣೆ  ಕೊಡ್ತಿದ್ರು. ಪಾಠ  ಹೇಳೂವಾಗ  ಅದರಾಗ  ಎಷ್ಟ ಒಂದ ಆಗಿ  ಹೋಗ್ತಿದ್ರು ಅಂದ್ರ ಒಮ್ಮೊಮ್ಮೆ ಆ ಪಿರಿಯಡ್  ಮುಗದು ಬೆಲ್ ಆದ ಸದ್ದೂ  ಕೇಳ್ತಿದ್ದಿಲ್ಲ ಅವರಿಗೆ; ಪೂರ್ಣ ಮೈಮರತ ಕೂತ  ವಿದ್ಯಾರ್ಥಿಗಳಿಗೂ  ಖಬರ  ಇರ್ತಿದ್ದಿಲ್ಲ. ಮುಂದಿನ  ಕ್ಲಾಸ್ ನ  ಟೀಚರ್ ಬಂದು ಹೊರಗ ನಿಂತು ಕಾದು ಕಡೀಕ  ರಸಭಂಗ   ಮಾಡಬಾರದು ಅಂತ  ತಿರಗಿ  ಹೋದದ್ದೂ ಆಗೇದ. ಅಂಥಾ ಕಲಸೂಣಿಕಿ  ಈಗ ಸಿಗೂದ  ಕಷ್ಟ ಅನಸ್ತದ ನಂಗ. ಈಗ  ಎಲ್ಲಾದಕ್ಕೂ ಅಳತಿ, ಮಾಪ, ಎಣಿಕಿ   ಬಂಧಂಗ  ಆ ತನ್ಮಯತಾಕ್ಕೂ ಬಂಧಂಗ  ಆಗಿ ಬಿಟ್ಟದ.

ನಾವೆಲ್ಲಾ ಅಂದ್ರ  ಆ  ಕಾಲದ  ವಿದ್ಯಾರ್ಥಿಗಳು  ಭಾಳ  ನಸೀಬವಾನ  ಇದ್ವಿ. ನಮ್ಮ ಎಲ್ಲಾ  ಗುರುಗಳೂ  ಹಂಗs  ಇದ್ರು. ಅಷ್ಟs ಏಕೋಭಾವ ಏಕನಿಷ್ಠಾದಲೇ  ಕಲಸಾವ್ರ  ಎಲ್ಲಾರೂ. ಮುಕ್ಕಣ್ಣವರ  ಸರ್  ಗಣೀತ,  ಏಣಗಿಮಠ ಸರ್, ಮೆಗೆಣ್ಣವರ ಸರ್  ಅವರ ಇಂಗ್ಲಿಷ್, ಮುತ್ನಾಳಕರ  ಸರ್ ಅವರದು  ಸಂಸ್ಕೃತ  ಮತ್ತ ಇಂಗ್ಲಿಷ್ – ಎಲ್ಲಾ ಒಂದರಕಿಂತಾ ಒಂದು ಅಂದಾಜಿಗೆ  ಸಿಗದಷ್ಟ  ಶ್ರೇಷ್ಠ  ಇದ್ದು. ಹಿಂಗಾಗಿ ಗಣೀತ, ಇಂಗ್ಲಿಷ್‌ದಂತೂ  ಇಷ್ಟ ಘಟ್ಟಿಮುಟ್ಟ  ಪಾಯಾ  ಹಾಕಿಬಿಟ್ಟ ಹಂಗ ಆಗೇದಲಾ  ಅದು  ಎಣಿಕಿಗೆ  ಸಿಗೂದಲ್ಲ, ಒಂಚೂರೂ ತನ್ನ ಹಾದಿ ಬಿಟ್ಟ  ಹಲಾಸಾಂಗಿಲ್ಲ ಆ ಲೆಕ್ಕ, ಆ  ಇಂಗ್ಲಿಷ್  ಎಲ್ಲಾನೂ. ನಾವು  ಹತ್ತನೇ ಕ್ಲಾಸ್ ತನಕಾ ಕನ್ನಡ ಮಾಧ್ಯಮದಾಗ  ಕಲ್ತು  ಪಿ.ಯು.ಸಿ.ಯಿಂದ  ಇಂಗ್ಲಿಷ್ ಮಾಧ್ಯಮದಾಗ  ಓದಿದಾವ್ರು. ಆದ್ರೂ ಒಂಚೂರೂ  ತ್ರಾಸ  ಇಲ್ಲದ ಸರಳ  ಹೊಂದಿಕೊಂಡ  ಹೋಗಿ  ಬಿಟ್ವಿ. ಅಷ್ಟ ವ್ಯವಸ್ಥಿತ ಇತ್ತು  ನಮ್ಮೆಲ್ಲಾ  ಮಾಸ್ತರ  ಕಲಸೂಣಿಕಿ; ಅಷ್ಟs ಖಡಕ್  ನೇಮಗಳು  ಎಲ್ಲಾರದೂ. ನನಗನಸೂ ಹಂಗ  ಬಹುತೇಕ  ನಮ್ಮ ಅಣ್ಣಾ ಅಂದ್ರ ಮುತಾಲಿಕ ಮಾಸ್ತರು  ಈ ಖಡಕಪಣದಾಗ  ನಂಬರ್ ಒಂದು; ಆಮ್ಯಾಲೆ  ಮುಕ್ಕಣ್ಣವರ ಸರ್. ಅದಾದ ಮ್ಯಾಲ ಉಳದವರದು  ನಂಬರ್ ಬರ್ತಿದ್ದು. ಅಣ್ಣಾಂದು ಒಂದು ಖಟ್ಟಾ  ನೇಮ ಇತ್ತು. ಅವರು  ಕ್ಲಾಸ್‌ನ್ಯಾಗ ಕಾಲ ಇಟ್ಟ ಮ್ಯಾಲ ಯಾವ  ವಿದ್ಯಾರ್ಥಿ  ಬಂದ್ರೂ ಅವರಿಗೆ  ಕ್ಲಾಸ್ ಗೆ ಪ್ರವೇಶ  ಇರಲಿಲ್ಲ. ಮತ್ತ ನಾ ಹತ್ತನೇ ಕ್ಲಾಸ್ ನ್ಯಾಗ ಇದ್ದಾಗ  ಅವರದು  ದಿನಾ ಮೊದಲನೇ  ಪಿರಿಯಡ್ ನೇ  ಇರ್ತಿತ್ತು. ಆಗ  ನಂದು  ಒಂದ ಸರ್ತೆ ಮಸ್ತ್  ಫಜೀತಿ  ಆಗಿತ್ತು.

ನಮಗ ಪ್ರತಿ ಬುಧವಾರ ಯುನಿಫಾರ್ಮ್ ವಿನಾಯಿತಿ  ಇರೋದು. ಆ ದಿವಸ ನಾವು ನಮಗ  ಬೇಕಾದ  ಡ್ರೆಸ್  ಹಾಕೊಂಡ   ಹೋಗಲಿಕ್ಕೆ ಪರ್ಮಿಷನ್  ಇತ್ತು. ಒಂದ  ಸಲಾ  ನಮ್ಮ ಸಣ್ಣ ಮಾವಶಿ ಬಂದಿದ್ಲು ಐನಾಪೂರದಿಂದ. ಆಗ  ಬಂದ  ಬುಧವಾರ  ದಿನಾ  ಆಕೀ  ಸೀರಿ  ಉಟ್ಟು ಸಾಲಿಗೆ  ಹೋಗೂಬೇಕ ಅಂತ ಇತ್ತು. ಅಣ್ಣಾಗೂ  ಇದರ  ಸುಳಿವು  ಸಿಕ್ಕಿತ್ತು. “ಅಕ್ಕವ್ವಾ, ಮೊದಲನೇ  ಪಿರಿಯಡ್  ನಂದs  ಅದ ಹಾಂ” ಅಂತ ಹೇಳಿದ್ರು. ” ಹೂಂನ್ರಿ ಅಣ್ಣಾ, ಗೊತ್ತದರೀ” ಅಂದೆ  ಗಡಿಬಿಡಿಲೇ  ತುತ್ತ ತುರಕೀಕೋತ. ಸವ್ವಾಹತ್ತರ   ತನಕಾ ಓದಕೋತ  ಅಂದ್ರ ಅಭ್ಯಾಸ ಮಾಡ್ಕೋತ  ಕೂಡೂದು; ಆಮ್ಯಾಲ  ಗಡಾಬಡಾ ಎಷ್ಟ  ಆಗ್ತದೋ ಅಷ್ಟ ಉಂಡು ಅರ್ಧರ್ಧ ಹೆರಳು  ಹಾಕೊಂಡು  ರಿಬ್ಬನ್ ಬಿಗದು, ತಪ್ಪದೇ ಮಾಲಿ  ಹಾಕೊಂಡು ಯುನಿಫಾರ್ಮ್  ಸಿಗಿಸಿಕೊಂಡ  ಹೋಗೂದು; ಇದು  ನನ್ನ ರೂಢಿ.

ಆದ್ರ  ಆ ಹೊತ್ತ ಸೀರಿ  ಪ್ರೋಗ್ರಾಂ  ಇತ್ತಲಾ; ಅದೂ  ಮಾವಶಿದು  ಹೊಸಾ ಸೀರಿ ಘಡಿ  ಮುರದ  ಉಡೂದು!  ಆ ಸೀರಿ  ಹೊಸಾ ಕೋರಾ ಅದs ಆಗ ಕಾಲಿಟ್ಟ ಟೆರಿಕಾಟ್ ಸೀರಿ. ಬಣ್ಣನೂ ಮಸ್ತ್  ತೆಳು ನೀಲಿ ಮಿಶ್ರಿತ  ಬೂದಿ ಬಣ್ಣ; ನನ್ನ ಪ್ರೀತಿದು. ಮಾವಶಿ ಸೀರಿ  ಉಡಸಾಕಿ. ಆಕಡೆ ಒಂದ ಪಿನ್ನ  ಹಾಕಿ ಈಕಡೆ  ಒಂದ ಚುಚ್ಚಿ , ಅಲ್ಲಿ ಸಿಗಿಸಿ, ಇಲ್ಲಿ ಸಿಗಿಸಿ  ಅಗದಿ ಬಂದೋಬಸ್ತ್ ಮಾಡಿ ಒಂಚೂರೂ  ಹಲಾಸಧಂಗ ಸೀರಿ ಉಡಸಿದ್ಲ ಮಾವಶಿ. ನಂದು ಒಂದs ಕರಿ ಬ್ಲಾವುಜ  ಇತ್ತು. ಅದನ್ನ ಹಾಕೊಂಡು  ತಯಾರಾಗೂದ್ರಾಗ  ನೇಹಮಿ ಪ್ರಮಾಣೆ  ನಮ್ಮ ಅವ್ವಾ  ಇಷ್ಟುದ್ದ ಮಲ್ಲಿಗಿ ಮಾಲಿ  ಹಿಡ್ಕೊಂಡ ನಿಂತಿದ್ಲು. ಬಿಟ್ಟೇನ ಅದನ್ನ! ಅದನೂ ಹಾಕೊಂಡ  ತಯಾರ  ಆಗಿ ಗಡಿಯಾರ  ನೋಡೂದ್ರಾಗ ಅದು ದಿನಧಂಗ ಹನ್ನೊಂದ  ಹೊಡೀಲಿಕ್ಕೆ  ಹತ್ತ ನಿಮಿಷ ತೋರಿಸ್ತು. ಬರೋಬ್ಬರಿ ಹನ್ನೊಂದು ಗಂಟೆಗೆ ಪ್ರಾರ್ಥನೆ. ನಮ್ಮನಿಂದ  ಸಾಲಿ  ಎರಡೂವರಿ ಮೂರ  ಕಿ.ಮೀ. ಇತ್ತು. ದಿನಾ ಯುನಿಫಾರ್ಮ್ ಇರ್ತಿತ್ತು;  ಅದನ ಹೆಂಗೋ  ಸಂಭಾಳಿಸಿಕೊಂಡು ಬರೋಬ್ಬರಿ ವ್ಯಾಳ್ಯಾಕ್ಕ  ಸಾಲಿ  ಮುಟ್ತಿದ್ದೆ. ಆದರ ಈ ಹೊತ್ತು ಸೀರೆ!  ನಮ್ಮ ಏಕಾ  ” ಶೋಭಾ (ನನ್ನ ಮಾವಶಿ) ನೋಡs  ನಮ್ಮ ಅಕ್ಕವ್ವಾ ಅಗದೀ ನಾಜೂಕ  ಗೊಂಬಿಗತೆ ಕಾಣಸ್ತಾಳ  ನೋಡ”  ಅಂತ ಕೌತುಕಲೆ  ಹೇಳಕೋತ  ನನ್ನ ನೋಡಕೋತ  ನಿಂತಿದ್ರ ನಾ ಗಡಾಬಡಾ ಫೂಟಿಗೊಂದ  ಹೆಜ್ಜಿ ಹಾಕೋತ  ಓಡಾಡಕೋತ ಪುಸ್ತಕ ಜೋಡಿಸಿಕೊಳ್ಳಿಕ್ಹತ್ತಿದ್ದೆ. ನನ್ನ ನೋಡಿ  ನಮ್ಮವ್ವ “ಸೀರಿ ಕಾಲಾಗ  ಸಿಕ್ಕೀತು. ಸಾವಕಾಶ ಹೋಗು. ಒಂದ  ಹತ್ತ ನಿಮಿಷ  ಮೊದಲ  ಅಭ್ಯಾಸ  ಬಿಟ್ಟ ಏಳಬಾರದs  ಮಹಾರಾಯ್ತಿ”  ಅಂತ  ಬೈದ್ಲು. ಏನರೆ  ಹೇಳ್ಳಿಕ್ಕೆ, ಮಾತಾಡ್ಲಿಕ್ಕೆ ವ್ಯಾಳ್ಯಾ ಎಲ್ಲಿತ್ತು? ಚಪ್ಪಲ  ಸಿಗಿಸಿಕೊಂಡ , ಪುಸ್ತಕದ  ಹೊರಿ  ಹೊತ್ತು ನಡದದ್ದs  ಒಂದ  ಲೆಕ್ಕ.

ಎಷ್ಟ  ಭರಾ ಭರಾ  ನಡದ್ರೂ  ನಾ  ಸಾಲಿ ಗ್ರೌಂಡ್ನ್ಯಾಗ  ಕಾಲ ಇಡೂದಕ್ಕ ಜಯಹೇ..ಜಯಹೇ.. ಜಯಹೇ… ಕೇಳಿಸ್ತು. ಬೋಲೋ ಭಾರತ ಮಾತಾಕಿ ಜೈ ಆತು; ವಂದೇ ಮಾತರಂ ನೂ ಆತು. ಮತ್ತ ಹೆಜ್ಜಿ ಕಿತ್ತಿದೆ. ಇನ್ನೂ ಕ್ಲಾಸ್  ಮುಟ್ಟಬೇಕಲಾ!  ಖರೇ ಹೇಳ್ತೀನಿ – ಅಕ್ಷರಶಃ  ಸೀರಿ,ನಿರಿಗಿ ಎತ್ತಿ ಒಂದ ಕೈಲೇ ಹಿಡ್ಕೊಂಡ ಇನ್ನೊಂದ  ಕೈಯಾಗಿನ  ಪುಸ್ತಕ ಸಂಭಾಳಿಸಿಕೋತ  ಓಡಕೋತ  ಹೋಗಿ ಕ್ಲಾಸ್ ಮುಟ್ಟೂದ್ರಾಗ,  ಮುತಾಲಿಕ ಮಾಸ್ತರ  ಕ್ಲಾಸ್‌ನ್ಯಾಗ ಹೋದ್ರು; ನಾ ಭರೇ ಒಂದೂವರಿ  ಹೆಜ್ಜಿ ಹಿಂದ  ಇದ್ದೆ. ನನ್ನ ಮಾರಿ  ಹಾಕೊಂಡ  ಕರಿ  ಬ್ಲೌಸ್ ಗಿಂತ  ಕಪ್ಪಿಟ್ಟು  ಒಣಾ ಒಣಾ  ಹಾರಲಿಕ್ಹತ್ತು. ಮುತಾಲಿಕ ಮಾಸ್ತರ ಉತ್ತರಾ ಗೊತ್ತs ಇತ್ತು; ಆದರೂ  ಕೇಳ್ದೆ -” May I come in sir?”  ಹೊಳ್ಳಿ  ಸುದ್ಧಾ  ನೋಡದs ಹೇಳಿದ್ರು ಮಾಸ್ತರು” No”. ಅಲ್ಲೇ  ಹೊರಗ ನಿಂತೆ. Present  ಇದ್ದೂ ಮೊದಲನೇ ಸರ್ತೆ absent ಆದೆ. ಆಮ್ಯಾಲ  ಕ್ಲಾಸ್  ಚಾಲೂ ಆತು. ಅಷ್ಟ ಛಂದ  ಬೂದಿ ಬಣ್ಣದ ಸೀರಿ ಉಟ್ಟು, ಮಾರುದ್ದ ಹೆರಳಿನ್ಯಾಗ  ಇಷ್ಟುದ್ದ ಮಲ್ಲಿಗಿ ಮಾಲಿ ಹಾಕೊಂಡ ನಾ ಕ್ಲಾಸ್  ಹೊರಗೇ; ಒಳಗ ಮುತಾಲಿಕ ಮಾಸ್ತರು ಕುಮಾರವ್ಯಾಸ ಭಾರತದ ಒಂದು ಭಾಗ  ಕೃಷ್ಣ ಸಂಧಾನ, ಅದೂ ನನ್ನ ಪ್ರೀತಿ ಭಾಮಿನಿ ಷಟ್ಪದಿಯೊಳಗ  ಹೇಳಲಿಕ್ಕ ಸುರು  ಮಾಡಿದ್ರು. ಅದನ್ನ ನಮ್ಮ ಅಣ್ಣಾ ಅಂದ್ರ ಮುತಾಲಿಕ ಸರ್  ಬಾಯಾಗನs  ಕೇಳ್ಬೇಕು. ನಾ ಕ್ಲಾಸ್‌ನ್ಯಾಗ ಹೋಗಲಿಕ ಪರ್ಮಿಷನ್  ಸಿಗದs ಹೊರಗs  ನಿಂತೇನ  ಅಂಬೂದs  ಮರತ ಹೋತ ನನಗೆ!  ಅವರೆಷ್ಟ ಪಾಠದಾಗ  ಮಗ್ನ ಆಗಿ ಹೇಳ್ಳಿಕ್ಕ ಹತ್ತಿದ್ರೋ  ಅದನ್ನ ಮೀರಿದ ತನ್ಮಯತೆ ಒಳಗೆ ನಾ  ಮೈಮರೆತ ಬಿಟ್ಟಿದ್ದೆ. ಮುತಾಲಿಕ ಮಾಸ್ತರ ಭಾವಪೂರ್ಣ ಆವಾಜಕ್ಕ ನನ್ನ ಕಣ್ಣು ಹನೀತಿತ್ತು. ಅದೂ  ನನಗ ಗೊತ್ತಾಗಿದ್ದಿಲ್ಲ.

ಕೆಮ್ಮಿನ  ಧನಿಗೆ  ಎಚ್ಚರಾಗಿ  ನೋಡಿದಾಗ  ನನ್ನ ಮುಂದ  ನಮ್ಮ ಸಾಲಿ  ಆಗಿನ  ಹೆಡ್ಮಾಸ್ತರು ಚೌಗಲಾ  ಸರ್ ನಿಂತಾರ! ‌‌ಒಮ್ಮೆ ನನ್ನ ಕಡೆ, ಒಮ್ಮೆ ಮುತಾಲಿಕ  ಸರ್  ಕಡೆ ನೋಡಿ -“ಮುತಾಲೀಕ್ರ, ಈಕಿಗೆ  ಕ್ಲಾಸ್ ಒಳಗ ಕೂಡ್ಲಿಕ್ಕೆ ಹೇಳ್ರಿ” ಅಂದ್ರು. ಮುತಾಲಿಕ ಮಾಸ್ತರಿಗೂ  ಆ  ಮಗ್ನತೆಯ ತಂತಿ  ಕಡಿಧಂಗಾತು. ಆ ಸಿಟ್ಟಿನ್ಯಾಗ  ಹೇಳಿದ್ರು ” ಸಾರಿ ಸರ್. ಆಕಿ  ಲೇಟ್ ಆಗಿ ಬಂದಾಳ. ಮುಂದಿನ ಪಿರೀಯಡ್‌ಗೆ  ಒಳಗ  ಕೂಡ್ತಾಳ” ಅಂತ  ಹೇಳಿದ್ರು. ಹೆಡ್ ಮಾಸ್ತರು ನನ್ನ ಕಡೆ ನೋಡಿ  ನಕ್ಕು  ಹೋದ್ರು.

ಸಾಲಿ  ಮುಗಿಸಿ ಮನಿಗ ಹೋದೆ. ಹಾಲು – ತಿಂಡಿ  ಆತು. ನಮ್ಮನ್ಯಾಗ  ನಮ್ಮ ಅಣ್ಣಾ ಒಬ್ರs ಚಹಾ  ಕುಡೀತಿದ್ರು. ಈಕಡಿಕಡೆ  ಅಣ್ಣಾ ಅವ್ವಾಗೂ ಚಹಾ  ರೂಢಿ  ಮಾಡಸಿದ್ರು ತಮ್ಮ ಜೋಡಿ. ನಾವು ಹುಡುಗರೆಲ್ಲಾ  ಹಾಲೇ ಕುಡಿಯೋದು. ಆ ಪ್ರಮಾಣೆ  ನಾ ಹಾಲ ಕುಡ್ಯೂದ್ರಾಗ  ಅಣ್ಣಾನೂ ಸಾಲಿಂದ  ಬಂದ್ರು.” ಕುಸುಮಾ  ಮಗಳ ಸುದ್ದಿ – ಸುಕಾಲ  ಆತೇನು” ಅಂತ  ಕೇಳಿದ್ರು. ಚಹಾ ಮಾಡ್ಲಕ್ಹತ್ತಿದ್ದ  ಅವ್ವಾ ” ಏನದು ಸುದ್ದಿ” ಅಂದ್ಲು. ನಾ  ಏನೂ ಉಸಲ ಒಡದಿದ್ದಿಲ್ಲ. ಚಹಾ  ಕುಡಕೋತ  ಅಣ್ಣಾ -” ಹೊಸಾ ಸೀರಿ ಉಟ್ಟು ತಯಾರಾಗಿ  ಒಳೇ ಥಾಟಲೆ  ಬಂದ್ಲು; ಖರೇ ತಡಾ ಆಗಿ  ಬಂದ್ಲು ನಿನ್ನ  ಮಗಳು. ಕ್ಲಾಸ್ ಹೊರಗೇ ನಿಂತ್ಲು ನನ್ನ  ಪಿರಿಯಡ್  ಮುಗ್ಯೂ ತನಕಾ. ಅಷ್ಟs”  ಅಂದ್ರು ಅಣ್ಣಾ.

ಎಲ್ಲಾರೂ  ನಗಾವ್ರೇ. ಪ್ರಮೋದ  ಆಗ ಎಂಟನೇ ಕ್ಲಾಸ್‌ನ್ಯಾಗ ಇದ್ದಾ. ಅಂವಾ ಬಂದು ಹವೂರಗ  ನನಗ ಹೇಳಿ ಓಡಿದಾ; ” ಆಗs ‌‌‌ ಗೊತ್ತಾಗಿದ್ರ  ಕ್ಲಾಸ್  ತಪ್ಪಿಸ್ಯರೆ  ಬಂದ  ನೋಡಿ  ಹೋಗ್ತಿದ್ನೆಲs  ಅಕ್ಕಣ್ಣಿ ”  ಅಂತ. ಹಿಂಗಾತ  ಆ ಹೊಸಾ ಸೀರಿ  ಒಳ್ಳೇ ಖ್ವಾಯಿಷಲೇ  ಉಟ್ಕೊಂಡ ಹೋದಾಗಿನ ಫಜೀತಿ  ಮುತಾಲಿಕ ಮಾಸ್ತರ ಖಡಕ್  ರೂಲ್ಸ್‌ನ್ಯಾಗ!

ನಮ್ಮ ಅಣ್ಣಾಂದು  ಹ್ಯಾಂಡ್ ರೈಟಿಂಗ್  ಅಂದ್ರ ಮುತ್ತ  ಇಟ್ಟಹಾಂಗ. ನಮ್ಮಣ್ಣ ಪ್ರಕಾಶ  ಮತ್ತು ತಮ್ಮ ಪ್ರಮೋದಂದೂ  ಹಂಗs ; ಭಾಳ ಛಂದ. ಉಳದಾವ್ರದನೂ  ಹೆಚ್ಚು ಕಡಿಮಿ ಎಲ್ಲಾರ  ಅಕ್ಷರ  ಛಂದೇ; ನಂದೇ  ಒಂಚೂರ  ಎಡಾ. ನಮ್ಮ ಪ್ರಕಾಶ  ಅಕ್ಷರ  ಒಂಚೂರ  ಅರ್ಧರ್ಧಾ  ಬರೀತಿದ್ದ. ಅಣ್ಣಾ ಅಂವಗೂ  ಹತ್ತನೇ ಕ್ಲಾಸ್‌ನ್ಯಾಗ ಇದ್ದಾಗ  ಕನ್ನಡ  ಹೇಳ್ತಿದ್ರು. ಪ,  ಶ, ಕ್ಷ  ಈ  ಅಕ್ಷರ  ಅವನ್ನು ಅರ್ಧಾ ಆಗೂವು. ಆ ಹೊತ್ತ ಅಣ್ಣಾ  ಪ್ರಕಾಶನ್ನ  ಹಿಡ್ಕೊಂಡ  ಕೂತ್ರು. ಪ, ಕ್ಷ, ಶ ಈ  ಮೂರೂ  ಅಕ್ಷರ  ಹತ್ತತ್ತ  ಸರ್ತೆ  ಬರೀಲಿಕ್ಕೆ ಹೇಳಿದ್ರು. ಬರದ ತೋರಿಸಿದಾ ನಮ್ಮಣ್ಣ; ಯಥಾ ಪ್ರಕಾರ  ಮತ್ತ ಅರ್ಧಾ ಅಕ್ಷರೇ. ಮೊದಲs  ಸಿಟ್ಟಿನವರು  ನಮ್ಮ ಅಣ್ಣಾ; ಈಗ ಮತ್ತಷ್ಟು ರಂಗಾದ್ರು. ಸಣ್ಣ ಹಂಗೆ  ದೂರ್ವಾಸಾವತಾರದ  ಸಮೀಪ  ಬಂದಿದ್ರು. ಹಂಗs  ಸಿಟ್ಟಲೇನs  ಪ್ರಕಾಶಗ  ಹೇಳಿದ್ರು;” ಹೂಂ ಬರೀ, ಆ  ಮೂರೂ ಅಕ್ಷರ  ಉಪಯೋಗಿಸಿ  ಒಂದ  ವಾಕ್ಯ ಬರದ  ತೋರಸು” ಅಂತ. ಸರಿ. ನಮ್ಮಣ್ಣ ಬರದಾ;  ಅಣ್ಣಾಗ  ತೋರಿಸ್ದಾ. ನೋಡಿದ್ರು ಅಣ್ಣಾ. ಅಷ್ಟ ರಂಗಾಗಿದ್ದ  ಅಣ್ಣಾ ಒಮ್ಮೆಲೆ ಖೊಳ್ಳ  ಅಂತ ನಕ್ಕು, ” ಕುಸುಮಾ,  ಬಾ ಇಲ್ಲೆ”  ಅಂತ  ಅವ್ವಾನ್ನ ಕರದ್ರು. ಅಂಜಿ ಗಪ್ಪಗಾರ  ಕೂತಿದ್ದ ನಾನು, ಪ್ರಮೋದನೂ ಒಂಚೂರ  ಅಗಳಾಡಿದ್ವಿ. “ಯಾಕ, ಏನಾತು” ಅಂತ  ಬಂದ  ನಮ್ಮವ್ವಗ  ಅಣ್ಣಾ ಹೇಳಿದ್ರು – “ಇಲ್ನೋಡ  ನಿನ್ನ  ಮಗಾ  ಬರದ ವಾಕ್ಯ” ಅಂದ್ರು. “ಏನ ಬರದಾನ  ಹೇಳ್ರೆಲಾ, ನನ್ನ ಕೈ ಮುಸರಿ  ಆಗೇದ” ಅಂದ್ಲು ಅವ್ವಾ. ನಕ್ಕೋತನ  ಅಣ್ಣಾ ಓದಿದ್ರು- “ಲಕ್ಷ್ಮಣರಾಯರು ಶಗಣಿಯನ್ನು  ತಂದರು. ಪ್ರಮೋದನು  ಶಗಣಿಯನ್ನು ತಿಂದನು”. ಅವ್ವಾನೂ  ನಗಲಿಕ್ಹತ್ಲು. ನನಗ  ನಗಬೇಕೋ, ಸುಮ್ಮಿರಬೇಕೋ  ತಿಳೀದ  ಬಾಯಿ ಗಟ್ಟಿ ಮುಚ್ಚಿ ಕೂತಬಿಟ್ಟ ಅಕಡಿಕಡೆ  ನೋಡ್ದೆ. ಪ್ರಮೋದ  ಪ್ರಕಾಶನ  ಕಡೆ ಕೈ ತೋರಸ್ಕೋತ  ಒಳಗ ಹೋದಾ  ಮಾರಿ ಢೊಗರಿಸ್ಕೊಂಡ.  ಅಂತೂ ಆ ಪ್ರಕರಣ  ಹಿಂಗ  ಮುಗೀತು. ಪ್ರಕಾಶ  ಬಚಾವಾದ. ನಮ್ಮ ಅಣ್ಣಾನ ಸಿಟ್ಟು ಹಿಂಗಿತ್ತು; ಎಷ್ಟ ಜೋರೋ  ಅಷ್ಟ ಸರಳ ಒಮ್ಮೊಮ್ಮೆ.

ಹಿಂದ  ಹೇಳಿದ ಹಂಗ ನಾನು, ನಮ್ಮಣ್ಣ ಪ್ರಕಾಶ  ಭಾಳ ಜತ್ತ ಇರಾವ್ರು. ನಾವಿಬ್ರೂ  ಸಿನಿಮಾ,  ಸಿನಿಮಾಕ್ಕಿಂತ  ಹಾಡ ಪ್ರಿಯರು. ನಮ್ಮ ಅಣ್ಣಾನೂ  ಹಂಗೇ. ಸಂಗೀತ ಪ್ರಧಾನ, ನೃತ್ಯ ಪ್ರಧಾನ  ಸಿನಿಮಾ ಬಂದೂ ಅಂದ್ರ ತಾಂವೂ ನೋಡಾವ್ರು, ನಮ್ಮನ್ನೂ  ಕಳಸ್ತಿದ್ರು. ಪರೀಕ್ಷಾ ಮುಗದ  ದಿವಸ  ಸಿನಿಮಾ ನಕ್ಕಿ. ಅದಲ್ಲದ  ನಮ್ಮಣ್ಣಗ  ನಂಗ  ನಡನಡವ  ಅಭ್ಯಾಸ  ಭಾಳ ಆತಂದ್ರ  ಒಂದು ಸಿನಿಮಾ ಬೇಕಾಗ್ತಿತ್ತು. ಆಗ  ನಾ ಅಣ್ಣಾನ್ನ ಕೇಳ್ಬೇಕು. ಬಯ್ದರ  ನಾನs  ಬೈಸಿಕೋಬೇಕು. ಹಂಗ ಆಗ್ತಿದ್ದಿಲ್ಲ. ನಮ್ಮಣ್ಣ  ಭಾಳ ಶಾಣ್ಯಾ. ಹಂಗ ಎಲ್ಲಾರೂ ಹೆಚ್ಚು ಕಡಿಮಿ ಛಲೋನೇ ಇದ್ವಿ. ಯಾರೂ ಢ ಗಿರಾಕಿ  ಇರಲಿಲ್ಲ. ನಮ್ಮ ಅಣ್ಣಂದು ಎಸ್.ಎಸ್. ಎಲ್. ಸಿ.ಗೆ  rank ನಿರೀಕ್ಷಾ  ಇತ್ತು. ಅದಕ್ಕ ಮುಕ್ಕಣ್ಣವರ  ಸರ್ ಅವರು ಅಂವಗ  ಒಬ್ಬಗs  ಟ್ಯೂಷನ್  ಮುಗಿಸಿ ಮತ್ತ ಹೆಚ್ಚಿನ  ತರಬೇತಿ  ಕೊಡ್ತಿದ್ರು ಗಣಿತ ಮತ್ತ ಸಾಯಿನ್ಸ ಒಳಗ. ನಮ್ಮನಿ, ಅವರ ಮನಿ ಅಷ್ಟ ಐದ ನಿಮಿಷದ  ಹಾದಿ. ಸಾಲಿ ಬಿಟ್ಟ ಮ್ಯಾಲ ಆರರಿಂದ ಎಂಟು ಗಂಟೆ ತನಕಾ  ಇರ್ತಿತ್ತು. ಹಿಂಗಾಗಿ  ನಮ್ಮಿಬ್ರದೂ ಸಿನಿಮಾಕ್ಕ ಹೋಗೂದ  ಠರಾವಾತಂದ್ರ  ನನಗ  ಹೇಳಿ  ಹೋಗಾಂವಾ  ಪ್ರಕಾಶ – “ಅಕ್ಕಣ್ಣಿ,  ಅಣ್ಣಾನ ಕಡೆ  ಹೂಂ ಅನಿಸಿ ನನ್ನ ಕರೀಲಿಕ್ಕ ಬಾ. ಇಬ್ರೂ ಹೋಗೂಣೂ  ಸಿನೇಮಾಕ್ಕ. ಅವ್ರು ಆರೂವರಿಗೆ  ಹೊರಗ ಹೋಗ್ತಾರ ಮತ್ತ. ಅಷ್ಪ್ರಾಗ ಕೇಳಿ ಬಾ. ಮತ್ತ  ಆ ಪಮ್ಮ್ಯಾನ್ನ (ಪ್ರಮೋದನ್ನ) ಕರಕೊಂಡ  ಬರಬ್ಯಾಡಾ” ಅಂತ ಹೇಳಿ ಹೋಗಾಂವಾ. ಆ ಮ್ಯಾಲ ನಾ ಅಣ್ಣಾನ್ನ  ಬೆನ್ನ ಹತ್ತಿ ಹೂಂ ಅನಿಸಿ , ಪ್ರಮೋದನ  ಕಣ್ಣ ತಪ್ಪಿಸಿ ( ಅಂವಾ ಸಣ್ಣಾಂವ ಇದ್ದಾ; ಐದನೇ ಕ್ಲಾಸ್ ಬಹುಶಃ) ನಾ ಪ್ರಕಾಶನ್ನ ಕರೀಲಿಕ್ಕ  ಹೋಗ್ತಿದ್ದೆ. ನನ್ನ ಧನಿ ಕೇಳ್ದಾಂವನs  ನಮ್ಮ ಅಣ್ಣ  ಗಡಿಬಡಿಸಿ “ಸರ್ ನಾಳೆ  ಬರ್ತಿನ್ರಿ” ಅಂತ ಹೇಳಿ   ಓಡಿ ಬಂದ ಬಿಡಾಂವಾ. ಆ ಪುಸ್ತಕ ಸಮೇತನs  ಹೋಗಿದ್ದೂ ಅದ ಭಾಳ  ಸರ್ತೆ. ಇಲ್ಲಾ  ಒಂಚೂರ  ವ್ಯಾಳ್ಯಾ ಇತ್ತಂದ್ರ ಪುಸ್ತಕ ಮನ್ಯಾಗ ಇಟ್ಟ ಓಡೂದು. ಮತ್ತ ಎಲ್ಯರೆ  ಅಣ್ಣಾ ಬ್ಯಾಡ ಅಂದ ಗಿಂದಾರು  ಅಂತ ಡುಗು ಡುಗು ನಮಗ. ಇಲ್ಲಾ ನಮ್ಮವ್ವ “ಆ ಕೂಸಿನ್ನೂ ಕರಕೊಂಡ ಹೋಗ್ರಿ. ಅದೇನ ಬೆಕ್ಕಾ ಕೊಂದದ ಏನ” ಅಂತ ಅಂತಾಳೋ ಏನೋ ಅಂತ ಇನ್ನೊಂದ  ಡುಗು ಡುಗು. ಒಟ್ಟ ಹಂಗಹಿಂಗ ಮಾಡಿ ಓಡ್ತಿದ್ವಿ.

ಹಿಂಗಿತ್ತು  ನಮ್ಮ ಆ ಕಾಲ; ಹಿಂಗಿದ್ರು ನಮ್ಮ ಅಣ್ಣಾ. ಇಲ್ಲ, ಉಂಟುಗಳ  ನಡುವೆ  ಮೌಲಿಕ ಬಾಳು ಬಾಳಿದವರು ಅವರು.ಅದನ್ನೇ ನಮಗೂ ಧಾರೆ  ಎರೆದ್ರು ನಮ್ಮ ಅಣ್ಣಾ. ಮತ್ತ ನಮ್ಮ ಏಕಾನ  ಮಗಾ ಅಲ್ಲೇನ  ನಮ್ಮ ಅಣ್ಣಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Shrivatsa Desai

  ಬರೇ ಯುದ್ಧಸ್ಯ ಅಲ್ಲ “ಪಾಠಶಾಲಯಾ ವಾರ್ತಾ ಅಪಿ ರಮ್ಯಾ” ಅಂತ ಹೇಳಲು ಸರೋಜಿನಿ ಪಡಸಲಗಿಯವರ ಈ ಲೇಖನ ಓದ ಬೇಕು! ಎಷ್ಟೊಂದು ಆತ್ಮೀಯ ಬರಹ, – ಸಿಹಿ – ಕಹಿ- ಆದರೂ ಗೌರವ ಉಕ್ಕಿಸುವ ಅನುಭವಗಳಿಂದ ಹೆಣೆದ ಆ ಕಾಲದ ಶಾಲೆಯ ಮಾಸ್ಟರ್- ಮತ್ತು ಮಕ್ಕಳ ವೃತ್ತಾಂತ! ಅರ್ಧ ಪಗಾರ ತೊಗೊಂಡು ಡಬಲ್ ಮೌಲ್ಯದ ಶಿಕ್ಷಕರ ಸಂಸ್ಕಾರ ಇದ್ದ ಮೇಲೆ ಇಂಥ ಬರಹಗಾರರು ಹುಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ ಅನ್ನ ಬಹುದು!

  ಪ್ರತಿಕ್ರಿಯೆ
  • Sarojini Padasalgi

   ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಮ್ಮ ರೆಸ್ಪಾನ್ಸ್ ನನಗೆ ನಿಜಕ್ಕೂ ಧನ್ಯತಾ ಭಾವ ಮೂಡಿಸ್ತು ಅಂಥ ತಂದೆಯ ಮಗಳಾದದ್ದಕ್ಕೆ. ನಿಮ್ಮ ಸ್ಫೂರ್ತಿ ತುಂಬುವ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
   ಈ ಅವಕಾಶ ನೀಡಿದ ಅವಧಿಗೆ ಅನೇಕ ಧನ್ಯವಾದಗಳು.

   ಪ್ರತಿಕ್ರಿಯೆ
 2. ಶೀಲಾ ಪಾಟೀಲ

  ಇಲ್ಲ….ಉಂಟುಗಳ…ನಡುವಿನ ಬದುಕಿನ ಅಂಕಣ ಓದುತ್ತ ಮೈಮರೆತೆ. ತಂದೆ ಅವರ ಶಿಸ್ತಿನ ಜೀವನ ಕಣ್ಮುಂದೆ ಸುಳಿಯಿತು. ” ಏಕಾ ” ರ ನಂತರವೂ ನಿಮ್ಮ ಬಾಲ್ಯದ ಚಿತ್ರಣ ಇರುವ ಅಂಕಣಗಳು ಆಸಕ್ತಿಯಿಂದ ಓದುವಂತೆ ಮಾಡುತ್ತವೆ. ಎಲ್ಲ ನೆನಪುಗಳ ಸುರುಳಿ ಸುಂದರ ರೀತಿಯಲ್ಲಿ ಬಿಚ್ಚಿಕೊಳ್ಳುತ್ತ ಹೊರಟಿದೆ…

  ಪ್ರತಿಕ್ರಿಯೆ
  • Sarojini Padasalgi

   ಹೌದು ಶೀಲಾ; ನಮ್ಮ ಅಣ್ಣಾ ಭಾಳ ಶಿಸ್ತಿನ ಮನಶ್ಯಾ. ಪಕ್ಕಾ organised ರೀತಿ. ಅದರಾಗಿಂದ ಒಂಚೂರರೇ ನನಗೆ ಜಮಾಸಿದ್ರ ನಾ ಧನ್ಯೆ.
   ನಿಮ್ಮ ಈ ಛಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಶೀಲಾ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: