ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಕ್ ಸರಕ್ ಎಂದು ನಮ್ಮ ಟವಲುಗಳನ್ನು ಕಿತ್ತೆಸೆದಳು..

ಹಮಾಮಿನಲ್ಲಿ ಅಹಂ ಬ್ರಹ್ಮಾಸ್ಮಿ

ನಮ್ಮ ಜೊತೆಗಿದ್ದ ಒಬ್ಬ ಪಂಜಾಬಿ ಸಾಫ್ಟ್ ವೇರ್ ಎಂಜಿನಿಯರ್ ಕೈರೋಗೆ ಕಾಲಿಟ್ಟಾಗಿನಿಂದ, ‘ಇಲ್ಲಿ ಟರ್ಕಿಶ್ ಹಮಾಮ್ ಎಲ್ಲಿದೇಂತ ತಿಳ್ಕೋಬೆಕು. ನಾನು ಟರ್ಕಿಗೆ ಹೋಗಿದ್ದಾಗ, ಭೇಟಿ ಕೊಟ್ಟಿದ್ದೆ. ಅನ್ ಎಕ್ಸ್ ಪೀರಿಯನ್ಸ್  ಯು ಶುಡ್ ನಾಟ್ ಮಿಸ್’ ಎಂದು ಜಪಿಸುತ್ತಿದ್ದಳು. ಅವಳು ತಾನು ಟರ್ಕಿ ನೋಡಿದ್ದೇನೆಂದೂ , ತಾನು ತುಂಬಾ ಅಡ್ವೆಂಚರಸ್ ಎಂದು ತೋರಿಸಿಕೊಳ್ಳಲು ಹಾಗೆ ಹೇಳಿಕೊಳ್ಳುತ್ತಾಳೆಂದು ಕೆಲವರೆಂದರೆ, ನಿಜವಾಗಿ ಅದು ಮರೆಯಲಾಗದಂಥಾ ಅನುಭವ ಇರಬಹುದೆಂಬುದು ಕೆಲವರ ಅನಿಸಿಕೆಯಾಗಿತ್ತು.

hamam bath3ಅಂದು ಸಂಜೆ ನಾವೆಲ್ಲ ಊರು ಸುತ್ತಿ ದಣಿದು ಬಂದು ಡೆಕ್ ಮೆಲೆ ಕೂತು ವೈನ್ ಹಿರುತ್ತಿದ್ದಾಗ ಮತ್ತೇ ಅವಳ ಟರ್ಕಿಶ್ ಹಮಾಮ್ ಕತೆ ಶುರುವಾಯಿತು. ಅದೇನು ಅಷ್ಟೊಂದು ಸ್ಪೆಷಲ್ ಅನುಭವ ಹೇಳೂಂತ ಎಲ್ಲರೂ ದುಂಬಾಲು ಬಿದ್ದೆವು. ಅದಕ್ಕೇ ಕಾಯುತ್ತಿದ್ದಂತೆ ಅವಳು ಶುರು ಮಾಡಿದಳು.

“ನಾವು ಅಲ್ಲಿಗೆ ಹೋದವರೂ ಬರೀ ಹೆಂಗಸರ ಗುಂಪೇ. ಇಸ್ತಾಂಬುಲ್ ನಲ್ಲಿ ಒಂದು ಫೇಮಸ್ ಟರ್ಕಿಶ್ ಹಮಾಮ್ ಗೆ ಹೋದೆವು. ಏನು ಎಕ್ಸ್ ಪೆಕ್ಟ್ ಮಾಡಬೇಕೂಂತ ಗೊತ್ತಿರಲಿಲ್ಲ. ಅದೊಂದು ತುಂಬಾ ಲಕ್ಷೂರಿಯಸ್ ಸ್ನಾನ ಗೃಹ. ಹೆಂಗಸರಿಗೇ ಸೆಪರೇಟ್ ವಿಂಗ್. ಎಲ್ಲಾ ಕಡೆ ಅಮೃತಶಿಲೆ. ಸುಗಂಧ ಚೆಲ್ಲುವ ಮೊಂಬತ್ತಿಗಳು. ಒಳ್ಳೆಯ ಮಾದಕ ಸಂಗೀತ.

ಮೊದಲು ಹೊರಗಡೆ ಇದ್ದ ರೂಮಿಗೆ ನಮ್ಮನ್ನು ಕಳುಹಿಸಿದರು. ಅಲ್ಲಿ ಬಂದ ಹುಡುಗಿ ಬಟ್ಟೆ ಕಳಚಿ ಒಳಗೆ ಬರಬೇಕು ಎಂದು ಹೇಳಿ ಒಂದು ದೊಡ್ಡ ಟವಲ್ ಅನ್ನೂ, ಮೃದು ಚಪ್ಪಲಿಗಳನ್ನು ಕೊಟ್ಟು ಹೋದಳು. ನಾವು ಅಧೀರರಾಗಿ ಅವಳು ಹೇಳಿದಂತೆ ಮಾಡಿ ಟವಲ್ ಸುತ್ತಿಕೊಂಡು ಒಳಗೆ ನಡೆದು ಸ್ನಾನದ ಕೊಳದ ಪಕ್ಕದಲ್ಲಿದ್ದ ಅಮೃತಶಿಲೆಯ ಬೆಂಚಿನ ಮೇಲೆ ಕೂತೆವು. ಮುಂದೇನಾಗುತ್ತದೆಯೋ ಎಂದು ಆತಂಕದಲ್ಲೇ ಕಾದೆವು.

ಆಗ ಇದ್ದಕ್ಕಿದ್ದಂತೆ ಅತ್ತಲಿಂದ ಪೂರ್ತಿ ಬೆತ್ತಲಾಗಿದ್ದು, ಕೇವಲ ಒಂದು ಥಾಂಗ್ ಧರಿಸಿದ್ದ ಒಬ್ಬದೊಡ್ಡ ಸೈಜಿನ ಹೆಂಗಸು ದೊಡ್ಡ ಗಂಟಲಿನಲ್ಲಿ ‘ಹಾಯ್ ಗರ್ಲ್ಸ್’ ಎನ್ನುತ್ತಲೇ ನಮ್ಮತ್ತ ನಡೆದು ಬಂದಳು. ಒಬ್ಬೊಬ್ಬರ ಹತ್ತಿರ ಬಂದವಳೆ ಸರಕ್ ಸರಕ್ ಎಂದು ನಮ್ಮ ಟವಲುಗಳನ್ನು ಕಿತ್ತೆಸೆದಳು. ಆ ಕ್ಷಣ ನಮಗಾದ  ಶಾಕ್ ಅಷ್ಟಿಷ್ಟಲ್ಲ.  ‘ಇನ್ ಅ ಸೆಕೆಂಡ್ ವಿ ವರ್ ಆಲ್ ಸ್ಟಾರ್ಕ್ ನೇಕೆಡ್!’

ಆಗ ‘ಗೆಟ್ ಇಂಟು ದ ವಾಟರ್’ ಎಂದು ಅಜ್ಞಾಪಿಸಿದಳು. ಆ ಮೇಲೆ ಮತ್ತಷ್ಟು ಹುಡುಗಿಯರು ಬಂದರು. ನಂತರ ಎಲ್ಲಾ ಆಹ್ಲಾದಕರವಾಗಿತ್ತು. ಮಸಾಜ್ ಸ್ನಾನ ಎಲ್ಲಾ ಅದ್ಬುತವಾಗಿತ್ತು. ಆದರೆ, “ಅವಳು ಟವಲ್ ಕಿತ್ತುಕೊಂಡ ಕ್ಷಣ.. ಈಗಲು ಮರೆಯೋಕೆ ಸಾಧ್ಯವಿಲ್ಲ” ಎಂದು ಬಿದ್ದು ಬಿದ್ದು ನಕ್ಕಳು. ನಮ್ಮೆಲ್ಲರಿಗೂ ನಗು ತಡೆಯಲಾಗಲಿಲ್ಲ.

ಆದರೆ ಆ ಹಠಾತ್ ಕ್ರಿಯೆಗೆ ಕಾರಣ ಏನು? ಎಂಬ ಚರ್ಚೆ ಶುರುವಾಯಿತು.

‘ಸಂಕೋಚ ಹೋಗಲಾಡಿಸೋಕೆ ಇರಬೇಕು. ಎಲ್ಲ ಒಟ್ಟಿಗೆ ಬೆತ್ತಲಾದರೆ ಇನ್ಹಿಬಿಶನ್ಸ್ ಗಾನ್!; ಎಂದು ಒಬ್ಬರೆಂದರೆ, ‘ನನಗನ್ನಿಸೋದು ಅದು ಸ್ಪಿರಿಚುಯಲ್ ಅಂತ. ನೋಡು, ಒಂದು ಕ್ಷಣದಲ್ಲಿ ಆಹ್! ಎಲ್ಲಾ ಕಳೆದುಹೋಯ್ತಲ್ಲಾ’ ಎಂದು ಇನ್ಯಾರೊ ಅಂದಾಗ ಗಂಭೀರವಾಗಿ ಮಿಕ್ಕವರು ತಲೆದೂಗಿದೆವು.

ಅಷ್ಟು ಹೊತ್ತಿಗೆ ಊಟದ ಹೊತ್ತಾಗಿತ್ತು. ಅಹಂ ಬ್ರಹ್ಮಾಸಿ ಎನ್ನುತ್ತಾ ಎಲ್ಲರೂ ಹಗುರಾಗಿ ಎದ್ದೆವು.

 

ಕನ್ನಡಪ್ರೇಮಿ

ನಮಗೆ ಕ್ರೂಸ್ ನಲ್ಲಿ ಒಂದು ಬೆಂಗಳೂರಿನ ಕುಟುಂಬದ ಪರಿಚಯವಾಯಿತು. ತುಂಬಾ ಸುಸಂಸ್ಕೃತ, ಸ್ನೇಹಮಯಿ ಕುಟುಂಬ. ಗಂಡ, ಹೆಂಡತಿ, ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲಾ ಬಂದಿದ್ದರು. ಆತನ ಹೆಸರು ಮೂಸಾ. ಅವರ ಕುಟುಂಬ ಬೆಂಗಳೂರಿನಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಬುಸಿನೆಸ್ ಇಟ್ಟುಕೊಂಡಿದ್ದರು. ಬೆಂಗಳೂರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ, ಹೆಮ್ಮೆಪಡುವ ಹಳೇ ಬೆಂಗಳೂರಿಗರು.

ನಮ್ಮ ‘ವಿಮೆನ್ಸ್ ಗ್ರೂಪ್’ ಕಂಡು ಖುಷಿಯಾದ ಅವರು ನಾನು ಬೆಂಗಳೂರಿನವಳೆಂದು ತಿಳಿದು, ‘ಕನ್ನಡದಲ್ಲಿ ಮಾತಾಡಬಹುದಾ… ನೋಡಿ ನಮ್ಮವರು ಸಿಕ್ರೆ ಎಷ್ಟು ಖುಷಿ’ ಎಂದು ರೋಮಾಂಚನಗೊಂಡರು. ವಿಶೇಷವಾಗಿ ವೆಜಿಟೇರಿಯನ್ ಅಡಿಗೆಗಳು ಯಾವುದೆಂದು ನನಗಾಗಿ ಪರಿಚಯ ಮಾಡಿಕೊಟ್ಟರು.

ಮಾರನೆಯ ದಿನ ರಾತ್ರಿ ಊಟಕ್ಕೆ ಬಂದಾಗ ಮೂಸಾ ಅವರು ಸ್ವಲ್ಪ ಬೇಸರದಲ್ಲಿದ್ದಂತೆ ಕಂಡಿತು. ಆ ಮೇಲೆ ನನ್ನ ಹತ್ತಿರ ಬಂದು ‘ನೋಡು, ನಿಮ್ಮ ಗುಂಪಿನವರು ಹೇಗೆ ಬೆಂಗಳೂರನ್ನು ಬೈದುಕೊಳ್ಳುತ್ತಾರೆ. ನಿನ್ನೆ ಎಲ್ಲಾ ನೋಡ್ತಿದ್ದೆ. ಆಲ್ ದ ಟೈಮ್ ದೆ ಆರ್ ಬ್ಯಾಂಗಲೂರ್ ಬ್ಯಾಶೀಂಗ್. ನೀವು ಹೇಳಬೇಕು. ಸುಮ್ಮನೆ ಇರೋದು ತಪ್ಪು ಎಂದರು.

1413577235-972_Screen-Shot-2014-10-18-at-12.48.52-AMಆಗ ನನ್ನ ಪಕ್ಕದಲ್ಲಿದ್ದ ದೆಹಲಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ, ಅಲ್ಪ-ಸ್ವಲ್ಪ ಕನ್ನಡ ಅರ್ಥವಾಗುತ್ತಿದ್ದಾಕೆ, ‘ ನಾವು ಹೇಳೊದರಲ್ಲಿ ಏನು ತಪ್ಪಿದೆ. ಬ್ಯಾಂಗಲೂರ್ ಇಸ್ ಹಾರಿಬಲ್. ಸೋ ಮಚ್ ಟ್ರಾಫಿಕ್, ಸೋ ಮಚ್ ಪೊಲ್ಲ್ಯೂಶನ್’ ಎಂದು ಮುಂದುವರಿಯದ ಮೊದಲು ಆತ ‘ಅದು ನೀವೆಲ್ಲಾ ಬಂದ ಮೇಲೆ ಆಗಿದ್ದು. ಮೊದಲು ನಮ್ಮ ಬೆಂಗಳೂರು ಸ್ವರ್ಗದ ಹಾಗಿತ್ತು. ಎಷ್ಟು ತಂಪಾಗಿತ್ತು. ಎಷ್ಟು ಹಸಿರಾಗಿತ್ತು. ನಮ್ಮ ಮನೆಗಳಲ್ಲಿ ಫ್ಯಾನುಗಳಿರಲಿಲ್ಲ. ಈಗ ನೋಡಿ ಭಾರತದವರೆಲ್ಲಾ ಬೆಂಗಳೂರಿಗೇ ಬರಬೇಕು. ಇನ್ನೇನಾಗುತ್ತೆ. ಇಷ್ಟೊಂದು ಜನರನ್ನು ತಡೆಯುವ ಶಕ್ತಿ ಬೆಂಗಳೂರಿಗಿಲ್ಲಪ್ಪ’ ಅಂದರು.

‘ಆದರೆ ನಾವು ಎಷ್ಟೊಂದು ದುಡ್ಡು ತಂದಿದ್ದೇವೆ ನಿಮ್ಮ ಬೆಂಗಳೂರಿಗೆ’ ಎಂದು ಕೊಂಕಾಗಿ ದೆಹಲಿಯವರೆಂದಾಗ ಆತನ ಮೈಯ್ಯುರಿದು ಹೋಯಿತು, ‘ಯಾರಿಗೆ ಬೇಕ್ರೀ ನಿಮ್ಮ ದುಡ್ಡು? ನೀವು ಬರೋದೂ ಬೇಕಿಲ್ಲ, ನಿಮ್ಮ ದುಡ್ಡು ಬೇಕಿಲ್ಲ… ನಾವು ನಮ್ಮ ಮರಗಳನ್ನು ಕಡಿಯುವುದು ಬೇಕಿಲ್ಲ. ಒಂದೊಂದು ಮರ ಉರುಳಿದಾಗ ಹೇಗೆ ಹೊಟ್ಟೆ ಉರಿದುಹೋಗುತ್ತೆ. ಹೇಗಾಗಿ ಹೋಯ್ತಲ್ಲ ನಮ್ಮ ಬೆಂಗಳೂರು’ ಎಂದವರೇ ಅಲ್ಲಿಂದ ನಿಧಾನವಾಗಿ ನಡೆದು ಹೋದರು. ಸ್ವಲ್ಪ ಹೊತ್ತು ಮೌನ ಆವರಿಸಿತ್ತು.

ಅದೇಕೋ ಅಂದು ಸಿಹಿ ತಿಂಡಿ, ಐಸ್ ಕ್ರೀಮ್, ಫ್ರೂಟ್ ಸಲಾಡ್ ಗಳ ಡೆಸರ್ಟ್ ಗಳು ತುಂಬಿದ್ದ ಟೇಬಲಿನತ್ತ ಹೋಗಲು ಮನಸ್ಸಾಗಲಿಲ್ಲ. ಸಾಲುಸಾಲಾಗಿ ನ್ಯಾಶನಲ್ ಕಾಲೇಜು ರಸ್ತೆಯಲ್ಲಿ ಉರುಳಿ ಮಲಗಿದ್ದ ಶತಾಯುಷಿ ಮರಗಳ ಚಿತ್ರ ಕಣ್ಮುಂದೆ ಕಟ್ಟುತ್ತಲೆ ಇತ್ತು.

‍ಲೇಖಕರು Admin

23 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading