ಸಿದ್ದಲಿಂಗಯ್ಯನವರ ಮನದಾಳದ ಮಾತು..

ಅಪ್ಪಗೆರೆ ಸೋಮಶೇಖರ್

ಸಿದ್ದಲಿಂಗಯ್ಯ ಅವರ ಸಂದರ್ಶನ

ಕನ್ನಡ ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ಅನ್ನದ ಭಾಷೆಯಾಗಬೇಕು

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದ ಕನ್ನಡದ ಕವಿಗಳಾದ ತಾವು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದರ ಬಗೆಗೆ ನಿಮಗೆ ಏನನ್ನಿಸುತ್ತಿದೆ?

ಇದೊಂದು ಗೌರವ, ಇದಕ್ಕಿಂತ ಹೆಚ್ಚಾಗಿ ಗುರುತರವಾದ ಜವಾಬ್ದಾರಿ. ನನ್ನ ಮನಸ್ಸಿನ ಭಾವನೆಗಳನ್ನ, ಚಿಂತನೆಗಳನ್ನ ಲಕ್ಷಾಂತರ ಜನರೊಂದಿಗೆ ಹಂಚಿಕೊಳ್ಳಲು ಸಿಕ್ಕಿದ ಅವಕಾಶ. ನಾಡಿನ ಎಲ್ಲೆಡಿಯಿಂದ ಮತ್ತು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ಆ ದಿನ ಬಂದು ಒಂದು ಕಡೆ ಸೇರುತ್ತಾರೆ. ಅವರ ಮುಂದೆ ನಾಡು ನುಡಿಯ, ಕನ್ನಡ ಜನಸಮುದಾಯದ ಹಿತಚಿಂತನೆಯನ್ನು ಮಾಡುವ ಒಂದು ಸಂದರ್ಭಕ್ಕೆ ನಾನು ಕೂಡ ಸಾಕ್ಷಿಯಾಗುತ್ತೇನೆ ಅನ್ನೋದು ಕೂಡ ಸಂತಸದ ಸಂಗತಿ.

ಕನ್ನಡ ನಾಡಿನಲ್ಲಿಯೇ ಅನಾಥ ಸ್ಥಿತಿ ಎದುರಿಸುತ್ತಿರುವ ಕನ್ನಡ ಭಾಷೆ ಆಡಳಿತ ಭಾಷೆಯಾಗದೆ, ಶಿಕ್ಷಣ ಮಾಧ್ಯಮ ಭಾಷೆಯಾಗದೆ, ನ್ಯಾಯಾಲಯದ ಭಾಷೆಯಾಗದೆ, ಅನ್ನ-ಉದ್ಯೋಗ ಭಾಷೆಯಾಗದೆ ಇರುವುದು ದುರಂತವಲ್ಲವೆ? ಈ ದುರಂತದಿಂದ ಹೊರಬರುವುದಾದರು ಹೇಗೆ?

ಈ ವಿಚಾರದಲ್ಲಿ ಕನ್ನಡಿಗರ ಜಾಗೃತಿ ಆಗಬೇಕು. ಆಳುವವರಿಗೂ ಈ ಬಗ್ಗೆ ಇಚ್ಛಾಸಕ್ತಿ ಬರಬೇಕು. ಈ ಎರಡೂ ಬಲವಾದರೆ ಶಿಕ್ಷಣದಲ್ಲಿ, ಆಡಳಿತದಲ್ಲಿ, ನ್ಯಾಯಾಂಗದಲ್ಲಿ ಕನ್ನಡ ನೆಲೆಯೂರಲಿಕ್ಕೆ ಸಾಧ್ಯ. ಕನ್ನಡಿಗರಿಗೆ ಇರುವ ಕೀಳರಿಮೆ ಮತ್ತು ಇಂಗ್ಲೀಷ್ ವ್ಯಾಮೋಹ ನಮ್ಮನ್ನ ಈ ಸ್ಥಿತಿಗೆ ದೂಡಿವೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ.

ಗಡಿಭಾಗದ ಕನ್ನಡ ಊರು, ಕನ್ನಡ ಶಾಲೆ, ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರವನ್ನು ಸೂಚಿಸಬಯಸುತ್ತೀರಿ?

ಗಡಿಭಾಗಗಳಲ್ಲಿ ಎರಡು ರೀತಿ ಇದೆ. ಕನರ್ಾಟಕದ ಒಳಗಿನ ಗಡಿಭಾಗ ಒಂದಾದರೆ, ಕನರ್ಾಟಕಕ್ಕೆ ಹೊಂದಿಕೊಂಡಂತೆ ಇರುವ ಹ್ರೆರರಾಜ್ಯಗಳ ಗಡಿಭಾಗ ಮತ್ತೊಂದು. ಕೇರಳದ ಕಾಸರಗೂಡು, ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ, ಆಂಧ್ರದ ಮೇದಕ್ಕು, ಮೆಹಬೂಬ್ ನಗರ, ಕನರ್ೂಲ್, ತಮಿಳುನಾಡಿನ ತಾಳವಾಡಿ, ಹೊಸೂರು, ಡಂಕನಕೋಟೆ ಇಲ್ಲೆಲ್ಲಾ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲೆ ಇದ್ದಾರೆ. ಇಲ್ಲೆಲ್ಲಾ ನೂರಾರು ಕನ್ನಡ ಮಾಧ್ಯಮ ಶಾಲೆಗಳಿವೆ. ಕಾಸರಗೂಡು ಒಂದರಲ್ಲೆ 180 ಕನ್ನಡ ಮಾಧ್ಯಮ ಶಾಲೆಗಳಿವೆ. ತಾಳವಾಡಿಯಲ್ಲಿ 40 ಕನ್ನಡ ಮಾಧ್ಯಮ ಶಾಲೆಗಳಿವೆ. ಸಾಂಗ್ಲಿ ಜಿಲ್ಲೆಯ ಜತ್ತು, ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ಮತ್ತು ದಕ್ಷಿಣ ಸೊಲ್ಲಾಪುರದಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇಲ್ಲೂ ಸಹಾ ನೂರಾರು ಕನ್ನಡ ಶಾಲೆಗಳಿವೆ. ಇಲ್ಲೆಲ್ಲಾ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಸಾವಿರಾರು ಮಕ್ಕಳಿದ್ದಾರೆ. ಕಾಸರಗೂಡು, ದಕ್ಷಿಣ ಸೊಲ್ಲಾಪುರ, ಜತ್ತು, ಅಕ್ಕಲಕೋಟೆ, ಆಂಧ್ರದ ಕೃಷ್ಣಾತೀರದಲ್ಲಿರುವ ಹದಿಮೂರು ಹಳ್ಳಿಗಳು, ಅದೋನಿ, ಆಲೂರು, ಹಿರೆಯಾಳ ಇಲ್ಲೆಲ್ಲಾ ಕನ್ನಡಿಗರಿದ್ದಾರೆ. ಇವೆಲ್ಲವೂ ಕರ್ನಾಟಕಕ್ಕೆ ಸೇರಬೇಕಾದ ಪ್ರದೇಶಗಳು. ಆದರೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿಯೇ ಉಳಿದುಹೋಗಿವೆ. ಕಾಸರಗೂಡಿನ ಪಯಶ್ವಿನಿ ನದಿಯ ಉತ್ತರ ಭಾಗ ಕರ್ನಾಟಕಕ್ಕೆ ಸೇರಬೇಕು ಅಂತ ಮಹಾಜನ್ ವರದಿ ಹೇಳಿದೆ. ಕೇರಳದ ಕೆಲವು ಮುಖಂಡರು ಸಹಾ ಈ ಭಾಗ ಕರ್ನಾಟಕಕ್ಕೆ ಸೇರಬೇಕು ಅಂತ ಹೇಳಿದ್ದಾರೆ. ಆದರೆ, ಕರ್ನಾಟಕದ ನಾಯಕರು, ಕರ್ನಾಟಕ ಸರ್ಕಾರ ಆ ಬಗ್ಗೆ ಮುತುವರ್ಜಿ ವಹಿಸದೆ ಇರುವ ಕಾರಣ ಕಾಸರಗೂಡು ಕೇರಳದಲ್ಲೆ ಉಳಿಯುವಂತಾಗಿದೆ. ಇದು ದುರದೃಷ್ಟಕರ. ಅಲ್ಲಿ ಕನ್ನಡವನ್ನು ಸಾಂಸ್ಕೃತಿಕ ಭಾಷೆಯನ್ನಾಗಿ, ಶಿಕ್ಷಣದ ಭಾಷೆಯನ್ನಾಗಿ ಉಳಿಸುವ ಕೆಲಸವನ್ನಾದರು ನಾವು ಮಾಡಬೇಕು.

ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತವಾಗಿ ಭಾಷಾ ಪಠ್ಯಗಳನ್ನು ಪೂರೈಸಬೇಕು. ನಮ್ಮ ಕನರ್ಾಟಕದ ಮಕ್ಕಳು ಪಿ.ಯು.ಸಿ.ಯಲ್ಲಿ ವಿಜ್ಞಾನದ ಐಚ್ಛಿಕ ವಿಷಯಗಳನ್ನು ಕನ್ನಡದಲ್ಲಿ ಓದುವುದಿಲ್ಲ. ಆದರೆ ಮಹಾರಾಷ್ಟ್ರ, ತಮಿಳುನಾಡು, ಕೇರಳದ ಗಡಿಭಾಗದಲ್ಲಿರುವ ಕನ್ನಡದ ಮಕ್ಕಳು ಪಿ.ಯು.ಸಿ.ಯಲ್ಲಿ ವಿಜ್ಞಾನದ ಐಚ್ಛಿಕ ವಿಷಯಗಳನ್ನು ಸಹಾ ಕನ್ನಡ ಮಾಧ್ಯಮದಲ್ಲಿ ಓದುತ್ತಾರೆ. ಈ ಮಕ್ಕಳಿಗೆ ಅಲ್ಲಿ ವಿಜ್ಞಾನದ ಐಚ್ಛಿಕ ವಿಷಯಗಳ ಕನ್ನಡ ಪಠ್ಯ ಪುಸ್ತಕಗಳು ಸರಿಯಾಗಿ ಲಭ್ಯವಿಲ್ಲ. ಅಲ್ಲಿಯ ಉಪನ್ಯಾಸಕರು ತಮಿಳು, ಮರಾಠಿ, ಮಲೆಯಾಳಂನಲ್ಲಿ ಪಾಠ ಮಾಡುತ್ತಾರೆ. ಅದನ್ನ ಕನ್ನಡದ ಮಕ್ಕಳು ಕೇಳಿಕೊಂಡು ಕನ್ನಡದಲ್ಲಿ ಉತ್ತರ ಬರೆಯುವ ಸ್ಥಿತಿ ಇದೆ. ಆದ್ದರಿಂದ ಕನರ್ಾಟಕ ಸಕರ್ಾರ ಐಚ್ಛಿಕ ಪಠ್ಯಗಳನ್ನು ಕನ್ನಡದಲ್ಲಿ ಮುದ್ರಿಸಿ ಉಚಿತವಾಗಿ ಗಡಿನಾಡಿನ ಕನ್ನಡ ಮಕ್ಕಳಿಗೆ ಹಂಚಬೇಕು. ನಾನು ಆ ಊರುಗಳಿಗೆ ಹಲವು ಸಾರಿ ಭೇಟಿ ಕೊಟ್ಟಾಗ ಅಲ್ಲಿನ ವಿದ್ಯಾಥರ್ಿಗಳು ನನಗೆ ಈ ವಿಷಯವನ್ನು ಹೇಳಿದರು. ಗಡಿಭಾಗದಲ್ಲಿ ಕನ್ನಡ ಉಳಿಯಬೇಕಾದರೆ ಸಕರ್ಾರ ಈ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಅಲ್ಲಿನ ಗ್ರಂಥಾಲಯಗಳಿಗೆ ಕನ್ನಡದ ಕತೆ, ಕಾದಂಬರಿ, ನಾಟಕ, ಕಾವ್ಯ ಇತ್ಯಾದಿ ಪುಸ್ತಕಗಳನ್ನು ಕೊಂಡುಕೊಳ್ಳುವ ಅವಕಾಶ ಇಲ್ಲ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಸಾವಿರಾರು ಕನ್ನಡ ಶಾಲೆಗಳಿಗೆ, ಒಂದು ಶಾಲೆಗೆ ಇಪ್ಪತ್ತೈದು ಸಾವಿರ ರೂಪಾಯಿಯಂತೆ, ಕೋಟ್ಯಾಂತರ ರೂಪಾಯಿಯ ಕನ್ನಡ ಪುಸ್ತಕಗಳನ್ನು ಉಚಿತವಾಗಿ ಹಂಚಿದೆ. ಮಕ್ಕಳಿಗೆ ಬಹಳ ಸಂತೋಷವಾಯಿತು.

ಕನ್ನಡ ಭಾಷೆ ಸಾರ್ವಭೌಮ ಭಾಷೆಯಾಗಿ ಉಳಿಯಬೇಕಾದರೆ, ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹೀಷಿ ವರದಿಯಂತಹ ಕನ್ನಡ ಭಾಷಾ ವರದಿಗಳ ಪ್ರಸ್ತುತತೆ ಹಾಗೂ ಅನುಷ್ಠಾನದ ಮಾರ್ಗೋಪಾಯಗಳೇನು?

ಕನ್ನಡಿಗರ ಉದ್ಯೋಗವನ್ನು ಕುರಿತು ಇರುವಂತಹ ಸರೋಜಿನಿ ಮಹೀಷಿ ವರದಿಯನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಜಾರಿಗೆ ತರಬೇಕು. ಸರೋಜಿನಿ ಮಹೀಷಿ ವರದಿ ತಯಾರಾದಾಗ ಕರ್ನಾಟಕದಲ್ಲಿ ಈ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞನಗಳು(ಐ.ಟಿ. ಬಿ.ಟಿ.) ಇರಲಿಲ್ಲ. ಈಗಿರುವ ಖಾಸಗೀವಲಯ, ಐ.ಟಿ.ಬಿ.ಟಿ ಕ್ಷೇತ್ರಗಳನ್ನು ಸೇರಿಸಿ ಮಹೀಷಿ ವರದಿಯನ್ನು ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಕನ್ನಡ ಅನ್ನದ ಭಾಷೆ ಆಗುತ್ತದೆ. ಈ ದಿಕ್ಕಿನಲ್ಲಿ ನಮ್ಮ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಕೈಗಾರಿಕೆ ಇಲಾಖೆ ಸರೋಜಿನಿ ಮಹೀಷಿ ವರದಿಯನ್ನು ಒಪ್ಪಿ ಆದೇಶ ಹೊರಡಿಸಬೇಕು. ಆಗ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಕನ್ನಡಿಗರ ನೇಮಕಾತಿ ಸುಲಭವಾಗುತ್ತದೆ. ಈಗ ಮಹೀಷಿ ವರದಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ.

ಉತ್ತರ ಕರ್ನಾಟಕ, ಕೊಡಗು ಭಾಗಗಳಲ್ಲಿ ಕೇಳಿಬರುತ್ತಿರುವ ಪ್ರತ್ಯೇಕತೆಯ ಕೂಗು ಅಖಂಡ ಕರ್ನಾಟಕದ ಅಸ್ತಿತ್ವಕ್ಕೆ ಧಕ್ಕೆ ತರಬಹುದಲ್ಲವೆ? ಹಾಗಾದರೆ, ಈ ಪ್ರತ್ಯೇಕತೆಯ ಕೂಗನ್ನು ಹೇಗೆ ನಿವಾರಿಸಿಕೊಳ್ಳುವುದು?

ಉತ್ತರ ಕರ್ನಾಟಕವನ್ನು ಒಳಗೊಂಡಂತೆ, ಕರ್ನಾಟಕದ ಹಿಂದುಳಿದ ಭಾಗಗಳ ಅಭಿವೃದ್ಧಿಯ ಕಡೆಗೆ ಸರ್ಕಾರ ಹೆಚ್ಚು ಗಮನಹರಿಸಬೇಕು. ಆಗ ಈ ಅಪಸ್ವರ ನಿಲ್ಲುತ್ತದೆ. ಈ ಭಾಗದ ಜನರು, ‘ಸರ್ಕಾರಗಳು ನಮ್ಮ ಪ್ರದೇಶಗಳನ್ನು ಅಭಿವೃದ್ಧಿ ಗೊಳಿಸಿಲ್ಲ, ಪಕ್ಷಪಾತ ಮಾಡುತ್ತಿದ್ದಾರೆ’ ಎಂಬ ಭಾವನೆಯಿಂದ ಪ್ರತ್ಯೇಕತೆಯ ಮಾತುಗಳನ್ನ ಆಡುತ್ತಿದ್ದಾರೆ. ಪ್ರತ್ಯೇಕತೆಯ ಕೂಗು ಸಮಂಜಸವಲ್ಲ. ಸರ್ಕಾರ ಕೂಡ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಗಮನಕೊಡಬೇಕು. ಆಗ ಈ ಕೂಗು ಕಡಿಮೆಯಾಗುವ ಸಾಧ್ಯತೆ ಇದೆ.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಾರಣಕ್ಕಾಗಿ ಸಮಾನ ಶಿಕ್ಷಣ ನೀತಿಯ ಅನುಷ್ಠಾನ, ಖಾಸಗೀರಣಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುವುದು ಇವತ್ತಿನ ಅನಿವಾರ್ಯವಲ್ಲವೆ? ಇದು ಸಾಧ್ಯವಾಗುವ ಮಾರ್ಗಸೂಚಿಗಳು ಯಾವುವು?

ಇದಕ್ಕೆ ಕನ್ನಡ ಜನತೆ, ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಾಧ್ಯ ಮಾಡಬೇಕು. ಸಮಾನ ಶಿಕ್ಷಣ ನೀತಿ ಜಾರಿಯಾಗದೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಸಮಾನ ಶಿಕ್ಷಣ ನೀತಿಯೊಂದೇ ಇವತ್ತಿನ ಎಲ್ಲಾ ಬಿಕ್ಕಟ್ಟುಗಳಿಗೆ ಪರಿಹಾರ.

ತಾವು ವಿದ್ಯಾರ್ಥಿ ದಿಸೆಯಿಂದಲೂ ಮೌಢ್ಯ, ಕಂದಾಚಾರವನ್ನು ಪ್ರಶ್ನೆ ಮಾಡುತ್ತಾ ಬಂದವರು. ವಿಧಾನ ಪರಿಷತ್ತ್ ಸದಸ್ಯರಾಗಿದ್ದಾಗ ಹೋರಾಟ ಮಾಡಿ ‘ಅಜಲು ಪದ್ಧತಿ ನಿಷೇಧ ಕಾಯ್ದೆ’ಯನ್ನು ಜಾರಿಗೊಳಿಸಿದವರು. ಆದರೆ, ಮಡೆಮಡೆ ಸ್ನಾನ, ಪಂಕ್ತಿಭೇದ ನೀತಿ ಜೀವಂತವಿರುವ ಈ ಹೊತ್ತಿನಲ್ಲಿ ‘ಮೌಢ್ಯ ನಿಷೇಧ ಕಾಯ್ದೆ’ ಅನಿವಾರ್ಯವೇ?

ಈ ಮೌಢ್ಯ ನಿಷೇಧ ಕಾಯ್ದೆ ಇಂದಿನ ತುರ್ತು ಅಗತ್ಯ. ಮೂಢ ನಂಬಿಕೆಗೆ ಅರ್ಥವೂ ಇಲ್ಲ, ಹಿತವೂ ಅಲ್ಲ. ಇಂತಹ ಕಂದಾಚಾರವನ್ನ ತಡೆಗಟ್ಟಬೇಕಾದರೆ ಒಂದು ಕಾಯ್ದೆಯ ಅವಶ್ಯಕತೆ ಇದೆ. ಅದಕ್ಕೆ ನಾನು ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿ ಎಂದು ಕರ್ನಾಟಕ ಸರ್ಕಾರವನ್ನ ಒತ್ತಾಯ ಮಾಡುತ್ತಿದ್ದೇನೆ. ನನಗೆ ಸಿಕ್ಕಿದ ಎಲ್ಲಾ ವೇದಿಕೆಗಳಲ್ಲೂ ಇದನ್ನ ಹೇಳುತ್ತಿದ್ದೇನೆ. ಈ ಬಗ್ಗೆ ಪ್ರಗತಿಪರ ಸಂಘಟನೆಗಳು, ಸ್ವಾಮೀಜಿಗಳು ಅಲ್ಲಲ್ಲಿ ದನಿ ಎತ್ತಿದ್ದಾರೆ. ಸರ್ಕಾರ ಇದನ್ನ ಪರಿಗಣಿಸಿ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಜನರಿಗೆ ಇದರಿಂದ ಒಳ್ಳೆಯದೆ ಆಗುತ್ತದೆ. ದುರಾದೃಷ್ಟವೆಂದರೆ, ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ಕಾಯ್ದೆ ಜಾರಿಯಾದರೆ ಜನ ದೇವಸ್ಥಾನಗಳಿಗೆ ಹೋಗುವ ಹಾಗಿಲ್ಲ, ದೇವರ ಪೂಜೆ ಮಾಡುವ ಹಾಗಿಲ್ಲ, ದೇವಾಲಯಗಳನ್ನೆಲ್ಲ ಮುಚ್ಚುತ್ತಾರೆ ಅಂತ ಸುಳ್ಳು ವದಂತಿಗಳನ್ನ ಹಬ್ಬಿಸಿ ಈ ಕಾಯ್ದೆಯ ಬಗ್ಗೆ ಗೊಂದಲ ಹುಟ್ಟಿಸುತ್ತಿದ್ದಾರೆ. ಇದು ಸರಿಯಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮೌಢ್ಯ ನಿಷೇಧ ಕಾಯ್ದೆಯನ್ನ ಜಾರಿ ಮಾಡಬೇಕು.

ನಮ್ಮ ರಾಜ್ಯದಲ್ಲಿ ಇಂದಿಗೂ ಜೀತಗಾರಿಕೆ, ತಲೆಯ ಮೇಲೆ ಮಲ ಹೊರುವ ಪದ್ಧತಿ, ಬಾಲಕಾರ್ಮಿಕ ಸಮಸ್ಯೆ ಹಾಗೂ ದೇವದಾಸಿ ಹೆಣ್ಣು ಮಕ್ಕಳ ಪುನರ್ವಸತಿ ಯೋಜನೆ ಸಾಕಾರಗೊಳ್ಳದಿರುವಿಕೆಯ ತೊಡಕನ್ನು ಬಗೆಹರಿಸಿಕೊಳ್ಳುವುದು ಹೇಗೆ?

ಇದು ಜನಪರ ಸಂಘಟನೆಯಿಂದ ಸಾಧ್ಯ. ಸಂಘಟನಾತ್ಮಕವಾದ ಒತ್ತಡ ಮತ್ತು ಮಾನಸಿಕ ಜಾಗೃತಿ ಆಗಬೇಕು. ಜೀತಗಾರರನ್ನು ಸಂಘಟನೆ ಮಾಡಿ ಅವರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಬೇಕು. ಜೀಗಾರರನ್ನು ಜೀತಗಾರಿಕೆಯಿಂದ ಮೊದಲು ಬಿಡುಗಡೆಗೊಳಿಸಿ, ನಂತರ ಅವರಿಗೆ ಪುನರ್ ವಸತಿಯನ್ನು ಕಲ್ಪಿಸಬೇಕು. ದೇವದಾಸಿ ಪದ್ಧತಿಯಿಂದಲೂ ಸಹಾ ಹೆಣ್ಣು ಮಕ್ಕಳನ್ನು ಬಿಡುಗಡೆ ಗೊಳಿಸಬೇಕು, ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ವಿವಿಧ ಕೌಂನ್ಸಿಲ್ಗಳಲ್ಲಿ ಅವರಿಗೆ ತರಬೇತಿ ಕೊಡಬೇಕು. ಶಿಕ್ಷಿತ ದೇವದಾಸಿ ಹೆಣ್ಣು ಮಕ್ಕಳಿಗೆ ನರ್ಸಿಂಗ್ ಟ್ರೈನಿಂಗ್ ಮುಂತಾದ ಉದ್ಯೋಗ ತರಬೇತಿಗಳನ್ನ ನೀಡಿ ಅವರನ್ನ ಉದ್ಯೋಗಸ್ಥರನ್ನಾಗಿ ಮಾಡಬೇಕು. ಈ ಕೆಲಸವನ್ನ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತುರ್ತಾಗಿ ಮಾಡಬೇಕಾಗಿದೆ.

ನಮ್ಮ ಸಮಾಜದಲ್ಲಿ ಇಂದಿಗೂ ಜಾತೀಯತೆ, ಅಸ್ಪೃಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ, ಮರ್ಯಾದೆ ಹತ್ಯೆಗಳು ಜೀವಂತವಾಗಿವೆ. ಇದರಿಂದ ಸಮಾಜದ ಬಿಡುಗಡೆ ಸಾಧ್ಯವಿಲ್ಲವೆ?

ಸಮಾಜದಲ್ಲಿ ಇವುಗಳ ನಿವಾರಣೆಯಾಗಬೇಕು. ಮರ್ಯಾದೆ ಹತ್ಯೆಗಿಂತ ಅನಾಗರಿಕವಾದ ಕೃತ್ಯ, ನಡವಳಿಕೆ ಮತ್ತೊಂದಿಲ್ಲ. ಇದು ಮರ್ಯಾದೆಯ ಹತ್ಯೆ. ಹಿಂದೆ ಅಂತರ್ ಜಾತಿ ವಿವಾಹವಾದರೆ ಹುಡುಗನನ್ನ ಕೊಲೆ ಮಾಡುತ್ತಿದ್ದರು. ಈಗ ಏನಾಗುತ್ತಿದೆ, ಪ್ರಗತಿಪರ ಸಂಘಟನೆಗಳ, ದಲಿತ ಸಂಘಟನೆಗಳ ಬಗೆಗೆ ಇರುವ ಭಯದಿಂದಲೋ ಏನೋ ಹೆತ್ತವರು ತಮ್ಮ ಮಗಳನ್ನೆ ಕೊಲೆ ಮಾಡುತ್ತಿದ್ದಾರೆ. ಇದೊಂದು ಅತ್ಯಂತ ನೀಚ, ಅಮಾನವೀಯ ಕೃತ್ಯ. ಇದು ನಿಲ್ಲಬೇಕು. ಸಕರ್ಾರ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು. ಅಂತರ್ ಜಾತಿ ವಿವಾಹಗಳಿಗೆ ಸಮಾಜ ಪ್ರೋತ್ಸಾಹ ಕೊಡಬೇಕು. ಅಂತರ್ ಜಾತಿ ವಿವಾಹಿತರಿಗೆ ಮೀಸಲಾತಿ ಕೂಡ ಕೊಡಬೇಕು. ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಈ ಸಂಬಂಧ ನಾನು ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದೆ. ಆಗ ಅದಕ್ಕೆ ಎಲ್ಲರ ಬೆಂಬಲ ಸಿಕ್ಕಿತ್ತು. ಅಂದಿನ ಸಕರ್ಾರ ಕೂಡ ಮುಂದಿನ ಮಂತ್ರಿಮಂಡಲದಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಆದರೆ ನಾನು ಎಂ.ಎಲ್.ಸಿ.ಯಿಂದ ನಿವೃತ್ತನಾದ್ದರಿಂದ ಈ ಹೋರಾಟವನ್ನು ಮುಂದುವರಿಸಲಿಕ್ಕೆ ಆಗಲಿಲ್ಲ. ಇಂದು ಈ ಮಸೂದೆಯ ಅಗತ್ಯ ಇದೆ. ಶಾಸಕರು ವಿಧಾನಮಂಡಲದಲ್ಲಿ ಈ ಹೋರಾಟವನ್ನು ಮುಂದುವರಿಸಬೇಕೆಂದು ನಾನು ಜನಪ್ರತಿನಿಧಿಗಳಲ್ಲಿ ಮನವಿ ಮಾಡುತ್ತೇನೆ.

ನಮ್ಮ ಸರ್ಕಾರಗಳು ಸರ್ಕಾರಿ ಕನ್ನಡ ಶಾಲೆಗಳನ್ನ ಮುಚ್ಚಿ, ಧಾರ್ಮಿಕ ಕೇಂದ್ರ, ಮಠಮಾನ್ಯಗಳಿಗೆ ಅನುಧಾನ ನೀಡುತ್ತಿರುವುದು ಸಂವಿಧಾನ ವಿರೋಧಿ ನಿಲುವು ಎನಿಸುತ್ತದೆ?

ಕನ್ನಡ ಶಾಲೆಗಳನ್ನ ಯಾವುದೇ ಕಾರಣಕ್ಕೂ ಮುಚ್ಚಬಾರದು. ಸಾವಿರಾರು ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ಕೊಡುತ್ತಿರುವ ಮಠಗಳಿಗೆ ಅನುದಾನ ಕೊಡುವುದರಲ್ಲಿ ಅರ್ಥವಿದೆ. ಆದರೆ, ಜನರಿಗೆ ಶಿಕ್ಷಣ ದಾಸೋಹ ಮಾಡದೆ, ಪೂಜೆ ಯಜ್ಞ ಯಾಗ ಮಾಡಿಕೊಂಡಿರುವ ಮಠಗಳಿಗೆ, ಸಂಸ್ಥೆಗಳಿಗೆ ಅನುಧಾನ ಕೊಡುವುದರಿಂದ ಸರ್ಕಾರಕ್ಕಾಗಲಿ, ಸಮಾಜಕ್ಕಾಗಲಿ ಉಪಯುಕ್ತವಲ್ಲ. ಸಮಂಜಸವಲ್ಲ.

ಖಾಸಗೀಕರಣವು ಸಂವಿಧಾನದ ಸಾಮಾಜಿಕ ನ್ಯಾಯದ ಆಶಯವನ್ನೇ ನಾಶ ಮಾಡುತ್ತಿರುವ ಈ ಹೊತ್ತಿನಲ್ಲಿ ‘ಖಾಸಗೀರಣದಲ್ಲಿ ಮೀಸಲಾತಿ’ಯ ಅನುಷ್ಠಾನ ಅಗತ್ಯವಿದೆಯೆ?

ಖಾಸಗೀ ವಲಯದಲ್ಲಿ ಮೀಸಲಾತಿಯನ್ನು ಜಾರಿಗೆ ತರುವುದು ಅತ್ಯಗತ್ಯ. ಸಮಂಜಸವಾದದ್ದು. ಮೀಸಲಾತಿಯನ್ನು ಜಾರಿಗೆ ತಂದರೆ ಮೆರಿಟ್ಗೆ ತೊಂದರೆಯಾಗುತ್ತದೆ ಅಂತ ಕೆಲವರು ವಾದ ಮಾಡುತ್ತಾರೆ. ಈ ವಾದ ಸರಿಯಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿಯ ಮೂಲಕ ದಲಿತ ಹಿಂದುಳಿದ ವರ್ಗದ ಪ್ರತಿಭಾವಂತರನ್ನ ನೇಮಕ ಮಾಡಿಕೊಳ್ಳಿ ಅಂತ ಕೇಳುತ್ತಿದ್ದೇವೆಯೆ ಹೊರತು ಮೆರಿಟ್ಗೆ ಧಕ್ಕೆ ಆಗುವಂತೆ ನೇಮಕ ಮಾಡಿಕೊಳ್ಳಿ ಅಂತ ಯಾರು ಕೇಳುತ್ತಿಲ್ಲ. ಕೆಳವರ್ಗದ ಪ್ರತಿಭಾವಂತರನ್ನ ನೇಮಕ ಮಾಡಿಕೊಳ್ಳುವುದರಿಂದ ಖಾಸಗಿ ವಲಯಕ್ಕೇನು ನಷ್ಟವಾಗುವುದಿಲ್ಲ.

ಹಿಂದೂ ಧರ್ಮದಲ್ಲಿನ ಜಾತಿ, ಅಸ್ಪೃಶ್ಯತೆಯನ್ನು ಧಿಕ್ಕರಿಸಬೇಕಾದರೆ ದಲಿತರು ಬೌದ್ಧ ಧಮ್ಮವನ್ನು ಸ್ವೀಕರಿಸಬೇಕು ಎಂದು ಹೇಳಿದರು. ಆದರೆ, ಇಂದು ಕೆಲವು ಮೂಲಭೂತ ಹಿಂದುತ್ವವಾದಿಗಳು ‘ಮರು ಮತಾಂತರ’ ಅಂತ ಹೇಳುತ್ತಿದ್ದಾರೆ. ಈ ಬಗೆಗೆ ನಿಮ್ಮ ಅಭಿಪ್ರಾಯವೇನು?

ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡಿರುತ್ತಾನೆ, ಅವನಿಗೆ ಆ ಧರ್ಮವೂ ಇಷ್ಟವಾಗದೆ ಇದ್ದಾಗ ಆತ ಸ್ವಇಚ್ಛೆಯಿಂದ ಮತ್ತೊಂದು ಧರ್ಮಕ್ಕೆ ಮರುಮತಾಂತರವಾದರೆ ತಪ್ಪಿಲ್ಲ. ಅಮೇರಿಕದಲ್ಲಿನ ಬಹುತೇಕ ಕರಿಯರು ಮೊದಲು ಮುಸ್ಲೀಮರಾಗಿ, ನಂತರ ಮರಳಿ ಕ್ರೈಸ್ತರಾದರು. ಮತಾಂತರವಾಗಲಿ, ಮರುಮತಾಂತರವಾಗಲಿ ತಪ್ಪಲ್ಲ. ಆದರೆ ಬಲವಂತವಾಗಿ ಮತಾಂತರ, ಮರುಮತಾಂತರ ಮಾಡಿಸುವುದು ತಪ್ಪು. ಮತಾಂತರಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಇದು ಮೂಲಭೂತ ಹಕ್ಕು. ಯಾವುದೇ ವ್ಯಕ್ತಿಗೆ ತನಗಿಷ್ಟಬಂದ ಧರ್ಮವನ್ನು ಒಪ್ಪಿಕೊಳ್ಳುವ, ಆಚರಿಸುವ, ದೈವವನ್ನು ಪೂಜಿಸುವ ಹಕ್ಕು ಇದೆ. ಅದರಲ್ಲಿಯೂ ದಲಿತರು ಈ ಅಸ್ಪೃಶ್ಯತೆ, ಅಸಮಾನತೆ, ದೌರ್ಜನ್ಯದಿಂದ ಬೇಸತ್ತು ಅಂಬೇಡ್ಕರ್ ಹೇಳಿದ ಹಾಗೆ ಬೌದ್ಧ ಧಮ್ಮಕ್ಕೆ ಸೇರುವುದಾದರೆ ಅದರಲ್ಲಿ ಏನೂ ತಪ್ಪಿಲ್ಲ.

ತಲೆಯ ಮೇಲೆ ಮಲಹೊರು ಪದ್ಧತಿಯನ್ನು ನೀಷೇಧಿಸಿದ ಬಿ. ಬಸವಲಿಂಗಪ್ಪ ಮತ್ತು ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೊಳಿಸಿದ ದೇವರಾಜ ಅರಸು ಇವತ್ತಿನ ಭಾರತೀಯ ರಾಜಕಾರಣಕ್ಕೆ ಎಷ್ಟು ಪ್ರಸ್ತುತ? ಅವರೊಟ್ಟಿಗಿನ ನಿಮ್ಮ ಒಡನಾಟದ ವಿಶಿಷ್ಟ ಕ್ಷಣಗಳು ಯಾವುವು?

ಬಸವಲಿಂಗಪ್ಪನವರು ನನ್ನ ಗುರುಗಳು. ಅವರು 1972ರಲ್ಲಿಯೇ ಮಲಹೊರುವ ಪದ್ಧತಿಯನ್ನ ನಿಲ್ಲಿಸಿದರು. ಆನಂತರ ಎಷ್ಟೋ ವರ್ಷಗಳ ನಂತರ ಈ ಕಾಯ್ದೆಯಿಂದ ಪ್ರಭಾವಿತಗೊಂಡ ಕೇಂದ್ರ ಸರ್ಕಾರ ಕೇಂದ್ರದಲ್ಲಿ ಆ ಸಂಬಂಧ ಕಾಯ್ದೆಯನ್ನ ಜಾರಿಗೊಳಿಸಿತು. ಇಡೀ ದೇಶದಲ್ಲಿ ಈ ಕಾಯ್ದೆಯನ್ನು ಮೊದಲಿಗೆ ಜಾರಿಗೊಳಿಸಿದವರು ಬಸವಲಿಂಗಪ್ಪನವರು. ಬಸವಲಿಂಗಪ್ಪ ತಮಗೆ ಸಿಕ್ಕ ರಾಜಕೀಯ ಅಧಿಕಾರವನ್ನು ಸಮಾಜ ಬದಲಾವಣೆಯ ಸಾಧನವನ್ನಾಗಿ ಬಳಸಿಕೊಂಡರು. ಶೋಷಿತ ವರ್ಗಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಕಾರಣಕ್ಕಾಗಿ ಶ್ರಮಿಸಿದವರು. ಅವರ ಜೊತೆ ಕಳೆದ ಸಮಯದಲ್ಲಿ ಎಷ್ಟೋ ವಿಷಯಗಳನ್ನ ಅವರಿಂದ ಕಲಿತಿದ್ದೇನೆ. ಅವರು ಸಹಾ ತುಂಬಾ ವಿಷಯಗಳಲ್ಲಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಇವತ್ತು ನಮ್ಮ ನಡುವೆ ಮಲ ಹೊರುವ ಪದ್ಧತಿ ಇದೆ. ನಾಗರೀಕರಾದವರೆಲ್ಲ ತಲೆತಗ್ಗಿಸುವ ವಿಚಾರ ಇದು. ಈಕಾರಣಕ್ಕಾಗಿಯೇ ಬಸವಲಿಂಗಪ್ಪನವರ ಚಿಂತನೆ, ನಿಲುವುಗಳು ಇವತ್ತಿಗೂ ಪ್ರಸ್ತುತವೆನಿಸುವುದು. ದೇವರಾಜ ಅರಸು ಅವರ ಭೂ ಸುಧಾರಣೆಯನ್ನ ಜಾರಿಗೆ ತಂದ ಧೀಮಂತ ವ್ಯಕ್ತಿ. ನನಗೆ ಇವರ ಪರಿಚಯ ಸಹಾ ಇತ್ತು. ಇವರು ನನ್ನ ಪದ್ಯಗಳನ್ನ ತುಂಬಾ ಇಷ್ಟಪಡುತ್ತಿದ್ದರು. ನಾನು ಅನೇಕ ಸಲ ಪ್ರತಿಭಟನ ಮೆರವಣಿಗೆ ಮಾಡಿ, ಅವರನ್ನ ಭೇಟಿ ಮಾಡಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳನ್ನ ಪರಿಹರಿಸಬೇಕೆಂದು ಮನವಿ ಮಾಡಿದ್ದೆ. ಆಗ ಅವರು ಆ ಬಗ್ಗೆ ಕೂಡಲೆ ಕ್ರಮ ಕೈಗೊಂಡು ನಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಇಂದು ನಿರ್ಮಾಣವಾಗಿರುವ ಎರಡು ದೊಡ್ಡ ಹಾಸ್ಟಲ್ಗಳನ್ನು ಅರಸು ಅವರು ಕಟ್ಟಿಸಿಕೊಟ್ಟಿದ್ದೇ ನಮ್ಮ ಹೋರಾಟದಿಂದ. ಅವರಿಗೆ ಸಮಾಜದ ಬಗೆಗೆ, ಬಡವರ ಬಗೆಗೆ ತುಂಬಾ ಕಾಳಜಿ ಇತ್ತು. ಇವತ್ತಿಗೂ ಬಗರ್ಹುಕುಂದಾರರಿಗೆ ಹಕ್ಕು ಪತ್ರ ಸಿಕ್ಕಿಲ್ಲ, ಅನೇಕರು ಭೂ ಹೀನರಾಗಿದ್ದಾರೆ. ಆದ್ದರಿಂದ ದೇವರಾಜ ಅರಸು ಅವರು ಅಧಿಕಾರದಲ್ಲಿದ್ದಾಗ ಏನು ಸುಧಾರಣೆಯನ್ನ ತಂದರು, ಅಂತಹ ಸುಧಾರಣೆಗಳು ಇನ್ನೂ ಆಗ ಬೇಕಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಂದಿಗೆ ಬಸವಲಿಂಗಪ್ಪ, ದೇವರಾಜ ಅರಸು ಅವರು ಹೆಚ್ಚು ಪ್ರಸ್ತುತ.

ಪ್ರೊ ಬಿ  ಕೃಷ್ಣಪ್ಪ, ದೇವನೂರ ಮಹಾದೇವ, ಚಂದ್ರಪ್ರಸಾದ್ ತ್ಯಾಗಿ ಅವರ ಜೊತೆ ಸೇರಿ ಕನರ್ಾಟಕ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದವರು. ಇಂದಿನ ದಲಿತ ಸಂಘಟನೆಗಳಿಗೆ ದಲಿತ ಚಳವಳಿಯ ಮುಂದಿನ ನಡಿಗೆಗಳನ್ನು ಕುರಿತು ಏನು ಹೇಳ ಬಯಸುತ್ತೀರಿ?

ಇವತ್ತು ದಲಿತ ಸಂಘಟನೆಗಳು ಛಿದ್ರವಾಗಿವೆ ಅನ್ನುವುದಕ್ಕಿಂತ ಅನೇಕ ಹೊಸ ಹೊಸ ಸಂಘಟನೆಗಳು ಹುಟ್ಟಿಕೊಂಡಿವೆ ಅಂತ ಹೇಳಬಹುದು. ಹೊಸ ಹೊಸ ನಾಯಕರು ಸೃಷ್ಟಿಯಾಗಿದ್ದಾರೆ. ಅವರದೆ ಆದ ಕ್ರಮದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ ನೋಡುವವರ ಕಣ್ಣಿಗೆ ದಲಿತ ಸಂಘಟನೆ ಛಿದ್ರವಾಗಿದೆ ಅಂತ ಕಾಣುತ್ತಿದೆ. ಆರಂಭದಲ್ಲಿ ನಾವು ಕೆಲವರೆ ಇದ್ದೊ. ನಾವು ಸಂಘಟನೆ ಮಾಡಿ ಹೋರಾಟ ಮಾಡುತ್ತಿದ್ದೊ. ಆನಂತರ ತಿಳುವಳಿಕೆ ಬಂದ ಮೇಲೆ ಹೊಸ ನಾಯಕರು ಹುಟ್ಟಿಕೊಂಡರು. ನನಗನ್ನಿಸುವುದು ಈ ಎಲ್ಲಾ ಸಂಘಟನೆಯ ಮುಖಂಡರು ಒಂದು ಸಮಾನ ಕಾರ್ಯಕ್ರಮದ ಆಧಾರದ ಮೇಲೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳೋದು, ಒಂದೇ ವೇದಿಕೆಯನ್ನ ಹಂಚಿಕೊಳ್ಳೋದು ಬಹಳ ಮುಖ್ಯ. ಸಾಮಾನ್ಯ ಸಮಸ್ಯೆಯನ್ನ ಮುಂದಿಟ್ಟುಕೊಂಡು ಎಲ್ಲಾ ಸಂಘಟನೆಗಳು ಒಗ್ಗೂಡಿ, ಒಂದು ಸಮನ್ವಯ ಸಮಿತಿಯನ್ನು ರಚಿಸಿಕೊಂಡು ಹೋರಾಟ ಮಾಡುವ ಕೆಲಸ ಇವತ್ತು ಆಗಬೇಕಿದೆ. ಹಾಗಂತ ಅವರು ತಮ್ಮ ನಾಯಕತ್ವವನ್ನ ಬಿಟ್ಟುಕೊಡಬೇಕು, ತಮ್ಮ ಸಂಘಟನೆಯನ್ನ ಮುಚ್ಚಬೇಕು ಅಂತ ಅಲ್ಲ. ಅವರ ಸಂಘಟನೆ, ಅವರ ನಾಯಕತ್ವ ಉಳಿಸಿಕೊಂಡ ಕೂಡ ಒಂದು ಸಮನ್ವಯ ಸಮಿತಿಯ ಅಡಿಯಲ್ಲಿ ಒಗ್ಗಟ್ಟಾಗಿ ಹೋರಾಟ ರೂಪಿಸಬೇಕಿದೆ. ಮಹಾರಾಷ್ಟ್ರದ ಸಕರ್ಾರ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣದ ನಾಲ್ಕನೇ ಸಂಪುಟವನ್ನು ನಿಷೇಧ ಮಾಡಿದಾಗ ಅಲ್ಲಿನ ನೂರಾರು ದಲಿತ ಸಂಘಟನೆಗಳು ಒಂದೇ ವೇದಿಕೆಗೆ ಬಂದು ಸುಮಾರು 5 ಲಕ್ಷ ಜನರನ್ನು ಸಂಘಟಿಸಿ ಬಾಂಬೆಯಲ್ಲಿ ಮೆರವಣಿಗೆ ಮಾಡಿ ಹೋರಾಟ ಮಾಡಿದರು. ಇದು ನಮ್ಮಲ್ಲೂ ಆಗಬೇಕು. ನನಗೆ ಈ ಬಗ್ಗೆ ಆಸಕ್ತಿ ಇದೆ. ಅದಕ್ಕಾಗಿ ದಲಿತ ಸಂಘಟನೆಯ ಯಾವುದೇ ಗುಂಪು ಕರೆದರು ಕೂಡ ಹೋಗಿ ಈ ವಿಚಾರವನ್ನು ಹೇಳುತ್ತಿದ್ದೇನೆ. ಪ್ರವಾಸ ಮಾಡುತ್ತಿದ್ದೇನೆ. ದೇವನೂರ ಮಹಾದೇವರು ಸಹಾ ಈ ವಿಷಯದಲ್ಲಿ ಪ್ರಯತ್ನ ಪಟ್ಟಿದ್ದಾರೆ. ನಾನು ಸಹಾ ನನ್ನ ಪ್ರಯತ್ನವನ್ನ ಮುಂದುವರಿಸುತ್ತೇನೆ.

ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿ ನೂರು ವರ್ಷವಾದ ಬಳಿಕ ದಲಿತ ಸಮುದಾಯದಿಂದ ಬಂದ ತಾವು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಹಾಗೆಯೇ, ಕರ್ನಾಟಕ ರಾಜಕಾರಣದ ಸಂಬಂಧದಲ್ಲಿ ದಲಿತರ ರಾಜ್ಯಾಧಿಕಾರದ ಪ್ರಶ್ನೆಯ ಬಗೆಗೆ ನಿಮ್ಮ ಉತ್ತರವೇನು? ಮತ್ತು ದಲಿತ ರಾಜಕಾರಣದ ಭವಿಷ್ಯದ ದಿಕ್ಕುದೆಸೆ ಏನು?

ಪೂನಾ ಒಪ್ಪಂದದ ಪರಿಣಾಮವಾಗಿ ಇವತ್ತಿಗೂ ದಲಿತ ರಾಜಕಾರಣ ಒಂದು ರೀತಿಯಲ್ಲಿ ಅವಲಂಬಿತ ರಾಜಕಾರಣವಾಗಿದೆ. ಮೇಲ್ವರ್ಗದ ನಾಯಕರನ್ನು ಅವಲಂಬಿಸಿ ರಾಜಕಾರಣ ಮಾಡುವ ಸ್ಥಿತಿಯಲ್ಲಿ ದಲಿತ ರಾಜಕಾರಣಿಗಳಿದ್ದಾರೆ. ತಮ್ಮ ಧೋರಣೆಯನ್ನು ಮುಕ್ತವಾಗಿ ಪ್ರಕಟಿಸಿದರೆ ಎಲ್ಲಿ ನಮಗೆ ತೊಂದರೆಯಾಗುತ್ತದೊ ಎನ್ನುವ ಭಾವನೆ ಕೆಲವರಲ್ಲಿದೆ. ಇದು ದುರದೃಷ್ಟಕರ. ಈ ಎಲ್ಲಾ ಇತಿಮಿತಿ, ಪರಿಸ್ಥಿತಿಯ ನಡುವೆಯೂ ಕೂಡ ಮಲ್ಲಿಕಾಜರ್ುನ ಖಗರ್ೆ, ಶ್ರೀನಿವಾಸಪ್ರಸಾದ್, ಆಂಜನಯ್ಯ, ಮಹದೇವಪ್ಪರಂತಹ ಕೆಲವು ನಾಯಕರು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ.

ವಿಚಾರವಾದಿ ಪರಿಷತ್ತು, ದಸಂಸ, ಬಂಡಾಯ ಸಂಘಟನೆಯ ಮೂಲಕ ನೀವು ಹಲವು ಮಹತ್ವದ ಹೋರಾಟಗಳನ್ನು ನಡೆಸಿದವರು. ಇಂದು ಆ ಹೋರಾಟಗಳನ್ನು ನೆನಪಿಸಿಕೊಂಡರೆ ಏನನ್ನಿಸುತ್ತದೆ?

ಅಂದು ನಾವು ಮಾಡಿದ ಹೋರಾಟ ಸರಿ ಏನಿಸುತ್ತದೆ. ಆ ದಿನಗಳಲ್ಲಿ ನಾವು ಹೋರಾಟ ಮಾಡುವಾಗ ಈ ಹೋರಾಟಗಳಿಗೆ ಮುಂದೆ ಇಷ್ಟು ಮಹತ್ವ ಬರುತ್ತದೆ ಎಂಬ ಕಲ್ಪನೆಯೆ ಇರಲಿಲ್ಲ. ‘ಸಮಾಜದಲ್ಲಿ ದಲಿತರ ಶೋಷಣೆ ಇದೆ, ಇದನ್ನ ನಾವು ಪ್ರತಿಭಟಿಸಬೇಕು, ಇದು ನಮ್ಮ ಕರ್ತವ್ಯ, ಸಾಹಿತ್ಯ ಈ ಹೋರಾಟಕ್ಕೆ ದನಿಯಾಗಬೇಕು, ದಲಿತರ ಸಂಘಟನೆಯಾಗಬೇಕು, ಜನರಲ್ಲಿ ವೈಚಾರಿಕತೆ ಬೆಳೆಯಬೇಕು’ ಎಂಬ ಧೋರಣೆಯನ್ನ ಇಟ್ಟುಕೊಂಡು 1972ರಲ್ಲಿ ವಿಚಾರವಾದಿ ಪರಿಷತ್ತನ್ನು ಕಟ್ಟಿ ಮೂಲಭೂತವಾದಿಗಳಿಂದ ಹಲ್ಲೆಗೆ ಒಳಗಾಗಬೇಕಾಯಿತು. ಆದರೂ ನಾವು ಧೈರ್ಯಗುಂದದೆ ಹೋರಾಟ ಮಾಡಿದೊ. ಆ ಸಂದರ್ಭದಲ್ಲಿಯೇ ನಾನು ಬೆಂಗಳೂರಿನ ಸುಮಾರು 15 ಕೊಳಗೇರಿಗಳಲ್ಲಿ ರಾತ್ರಿ ಶಾಲೆಗಳನ್ನ ನಡೆಸುತ್ತಿದ್ದೆ. ಸುಮಾರು 50 ಜನ ಅಧ್ಯಾಪಕರಿದ್ದರು. ನಮ್ಮ ರಾತ್ರಿ ಶಾಲೆಗಳ ಉದ್ದೇಶ ಕೇವಲ ಪಾಠ ಮಾಡುವುದೆ ಅಲ್ಲ, ಜೊತೆಗೆ ಆ ತರುಣರನ್ನು ಸಾಮಾಜಿಕ ಚಳವಳಿಗೆ ಸಜ್ಜುಗೊಳಿಸುವುದು ಆಗಿತ್ತು. ಹಾಗಾಗಿ ಆ ಯುವಕರಿಗೆ ಪಠ್ಯದ ಜೊತೆಗೆ ಸಾಮಾಜಿಕ ಪರಿವರ್ತನೆಯ ಪಾಠವನ್ನು ಸಹಾ ಮಾಡುತ್ತಿದ್ದೊ. ಈ ರಾತ್ರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲಾ ಮುಂದೆ ದಲಿತ, ಎಡಪಂಥೀಯ ಚಳವಳಿಗಳಲ್ಲಿ ತುಂಬಾ ಸಕ್ರಿಯವಾದರು. ದಬ್ಬಾಳಿಕೆಯ ಈ ಸಮಾಜ ಬದಲಾಗಿ ಸಮಾನತೆಯ, ಸಾಮರಸ್ಯದ, ಪ್ರೀತಿಯ ಸಮಾಜ ಬರಬೇಕು ಎಂಬುದು ನಮ್ಮ ಹೋರಾಟದ ಮುಖ್ಯ ಉದ್ದೇಶವಾಗಿತ್ತು. ಈಗ ನಾವು ಅಂದು ಮಾಡಿದ ಆ ಎಲ್ಲಾ ಹೋರಾಟಗಳನ್ನು ನೆನಪು ಮಾಡಿಕೊಂಡರೆ, ಅದು ನಮ್ಮ ಜೀವನದ ಸಾರ್ಥಕ ಗಳಿಗೆ ಎನಿಸುತ್ತದೆ.

ಪೆರಿಯಾರ್ ಅವರನ್ನು ಬೆಂಗಳೂರಿಗೆ ಕರೆಸಿದ ಆ ದಿನದ ನೆನಪುಗಳನ್ನು ಕುರಿತು ಹೇಳಬಹುದೆ?

ಪೆರಿಯಾರ್ ಅವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟವರು ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು. ಪೆರಿಯಾರ್ ಅವರನ್ನು ನಾವು ಬೆಂಗಳೂರಿಗೆ ಕರೆಸಿ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಸಭೆ ಏರ್ಪಡಿಸಿದಾಗ ಅಗ್ರಹಾರ ಕೃಷ್ಣಮೂರ್ತಿ ಮತ್ತು ನನ್ನ ಮೇಲೆ ಜಾತಿವಾದಿಗಳು ದೈಹಿಕ ಹಲ್ಲೆ ಮಾಡಿದರು. ಆಗ ಪೆರಿಯಾರ್ ಅವರು ‘ಹೋರಾಟಗಾರರು ಇದನ್ನೆಲ್ಲಾ ಹೆದುರಿಸಬೇಕು’ ಅಂತ ನಮಗೆ ಧೈರ್ಯ ಹೇಳಿ ಸಮಾಧಾನ ಮಾಡಿದ್ದಾರೆ. ಇದು ನಾನು ತುಂಬಾ ಹೆಮ್ಮೆ ಪಡುವ ಸಂದರ್ಭ.

1975ರಲ್ಲಿ ಪ್ರಕಟವಾದ ‘ಹೊಲೆಮಾದಿಗರ ಹಾಡು’ ಸಂಕಲನಕ್ಕೆ ಇಂದಿಗೆ ನಲವತ್ತು ವರ್ಷ. ಈ ಸಂದರ್ಭದಲ್ಲಿ ನಿಮ್ಮ ಕಾವ್ಯ ಕೃಷಿ ಬಗೆಗೆ ಹಾಗು ಇವತ್ತಿನ ಹೊಸ ತಲೆಮಾರಿನವರ ಕಾವ್ಯ ರಚನೆಯನ್ನು ಕುರಿತ ನಿಮ್ಮ ಅಭಿಪ್ರಾಯವೇನು?

ನಾನು ಪದ್ಯಗಳನ್ನ ಬರೆದದ್ದು ಕವಿಯಾಗಬೇಕು ಅಂತ ಅಲ್ಲ. ನನ್ನ ಮನಸ್ಸಿಗೆ ಬಂದ ಭಾವನೆಗಳನ್ನು ಕುರಿತು ಬರೆಯುತ್ತಿದ್ದೆ. ಜನ ನನ್ನ ಕಾವ್ಯಗಳನ್ನ ಹಾಡಲಿಕ್ಕೆ ಶುರುಮಾಡಿದಾಗ ಹೆಚ್ಚು ಹೆಚ್ಚು ಕವಿತೆ ಬರೆಯಲಿಕ್ಕೆ ಆರಂಭಿಸಿದೆ. ನಾನು ಹೆಚ್ಚು ಕವಿತೆಗಳನ್ನು ಸ್ಮಶಾನದಲ್ಲಿ ಬರೆದದ್ದು. ಕೀ. ರಂ. ನಾಗರಾಜ್, ಶೂದ್ರ ಶ್ರೀನಿವಾಸ್, ಕಾಳೇಗೌಡ ನಾಗವಾರ, ಡಿ. ಆರ್. ನಾಗರಾಜ್ ಇವರೆಲ್ಲಾ ಸೇರಿ ನನ್ನ ಹೊಲೆಮಾದಿಗರ ಹಾಡು ಸಂಕಲನ ಪ್ರಕಟಿಸಿದ ಕಾರಣ ನಾನು ಕವಿಯಾಗಿ ಎಲ್ಲರಿಗೆ ಪರಿಚಯವಾದೆ. ನಾನು ಎಡಪಂಥೀಯ, ಬೂಸಾ, ದಲಿತ, ಬಂಡಾಯ ಚಳವಳಿಗಳಲ್ಲಿ ಪಾಲೊಂಡಿದ್ದ ಕಾರಣ ನನ್ನ ಕವಿತೆಗಳಿಗೆ ಸಾಮಾಜಿಕ ಸ್ವರೂಪ ದಕ್ಕಿತು. ನಾನು ಕವಿಯಾಗಬೇಕೆಂದು ಕವಿತೆ ಬರೆದದ್ದಲ್ಲ, ಹೋರಾಟದ ಮೆರವಣಿಗೆಯಲ್ಲಿ ಬರುವ ಹೋರಾಟಗಾರರಿಗೆ ಸ್ಫೂತರ್ಿ ಬರಲೆಂದು ನಾನು ಕವಿತೆ ಬರೆದದ್ದು. ಹಾಗಾಗಿ ನನ್ನ ಹೋರಾಟದ ಹಾಡುಗಳಿಗೆ ನಡಿಗೆಯ, ಮೆರವಣಿಗೆಯ ಲಯವಿದೆ. ‘ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’ ಅಂತ ಹಾಡುತ್ತಿದ್ದರೆ ಯಾರೋ ನಡೆದುಕೊಂಡು ಹೋಗುತ್ತಿರುವ ಹಾಗೆ ಭಾಸವಾಗುತ್ತದೆ. ನನ್ನ ಕವಿತೆಗಳಿಗೆ ಈ ಸ್ವರೂಪ ಬರಲು ಕಾರಣ ಅವು ಹೋರಾಟದ ಭಾಗವಾಗಿದ್ದಕ್ಕೆ. ಇವತ್ತು ಸಹಾ ನಾನು ಈ ಸಮಾಜದಲ್ಲಿನ ಬಡತನ, ಶೋಷಣೆ ಬಗೆಗೆ, ವೈಚಾರಿಕತೆ, ಬುದ್ಧ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್ ಬಗೆಗೆ ಸದಾ ಯೋಚನೆ ಮಾಡುತ್ತಿರುತ್ತೇನೆ. ಆ ಅನುಭವವನ್ನು ಕವಿತೆ ಮೂಲಕ ಅಭಿವ್ಯಕ್ತಿಸುತ್ತಿದ್ದೇನೆ. ಇಂದಿನ ಹೊಸ ಬರಹಗಾರರು ಒಳ್ಳೆಯ ಕವಿತೆ, ಕಥೆಗಳನ್ನ ಬರೆಯುತ್ತಿದ್ದಾರೆ. ಇವತ್ತು ಕನ್ನಡ ಸಂಮೃದ್ಧವಾಗಿ ಬೆಳೆಯುತ್ತಿದೆ. ಕೆಲವರು ಒಳ್ಳೆಯ ಭರವಸೆ ಮೂಡಿಸಿದ್ದಾರೆ. ಊರುಕೇರಿಯ ಮೂರನೆ ಭಾಗವನ್ನು ಸಧ್ಯದಲ್ಲಿಯೆ ಪ್ರಕಟಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಬರವಣಿಗೆಯ ಕಡೆಗೆ ಹೆಚ್ಚು ಗಮನ ಕೊಡುತ್ತೇನೆ.

‘ದೇವನೂರರು ವ್ಯವಸ್ಥೆಯ ಹೊರಗೆ ನಿಂತು ಹೋರಾಡುತ್ತಾರೆ, ನಾನು ವ್ಯವಸ್ಥೆಯ ಒಳಗಿದ್ದೆ ಹೋರಾಡುತ್ತೇನೆ’ ಎಂದು ಹೇಳಿದ್ದೀರಿ. ಹಾಗೆಯೇ ದೇವನೂರರು ತಮ್ಮ ತೋಟಕ್ಕೆ ‘ಬನವಾಸಿ’ ಅಂತ ಹೆಸರಿಟ್ಟರೆ; ನೀವು ನಿಮ್ಮ ಮನೆಗೆ ‘ಬನವಾಸಿ’ ಅಂತ ಹೆಸರಿಟ್ಟಿದ್ದೀರಿ. ಇದು ನನಗೆ ಒಂದು ರೂಪಕದ ಹಾಗೆ ಕಾಣುತ್ತದೆ. ನಿಮ್ಮ ಅನಿಸಿಕೆ ಏನು?

ಇದು ನನಗೆ ಗೊತ್ತಿರಲಿಲ್ಲ. ಆಶ್ಚರ್ಯ. ಬನವಾಸಿ ಒಂದು ಕಾಲದಲ್ಲಿ ಬೌದ್ಧರ ಕೇಂದ್ರವಾಗಿತ್ತು.

ನಿಮ್ಮ ಆತ್ಮೀಯರಾಗಿದ್ದ ಡಿ. ಆರ್. ನಾಗರಾಜ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದೆ?

ಡಿ. ಆರ್. ನಾಗರಾಜ್ ಒಬ್ಬ ಜೀನಿಯಸ್. ಅಂತರ್ ರಾಷ್ಟ್ರೀಯ ಖ್ಯಾತಿ ಇದ್ದ ಪ್ರತಿಭಾವಂತರು. ನನ್ನ ಆಪ್ತ ಸ್ನೇಹಿತರಾಗಿದ್ದರು. ತರಗತಿಯಲ್ಲಿ ನನಗಿಂತ ಒಂದು ವರ್ಷ ಹಿರಿಯರು. ನಮ್ಮದು ನಲವತ್ತು ವರ್ಷಗಳ ಗೆಳೆತನ. ನನ್ನ ಕವಿತೆಗಳ ಬಗೆಗೆ ಶೂದ್ರ ಶ್ರೀನಿವಾಸ, ಕೀ. ರಂ. ನಾಗರಾಜ್ ಅವರಿಗೆ ಮೊದಲು ಹೇಳಿದವರೆ ಡಿ. ಆರ್. ನಾಗರಾಜ್. ಅವರ ಅಕಾಲಿಕ ನಿಧನ ನನ್ನ ಪಾಲಿಗೆ ದೊಡ್ಡ ನಷ್ಟ. ಅಂತಹ ಸ್ನೇಹಿತ, ಜ್ಞಾನಿ ಸಿಗುವುದು ಕಷ್ಟ. ಅವರ ಅಗಲಿಕೆ ಕನ್ನಡ ಸಾಹಿತ್ಯಕ್ಕೂ ಸಹಾ ತುಂಬಲಾರದ ನಷ್ಟ. ತುಂಬಾ ಓದಿಕೊಂಡಿದ್ದ, ಜೀವಂತಿಕೆಯನ್ನು ಮೆರೆದ ವ್ಯಕ್ತಿ. ಲಂಕೇಶ್ ತರಗತಿಯಲ್ಲಿ ಪಾಠ ಮಾಡದಿದ್ದರೂ ಸಹಾ ನನಗೆ ಗುರುಗಳು. ಅವರಿಂದಲೂ ಸಹಾ ನಾನು ತುಂಬಾ ಕಲಿತಿದ್ದೇನೆ.

ಇವತ್ತಿಗೂ ನಿಮ್ಮ ನೆನಪಿನಲ್ಲಿ ಉಳಿದಿರುವ, ನೀವು ಭಾಗವಹಿಸಿದ ಹೋರಾಟಗಳಲ್ಲಿ ಬಹಳ ಮುಖ್ಯವಾದದ್ದು ಯಾವುದು?

ಬೆಂಗಳೂರಿನ ಸಮೀಪದ ಒಂದು ಗ್ರಾಮದಲ್ಲಿ ದೇವಾಲಯ ಪ್ರವೇಶ ಚಳವಳಿ ಮಾಡಿದ್ವಿ. ದೇವಸ್ಥಾನದ ಬಾಗಿಲ ಬೀಗ ಹೊಡೆದು ನೂರಾರು ಜನ ಮುಗ್ದ ದಲಿತರು, ಮಕ್ಕಳು, ಹೆಣ್ಣು ಮಕ್ಕಳು ದೇವಾಲಯವನ್ನು ಪ್ರವೇಶ ಮಾಡಿ ದೇವರ ದರ್ಶನ ಮಾಡಿದ್ದು, ಭಾವುಕರಾಗಿ ದೇವರಿಗೆ ಕೈ ಮುಗಿಯುತ್ತಿದ್ದದ್ದು, ಹೊಸ ಲೋಕಕ್ಕೆ ಪ್ರವೇಶ ಪಡೆದಂತೆ ಅವರ ಮುಖದಲ್ಲಿ ಚಿಮ್ಮುತ್ತಿದ್ದ ವಿಶೇಷವಾದ ನಾನಾ ಬಗೆಯ ಭಾವನೆಗಳನ್ನು ನೋಡಿ ನಾನು ಚಕಿತಗೊಂಡೆ. ಇದು ನಾನು ಮರೆಯಲಾಗದ ವಿಶೇಷವಾದ ಘಟನೆ. ಸಾವಿರಾರು ವರ್ಷಗಳಿಂದ ಯಾವುದರಿಂದ ವಂಚಿತರಾಗಿದ್ದರೋ ಅದನ್ನು ದಕ್ಕಿಸಿಕೊಂಡ ಘಳಿಗೆ, ಆ ಘಳಿಗೆಯಲ್ಲಿ ಅವರು ಪಡುತ್ತಿದ್ದ ಆನಂದ ಮತ್ತು ಆತಂಕ ಮರೆಯಲಾಗದ್ದು. ದೇವಾಲಯ ಪ್ರವೇಶವಾದ ಸ್ವಲ್ಪ ಸಮಯದಲ್ಲೆ ಸವಣರ್ೀಯರು ನಮ್ಮ ಮೇಲೆ ಹಲ್ಲೆ ಮಾಡಿದ್ರು. ನಾವೆಲ್ಲ ತಪ್ಪಿಸಿಕೊಂಡು ಬೆಂಗಳೂರಿಗೆ ಓಡಿ ಬಂದೊ. ಅದೇ ದಿನ ರಾತ್ರಿ ಹನ್ನೊಂದು ಗಂಟೆಗೆ ಮತ್ತೆ ನಾವು ಆ ಹಳ್ಳಿಗೆ ಹೋಗಿ ಹಲ್ಲೆಗೊಳಗಾದವರಿಗೆ ಸಾಂತ್ವಾನ ಹೇಳಿದೊ. ನಾನು ನಾಸ್ತಿಕ ಆದರೂ ಸಹಾ ಸಮಾನತೆಯ ಕಾರಣಕ್ಕಾಗಿ ಆ ಹೋರಾಟದಲ್ಲಿ ಭಾಗವಹಿಸಿದ್ದೆ. ಇದು ನಾನು ಮರೆಯಲಾಗದ ಘಟನೆ.

ನಿಮ್ಮ ವ್ಯಕ್ತಿತ್ವ ಮತ್ತು ಚಿಂತನೆಯ ಮೇಲೆ ಅಂಬೇಡ್ಕರ್, ಮಾರ್ಕ್ಸ್ ಪ್ರಭಾವ ಯಾವ ಬಗೆಯದು?

ಅಂಬೇಡ್ಕರ್ ನನ್ನ ಮೇಲೆ ಪ್ರಭಾವ ಬೀರಿದ ಮೂಲ ವ್ಯಕ್ತಿತ್ವ. ಮಾರ್ಕ್ಸ್ ಪ್ರಭಾವದಿಂದಾಗಿ ನನಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ, ಹಸಿದವರಿದ್ದಾರೆ, ಶ್ರಮಿಕರಿದ್ದಾರೆ, ಅಪಮಾನಿತರಿದ್ದಾರೆ, ಪ್ರಪಂಚದಾದ್ಯಂತ ದಲಿತರಿದ್ದಾರೆ ಮತ್ತು ಎಲ್ಲಾ ಜಾತಿಯಲ್ಲಿಯೂ ಪ್ರಗತಿಪರರಿದ್ದಾರೆ ಎಂಬ ಸತ್ಯದ ಅರಿವಾಯಿತು. ದಲಿತರಿಗೆ ಅನ್ಯಾಯವಾಗಿದೆ, ಈ ಸಮಾಜವನ್ನು ಬದಲಾಯಿಸಬೇಕೆಂಬ ಜಾಗೃತಿ ಉಂಟಾಗಿದ್ದು; ಜಾತಿ, ಅಸಮಾನತೆ, ಅಸ್ಪೃಶ್ಯತಾ ನಿರ್ಮೂಲನೆಗಾಗಿ ಹೋರಾಡಬೇಕೆಂಬ ಛಲ ಬಂದಿದ್ದು ಅಂಬೇಡ್ಕರ್ ಅವರಿದಿಂದ. ಹಾಗಾಗಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ನನ್ನ ಗುರುಗಳು.

‍ಲೇಖಕರು G

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ರಮೇಶ ಗಬ್ಬೂರ್

    ಸರ್ ಸಂದರ್ಶನ ಚೆನ್ನಾಗಿದೆ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: